ತೋಟಕ್ಕೆ ಮಣ್ಣು ಹಾಕುವುದರಿಂದ ಪ್ರಯೋಜನಗಳು

by | Jun 26, 2022 | Garden Management (ತೋಟ ನಿರ್ವಹಣೆ) | 0 comments

ಹೆಚ್ಚಿನವರು ತೋಟಕ್ಕೆ ಬಹಳ ಖರ್ಚು ಮಾಡಿ ಹೊರಗಡೆಯಿಂದ ಮಣ್ಣು  ತರಿಸಿ ಹಾಕುತ್ತಾರೆ.  ಹೊಸ ಮಣ್ಣು ಫಲವತ್ತಾಗಿದ್ದು, ಹೊಲದ ಸ್ಥಿತಿ ಸರಿಯಾಗಿದ್ದರೆ ಇದು ಬಹಳ ಒಳ್ಳೆಯದು. ಅಂಟು , ಜಿಗುಟು ಮಣ್ಣು ದಪ್ಪಕ್ಕೆ ಹಾಸಿದರೆ   ಬೇರಿಗೆ ಉಸಿರು ಕಟ್ಟಿದಂತಾಗಬಹುದು.

 • ಬಹಳಷ್ಟು ಕಡೆ ಮಳೆಗಾಲದ ಮಳೆ ಹನಿಗಳ ಹೊಡೆತಕ್ಕೆ ಮಣ್ಣು ಸವಕಳಿಯಾಗಿ ಫಲವತ್ತತೆ ಕಡಿಮೆಯಾಗುತ್ತದೆ.
 • ತೋಟದಲ್ಲಿ ಕಲ್ಲುಗಳೇ ಹೆಚ್ಚು ಇರುತ್ತವೆ.
 • ಅದಕ್ಕಾಗಿ ಹೊಸ ಮಣ್ಣು ಹಾಕಿ ಅದನ್ನು ಮತ್ತೆ ಪುನಃಶ್ಚೇತನ ಮಾಡುವುದು  ಬಹಳ ಹಿಂದಿನಿಂದಲೂ ನಡೆದು ಬಂದ ಪದ್ದತಿ.
 • ಇದರಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ಹಾಕಿದ ಹೊಸ ಮಣ್ಣು ಕೊಚ್ಚಣೆಗೆ ಒಳಗಾಗದಂತಿದ್ದರೆ ಇದು ಫಲಕಾರಿ.
 • ಕೊಚ್ಚಣೆಗೆ ಅವಕಾಶ ಇಲ್ಲದ ಕಡೆ ಮಣ್ಣನ್ನು ಹಿತ ಮಿತವಾಗಿ ಹಾಕಬಹುದು.

ಎಲ್ಲಿ  ಉತ್ತಮ:

 • ತೋಟದ ಸ್ಥಿತಿ  ಸಮತಟ್ಟಾಗಿದ್ದರೆ ಅಲ್ಲಿ ಹೊಸ ಮಣ್ಣನ್ನು  ಹಾಕಿದಾಗ ಅದು ಹೊಸ ಬೇರಿನ ಬೆಳವಣಿಗೆಗೆ ಅನುಕೂಲವಾಗುತ್ತದೆ.
 • ಏರು ತಗ್ಗಿನ ಭೂಮಿ ಆಗಿದ್ದರೆ ಅಲ್ಲಿ  ಹಾಕಿದ ಮಣ್ಣಿನ ಜೊತೆಗೆ ಇದ್ದ ಮಣ್ಣೂ ಸಹ ಕೊಚ್ಚಣೆಗೆ ಒಳಗಾಗುತ್ತದೆ.
 •  ಈ ಸ್ಥಳದಲ್ಲಿ ಮಣ್ಣು ಹಾಕುವ ಬದಲು ಮಣ್ಣು ಕೊಚ್ಚಣೆ ತಡೆಯುವ ಸಮಪಾತಳಿ ಮಾಡಿ ಅದಕ್ಕೆ ಸಾವಯವ ತ್ಯಾಜ್ಯ ಹಾಕಬೇಕು.
 • ಬೇರು ಹುಳ ಇರುವ ತೋಟಗಳಲ್ಲಿ ಮರಳಿನ ಅಂಶ ಇಲ್ಲದ ಮಣ್ಣನ್ನು ಹಾಕುವುದರಿಂದ  ತುಂಬಾ ಪ್ರಯೋಜನವಾಗುತ್ತದೆ.
 • ತುಂಬಾ ಜೌಗು ಇರುವ ತೋಟಗಳಿಗೆ ಮಣ್ಣು ಏರಿಸುವುದರಿಂದ  ನೆಲಮಟ್ಟ ಏರಿಕೆಯಾಗಿ ಸಸ್ಯಗಳ  ಬೇರುಗಳಿಗೆ ಉಸಿರಾಟಕ್ಕೆ ಅನುಕೂಲವಾಗಿ  ಫಲಿತಾಂಶ ಉತ್ತಮವಾಗುತ್ತದೆ.
 • ತೇವಾಂಶ ಸಂರಕ್ಷಣೆ ದೃಷ್ಟಿಯಿಂದ ಮಣ್ಣು ಏರಿಸುವ ಪದ್ದತಿ ಸಹಕಾರಿಯಾಗುತ್ತದೆ.

ಯಾವ ಮಣ್ಣು ಹಾಕಬಹುದು:

 • ಹೊಸ ಮಣ್ಣು ಅದು ಕೆರೆ ಗೋಡು ಆಗಿದ್ದರೆ, ತೆಳುವಾಗಿ ಬೇರುಗಳಿಗೆ ಉಸಿರು ಕಟ್ಟದಂತೆ ಹಾಕಬಹುದು.
 • ಕರಾವಳಿ ಮಲೆನಾಡಿನಲ್ಲಿ  ಹೇರಳವಾಗಿ ಲಭ್ಯವಾಗುವ ಜಂಬಿಟ್ಟಿಗೆ ಕಲ್ಲಿನ ಹುಡಿ ಮಣ್ಣು  ಹಾಕುವುದರಿಂದ  ತುಂಬಾ  ಪ್ರಯೋಜನ ಇದೆ.
 • ಮರಳು ಮಿಶ್ರಿತ ಮಣ್ಣು ಅಂದರೆ 50:50 ಪ್ರಮಾಣದಲ್ಲಿ ಮರಳು + ಮಣ್ಣು ಇದ್ದರೆ ಅಂತಹ ಮಣ್ಣನ್ನು  ಹಾಕಬೇಡಿ. ಇದರಿಂದ ಬೇರು ಹುಳ ಬರುವ ಸಾಧ್ಯತೆ ಇದೆ.
 • ಕಾಡು ಮಣ್ಣು  ಹಾಕಬಹುದು.  ಬರೇ  ಕುರುಚಲು ಗಿಡಗಳೂ ಇಲ್ಲದ ಫಲವತ್ತತೆ  ರಹಿತ ಮಣ್ಣು ಹಾಕುವುದು ಲಾಭದಾಯಕಲ್ಲ.
 • ಗಾಳಿಯಾಡದ , ನೀರು ಬಿಟ್ಟು ಕೊಡದ ಮಣ್ಣನ್ನು ಹಾಕಿದರೆ ಬೇರು ಉಸಿರಾಟ ಕಷ್ಟವಾಗಿ ಮೇಲೆ ಬರುತ್ತದೆ.

ಮಣ್ಣು ಏರಿಸಿದ ತೋಟ- ಮೇಲ್ಮಣ್ಣು ಸವಕಳಿಗೆ ಮತ್ತೆ ಹೂರಣ

ಎಲ್ಲಿ ಮಣ್ಣು ಹಾಕಬೇಕು:

 • ಮಣ್ಣು ಹಾಕುವಾಗ ಬಹಳ ಜನ ಇಡೀ ತೋಟಕ್ಕೆ ಹಾಸುತ್ತಾರೆ.
 • ಹೀಗೆ ಮಾಡಬಾರದು. ಬುಡ ಭಾಗ ಸುಮಾರು ½ – ¾  ಅಡಿ ಬಿಟ್ಟು ಮಣ್ಣು ಹಾಕಬೇಕು.
 • ಉಳಿದ ಭಾಗಗಳನ್ನು ಪೂರ್ತಿಯಾಗಿ ಮಣ್ಣಿನಿಂದ ಹಾಸಬಹುದು.
 • ಒಮ್ಮೆ ಮಣ್ಣು ಹಾಕುವಾಗ ಸುಮಾರಾಗಿ ½ ಅಡಿ  ದಪ್ಪಕ್ಕೆ ಮಾತ್ರ ಹಾಸಬೇಕು. ಜಾಸ್ತಿ ದಪ್ಪ  ಹಾಕಿದರೆ  ನೆಲ ಗಟ್ಟಿಯಾಗಬಹುದು.
 • ಬರೇ ಮಣ್ಣು ಹಾಕುವ ಬದಲಿಗೆ ನೆಲಕ್ಕೆ ಸಾವಯವ ತ್ಯಾಜ್ಯಗಳನ್ನು  ಹಾಸಿ ಅದರ ಮೇಲೆ ಮಣ್ಣು ಹಾಸಿದರೆ ಅದರಿಂದ  ಪ್ರಯೋಜನ ಹೆಚ್ಚು.

ಉತ್ತರ ಕನ್ನಡ, ಮತ್ತು ತೀರ್ಥಹಳ್ಳಿ, ಹೊಸನಗರ ಮುಂತಾದ ಕಡೆ  ತೋಟದಲ್ಲಿ ಎರಡು ಅಡಿಕೆ ಮರಗಳ  ಮಧ್ಯಂತರದಲ್ಲಿ  ಮಣ್ಣಿನ ರಾಶಿಯನ್ನು (ಏರಿ)ಹಾಕುತ್ತಾರೆ.  ಬಸಿಗಾಲುವೆ ಇದ್ದರೆ ಮಾತ್ರ ಇದು ಉತ್ತಮ.

ಮಣ್ಣಿನ ಬದಲಿಗೆ ಬೇರೆ:

 • ಮಣ್ಣು ತೋಟಕ್ಕೆ ಕೊಡುವ ರಕ್ಷಣೆಗಿಂತ ಹೆಚ್ಚಿನ ರಕ್ಷಣೆಯನ್ನು ಕೊಡುವಂತದ್ದು, ಸಾವಯವ ತ್ಯಾಜ್ಯಗಳು.
 • ಅಡಿಕೆ ತೋಟದಲ್ಲಿ  ದೊರೆಯುವ ಸೋಗೆ, ಬಾಳೆ ಕಾಂಡ ಎಲೆ ಮುಂತಾದವುಗಳನ್ನು ತೋಟಕ್ಕೆ ಹಾಸಿದರೆ ಮಣ್ಣು ಹಾಕುವುದ ಕ್ಕಿಂತ ಹೆಚ್ಚಿನ ಫಲಿತಾಂಶ ಇದೆ.
 • ಶಿರಸಿ, ಯಲ್ಲಾಪುರ, ಅಂಕೋಲಾ ಸುತ್ತಮುತ್ತ ಕೆಲವು  ಬೆಳೆಗಾರರು ಈ ವಿಧಾನವನ್ನು ಅನುಸರಿಸುತ್ತಾರೆ.
 • ಈ ಕ್ರಮದಿಂದ ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಾಗುತ್ತದೆ. ಮಣ್ಣಿನ ರಚನೆ ಸುಧಾರಿಸುತ್ತದೆ. ಮೇಲ್ಮಣ್ಣು ಹೆಚ್ಚಾಗುತ್ತದೆ.
 •  ಮಳೆಗಾಲಕ್ಕ್ಕೆ ಮುಂಚೆ  ಸಾವಯವ ವಸ್ತುಗಳನ್ನು ಹಾಸುವುದರಿಂದ ಅದು ಮಳೆಗಾಲ ಮುಗಿಯುವ ಸಮಯಕ್ಕೆ  ಕಳಿತು ಮಣ್ಣಾಗಿ ಪರಿವರ್ತನೆಯಾಗುತ್ತದೆ.
 • ಇಂತಹ  ಮಣ್ಣಿನಲ್ಲಿ  ಮಣ್ಣಿನಲ್ಲೇ ಇರುವ ಜೀವಾಣುಗಳು ಮತ್ತು  ಹೊರಗಡೆಯಿಂದ ತಂದು ಬಳಸುವ ಎರಡೂ ಚೆನ್ನಾಗಿ ಕೆಲಸ ಮಾಡುತ್ತವೆ.
 • ಸಸ್ಯಗಳ, ಮಣ್ಣಿನ ಸ್ಥಿತಿಗತಿ  ಉತ್ತಮವಾಗಿ ಧೀರ್ಘಾವಧಿಯ ಫಲಿತಾಂಶಕ್ಕೆ ಮಣ್ಣು ಏರಿಸುವುದಕ್ಕಿಂತ ಇದು  ಉತ್ತಮ.

ಹೊಲದ  ಪರಿಸ್ಥಿತಿಗನುಗುಣವಾಗಿ ಮಣ್ಣು ಹಾಕುವುದನ್ನು ಮಾಡಬೇಕು. ಬೆಳೆ ತ್ಯಾಜ್ಯಗಳನ್ನು ಹಾಕಿದರೆ ಗೊಬ್ಬರ ಆಗುತ್ತದೆ. ಮಣ್ಣು ಹಾಕಿದರೆ ಗೊಬ್ಬರ ದೊರೆತಂತೆ ಆಗುವುದಿಲ್ಲ. ಸಾವಯವ ತ್ಯಾಜ್ಯ ಹಾಕಿದರೆ ಕಳೆ ನಿಯಂತ್ರಣ ಆಗುತ್ತದೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!