ಅಂಡರ್ ಗ್ರೌಂಡ್ ಡ್ರೈನೇಜ್ – ನೀರು ಬಸಿಯಲು ಸುಲಭ- ಶಾಶ್ವತ ವ್ಯವಸ್ಥೆ.

ಅಂಡರ್ ಗ್ರೌಂಡ್ ಡ್ರೈನೇಜ್ ವ್ಯವಸ್ಥೆ -Underground Drainage system

ಅಡಿಕೆ ತೋಟ, ತೆಂಗಿನ ತೋಟ ಅಥವಾ ಇನ್ಯಾವುದೇ ಬೇಸಾಯದ ಹೊಲದಲ್ಲಿ ನೆಲದಿಂದ ಒಸರುವ (ಒರತೆ) ನೀರನ್ನು ಅಡಿಕೆಯಲ್ಲೇ ಬಂಧಿಸಿ ಅದನ್ನು ವಿಲೇವಾರಿ ಮಾಡಲು ಇರುವ ಅತ್ಯುತ್ತಮ ವ್ಯವಸ್ಥೆಯೊಂದಿದ್ದರೆ ಅದು ಅಂಡರ್ ಗ್ರೌಂಡ್ ಡೈನೇಜ್. ಈ ವ್ಯವಸ್ಥೆ ಮಾಡಿಕೊಂಡರೆ ಜೌಗು ಜಾಗವನ್ನೂ ಒಣ ಜಾಗವನ್ನಾಗಿ ಪರಿವರ್ತಿಸಬಹುದು.

ತೋಟದಲ್ಲಿ ಓಡಾಡುವಾಗ ಯಾವುದೇ ಬಸಿಗಾಲುವೆ ಕಾಣುವುದಿಲ್ಲ. ನೆಲದಲ್ಲಿ ಒರತೆ ರೂಪದಲ್ಲಿ ಹೊರ ಉಕ್ಕುವ ನೀರನ್ನು ಅಲ್ಲೇ ಟ್ಯಾಪ್ ಮಾಡಿ, ಮೇಲೆ ಬಾರದಂತೆ ತಡೆಯುವ ವ್ಯವಸ್ಥೆಗೆ  ಅಂಡರ್ ಗ್ರೌಂಡ್ ಡ್ರೈನೇಜ್ ಎಂದು ಹೆಸರು. ತೋಟ ಅಥವಾ ಬೇರೆ ಕಡೆ ನೀರು ಒರತೆಯುಂಟಾಗಿ ಜೌಗು ಆಗುವ ಸ್ಥಳದಲ್ಲಿ  ಈ ವ್ಯವಸ್ಥೆಯನ್ನು ಮಾಡಿದರೆ, ಅಲ್ಲಿ ಮಳೆಗಾಲದಲ್ಲಿ ಯಾವ ಒರತೆಯ ಕುರುಹೂ ಸಿಗಲಾರದು. ತೋಟದಲ್ಲಿ ಬೇರು ವಲಯಕ್ಕಿಂತ ಕೆಳಗೆ ಒರತೆಯನ್ನು ಬಂಧಿಸುವ ಪೈಪ್ ಲೈನ್ ಇರುವ ಕಾರಣ ಸಸ್ಯಗಳ ಬೇರಿಗೆ ನೀರಿನಿಂದ ಶೀತ ಆಗದು. ಹಲವು ಕಡೆ ಗಮನಿಸಿದಂತೆ ಇದನ್ನು ಮಾಡಿದ ತೋಟದಲ್ಲಿ ಗರಿಷ್ಟ ಇಳುವರಿ ಬರುತ್ತದೆ ಮತ್ತು ಸಸ್ಯದ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುತ್ತದೆ.

 • ಏಕದಳ ಸಸ್ಯಗಳ ಬೇರುಗಳಿಗೆ ನೀರಿನ ತೇವಾಂಶ ನಿರಂತರವಾಗಿ ಬೇಕು.
 • ಆದರೆ ನೀರು ನಿಂತ ಸ್ಥಿತಿಯಲ್ಲಿ ಇರಬಾರದು. ನೀರು ನಿಂತಂತಿದ್ದರೆ, ಬೇರಿನ ಮೇಲ್ಭಾಗದಲ್ಲಿರುವ ಉಬ್ಬಿದ ಶ್ವಾಸೋಚ್ವಾಸ ಅಂಗ ಕೊಳೆತು ಬೇರಿಗೆ ತೊಂದರೆ ಆಗುತ್ತದೆ.
 • ಇದನ್ನು ತಡೆಯಲು ಹೆಚ್ಚಾದ ನೀರು ನಿರಂತರ ಬಸಿಯುತ್ತಾ ಇರಬೇಕು.
 • ಸಾಂಪ್ರದಾಯಿಕ ನೀರು ಬಸಿಯುವ ಕಾಲುವೆಗಳನ್ನು ಪ್ರತೀ ವರ್ಷ, ವರ್ಷದಲ್ಲಿ ಆಗಾಗ ಸ್ವಚ್ಚವಾಗಿಡಲು ಕಷ್ಟ.
 • ಆ ಕಷ್ಟವನ್ನು ಹೋಗಲಾಡಿಸಲು  ಅಂಡರ್ ಗ್ರೌಂಡ್ ಡ್ರೈನೇಜ್ ಮಾಡುವುದು ಬಹಳ ಉತ್ತಮ.
ಅಂಡರ್ ಗ್ರೌಂಡ್ ಡೈನೇಜ್ ಮಾಡಿದ ತೋಟದಲ್ಲಿ ಇಳುವರಿ- ವರದಹಳ್ಳಿ ತೋಟ- Yield in areca with underground drainage
ಅಂಡರ್ ಗ್ರೌಂಡ್ ಡೈನೇಜ್ ಮಾಡಿದ ತೋಟದಲ್ಲಿ ಇಳುವರಿ- ವರದಹಳ್ಳಿ ತೋಟ

ಸಾಂಪ್ರದಾಯಿಕ ಬಸಿ ವ್ಯವಸ್ಥೆ:

 • ಸಾಂಪ್ರದಾಯಿಕ  ಬಸಿಗಾಲುವೆಗಳು  ನೀರು ಹರಿದು ಹೋಗಬೇಕಾದಲ್ಲಿ  ತೆರೆದ ಕಾಲುವೆ ಮಾಡಿ ಅದರ ಮೂಲಕ ನೀರನ್ನು ಹೊರಗೆ ಹರಿದು ಹೋಗುವಂತೆ ಮಾಡುವುದು.
 • ಇದನ್ನೇ ಉಜಿರಿ ಕಣಿ ಎನ್ನುತ್ತಾರೆ. ಇದರ ಸುಸ್ಥಿತಿಗೆ  ಪ್ರತೀ ವರ್ಷ ದುರಸ್ತಿ ಕೆಲಸ ಬೇಕೇ ಬೇಕು.
 • ವರ್ಷ ವರ್ಷ ಹೋದಂತೆ ಇದು ಕಾಲುವೆ ಹೋಗಿ ಕಂದಕವಾದರೂ ಆಗಬಹುದು.
 • ಕುಸಿಯುವುದು, ಕಟ್ಟಿಕೊಳ್ಳುವುದು,  ಅತ್ತಿತ್ತ ನಡೆದಾಡುವಾಗ ಕಿರಿ ಕಿರಿ ಸಹ. ಇದಕ್ಕೆ ವರ್ಷ ವರ್ಷ  ರಿಪೇರಿ ಮಾಡುವ ಖರ್ಚು  ಲೆಕ್ಕ ಹಾಕಿದರೆ ಬಲು ದೊಡ್ಡ ಮೊತ್ತ.
 • ಕೃಷಿ ಉಳಿಯಬೇಕಾದರೆ ಖರ್ಚು ಮಾಡುವುದು ಅನಿವಾರ್ಯ. 

ಅಂಡರ್ ಗ್ರೌಂಡ್ ಡ್ರೈನೇಜ್:

 • ನೀವು ಯಾವಗಲಾದರೂ ಶಿರಸಿಯಿಂದ ಯಲ್ಲಾಪುರ  ದಾರಿಯಲ್ಲಿ ಹೋಗುವಾಗ ಚವತ್ತಿ ಎಂಬ ಊರಿನಲ್ಲಿ ರಸ್ತೆ ಬದಿಯಲ್ಲಿ ಒಂದು ಸುಂದರ ತೋಟವನ್ನು ಗಮನಿಸಿ.
 • ಮಳೆಗಾಲವಾದರೆ ಬಹಳ ಉತ್ತಮ. ಇಲ್ಲಿ ಗದ್ದೆ ಮೇಲೆ ಇದೆ. ತೋಟ ಕೆಳಗೆ ಇದೆ.
 • ಭತ್ತ ಬೆಳೆಯುವ ಗದ್ದೆಯಲ್ಲಿ ಬೆಳೆ ಇದೆ. ನೀರೂ ನಿಂತಿರುತ್ತದೆ.
 • ಆದರೆ ಅಡಿಕೆ ತೋಟದಲ್ಲಿ ನೀರಿಲ್ಲ.
 • ಇದು ಹೇಗೆ ಸಾಧ್ಯವಾಯಿತು ಎಂದರೆ ಅಲ್ಲಿ ಅಂಡರ್ ಗ್ರೌಂಡ್ ಡ್ರೈನೇಜ್ ಮಾಡಿದ್ದಾರೆ.
 • ಹಾಗೆಯೇ ಈ ಊರು ಸಿರಸಿ ಸಾಗರ, ಸಿದಾಪುರ ಇಲ್ಲೆಲ್ಲಾ ಸಾವಿರಾರು ಜನ ಈ ವ್ಯವಸ್ಥೆಯನ್ನು ಮಾಡಿಕೊಂಡು ಅಡಿಕೆ ತೋಟವನ್ನು ಕಿರಿಕಿರಿಯ ಬಸಿಗಾಲುವೆಯಿಂದ ಮುಕ್ತರಾಗಿದ್ದಾರೆ.
PVC ಪೈಪು ತೂತು ಮಾಡುವಿಕೆ- holing of PVC pipes
ಅಂಡರ್ ಗ್ರೌಂಡ್ ಡ್ರೈನೇಜ್ ಗೆ PVC ಪೈಪು ತೂತು ಮಾಡುವಿಕೆ

 ಇಂಥಹ ಬಸಿಗಾಲುವೆಗಳು ಹೊರಗೆ ಕಾಣುವುದೇ ಇಲ್ಲ. ತೋಟದ ಮೇಲ್ಮೈಯಲ್ಲಿ ಹೇಗೆ ಬೇಕಾದರೂ ಓಡಾಡಬಹುದು ಗಾಡಿಯನ್ನೂ  ಓಡಿಸಬಹುದು. ಬೇರಿನ ಕೆಳಗೇ  ಹೆಚ್ಚುವರಿ ನೀರು  ಹರಿದು ಹೋಗುತ್ತದೆ. ಅದು ತಿಳಿಯಾದ ನೀರು. ಮಣ್ಣು ಕೊಚ್ಚಿಕೊಂಡು ಪೊಷಕಾಂಶ ಸಹ ಹೊರ ಹೋಗುವುದಿಲ್ಲ.ಇಂತಹ ಬಸಿಗಾಲುವೆ ಮಾಡಿಕೊಂಡ ಕೆಲವು ಅಡಿಕೆಬೆಳೆಗಾರರು  ಮರವೊಂದಕ್ಕೆ ಸರಾಸರಿ 3 ಕಿಲೋ ಗಿಂತ ಹೆಚ್ಚು ಇಳುವರಿ ಪಡೆಯುವವರೂ ಇದ್ದಾರೆ.

 • ಇಂತಹ ತೋಟಗಳಲ್ಲಿ ಎಷ್ಟೇ ಮಳೆ ಬಂದರೂ ನೀರು ನಿಲ್ಲುವುದಿಲ್ಲ,
 • ಬೇರು, ಕಾಯಿ ಕೊಳೆ ಬರುವುದು ಮುಂತಾದ ಸಮಸ್ಯೆ ತುಂಬಾ ಕಡಿಮೆ.
 • ಈಗಿತ್ತಲಾಗಿ ಕೆಲವರು ಇದು ಬೇರು ಹುಳವನ್ನೂ ಕಡಿಮೆ ಮಾಡುತ್ತದೆ ಎನ್ನುತ್ತಾರೆ.
 • ಆ ಬಗ್ಗೆ ಇನ್ನು ಹೆಚ್ಚಿನ ವಿವರ ತಿಳಿಯಬೇಕಾಗಿದೆ.

ಅಂಡರ್ ಗ್ರೌಂಡ್ ಡ್ರೈನೇಜ್ ಹೇಗೆ ಕೆಲಸ ಮಾಡುತ್ತದೆ:

ಅಂಡರ್ ಗ್ರೌಂಡ್ ಡ್ರೈನೇಜ್ ಪೈಪ್ ನಲ್ಲಿ ನೀರು ಬರುವುದು- Water flow in underground drainage
ಅಂಡರ್ ಗ್ರೌಂಡ್ ಡ್ರೈನೇಜ್ ಪೈಪ್ ನಲ್ಲಿ ನೀರು ಬರುವುದು
 • ಅಂಡರ್ ಗ್ರೌಂಡ್ ಡ್ರೈನೇಜ್ ನಲ್ಲಿ ನೆಲದ ತಳಭಾಗದಲ್ಲಿ ಮಳೆಗಾಲದಲ್ಲಿ ಒರತೆ ರೂಪದಲ್ಲಿ ಬರುವ ನೀರನ್ನು ಅಲ್ಲೇ ಬಂಧಿಸಿ ತಗ್ಗಿನ ಭಾಗಕ್ಕೆ ಕಳುಹಿಸಲಾಗುತ್ತದೆ.
 • ಒರತೆ ನೀರು, ಮಳೆ ನೀರು ಸೇರಿ ತೋಟದ ಮೇಲ್ಮಣ್ಣಿನಲ್ಲಿ  ಜೌಗು ಸ್ಥಿತಿ ನಿರ್ಮಾಣವಾಗದವಂತೆ ಮಾಡುತ್ತದೆ.
 • ತಳ ಭಾಗದ ನೀರು ಮೇಲೆ ಬಾರದಂತೆ ತಡೆದರೆ  ಮೇಲಿನ ನೀರಿನಿಂದ ಯಾವುದೇ ರೀತಿ ತೊಂದರೆ ಉಂಟಾಗದು.
 • ಅದು ನೇರವಾಗಿ ತಳಕ್ಕೆ ಇಳಿಯಲ್ಪಟ್ಟು ಅದೂ ಸಹ ಡ್ರೈನೇಜ್ ಪೈಪುಗಳ ಮೂಲಕ  ಹೊರ ಹರಿಯುತ್ತದೆ.

ಈ ತಂತ್ರಜ್ಞಾನಕ್ಕೆ ಸುಮಾರು 30-35  ವರ್ಷ ದಾಟಿರಬಹುದು. ಶಿರಸಿಯ ಭೈರುಂಭೆ ಹೆಗಡೆಯವರು ಈ ತಾಂತ್ರಿಕತೆಯನ್ನು ತಮ್ಮ ಹೊಲದಲ್ಲಿ ಮಾಡಿಕೊಂಡರು. ಅದನ್ನು ನೋಡಿದ ಅವರ ಹಿತೈಷಿಗಳೂ ಅದನ್ನು ಮಾಡಿಕೊಂಡರು. ಆ ನಂತರ ಅದು ಸ್ವಲ್ಪ ಸ್ವಲ್ಪವೇ ಜನರನ್ನು  ತಲುಪುತ್ತಾ ಬಂತು.

 • ಈಗಂತೂ ಉತ್ತರ  ಕನ್ನಡ, ಶಿವಮೊಗ್ಗ ಮುಂತಾದ ಕಡೆಯ ಅಡಿಕೆ ಬೆಳೆಗಾರರು ಏನಾದರೂ ಆಗಲಿ ಅಂಡರ್ ಗ್ರೌಂಡ್ ಡ್ರೈನೇಜ್ ಮಾಡಿಯೇ  ಬಿಡಬೇಕೆಂದು ಕೂತಿದ್ದಾರೆ.
 • ಕಾರಣ ಇಷ್ಟೇ ಈ ವಿಧಾನದ ಬಸಿ ಗಾಲುವೆ ಮಾಡಿದ ಕಡೆ ಇಳುವರಿಯೂ ಹೆಚ್ಚು, ನಿರ್ವಹಣೆಯೂ ಕಡಿಮೆ. ಮರಗಳ ಆರೋಗ್ಯವೂ ಉತ್ತಮವಾಗಿರುತ್ತದೆ.

ಯಾವ ರೀತಿಯಲ್ಲಿ ಮಾಡಲಾಗುತ್ತದೆ:

ಅಂಡರ್ ಗ್ರೌಂಡ್ ಡ್ರೈನೇಜ್ ಪೈಪ್ ಅಳವಡಿಸಲು ತಯಾರಿ –Land preparation for Pipe installation
ಅಂಡರ್ ಗ್ರೌಂಡ್ ಡ್ರೈನೇಜ್ ಪೈಪ್ ಅಳವಡಿಸಲು ತಯಾರಿ
 • ಪ್ರಾರಂಭದಲ್ಲಿ ಈ ವ್ಯವಸ್ಥೆಯನ್ನು  ಆವೆ ಮಣ್ಣಿನ ಹಂಚುಗಳನ್ನು ಪರಸ್ಪರ ಜೋಡಿಸಿ ಮಾಡುತ್ತಿದ್ದರು.
 • ಅದು ಮಂಗಳೂರು ಹಂಚು ಅಲ್ಲ. ಹಂಚಿನ ಮೇಲೆ ಹಂಚನ್ನು ಇಟ್ಟಾಗ ಅದು ಪೈಪು ತರಹ ಆಗುತ್ತದೆ.
 • ಈಗ ಮಿತವ್ಯಯದ ಸುಲಭದಲ್ಲಿ ಮಾಡಬಹುದಾದ ಪಿ ವಿ ಸಿ ಪೈಪುಗಳನ್ನು ಬಳಕೆ ಮಾಡಲಾಗುತ್ತದೆ.
 • ಪಿ ವಿ ಸಿ ಪೈಪಿನಲ್ಲಿ ಅರ್ಧ ಅಡಿ ಅಂತರದಲ್ಲಿ 1 ಇಂಚಿನ ತೂತುಗಳನ್ನು ಒಂದೇ ನೇರಕ್ಕೆ ಮಾಡಬೇಕು.

ಅಳವಡಿಕೆ ಹೇಗೆ:

 • ತೋಟದಲ್ಲಿ ಸಾಂಪ್ರದಾಯಿಕ ಬಸಿಗಾಲುವೆ  ಬೇಕಾದಷ್ಟು ಆಳಕ್ಕೆ ಇರುವಂತೆ ಮಾಡಬೇಕು.
 • ನೀರಿನ ಹೊರ ಹರಿವಿನ  ಕಡೆ 3/4 ಅಡಿ ಹೆಚ್ಚು ಆಳ ಇರಬೇಕು.
 • ಹೂಳಲು ಇರುವ PVC  ಪೈಪಿನ ತೂತು ಕೆಳಭಾಗಕ್ಕೆ ಇರುವಂತೆ ಕಾಲುವೆಯಲ್ಲಿ ಹಾಕಬೇಕು.
 • ಕವಲು ಮತ್ತು ಮುಖ್ಯ ಪೈಪುಗಳ ಜೋಡಣೆಯ ನಂತರ ಅದರ ಮೇಲೆ ಸಾಧ್ಯವಾದಷ್ಟು ದಪ್ಪಕ್ಕೆ  ತೆಂಗಿನ ಸಿಪ್ಪೆ ಹಾಕಿ ಮಣ್ಣು ಮುಚ್ಚುವುದು.
 • ಕಾಲುವೆಯ ಉದ್ದವನ್ನಾಧರಿಸಿ  ಪಿ ವಿ ಸಿ ಪೈಪನ್ನು ಆಯ್ಕೆ ಮಾಡಬೇಕು.
 • 250 ಅಡಿಗಿಂತ ಜಾಸ್ತಿ ಇದ್ದರೆ 2.5  ಇಂಚು ಪೈಪು ಬೇಕಾಗುತ್ತದೆ.
 • ಕವಲು ಕಾಲುವೆಯ ನೀರನ್ನು ಒಟ್ಟು ಗೂಡಿಸಿ ಸಾಗಿಸುವ ಮುಖ್ಯ ಸಾಗಾಣಿಕಾ ದಾರಿ ಬಹಳ ದೂರ ಅಂತರ ಇದ್ದರೆ  3-4  ಇಂಚಿನ ಪೈಪನ್ನು ಹಾಕಬೇಕಾಗಬಹುದು.
 • ಉಪ ಕಾಲುವೆ ಪ್ರಾರಂಭವಾಗುವ  ಪೈಪಿನ ಒಂದು ತುದಿಗೆ ಬೆಂಡ್ ಹಾಕಿ ನೆಲಮಟ್ಟ ದಿಂದ  2 ಅಡಿ ಎತ್ತರ ಇರುವಂತೆ  ಮಾಡಿ ಎಂಡ್ ಕ್ಯಾಪ್ ಹಾಕಬೇಕು.
 • ಎಂಡ್ ಕ್ಯಾಪ್ ಸಮೀಪ ತೂತನ್ನೂ ಮಾಡಬೇಕು. ಇದು ನೀರನ್ನು ಹೀರಲು ಸಹಕರಿಸುತ್ತದೆ.
 • ನೀರಾವರಿ ಮಾಡುವಾಗ ಏರು ತಗ್ಗಿಗೆ ನೀರು ಹರಿಸುವ ಪದ್ದತಿಯಲ್ಲಿ ಟೆಲೆಸ್ಕೋಪಿಕ್ ವಿಧಾನ ಅನುಸರಿಸಲಾಗುತ್ತದೆ.
 • ಅಲ್ಲಿ ಮೇಲಿನ ಭಾಗಕ್ಕೆ ದೊಡ್ಡ ಅಳತೆಯ ಪೈಪು ನಂತರ ಅದರ ನಂತರದ ಹೀಗೆ ಅಳತೆ ಕಡಿಮೆ ಮಾಡಿ ನೀರಿನ ಹರಿವನ್ನು ಹೊಂದಾಣಿಕೆ ಮಾಡಲಾಗುತ್ತದೆ.(ಉದಾ.3-2-1.5 ಇಂಚು)
 • ಇಲ್ಲಿ ಅದಕ್ಕೆ ವಿರುದ್ಧವಾಗಿ ಅಂದರೆ ತುದಿಗೆ 2.5  ನಂತರ 3 ಹೀಗೆ ಉದ್ದಕ್ಕನುಗುಣವಾಗಿ ಹಾಕಬೇಕು
ಹಳೆ ಮಾದರಿಯ ಡ್ರೈನೇಜ್ ವ್ಯವಸ್ಥೆ –Old method of drainage system
ಹಳೆ ಮಾದರಿಯ ಡ್ರೈನೇಜ್ ವ್ಯವಸ್ಥೆ

ಹೇಗೆ ಕಲಸ ಮಾಡುತ್ತದೆ:

 • ಪಿವಿಸಿ ಪೈಪಿಗೆ ಮಾಡಲಾದ ತೂತು ನೆಲದಲ್ಲಿ ಒಸರಲ್ಪಡುವ ನೀರನ್ನು ಹೀರಿ(Sucking) ಮುಂದೆ ಸಾಗಿಸುತ್ತದೆ.
 • ಬರೇ ನೀರು ಮಾತ್ರವಲ್ಲದೆ ಸಸ್ಯಗಳ ಬೇರಿಗೆ  ಬೇಕಾಗುವ ಆಮ್ಲಜನಕವನ್ನೂ ಸಹ ಇದು ದೊರೆಯುವಂತೆ ಮಾಡುತ್ತದೆ.
 • ಉಪ ಕಾಲುವೆಗಳಲ್ಲಿ ಸಂಗ್ರಹವಾಗುವ ನೀರನ್ನು  ಮುಖ್ಯ ಕೊಳವೆ ಮುಂದೆ ಸಾಗಿಸುತ್ತದೆ.
 • ತಳಭಾಗದ ಒರತೆ  ನೀರನ್ನೂ ಬೇರುಗಳ ಬುಡಕ್ಕೆ ಬಾರದಂತೆ ತಡೆಯುತ್ತದೆ.
PVC ಪೈಪನ್ನು ಹೀಗೆ ತೂತು ಮಾಡಿರಬೇಕು –It is must to do hole in extended pipe

ಫಲ ಏನು:

 • ಬೆಳೆಗಳ ಇಳುವರಿ ಸಾಮರ್ಥ್ಯ ನಾವು ಪಡೆಯುವುದಕ್ಕಿಂತ ದುಪ್ಪಟ್ಟು ಹೆಚ್ಚು ಇರುತ್ತದೆ.
 • ಮಳೆಗಾಲದಲ್ಲಿ ನೀರಿನ ಒರತೆಯಿಂದಾಗಿ ಉಂಟಾಗುವ ಬೇರು ಕೊಳೆ, ಸಸ್ಯ ಕೊಳೆ ರೋಗ ಇಲ್ಲದಾಗುತ್ತದೆ.
 • ಬೇರುಗಳಿಗೆ ಬೆಳೆಯಲು ಯಾವ ಅಡ್ಡಿ ಆತಂಕವೂ ಇಲ್ಲದೆ  ಗರಿಷ್ಟ ಇಳುವರಿಗೆ ಸಹಕಾರಿಯಾಗುತ್ತದೆ.
 • ಮಳೆ ಇಲ್ಲದಿದ್ದರೂ ಈ ಕಾಲುವೆಯಲ್ಲಿ ಒರತೆ ನೀರು ಹೊರ ಹರಿಯುತ್ತಿರುತ್ತದೆ.
PVC ಪೈಪಿನ ಮೇಲೆ ತೆಂಗಿನ ಸಿಪ್ಪೆ ಹೊದಿಸಿ ಮಣ್ಣು ಹಾಕಬೇಕು.- Cover coconut husk upon PVC pipe and then cover soil
PVC ಪೈಪಿನ ಮೇಲೆ ತೆಂಗಿನ ಸಿಪ್ಪೆ ಹೊದಿಸಿ ಮಣ್ಣು ಹಾಕಬೇಕು

ತೋಟಕ್ಕೆ ಮಾತ್ರವಲ್ಲ:

 • ಇದು ಅಡಿಕೆ ತೋಟಕ್ಕೆ ಮಾತ್ರವಲ್ಲ. ನಿಮ್ಮ ಹೊಲದಲ್ಲಿ ಎಲ್ಲಿಯಾದರೂ ನೀರು ನಿಲ್ಲುವ ಜಾಗ ಇದ್ದರೆ ಅಲ್ಲಿ ಈ ರೀತಿ ಪೈಪನ್ನು ಅಳವಡಿಸಿದ್ದೇ ಆದರೆ ಅಲ್ಲಿ ವಾಹನ ಸಂಚಾರಕ್ಕೂ ಅಡ್ದಿ ಇಲ್ಲದಂತೆ ನೆಲವನ್ನು ಗಟ್ಟಿಯಾಗಿ ಇಡಬಹುದು.
 • ಮನೆ ಕಟ್ಟುವಾಗ ಸುತ್ತಮುತ್ತ ಒರತೆಯ ಸಂಭವ ಇದ್ದಲ್ಲಿ ಅಂತಹ ಜಾಗದಲ್ಲಿ 3-4 ಅಡಿ ಆಳದಲ್ಲಿ ಪೈಪು ಹಾಕಿ ನೀರು ಮೇಲೆ ಬಾರದಂತೆ ತಡೆಯಬಹುದು.
 • ಕಂಪೌಂಡ್ ಗೋಡೆ , ರಸ್ತೆ ಕಾಮಗಾರಿ ಇಂತಹ ಕಡೆಗಳಲ್ಲೂ ನೀರಿನ ಒರತೆ ಉಂಟಾಗಿ ಕುಸಿತ ಇತ್ಯಾದಿ ಆಗುವುದಿದ್ದರೆ ಇಂತಹ ವ್ಯವಸ್ಥೆ ಮಾಡಿ ಅದನ್ನು ಪರಿಣಾಮಕಾರಿಯಾಗಿ ತಡೆಯಬಹುದು.

ಅಂಡರ್ ಗೌಂಡ್ ಡ್ರೈನೇಜ್ ಎಂಬುದು ಬಹಳ ಉತ್ತಮ ನೀರು ಬಸಿಯುವ ಶಾಶ್ವತ ವ್ಯವಸ್ಥೆ. ಇದನ್ನು ಸ್ವಲ್ಪ ಸ್ವಲ್ಪವೇ ಆಳವಡಿಸಿಕೊಂಡು ತೋಟವನ್ನು ಆಧುನೀಕರಣ ಮಾಡಿಕೊಳ್ಳಬಹುದು. ಕುಸಿತ ಇತ್ಯಾದಿ ನಷ್ಟಗಳನ್ನು ತಡೆಯಬಹುದು. ಮುಖ್ಯವಾಗಿ ಒಮ್ಮೆ ಮಾಡಿ ನಂತರ ನಿಶ್ಚಿಂತರಾಗಿರಬಹುದು.

14 thoughts on “ಅಂಡರ್ ಗ್ರೌಂಡ್ ಡ್ರೈನೇಜ್ – ನೀರು ಬಸಿಯಲು ಸುಲಭ- ಶಾಶ್ವತ ವ್ಯವಸ್ಥೆ.

 1. Mele tilisiruva varadahalli thota yelli bartiya. Detailed adresss Kodi sir. Nav ondu sari visit madbeku pls address kodi sir

 2. ನಮ್ಮ ತೋಟದಲ್ಲಿಯೂ ಈ ವ್ಯವಸ್ಥೆ ಮಾಡಿದ್ದೇವೆ..

  9844028064.
  8762957664

  Ganesh Hegde.
  Sungolimane.
  Lambapur
  Siddapur. (UK)

  1. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮಗೆ ಈ ಸೈಟ್ ಇಷ್ಟವಾದರೆ ನಿಮ್ಮ ಮಿತ್ರರಿಗೆ ತಿಳಿಸಿ.

 3. Shivamogga ಹತ್ರ ಇದನ್ನು ಮಾಡಿದವರು ಇದ್ದರೆ ಅಡ್ರೆಸ್ಸ್ ಕೊಡಿ…

 4. Sir Nam tota kere kelagade ide navu ide tara madale beku nange idara bagge sampurana mahiti beku tilisi

  1. Before you installing please visit and sea some plantations they installed.
   I will give one number. Mr Jagadish Rao, Hosanagara Shimogga, he installed this many yers back. Now he is happy
   9448885155.

Leave a Reply

Your email address will not be published. Required fields are marked *

error: Content is protected !!