ಜೇಡರ ಬಲೆ ಕಂಡರೆ ಸಾಕು ಕೋಲು ಹಿಡಿದು ಆದನ್ನು ಬಿಡಿಸಿ ಅವುಗಳ ಬದುಕಿನಲ್ಲಿ ಆಟವಾಡುವವರೇ ಹೆಚ್ಚು. ಯಾರ ಹೊಲದಲ್ಲಿ ಇವು ಹೆಚ್ಚಾಗಿ ಬಲೆ ಕಟ್ಟಿ ಇರುತ್ತದೆಯೋ ಅಲ್ಲಿ ಕೀಟಗಳು ಹೆಚ್ಚು ಇವೆ ಎಂದೂ ಅಲ್ಲಿ ಕಡಿಮೆ ವಿಷ ರಾಸಾಯನಿಕ ಬಳಸಲಾಗಿದೆ ಎಂಡು ಹೇಳಬಹುದು.
ಮಳೆಗಾಲ ಮುಕ್ತಾಯದ ಸಮಯದಲ್ಲಿ ಬಿಸಿಲು ಇದ್ದಾಗ ನಿಮ್ಮ ಹೊಲದಲ್ಲಿ ಅಸಂಖ್ಯಾತ ಸಣ್ಣ ದೊಡ್ಡ ಜೇಡಗಳು ಬಲೆಕಟ್ಟಿಕೊಂಡು ಕಾಣಬಹುದು. ಕಾರಣ ಈ ಸಮಯದಲ್ಲಿ ಹುಳ ಹುಪ್ಪಟೆಗಳು ಅಧಿಕ ಸಂಖ್ಯೆಯಲ್ಲಿ ಇರುತ್ತವೆ. ಜೇಡಗಳಿಗೆ ಆ ಹುಳ ಹುಪ್ಪಟೆಗಳು ಆಹಾರ. ಅದಕ್ಕೆ ಹೊಂಚು ಹಾಕಲು ಇವು ಬಲೆ ಕಟ್ಟಿಕೊಂಡು ಇರುತ್ತವೆ. ಮಳೆಗಾಲದಲ್ಲಿ ಸಂತಾನಾಭಿವೃದ್ಧಿಯಾದ ಎಲ್ಲಾ ಹುಳ ಹುಪ್ಪಟೆಗಳೂ ಉಳಿದರೆ ರೈತರ ಹೊಲದ ಪೈರು ಅವುಗಳಿಗೇ ಆಹಾರವಾಗಬಹುದು. ಅದನ್ನು 90% ಕ್ಕಿಂತಲೂ ಹೆಚ್ಚು ಇವು ಮತ್ತಿನ್ನಿತರ ಪರಭಕ್ಷಕಗಳು ತಿಂದು ನಾಶ ಮಾಡುತ್ತವೆ.
- ಹೊಲದಲ್ಲಿ ಮರದಿಂದ ಮರಕ್ಕೆ , ಗಿಡದಿಂದ ಗಿಡಕ್ಕೆ ತನ್ನದೇ ದೇಹದ ಮೇಣದಿಂದ ಮಾಡಿದ ಬಲೆ ಹೆಣೆದು ಹೆಣೆದು ರಾತ್ರೆ ಹಗಲೆನ್ನದೆ ತಿಂಗಳ ತನಕವೂ ಕಾದು ಹೋಚು ಹಾಕುವ ಒಂದು ಅಸಾಮಾನ್ಯ ಜೀವಿ ಇದು .
- ನನ್ನ ಅನುಭವದಲ್ಲಿ ಒಂದು ಜೇಡ ತಿಂಗಳಿಗೂ ಹೆಚ್ಚು ಸಮಯದ ವರೆಗೆ ಬಲೆ ಹೆಣೆದು ಆಹಾರಕ್ಕಾಗಿ ಹೊಂಚು ಹಾಕುವುದನ್ನು ಕಂಡಿದ್ದೇನೆ.
- ಇವುಗಳು ಕೆಲವು ತಗ್ಗಿನಲ್ಲಿ ಬಲೆ ಹೆಣೆದು ವಾಸಿಸಿದರೆ ಮತ್ತೆ ಕೆಲವು ಎತ್ತರದಲ್ಲಿ ಇರುತ್ತವೆ.
- ಇದು ತನ್ನ ಆಹಾರಕ್ಕಾಗಿ ಎಷ್ಟು ಕಷ್ಟಪಡುತ್ತದೆ, ಅಷ್ಟೇ ಅಲ್ಲ ತನ್ನ ಆಹಾರಾಭ್ಯಾಸದಲ್ಲಿ ಕೃಷಿಕನ ಬೆಳೆಗೆ ತೊಂದರೆ ಮಾಡುವ ಕೀಟವನ್ನು ಹೊಂಚು ಹಾಕಿ ಸಾಯಿಸುತ್ತದೆ.
- ಇವು ಹೊಲದ ಕಾವಲುಗಾರ ಜೀವಿಗಳು. ಉಪಕಾರ ಸ್ಮರಣೆಗೆ ಇವು ಒಂದು ಮಾದರಿ ಎನ್ನಬಹುದು.
ಇವುಗಳನ್ನು arthropods ಗುಂಪಿಗೆ ಸೇರಿಸಲಾಗಿದೆ. ಆರ್ತ್ರೋಪೋಡ್ ಗಳು ಎಂದರೆ ಸಂಧಿಪದಿಗಳು. ಸಂದುಕಾಲುಗಳುಳ್ಳ ಜೀವಿಗಳಿಗೆ ಈ ಹೆಸರು. ಇದು ಕೀಟ ಪ್ರಪಂಚದಲ್ಲಿ ಅತೀ ದೊಡ್ದ ವರ್ಗೀಕರಣವಾಗಿದೆ. ಕಡಿಮೆ ಪಕ್ಷ ಇದರಲ್ಲಿ 10,000 ಪ್ರಾಣಿ ಪ್ರಭೇಧಗಳಿರಬಹುದು. ಪ್ರಪಂಚದ ಎಲ್ಲಾ ಕಡೆ ಇವುಗಳನ್ನು ನಾವು ಕಾಣಬಹುದು. ಪ್ರಾದೇಶಿಕವಾಗಿ ಪ್ರಬೇಧಗಳ ಬೇರೆ ಬೇರೆ ಪ್ರಕಾರಗಳು ಇರುತ್ತವೆ.
ಜೇಡಗಳ ಕಾರ್ಯ:
- ಹೊಲದಲ್ಲಿ ಅತ್ತಿತ್ತ ಸಂಚರಿಸುವಾಗ ಮೈ ಕೈಗೆ ಮೈಗೆ ಅಂಟಿ ನಮಗೆ ಕಿರಿ ಕಿರಿ ಉಂಟುಮಾಡುವ ಜೇಡ ನಮ್ಮ ಮಿತ್ರ.
- ಬಹಳ ಜನ ಇದನ್ನು ಬೆಳೆಗಳಿಗೆ ತೊಂದರೆ ಮಾಡುವ ಕೀಟ ಎಂದು ನಂಬಿದ್ದಾರೆ.
- ಇದು ತಪ್ಪು ಭಾವನೆ. ಇದು ಒಂದು ಉಪಕಾರೀ ಕೀಟ.
- ಇವುಗಳು ತನ್ನ ಶರೀರದಿಂದ ಸ್ರವಿಸುವ ಒಂದು ಅಂಟು ರಸದ ಮೂಲಕ ಬಲೆಯನ್ನು ಬಹಳ ಸುಂದರವಾಗಿ ಹೆಣೆಯುತ್ತದೆ.
- ಇದು ಗಟ್ಟಿ ಬಲೆ ಅಲ್ಲದಿದ್ದರೂ ಅದರ ಮೇಣವು ಅಂಟಾಗಿರುವ ಕಾರಣ ಸಿಕ್ಕೊ ಬಿದ್ದರೆ ಮತ್ತೆ ಕತೆ ಮುಗಿಯಿತು.
- ಆವು ತಾನು ತಿನ್ನಬಹುದಾದ ಗಾತ್ರದ ಜೀವಿಗಳನ್ನು ಬಂಧಿಸಲು ಬೇಕಾಗುವಷ್ಟೇ ತೂತಿನ ಬಲೆಯನ್ನು ಹೆಣೆಯುತ್ತದೆ.
- ದೊಡ್ದದು ದೊಡ್ಡ ಕಣ್ಣಿನ ಬಲೆಯನ್ನು ಹೆಣೆದರೆ ಸಣ್ಣದು ಸಣ್ಣ ಕಣ್ಣಿನ ಬೆಲೆ ಹೆಣೆಯುತ್ತದೆ.
- ಕೆಲವು ನೆಲದಲ್ಲೇ ಇದ್ದರೆ ಮತ್ತೆ ಕೆಲವು ಸಾಧಾರಣ ಎತ್ತರದಲ್ಲಿ, ಕೆಲವು ತುಂಬಾ ಎತ್ತರದಲ್ಲಿಯೂ ಇರುತ್ತವೆ.
ಈ ಬೆಲೆಯ ಮೇಲೆ ಸೂರ್ಯನ ಬೆಳಕು ಬಿದ್ದಾಗ ಅದರಲ್ಲಿ ಕಾಣುವ ಸೌಂದರ್ಯವನ್ನು ಕವಿ ಬಹಳ ಸುಂದರವಾಗಿ ವರ್ಣಿಸಬಲ್ಲ. ಮಂಜು ಬಿದ್ದಾಗ ಕಾಣುವ ಸೌಂದರ್ಯವೂ ಸಹ ಬಹಳ ಸುಂದರ. ಇನ್ನು ಇದರ ಬಲೆಯಲ್ಲಿ ಸಿಕ್ಕಿ ಬೀಳುವ ಕೀಟವನ್ನು ಓಡಿ ಬಂದು ಭಕ್ಷಣೆ ಮಾಡುವ ಸೌಂದರ್ಯವನ್ನು ಆನಂದಿಸಬೇಕಾದವ ಕೃಷಿಕ.
ಏನು ಉಪಕಾರ:
- ಜೇಡಗಳು ಭತ್ತ , ಹತ್ತಿ, ತೊಗರಿ, ಬದನೆ , ಹೀಗೆ ಹಲವಾರು ಬೆಳೆಗಳಿಗೆ ಹಾನಿ ಮಾಡುವ ಪತಂಗ ಜಾತಿಯ ಹಾರು ಕೀಟಗಳನ್ನು ಬಂಧಿಸಿ ಸಾಯಿಸುತ್ತವೆ.
- ಕೆಲವು ಉಪಕಾರೀ ಕೀಟಗಳನ್ನೂ ಸಾಯಿಸಬಹುದು.
- ಆದರೆ ಪತಂಗಗಳನ್ನು ಗಣನೀಯ ಪ್ರಮಾಣದಲ್ಲಿ ಕೊಲ್ಲುವ ನೈಸರ್ಗಿಕ ಕೀಟ ನಿಯಂತ್ರಕ .
- ಎಲೆ ಭಕ್ಷಣೆ ಮಾಡುವ ಎಲ್ಲಾ ಜಾತಿಯ ಹುಳುಗಳೂ ಮುಂದೆ ಪತಂಗಗಳೇ (Moth) ಆಗುವುದು.
- ಪತಂಗಗಳು ಮತ್ತೆ ಜೋಡಿಯಾಗಿ ಮೊಟ್ಟೆ ಇಡುತ್ತವೆ.
- ಹಾರುವ ಈ ಪತಂಗಗಳನ್ನು ಅಲ್ಲಲ್ಲಿ ಬಲೆಗೆ ಸಿಕ್ಕುವಂತೆ ಮಾಡಿ ಅದರ ಸಂತಾನವನ್ನು ಕಡಿಮೆ ಮಾಡುವ ನೈಸರ್ಗಿಕ ಕೀಟ ನಿಯಂತ್ರಕಗಳಲ್ಲಿ ಒಂದು.
ವಿಷದ ಜೇಡಗಳೂ ಇವೆ:
- ಕೆಲವು ಜೇಡಗಳು ಮಾನವನಿಗೆ ಕಚ್ಚುತ್ತವೆ.
- ಅವು ಬೇಕೆಂದು ಕಚ್ಚುವುದಲ್ಲ.
- ಅಚಾನಕ್ ಅವುಗಳು ಹೆದರಿ ಕಚ್ಚುತ್ತವೆ.
- ಅವುಗಳಲ್ಲಿ ಕೆಲವು ವಿಷಕಾರಿಯೂ ಸಹ.
- ಸಾಮಾನ್ಯವಾಗಿ ಜೇಡ ಕಚ್ಚಿದರೆ ನೆಲ್ಲಿ ಮರದ ತೊಗಟೆಯನ್ನು ಜಜ್ಜಿಅದರ ರಸವನ್ನು ಗಾಯ ಅಥವಾ ಕಚ್ಚಿದ ಭಾಗಕ್ಕೆ ಹಚ್ಚಿದರೆ ಅದು ವಾಸಿಯಾಗುತ್ತದೆ.
- ಒಂದು ವೇಳೆ ಇವುಗಳು ಇಲ್ಲದೇ ಹೋದರೆ ನಾವು ಯಾವುದೇ ಬೆಳೆ ಬೆಳೆಯಲಿಕ್ಕಿರಲಿಲ್ಲ.
- ಎಲ್ಲವೂ ಹುಳಮಯವಾಗಿರುತ್ತಿತ್ತು.
- ನೆಲಮಟ್ಟದಲ್ಲಿ ಬಲೆ ಹೆಣೆದು ಹೊಂಚು ಹಾಕುವ ಜೇಡಗಳು ಬಿಳಿ ನೊಣ, ಎಫಿಡ್ ಗಳು, ಹಾಗೆಯೇ ಇನ್ನಿತರ ಕೀಟಗಳನ್ನು ಬಂಧಿಸುತ್ತದೆ.
ಪ್ರಕೃತಿ ಸಮತೋಲನ ಕಾಪಾಡಿಕೊಳ್ಳಲು ತನ್ನದೇ ಆದ ಎಷ್ಟೊಂದು ವ್ಯವಸ್ಥೆಗಳನ್ನು ಮಾಡಿದೆ. ನಮಗೆ ಅದರ ಅರಿವು ಇಲ್ಲ. ನಾವು ಇದನ್ನು ಸರಳವಾಗಿ ತಿಳಿದಿದ್ದೇವೆ.
ಜಾಗತಿಕ ಅಧ್ಯಯನಗಳ ಪ್ರಕಾರ ಕೆಲವು ಜೇಡರ ಪ್ರಭೇಧಗಳು ಮಾನವ ಕೀಟನಾಶಕ ಬಳಕೆಯ ಪರಿಣಾಮದಿಂದ ನಾಶವಾಗಿದೆ ಎಂಬ ವರದಿಯನ್ನು ಇದೆ. ಅದು ಆಗಿರಲೂ ಬಹುದು. ಇನ್ನಾದರೂ ಇವುಗಳನ್ನು ಕಂಡರೆ ಕೊಲ್ಲಬೇಡಿ. ಕೀಟ ನಾಶಕ ಸಿಂಪಡಿಸದಿರಿ. ಇವು ನಮ್ಮ ಬೆಳೆ ರಕ್ಷಕಗಳು.