ಅಡಿಕೆಯಲ್ಲಿ ಅದರಲ್ಲೂ ವಿಶೇಷವಾಗಿ ಚಾಲಿ ಅಡಿಕೆ ಮಾಡುವ ಪ್ರದೇಶಗಳಲ್ಲಿ ಹಲವಾರು ತಳಿಗಳು ಪರಿಚಯಿಸಲ್ಪಟ್ಟಿವೆ. ಹೊಸತರಲ್ಲಿ ಭಾರೀ ಸದ್ದು ಗದ್ದಲ ಏರ್ಪಡಿಸಿ, ಮತ್ತೆ ಮತ್ತೆ ಹೊಸ ತಳಿಗಳ ಪ್ರವೇಶಕ್ಕೆ ಎಡೆಮಾಡಿಕೊಟ್ಟಿದೆ. ಮಂಗಳ, ಶ್ರೀಮಂಗಳ, ಮೋಹಿತ್ ನಗರ,ಸುಮಂಗಳ, ರತ್ನಗಿರಿ, ಸೈಗಾನ್, ಮಧುರಮಂಗಳ, ಶತಮಂಗಳ ಹೀಗೆಲ್ಲಾ ಪಟ್ಟಿಯೇ ಇದೆ. 1972 ರಿಂದ ಹಲವಾರು ಹೊಸ ಹೊಸ ತಳಿಗಳನ್ನು ಪರಿಚಯಿಸಲಾಗಿದೆ.ಅವೆಲ್ಲವೂ ಕೆಲವೇ ಸಮಯದಲ್ಲಿ ತಳಿ ಮಿಶ್ರಣ ದಿಂದ ತನ್ನ ಮೂಲ ಗುಣ ಕಳೆದುಕೊಂಡಿವೆ.ಆದರೆ ಸ್ಥಳೀಯ ತಳಿಮಾತ್ರ ಅನಾದಿ ಕಾಲದಿಂದ ಹೇಗಿದೆಯೊ ಹಾಗೆಯೇ ಮೌನವಾಗಿ ತನ್ನ ಮರ್ಜಿಯನ್ನು ಹಾಗೆಯೇ ಉಳಿಸಿಕೊಂಡಿದೆ.
ಕೆಂಪಡಿಕೆ ಮಾಡುವ ಕರಾವಳಿ ಹೊರತಾದ ಪ್ರದೇಶಗಳಲ್ಲಿ ಇಂದಿಗೂ ಯಾವುದೇ ಹೊಸ ತಳಿಗಳ ಪ್ರವೇಶ ಆಗಿಲ್ಲ. ಇರುವುದೆಲ್ಲಾ ಸ್ಥಳೀಯ ತಳಿಗಳೇ. ಬೆಳೆಗಾರರು ಬೀಜ/ ಸಸಿ ಆಯ್ಕೆಯಲ್ಲಿ ಮಾಡಿದ ತಪ್ಪುಗಳಿಂದ, ಬೇಸಾಯ ಕ್ರಮದ ತಪ್ಪುಗಳಿಂದ ಕೆಲವು ಕಡೆ ಇಳುವರಿ ಕಡಿಮೆಯಾಗಿರಬಹುದು. ಒಟ್ಟಾರೆಯಾಗಿ ಈ ಸ್ಥಳೀಯ ತಳಿಗಳು ತಮ್ಮದೇ ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಬೆಳೆಗಾರರ ಕೈ ಹಿಡಿದಿವೆ.
- ಹಿರಿಯರು ಈಗಲೂ ಹೇಳುವುದುಂಟು.
- ಅಳಿ(ಅಳಿವು) ಇಲ್ಲದ ತೋಟ ಬೇಕಾದರೆ ಅದು ಸ್ಥಳೀಯ ತಳಿಯಿಂದ ಮಾತ್ರ.
- ಇವೆಲ್ಲಾ ಇಂದು ಬಂದು ನಾಳೆ ಹೋಗುವ ನೆಂಟರು.
- ಮಳೆ- ಗಾಳಿಗೆ ಓಲಾಡುತ್ತಾ, ಮನೆ ಮಾಡಿಗೆ ಮುತ್ತಿಟ್ಟು ಮತ್ತೆ ಸ್ವಸ್ಥಾನಕ್ಕೆ ಮರಳುವ ಸದೃಢ ಮರಗಳು ಸ್ಥಳೀಯ ತಳಿಯವು.
- ನಂಬಿದವರಿಗೆ ಇದು ಯಾವಾಗಲೂ ಕೈಕೊಡದು.
ಯಾವುದು ಸ್ಥಳೀಯ ತಳಿ:
- ಅಡಿಕೆಯಲ್ಲಿ ಸ್ಥಳೀಯ ತಳಿಗಳೆಂದರೆ ಮೂಲದಲ್ಲಿ ಇದ್ದಂತಹ ತಳಿಗಳು.
- ದಕ್ಷಿಣ ಕನ್ನಡದಲ್ಲಿ ವಿಟ್ಲ ಮೂಲದಲ್ಲಿ ಪ್ರಾರಂಭದಲ್ಲಿ ಅಡಿಕೆ ತೋಟಗಳು ಇದ್ದವು.
- ಆದ ಕಾರಣ ದಕ್ಷಿಣ ಕನ್ನಡದ ಸ್ಥಳೀಯ ತಳಿ ಎಂದರೆ ಅದು ವಿಟ್ಲ ಲೋಕಲ್ ತಳಿ ಎಂದು ಹೆಸರು.
- ದಕ್ಷಿಣ ಕನ್ನಡದ ಕೆಲವು ಕಡೆ ಮಹಾರಾಷ್ಟ್ರದಿಂದ ಬಂದು ಅಡಿಕೆ ತೋಟ ಮಾಡಿದವರಲ್ಲಿ ಹಿಂದೆ ರತ್ನಗಿರಿ ಮೂಲದ ಸ್ಥಳೀಯ ತಳಿ ಇದೆ.
- ಉತ್ತರ ಕನ್ನಡದ ಶಿರಸಿ ಸುತ್ತಮುತ್ತ ಹಿಂದಿನಿಂದಲೂ ಇದ್ದುದು ಸಿರ್ಸಿ ಸ್ಥಳೀಯ ಆಡಿಕೆ ತಳಿ.
- ಇಂದಿಗೂ ಈ ಪ್ರದೇಶದಲ್ಲಿ ಈ ತಳಿ ಪ್ರಾಮುಖ್ಯವಾಗಿಯೇ ಉಳಿದಿದೆ.
- ಈ ತಳಿಗಳು ಹಿಂದೆ ಹೇಗಿತ್ತೋ ಇಗಲೂ ಹಾಗೆಯೇ.
- ಶಿವಮೊಗ್ಗದ ಸಾಗರ ಸೀಮೆಯಲ್ಲಿ ಶಿರಸಿ ತಳಿಯನ್ನೇ ಹೋಲುವ ಆದರೆ ಕಾಯಿಯ ಗಾತ್ರದಲ್ಲಿ ಸ್ವಲ್ಪ ವೆತ್ಯಾಸವನ್ನು ಹೊಂದಿದ ಸಾಗರ ಸ್ಥಳೀಯ ತಳಿ ಇದು, ಇದೂ ಸಹ ಇಂದಿಗೂ ಹೊಸ ತಳಿಯ ಪ್ರವೇಶಕ್ಕೆ ಎಡೆ ಮಾಡಿಕೊಡದ ತಳಿಯಾಗಿದೆ.
- ತೀರ್ಥಹಳ್ಳಿ, ಕೊಪ್ಪ, ಶ್ರಿಂಗೇರಿಗಳಲ್ಲಿ ತೀರ್ಥಹಳ್ಳಿ ಸ್ಥಳೀಯ ತಳಿಯ ಅಡಿಕೆ ಮೂಲದಿಂದ ಇಂದಿನ ತನಕವೂ ಚಾಲ್ತಿಯಲ್ಲಿದೆ.
- ಕಡೂರು, ಬೀರೂರು ಕಡೆಯಲ್ಲಿ ಇರುವ ಸ್ಥಳೀಯ ತಳಿ ತೀರ್ಥಹಳ್ಳಿ ಮೂಲದ ತಳಿಯಾದರೂ ವಾತಾವರಣಕ್ಕೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸ ಕಂಡು ಬರುತ್ತದೆ.
ಯಾವ ತಳಿಯು ಆಯಾ ಪ್ರದೇಶದ ವಾತಾವರಣಕ್ಕೆ ಹೊಂದಿಕೊಂಡು ಸರಿ ಸುಮಾರು ಉತ್ತಮ ಇಳುವರಿ ಕೊಡುತ್ತದೆಯೋ ಅದುವೇ ಆ ಪ್ರದೇಸಕ್ಕೆ ಹೊಂದುವ ಸ್ಥಳೀಯ ತಳಿ. ಹೊಸತಾಗಿ ಅಡಿಕೆ ಬೆಳೆಸುತ್ತಿರುವ ಬಯಲು ಸೀಮೆಯ ಬೆಳೆಗಾರರು ಉತ್ತಮ ತಳಿ ಯಾವುದು ಎಂಬ ಜಿಜ್ಞಾಸೆಯಲ್ಲಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಅವರ ಊರಿನ ಹವಾಮಾನದಲ್ಲಿ ಈಗಾಗಲೇ ಬೆಳೆಯುತ್ತಿರುವ ಮರಗಳಿಂದ ಅಥವಾ ಸಮೀಪದ ಊರುಗಳಲ್ಲಿ ಬೆಳೆಯುತ್ತಿರುವ ತೋಟಗಳಿಂದ ವೈಜ್ಞಾನಿಕವಾಗಿ ಬೀಜದ ಆಯ್ಕೆ ಮಾಡುವುದೇ ಉತ್ತಮ. ಹವಾಮಾನದ ವ್ಯತ್ಯಾಸ ಇರುವ ಕಡೆಗಳ ತಳಿ ಸೂಕ್ತವಲ್ಲ.ಪರವೂರಿನ ಸಂಭಾವಿತನಿಂದ ಊರಿನ ಲಫಂಗ ಆಗಬಹುದು. ಕೊನೆಗೆ ವಿಳಾಸವಾದರೂ ಇರುತ್ತದೆ.
ಬದಲಾವಣೆ:
- 1972 ನೇ ಇಸವಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯ ಅಡಿಕೆ ತಳಿಯಾದ ವಿಟ್ಲ ಲೋಕಲ್ ಬದಲಿಗೆ ಮಂಗಳ ಎಂಬ ಚೀನಾ ಮೂಲದ ತಳಿಯನ್ನು ಪರಿಚಯಿಸಲಾಯಿತು.
- ಆ ನಂತರ ಇಂಡೋನೇಶಿಯಾ ಮೂಲದಿಂದ ತಂದು ಸುಮಂಗಲ ತಳಿಯನ್ನು ಪರಿಚಯಿಸಲಾಯಿತು.
- ಸಿಂಗಾಪುರ ಮೂಲದಿಂದ ಶ್ರೀ ಮಂಗಳ ಎಂಬ ಹೆಸರಿನಲ್ಲಿ ಇನ್ನೊಂದು ತಳಿಯನ್ನು ಪರಿಚಯಿಸಲಾಯಿತು.
- ವಿಯೆಟ್ನಾಂ ಮೂಲದಿಂದ ಸ್ವರ್ಣ ಮಂಗಳ ಅಥವಾ ಸೈಗಾನ್ ತಳಿಯನ್ನು ಪರಿಚಯಿಸಲಾಯಿತು.
- ನಮ್ಮ ದೇಶದ ಈಶಾನ್ಯ ಭಾಗವಾಗ ಅಸ್ಸಾಂ ನಿಂದ ಮೋಹಿತ್ ನಗರ ತಳಿಯನ್ನು ಅರಿಚಯಿಸಲಾಯಿತು.
- ಹಾಗೆಯೇ ಕೊಂಕಣ ಸೀಮೆಯ ಗುಜರಾತ್ ಮಹಾರಾಷ್ಟ್ರ ಗಡಿ ಭಾಗದಿಂದ ಶತ ಮಂಗಳ ಎಂಬ ತಳಿಯನ್ನು ಪರಿಚಯಿಸಲಾಯಿತು.
- ಹಾಗೆಯೇ ಬೇಯಿಸಿ ಕೆಂಪಡಿಕೆ ಮಾಡಲು ಮತ್ತು ಚಾಲಿಗೆ ಎರಡಕೂ ಹೊಂದಬಹುದಾದ ಕೊಂಕಣ ಸೀಮೆಯ ಮೂಲದ ಸ್ಥಳೀಯ ಅಡಿಕೆ ತಳಿಯನ್ನು ಆರಿಸಿ ಅದನ್ನು ಮಧುರ ಮಂಗಳ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಯಿತು.
ತಳಿ ಗುಣ ತೀವ್ರವಾಗಿ ವ್ಯತ್ಯಾಸ ಆದದ್ದಕ್ಕೆ ಮಂಗಳ ಮತ್ತು ಮೋಹಿತ್ ನಗರ ತಳಿಗಳಲ್ಲಿ ಶುದ್ಧ ತಳಿಯ ಮೂಲವನ್ನು ಮರಳಿ ಪಡೆಯಲು ಇಂಟರ್ ಕ್ರಾಸಿಂಗ್ ಮಾಡಿ ಇಂಟರ್ ತಳಿ ಪಡೆಯಲಾಯಿತು.
- ಇವೆಲ್ಲಾ ದಕ್ಷಿಣ ಕನ್ನಡದ ಸ್ಥಳೀಯ ತಳಿಯಾದ ವಿಟ್ಲ ಲೋಕಲ್ ತಳಿಗೆ ಬದಲಿಯಾಗಿ ಬಂದವುಗಳು. ಉಳಿದೆಡೆಯ ಸ್ಥಳೀಯ ತಳಿಗಳಲ್ಲಿ ಯಾವ ಯಾವ ತಳಿಯನ್ನೂ ಹೇರಲಾಗಿಲ್ಲ. ಈಗ ಮತ್ತೆ ಅದೇ ಸ್ಥಳೀಯ ತಳಿ ಆಗಬಹುದು ಎಂಬ ಅರಿವು ಬರಲಾರಂಭಿಸಿದೆ.
ಸಾಗರ ತಳಿ ಸಾಗರ ಸುತ್ತಮುತ್ತಲಿನ ಪ್ರದೇಶಕ್ಕೆ ಸೂಕ್ತ. ತೀರ್ಥಹಳ್ಳಿ ತಳಿ ಅಲ್ಲಿ ಸುತ್ತಮುತ್ತ ಸೂಕ್ತ. ಹಾಗೆಯೇ ಶಿರಸಿ ತಳಿ ಅಲ್ಲಿಯ ಸುತ್ತಮುತ್ತ ಪ್ರದೇಶಕ್ಕೆ ಸೂಕ್ತ. ಚಿತ್ರದುರ್ಗ ತಳಿ ಅಲ್ಲಿಗೆ ಸೂಕ್ತ. ಕರಾವಳಿಯ ತಳಿ ಕರಾವಳಿಗೆ ಸೂಕ್ತ.ಕರಾವಳಿಯ ತಳಿಯನ್ನು ಮಲೆನಾಡಿನಲ್ಲಿ ಬೆಳೆಸಿದರೆ ಅಲ್ಲಿಯ ಹವಾಮಾನಕ್ಕೆ ಅದು ಅಲ್ಲಿ ಸ್ವಲ್ಪ ಬದಲಾವಣೆ ತೋರಿಸುತ್ತದೆ. ಸ್ಥಳೀಯ ತಳಿಗಳು ಅಲ್ಲಿನ ಹವಾಮಾದ ಸಣ್ಣ ಪುಟ್ಟ ಬದಲಾವಣೆಗೆ ಹೊಂದಿಕೊಳ್ಳುವ ಗುಣ ಪಡೆದಿರುತ್ತವೆ.
ಸ್ಥಳೀಯ ತಳಿಗಳ ಗುಣ ಶ್ರೇಷ್ಟ:
- ಹೊಸತಾಗಿ ಪರಿಚಯಿಸಲ್ಪಟ್ಟ ಎಲ್ಲಾ ತಳಿಗಳೂ ಕೆಲವು ವರ್ಷಗಳಲ್ಲಿ ತಲೆಮಾರಿನಿಂದ ತಲೆಮಾರು ಬದಲಾವಣೆ ಆದಾಗ ತಮ್ಮ ಮೂಲ ಗುಣದಲ್ಲಿ ಮಾರ್ಪಾಡು ಹೊಂದಿ ಇಳುವರಿ ಕಡಿಮೆ ಕೊಟ್ಟ ಸಾಕಷ್ಟು ನಿದರ್ಶನ ನಮ್ಮ ಮುಂದಿದೆ.
- ಆದರೆ ಸ್ಥಳೀಯ ತಳಿಗಳಲ್ಲಿ ಇಂತಹ ವ್ಯತ್ಯಾಸ ತುಂಬಾ ಕಡಿಮೆಯಾಗಿದೆ.
- ಇದಕ್ಕೆ ಕಾರಣ ಏನು ಎಂಬುದನ್ನು ಇಲ್ಲಿ ತಿಳಿಸಲು ಸಾಕಶ್ಟು ಪುರಾವೆಗಳು ಇಲ್ಲವಾದರೂ ಸಹ ಇದು ಸತ್ಯವಾದ ಸಂಗತಿ
- ವಿಟ್ಲ ತಳಿಯಾಗಲೀ, ಶಿರಸಿ, ಸಾಗರ, ತೀರ್ಥಹಳ್ಳಿ ತಳಿಗಳಲ್ಲಿ ತಲೆಮಾರು ಬದಲಾವಣೆ ಆದಾಗ ತಳಿ ಗುಣದಲ್ಲಿ ಗುರುತಿಸಬಲ್ಲಷ್ಟು ವ್ಯತ್ಯಾಸ ಆದದ್ದಿಲ್ಲ.
ಸ್ಥಳೀಯ ತಳಿಗಳಲ್ಲಿ ಇಳುವರಿ ಕಡಿಮೆ ಎಂಬುದು ಒಂದು ಪ್ರಾಮುಖ್ಯ ತೊಡಕು ಎಂಬುದಾಗಿ ಜನ ಗ್ರಹಿಸಿದ್ದಾರೆ. ಆದರೆ ಇದರಲ್ಲಿ ಸುಸ್ಥಿರ ಇಳುವರಿ ಎಂಬುದನ್ನು ಹೆಚ್ಚಿನ ಜನ ಗುರುತಿಸಿಲ್ಲ. ಸ್ಥಳೀಯ ತಳಿಗಳ ಪೊಷಕಾಂಶದ ತೃಷೆ ಕಡಿಮೆ ಇದ್ದು, ಇದಕ್ಕೆ ಸ್ಥಳೀಯ ವಾತಾವರಣದ ಬರ ಸ್ಥಿತಿ, ಅತಿ ವೃಷ್ಟಿ, ಅತಿಯಾದ ತಾಪಮಾನ ಮುಂತಾದ ಸ್ಥಿತಿಯನ್ನು ಹೊಂದಿಕೊಳ್ಳುವ ಗುಣ ಇದೆ. ಸ್ಥಳೀಯ ತಳಿಗಳ ಜೀವಿತಾವಧಿ ಇತರ ತಳಿಗಳಿಗೆ ಹೋಲಿಸಿದರೆ ದುಪ್ಪಟ್ಟು ಎನ್ನಬಹುದು.
- ಇದರ ಪ್ರಮುಖ ಕುಂದು ಎಂದರೆ ಇಳುವರಿ ಪ್ರಾರಂಭವಾಗಲು ಉಳಿದ ತಳಿಗಿಂತ 1-2 ವರ್ಷ ಹೆಚ್ಚು ಬೇಕಾಗುತ್ತದೆ.
- ಇದಕ್ಕೆ ಕಾರಣ ನಮ್ಮ ಬೇಸಾಯ ಪದ್ದತಿಯೂ ಹೌದು. ಅಡಿಕೆಯಲ್ಲಿ ಹೊಸ ತಳಿ ಬರುವ ತನಕ ನಾವು ನಾಟಿ ಮಾಡುತ್ತಿದ್ದುದು ಹರಿವೆ ಬೀಜ ಬಿತ್ತಿದಂತೆ ಅಂತರದಲ್ಲಿ.
- ಗಾಳಿ ಬೆಳಕಿನ ಕೊರತೆ ಇಳುವರಿ ಮೇಲೆ ನೇರ ಪರಿಣಾಮವನ್ನು ಬೀರಿ, ಅದು ಕಡಿಮೆ ಇಳುವರಿಯ ತಳಿಯಾಗಿ ನಮಗೆ ಕಂಡಿದೆ.
- ಒಮ್ಮೆ ಇಳುವರಿ ಪ್ರರಂಭವಾದರೆ ಅದು ನಿರ್ಧರಿತ ಇಳುವರಿಯೇ ಆಗಿರುತ್ತದೆ.
- ಹಾಗೆಯೇ ರೋಗ ನಿರೋಧಕ ಶಕ್ತಿ, ಮರದ ಸಧೃಢತೆ ಹೆಚ್ಚು. ಅದೇ ಕಾರಣಕ್ಕೆ ಉತ್ತರ ಕನ್ನಡ, ಶಿವಮೊಗ್ಗದ ಬೆಳೆಗಾರರು ಸ್ಥಳೀಯ ತಳಿಗೇ ಪ್ರಾಧಾನ್ಯತೆ ನೀಡುತ್ತಾರೆ.
ಅಡಿಕೆ ಬೆಳೆಯುವವರು ಸ್ಥಳೀಯ ತಳಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿ ಲಾಭವಾಗುತ್ತದೆ ಎಂಬುದಾಗಿ ಕೆಲವು ಅನುಭವಿಗಳ ಮಾತಿದೆ. ಮೇಲೆ ಹೇಳಿದಂತೆ ನಮ್ಮ ಸುತ್ತಮುತ್ತ ಇರುವ ತಳಿಗಳೇ ನಮ್ಮ ಸ್ಥಳೀಯ ತಳಿಗಳು.