ವಾರದಲ್ಲೇ ಚಾಲಿ ರೂ. 50ಸಾವಿರದ ಸಾಧ್ಯತೆ – ಕೆಂಪು ಇಳಿಕೆ.

ಕೆಂಪು ಚಾಲಿ ದರ

ಕಳೆದ ವಾರದಿಂದ  ಭಾರೀ ಚೇತರಿಕೆ ಕಂಡ ಚಾಲಿ + ಕೆಂಪಡಿಕೆ ಧಾರಣೆಯಲ್ಲಿ ಮತ್ತೆ ಚಾಲಿ ಸ್ಪರ್ಧೆಯಲ್ಲಿ ಮುಂದೆ ಹೋಗುವ ಸಾಧ್ಯತೆ ಕಂಡು ಬರುತ್ತಿದೆ. ಚಾಲಿ ಅಡಿಕೆ ಮಾರುಕಟ್ಟೆಗೆ ಬರುತ್ತಾ ಇಲ್ಲ. ಬೆಲೆ ಏರುತ್ತಾ ಇದೆ. ಕೆಂಪು ಇಳಿಕೆಯ ಹಾದಿಯಲ್ಲಿದೆ.  ಒಟ್ಟಿನಲ್ಲಿ  ಅಡಿಕೆ ಮಾರುಕಟ್ಟೆ ಬಿಡಿಸಲಾಗದ ಕಗ್ಗಂಟಾಗಿದೆ.

ಇಂದು ಬೆಳಿಗ್ಗೆಯಿಂದ ಅಧಿಕ ಅಡಿಕೆ ವ್ಯವಹಾರ ಆಗುವ ಕೆಲವು ಭಾಗಗಳ ಮಾರುಕಟ್ಟೆ ಸ್ಥಿತಿ ಗತಿ ವಿಚಾರಿಸಿದಾಗ ತಿಳಿದು ಬಂದ ಸಂಗತಿ, ಅಡಿಕೆ ಬರುವುದೇ ಇಲ್ಲ.  ರೈತರು ಕಾದು ನೊಡುವುದರಲ್ಲಿದ್ದಾರೆ. ಕ್ಯಾಂಪ್ಕೋ ಇಂದು ಮತ್ತೆ ಕಿಲೋ ಚಾಲಿ ಮೇಲೆ ರೂ. 10 ಹೆಚ್ಚಿಸಿ, ಕ್ವಿಂಟಾಲಿಗೆ 48,000 ಮುಟ್ಟಿಸಿದೆ. ಸುದ್ದಿ ರೈತರಿಗೆ ತಲುಪಿದ್ದೇ ತಡ, ಬಹುತೇಕ  ಬೆಳೆಗಾರರು ಮಾರಾಟ ಮುಂದೂಡಿದ್ದಾರೆ. ಇದರ ಜೊತೆಗೆ ಕೆಂಪಿನ ದರ ಏರಿಕೆಯ ರುಚಿ ಕೊಟ್ಟು ಮತ್ತೆ ಇಳಿಕೆಯಾಗಲಾರಂಭಿಸಿದೆ.

 ಅಡಿಕೆ ಇಲ್ಲ- ಬೇಡಿಕೆ ಇದೆ:

 • ಬೆಳೆಗಾರರು ಈ ವರ್ಷ ಅಷ್ಟು ಸುಲಭದಲ್ಲಿ  ಅಡಿಕೆ ಮಾರಾಟ ಮಾಡುವ ಮನೋಸ್ಥಿತಿಯಲ್ಲಿ ಇಲ್ಲ.
 • ಕಳೆದ ವರ್ಷದ ಕಹಿ ಅನುಭವ ಬಹುತೇಕ ರೈತರನ್ನು ಎಚ್ಚರದಲ್ಲಿರುವಂತೆ ಮಾಡಿದೆ.
 • ಹಣಕಾಸಿನ ತರಾತುರಿಗೆ ಮಾತ್ರವೇ ಅಡಿಕೆ ಮಾರಾಟ ಮಾಡಿ ಉಳಿದ ಅಡಿಕೆ ದಾಸ್ತಾನು ಇಟ್ಟಿದ್ದಾರೆ. 
 • ದೊಡ್ದ ದೊಡ್ದ ಬೆಳೆಗಾರರು  ಇನ್ನೂ ಅಡಿಕೆ ಬಿಟ್ಟಿಲ್ಲ ಎಂಬುದಾಗಿ ವರ್ತಕರು ಹೇಳುತ್ತಾರೆ.

ಉತ್ತರ ಭಾರತದಿಂದ  ಬೇಡಿಕೆ ಚೆನ್ನಾಗಿದೆ.  ಈಗ ಸಹಕಾರಿಗಳು ಮತ್ತು ಖಾಸಗಿ ವರ್ತಕರು ತಮ್ಮ ಸ್ಟಾಕನ್ನು  ಲಾಭಕ್ಕೆ ಮಾರಾಟ ಮಾಡುತ್ತಿದ್ದಾರೆ.  ಮಾರುಕಟ್ಟೆಗೆ ಬರುವ  ಅಡಿಕೆ ಪ್ರಮಾಣ ಮಾಮೂಲಿಗಿಂತ 75%  ಕಡಿಮೆಯಾದ ಕಾರಣ ಬೆಲೆ ಏರಿಕೆ ಮಾಡುತ್ತಾ ಬೆಳೆಗಾರರನ್ನು ಟೆಂಪ್ಟ್ ಮಾಡಲಾಗುತ್ತಿದೆ.

ಅವಕ ಇಲ್ಲದೆ ವರ್ತಕರು ದಾಸ್ತಾನಿನ ಚೀಲ ಹೊಲಿಯುವುದರಲ್ಲಿ ನಿರತರಾಗಿದ್ದಾರೆ
ಅವಕ ಇಲ್ಲದೆ ವರ್ತಕರು ದಾಸ್ತಾನಿನ ಚೀಲ ಹೊಲಿಯುವುದರಲ್ಲಿ ನಿರತರಾಗಿದ್ದಾರೆ
 • ಹೊರ ದೇಶಗಳಿಂದ ಅಡಿಕೆ ಆಮದು ಸಂಪೂರ್ಣವಾಗಿ ನಿಂತಿದೆ.
 • ಹಾಗಾಗಿ ಈ ವಾರ ಅಥವಾ ಮುಂದಿನ ವಾರದ  ಒಳಗೆ ಚಾಲಿಯ ಧಾರಣೆ ಕ್ವಿಂಟಾಲಿಗೆ 49,000 ದಿಂದ 50,000  ಆಗುವ ಸಾಧ್ಯತೆ ಇದೆ ಎಂಬುದಾಗಿ ಸುದ್ದಿಗಳು ಕೇಳಿ ಬರುತ್ತಿವೆ.
 • ಖಾಸಗಿ ವ್ಯಾಪಾರಿಗಳು ವ್ಯವಹಾರಕ್ಕೆ ಅಂಜುತ್ತಿದ್ದಾರೆ.
 • ಸಹಕಾರಿಗಳ ಸ್ಟಾಕು ಕ್ಲೀಯರ್ ಆಗುತ್ತಿರುವ ಕಾರಣ  ಹಣಕ್ಕೆ ತಾಪತ್ರಯ ಇಲ್ಲದಾಗಿದೆ.

ಕೆಂಪಡಿಕೆ ಇಳಿಕೆಯ ಸೂಚನೆ:

 • ಕೆಂಪಡಿಕೆ ದಾರಣೆಯ ಏರಿಕೆ ಕ್ಷಿಪ್ರ ಗತಿಯಲ್ಲಿ ಸಾಗಿದ್ದು, ಈಗ  ಸ್ವಲ್ಪ ಇಳಿಕೆಯಾಗಲಾರಂಭಿಸಿದೆ.
 • ವಾರದ ಹಿಂದೆ ತೀರ್ಥಹಳ್ಳಿ, ಕೊಪ್ಪ, ಶ್ರಿಂಗೇರಿ ಮಾರುಕಟೆಯಲ್ಲಿ ಮಾರುಕಟ್ಟೆಯಲ್ಲಿ ಹಳೆ ರಾಶಿಗೆ ಕ್ವಿಂಟಾಲಿಗೆ 60,000 ತಲುಪಿದ್ದ  ಧಾರಣೆ ನಿನ್ನೆ ಭಾನುವಾರದ ಭಾರೀ ಇಳಿಕೆ ಕಂಡು ಬಂದಿದೆ.
 • ಗರಿಷ್ಟ 55699 ದರಕ್ಕೆ ಖರೀದಿ ಆಗಿದೆ.  
 • ಒಂದೇ ದಿನ  ಇಲ್ಲಿ 149 ಚೀಲಗಳಷ್ಟು ರಾಶಿ ಅಡಿಕೆ ಬಂದಿದೆ.
 • ಹಾಗೆಯೇ ತೀರಾ ಕಡಿಮೆ ಪ್ರಮಾಣದಲ್ಲಿ ಮಾಡಲಾಗುವ ಸರಕು ಸಹ 56 ಚೀಲಗಳಷ್ಟು ಬಂದಿದೆ.
 • ಬರೇ ಎರಡು ಜನ ಬಿಡ್ ದಾರರು ಭಾಗವಹಿದ್ದರು ಎಂಬ ಮಾಹಿತಿ ಇದೆ.
 • ಈಗ ಅಲ್ಲಿ ಕೊಯಿಲಿನ ಸೀಸನ್ ಸಹ ಅಲ್ಲ. ಹಳೆಯ ರಾಶಿಯೇ ಜಾಸ್ತಿ. ಹೀಗಿರುವಾಗ ದರ ಇಳಿಕೆಯಾಗಿದೆ. 
 • ಇಷ್ಟು ಅಡಿಕೆ ಮಾರುಕಟ್ಟೆಗೆ ಬಂದು ಅಡಿಕೆ ಸ್ಟಾಕು ಇರುವುದು ಗೊತ್ತಾಗಿದೆ.
 • ಶುಕ್ರವಾರದಂದು ಶಿವಮೊಗ್ಗ ಚೆನ್ನಗಿರಿ ಇಲ್ಲಿ ಕ್ವಿಂಟಾಲಿಗೆ  2000 ದಷ್ಟು ಇಳಿಕೆಯಾಗಿದ್ದು, ಇಂದು ಮತ್ತೆ ಇಳಿಕೆಯ ಸಾಧ್ಯತೆ ಹೆಚ್ಚು ಇದೆ.
 • ಕೆಂಪಡಿಕೆಯ ಅವಕವನ್ನು ತಾಳಿಕೊಳ್ಳುವ ಶಕ್ತಿ ವ್ಯಾಪಾರಿಗಳಲ್ಲಿ ಇಲ್ಲ ಎಂಬುದಾಗಿ ಹೇಳಲಾಗುತ್ತಿದೆ.
 • ಈಗಾಗಲೇ ರಾಜ್ಯದ ಎಲ್ಲಾ ಕಡೆ ಮಳೆ  ಬರುತ್ತಿದ್ದು, ಅಡಿಕೆ ಕೊಯಿಲು ಮುಂದೂಡಲಾಗುತ್ತಿದೆ.
 • ಬಿಸಿಲು ಪ್ರಾರಂಭವಾದ  ತಕ್ಷಣ ದೊಡ್ಡ ಕೊಯಿಲು ಪ್ರಾರಂಭವಾಗಿ  ಬಯಲು ಸೀಮೆಯಿಂದ ಬಾರೀ ಪ್ರಮಾಣದಲ್ಲಿ ಅಡಿಕೆ ಬರಲಿದ್ದು, ಈ ವರ್ಷ ಸೀಸನ್ ನಲ್ಲಿ ಕೆಂಪಡಿಕೆಯ ಧಾರಣೆ 50,000 ಕ್ಕಿಂತ ಹೆಚ್ಚಾಗುವ ಸಾಧ್ಯತೆಯೇ ಇಲ್ಲ ಎಂಬುದಾಗಿ ಹೇಳುತ್ತಿದ್ದಾರೆ. 
 • ಮೊನ್ನೆ ಆದ ಚೇತರಿಕೆ  ದಾಸ್ತಾನು ಕ್ಲೀಯರಿಂಗ್ ಗೋಸ್ಕರವೇ ಆಗಿದೆ. 
 • ವ್ಯಾಪಾರಿಗಳಲ್ಲಿ ಸಂಗ್ರಹ ಇದ್ದ  ಬರ್ಮಾ ಅಡಿಕೆ, ಮಲಬಾರ್ ಅಡಿಕೆಗಳು ಈ ಅಲೆಯಲ್ಲಿ ಮಾರಾಟ ಆಗಿರಬೇಕು ಎನ್ನುತ್ತಾರೆ.
ತೀರ್ಥಹಳ್ಳಿ ಅಡಿಕೆ

ಚಾಲಿ ಈ ವರ್ಷ ಇಳಿಕೆ ಆಗುವುದಿಲ್ಲ. ಅದಕ್ಕೆ ಬೇಡಿಕೆ ಇದೆ.  ಚಾಲಿ ದರ ಏರಿಕೆ ಆಗುವಷ್ಟು ಸಮಯ ಬೆಳೆಗಾರರು ಅಡಿಕೆ ಕೊಡುವುದಿಲ್ಲ.  ಬೆಳೆಗಾರರ ಅಡಿಕೆ ತರಿಸಲು ಏರಿದ್ದನ್ನು ಇಳಿಸದೆಯೂ ಇರುವುದಿಲ್ಲ.ಹಾಗಾಗಿ 490-500 ರ ಗಡುವಿನ ತನಕ ದರವನ್ನು ಏರಿಸಿ ಮತ್ತೆ ಇಳಿಕೆ ಮಾಡುವ ಎಲ್ಲಾ ಸಾಧ್ಯತೆಗಳು ಇವೆ.

ಕರಿಮೆಣಸು ಏರಿಕೆಯಾಗುತ್ತಿಲ್ಲ:

ಕರಿಮೆಣಸಿನ ಆಮದು ನಿಂತು ಒಂದು ವರ್ಷ ಆಗಿದೆ. ಮಾರುಕಟ್ಟೆಯಲ್ಲಿ ಮೆಣಸು ಇಲ್ಲ. ಬೇಡಿಕೆ ಇದೆ ಎಂಬುದು ಮೊನ್ನೆ 38,000 ದಿಂದ 40,500 ಕ್ಕೆ ಏರಿಕೆಯಾದಾಗ ಗೊತ್ತಾಗಿದೆ. ಹೋಟೇಲು ಮುಂತಾದ ಕಡೆ ಬಳಕೆ ಕಡಿಮೆ ಎಂಬ ಕಾರಣ ಹೇಳಲಾಗುತ್ತಿದೆಯಾದರೂ ವಾಸ್ತವವಾಗಿ  ಮೆಣಸಿನ ವ್ಯವಹಾರವೇ ಸ್ಥಗಿತವಾದಂತಿದೆ. ಮೊನ್ನೆ 40,500 ತನಕ ತಲುಪಿದಾಗ ಯಾರೂ ಕೊಡಲಿಲ್ಲ. ಮತ್ತೆ ಅದನ್ನು 40,000 ಕ್ಕೂ ಇಳಿಸಿ, ಪುನಹ  ಅದನ್ನು 39,500 ಕ್ಕೂ ಇಳಿಸಿ ಬೆಳೆಗಾರರನ್ನು  ಇಕ್ಕಟ್ಟಿಗೆ  ಸಿಲುಕಿಸಲಾಗುತ್ತಿದೆ. ಆದರೆ ಬೆಳೆಗಾರರು ಬಗ್ಗುತ್ತಿಲ್ಲ. ಮಾರುಕಟ್ಟೆಗೆ ಮೆಣಸು ಬರುತ್ತಿಲ್ಲ. ಹೀಗೇ ಬೆಳೆಗಾರರು ಸಹಕರಿಸಿದರೆ ಈ ವರ್ಷ ಅಕ್ಟೋಬರ್ ಕೊನೆಯ ಒಳಗೆ ಮೆಣಸಿನ ಬೆಲೆ 42,500 ತನಕ ಏರಿಕೆ ಆಗಬಹುದು. ನಂತರ ಹೊಸ ಬೆಳೆ ಬರುವ ಕಾರಣ ಏರಿಕೆ ಕಷ್ಟ. ಹಾಗೆಂದು ಅಡಿಕೆಯಂತೆ ಇದರಲ್ಲೂ ಸಟ್ಟಾ ವ್ಯಾಪಾರ ಪ್ರಾರಂಭವದರೆ ದರೆ ಏರಿಕೆ ಆಗುತ್ತದೆ. ಸುಮಾರು ವರ್ಷಗಳಿಂದ  ಇಳಿಕೆಯಾಗಿಯೇ ಇದ್ದ ಕಾರಣ  ಈ ಸಾಧ್ಯತೆಯೂ ಇಲ್ಲದಿಲ್ಲ.   ವಿದೇಶಗಳಲ್ಲಿ ಮಲೇಶಿಯಾ 40% ವಿಯೆಟ್ನಾಂ 25 %  ಹಾಗೂ ಶ್ರೀಲಂಕಾ 30 % ದಷ್ಟು ಬೆಳೆ ಕಡಿಮೆ ಇದ್ದು, ಬೇಡಿಕೆ ಚೆನ್ನಾಗಿದೆ. ಈಗ ಅಡಿಕೆ ಇದ್ದರೆ ಸ್ವಲ್ಪ ಸ್ವಲ್ಪ ಮಾರಾಟ ಮಾಡಿ, ಮೆಣಸನ್ನು ಅಕ್ಟೋಬರ್ ತನಕ ಮಾರಾಟ ಮುಂದೂಡಬಹುದು.

ಕರಿಮೆಣಸು

ರಬ್ಬರ್ ಧಾರಣೆ:

ರಬ್ಬರ್ ಧಾರಣೆ ಏರಿಕೆಯೂ ಆಗುತ್ತಿಲ್ಲ ಇಳಿಕೆಯೂ ಆಗುತ್ತಿಲ್ಲ. ಮುಂದಿನ ವರ್ಷದಿಂದ ರಬ್ಬರಿಗೆ ಉತ್ತಮ ಬೆಲೆ ಬರುವ ಸಾಧ್ಯತೆ ಇದೆ. ಈ ವರ್ಷ ಹೆಚ್ಚಿನವರು ಟ್ಯಾಪಿಂಗ್ ಮಾಡಿಲ್ಲ. ಕೆಲವರು ರಬ್ಬರ್ ಕಡಿದು ಅಡಿಕೆ ಹಾಕಿ ಜಾಗ ಮಾರಾಟ ಮಾಡಿದ್ದಾರೆ. ಸಹಜವಾಗಿ ರಬ್ಬರು ಉತ್ಪಾದನೆ ಕಡಿಮೆಯಾಗಿ ಮುಂದಿನ ವರ್ಷ ಚಳಿಗಾಲದಿಂದ ರಬ್ಬರಿನ ಬೆಲೆ 190 ದಾಟಬಹುದು ಎಂಬುದಾಗಿ ಹೇಳುತ್ತಿದ್ದಾರೆ.

ಬೆಳೆಗಾರರು ಏನು ಮಾಡಬೇಕು:

 ಚಾಲಿ ಅಡಿಕೆ ಬೆಳೆಗಾರರು ಹೆಚ್ಚು ಹೆಚ್ಚು ದರಕ್ಕೆ ಕಾಯದೆ ಈಗಿನ ದರಕ್ಕೆ ಸ್ವಲ್ಪ ಸ್ವಲ್ಪ ಮಾರಾಟ ಮಾಡುವುದು ಉತ್ತಮ. ಬೆಳೆಗಾರರು ಯಾವಾಗಲೂ ಸರಾಸರಿ ಉತ್ತಮ ಬೆಲೆಯನ್ನೇ ಪಡೆಯುವ ಪುಣ್ಯವಂತರಾದ ಕಾರಣ ಚಾಲಿ ಹಾಗೂ ಕೆಂಪಡಿಕೆ ಬೆಳೆಗಾರರು ದಾಸ್ತಾನು ಇಡದೆ ಸ್ವಲ್ಪ ಸ್ವಲ್ಪ ಮಾರಾಟ ಮಾಡಿ. ಇದು ಮಾರುಕಟ್ಟೆಯಲ್ಲಿ ಕೊಳ್ಳುವವರಿಗೆ ಹೊರೆಯಾಗದಿರಲಿ. ಏರಿಕೆ ಇಳಿಕೆಗೆ ಸರಿಯಾದ ಕಾರಣವನ್ನು ಹುಡುಕುವುದು ಅಷ್ಟು ಸರಳ ವಿಷಯ ಅಲ್ಲವಾದ ಕಾರಣ ಬೆಳೆಗಾರರು ಬೆಲೆಯೊಂದಿಗೆ ಸ್ವಲ್ಪ ರಾಜಿ ಮಾಡಿಕೊಳ್ಳುವುದು ಅನಿವಾರ್ಯ. ಯಾವುದೇ ಕಾರಣಕ್ಕೆ ಹತಾಶೆಯ ಮಾರಾಟ ಬೇಡ.

error: Content is protected !!