ನಮಗೆಲ್ಲಾ ಗೊತ್ತಿರುವ ಕರಿಮೆಣಸಿನ ಸಸ್ಯೋತ್ಪಾದನೆಗಿಂತ ಭಿನ್ನವಾದ ಸಸ್ಯಾಭಿವೃದ್ದಿ ವಿಧಾನ ಬೀಜದಿಂದ ಸಸ್ಯೋತ್ಪಾದನೆ ಮಾಡುವುದು.
ಬಳ್ಳಿ ತುಂಡುಗಳಿಂದ ಸಸ್ಯೋತ್ಪಾದನೆ ಮಾಡುವುದು ತುಂಬಾ ಸುಲಭ. ಇದನ್ನು ಪಾಲಿಥೀನ್ ಚೀಲಗಳಲ್ಲಿ ಊರಿ ಬೇರು ಬರಿಸಿ ಸಸಿಮಾಡಿಯೂ ನೆಡಬಹುದು. ನೇರವಾಗಿ ಬಳ್ಳಿ ತುಂಡುಗಳನ್ನು ಬೇಕಾದಲ್ಲಿ ನೆಟ್ಟೂ ಸಹ ಸಸ್ಯಾಭಿವೃದ್ದಿ ಮಾಡಬಹುದು. ಇದರಲ್ಲಿ ಎಷ್ಟು ಅನುಕೂಲಗಳು ಇವೆಯೋ ಅಷ್ಟೇ ಅನನುಕೂಲಗಳೂ ಇವೆ. ಮೆಣಸಿನ ಬೇಸಾಯದಲ್ಲಿ ಅತೀ ದೊಡ್ಡ ಸಮಸ್ಯೆ ಎಂದರೆ ಸೊರಗು ರೋಗ. ಮತ್ತು ಜಂತು ಹುಳ. ಇವೆರಡೂ ಸಸ್ಯ ಸಾಮಾಗ್ರಿಯ ಮೂಲಕ ಪ್ರಸಾರವಾಗುತ್ತದೆ. ವಾಣಿಜ್ಯಿಕ ಬೇಸಾಯ ಹೆಚ್ಚಾದಷ್ಟೂ ರೋಗ ಸಾದ್ಯತೆ ಜಂತು ಹುಳದ ಪ್ರಸಾರ ಸಹಜವಾಗಿ ಹೆಚ್ಚು. ಈ ಕಾರಣಕ್ಕೆ ಮೂಲದಲ್ಲಿ ರೋಗ ಇಲ್ಲದಂತೆ ಸಸ್ಯೋತ್ಪಾದನೆ ಮಾಡಲು ಇರುವ ವಿಧಾನ ಬೀಜದಿಂದ ಸಸ್ಯೋತ್ಪಾದನೆ.
ಬೀಜದ ಸಸಿ ಹೇಗೆ:
- ಕರಿಮೆಣಸಿನ ಬಳ್ಳಿಯಲ್ಲಿ ಕರೆಗಳು ಹಣ್ಣಾದಾಗ ಅದನ್ನು ಸೂಕ್ತ ಮಾಧ್ಯಮದಲ್ಲಿ ಬಿತ್ತನೆ ಮಾಡಿದರೆ ಅದು ಮೊಳಕೆ ಬಂದು ಸಸಿಯಾಗುತ್ತದೆ.
- ಸಾಮಾನ್ಯವಾಗಿ ಮೆಣಸಿನ ಬಳ್ಳಿಯಲ್ಲಿ ಕಾಳು ಹಣ್ಣಾದಾಗ ಅದನ್ನು ಪಕ್ಷಿಗಳು ತಿನ್ನುತ್ತವೆ.
- ತಿಂದು ಸಮೀಪದಲ್ಲೇ ಇರುವ ನೆರಳಿನ ಮರದಲ್ಲಿ ಕುಳಿತು ಹಿಕ್ಕೆಯಾಗಿ ಬೀಜ ಹೊರ ಹಾಕುತ್ತವೆ.
- ತೇವಾಂಶ ಇರುವ ಸ್ಪ್ರಿಂಕ್ಲರ್ ಪಾಯಿಂಟ್ ನ ಬಳಿಯಲ್ಲಿಯೂ ಹೊರ ಸಿಪ್ಪೆಯನ್ನು ಜೀರ್ಣಿಸಿ ಬೀಜವನ್ನು ಹೊರ ಹಾಕುತ್ತವೆ.
- ಈ ಬೀಜಗಳು ಸೂಕ್ತ ತೇವಾಂಶ ದೊರೆತಾಗ ಅಲ್ಲೇ ಮೊಳಕೆ ಒಡೆಯುತ್ತವೆ. ಅಲ್ಲಿ ಸಸಿಯೂ ಆಗುತ್ತದೆ.
- ಇದು ಬೀಜದಿಂದಾದ ಸಸಿಯಾಗಿರುತ್ತದೆ.
- ಇದೇ ಕಾಳುಗಳನ್ನು ನಾವು ಕಾಂಪೋಸ್ಟು ಮಾದ್ಯಮದಲ್ಲಿ ಅಥವಾ ಸುಟ್ಟ ಭತ್ತದ ಹೊಟ್ಟಿನಲ್ಲಿ ಮೊಳಕೆ ಬರಲು ಹಾಕಿ ಸಾಕಷ್ಟು ತೇವಾಂಶ ಒದಗಿಸುತ್ತಿದ್ದರೆ ಅಲ್ಲಿಯೂ ಸಸಿಯಾಗುತ್ತದೆ.
- ಈ ಸಮಯದಲ್ಲಿ ಕರಿಮೆಣಸು ಬೆಳೆಗಾರರ ತೋಟದಲ್ಲಿ ಬೇರೆ ಬೇರೆ ಮರದ ಬುಡ, ನೀರು ಇರುವ ಜಾಗದಲ್ಲಿ ಸಾಕಷ್ಟು ಸಸಿ ಹುಟ್ಟಿರುವುದು ಕಂಡು ಬರುತ್ತದೆ.
- ಇದೆಲ್ಲವೂ ಪಕ್ಷಿಗಳು ತಿಂದು ಹಾಕಿದ ಬೀಜದಿಂದ ಹುಟ್ಟಿದ ಸಸಿಯಾಗಿರುತ್ತದೆ.
ಸಸಿ ಬೆಳೆಸುವ ವಿಧಾನ:
- ಒಂದು ಮೆಣಸಿನ ಕರೆಯಲ್ಲಿ ಕನಿಷ್ಟ 100 ರಷ್ಟು ಬೀಜಗಳು (berries) ಇರುತ್ತವೆ.
- ಈ ಒಂದೊಂದು ಬಳ್ಳಿಯಲ್ಲಿ ಕೊಯಿಲು ಮಾಡಲು ಬಾಕಿಯಾದ ಕರೆಗಳಿದ್ದರೆ ಅದು ಹಣ್ಣಾಗಿ ಉದುರಿ ನೂರಾರು ಸಸಿ ಆಗುತ್ತದೆ.
- ಹಾಗೆಂದು ಈ ಎಲ್ಲಾ ಸಸಿ ಬದುಕಿ ಉಳಿಯುವುದಿಲ್ಲ.
- ಅದು ಶೇ. 5 ಮಾತ್ರ. ಈಗ ಎಲ್ಲಾ ಕಡೆ ಮೊಳಕೆ ಒಡೆದು ಎರಡು ಎಲೆ ಬಂದ ಸಸಿಗಳು ಇರುತ್ತವೆ.
- ಇನ್ನು ಹೆಚ್ಚು ಮಳೆ ಬಂದಂತೆ ಅದು ಸತ್ತು ಹೋಗುತ್ತದೆ.
- ಮರದ ಕೆಳಭಾಗದಲ್ಲಿ ಹುಟ್ಟಿ ಮಳೆ ಬರುವ ಸಮಯಕ್ಕೆ 2-4 ಎಲೆಗಳನ್ನಷ್ಟೇ ಹೊಂದಿರುತ್ತವೆ.
- ಮಳೆಯ ಹನಿಗಳ ಹೊಡೆತ ಮತ್ತು ಎಲೆಗಳಿಗೆ ಮಣ್ಣು ಸಿಡಿತದ ಫಲವಾಗಿ ಈ ಸಸಿಗಳಲ್ಲಿ ಬಹುತೇಕ ಸಸಿಗಳು ಸತ್ತು ಹೋಗುತ್ತವೆ.
- ಹಾಗಾಗಿ ನೆಲದಲ್ಲಿ ಹುಟ್ಟಿದ ಸಸಿಗಳು ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಆದಾಗ್ಯೂ ಕೆಲವು ಸಸಿಗಳು ಬದುಕಿ ಉಳಿಯುತ್ತವೆ.
ಬೀಜದ ಸಸಿ ಮಾಡುವವರು ಈಗ ಅಲ್ಲಲ್ಲಿ ಹುಟ್ಟಿರುವ ಸಸಿಗಳನ್ನು ಪಾಲಿ ಹೌಸ್ ಅಥವಾ ಪಾಲಿಥೀನ್ ಹಾಳೆ ಹೊದಿಸಿದ ಮನೆಯ ಒಳಗೆ ಇಟ್ಟು ರಕ್ಷಿಸಿದರೆ, ಅದರ ಬೆಳವಣಿಗೆಗೆ ಯಾವ ತೊಂದರೆಯೂ ಉಂಟಾಗುವುದಿಲ್ಲ. ಪಾಲಿಥೀನ್ ಚೀಲಕ್ಕೆ ತಕ್ಕುದಾದ ಪ್ಲಾಸ್ಟಿಕ್ ಕೊಟ್ಟೆಯನ್ನು ಹಾಕಿದರೂ ಅದನ್ನು ಬದುಕಿಸಬಹುದು. ಗಿಡಕ್ಕೆ 6 ಕ್ಕಿಂತ ಹೆಚ್ಚಿನ ಎಲೆಗಳು ಬಂದಾಗ ತೆಗೆದು ಪಾಲಿಥೀನ್ ಚೀಲಕ್ಕೆ ಹಾಕಿ ನೆಟ್ಟರೆ ಅದು ಬದುಕುತ್ತದೆ. ಮಳೆಗಾಲದಲ್ಲಿ ಮಣ್ಣು ಸಿಡಿತ ಇರುವ ಕಾರಣ ಬದುಕುವುದಕ್ಕೆ ಸ್ವಲ್ಪ ಸಮಸ್ಯೆಯಾಗಬಹುದಾದರೂ ಬೇಸಿಗೆಯ ಕಾಲದಲ್ಲಿ ಸಣ್ಣ ಸಸಿಯೂ ಚೆನ್ನಾಗಿ ಬದುಕಿಕೊಳ್ಳುತ್ತದೆ.
ವಾಣಿಜ್ಯ ಸಸೋತ್ಪಾದನೆಗೂ ಸೂಕ್ತ ;
- ಬಳ್ಳಿ ತುಂಡುಗಳನ್ನು ಒಟ್ಟು ಸೇರಿಸುವುದು, ಬಳ್ಳಿ ತುಂಡುಗಳಲ್ಲಿ ರೋಗ ಸೋಂಕು ಇದೆಯೇ ಇಲ್ಲವೇ ಎಂದು ತಿಳಿಯುವುದು ಕಷ್ಟ.
- ಇಂತಹ ಪರಿಸ್ಥಿತಿಯಲ್ಲಿ ಬೀಜದ ಸಸಿ ಮಾಡುವುದು ಆಸಕ್ತರಿಗೆ ಸೂಕ್ತ.
- ಇದಕ್ಕೆ ಬೇರು ಚೆನ್ನಾಗಿ ಬಂದಿರುತ್ತದೆ.
- ಬಳ್ಳಿ ಮೂಲಕ ರೋಗ, ಹಾಗೂ ಜಂತು ಹುಳ (Nematode) ಇದಕ್ಕೆ ಪ್ರಸಾರ ಆಗುವುದಿಲ್ಲ.
- ಹಾಗೆಂದು ನೆಟ್ಟ ನಂತರ ಮಣ್ಣು ಜನ್ಯವಾಗಿ ರೋಗ ಬರಲೂ ಬಹುದು.
- ಈಗ ಕೆಲವು ನರ್ಸರಿಗಳಲ್ಲಿ ಈ ರೀತಿಯೇ ಲಕ್ಷಾಂತರ ಸಂಖ್ಯೆಯಲ್ಲಿ ಸಸ್ಯೋತ್ಪಾದನೆ ಮಾಡಲಾಗುತ್ತದೆ.
- ರೈತರು ತಮ್ಮ ಸ್ವ ಬಳಕೆಗೆ ಈ ರೀತಿಯಲ್ಲಿ ಸಸ್ಯೋತ್ಪಾದನೆ ಮಾಡಿಕೊಳ್ಳುವುದಕ್ಕೆ ಸುಲಭ.
ಕೆಲವು ನ್ಯೂನತೆಗಳು;
- ಈ ರೀತಿಯ ಸಸ್ಯೋತ್ಪಾದನೆಯಲ್ಲಿ 30% ದಷ್ಟು ತಳಿ ಮಿಶ್ರಣ ( Crossing) ಸಾಧ್ಯತೆ ಇದೆ.
- ತಳಿ ಸಂಕರಣ ಆಗಲೂ ಬಹುದು. ಹಾಗೆಂದು ನಿಮ್ಮಲ್ಲಿರುವ ತಳಿಗಳ ಮೇಲೆ ಅವಲಂಭಿಸಿ ಬದಲಾವಣೆ ಆಗುತ್ತದೆ.
- ಗಿಡದ ಚಿಗುರನ್ನು ನೋಡಿ ತಳಿ ಯಾವುದು ಎಂದು ನಿರ್ಧರಿಸಬಹುದು.
- ಈ ರೀತಿಯ ಸಸಿಗಳಲ್ಲಿ ತಾಯಿ ಬೇರು ಇರುತ್ತದೆ.
- ಆದ ಕಾರಣ ಇದಕ್ಕೆ ಬಳ್ಳಿ ತುಂಡುಗಳ ಸಸಿಗಿಂತ ಹೆಚ್ಚಿನ ಶಕ್ತಿ ಇರುತ್ತದೆ.
- ಆದರೆ ಇದು ಇಳುವರಿ ಪ್ರಾರಂಭವಾಗಲು 3 ವರ್ಷ ಬೇಕಾಗುತ್ತದೆ.
- ಮರಕ್ಕೆ ಹಿಡಿದುಕೊಳ್ಳುವ ಶಕ್ತಿ ಸಲ್ಪ ಕಡಿಮೆ ಇದೆ ಎಂಬುದಾಗಿ ಹೇಳುತ್ತಾರೆ.
- ಆದರೆ ಚಿಗುರು ಬೆಳೆಯುತ್ತಿದ್ದಂತೆ ಕಟ್ಟುವಾಗ ತುದಿ ಚಿವುಟಿದಾಗ ಬರುವ ಹೊಸ ಚಿಗುರು ಅಂಟಿಕೊಳ್ಳುವ ಗುಣ ಪಡೆಯುತ್ತದೆ.
ಗೊತ್ತಿಲ್ಲದ ಮೂಲದಿಂದ ಸಸಿ ತಂದು ಬೆಳೆಸುವ ಬದಲಿಗೆ ಇದು ಉತ್ತಮ ವಿಧಾನ. ಇದನ್ನು ಪ್ರತೀ ರೈತರೂ ಮಾಡಿಕೊಂಡರೆ ಅವರವರಿಗೆ ಬೇಕಾದಷ್ಟು ರೋಗ ರಹಿತ ಸಸಿಗಳನ್ನು ಪಡೆಯಬಹುದು. ಈ ವಿಷಯದಲ್ಲಿ ಸಂಶೋಧನೆಗಳು ಆಗಿವೆ. ಈ ವಿಧಾನದಲ್ಲಿ ಅಂತಹ ತೊಂದರೆ ಇಲ್ಲ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಆದರೆ ಅದನ್ನು ಮುಂದುವರಿಸಿಕೊಂಡು ಹೋಗದ ಕಾರಣ ಹೆಚ್ಚು ಪ್ರಚಾರದಲ್ಲಿಲ್ಲ. ಕೇರಳ ಕರ್ನಾಟಕದ ಬಹಳಶ್ಟು ನರ್ಸರಿಗಳು ಈ ವಿಧಾನದಲ್ಲಿ ಲಕ್ಷಾಂತರ ಸಂಖ್ಯೆಯ ಸಸಿ ತಯಾರಿಸಿ ಮಾರಾಟ ಮಾಡುವುದು ಇದೆ. ಅದನ್ನೇ ನಾವು ತಂದು ಬೆಳೆಸಿರಲೂ ಬಹುದು.