ಸೂಕ್ಷ್ಮ ಪೋಷಕಾಂಶಗಳಿಂದ ಬೆಳೆಗಳು ನಳನಳಿಸುತ್ತದೆ- ಯಾಕೆ?

ಸೂಕ್ಷ್ಮ ಪೋಷಕಾಂಶಗಳ ಸಿಂಪರಣೆ ಮತ್ತು ಬಳಕೆಯಿಂದ ಬೆಳೆದ ಅಡಿಕೆ ಸಸಿಗಳು.

ಕೆಲವು ಬೆಳೆಗಳನ್ನು  ಬೆಳೆಯುವಾಗ ನೆಲಕ್ಕೆ ಬಿಸಿಲು ಬೀಳುವುದಿಲ್ಲ. ಜೊತೆಗೆ ಈಗ ಹಿಂದಿನಂತೆ ನಾವು ಬೇರೆ ಬೇರೆ ಹಸುರು ಸೊಪ್ಪು ಸದೆಗಳನ್ನೂ ಮಣ್ಣಿಗೆ ಸೇರಿಸುವುದಿಲ್ಲ. ಕೊಟ್ಟಿಗೆ ಗೊಬ್ಬರವನ್ನೂ ಕೊಡುವುದಿಲ್ಲ. ಕೆಲವರು ಕುರಿ ಹಿಕ್ಕೆ, ಮತ್ತೆ ಕೆಲವರು ಕೋಳಿ  ಹಿಕ್ಕೆ ಬಳಸುತ್ತಾರೆ. ಇದರಿಂದಾಗಿ ಮಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಇದನ್ನು ಪೂರೈಸಲು ಬೇರೆ ಮೂಲಗಳಿಂದ ಈ ಪೋಷಕಗಳನ್ನು ಬಳಸುವುದು ಸೂಕ್ತ.

 • ಅಡಿಕೆ ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಇತ್ತೀಚಿನ  ಕೆಲವು ವರ್ಷಗಳಿಂದ ಅಡಿಕೆ ಧಾರಣೆ ಏರಿಕೆಯ ಗತಿಯಲ್ಲಿದ್ದು,
 • ಬೆಳೆಗಾಗರು  ಹೆಚ್ಚು ಮುತುವರ್ಜಿಯಿಂದ ಬೇಸಾಯ ಕ್ರಮಗಳನ್ನು  ಅನುಸರಿಸುತ್ತಿದ್ದಾರೆ.
 • ಅಡಿಕೆಗೆ ಬೆಲೆ ಚೆನ್ನಾಗಿರುವ ಕಾರಣ ಸಾಂಪ್ರದಾಯಿಕ  ಪ್ರದೇಶಗಳ ಬೆಳೆಗಾಗರೂ ಅಲ್ಲದೆ ಅಸಾಂಪ್ರದಾಯಿಕ ಪ್ರದೇಶಗಳಲ್ಲೂ ಬೆಳೆ ಬೆಳೆಸುವವರು ಹೆಚ್ಚುತ್ತಿದ್ದಾರೆ.

ಬೇಸಾಯಕ್ಕೆ ಹೊಸ ಹೊಸ ಪ್ರದೇಶಗಳು, ಅದರಲ್ಲೂ ಫಲವತ್ತತೆ ಕಡಿಮೆ ಇರುವ ಪ್ರದೇಶಗಳು ಸೇರ್ಪಡೆಗೊಳ್ಳುತ್ತಿರುವ ಕಾರಣ ಅಲ್ಲಿ ನಮ್ಮ ಸಂಪ್ರದಾಯಿಕ ಎನ್ ಪಿ ಕೆ ಗೊಬ್ಬರಗಳನ್ನಷ್ಟೇ  ಪೂರೈಕೆ ಮಾಡಿದರೆ ಸಾಕಾಗುವುದಿಲ್ಲ. ಹೆಚ್ಚು ಹೆಚ್ಚು ಬೆಳೆ ತೆಗೆಯುವಾಗ ಮಣ್ಣಿನ ಪೋಷಕಾಂಶಗಳು ಅತ್ಯಧಿಕ ಪ್ರಮಾಣದಲ್ಲಿ  ಉಪಯೋಗವಾಗುವ ಕಾರಣ  ಕೆಲವು ಪೋಷಕಾಂಶಗಳು   ಕೊರತೆಯುಂಟಾಗುವುದು ಸಾಮಾನ್ಯ.

ಇಂತಹ ಫಸಲು ಪಡೆಯಲು ಸೂಕ್ಷ್ಮ ಪೋಷಕಾಂಶಗಳು ಬೇಕು.
ಇಂತಹ ಫಸಲು ಪಡೆಯಲು ಸೂಕ್ಷ್ಮ ಪೋಷಕಾಂಶಗಳು ಬೇಕು.
 •  ಅಡಿಕೆ ಒಂದೇ ಅಲ್ಲ ಎಲ್ಲಾ ಬೆಳೆಗಳ ಮೇಲೂ ಸೂಕ್ಷ್ಮ ಪೊಷಕಾಂಶಗಳು  ಅತ್ಯುತ್ತಮ ಫಲಿತಾಂಶ ಕೊಡುತ್ತವೆ.
 • ರೈತರು ಅತ್ಯಧಿಕ  ಇಳುವರಿ ಪಡೆಯುವುವಾಗ ಅದಕ್ಕೆ ಸಮನಾಗಿ ಗೊಬ್ಬರಗಳನ್ನು ಒದಗಿಸುತ್ತಲೇ ಬರಬೇಕಾಗುತ್ತದೆ.

ಬರೇ NPK ಕೊಟ್ಟರೆ ಸಾಲದು:

 • ಸಾಮಾನ್ಯವಾಗಿ  ನಾವು ಎನ್ ಪಿ ಕೆ ಗೊಬ್ಬರಗಳನ್ನು ವರ್ಷ ವರ್ಷವೂ ಬಳಕೆ ಮಾಡುತ್ತೇವೆ.
 • ಇದು ಪ್ರಧಾನ ಪೋಷಕಾಂಶವಾಗಿದ್ದು, ಇವುಗಳ  ಬಳಕೆಯಿಂದ ಹೆಚ್ಚಿನ ಸಂದರ್ಭಗಳಲ್ಲಿ  ಪೋಷಕಗಳೊಳಗೆ ಬಾಂಡಿಂಗ್ (chemical bonding ) ಏರ್ಪಡುತ್ತದೆ.
 • ಇದನ್ನು ಮಣ್ಣಿನ ಸಾವಯವ ಅಂಶಗಳು ಸರಿಪಡಿಸುತ್ತವೆಯಾದರೂ ಅವುಗಳ ಬಳಕೆ ಕಡಿಮೆಯಾದಾಗ ಸಹಜವಾಗಿ ಕೊರತೆ ಉಂಟಾಗುತ್ತದೆ.
 • ಜೊತೆಗೆ ನಾವು ಈಗ ಗರಿಷ್ಟ ಇಳುವರಿಯ  ಗುರಿಯನ್ನು ಹೊಂದಿರುತ್ತೇವೆ.
 • ಅದಕ್ಕಾಗಿ  ಎನ್ ಪಿ ಕೆ ಗೊಬ್ಬರಗಳ  ಜೊತೆಗೆ ಇತರ  ಕೆಲವು ಅಗತ್ಯ ಸೂಕ್ಷ್ಮ ಪೋಷಕಾಂಶಗಳನ್ನು  ಬಳಕೆ ಮಾಡಬೇಕಾಗುತ್ತದೆ.
 • ಇದರಿಂದ  ಇಳುವರಿಯಲ್ಲಿ ಹೆಚ್ಚಳ  ಉಂಟಾಗುತ್ತದೆ, ಮರದ ಆರೋಗ್ಯವೂ ಸುಧಾರಿಸುತ್ತದೆ.
 • ಸೂಕ್ಷ್ಮ  ಪೋಷಕಾಂಶಗಳಲ್ಲಿ ದ್ವಿತೀಯ ಪೋಷಕಾಂಶ ಗಳು ಮತ್ತು ಸೂಕ್ಷ್ಮ  ಪೋಷಕಾಂಶಗಳೆಂದು ಎರಡು ವಿಭಾಗಗಳಿವೆ.

ದ್ವಿತೀಯ ಪೋಷಕಾಂಶಗಳು:

ಸೂಕ್ಷ್ಮ ಪೋಷಕಾಂಶ ಬಳಸಿ ಫಸಲು
 • ಇತ್ತೀಚೆಗೆ ಕೆಲವು ರೈತರು ಸೂಕ್ಷ್ಮ ಪೋಷಕಾಂಶಗಳನ್ನು ಬಳಸಿ, ಇಳುವರಿಯಲ್ಲಿ ಮತ್ತು ಮರದ ಆರೋಗ್ಯದಲ್ಲಿ ಉತ್ತಮ ಪರಿಣಾಮವನ್ನು ಗಮನಿಸಿದ್ದಾರೆ.
 • ಒಂದು ವರ್ಷ  ಉತ್ತಮ ಫಸಲು, ಮತ್ತೊಂದು ವರ್ಷ  ತುಂಬಾ ಕಡಿಮೆ ಫಸಲು ಹೀಗೆಲ್ಲಾ ವೆತ್ಯಾಸಗಳುಂಟಾಗುವುದಕ್ಕೆ  ಇದೂ ಒಂದು ಕಾರಣ ಆಗಿರುತ್ತದೆ.
 • ಬೆಳೆಗಳಿಗೆ  ಪ್ರಧಾನವಾಗಿ ಅತ್ಯಧಿಕ ಪ್ರಮಾಣದಲ್ಲಿ ಬೇಕಾಗುವಂತದ್ದು ಇಂಗಾಲ, ಆಮ್ಲಜನಕ ಮತ್ತು ಜಲಜನಕ. ಇವುಗಳನ್ನು ಪ್ರಕೃತಿ  ಉಚಿತವಾಗಿ ಒದಗಿಸುತ್ತದೆ.
 • ಇವು ಹೆಚಿನ ಪ್ರಮಾಣದಲ್ಲಿ  ಲಭ್ಯವಾಗಲು ಬೇಸಾಯ ಮಾಡುವವರ ಕೆಲಸ ಸಾಕಷ್ಟು ಇದೆ.
 • ತೋಟದೊಳಗೆ ಹೆಚ್ಚು ಹೆಚ್ಚು ಸುತ್ತಾಡುತ್ತಾ ಇರುವುದರಿಂದ, ಸಮರ್ಪಕ ಬಸಿಗಾಲುವೆ ಮಾಡಿ ಬೇರುಗಳಿಗೆ  ಉಸಿರಾಟಕ್ಕೆ  ಅನುಕೂಲ ಮಾಡಿಕೊಡಬೇಕು.
 • ನೀರೊತ್ತಾಯದ ಸಮಯದಲ್ಲಿ ನೀರಾವರಿ ಮಾಡುವುದು ಅಗತ್ಯ.
 • ಈ ಕೆಲಸಗಳಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಕೃತಿಯಿಂದ  ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿ ಲಭ್ಯವಾಗುತ್ತದೆ.
 • ಉಳಿದಂತೆ ದ್ವಿತೀಯ  ಪೋಷಕಾಂಶಗಳನ್ನು  ಮತ್ತು ಸೂಕ್ಷ್ಮ  ಪೋಷಕಾಂಶಗಳನ್ನು ನಾವು  ಯಾವುದಾದರೂ ಮೂಲದಲ್ಲಿ ಒದಗಿಸಿ ಕೊಡಲೇ ಬೇಕಾಗುತ್ತದೆ.
ಸೂಕ್ಷ್ಮ ಪೋಷಕಾಂಶಗಳ ಕೊರತೆ
ಸೂಕ್ಷ್ಮ ಪೋಷಕಾಂಶಗಳ ಕೊರತೆ

ದ್ವಿತೀಯ ಪೋಷಕಾಂಶಗಳು ಕ್ಯಾಲ್ಸಿಯಂ, ಗಂಧಕ ಮತ್ತು ಮೆಗ್ನೀಶಿಯಂ. ಇವುಗಳನ್ನು  ಸುಣ್ಣ ಹಾಕುವ ಮೂಲಕ ಮತ್ತು ಗಂಧಕವನ್ನು ಮೆಗ್ನೀಶಿಯಂ ಸಲ್ಫೇಟ್ , ಸತುವಿನ ಸಲ್ಫೇಟ್  ಅಥವಾ ಕೆಲವು ಸಂಯುಕ್ತ ಗೊಬ್ಬರ ( 20:20:0:13,)  ಕೊಡುವುದರಿಂದ ಒದಗಿಸಬಹುದು. ಒಂದು ಎಕ್ರೆಗೆ ಸುಮಾರು 250-500 ಕಿಲೋ ತನಕ ಸುಣ್ಣ ಬೇಕಾಗುತ್ತದೆ. ಅದೇ ರೀತಿಯಲ್ಲಿ ಮೆಗ್ನೀಶಿಯಂ ಸಲ್ಫೇಟ್ ಎಕ್ರೆಗೆ 30-40 ಕಿಲೋ,  ಹಾಗೂ 15-20 ಕಿಲೋ ಪ್ರಮಾಣದಲ್ಲಿ ಸತುವಿನ ಸಲ್ಫೇಟ್ ಕೊಡಬೇಕು.

ಸೂಕ್ಷ್ಮ ಪೋಷಕಾಂಶಗಳು:  

 • ಹಿಂದೆ ಕೃಷಿ ಕಡಿಮೆ ಪ್ರಮಾಣದಲ್ಲಿ ಇತ್ತು. ಅದೂ ಸಹ ಫಲವತ್ತತೆ ಅಧಿಕ ಪ್ರಮಾಣದಲ್ಲಿ ಒಳಗೊಂಡ ಭೂಮಿಯಲ್ಲಿ  ಮಾತ್ರ ಕೃಷಿ ಇರುತ್ತಿತ್ತು.
 • ಆ ಸಮಯದಲ್ಲಿ ಕೃಷಿಗೆ ಬಳಸಲು ಯತೇಚ್ಚ ಪ್ರಮಾಣದಲ್ಲಿ ಸಾವಯವ ವಸ್ತುಗಳು  ಲಭ್ಯವಿತ್ತು.
 • ಪ್ರತೀಯೊಬ್ಬ ಕೃಷಿಕನೂ ಕೊಟ್ಟಿಗೆ ಗೊಬ್ಬರ, ಸೊಪ್ಪುಸದೆ, ಮುಂತಾದವುಗಳನ್ನು ಬಳಕೆ ಮಾಡುವುದರಲ್ಲಿ ರಾಜಿ ಮಾಡಿಕೊಳ್ಳುತ್ತಿರಲಿಲ್ಲ.
 • ಅವುಗಳಲ್ಲಿ  ಸಸ್ಯ ಬೆಳವಣಿಗೆಗೆ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳು ಲಭ್ಯವಾಗುತ್ತಿತ್ತು.
 • ಇತ್ತೀಚೆಗೆ ಕೃಷಿಗೆ ಒಳಪಡುತ್ತಿರುವ  ಮಣ್ಣಿನ ಪೋಷಕಾಂಶ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲದಿರುವುದು ಕಂಡು ಬರುತ್ತದೆ.
 • ಸೂಕ್ಷ್ಮ ಪೋಷಕಗಳಲ್ಲಿ ಸತು, ಕಬ್ಬಿಣ, ಬೋರಾನ್, ಮ್ಯಾಂಗನೀಸ್,ಮಾಲಿಬ್ದಿನಂ, ಮತ್ತು ತಾಮ್ರಗಳು ಮುಖ್ಯವಾದವುಗಳು.
 • ಇವು ಅತೀ ಕನಿಷ್ಟ ಪ್ರಮಾಣದಲ್ಲಿ ಬೇಕಾಗುವ ಪೋಷಕವಾಗಿದ್ದು, ಸರಳವಾಗಿ ಬಳಸುವುದಕ್ಕೆ ಚಿಲ್ಲೆಟೆಡ್ ನಮೂನೆಯ ಮಿಶ್ರಣವೇ ಸೂಕ್ತ.

ಒಂದು ಮರಕ್ಕೆ ಸತು ಸಲ್ಫೇಟ್ ರೂಪದಲ್ಲಿ ಬಳಕೆ ಮಾಡುವುದಾದರೆ 25  ಗ್ರಾಂ ಸಾಕು. ನಂತರದ ತಾಮ್ರ ಕಾಪರ್ ಸಲ್ಫೇಟ್ ಬಳಸುವ ಕಾರಣ  ಹೆಚ್ಚು ಬೇಕಾಗಿಲ್ಲ. ಮೈಕ್ರೋ ನ್ಯೂಟ್ರಿಯೆಂಟ್ ಗಳು  ಮಿಶ್ರಣ ರೂಪದಲ್ಲಿ (Zink, Molybdenum, Manganese, Boran, copper Ferrous ಒಳಗೊಂಡ)  ಲಭ್ಯ ಇರುವ ಕಾರಣ ತಿಂಗಳಿಗೆ  1  ಗ್ರಾಂ ನಂತೆ ನವೆಂಬರ್ ನಿಂದ ಮೇ  ತನಕ  ಎಲೆಗಳಿಗೆ ಪತ್ರ ಸಿಂಚನದ ಮೂಲಕ ಕೊಡುವುದು ಉತ್ತಮ.

 • ಅನುಕೂಲ ಇದ್ದವರು  ಒಂದೆರಡು ಬಾರಿ ಸಿಂಪರಣೆ ಮಾಡಿ ಉಳಿದುದನ್ನು ಹನಿ ನೀರಾವರಿಯ ಮೂಲಕ ಕೊಡಬಹುದು.
 • ಬೋರಾನ್ ( ನೀರಿನಲ್ಲಿ ಕರಗುವ ರೂಪದ) ಪ್ರತೀ ಮರಕ್ಕೆ 6-7  ಗ್ರಾಂ ಸಾಕು.
 • ಇದನ್ನು ಪ್ರತ್ಯೇಕವಾಗಿ ಸೇರಿಸಬಹುದು.
 • ಇದನ್ನು ನವೆಂಬರ್ ನಿಂದ ಮೇ ತನಕ ಪತ್ರ ಸಿಂಚನ ಅಥವಾ ಹನಿ ನೀರಾವರಿ ಮೂಲಕ ಕೊಡಬೇಕು.
 • ಯಾವುದೇ ಕಾರಣಕ್ಕೆ ಇದನ್ನು ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡಬಾರದು.

ಸೂಕ್ಷ್ಮ ಪೋಷಕಾಂಶಗಳನ್ನು ಪತ್ರ ಸಿಂಚನ ( Folier spray) ಮೂಲಕ ಕೊಡುವುದರಿಂದ ಫಲಿತಾಂಶ ಹೆಚ್ಚು.  ಈ ಶಿಫಾರಸನ್ನು ಯಾವುದೇ ಸರಕಾರೀ ಸಂಶೋಧನಾ ಕೇಂದ್ರಗಳು ಶಿಫಾರಸು  ಮಾಡುವುದಿಲ್ಲ. ಆದರೆ ಇದನ್ನು ಈ ಪ್ರಮಾಣದಲ್ಲಿ ಬಳಸಿ ಉತ್ತಮ ಫಲಿತಾಂಶ ಕಂಡವರು ಬಹಳಷ್ಟು ಜನ ರೈತರನ್ನು ಕಾಣಬಹುದು.
ದ್ವಿತೀಯ ಪೋಷಕಾಂಶಗಳು ಮತ್ತು ಸೂಕ್ಷ್ಮಪೋಷಕಾಂಶಗಳನ್ನು ಕೊಡುವುದರಿಂದ ಸಸ್ಯಕ್ಕೆ ಶಕ್ತಿ  ಬರುತ್ತದೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.  ಹಿಡಿ ಮುಂಡಿಗೆ ರೋಗ, ವಕ್ರ ಗಂಟು ರೋಗ, ಹಾಗೆಯೇ ಹರಿತ್ತು  ಕ್ಷೀಣವಾಗುವ ಸಮಸ್ಯೆಗಳನ್ನು ಇದು ಕಡಿಮೆ ಮಾಡುತ್ತದೆ. ಬಿಸಿಲಿನ ಘಾಸಿಯನ್ನು ತಾಳಿಕೊಳ್ಳುವ ಶಕ್ತಿಯೂ ದೊರೆಯುತ್ತದೆ.ಬೆಳವಣಿಗೆ ವೈಪರೀತ್ಯಗಳು ಕಡಿಮೆಯಾಗುತ್ತದೆ. ಹೆಚ್ಚಾದರೆ ಇದರಿಂದ ತೊಂದರೆಗಳೂ ಉಂಟು.
 
 
 

2 thoughts on “ಸೂಕ್ಷ್ಮ ಪೋಷಕಾಂಶಗಳಿಂದ ಬೆಳೆಗಳು ನಳನಳಿಸುತ್ತದೆ- ಯಾಕೆ?

Leave a Reply

Your email address will not be published. Required fields are marked *

error: Content is protected !!