ಇದು ಅಡಿಕೆಯ ಭಾರೀ ಹೆಸರುವಾಸಿ ತಳಿ.

by | Nov 30, 2020 | Arecanut (ಆಡಿಕೆ) | 1 comment

ಅಡಿಕೆ ಬೆಳೆಸುವವರು ಪ್ರಥಮತಹ  ಆಯ್ಕೆ  ಮಾಡಬೇಕಾದ ತಳಿ. ಉತ್ತಮ ತಳಿಯನ್ನು ಆಯ್ಕೆ ಮಾಡಿದ್ದೇ ಆದರೆ ಮುಂದಿನ ಬಹುತೇಕ ಕೆಲಸ ಸುಲಭ. ಇದು ಮನೆ ಕಟ್ಟುವುದಕ್ಕೆ ಪಂಚಾಂಗ ಹಾಕಿದಂತೆ. ಅಡಿಕೆ ತೆಂಗು ಬೆಳೆ ಮುಂತಾದ ಧೀರ್ಘಾವಧಿ ಬೆಳೆಗಳಲ್ಲಿ ಸೂಕ್ತ ತಳಿಯ ಬೀಜ ಆಯ್ಕೆ ಮಾಡಿಕೊಳ್ಳದೆ ಇದ್ದರೆ ಮುಂದೆ ಅದನ್ನು ಸರಿಪಡಿಸಲಿಕ್ಕೆ ಆಗುವುದಿಲ್ಲ. ಯಾವಾಗಲೂ  ತಳಿ ಆಯ್ಕೆ ಮಾಡುವಾಗ ತಳಿ ಮಿಶ್ರಣ ಆಗದಂತ ಜಾಗದಿಂದ, ಸೂಕ್ತ ವಿಧಾನದಿಂದ ಬೀಜವನ್ನು ಆಯ್ಕೆ ಮಾಡಿ ಅವರವರೇ ಸಸಿ ತಯಾರಿಸಿಕೊಂಡರೆ ಬಹಳ ಉತ್ತಮ. 

  • ಕರ್ನಾಟಕದಲ್ಲಿ ಈಗ ಕರಾವಳಿ, ಮಲೆನಾಡು, ಅರೆ ಮಲೆನಾಡು ಹಾಗೂ ಅದಕ್ಕೆ  ತಾಗಿಕೊಂಡ ಬಯಲು ಸೀಮೆ ಪ್ರದೇಶಗಳಲ್ಲಿ ಅಡಿಕೆ ಬೆಳೆ ಬೆಳೆಯುತ್ತಿದ್ದು,
  • ಇದರಷ್ಟು ಆದಾಯ ಕೊಡಬಲ್ಲ ಬೆಳೆ ಬೇರೊಂದು ಇಲ್ಲದ ಕಾರಣ  ಇನ್ನೂ ಇನ್ನೂ ಬೆಳೆ ಪ್ರದೇಶ ವಿಸ್ತರಣೆ ಆಗುತ್ತಲೇ ಇರುತ್ತದೆ.
  • ತಳಿಗಳಲ್ಲಿ ಕರಾವಳಿಯ ತಳಿಯೇ ಬೇರೆ.
  • ಉಳಿದೆಡೆಯ ತಳಿಯೇ ಬೇರೆ.
  • ಸಾಗರದ ಕೆಳದಿ ಕ್ಯಾಸನೂರು ಸೀಮೆಯಲ್ಲಿ ಬೆಳೆಯುತ್ತಿರುವ ಅಡಿಕೆ ಸುಮಾರಾಗಿ ಎಲ್ಲಾ ಪ್ರದೇಶಕ್ಕೂ ಹೊಂದಿಕೆಯಾಗುವ ವಿಶಿಷ್ಟ ಗುಣದ ತಳಿ.

ಕ್ಯಾಸನೂರು ಅಡಿಕೆ ಮರ

ಕೆಳದಿ – ಕ್ಯಾಸನೂರು ಸೀಮೆ ಅಡಿಕೆ:

  • ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ತಾಲೂಕಿನ ತನಕವೂ ಈ ಪ್ರದೇಶ ವ್ಯಾಪಿಸಿಕೊಂಡಿದೆ.
  • ಕೆಳದಿಯ ಅರಸರ ಆಳ್ವಿಕೆಯ  ವ್ಯಾಪ್ತಿ ಎಲ್ಲಿ ತನಕ ಇತ್ತೋ  ಅಲ್ಲೆಲ್ಲಾ ಈ ಅಡಿಕೆ ತಳಿಯೇ ಇರುವುದು.
  • ಇದಕ್ಕೆ ಸುಮಾರು 400 ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಸ್ಥಳೀಯ ತಳಿ.

ಕ್ಯಾಸನೂರು ಅಡಿಕೆ ಗೊಂಚಲು

ಕೆಳದಿಯ ಅರಸರ ಕಾಲದಲ್ಲಿ  (15-16 ನೇ ಶತಮಾನ)ಅಡಿಕೆ ಬೇಸಾಯ ಹೇಗೆ ಮಾಡಬೇಕು, ಅಂತರ ಎಷ್ಟು ಇಡಬೇಕು, (18 ಮೆಟ್ಟಿನ ಅಂತರ ಮತ್ತು ಮತ್ತೆ 9 ಮೆಟ್ಟಿಗೆ ಎಡೆ ಸಸಿ) ಯಾವ ಪ್ರದೇಶದಲ್ಲಿ ಬೆಳೆಸಬೇಕು ಎಂಬ ಬಗ್ಗೆ ಅಧ್ಯಯನಗಳೂ ನಡೆದಿತ್ತು ಎನ್ನುತ್ತಾರೆ ಇಲ್ಲಿನ ಹಿರಿಯರು.

  • ಶರಾವತಿ ನದಿಯಿಂದ ಈಚೆಗೆ ವರದಾ ನದಿಯ ತನಕ ಇರುವ ಪ್ರದೇಶದುದ್ದಕ್ಕೂ ಬೆಳೆಯಲ್ಪಡುವ ಈ ಅಡಿಕೆಯೇ ಕೆಳದಿ ಕ್ಯಾಸನೂರು ಸೀಮೆಯ ಅಡಿಕೆ.
  • ಸುಮಾರು 1000 ಎಕ್ರೆಗೂ ಹೆಚ್ಚು ಹಳೆ ತೋಟಗಳು ಇಲ್ಲಿವೆ. ಇಲ್ಲಿ ಭಾರೀ ಮಳೆ ಆಗುವುದಿಲ್ಲ.
  • ಅತ್ತ ತೀರಾ ಮಲೆನಾಡು ಅಲ್ಲ, ಅರೆ ಮಲೆನಾಡೂ ಅಲ್ಲದ ಪ್ರದೇಶ.

ತಳಿಯ  ವಿಶೇಷ:

  • ಈ ಪ್ರದೇಶದಲ್ಲಿ ಅಡಿಕೆ ಬೆಳೆಗಾರರು ತೋಟದ ಆರೈಕೆ ಮಾಡುವುದು ತುಂಬಾ ಕಡಿಮೆ.
  • ಇತ್ತೀಚಿನ ವರ್ಷಗಳಲ್ಲಿ ಹೊಸ ತಲೆಮಾರಿನವರು ಪೋಷಕಾಂಶ, ನೀರಾವರಿ ಮಾಡುತ್ತಿದ್ದಾರೆ.
  • ಹಿಂದೆ ಅದೂ ಇರಲಿಲ್ಲ. ಆದರೂ ಎಕರೆಗೆ ಸರಾಸರಿ 15-16 ಕ್ವಿಂಟಾಲು ಇಳುವರಿ ಪಡೆಯುತ್ತಿದ್ದರು.
  • ಈಗ ಕೆಲವರು ಉತ್ತಮ ರೀತಿಯಲ್ಲಿ ಆರೈಕೆ ಮಾಡಿದ ಕಾರಣ ಎಕ್ರೆಗೆ 20-24 ಕ್ವಿಂಟಾಲು ಸಹ ಪಡೆಯುತ್ತಾರೆ.
  • ಕೆಂಪಾದರೆ 1-2 ಕ್ವಿಂಟಾಲು ಕಡಿಮೆಯಾಗಬಹುದು. ಚಾಲಿ ಅಷ್ಟು ಬರುತ್ತದೆ.
  • ಈ ಅಡಿಕೆಯ ತೂಕ ಜಾಸ್ತಿ. ದುಂಡಗೆ ಅಡಿಕೆ. ಸುಂದರವಾದ ಅಡಿಕೆ ಗೊನೆ.
  • ಕಟ್ಟಿಂಗ್ ಉತ್ತಮ. ಬಾರೀ ಗಟ್ಟಿಯೂ ಅಲ್ಲ ಮೆದುವೂ ಅಲ್ಲ. ಜಗಿಯಲು ಕಷ್ಟ ಇಲ್ಲದ್ದು.

ಅಡಿಕೆ
 ಮರಕ್ಕೆ ಅಂಟಿಕೊಂಡಂತೆ ದೊಡ್ದ ಗೊನೆ. ಇದನ್ನು ಮಟ್ಟು ಗೊನೆ ಎನ್ನುತ್ತಾರೆ. ಗೊನೆಗೆ ಕೈ ಹಾಕಲೂ ಸಾಧ್ಯವಿಲ್ಲದಷ್ಟು  ಒತ್ತೊತ್ತಾಗಿ ಕಾಯಿಗಳು.  ಅಡಿಕೆಯಲ್ಲಿ  ಕೆಲವರು ತೀರ್ಥಹಳ್ಳಿ ತಳಿ ಉತ್ತಮ ಎನ್ನುತ್ತಾರೆ. ಆದರೆ ಅದು ಚಾಲಿಗೆ ಆಗುವುದಿಲ್ಲ. ಇದು ಎರಡಕ್ಕೂ ಆಗುತ್ತದೆ. ಈ ತಳಿಯ ಅಡಿಕೆ ಚಾಲಿ ಕಿಲೋ ಗೆ 180-200 ಅಡಿಕೆ ಮತ್ತು ಕೆಂಪಾದರೆ 270-300 ಸಂಖ್ಯೆಯಲ್ಲಿ ಬರುತ್ತದೆ. ಇಲ್ಲಿ ರೋಗ ಬಾಧೆ ಕಡಿಮೆ ಎಂದೇ ಹೇಳಬಹುದು.

ಕ್ಯಾಸನೂರು ಅಡಿಕೆ

  • ಮರದ ಗಂಟು ಹತ್ತಿರ. ಇದಕ್ಕೆ ಅಂತರ  ಮತ್ತು ಸಮರ್ಪಕ ಬಿಸಿಲಿನ ಲಭ್ಯತೆಯೂ ಕಾರಣ ಇರಬಹುದು.
  • ಪ್ರಾರಂಭದ ಕೆಲವು ವರ್ಷ ಗಂಟು ಸ್ವಲ್ಪ ದೂರ ಇರುತ್ತದೆ. ನಂತರ ಅದು ಹತ್ತಿರವಾಗುತ್ತಾ ಬರುತ್ತದೆ.
  • ಇದುವೇ ಮರಕ್ಕೆ ತಾಕತ್ತು ಕೊಡುವುದು. ಈಗಲೂ ಈ ಪ್ರದೇಶದಲ್ಲಿ 50-60-70 ವರ್ಷದ ಅಡಿಕೆ ಮರಗಳು ಇವೆ.
  • ಗಾಳಿಗೆ ಬೀಳುವುದು ಮುಂತಾದ ಸಮಸ್ಯೆ ಇಲ್ಲ. ಸಿಂಪರಣೆ ಮಾಡುವಾಗ ಅಡಿಕೆ ತೊಟ್ಟಿಗೆ ಬೀಳುವಂತೆ ಸಿಂಪರಣೆ ಮಾಡಲು ಆಗುವುದಿಲ್ಲ.
  • ಅಡಿಕೆಯ ಎಲ್ಲಾ ಭಾಗಕ್ಕೂ ಔಷದಿ ಲೇಪನವಾಗಲೂ ಕಷ್ಟವಾಗುತ್ತದೆ.
  • ಈ ತಳಿಯಲ್ಲದೆ ಇಲ್ಲಿ ಬೇರೆ ತಳಿಗಳೇ ಇಲ್ಲ. ಇರುವ ಬಹುತೇಕ ಮರಗಳೂ ಏಕ ಪ್ರಕಾರ ಇಳುವರಿ ಕೊಡುವವುಗಳು.
  • ಆದ ಕಾರಣ ಮೂರು ನಾಲ್ಕು ಶತಮಾನಗಳಾದರೂ ಇಲ್ಲಿನ ಅಡಿಕೆ ತಳಿ ಗುಣ ವ್ಯತ್ಯಾಸ ಆಗಿಲ್ಲ.

ಸುಪಾರಿ- ಬಿಳಿ ಚಾಲಿ

ತಳಿ ಅಭ್ಯಾಸ ಮಾಡಿದವರು:

  • ಕೆಳದಿ ಸೀಮೆಯಲ್ಲಿ ಬೆಳೆಯೂರು ಊರಿನಲ್ಲಿ ಓರ್ವ ಅಡಿಕೆ ಬೆಳೆಗಾರ ನರೇಂದ್ರ ಇವರು ತಮ್ಮ ಅಡಿಕೆ ತೋಟದ  ಎಲ್ಲಾ ಮರಗಳ ಅಡಿಕೆಯನ್ನೂ ಸುಮಾರು 25 ವರ್ಷಗಳಿಂದ ಪರೀಕ್ಷಿಸುತ್ತಾ ಬಂದಿದ್ದಾರೆ.
  • ಇವರು ಹೇಳುವಂತೆ ಈ ತಳಿ ಇಳುವರಿಯ ಮಟ್ಟಿಗೆ ಅತ್ಯುತ್ತಮ.

ಕ್ಯಾಸನೂರು ಅಡಿಕೆ ಬಗ್ಗೆ ಅಧ್ಯಯನ ಮಾಡಿದ ಬೆಳೆಯೂರು ನರೇಂದ್ರರವರು

  • ಹಾಗೆಂದು ಎಲ್ಲಾ ಮರಗಳೂ ಬೀಜಕ್ಕೆ ಆಗುವುದಿಲ್ಲ.
  • ಮರಗಳ ಅಡಿಕೆಯನ್ನು ಹಲವಾರು ವರ್ಷಗಳ ಕಾಲ ಪರೀಕ್ಷಿಸಿ ಅದರಲ್ಲಿ ಯಾವ ಮರ ಉತ್ತಮ ಅದರಿಂದ ಬೀಜ ಆಯ್ಕೆ  ಮಾಡಬೇಕಂತೆ.
  • ಹಲವಾರು ವರ್ಷಗಳಿಂದಲೂ ಬಹಳಷ್ಟು ಜನ ಅಡಿಕೆ ಬೆಳೆಗಾರರು ನರೇಂದ್ರರು ಕೊಟ್ಟ ಬೀಜವನ್ನೇ ಸಸಿ ಮಾಡಿ ಬೆಳೆಸುವುದು.
  • ಸಾಗರ ಸುತ್ತಮುತ್ತ ಅಡಿಕೆ ಬೀಜದ ಬಗ್ಗೆ ಕೇಳಿದರೆ ನರೇಂದ್ರರ ಹೆಸರು ಎಲ್ಲರಿಗೂ ಗೊತ್ತು.

ಈ ಪ್ರದೇಶದ ಅಡಿಕೆಯ  ಇಳುವರಿಯನ್ನು  ನೋಡಿದರೆ ಎಂತವರೂ ದಿಗಿಲಾಗಬೇಕು. ಇದು ಕರಾವಳಿಯಲ್ಲೂ ಅದೇ ಗುಣ ತೋರಿಸುತ್ತದೆ. ಅದರೆ ಮಾರುಕಟ್ಟೆಯಲ್ಲಿ ಸ್ವಲ್ಪ ಬೇಡಿಕೆ ಕಡಿಮೆ. ಉಳಿದಂತೆ ಮಲೆನಾಡು, ಬಯಲು ಸೀಮೆ ಎಲ್ಲಾ  ಬಾಗಕ್ಕೂ ಹೊಂದುವ ತಳಿ.  ಕೆಲವು ಮೂಲಗಳ ಪ್ರಕಾರ ರಾಜ್ಯದಾದ್ಯಂತ ಇರುವ ಅಡಿಕೆ ತೋಟಗಳಲ್ಲಿ 25-30% ಈ ತಳಿಯದ್ದೇ ಆಗಿರುತ್ತದೆ. ಇಲ್ಲಿರುವ ಬಹುತೇಕ ನರ್ಸರಿಗಳು ಈ ಪ್ರದೇಶಗಳ ಬೀಜಗಳನ್ನೇ ಸಸಿ ಮಾಡಿ ಮಾರಾಟ ಮಾಡುವುದಾಗಿರುತ್ತದೆ.

1 Comment

  1. punith

    sir narendra avra contact number kodi namage adike gotu beeku

    Reply

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!