ಬೀಜೋಪಚಾರದಿಂದ ಆರೋಗ್ಯವಂತ ಬೆಳೆ ಸಾಧ್ಯ.

ginger seed treatment

ಬೀಜಗಳ ಮೂಲಕ ಬೇರೆ ಬೇರೆ ರೋಗ ಬರುತ್ತದೆ.  ಕೀಟಗಳಿಂದ ದಾಸ್ತಾನು ಇಟ್ಟ ಬೀಜ ಹಾಳಾಗುತ್ತದೆ. ಇದನ್ನು  ತಡೆಯಲು  ಶಿಲೀಂದ್ರನಾಶಕ ಮತ್ತು ಕೀಟನಾಶಕಗಳಿಂದ ಉಪಚಾರ ಮಾಡುವುದಕ್ಕೆ ಬೀಜೋಪಚಾರ (seed treatment) ಎನ್ನುತ್ತಾರೆ.

ಬಹುಪಾಲು ಬೆಳೆಗಳ ಸಂತಾನಾಭಿವೃದ್ದಿ ಬೀಜಳಿಂದಲೇ ಆಗುವುದು. ಲಾಭದಾಯಕ ಇಳುವರಿಗೆ ಆರೋಗ್ಯಕರ ಬಿತ್ತನೆ ಬೀಜ ಅತಿ ಪ್ರಮುಖವಾದ ಸಂಪನ್ಮೂಲವಾಗಿದೆ. ಕೃಷಿಯ ಯಶಸ್ವಿಗೆ ಹಾಗೂ ಅಧಿಕ ಇಳುವರಿಗೆ ಉತ್ತಮ ಗುಣಮಟ್ಟದ ಬೀಜದ ಕೊಡುಗೆ ಪ್ರಮುಖವಾಗಿದೆ.    ಪುರಾತನ ಕಾಲದಿಂದಲೂ ಉತ್ತಮ ಬೀಜದ ಮಹತ್ವವನ್ನು ಅರಿತುಕೊಂಡು ನಮ್ಮ ರೈತರು ದೃಢಕಾಯ ಹಾಗೂ ರೋಗಮುಕ್ತವಾದ ಬೆಳೆಯಿಂದ ಬೀಜಗಳನ್ನು ಸಂಗ್ರಹಿಸಿ ಮುಂದಿನ ಬಿತ್ತನೆಗಾಗಿ ಬಳಸುತ್ತಿದ್ದರು.

treated paddy

ಬೀಜದಲ್ಲಿ ರೋಗ ಪ್ರಸಾರವಾಗುತ್ತದೆ:    

 • ಬೀಜದಿಂದ ಹರಡುವ ರೋಗದ ಜೀವಾಣುಗಳು ಬಿತ್ತನೆ ಬೀಜಗಳ ಗುಣಮಟ್ಟವನ್ನು ಹಾಗೂ ಇಳುವರಿಯನ್ನು ಕಡಿಮೆ ಮಾಡುತ್ತವೆ.
 • ಅದು ಅಲ್ಲದೇ ಮೊಳಕೆ ಶಕ್ತಿ ಹಾಗೂ ಬೀಜ ಬಲ ಸತ್ವವನ್ನು ಕಳೆದುಕೊಳ್ಳುತ್ತವೆ.
 • ಬೀಜವನ್ನು ರೋಗಯುಕ್ತ ಬೀಜದಿಂದ ಬೆಳೆದ ಬೇಳೆಕಾಳುಗಳು ಕ್ಷೀಣಗೊಂಡು, ಮಂದವಾದ ಬಣ್ಣ ಹೊಂದಿ, ಮಾರುಕಟ್ಟೆಯಲ್ಲಿ ಅದರ ಬೆಲೆ ಕಡಿಮೆಯಾಗುತ್ತದೆ.
 • ಬೀಜಗಳ ಗಾತ್ರ, ತೂಕ ಹಾಗೂ ಸಾಂದ್ರತೆ ಕಡಿಮೆಯಾಗುತ್ತದೆ.
 • ಇದರಿಂದಾಗಿ ಸದೃಢ ಹಾಗೂ ಆರೋಗ್ಯಕರ ಸಸಿಗಳನ್ನು ಬೆಳೆಯಲಾಗುವುದಿಲ್ಲ. ಬಿತ್ತನೆಗಾಗಿ ಬೀಜವನ್ನು ಸಂಗ್ರಹಿಸಿದಾಗ ಕಾಡುವ ಪ್ರಮುಖ ರೋಗಗಳೆಂದರೆ, ಜೋಳದ ಬೂಜು ರೋಗ, ಭತ್ತದ ಬೆಂಕಿ ರೋಗ, ಸಜ್ಜೆಯ ಬೂಜು ರೋಗ, ಶೇಂಗಾದ ಅಸ್ರ್ಟಜಲ್ಲಸ್ ಕೊಳೆ ರೋಗ, ಸೂರ್ಯಕಾಂತಿಯ ಎಲೆಮಚ್ಚೆ ರೋಗ, ಕಲ್ಲಿದ್ದಲು ಕೊಳೆ ರೋಗ, ತೊಗರಿಯ ಸಿಡಿ ರೋಗ, ಮೆಣಸಿನಕಾಯಿಯ ಅಂಗಮಾರಿ ರೋಗಗಳು. ಬೀಜೋಪಚಾರದಲ್ಲಿ ಜೈವಿಕ ಜೋಪಚಾರ , ರಾಸಾಯನಿಕ ಬೀಜೋಪಚಾರ ಮತ್ತು ಇತರೆ ಸಾಂಪ್ರದಾಯಿಕ ಬೀಜೋಪಚಾರಗಳು ಇವೆ.

ಜೈವಿಕ ಬೀಜೋಪಚಾರ :

seed treatment items
 • ಸಜೀವ ಸೂಕ್ಷ್ಮಾಣುಜೀವಿಗಳನ್ನು ಬಳಸಿ ರೋಗಾಣುಗಳನ್ನು ಹತೋಟಿ ಮಾಡಲು ಸಾಧ್ಯ.
 • ಟ್ರೈಕೋಡರ್ಮಾ, ಸೂಡೋಮೊನಾಸ್, ಆರಿಯಾಫ್ಯಾಸಿಯನ್ಸ್ ಮುಂತಾದವುಗಳಿಂದ ಬೀಜೋಪಚಾರ ಮಾಡುವುದರಿಂದ ರೋಗಾಣುಗಳನ್ನು ನಿಗ್ರಹಗೊಂಡು ಬೀಜ ಮೊಳಕೆ ಸುಲಲಿತಗೊಳ್ಳುವುದು.
 • ಬೀಜೋಪಚಾರ ಎಂದರೆ ಕೇವಲ ರಾಸಾಯನಿಕಗಳಿಂದಷ್ಟೇ ಅಲ್ಲ ಮತ್ತು ರೋಗ – ಕೀಟಗಳ ಬಾಧೆ ತಡೆಯಲು ಮಾತ್ರವಲ್ಲ.
 • ಅದು ದ್ವಿದಳ ಧಾನ್ಯಗಳಲ್ಲಿ ಇಳುವರಿ ಹೆಚ್ಚಿಸಲು ರೈಜೋಬಿಯಂ ಅಥವಾ ಸುಪ್ತಾವಸ್ಥೆ ಮುರಿಯಲು ಇಥ್ರೇಲಿನಿಂದ ಉಪಚಾರ ಅಥವಾ ಬರ ತಡೆದುಕೊಳ್ಳಲು ಕ್ಯಾಲ್ಸಿಯಂ ಕ್ಲೋರೈಡ್, ಬೆಳೆಗೆ ರಂಜಕ ಒದಗಿಸಲು ರಂಜಕ ಕರಗಿಸುವ ಬ್ಯಾಕ್ಟೀರಿಯಾ.
 • ಹೀಗೆ ಇನ್ನೂ ಅನೇಕ ಉಪಚಾರಗಳಿವೆ, ಕೆಲವು ಜೈವಿಕ ಉಪಚಾರಗಳು ಇಂತಿವೆ.
seed born disease
ಬೀಜದಿಂದ ಬರುವ ರೋಗ
 • ದ್ವಿದಳ ಧಾನ್ಯಗಳಾದ ಶೇಂಗಾ, ತೊಗರಿ, ಕಡಲೆ ಮುಂತಾದವುಗಳಿಗೆ ರೈಜೋಬಿಯಂ ಅಣುಜೀವಿ ಗೊಬ್ಬರದಿಂದ ಉಪಚರಿಸುವುದರಿಂದ ವಾತಾವರಣದಲ್ಲಿರುವ ಸಾರಜಕನವನ್ನು ಬೆಳೆಗಳಿಗೆ ದೊರೆಯುತ್ತದೆ.
 • ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದು ಮತ್ತು ಮಣ್ಣಿನಲ್ಲಿರುವ ರಂಜಕವನ್ನು ಬೆಳೆಗೆ ದೊರಕುವಂತೆ ಮಾಡುತ್ತದೆ.
 • ಮೊದಲು 100 ಗ್ರಾಂ ಬೆಲ್ಲ – ಸಕ್ಕರೆ ಪಾಕ ತಯಾರಿಸಿ, ಆರಿದ ನಂತರ ಅದಕ್ಕೆ 160 ಗ್ರಾಂ. ರೈಜೋಬಿಯಂ ಅಣುಜೀವಿ ಗೊಬ್ಬರವನ್ನು ಸೇರಿಸಿ ನಂತರ ಒಂದು ಎಕರೆಗೆ ಬೇಕಾಗುವಷ್ಟು ಬೀಜಕ್ಕೆ ಕೈಯಿಂದ ಕುಸುತ್ತಾ ಲೇಪನ ಮಾಡಬೇಕು.
 • ಇದರಿಂದ ಬೇರಿನಲ್ಲಿ ಸಾರಜನಕ ಹೀರುವ ಗಂಟುಗಳ ಸಂಖ್ಯೆ ಹೆಚ್ಚಾಗಿ ಅಣುಜೀವಿಯು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿಕೊಂಡು ಬೆಳೆಗೆ ಒದಗಿಸುವುದಲ್ಲದೇ ಇಳುವರಿಯನ್ನು ಹೆಚ್ಚಿಸುವುದು.
treated groundnut seed
 • ಯಾವುದೇ ಬೆಳೆಗೆ ಪ್ರತಿ ಕಿ.ಗ್ರಾಂ. ಬೀಜಕ್ಕೆ 4 ಗ್ರಾಂ. ಟ್ರೈಕೋಡರ್ಮಾ ಜೈವಿಕ ಶಿಲೀಂದ್ರನಾಶಕದಿಂದ ಉಪಚರಿಸುವುದರಿಂದ ಸೊರಗು ರೋಗ ಹಾಗೂ ಬೇರು ಕೊಳೆ ರೋಗಗಳನ್ನು ನಿಯಂತ್ರಿಸಬಹುದು.
 • ಕಡಲೆ, ಹೆಸರ, ಉದ್ದು, ಅಲಸಂದಿ, ಸೋಯಾ ಅವರೆ, ತೊಗರಿ ಮತ್ತು ಶೇಂಗಾ ಬೆಳೆಗಳಿಗೆ 200 ಗ್ರಾಂ. ರೈಜೋಬಿಯಂ ಎಂಬ ಅಣುಜೀವಿ ಗೊಬ್ಬರದಿಂದ ಪ್ರತಿ ಎಕರೆಗೆ ಬೇಕಾಗುವ ಬೀಜವನ್ನು ಲೇಪನ ಮಾಡಬೇಕು.
 • ಈ ಅಣುಜೀವಿಯು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿಕೊಂಡು ಬೆಳೆಯ ಬೆಳವಣಿಗೆಗೆ ದೊರಕುವಂತೆ ಮಾಡುತ್ತದೆ.
 • ಹತ್ತಿ ಬೆಳೆಗೆ ಟ್ರೈಕೋಡರ್ಮಾ ಎಂಬ ಜೈವಿಕ ಶಿಲೀಂದ್ರನಾಶಕವನ್ನು ಪ್ರತಿ ಕಿ.ಗ್ರಾಂ. ಬೀಜಕ್ಕೆ 4 ಗ್ರಾಂ. ನಂತೆ ಉಪಚರಿಸುವುದರಿಂದ ಸೊರಗು ಹಾಗೂ ಬೇರು ಕೊಳೆ ರೋಗವನ್ನು ನಿಯಂತ್ರಿಸಬಹುದು.

ರಾಸಾಯನಿಕ ಬೀಜೋಪಚಾರ :

 • ಈ ವಿಧಾನದಲ್ಲಿ ವಿವಿಧ ಬಗೆಯ ರಾಸಾಯನಿಕಗಳನ್ನು ಬಳಸಿ ಬೀಜಗಳಿಗೆ ಉಪಚರಿಸಬಹುದು.
 • ಇದರಿಂದ ಬೀಜದಿಂದ ಹರಡುವ ಶಿಲೀಂದ್ರ ರೋಗಗಳು, ದುಂಡಾಣು ರೋಗಗಳು, ಜಂತು ರೋಗಗಳು, ಬೀಜ ಜನ್ಯ ರೋಗಗಳು ಮತ್ತು ಮಣ್ಣಿನಿಂದ ಹರಡುವ ರೋಗಗಳನ್ನು ಸುಲಭವಾಗಿ ತಡೆಯಬಹುದು.
 • ಕೆಲವು ರಾಸಾಯನಿಕ ಹಾಗೂ ಬೀಜೋಪಚಾರಗಳು ಇಂತಿವೆ.
 • ಸೂರ್ಯಕಾಂತಿ ಬೀಜವನ್ನು ಬಿತ್ತುವ ಮೊದಲು 10 – 12 ಗಂಟೆ ನೀರಿನಲ್ಲಿ ನೆನೆಸಿ ಒಣಗಿಸಿರಿ. ನಂತರ ಮೆಟಲಾಕ್ಸಿಲ್ ಶಿಲೀಂದ್ರನಾಶಕ (4 ಗ್ರಾಂ. ಪ್ರತಿ ಕೆ.ಜಿ. ಬೀಜ) ದಿಂದ ಉಪಚರಿಸದಲ್ಲಿ ಕೇದಿಗೆ ರೋಗವನ್ನು ನಿಯಂತ್ರಿಸಬಹುದು.
 • ಜೋಳದ ಕಾಡಿಗೆ ರೋಗ ನಿಯಂತ್ರಿಸಲು ಪ್ರತಿ ಕಿ.ಗ್ರಾಂ ಬೀಜಕ್ಕೆ 2 ಗ್ರಾಂ. ಗಂಧಕದ ಪುಡಿ ಅಥವಾ ಥೈರಾಮ್‍ನಿಂದ ಉಪಚರಿಸಬೇಕು.
 • ಜೋಳದ ಉತ್ತಮ ಮೊಳಕೆ ಪ್ರಮಾಣ, ಸಸಿ ಬೆಳವಣಿಗೆ ಮತ್ತು ಸುಳಿ ನೊಣದ ಬಾಧೆ ನಿಯಂತ್ರಿಸಲು 30 ಗ್ರಾಂ. ಸುಣ್ಣವನ್ನು ಒಂದೂವರೆ ಲೀಟರ್ ನೀರಿನಲ್ಲಿ ಕರಗಿಸಿ ಇದಕ್ಕೆ 2 ಮಿ.ಲೀ. ಕ್ಲೋರೊಪೈರಿಫಾಸ್ 20 ಇ. ಸಿ ಬೆರೆಸಿ 6 – 8 ಗಂಟೆ ಕಾಲ ನೆನೆಸಿ ನಂತರ ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ನಂತರ ಬಿತ್ತನೆಗೆ ಉಪಯೋಗಿಸಬೇಕು.
 • ಹತ್ತಿಯಲ್ಲಿ ರಸ ಹೀರುವ ಕೀಟ ನಿಯಂತ್ರಿಸಲು ಇಮಿಡಾಕ್ಲೋಪ್ರಿಡ್ 70 ಡಬ್ಲೂ.ಎಸ್. (10 ಗ್ರಾಂ./ ಪ್ರತಿ ಕಿ.ಗ್ರಾಂ. ಬೀಜ) ನಿಂದ ಬೀಜೋಪಚಾರ ಮಾಡಿ ಬಿತ್ತಬೇಕು.
 • ಬಿತ್ತನೆ ಬೀಜವನ್ನು 0.3 ಗ್ರಾಂ. ಅಗ್ರಿಮೈಸಿನ ಮತ್ತು 0.1 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್‍ಗಳನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ 20 ನಿಮಿಷಗಳ ಕಾಲ ನೆನೆಸಬೇಕು.
 • ಇದರಿಂದ ಭತ್ತದಲ್ಲಿ ಬರುವ ಬೀಜದಿಂದ ಹರಡಬಹುದಾದ ದುಂಡಾಣು ರೋಗಗಳನ್ನು ನಿಯಂತ್ರಿಸಬಹುದು.
 •  ಕಾರ್ಬೆಂಡೈಜಿಮ್ 2 ಗ್ರಾಂ ನ್ನು ಪ್ರತಿ ಕಿ.ಗ್ರಾಂ. ಬೀಜಕ್ಕೆ ಉಪಚರಿಸಿ ಇದರಿಂದ ಕಡಲೆಗೆ ಬರುವ ಸೊರಗು ರೋಗ ಹಾಗೂ ಬೇರು ಕೊಳೆ ರೋಗವನ್ನು ನಿಯಂತ್ರಿಸಬಹುದು.
 •   ಜೋಳದ ಕೇದಿಗೆ ರೋಗವನ್ನು ನಿಯಂತ್ರಿಸಲು 2 ಗ್ರಾಂ. ಗಂಧಕ ಪುಡಿಯನ್ನು ಪ್ರತಿ ಕಿ.ಗ್ರಾಂ. ಬೀಜಕ್ಕೆ ಉಪಚರಿಸಿ.
 •  ಕೇದಿಗೆ ರೋಗವನ್ನು ನಿಯಂತ್ರಿಸಲು ಶೇ. 8ರ ಮೆಟಾಲಾಕ್ಸಿಲ್ ಪುಡಿಯನ್ನು ಪ್ರತಿ ಕಿ.ಗ್ರಾಂ. ಬೀಜಕ್ಕೆ 6 ಗ್ರಾಂ. ನಂತೆ ಉಪಚರಿಸಿ.
 • ಇತರೆ ವಿಧಾನಗಳಿಂದ ಬೀಜೋಪಚಾರ : ಬಿಸಿ ನೀರಿನ ಉಪಚಾರ : ಕಬ್ಬು, ಆಲೂಗಡ್ಡೆ, ಭತ್ತ ಹಾಗೂ ಎಲೆಕೋಸು ಬೀಜಗಳನ್ನು ಬಿಸಿ ನೀರಿನಲ್ಲಿ ಉಪಚರಿಸುವುದರಿಂದ ರೋಗಗಳನ್ನು ತಡೆಯಬಹುದು.
 • ಉಪ್ಪು ನೀರಿನ ಉಪಚಾರ : ಶೇ. 4ರ ಉಪ್ಪು ನೀರಿನ ದ್ರಾವಣವನ್ನು ತಯಾರಿಸಿಕೊಂಡು ಬೀಜಗಳಿಗೆ ಉಪಚರಿಸಲಾಗುವುದು.
 • ಬಿಸಿಗಾಳಿ ಉಪಚಾರ : ಕಬ್ಬಿನ ತುಂಡುಗಳಿಗೆ 550 ಸೆ. ಉಷ್ಣಾಂಶದ ಬಿಸಿಗಾಳಿಯಿಂದ ಉಪಚರಿಸಲಾಗುವುದು. ಇದರಿಂದ ಕಬ್ಬಿನ ಕೆಂಪು ಕಾಂಡ ಕೊಳೆ ರೋಗವನ್ನು ತಡೆಯಬಹುದು.
Kedige disease of Jawar
ಜೋಳದ ಕೇದಿಗೆ ರೋಗಕ್ಕೆ ಬೀಜ ಜನ್ಯ ರೋಗಾಣು ಕಾರಣ

ಬೀಜೋಪಚಾರದಿಂದಾಗುವ ಲಾಭಗಳು :

       ಬೀಜಗಳನ್ನು ಬಿತ್ತುವುದಕ್ಕಿಂತ ಮುಂಚೆ ಬೀಜೋಪಚಾರ ಮಾಡುವುದರಿಂದ ಬೆಳೆಯ ಬೆಳವಣಿಗೆಯನ್ನು ಉತ್ತಮಗೊಳಿಸಬಹುದು, ಖರ್ಚಿನ ಪ್ರಮಾಣವನ್ನು ಕಡಿಮೆ ಮಾಡಬಹುದು ಹಾಗೂ ಬೆಳೆಗಳ ನಷ್ಟವನ್ನು ತಡೆಯಬಹುದು ಅದು ಹೀಗೆ,

 • ಬೀಜೋಪಚಾರ ಮಾಡಿ ಬಿತ್ತುವುದರಿಂದ 30 ದಿನಗಲ ಕಾಲ ಬೆಳೆಗಳಿಗೆ ಯಾವುದೇ ರೀತಿಯ ರೋಗ ಮತ್ತು ಕೀಟಗಳ ಬರುವುದಿಲ್ಲ.
 • ಇದರಿಂದ ಸಿಂಪರಣೆ ಬೇಕಾದ ಖರ್ಚು ಕಡಿಮೆಯಾಗುತ್ತದೆ.
 • ಬೆಳೆಗಳಲ್ಲಿ ಯಾವುದೇ ನಷ್ಟವಾಗದೇ ಉತ್ತಮ ಇಳುವರಿಯನ್ನು ಪಡೆದುಕೊಂಡು ಉತ್ತಮ ಲಾಭವನ್ನು ಗಳಿಸಬಹುದು.
 • ಬೆಳೆಯಿಂದ ಬೆಳೆಗೆ ಬೀಜಗಳ ಮುಖಾಂತರ ಹರಡುವ ರೋಗಗಳನ್ನು ನಿಯಂತ್ರಿಸಬಹುದು.
 • ಬೀಜಗಳ ಮೊಳಕೆ ಪ್ರಮಾಣವನ್ನು ಹೆಚ್ಚಿಸಿ ಸಸಿಗಳ ಸಂಖ್ಯೆಯನ್ನು ಕಾಪಾಡಿಕೊಳ್ಳಬಹುದು.
 • ಶೇಖರಣಾ ಶಕ್ತಿಯನ್ನು ಬೀಜೋಪಚಾರ ಮಾಡುವುದರಿಂದ ಹೆಚ್ಚಿಸಬಹುದು.
 • ದಾಸ್ತಾನಿನ ಬೀಜಗಳನ್ನು ಕೀಟ ಮತ್ತು ರೋಗಗಳಿಂದ ಸಂರಕ್ಷಿಸಿ ಆಮದು ಮತ್ತು ರಫ್ತಿಗೆ ಉತ್ತಮ ಗುಣಮಟ್ಟದ ಬೀಜಗಳನ್ನು ಪಡೆಯಬಹುದು.
 • ಒಂದು ಪ್ರದೇಶಕ್ಕೆ ಇನ್ನೊಂದು ಬೀಜದಿಂದ ಹರಡುವ ರೋಗಗಳನ್ನು ತಡೆಗಟ್ಟಲು ಅನುಕೂಲವಾಗುವುದು.

ಬೀಜೋಪಚಾರ ಮಾಡುವಾಗ ಗಮನಿಸಿ:

 • ಶಿಲೀಂದ್ರ ಮತ್ತು ಕೀಟನಾಶಕಗಳು ಉತ್ತಮ ಗುಣಮಟ್ಟದ್ದಾಗಿರಬೇಕು ಮತ್ತು ಬೀಜದ ಗುಣಮಟ್ಟ ಹೆಚ್ಚಿಸುವಂತಿದ್ದು  
 •   ಬೀಜಗಳಿಗೆ ಹಾನಿ ರಹಿತವಾಗಿರಬೇಕು.
 • ಮನುಷ್ಯರಿಗೆ ಜಾನುವಾರಗಳ ಮೇಲೆ ಯಾವುದೇ ರೀತಿಯ ದುಷ್ಪರಿಣಾಮವು ಮಾಡಬಾರದು.
 • ಸಸ್ಯಗಳಲ್ಲಿ ಹಾಗೂ ಭೂಮಿಯಲ್ಲಿ ಯಾವುದೇ ವಿಷ ಪದಾರ್ಥ ಬಿಡಬಾರದು.
 • ಬೀಜೋಪಚಾರವನ್ನು ಸೂಕ್ತ ಪ್ರಮಾಣದಲ್ಲಿ ಉಪಯೋಗಿಸಬೇಕು.
 • ಬೀಜೋಪಚಾರದ ಔಷಧಿಗಳ ಪ್ರಮಾಣವು ಕಡಿಮೆ ಬೆಲೆಗೆ ದೊರೆಯುಂತಿರಬೇಕು.
 • ಬೀಜೋಪಚಾರ ಔಷಧಿಗಳು ಬೇರೆ ಔಷಧಿಗಳ ಜೊತೆಗೆ ಹೊಂದಾಣಿಕೆಯಾಗುವಂತಿರಬೇಕು.
 • ಇತರೆ ಬೆಳೆಗಳ ಮೇಲೆ ಯಾವುದೇ ತರಹದ ದುಷ್ಪರಿಣಾಮ ಬೀರಬಾರದು.
 • ಔಷಧಿಗಳು ಸಾಕಷ್ಟು ಕಾಲ ತಮ್ಮ ರಾಸಾಯನಿಕ ಕ್ರಿಯಾಶಕ್ತಿ ಗುಣಮಟ್ಟ ಕಾಯ್ದುಕೊಳ್ಳಬೇಕು.

       ತೆನೆಯಲ್ಲಿ ಬೀಜಗಳು ಬಲಿಯುವಾಗ, ಮಾಗುವಾಗ, ಬೀಜಗಳನ್ನು ಕೊಯ್ಲು ಮಾಡುವಾಗ, ಒಣಗಿಸುವಾಗ, ಸಂಸ್ಕರಿಸುವಾಗ, ಒಡಕಾದ ಬೀಜಗಳಿಗೆ, ಅತಿ ತಂಪು ಹಾಗೂ ಒದ್ದೆ ಮಣ್ಣಿನಲ್ಲಿ ಅಥವಾ ಹೆಚ್ಚು ಒಣಗಿದ ಮಣ್ಣಿನ ಪರಿಸರದಲ್ಲಿ ರೋಗಾಣುಗಳು ಬೀಜಗಳಿಗೆ ಅಂಟಿಕೊಳ್ಳುವ ಸಾಧ್ಯತೆಯುಂಟು. ಈ ಸಂದರ್ಭಗಳಲ್ಲಿ ಹಾಗೂ ಬೀಜ ಸಂಗ್ರಹಣೆ ಪೂರ್ವದಲ್ಲಿ, ಬೀಜ ಆಮದು ಮತ್ತು ರಫ್ತು ಮಾಡುವಾಗ ಬೀಜೋಪಚಾರ ಮಾಡುವುದು ಅತಿ ಅವಶ್ಯಕವಾಗಿರುತ್ತದೆ. ದಾಸ್ತಾನು ಸಮಯದಲ್ಲಿ ಬೀಜಗಳನ್ನು ಕೀಟಗಳಿಂದ ಸಂರಕ್ಷಿಸಲು ಬೀಜೋಪಚಾರ ಮಾಡುವುದು  ಅತಿ ಅವಶ್ಯಕವಾಗಿದೆ.

ಲೇಖಕರು: ಡಾ. ಯುಸುಫ್‍ಅಲಿ ನಿಂಬರಗಿ, ಡಾ. ಶ್ರೀನಿವಾಸ ಬಿ.ವಿ., ಡಾ. ಜಹೀರ್ ಅಹೆಮದ್ ಮತ್ತು ಡಾ. ರಾಜು ಜಿ. ತೆಗ್ಗಳ್ಳಿ, ಡಾ. ನಂದಿನಿ ಕೆ ಎಂ, ನಿಸರ್ಗ ಹೆಚ್. ಎಸ್. ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ.

Leave a Reply

Your email address will not be published. Required fields are marked *

error: Content is protected !!