ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಗಳು ವಾಡಿಕೆಯಂತೆ ಆಗುತ್ತವೆ ಎಂಬುವುದು ಹವಾಮಾನ ತಜ್ಞರ ಅಭಿಪ್ರಾಯ. ಆದ್ದರಿಂದ ರೈತರು ಸ್ಥಳೀಯ ಪರಿಸ್ಥಿತಿಗಳನ್ನು ಅವಲೋಕಿಸಿ ಮುಂಗಾರು ಬೆಳೆಗಳ ಯೋಜನೆಯನ್ನು ಹಮ್ಮಿಕೊಳ್ಳುವುದು ಸೂಕ್ತ.
ಈಗಾಗಲೇ ಅನೇಕ ಕಡೆ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ರೈತರು ತಮ್ಮ ಜಮೀನುಗಳಲ್ಲಿ ಕುಂಟೆ-ರಂಟೆಗಳನ್ನು ಹೊಡೆದು ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ಚೌಕ ಮಡಿಗಳನ್ನು ಮತ್ತು ದಿಂಡು ಸಾಲುಗಳನ್ನು ಇಳಿಜಾರಿಗೆ ಅಡ್ಡಲಾಗಿ ನಿರ್ಮಿಸುವುದರಿಂದ, ಬಂದ ಮಳೆ ನೀರು ಮಡಿಗಳಲ್ಲಿ ಮತ್ತು ಬೋದುಗಳಲ್ಲಿ ನಿಲ್ಲುವುದರಿಂದ ಮಣ್ಣಿನ ತೇವಾಂಶ ಹೆಚ್ಚು ಸಂಗ್ರಹವಾಗಿ ಮುಂದೆ ಮುಂಗಾರಿನಲ್ಲಿ ಬೆಳೆಯುವ ಬೆಳೆಗಳಿಗೆ ಸಹಕಾರಿಯಾಗುತ್ತದೆ.
ಮಣ್ಣು ರಕ್ಷಣೆ ಅದ್ಯತೆಯಾಗಿರಲಿ:
- ಬೆಳೆ ಪರಿವರ್ತನೆ,ಸಾವಯವ ಗೊಬ್ಬರ ಬಳಕೆ, ಸ್ವಚ್ಛ ಸಾಗುವಳಿ ಮತ್ತು ಮಾಗಿ ಉಳುಮೆಯನ್ನು ನೇಗಿಲು ಅಥವಾ ಟ್ರ್ಯಾಕ್ಟರ್ ಸಹಾಯದಿಂದ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದರಿಂದ ಮಣ್ಣಿನ ಸವಕಳಿ ತಡೆಗಟ್ಟಿ ಸಂರಕ್ಷಿಸಬಹುದು.
- ಮಣ್ಣು ಮತ್ತು ನೀರು ಪರೀಕ್ಷೆ ಮಾಡಿಸುವ ಮೂಲಕ ಜಮೀನಿನ ಪೋಷಕಾಂಶಗಳ ಮಟ್ಟವನ್ನು ತಿಳಿಯಬಹುದು.
- ಸಮಸ್ಯಾತ್ಮಾಕ ಮಣ್ಣುಗಳನ್ನು ಸುಧಾರಿಸಲು ಬಸಿಗಾಲುವೆಗಳನ್ನು ನಿರ್ಮಿಸಿ ಮಣ್ಣಿನ ಗುಣಮಟ್ಟವನ್ನು ಕಾಪಾಡಬಹುದು.
- ಸತತವಾಗಿ ಕೃಷಿ ವ್ಯವಸ್ಥೆಯಲ್ಲಿ ಉತ್ಪಾದಿಸಲಾಗುತ್ತಿರುವ ಸಸ್ಯಾವಶೇಷಗಳನ್ನು ಭೂಮಿಗೆ ಮರುಕಳಿಸುವುದರಿಂದ ಅಥವಾ ಹೊದಿಕೆ ಮಾಡುವುದರಿಂದ ಮಣ್ಣಿನ ತೇವಾಂಶ, ಫಲವತ್ತತೆ ಹಾಗೂ ಉತ್ಪಾದಕತೆಯನ್ನು ಕಾಪಾಡಿಕೊಂಡು ಬರಬಹುದು.
- ಮಣ್ಣು ಪರೀಕ್ಷೆ ವರದಿ ಆಧಾರದ ಮೇಲೆ ರೈತರು ಬೆಳೆಗಳಿಗೆ ಸಮತೋಲನ ರಸಗೊಬ್ಬರಗಳನ್ನು ಬಳಸುವುದರಿಂದ ಭೂಮಿಯ ಫಲವತ್ತತೆ ಹಾಗೂ ಉತ್ಪಾದಕತೆಯನ್ನು ಅಂದರೆ ಮಣ್ಣಿನ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ.
- ಮಳೆನೀರು ಕೊಯ್ಲುಮಾಡುವುದು, ಜಮೀನನ್ನು ಸಮತಲಗೊಳಿಸಿ ಹದಗೊಳಿಸುವುದು,
- ಕೃಷಿಗೆ ಬೇಕಾದ ಸಾಮಗ್ರಿಗಳನ್ನು ಮುಂಚಿತವಾಗಿ ಸಂಗ್ರಹಿಸುವುದು, ಯಂತ್ರೋಪಕರಣಗಳನ್ನು ಬಳಸಲು ಸಿದ್ದತೆ ಮಾಡಿಕೊಳ್ಳುವುದು,
- ಜಾನುವಾರುಗಳ ಪಾಲನೆ ಮಾಡಲು ಸಿದ್ದತೆ ಕೈಗೊಳ್ಳುವುದು ಬಿತ್ತನೆ ಮತ್ತು ಮೇವಿನ ಬೀಜಗಳಲಭ್ಯತೆ, ಕಳೆ, ರೋಗ, ಕೀಟ ಮತ್ತು ನೀರಿನ ನಿರ್ವಹಣೆಗಾಗಿ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು.
- ಕೃಷಿ ವಿಶ್ವವಿದ್ಯಾಲಯಗಳಿಂದ ಲಭ್ಯವಿರುವ ವಿವಿಧ ಬೆಳೆಗಳ ತಂತ್ರಜ್ಞಾನಗಳನ್ನು ವಿಜ್ಞಾನಿಗಳೊಂದಿಗೆ ಚರ್ಚಿಸಿ ಸೂಕ್ತವಾದ ಮಾಹಿತಿಗಳನ್ನು ಸಮರ್ಪಕವಾಗಿ ಬಳಸಿಕೊಂಡು ಬೆಳೆ ಬೆಳೆಯುವುದು.
- ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ಬೇಸಾಯ ಕ್ರಮಗಳನ್ನು ಕೈಗೊಳ್ಳುವುದರಿಂದ ಕಡಿಮೆ ಖರ್ಚು ಮತ್ತು ಹೆಚ್ಚಿನ ಹಾನಿಯಾಗದಂತೆ ಉತ್ತಮ ವ್ಯವಸಾಯ ಕೈಗೊಳ್ಳಬಹುದು.
ಹೊಲದ ಸಿದ್ದತೆ:
- ಭೂಮಿಯನ್ನು ಚೆನ್ನಾಗಿ ಹದ ಮಾಡಿದ ನಂತರ ಬಿತ್ತನೆಗೆ 10-15 ದಿವಸಗಳ ಪೂರ್ವದಲ್ಲಿ ಕಾಂಪೋಸ್ಟ್ ಅಥವಾ ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಗಳನ್ನು ಭೂಮಿಗೆ ಸೇರಿಸಬೇಕು.
- ಎರಹುಳು ಗೊಬ್ಬರವನ್ನು ಉಪಯೋಗಿಸುವುದಿದ್ದಲ್ಲಿ ಬಿತ್ತನೆಯ ಸಮಯದಲ್ಲಿ ಸಾಲುಗಳಲ್ಲಿ ಹಾಕಿ ವಿವಿಧ ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು ಬಳಸಬೇಕು.
- ಇದರಿಂದ ಪೋಷಕಾಂಶಗಳ ಉಪಯೋಗದ ದಕ್ಷತೆಯು ಹೆಚ್ಚಾಗಿ ಬೆಳೆಯು ಸಮೃದ್ಧಿಯಾಗಿ ಬೆಳೆಯಲು ಅನುಕೂಲವಾಗುವುದು.
- ಮಣ್ಣಿನ ಆರೋಗ್ಯವನ್ನೂ ಸಹ ಕಾಪಾಡಿಕೊಳ್ಳಬಹುದು.
ಸಾವಯವ ಕೃಷಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಾವಯವ ಗೊಬ್ಬರ ತಯಾರಿಸಿಕೊಳ್ಳುವುದು ಒಂದು ಸವಾಲಿನ ಕೆಲಸ. ಸಾಮಾನ್ಯವಾಗಿ ಸಾವಯವ ವಸ್ತುಗಳು ಸ್ವಾಭಾವಿಕವಾಗಿ ಕಳಿತು ಗೊಬ್ಬರವಾಗಲು 100 ರಿಂದ 120 ದಿನಗಳು ಬೇಕು. ಆದರೆ ವೇಸ್ಟ್ ಡಿ ಕಂಪೋಸರ್ ಬಳಸಿದರೆ 40 ದಿನಗಳಲ್ಲಿ ಗೊಬ್ಬರ ತಯಾರಿಸಬಹುದು. 1 ಎಕರೆಗೆ 200 ಲೀ. ದ್ರಾವಣವನ್ನು ಬಳಸುವುದರಿಂದ ಮಣ್ಣಿನಲ್ಲಿ ಸೂಕ್ಷ್ಮಾಣುಜೀವಿಗಳ ಪ್ರಮಾಣ ವೃದ್ಧಿಯಾಗಿ ಮಣ್ಣು ಫಲವತ್ತಾಗುತ್ತದೆ ಜೊತೆಗೆ ಬೆಳೆ ಇಳುವರಿ ಹೆಚ್ಚಾಗುತ್ತದೆ.
ಜಾಗರೂಕತೆಗೆ ಗಮನ ಕೊಡಿ:
- ದೇಶದಲ್ಲಿ ಈಗ ಕೃಷಿಕರಿಗೆ ಸವಾಲಿನ ದಿನಗಳು ಎದುರಾಗಿವೆ.
- ಕರೋನಾ ಸಾಂಕ್ರಾಮಿಕ ರೋಗದ ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಸರ್ಕಾರವು ಬಿಡುಗಡೆಮಾಡಿದ ಮಾರ್ಗದರ್ಶಿ ಸೂತ್ರಗಳನ್ನು ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವಾಗ ಕಟ್ಟುನಿಟ್ಟಾಗಿ ಪಾಲಿಸಬೇಕು.
- ಮುಖ್ಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕ್ ಧರಿಸಿಕೊಂಡು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಿ.
- ತಮ್ಮ ಮತ್ತು ತಮ್ಮ ಕುಟುಂಬದವರ ಆರೋಗ್ಯದ ಬಗ್ಗೆ ಒತ್ತು ಕೊಡುವ ಮೂಲಕ ಮುಂಗಾರುವನ್ನು ಸಂಭ್ರಮದಿಂದ ಬರಮಾಡಿಕೊಳ್ಳಬಹುದು.
ಕೃಷಿಕರಿಗೆ ಆರೋಗ್ಯವೇ ಪ್ರಧಾನ. ಆರೋಗ್ಯವಾಗಿರಲು ಮಳೆಗೆ ಒಡಾಡುವುದು,ರಕ್ಷಣೆ ಇಲ್ಲದೆ ಹೊಲದ ಕೆಲಸಮಾಡುವುದು ಮಾಡಬೇಡಿ.
ಲೇಖಕರು: ಡಾ. ಶ್ರೀನಿವಾಸ ಬಿ.ವಿ., ಡಾ. ಯುಸುಫ್‍ಅಲಿ ನಿಂಬರಗಿ, ಡಾ. ಜಹೀರ್ ಅಹೆಮದ್ ಮತ್ತು ಡಾ. ರಾಜು ಜಿ. ತೆಗ್ಗಳ್ಳಿ, ಬಿಂದು ಎನ್ , ನಿಸರ್ಗ ಹೆಚ್. ಎಸ್,ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ