ಕೊಟ್ಟಿಗೆ ಗೊಬ್ಬರಕ್ಕೆ ಪರ್ಯಾಯ ಈ ಸೊಪ್ಪುಗಳು.

glerisidia plant

ಇಂದಿನ  ಸಾರ್ವಕಾಲಿಕ ಸಮಸ್ಯೆಯಾದ  ಕೆಲಸದವರ ಕೊರತೆ. ಈ ಕೊರತೆಯಿಂದಾಗಿಯೇ ನಾವು ರಾಸಾಯನಿಕ ಗೊಬ್ಬರ, ಕಳೆ ನಾಶಕ ಹೆಚ್ಚಾಗಿ ಬಳಕೆ ಮಾಡುತ್ತಿರುವುದು. ಅದನ್ನು ಕಡಿಮೆ ಮಾಡಲು ಹಸುರೆಲೆ ಗೊಬ್ಬರ ಗಿಡಗಳೂ ಸಹಕಾರಿ ಹೇಗೆ ಗೊತ್ತೇ?

ಕೊಟ್ಟಿಗೆ ಗೊಬ್ಬರ ಬೇಕಾದರೆ ಹಸು ಸಾಕಬೇಕು. ಹಸು ಸಾಕಿದರೆ ಅದಕ್ಕೆ ಮೇವು ಬೆಳೆಸಬೇಕು. ಸಾಕಷ್ಟು ಪಶು ಆಹಾರ ಕೊಡಬೇಕು. ಅದೇ ರೀತಿ ದೈನಂದಿನ ಸಮಯದ ಅವಧಿಯಲ್ಲಿ ಅರ್ಧ ಪಾಲು ಸಮಯವನ್ನು ಅದಕ್ಕೇ ಮೀಸಲಿಡಬೇಕು. ಈ ಕಸುಬು ಕೆಲವರಿಗೆ ಮಾತ್ರ ಲಾಭವಾಗುತ್ತದೆ. ಈ ಕಾರಣಕ್ಕಾಗಿಯೇ ಬಹಳ ಜನ ಹಸು ಸಾಕುವುದು, ಕೊಟ್ಟಿಗೆ ಗೊಬ್ಬರ ಉತ್ಪಾದಿಸುವುದನ್ನೂ  ಕಡಿಮೆ ಮಾಡುತ್ತಿದ್ದಾರೆ. ಕೃಷಿಗೆ ಕೊಟ್ಟಿಗೆ ಗೊಬ್ಬರ ಬೇಕೇ ಬೇಕು ಅದನ್ನು ಎಲ್ಲಿಂದ ತರುವುದು? ಇಲ್ಲಿದೆ ಅದಕ್ಕೆ ಪರ್ಯಾಯ ವ್ಯವಸ್ಥೆ.

Jute in field crop
ಸೆಣಬು ಬೆಳೆ

ದ್ವಿದಳ ಸಸ್ಯಗಳು ಮತ್ತು ಗೊಬ್ಬರ:

 • ಕೊಡು ಬಿಟ್ಟು ಬೀಜಗಳಾಗುವ ಎಲ್ಲಾ ಸಸ್ಯಗಳೂ ದ್ವಿದಳ ಸಸ್ಯಗಳು. ಇವೆಲ್ಲಾ ಸಾರಜನಕ ಸಂಮೃದ್ಧವಾಗಿರುತ್ತವೆ.
 • ಬರೇ ಸಾರಜನಕ ಮಾತ್ರವಲ್ಲದೆ ಅಲ್ಪ ಸ್ವಲ್ಪ ಇತರ ಪೋಷಕಾಂಶಗಳೂ ,ಕೆಲವು ಲಘು ಪೋಷಕಗಳನ್ನೂ ಹೊಂದಿರುತ್ತವೆ.
 • ಈ ಸಸ್ಯಗಳ ವಿಶೇಷ ಎಂದರೆ, ಅವು ಕೆಲವೇ ದಿನಗಳಲ್ಲಿ (40-50 ದಿನ) ಹುಲುಸಾಗಿ ಬೆಳೆಯುತ್ತವೆ.
 • ಇವು ಬೆಳೆಯಲು ಗೊಬ್ಬರ ಬೇಕಾಗುವುದಿಲ್ಲ. ಸ್ವಲ್ಪ ತೇವಾಂಶ ದೊರೆತರೆ ಸಾಕು ಬೀಜಗಳು ಮೊಳೆಯುತ್ತವೆ.
 • ನಂತರ ಅವುಗಳ ಬೆಳವಣಿಗೆ ಬೇಕಾಗುವುದು ನೀರು ಮತ್ತು ಸೂರ್ಯನ  ಬೆಳಕು ಮಾತ್ರ.
 • ಈ ಸಸ್ಯಗಳು ತಮ್ಮ ಬೆಳವಣಿಗೆ ಉದ್ದಕ್ಕೂ ಮಣ್ಣಿನಲ್ಲಿ ಸಂಗ್ರಹವಾಗಿರುವ ಪೋಷಕಗಳನ್ನು ಕಬಳಿಸುವುದು ಕಡಿಮೆ.
 • ಇವುಗಳನ್ನು ಹೂ ಬಿಡುವ ಸಮಯದಲ್ಲಿ ಕಿತ್ತು ಹಾಕಿದರೆ ಅದರ ಕೆಳಗೆ ಯಾವುದೇ ಕಳೆಗಳು ಬೆಳೆದಿದ್ದರೂ ಅವು ಸತ್ತು ಹೋಗುತ್ತವೆ.
 • ಅವು ಕೆಲವೇ ಕೆಲವು ದಿನಗಳಲ್ಲಿ ಕರಗಿ ಮಣ್ಣಿಗೆ ಸೇರಲ್ಪಡುತ್ತವೆ.
 •  ಈ ಸಸ್ಯಗಳು ನೆಲದಲ್ಲಿ ದಟ್ಟವಾಗಿ ಬೆಳೆಯುವ ಕಾರಣ, ನೆಲದಲ್ಲಿ ಬೇರೆ ಕಳೆ ಸಸ್ಯಗಳನ್ನೂ ಬೆಳೆಯಲು ಅನುವು ಮಾಡಿಕೊಡುವುದಿಲ್ಲ.
 • ದ್ವಿದಳ ಸಸ್ಯಗಳಲ್ಲಿ ಕೆಲವು ಬಹು ವಾರ್ಷಿಕ ಸಸ್ಯಗಳು ಕೆಲವು ಅಲ್ಪಾವಧಿ ಸಸ್ಯಗಳು ಇವೆ.
 • ಅಲ್ಪಾವಧಿ ಸಸ್ಯಗಳನ್ನು ತೋಟದಲ್ಲಿ ಕಳೆ ನಿಯಂತ್ರಣಕ್ಕೆ ಮತ್ತು ಗೊಬ್ಬರಕ್ಕಾಗಿ ಬೆಳೆಸಬಹುದು.
 • ಹೊಲದ ಬಿತ್ತನೆಗೆ 30-40 ದಿನಕ್ಕೆ ಮುಂಚೆ ಇವುಗಳ ಬೀಜಗಳನ್ನು ಬಿತ್ತಿದರೆ, ಬಿತ್ತನೆ ಸಮಯದಲ್ಲಿ ಉಳುಮೆ ಮಾಡುವಾಗ ಅದನ್ನು ಸೇರಿಸಿ ಉಳುಮೆ ಮಾಡಿದರೆ ಅದು ಕೊಟ್ಟಿಗೆ ಗೊಬ್ಬರಕ್ಕೆ ಪರ್ಯಾಯವಾಗಿ ಕೆಲಸ ಮಾಡುತ್ತದೆ.
jute in coconut garden
ತೆಂಗಿನ ತೋಟದಲ್ಲಿ ಕಳೆ ನಿಯಂತ್ರಣ ಮತ್ತು ಗೊಬ್ಬರಕ್ಕಾಗಿ ಸೆಣಬು ಬೆಳೆ

ಬಹು ವಾರ್ಷಿಕ ದ್ವಿದಳ ಸಸ್ಯಗಳನ್ನು ಹೊಲದ ಬದುಗಳಲ್ಲಿ ನಿರುಪಯುಕ್ತ ಸೊಪ್ಪಿನ ಬೆಟ್ಟಗಳಲ್ಲಿ ಬೆಳೆದರೆ ಅವುಗಳ ಸೊಪ್ಪನ್ನು ಕಡಿಯುತ್ತಿದ್ದಂತೆ ಅವು ಮತ್ತೆ ಮತ್ತೆ ಚಿಗುರುತ್ತಲೇ ಇರುತ್ತವೆ. ತೋಟಕ್ಕೆ ಸೊಪ್ಪು ಬೇಕೇ ಬೇಕು.  ನಿರಂತರವಾಗಿ ಹೆಚ್ಚು ಸತ್ವಗಳುಳ್ಳ ಸೊಪ್ಪನ್ನು ಉತ್ಪಾದಿಸಲು ಈ ಬಹುವಾರ್ಷಿಕ ದ್ವಿದಳ ಸೊಪ್ಪಿನ ಸಸ್ಯಗಳು ಸಹಕಾರಿ.

  ದ್ವಿದಳ ಸಸ್ಯಗಳ ಅನುಕೂಲಗಳು:

 • ದ್ವಿದಳ ಸಸ್ಯಗಳ ವಿಶೇಷ ಗುಣ  ಎಂದರೆ ಅವು ಬೇರುಗಳ ಮೂಲಕ ವಾತಾವರಣದ ಸಾರಜಕವನ್ನು ಮಣ್ಣಿಗೆ ಸ್ಥಿರೀಕರಣ  ಮಾಡುತ್ತವೆ.
 • ದ್ವಿದಳ ಸೊಪ್ಪಿನ ಗಿಡ, ಬಳ್ಳಿ ಗಿಡ ಯಾವುದೇ ಇದ್ದರೂ ಅದರ ಬೇರಿನಲ್ಲಿ ಒಂದು ರೀತಿಯ ಗಂಟುಗಳ ರಚನೆ ಇರುತ್ತದೆ.
 • ಇದರ ಒಳಗೆ  ವಾತಾವರಣ ಸಾರಜನಕವನ್ನು ಸಂಗ್ರಹಿಸುವ ಬ್ಯಾಕ್ಟೀರಿಯಾಗಳು ಇರುತ್ತದೆ. 
 • ಅಷ್ಟೇ ಅಲ್ಲದೆ ಈ ಸಸ್ಯಗಳು ನೆಲದಲ್ಲಿ ಚೆನ್ನಾಗಿ ಬೇರು ಬಿಟ್ಟು ಹಬ್ಬುತ್ತವೆ.
 • ಸಸ್ಯವನ್ನು ನೆಲಕ್ಕೆ ಉಳುಮೆ ಮಾಡಿ ಸೇರಿಸಿದ ನಂತರ ಆ ಬೇರು ಭಾಗ ಅಲ್ಲಿಗೆ ಕೊಳೆಯಲ್ಪಟ್ಟು ಮಣ್ಣಿನಲ್ಲಿ ಗಾಳಿಯಾಡುವಿಕೆಗೆ ಸಹಕರಿಸಿ ಮಣ್ಣನ್ನು ಸಡಿಲ ಮಾಡಿಕೊಡುತ್ತವೆ.
 • ಬರೇ ನೆಲದ ಮೇಲ್ಭಾಗಕ್ಕೆ ಮಾತ್ರವಲ್ಲದೆ  ನೆಲದ ½-1 ಅಡಿ ತನಕವೂ ಸಾವಯವ ವಸ್ತುಗಳನ್ನು ಸೇರಿಸುತ್ತವೆ.

ಬಹುವಾರ್ಷಿಕ ದ್ವಿದಳ ಸಸ್ಯಗಳು ಬೆಳೆಯುತ್ತಿರುವಾಗ ತಮ್ಮ ಬೇರುಗಳು ಹೋದಲ್ಲೆಲ್ಲಾ ನೆಲ ಸಡಿಲವಾಗುತ್ತದೆ. ಅದು ಉಳುಮೆ ಮಾಡುವ ಕೆಲಸವನ್ನು ಮಾಡುತ್ತದೆ. ಗ್ಲೆರಿಸೀಡಿಯಾ ಸಸ್ಯ ಇರುವ ನೆಲವನ್ನು ಒಮ್ಮೆ ಗಮನಿಸಿ.ಅದು ಎಷ್ಟು ಸಡಿಲವಾಗಿರುತ್ತದೆ ಗೊತ್ತೇ. ಅದೇ ರೀತಿಯಲ್ಲಿ ದ್ವಿದಳ ಸಸ್ಯಗಳೆಲ್ಲಾ ಇದೇ ಕೆಲಸವನ್ನು ಮಾಡುತ್ತವೆ.

subabul plant
ಸುಬಾಬುಲ್ ಸೊಪ್ಪು

ಕೊಟ್ಟಿಗೆ ಗೊಬ್ಬರ ಉತ್ಪಾದನೆಗೂ ಕಷ್ಟ ಇದೆ:

 • ಕೊಟ್ಟಿಗೆ ಗೊಬ್ಬರ ಉತ್ಪಾದನೆ ಮಾಡಬೇಕಾದರೆ ಖರ್ಚು ಬಹಳ.  ಬರೇ ಹಸುವಿನ ಸಗಣಿಯಿಂದ ಗೊಬ್ಬರ ಆಗುವುದಿಲ್ಲ.
 • ಅದಕ್ಕೆ ಮತ್ತೆ ಸ್ಥೂಲ ಸಾವಯವ ವಸ್ತುಗಳನ್ನು ಸೇರಿಸಬೇಕು.
 • ಸೊಪ್ಪು ಸದೆಗಳು, ಬೆಳೆ ತ್ಯಾಜ್ಯಗಳು,
 • ಹೀಗೆಲ್ಲಾ ಮಿಶ್ರಣ ಮಾಡಿ ಅದನ್ನು ವ್ಯವಸ್ಥಿತವಾಗಿ ಕಂಪೋಸ್ಟು ಮಾಡಬೇಕು.
 • ಇದಕ್ಕೆಲ್ಲಾ ತಗಲುವ ಖರ್ಚು, ಮತ್ತು ಶ್ರಮ ಅಪಾರ.ಆದರೆ ಹಸುರೆಲೆ ಗೊಬ್ಬರದ ಬೆಳೆಗಳನ್ನು ಹೊಲದಲ್ಲೇ ಬೆಳೆಸುವುದರಿಂದ ( insitu preparation) ಅದು ಸ್ಥಳದಲ್ಲೇ ಅನಾಯಾಸವಾಗಿ ಲಭ್ಯವಾಗುತ್ತದೆ.
 • ಪರಿಸರಕ್ಕೂ ಇದು ಪೂರಕ. ಕೊಟ್ಟಿಗೆ ಗೊಬ್ಬರಕ್ಕಾಗಿ ಸೊಪ್ಪಿನ ಬೆಟ್ಟಗಳಿಂದ ತ್ಯಾಜ್ಯಗಳನ್ನು ತಂದು ಅಲ್ಲಿನ ಮಣ್ಣಿಗೆ ಏನೂ ಇಲ್ಲ ಎಂದಾಗುತ್ತದೆ.
 • ಒಂದು ಕಡೆಯ ಅನುಕೂಲಕ್ಕೆ ಮತ್ತೊಂದು ಕಡೆಯನ್ನು ಶೋಷಣೆ ಮಾಡಿದಂತಾಗುತ್ತದೆ

ಹಸುರೆಲೆ ಗೊಬ್ಬರದ ಗಿಡ ಮತ್ತು ಮರಗಳು:

 • ಹಸುರೆಲೆ ಗೊಬ್ಬರ ದ ಗಿಡಗಳೆಂದರೆ ಹಿಂದೆ ಹೇಳಿದಂತೆ ಕೋಡು ಬಿಡುವ ಬೇಳೆ ಕಾಳುಗಳಾಗುವ ಸಸ್ಯಗಳು.
 • ಇವುಗಳಲ್ಲಿ ಕೆಲವು ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ ಸ್ಥಿರೀಕರಣ ಮಾಡುವವುಗಳು ಮತ್ತೆ ಕೆಲವು ಸ್ವಲ್ಪ ಕಡಿಮೆ ಇರಬಹುದು.
 •   ಬಹುತೇಕ ಎಲ್ಲವೂ ಬೇಗ ಕರಗಿ ಮಣ್ಣಿನಲ್ಲಿ ಸೇರಿಕೊಳ್ಳುವಂತವುಗಳು.
 • ಹಸುರೆಲೆ ಗೊಬ್ಬರಕ್ಕೆ ಸೂಕ್ತವಾದ ಕೆಲವು ಸಸ್ಯಗಳನ್ನು ಗುರುತಿಸಲಾಗಿದೆ.ಅವುಗಳೆಂದರೆ..
 • ಸೆಣಬು ಎಂಬುದು ಒಂದು ಎಕ್ರೆಯಲ್ಲಿ ಬೆಳೆದರೆ 10 -13 ಟನ್ ಹಸುರೆಲೆ ಗೊಬ್ಬರವನ್ನು ಉತ್ಪಾದಿಸುತ್ತದೆ.
 • ಅದರಲ್ಲಿ ಶೇ.2.3-0.5 -1.8 ಸಾರಜನಕ ರಂಜಕ ಮತ್ತು ಪೊಟ್ಯಾಶ್ ಇರುತ್ತದೆ.
 • ಸಸ್ಬೇನಿಯಾ ಎಂಬ ಸಸ್ಯದಲ್ಲಿ ಎಕ್ರೆಗೆ  6-8 ಟನ್ ಗೊಬ್ಬರ ಹಾಗೂ  3% 0.5% 1.6%  ಸಾರಜನಕ ರಂಜಕ ಮತ್ತು ಪೊಟ್ಯಾಶ್ ಅಂಶ ಇರುತ್ತದೆ.
 • ಅಲಸಂಡೆ ಯಲ್ಲಿ ಎಕ್ರೆಗೆ 6-8 ಟನ್ ಗೊಬ್ಬರವೂ 2.3% 0.5% 2.1% ಸಾರಜನಕ ರಂಜಕ ಮತ್ತು ಪೊಟ್ಯಾಶ್  ಇರುತ್ತದೆ.
 • ಉದ್ದು, ಹೆಸರು ಬೆಳೆಗಳಲ್ಲಿ ಎಕ್ರೆಗೆ 1-1.5 ಟನ್ ಗೊಬ್ಬರವೂ  1.2% – 0.2% -0.8% ಸಾರಜನಕ ಮತ್ತು ರಂಜಕಾಂಶ ಇರುತ್ತದೆ.

ಗ್ಲೆರಿಸೀಡಿಯಾ ಸಸ್ಯದಲ್ಲಿ ಪ್ರತೀ ಸಸ್ಯಕ್ಕೆ 15-20 ಕಿಲೋ ಗೊಬ್ಬರ  ಹಾಗೂ  2.4%  -0.1% -1.8%  ಸಾರಜನಕ ರಂಜಕ ಮತ್ತು ಪೊಟ್ಯಾಶ್ ಇರುತ್ತದೆ.ಸುಬಾಬುಲ್ ಸಸ್ಯವೂ ಸಸ್ಯ ಒಂದರಲ್ಲಿ 15-20 ಕಿಲೋ ಸೊಪ್ಪು ಹಾಗೂ 1.3% -0.2% -1.3% ಸಾರಜನಕ ರಂಜಕ ಮತ್ತು ಪೊಟ್ಯಾಶ್ ಹೊಂದಿರುತ್ತದೆ.

ಅಲ್ಪಾವಧಿ ಹಸುರೆಲೆ ಗೊಬ್ಬರದ ಗಿಡಗಳನ್ನು ಮುಂಗಾರು ಪೂರ್ವದ ಮಳೆ ಬರುವಾಗ ಬಿತ್ತನೆ  ಮಾಡಿ ಉಳುಮೆ ಮಾಡು ಬಿತ್ತನೆ – ನಾಟಿ ಸಮಯದಲ್ಲಿ ಅದನ್ನು ಮಣ್ಣಿಗೆ ಸೇರಿಸಬೇಕು. ತೋಟಗಾರಿಕಾ ಬೆಳೆಗಳಲ್ಲಿ ಮಳೆಗಾಲಕ್ಕೆ ಮುಂಚೆ ಬಿತ್ತನೆ ಮಾಡಿ ಮಳೆ ಮುಗಿಯುವ ಆಗಸ್ಟ್ ಸಪ್ಟೆಂಬರ್ ನಲ್ಲಿ ಸವರಿ ನೆಲಕ್ಕೆ ಸೇರಿಸಬೇಕು.  ಹಸುರೆಲೆ ಗೊಬ್ಬರದ ಗಿಡಗಳನ್ನು ಬೆಳೆದಷ್ಟೂ ಮಣ್ಣು ಫಲವತ್ತಾಗುತ್ತದೆ. ಮಣ್ಣಿನ ಭೌತಿಕ,ಜೈವಿಕ ಮತ್ತು ರಾಸಾಯನಿಕ ರಚನೆಯು ಉತ್ತಮವಾಗುತ್ತದೆ.

ಲೇಖಕರು :ಕು. ಬಿಂದು, ಎನ್, ಡಾ. ರಾಜೇ ಗೌಡ, ಡಾ. ಗಿರೀಶ್ ಎ.ಸಿ. ನಿಸರ್ಗ ಎಚ್ ಎಸ್  ಕೃಷಿ ವಿಜ್ಞಾನ ಕೇಂದ್ರ ಕಂದಲಿ ಹಾಸನ

  

2 thoughts on “ಕೊಟ್ಟಿಗೆ ಗೊಬ್ಬರಕ್ಕೆ ಪರ್ಯಾಯ ಈ ಸೊಪ್ಪುಗಳು.

Leave a Reply

Your email address will not be published. Required fields are marked *

error: Content is protected !!