ಕುಬ್ಜ ತಳಿಯ ಅಡಿಕೆಯನ್ನು ಬೆಳೆಸುವ ಬಗ್ಗೆ ರೈತರರಲ್ಲಿ ಇರುವ ಸಂದೇಹಗಳಿಗೆ ಇಲ್ಲಿದೆ ಸಮಂಜಸ ಉತ್ತರ.
ಕುಬ್ಜ ತಳಿಯ ಅಡಿಕೆಯನ್ನು ವಿಟ್ಲದ CPCRI ಪ್ರಾದೇಶಿಕ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯು ಹೈಬ್ರೀಡೀಕರಣದ ಮೂಲಕ ಅಭಿವೃದ್ದಿಪಡಿಸಿದೆ. ಈಗಾಗಲೇ ಇದು ಹಲವು ರೈತರಲ್ಲಿ ಮಿತ ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಸಂಸ್ಥೆಯಲ್ಲದೆ ಕೆಲವು ಖಾಸಗಿ ವ್ಯಕ್ತಿಗಳೂ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಬೆಳೆಸಿದ್ದೂ ಇದೆ.
- ಕುಬ್ಜ ತಳಿ ಬೆಳೆಸಿದರೆ ನಿರ್ವಹಣೆ ಸುಲಭ ಎಂದು ಹೊಸಬರು ಅಂದುಕೊಂಡರೆ, ಕೆಲವರು. ಇದರಲ್ಲಿ ಇತರ ತಳಿಯಷ್ಟು ಇಳುವರಿ ದೊರೆಯುವುದಿಲ್ಲ ಎಂಬ ತರ್ಕ ವೂ ಇದೆ.
- ಎರಡೂ ಅಭಿಪ್ರಾಯ ತಪ್ಪಲ್ಲ. ವಾಸ್ತವವಾಗಿ ಇದು ಸೂಕ್ತ ನಿರ್ವಹಣೆ ಮಾಡಿದರೆ ಎರಡು ಮೂರು ಗೊನೆ ಅಡಿಕೆ ಕೊಡುತ್ತದೆ ಎಂದು ಕಂಡುಕೊಂಡವರೂ ಇದ್ದಾರೆ.
- ಇದರ ಗಂಟುಗಳು ಹತ್ತಿರ. ಆದ ಕಾರಣ ಎತ್ತರಕ್ಕೆ ಬೆಳೆಯುವುದಿಲ್ಲ.
ತಳಿ:
- ವಿಟ್ಲದ ಕೇಂದ್ರೀಯ ತೋಟದ ಬೆಳೆಗಳ ಸಂಶೋಧಾನ ಸಂಸ್ಥೆ VTLH -1 ಮತ್ತು VTLH -2 ಎಂಬ ಹೆಸರಿನಲ್ಲಿ ಈ ಹೈಬ್ರೀಡ್ ತಳಿಗಳನ್ನು ಬಿಡುಗಡೆ ಮಾಡಿದೆ.
- ಇವುಗಳು ಹಿರೇಹಳ್ಳಿ ಕುಬ್ಜ ತಳಿಗೆ ಸುಮಂಗಲ ಮತ್ತು ಮೋಹಿತ್ ನಗರ ತಳಿಗಳಿಂದ ಕ್ರಾಸ್ ಮಾಡಿ ಪಡೆದ ತಳಿಯಾಗಿರುತ್ತದೆ.
- VTLH -1 ತಳಿಯು ಸುಮಂಗಲ ಮತ್ತು ಹಿರೇಹಳ್ಳಿ ಕುಬ್ಜ ತಳಿಯ ಸಂಕರಣ. VTLH -2 ಇದು ಮೋಹಿತ್ ನಗರ ಮತ್ತು ಹಿರೇ ಹಳ್ಳಿ ಕುಬ್ಜ ತಳಿಗಳ ನಡುವಿನ ಸಂಕರಣ ಆಗಿರುತ್ತದೆ.
- ಈ ತಳಿಗಳನ್ನು ಬಿಡುಗಡೆ ಮಾಡಿ ಸುಮಾರು 10 ವರ್ಷ ಕಳೆದಿದೆ. ಇದರ ಅಧ್ಯಯನ 20 ವರ್ಷಗಳಿಂದಲೂ ನಡೆಯುತ್ತಿದೆ. ಇದು ಉಳಿದ ತಳಿಗಳಿಗೆ ಹೋಲಿಸಿದರೆ ತುಂಬಾ ಗಿಡ್ದವಾಗಿದ್ದು ಸಿಂಪರಣೆ, ಕಟಾವು ಮುಂತಾದ ಎಲ್ಲಾ ಕೆಲಸ ಕಾರ್ಯಗಳಿಗೆ ಸುಲಭ.
- ಆದರೆ ಇಳುವರಿ ಮಾತ್ರ ಮಂಗಳ, ಮೋಹಿತ್ ನಗರ, ಸುಮಂಗಳ, ಶ್ರೀ ಮಂಗಳ, ವಿಟ್ಲ ತಳಿಗಳಿಗಿಂತ ಕಡಿಮೆ. ಇದೇ ಕಾರಣಕ್ಕೆ ಈ ತಳಿ ಉಳಿದ ತಳಿಗಳಷ್ಟು ಜನಪ್ರಿಯತೆ ಗಳಿಸಲಿಲ್ಲ.
- ವರ್ಷವೂ ಏಕ ಪ್ರಕಾರದ ಇಳುವರಿ ಅಲ್ಲ. ಒಮ್ಮೊಮ್ಮೆ 3 ಗೊನೆ ಬರುವುದೂ ಇದೆ. ಮತ್ತೊಮ್ಮೆ 2-1 ಬಿಡುವುದೂ ಇದೆ.
- ನಾಟಿ ಮಾಡಿದ ನಾಲ್ಕನೇ ವರ್ಷಕ್ಕೆ ಹೂ ಗೊಂಚಲು ಬಿಡುವುದೂ , 5 ನೇ ವರ್ಷದ ನಂತರ ಕಾಯಿ ಹಿಡಿಯುತ್ತದೆ.
ಬೆಳೆಸಿದವರಲ್ಲಿ ಹೇಗೆ ಇದೆ?
- ಬಹುತೇಕ ರೈತರು ಅಲಂಕಾರ ಉದ್ದೇಶಕ್ಕೆ 2-4-10 ಈ ಸಂಖ್ಯೆಯಲ್ಲಿ ಬೆಳೆದವರಿರುತ್ತಾರೆ.
- ಇವರ ಆರೈಕೆ ಮತ್ತು ನೆಟ್ಟ ಪ್ರದೇಶಕ್ಕನುಗುಣವಾಗಿ ಇದರಲ್ಲಿ ಇಳುವರಿ ಬಂದಿರುತ್ತದೆ.
- ಕೆಲವು 2-3 ಗೊನೆ ಪಡೆದುದನ್ನೂ ಗಮನಿಸಲಾಗಿದೆ.
- ಇದು ಕರಾವಳಿ ಅಲ್ಲದೆ ಇತರ ಪ್ರದೇಶಗಳಲ್ಲೂ ಉತ್ತಮವಾಗಿ ಬೆಳೆದುದನ್ನು ಗಮನಿಸಲಾಗಿದೆ.
- ನೆಲ್ಯಾಡಿ ಸಮೀಪ, ಎದುರ್ಕಳ ಎಂಬಲ್ಲಿ ದಿ. ಸುಬ್ಬಣ್ಣ ಭಟ್ ರವರು ಸುಮಾರು 100 ರಷ್ಟು ಅಡಿಕೆ ಸಸಿ ನೆಟ್ಟಿದ್ದಾರೆ. ಕಳೆದ 6 ವರ್ಷಗಳಿಂದ ಸರಾಸರಿ 2 ಗೊನೆ ಅಡಿಕೆ ಪಡೆಯುತ್ತಿದ್ದಾರೆ.
- ಇಲ್ಲಿಂದ ಹಲವಾರು ಜನ ಸಸಿ ಒಯ್ದು ನೆಟ್ಟು ಬೆಳೆಸಿದವರು ಇದ್ದಾರೆ.
- ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯಕ್ ಉಳಿಪಾಡಿ ಗುತ್ತು ಇವರು ತಮ್ಮ ವೊಡ್ಡೂರು ಫಾರಂ ನಲ್ಲಿ ಸುಮಾರು 250 ಗಿಡಗಳನ್ನು 2016 ನೇ ಇಸವಿಯಲ್ಲಿ ನೆಟ್ಟಿದ್ದು, ಅದು ಈಗ ಹೂಗೊಂಚಲು ಬಿಡುವ ಹಂತಕ್ಕೆ ಬಂದಿದೆ.
- ಶಿರಸಿ, ಮುಂಡಗೋಡ, ಶಿವಮೊಗ್ಗ, ಸಾಗರ ಮುಂತಾದ ಕಡೆ ಈ ಸಸಿ ಬೆಳೆದು ಇಳುವರಿ ಕೊಡುವುದನ್ನು ಗಮನಿಸಲಾಗಿದೆ.
ವಿಶೇಷತೆ:
- ಕುಬ್ಜ ತಳಿಯಲ್ಲಿ ಸಸ್ಯದ ಅಂತರ ಗಣ್ಣು 1 ಸೆಂ ಮೀ. ಗೂ ಕಡಿಮೆ ಇದೆ. ಆದ ಕಾರಣ 10 ವರ್ಷದ ಸಸಿ ಆಳೆತ್ತರ ಮಾತ್ರ ಬೆಳೆಯುತ್ತದೆ.
- ಸ್ವಲ್ಪ ನೆರಳಿನಲ್ಲಿ ನೆಟ್ಟಾಗ, ಅಥವಾ ಎರಡನೇ ತಲೆಮಾರಿನ ಬೀಜ ಆದಾಗ ಗಂಟುಗಳು ಸ್ವಲ್ಪ ದೂರ ಬರುವುದೂ ಇದೆ( ನಿನ್ನೆ ಹಾಕಿದ ಚಿತ್ರ)
- ಉಳಿದ ತಳಿಯಂತೆ ಹಾಳೆ ಬಿಡುತ್ತದೆ. ಅಷ್ಟೇ ಎಲೆಗಳೂ ಇರುತ್ತವೆ,
- ಆದರೆ ಹೂ ಗೊಂಚಲಿನ ಉದ್ದ ಕಡಿಮೆ. ಎಲೆಗಳು ಒತ್ತೊತ್ತಾಗಿ ಬರುತ್ತವೆ. ಎಲೆಗಳ ಉದ್ದವೂ ಸ್ವಲ್ಪ ಕಡಿಮೆ.
- ಮೂಲ ತಳಿಗೂ ಎರಡನೇ ತಲೆಮಾರಿಗೂ ತಳಿ ಗುಣದಲ್ಲಿ ವ್ಯತ್ಯಾಸ ಬರುವ ಎಲ್ಲಾ ಸಾಧ್ಯತೆಗಳಿವೆ.
- ಇದನ್ನು 6-7 ಅಡಿ ಅಂತರದಲ್ಲಿ ನಾಟಿ ಮಾಡಬಹುದು.
- ಹೂ ಗೊಂಚಲಿನ ಉದ್ದ ಕಡಿಮೆಯಾದರೂ ಅದರಲ್ಲಿ ಹೆಣ್ಣು ಹೂವುಗಳ ಸಂಖ್ಯೆ ತುಂಬಾ ಕಡಿಮೆ ಇಲ್ಲ. ಮಿಶ್ರ ಪರಾಗಸ್ಪರ್ಷದ ಮೂಲಕ ಕಾಯಿ ಕಚ್ಚುತ್ತದೆ
- ಉಳಿದ ತಳಿಗಳಿಗೆ ಇರುವಂತೆ ಸಿಂಗಾರ ತಿನ್ನುವ ಹುಳ, ಸ್ಪಿಂಡಲ್ ಬಗ್ ಸಿಂಗಾರ ಒಣಗುವ ರೋಗ ಇಲ್ಲದಿಲ್ಲ.
- ಮೂಲ ತಳಿ ಇರುವ ಸಿಪಿಸಿ ಆರ್ ಐ ನಲ್ಲಿ ಕೆಲವು ಮರಗಳು ಉತ್ತಮ ಇಳುವರಿಯನ್ನೂ ಕೆಲವು ಕಡಿಮೆ – ಮಧ್ಯಮ ಇಳುವರಿಯನ್ನೂ ನೀಡುತ್ತಿರುವುದನ್ನು ಗಮನಿಸಲಾಗಿದೆ.
- ಸಸ್ಯದ ಗಂಟು ಸಮೀಪ ಮತ್ತು ದೂರ ಬೆಳೆಯುವುದಕ್ಕೆ ಬೆಳಕು ಮತ್ತು ನೆರಳಿನ ಪ್ರಭಾವ ಸಾಕಷ್ಟು ಇದೆ.
ಬೆಳೆಯುವವರಿಗೆ ಸಲಹೆ:
- ಇದನ್ನು ಎಡೆ ಸಸಿಯಾಗಿ ಬೆಳೆಯುವ ಪ್ರಯತ್ನವನ್ನು ಮಾಡಬಹುದು.
- ಪರಾಗ ಸ್ಪರ್ಷ ಮಾಡಿ ಪಡೆಯಲಾದ ನಿಜ ಬೀಜಗಳಿಂದ ಉತ್ತಮ ಇಳುವರಿ ಗುಣವನ್ನು ನಿರೀಕ್ಷಿಸಬಹುದು.
- ಹೆಚ್ಚಿನವರು ತಂದು ಬೆಳೆಸಿದ ಸಸಿಗಳು ಎರಡನೇ ತಲೆಮಾರಿನ ಸಸಿಯಾಗಿದ್ದು, ಅದರಲ್ಲಿ ಎಲ್ಲವೂ ಏಕಪ್ರಕಾರ ಇಳುವರಿ ಕೊಡದೇ ಇರಬಹುದು.
- ಅಧ್ಯಯನಕ್ಕೆ ಇದು ಉತ್ತಮ, ಹೇಗೆಂದರೆ ಇದರ ಕೆಲವು ಸಸಿಗಳನ್ನು ಬೆಳೆಸಬಹುದು.
- ಅದಕ್ಕೆ ನಮ್ಮ ಸ್ಥಳೀಯ ತಳಿಗಳು ಮಿಶ್ರ ಪರಾಗ ಸ್ಪರ್ಶ ಆಗಿ ಹೊಸ ಉತ್ತಮ ತಳಿ ದೊರೆತರೂ ಅಚ್ಚರಿ ಇಲ್ಲ.
- ಈ ತಳಿ ಬಗ್ಗೆ ಉಪಯೋಗಕ್ಕಿಲ್ಲ, ಒಂದೇ ಗೊನೆ, ಮೂಂತಾದ ಟೀಕೆ ಬೇಡ. ದೊಡ್ಡ ತೋಟ ಮಾಡಬೇಕಾಗಿಲ್ಲ.
- ಕೆಲವೇ ಸಸಿ ನೆಟ್ಟು ಅದರಲ್ಲಿ ಕೆಲವೇ ಬೀಜಗಳನ್ನು ಸಸಿ ಮಾಡಿ ಅದರ ಕ್ಷಮತೆ ನೋಡಿ ಮುಂದೊಂದು ದಿನ ನಿಮ್ಮ ಹೊಲದಲ್ಲೇ ಸೆಮಿ ಡ್ವಾರ್ಫ್ ನೈಸರ್ಗಿಕ ತಳಿ ಅಭಿವೃದ್ದಿ ಆದರೂ ಅಚ್ಚರಿ ಇಲ್ಲ.
ಪ್ರಯೋಗ ಮಾಡುವರೇ ಇದೊಂದು ಅವಕಾಶವಾಗಿರುತ್ತದೆ.
- ಇಳುವರಿ ತೀರಾ ಕಡಿಮೆ ಎಂದಲ್ಲ. ಸರಿಯಾಗಿ ಸಾಕಿದಲ್ಲಿ ಒಂದು ಮರಕ್ಕೆ ಕನಿಷ್ಟ 200 ಕಾಯಿಗಳಷ್ಟು ಅಥವಾ 1.5 ಕಿಲೋ ಚಾಲಿ ಅಡಿಕೆ ಪಡೆಯಬಹುದು.
- ರೋಗ ನಿಯಂತ್ರಣ ಸುಲಭವಾದ ಕಾರಣ ಸರಿಯಾದ ಸಮಯಕ್ಕೆ ಸಿಂಪರಣೆ ಮಾಡುತ್ತಾ ರೋಗ ಬರದಂತೆ ತಡೆಯಬಹುದು.
- ಸುಳಿ ತಿಗಣೆಯಂತಃ ಸಮಸ್ಯೆಗೂ ಸಹ ಸಸಿ ಸಣ್ಣದಿರುವ ಕಾರಣ ಕೀಟನಾಶಕ ಸಿಂಪರಣೆ ಮಾಡಿ ನಿಯಂತ್ರಣಕ್ಕೆ ತರಬಹುದು.
- ಅಂತರ ಕಡಿಮೆ ಮಾಡಿ ಸರಾಸರಿ ಇತರ ತಳಿಯಂತೆ ಇಳುವರಿ ಪಡೆಯಬಹುದು ಎನ್ನುತ್ತಾರೆ ಸುಬ್ಬಣ್ಣ ಭಟ್ ಇವರ ಮಗ ಶ್ರೀ. ಜಯಪ್ರಕಾಶ್ ರವರು.
ಕುಬ್ಜ ತಳಿಯನ್ನು ಮಾಮೂಲಿನ 9X9 ಅಂತರದ ಬದಲಿಗೆ 6X6 ಅಥವಾ 7×7 ಅಂತರದಲ್ಲಿ ನೆಟ್ಟು ಹೆಚ್ಚು ಸಸಿ ಹಿಡಿಸಿ ಸರಾಸರಿ ಇಳುವರಿ ಪಡೆಯಬಹುದು. ಕೇರಳದಲ್ಲಿ ಇದರ ತೋಟಗಳು ತಲೆ ಎತ್ತುತ್ತಿವೆ. ಕೆಲವೇ ಸಮಯದಲ್ಲಿ ಇದರ ಬಗ್ಗೆ ವರದಿ ಮಾಡಲಿದ್ದೇವೆ, ವರ್ಷವೂ cpcri ಮತ್ತು ಖಾಸಗಿಯವರಿಂದ ಲಕ್ಷಕ್ಕೂ ಹೆಚ್ಚು ಗಿಡಗಳು ನಾಟಿಯಾಗುತ್ತಿವೆ.