ಟ್ರಯಾಂಡ್ರಾ ಅಡಿಕೆ – ಇದು ಕಿಲೋ ರೂ. 300-350

by | Aug 7, 2021 | Horticulture Crops (ತೋಟದ ಬೆಳೆಗಳು), Arecanut (ಆಡಿಕೆ) | 0 comments

ಅಡಿಕೆಯಲ್ಲಿ  ನಮಗೆ ಗೊತ್ತಿರುವಂತದ್ದದ್ದು ಒಂದೇ ಪ್ರಭೇದ. ಅಡಿಕೆಯಲ್ಲಿ  ಹಲವಾರು ಪ್ರಭೇದಗಳಿವೆ. ಅಂತದ್ದರಲ್ಲಿ ಒಂದು ಈ ಒಂದು ಸಣ್ಣ ಅಡಿಕೆ. ಇದನ್ನು  ಒಂದು  ರೀತಿಯಲ್ಲಿ ಕಾಡು ಅಡಿಕೆ ಎನ್ನಲೂ ಬಹುದು.

 ನಾವೆಲ್ಲಾ ಬೆಳೆಯುವ ಅಡಿಕೆ ಅರೆಕಾ ಕಟೆಚು Areca catechu ಎಂಬ ವರ್ಗಕ್ಕೆ ಸೇರಿದ್ದು.   Arecaceae ಎಂಬ ಕುಟುಂಬದಲ್ಲಿ ಹಲವಾರು ಪ್ರಭೇಧಗಳಿವೆ. ಕರಾವಳಿ ಮಲೆನಾಡಿನ  ಜನ ಕಂಡಿರುವ ರಾಮ ಅಡಿಕೆ ಎಂಬ ಪ್ರಭೇಧ ಇದರಲ್ಲಿ ಒಂದು. ಹಾಗೆಯೇ ಇಲ್ಲಿ ಪರಿಚಯಿಸಲಾಗುತ್ತಿರುವ  “ಅರೆಕಾ ಟ್ರಯಾಂಡ್ರಾ” Areca triandra ಎಂಬುದು ಅಡಿಕೆಯ ಕುಟುಂಬದ ಒಂದು ಸದಸ್ಯ . ಅಡಿಕೆಯನ್ನು ಭಾರತವಲ್ಲದೆ ಏಶ್ಯಾ ಖಂಡದ  ಈ ಎಲ್ಲಾ ದೇಶಗಳಲ್ಲಿ ಬೆಳೆಯಲಾಗುತ್ತದೆ. ಹಾಗೆಯೇ  ಬಳಕೆ ಮಾಡಲಾಗುತ್ತದೆ.( China, Taiwan, Vietnam, the Philippines, Malaysia, Myanmar, and India and the Pacific Islands, notably Papua New Guinea) ಇದರ ಮೂಲ ಶ್ರೀಲಂಕಾ, ಭಾರತ ಹಾಗೂ ಅದಕ್ಕೆ ತಾಗಿಕೊಂಡಿರುವ ಆಗ್ನೇಯ ಏಶಿಯಾ ರಾಷ್ಟ್ರಗಳು. ಇದು ಒಂದು ಅಲಂಕಾರಿಕ ಅಡಿಕೆ ಸಸ್ಯವಾದರೂ ಅಲ್ಪಸ್ವಲ್ಪ ಪ್ರಮಾಣದಲ್ಲಿ  ರೈತರು  ಬೆಳೆಸಿದರೆ ಇದರಿಂದ ಆದಾಯವೂ ಇದೆ.

ಟ್ರಯಾಂಡ್ರಾ ಅಡಿಕೆ ಗೊಂಚಲು
  • ನಾವೆಲ್ಲಾ ನೆಟ್ಟು ಬೆಳೆಸುವ ಬೇರೆ ಬೇರೆ ಹೆಸರಿನ ಅಡಿಕೆ ತಳಿಗಳು ಏನು  ಎಂಬ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ.
  • ಈ ತಳಿಗಳನ್ನು ನಾವು  ಬೀಜ ಹಾಕಿ, ಸಸಿ ಬೆಳೆಸು ಫಲ ಪಡೆಯುತ್ತೇವೆ.
  • ಫಲ ಕೊಡುತ್ತಾ  ಒಂದು ನಿರ್ದಿಷ್ಟ ಆಯುಷ್ಯದವರೆಗೆ ಅದು ಉತ್ಪಾದಕವಾಗಿರುತ್ತದೆ.
  • ನಂತರ ಅದು ವಯೋ ಸಹಜವಾಗಿ ಸಾಯುತ್ತದೆ. ಮತ್ತೆ  ಸಸಿ ನೆಟ್ಟು ಬೆಳೆಸಿ ಫಲ ಪಡೆಯಬೇಕು.
  • ಇಲ್ಲಿ ನಾವು ಪರಿಚಯಿಸುವ ಅಡಿಕೆ ಪ್ರಭೇದ ಹಾಗಿಲ್ಲ.
  • ಒಮ್ಮೆ ನೆಟ್ಟರೆ ಸಾಕು ಅದು ತನ್ನ ತಲೆಮಾರನ್ನು ಉಳಿಸುತ್ತಾ ಅಳಿವೇ ಇಲ್ಲದೆ ಬೆಳೆಯುತ್ತದೆ.
  • ಈ ಅಡಿಕೆ ಪ್ರಭೇದ ಬೆಳೆಯುತ್ತಿದ್ದಂತೇ ಅದರ ಬುಡದಲ್ಲಿ  ಕಂದುಗಳು (sucker) ಹುಟ್ಟಿಕೊಳ್ಳುತ್ತವೆ.
  • ಈ ಮೊಳಕೆಗಳು ತಾಯಿ ಮರದ ಜೊತೆ ಬೆಳೆಯುತ್ತಾ ಅವುಗಳೂ ಮರಿ ಹಾಕುತ್ತಾ ಸಂತಾನ ವೃದ್ದಿಸಿಕೊಂಡಿರುತ್ತವೆ.
  • ಒಮ್ಮೆ ನೆಟ್ಟರೆ ಮತ್ತೆ ನೆಡುವ ಕೆಲಸ ಇಲ್ಲ.

ಈ ಅಡಿಕೆಯ ವಿಶೇಷ ಏನು?

ಟ್ರಯಾಂಡ್ರಾ  ಹಣ್ಣು ಅಡಿಕೆ
  • ನಾವು ನೆಟ್ಟು ಬೆಳೆಸುವ ಅಡಿಕೆ ತಳಿ ಹೊಂದಿಕೊಂಡು ದೊಡ್ಡ ಮತ್ತು ಸಣ್ಣ ಗಾತ್ರದ ಅಡಿಕೆಯನ್ನು ಕೊಡುತ್ತದೆ.
  • ಈ ಅಡಿಕೆ ಮರಗಳ ಎತ್ತರ, ಬಾಳ್ವಿಕೆ  ಹೆಚ್ಚು. ಆದರೆ ಈ ಅಡಿಕೆ ಪ್ರಭೇದ  ಸ್ವಲ್ಪ ಭಿನ್ನ. 
  • ಇದು ಸ್ವಲ್ಪ ಸಪುರ (Thin) ಕಾಂಡವನ್ನು ಹೊಂದಿರುತ್ತದೆ.
  • ಕಾಂಡದ ಬಣ್ಣ ಹಸುರಾಗಿದ್ದು,  ನೋಟಕ್ಕೆ ಬಿದಿರನ್ನು ಹೋಲುವಂತಿದೆ.
  • ಎಲೆಗಳು ನಮ್ಮ ಅಡಿಕೆ ಮರದ ಎಲೆಗಳಿಗೆ ಹೋಲಿಕೆ ಇದ್ದರೂ ಸ್ವಲ್ಪ ಭಿನ್ನವಾಗಿರುತ್ತದೆ.
  • ನಮ್ಮ ಅಡಿಕೆ ಮರದಲ್ಲಿ ಯಾವ ರೀತಿ ಹೂ ಗೊಂಚಲು, ಹಾಳೆ ಬಿಡುತ್ತದೆಯೋ ಅದೇ ರೀತಿಯಲ್ಲಿ  ಎಲ್ಲವೂ. 
  • ಹೂ ಗೊಂಚಲಿನ ಗಾತ್ರ ಸ್ವಲ್ಪ ಸಣ್ಣದು. 
  • ಒಳಗೆ ಗಂಡು ಹೂವು ಮತು ಹೆಣ್ಣು ಹೂವುಗಳೊಳಗೊಂಡ ಪುಷ್ಪ ಮಂಜರಿ ಇದ್ದು,  ನಮ್ಮ ಮಾಮೂಲು ಅಡಿಕೆಯ ಹೂವುಗಳಿಗಿಂತ ಚಿಕ್ಕವು. 
  • ಬಹುಷಃ ಇವು ಹೂ ಗೊಂಚಲು ಅರಳುವ ಸಮಯದಲ್ಲೇ ಪರಾಗಸ್ಪರ್ಶ ಆಗುವವುಗಳು ಇರಬೇಕು.
  • ಇದು ಸ್ವಕೀಯ ಮತ್ತು ಪರಕೀಯ ಪರಾಗಸ್ಪಾರ್ಶಕ್ಕೆಒಳಪಡುವ  ವಿಧ  ಇರಬೇಕು.
  • ಆದ ಕಾರಣ ಬಹುತೇಕ ಎಲ್ಲಾ ಹೆಣ್ಣು ಹೂವುಗಳೂ ಫಲಿತಗೊಳ್ಳುತ್ತವೆ.
  • ಕಾಯಿ ಫಲಿತಗೊಂಡು ಸುಮಾರು 8-9 ತಿಂಗಳಲ್ಲಿ ಬೆಳೆಯುತ್ತದೆ.
  • ಬೆಳೆದಾಗ ನಮ್ಮ ಮಾಮೂಲು ಅಡಿಕೆಯಂತೆ ಕೇಸರಿ ಬಣ್ಣದ ಬದಲಿಗೆ ದಟ್ಟ ಕೆಂಪು ಬಣ್ಣದಲ್ಲಿ  ಕಾಣಿಸುತ್ತದೆ.
  • ಹಣ್ಣಾದ ಅಡಿಕೆಯ ಹೊರ ಭಾಗ ಮೆದುವಾಗಿರುತ್ತದೆ. ನಾರು ಕಡಿಮೆ ಇರುತ್ತದೆ.
  • ಇದು ನೀರಿಗೆ ಕರಗಿ ಹೋಗಿ ಒಂದು ತೊಗಟೆ (ಸಿಪ್ಪೆ) ಉಳಿಯುತ್ತದೆ.
  • ಆ ತೊಗಟೆಯ ಒಳಗೆ ಇರುವ ತಿರುಳೇ ಅಡಿಕೆ.
  • ಸಣ್ಣ ಶೇಂಗಾ ಬೀಜಕ್ಕಿಂತ ಸ್ವಲ್ಪ ದೊಡ್ಡದಾದ ಅಡಿಕೆ ಇದು.
  • ಒಣಗಿದಾಗ ಭಾರೀ  ಗಟ್ಟಿ. ಹಸಿ ಇರುವಾಗಲೂ ಗಟ್ಟಿ ಇರುತ್ತದೆ.
  • ಹಣ್ಣಾದಾಗ ನೋಡಲು ಖರ್ಜೂರ ಹಣ್ಣಿನ ಗೊಂಚಲಿನಂತೆ ಕಾಣಿಸುತ್ತದೆ.
ಟ್ರಯಾಂಡ್ರಾ  ಅಡಿಕೆ ಮರ

ನಾಟಿ ಮತ್ತು ಬೆಳೆಸುವಿಕೆ:

  • ಇದು ತಳಿ ವ್ಯತ್ಯಾಸ ಬರುವುದಿಲ್ಲ. ಬೀಜದಿಂದ ಹುಟ್ಟಿದ ಸಸ್ಯನ್ನು ನಾಟಿ ಮಾಡಲಾಗುತ್ತದೆ.
  • ಮೊದಲ ವರ್ಷ ಬೆಳವಣಿಗೆ ನಿಧಾನ. ಒಮ್ಮೆ ಎಲೆ ದೊಡ್ದದಾದ ನಂತರ ಬೆಳವಣಿಗೆ ಹೊಂದುತ್ತಲೇ ಇರುತ್ತದೆ.
  • ಬುಡದ ಗಡ್ಡೆ ಬಿಟ್ಟ ನಂತರ ಅದರಲ್ಲಿ  ಬಾಳೆಯಂತೆ  ಮೊಳಕೆಗಳು ಬರುತ್ತಾ ಇರುತ್ತವೆ.
  • 2-3-4-5 ಹೀಗೆಲ್ಲಾ ಸಂಖ್ಯೆಯಲ್ಲಿ ಬರುತ್ತವೆ.
  • ಇದನ್ನು ತೆಗೆದು ಬೇರೆ ನೆಡಬಹುದು ಅಥವಾ ಅದನ್ನು ಕಡಿದು ಒಂದು ಅಥವಾ ಎರಡು ಗಿಡ ಮಾತ್ರ ಉಳಿಯುವಂತೆ ಮಾಡಬಹುದು.
  • ಮೂಲ ಮರ ಬೆಳೆದ ನಂತರ ಅದರ ಆಯುಷ್ಯ ಮುಗಿಯುವ ಸಮಯದಲ್ಲಿ  ಮೊಳಕೆ ಬೆಳೆಯಲು ಬಿಟ್ಟರೆ  ಅದು ಸಾಯುವ ಸಮಯದಲ್ಲಿ ಇದು ಫಲ ಕೊಡುತ್ತಾ ಇರುತ್ತದೆ.
  • ಹೇಗೆ ನೆಟ್ಟರೂ ಬದುಕುತ್ತದೆ. ನಾಟಿ ಸ್ಥಳ ಸ್ವಲ್ಪ ನೆರಳಿನ ಸ್ಥಳವಾದರೆ ಒಳ್ಳೆಯದು.
ಟ್ರಯಾಂಡ್ರಾ  ಅಡಿಕೆಯ ಒಳ ಭಾಗ

ವಾಣಿಜ್ಯ ಮಹತ್ವ:

  • ಈ ಅಡಿಕೆಯನ್ನು ಉತ್ತರ ಭಾರತದಲ್ಲಿ ಪೂಜೆಗೆ ಇಡಲು ಬಳಕೆ ಮಾಡುತ್ತಾರಂತೆ.
  • ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದಾಗ್ಯೂ ಇದನ್ನು ಗುಟ್ಕಾ ತಯಾರಿಕೆಯಲ್ಲಿ  ಬಳಕೆ ಮಾಡಬಹುದು.
  • ಈ ಅಡಿಕೆಗೂ ನಮ್ಮ ಮಾಮೂಲು ಅಡಿಕೆಗೂ ತಾಂಬೂಲ ತಿನ್ನುವಾಗ ಗಟ್ಟಿ ಹೊರತಾಗಿ ಅಂತಹ  ವ್ಯತ್ಯಾಸ ಇರುವುದಿಲ್ಲ.
  • ಇದನ್ನು ಮಾಮೂಲಿ ಅಡಿಕೆಯ ಜೊತೆಗೆ ಮಿಶ್ರಣ ಮಾಡಲು ಬಳಕೆ ಮಾಡುವುದು ಇರಬಹುದು.
  • ಇದರಿಂದ ತಿನ್ನುವವರಿಗೆ ಯಾವ ತೊಂದರೆಯೂ ಇಲ್ಲ. 
  • ಇದಕ್ಕೆ ಮಾರುಕಟ್ಟೆಯಲ್ಲಿ ಕಿಲೋಗೆ 300-350 ರೂ. ತನಕ ಬೆಲೆ ಇದೆ. 
  • ಚಾಲಿ ಅಡಿಕೆ ಮಾಡುವಾಗ ಒಡೆದ ಅಡಿಕೆ ಫಟೋರ್ ಗೆ ಯಾವ ಬೆಲೆ ಸಿಗುತ್ತದೆಯೋ ಆ ಬೆಲೆ ಇದಕ್ಕೂ ಸಿಗುತ್ತದೆ. 
  • ಅಡಿಕೆ ಗಟ್ಟಿ ಆದ ಕಾರಣ ಬೇಗ ಹಾಳಾಗುವುದಿಲ್ಲ.
ಟ್ರಯಾಂಡ್ರಾ  ಸುಲಿದ ಅಡಿಕೆ

ಸಸ್ಯಾಭಿವೃದ್ದಿ:

  • ಇದನ್ನು ಬೀಜಗಳ ಮೂಲಕ ಸಸ್ಯಾಭಿವೃದ್ದಿ  ಮಾಡಲಾಗುತ್ತದೆ.
  • ಮರದಿಂದ ಬಿದ್ದ ಅಡಿಕೆಯನ್ನು  ಹಕ್ಕಿ ಅಳಿಲುಗಳು  ತಿಂದು ಬೀಜ ಪ್ರಸಾರ ಮಾಡುತ್ತವೆ. 
  • ನೆಲಕ್ಕೆ ಬಿದ್ದ ಬೀಜ ಅಲ್ಲೇ ಮೊಳಕೆ ಒಡೆಯುತ್ತದೆ. ಕೊಯಿಲು ಮಾಡಿದ ಅಡಿಕೆಯನ್ನು ಮಾಮೂಲು ಅಡಿಕೆ ಮೊಳಕೆಗೆ ಇಟ್ಟಂತೆ ಮೊಳಕೆಗೆ ಇಟ್ಟು ಸಸಿ ಮಾಡಿಕೊಳ್ಳಬಹುದು.
  • ಗಿಡ ಮಾಮೂಲು ಅಡಿಕೆ ಗಿಡದಂತೆ ಬೇಗ ಬೆಳೆಯುವುದಿಲ್ಲ.
  • ಮಾಮೂಲು ಗಿಡ 5-6 ಎಲೆ ಬರುವಾಗ ಇದರಲ್ಲಿ 2-3 ಎಲೆ ಬರುತ್ತದೆ.
  • ಪಾಲಿಥೀನ್ ಚೀಲದಲ್ಲಿ ಸಸಿ ಮಾಡಿಕೊಂಡು ನಾಟಿ ಮಾಡಬಹುದು.
ಒಣಗಿದ ಟ್ರಯಾಂಡ್ರಾ  ಅಡಿಕೆ

ಎಲ್ಲಿ ಬೆಳೆಸಬಹುದು?

  • ವಾಣಿಜ್ಯಿಕವಾಗಿ ಇದನ್ನು ಬೆಳೆಸುವುದು ಎಷ್ಟು ಲಾಭದಾಯಕ ಎಂದು ನಿಖರವಾಗಿ ಹೇಳುವಂತಿಲ್ಲ. 
  • ಇದನ್ನು ಕೊಳ್ಳುವವರು ಇದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾದರೆ  ಬೇಡಿಕೆ ಹೇಗೆ ಉಳಿಯಬಹುದು ಎಂಬ ಬಗ್ಗೆ ಹೇಳುವಂತಿಲ್ಲ.
  • ಇದನ್ನು ಅಡಿಕೆ ತೋಟದ ಬದುವಿನಲ್ಲಿ  ಬೇಲಿಯಾಗಿ ಬೆಳೆಯಬಹುದು.
  • ಕರಾವಳಿ  ಮಲೆನಾಡಿನಲ್ಲಿ ಸೊಪ್ಪಿನ ಬೆಟ್ಟ ಗಳಲ್ಲಿ ಮರಮಟ್ಟುಗಳ ಎಡೆಯಲ್ಲಿಯೂ ಬೆಳೆಯಬಹುದು.
  • ಎಲ್ಲೆಲ್ಲಿ ಮಣ್ಣು ಕೊಚ್ಚಣೆಯಾಗುತ್ತದೆಯೋ ಅಲೆಲ್ಲಾ ನಾಟಿ ಮಾಡಬಹುದು. 
  • ಒತ್ತೊತ್ತಾಗಿ ಬೆಳೆಯುವ ಕಾರಣ ಬೇಲಿಯಾಗಿಯೂ ಕೆಲಸ ಮಾಡುತ್ತದೆ.
  • ಇದಕ್ಕೆ ನೀರಾವರಿ ಬೇಡ. ಅಲ್ಪ ಸ್ವಲ್ಪ ನೀರಾವರಿ ಗೊಬ್ಬರ ಕೊಟ್ಟರೆ ಉತ್ತಮ ಇಳುವರಿ  ಬರುತ್ತದೆ.
ಟ್ರಯಾಂಡ್ರಾ ಅಡಿಕೆ ಹೂ ಗೊಂಚಲು
ಟ್ರಯಾಂಡ್ರಾ  ಅಡಿಕೆಯ ಪುಷ್ಪ ಮಂಜರಿ

ಇಳುವರಿ:

  • ಇದರ ಒಂದು ಅಡಿಕೆ ಸರಾಸರಿ  1  ಗ್ರಾಂ ತೂಕ ಬರುತ್ತದೆ. ಒಂದು ಕಿಲೋ ದಲ್ಲಿ 850-900 ಅಡಿಕೆ ಬೇಕು. 
  • ಒಂದು ಗೊನೆಯಲ್ಲಿ ಸರಾಸರಿ  ½ ಕಿಲೋ ಇಳುವರಿ ಬರಬಹುದು.
  • ಮರಕ್ಕೆ 3 – 4  ಗೊನೆ ಇಳುವರಿ ಪಡೆಯಬಹುದು.
  • ಸರಾಸರಿ ಒಂದು ಮರಕ್ಕೆ 1.5 ಕಿಲೋ ಇಳುವರಿ ಪಡೆಯಬಹುದು.
  • ಹೆಚ್ಚು ಹೆಚ್ಚು ಸಸಿಗಳನ್ನು ಬೆಳೆದರೆ ಇಳುವರಿ ಕಡಿಮೆಯಾಗುತ್ತದೆ.
  • ಮರ ಬೆಳೆದಂತೆ ಇಳುವರಿ ಕಡಿಮೆಯಾಗುತ್ತದೆ.
  • ಆಗ ಅದರ ಮರಿ ಗಿಡ ಇಳುವರಿ ಕೊಡಲು ಸಿದ್ಧವಾಗುತ್ತದೆ.

ಈ ಅಡಿಕೆಯ ಸಿಪ್ಪೆ ಸುಲಿಯಲು ಸುಲಭ ಉಪಾಯ, ಭತ್ತ ಕುಟ್ಟುವ ಒನಕೆಯಲ್ಲಿ ಕುಟ್ಟಿದಾದ ಸಿಪ್ಪೆ ಬಿಡುತ್ತದೆ. ಸಿಪ್ಪೆ ತುಂಬಾ ತೆಳುವಾಗಿದ್ದು, ಕೈಂದಲೇ ಬಿಡಿಸಲು ಬರುತ್ತದೆ. ಹೆಚ್ಚಿನ ಪ್ರಮಾಣದಲ್ಲಿದ್ದರೆ ಇದಕ್ಕೆ ಹಲ್ಲರಿನ ತರಹದ ಸರಳ ಯಂತ್ರವನ್ನೂ ಮಾಡಬಹುದು. ಇದು ಕರಾವಳಿ ಮಲೆನಾಡಿನಲ್ಲಿ ಹೆಚ್ಚಿನ ಅಡಿಕೆ ಬೆಳೆಗಾರರಲ್ಲಿ ಇದೆ. ಬೇರೆ ಕಡೆ ಕಡಿಮೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!