ತೋಟಕ್ಕೆ ಹಸಿ ಸೊಪ್ಪುಗಳನ್ನು ಬಳಸುವ ಸರಿಯಾದ ಸಮಯ ಮಳೆಗಾಲದ ಪ್ರಾರಂಭದ ದಿನಗಳು. ಈ ಸಮಯದಲ್ಲಿ ಹಸಿ ಸೊಪ್ಪು ಹಾಕಿದರೆ ಅದು ಕರಗಿಸಿಕೊಡುವ ಜೀವಿಗಳಿಂದ ಚೆನ್ನಾಗಿ ಕರಗುತ್ತದೆ. ಮಳೆಗಾಲ ಪ್ರಾರಂಭದಿಂದ ಕೊನೆತನಕವೂ ಮಣ್ಣು ತೇವ ಭರಿತವಾಗಿರುತ್ತದೆ, ವಾತಾವರಣ ತಂಪಾಗಿರುತ್ತದೆ. ಇವೆಲ್ಲದರ ಅನುಕೂಲ ಬಳಸಿಕೊಂಡು ಮಣ್ಣಿನಲ್ಲಿ ಇರುವ ಬಹುತೇಕ ಎಲ್ಲಾ ಸೂಕ್ಷ್ಮಾಣು ಜೀವಿಗಳೂ ಹೆಚ್ಚು ಚಟುವಟಿಕೆಯಲ್ಲಿರುತ್ತವೆ. ಈಗ ನೀವು ಏನೇ ಸಾವಯವ ತ್ಯಾಜ್ಯ ಹಾಕಿದರೂ ಅದು ತ್ವರಿತವಾಗಿ ಕರಗಿ ಮಣ್ಣಾಗುತ್ತದೆ. ಈಗ ಸೊಪ್ಪು ಸದೆ ಹಾಕಿದರೆ ಮಳೆ ಹನಿಗಳಿಂದಾಗುವ ಮಣ್ಣು ಸವಕಳಿಯನ್ನೂ ತಡೆಯುತ್ತದೆ. ಕಳೆ ನಿಯಂತ್ರಣಕ್ಕೂ ಸಹಕಾರಿ.
ಮಣ್ಣು ಎಂಬ ಬೆಳೆ ಬೆಳೆಸುವ ಮಾಧ್ಯಮ ಸಾವಯವ ಅಂಶ ಚೆನ್ನಾಗಿದ್ದಾಗ ಮಾತ್ರ ರಾಸಾಯನಿಕ ಗೊಬ್ಬರಗಳನ್ನು ಬೆಳೆಗಳು ಅರಗಿಸಿಕೊಡಬಲ್ಲುದು. ಆದ ಕಾರಣ ಕೃಷಿ ವಿಧಾನ ರಾಸಾಯನಿಕ ಇರಲಿ, ಇನ್ಯಾವುದೇ ಇರಲಿ, ಮಣ್ಣನ್ನು ಮಾತ್ರ ಸಾವಯವ ವಸ್ತುಗಳಿಂದ ಚೇತನದಲ್ಲಿ ಇಡಲೇ ಬೇಕು. ಇದಕ್ಕಾಗಿ ಬೆಳೆ ಉಳಿಕೆ ಅಥವಾ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸುತ್ತಾ ಮಣ್ಣನ್ನು ಜೈವಿಕವಾಗಿ ಸುಸ್ಥಿತಿಯಲ್ಲಿ ಇಡಬೇಕು.
ಹಣ್ಣು ಎಲೆ ಹಸುರೆಲೆ ವ್ಯತ್ಯಾಸ:
- ಮುದಿಯಾದ ಎಲೆ ಉದುರುವುದಕ್ಕೆ ಮುಂಚೆ, ನಿಧಾನವಾಗಿ ತನ್ನ ಹಸುರುತನವನ್ನು ಕಳೆದುಕೊಳ್ಳುತ್ತಾ ನಿಧಾನ ಹಳದಿಯಾಗುತ್ತಾ ಹೆಚ್ಚು ಹೆಚ್ಚು ಹಳದಿಯಾಗಿ ಎಲೆ ತೊಟ್ಟಿನ ಭಾಗವನ್ನು ನಿಧಾನವಾಗಿ ಗೆಲ್ಲಿನಿಂದ ಬಿಟ್ಟು ಉದುರುತ್ತದೆ.
- ಈ ಸಿದ್ದತೆಯು ಸುಮಾರು ಸಮಯದಿಂದ ನಡೆಯುತ್ತಿರುತ್ತದೆ.
- ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರತೀಯೊಬ್ಬರೂ ಗಮನಿಸಬಹುದು.
- ಎಲೆ ಬಲಿತು ಹಣ್ಣಾಗುವ ಸಮಯಕ್ಕೆ ಅದು ತನ್ನ ಬಹುತೇಕ ಸತ್ವಾಂಶಗಳನ್ನು ಮರಕ್ಕೆ ಅಥವಾ ಅದರ ಕಿರಿಯ ಎಲೆಗೆ ಬಿಟ್ಟು ಕೊಡುತ್ತದೆ.
- ನಂತರ ಸರ್ವ ತ್ಯಾಗ ಮಾಡಿ ಉದುರುತ್ತದೆ.
- ಆದ ಕಾರಣ ಗರಿಷ್ಟ ಸತ್ವಾಂಶಗಳು ಹಚ್ಚ ಹಸುರು ಎಲೆಗಳಲ್ಲೇ ಇರುತ್ತದೆ.
ಮಳೆಗಾಲದಲ್ಲಿ ಮರಮಟ್ಟುಗಳ ಸೊಪ್ಪು ಸದೆ ಕಡಿಯುವುದರಿಂದ ಗಾಳಿ ಬೆಳೆಕಿನ ಲಭ್ಯತೆಗೆ ಅನುಕೂಲವಾಗುತ್ತದೆ. ವಿಶೇಷವಾಗಿ ಬೆಳಕು ಈ ಸಮಯದಲ್ಲಿ ಎಲ್ಲಾ ಬೆಳೆಗಳಿಗೂ ಅಗತ್ಯ. ಆದ ಕಾರಣ ಹೊಲದ ಬದು, ಹಾಗೂ ಸುತ್ತಮುತ್ತ ಬೆಳೆದಿರುವ ಮರಮಟ್ಟುಗಳ ಸೊಪ್ಪು ಸವರಿದರೆ ಆ ಸೊಪ್ಪನ್ನು ಹೊಲಕ್ಕೆ ಹಾಕಿ.
ಒಣ ತ್ಯಾಜ್ಯಗಳು ಮತ್ತು ಅವುಗಳ ಪೋಷಕಾಂಶಗಳು:
- ನಾವೆಲ್ಲಾ ಸಾವಯವ ಮೂಲವಾಗಿ ಕಾಂಪೋಸ್ಟು ಮಾಡಲು, ಹೊಲಕ್ಕೆ, ಬೆಳೆ ಬುಡಕ್ಕೆ ಮುಚ್ಚಿಗೆಯಾಗಿ ಒಣಗಿದ ಬೆಳೆ ತ್ಯಾಜ್ಯಗಳನ್ನು (ದರಕು) ಇತ್ಯಾದಿಗಳನ್ನು ಬಳಸುತ್ತೇವೆ.
- ಆದರೆ ಈ ಒಣ ವಸ್ತುಗಳಲ್ಲಿ ಅಂದರೆ ಸಸ್ಯಹೊಲಕ್ಕೆ ಹಸಿ ಸೊಪ್ಪು ಈ ಸಮಯದಲ್ಲಿ ಹಾಕಿ,
- ಇದರಿಂದ ಎಷ್ಟೊಂದು ಪ್ರಯೋಜನ ಇದೆ ಗಮನಿಸಿ.
- ಬಲಿತ ಎಲೆಗಳಲ್ಲಿ ಲಿಗ್ನಿನ್ ಪ್ರಮಾಣವು ಅಧಿಕವಾಗಿರುತ್ತವೆ.
- ಇಂಗಾಲ ಸಾರಜನಕ ಅನುಪಾತ ಹೆಚ್ಚು ಅಂತರರದಲ್ಲಿ ಇರುತ್ತದೆ.
- ಹೀಗಿದ್ದರೆ ಅದರಲ್ಲಿರುವ ಒಟ್ಟು ಪೋಷಕಗಳ ಪ್ರಮಾಣ ಕುಗ್ಗುತ್ತದೆ.
- ಆದ ಕಾರಣ ಒಣಗಿ ಕೆಳಗೆ ಉದುರಿದ ಎಲೆಗಳನ್ನು ಮಣ್ಣಿಗೆ ಸೇರಿಸಿದಾಗ ಅಥವಾ ಕಾಂಪೋಸ್ಟು ಮಾಡಿದಾಗ ಅವು ನಿಧಾನವಾಗಿ ಕಳಿಯುತ್ತದೆ.
- ಅದರಲ್ಲಿರುವ ಒಟ್ಟು ಪೋಷಕದ ಸ್ವಲ್ಪ ಭಾಗ ಮಾತ್ರ ವಿಮೋಚನೆಗೊಳ್ಳುತ್ತದೆ.
- ಬಹು ಕಾಲದವರೆಗೂ ಅರ್ಧದಷ್ಟು ಪ್ರಮಾಣದ ಪೋಷಕಗಳು ಕಳಿಯದೇ ಉಳಿಯುತ್ತವೆ. ಇದನ್ನು ಲಿಗ್ನೋ ಪ್ರೋಪಿನೇಡ್ ಎನ್ನುತ್ತಾರೆ.
ಹಸಿ ಎಲೆಗಳನ್ನು ಬಳಸಿದಾಗ ಅದರ ಲಭ್ಯತೆ:
- ಹಸುರಾಗಿರುವ ಹಸಿ ಎಲೆಗಳನ್ನು ಅಥವಾ ಸಣ್ಣ ಸಣ್ಣ ಗೆಲ್ಲುಗಳನ್ನು ಕಾಂಪೋಸ್ಟು ಮಾಡಿದರೆ ಅಥವಾ ಅದನ್ನು ಬೆಳೆಗಳ ಬುಡಕ್ಕೆ ಹಾಕಿದರೆ ಅದು ಬೇಗ ಕರಗುತ್ತದೆ.
- ಇದರಲ್ಲಿ ಇಂಗಾಲ ಮತ್ತು ಸಾರಜನಕದ ಅನುಪಾತವು ಕಡಿಮೆ ಅಂತರದಲ್ಲಿ ಇರುತ್ತವೆ.
- ಸಾರಜನಕ ಮತ್ತು ಇತರ ಪೋಷಕಗಳ ಶೇಕಡಾವಾರು ಪ್ರಮಾಣವು ಅಧಿಕ.
- ಆದ್ದರಿಂದ ಹಸುರು ಸೊಪ್ಪು ಅಥವಾ ಹಸುರೆಲೆ ಸೊಪ್ಪು ಸದೆಗಳನ್ನು ಮಣ್ಣಿಗೆ ಸೇರಿಸಿದಾಗ ಅವು ಅತೀ ಸುಲಭವಾಗಿ ಮತ್ತು ವೇಗವಾಗಿ ಕಳಿತು ಅವುಗಳೊಳಗಿನ ಪೋಷಕಗಳು ವಿಮೋಚನೆಗೊಳ್ಳುತ್ತವೆ.
- ಇದಲ್ಲದೆ ಕಳಿಯದೇ ಉಳಿಯುವ ಸಾವಯವ ವಸ್ತುವಿನ ಪ್ರಮಾಣ ತುಂಬಾ ಕಡಿಮೆ ಇರುತ್ತದೆ.
ಒಂದು ಕಡೆ ಹಸುರು ಸೊಪ್ಪು ಕಡಿದು ರಾಶಿ ಹಾಕಿ. ಮತ್ತೊಂದು ಕಡೆ ಒಣ ದರಕು ಇತ್ಯಾದಿಗಳನ್ನು ರಾಶಿ ಹಾಕಿ. ಎರಡನ್ನೂ ಒಂದು ತಿಂಗಳ ತನಕ ಹಾಗೇ ಬಿಡಿ. ಹಸುರು ಸೊಪ್ಪು ಹಾಕಿದ ರಾಶಿಯಲ್ಲಿ ಬಹುತೇಕ ಕಳಿತು ಕರಗಿರುತ್ತದೆ. ದರಕು ಹೆಚ್ಚಿನವು ಕರಗದೆ ಉಳಿದಿರುತ್ತವೆ. ಇವೆರಡನ್ನೂ ಪ್ರತ್ಯೇಕವಾಗಿ ಬೇರೆ ಬೇರೆ ಬೆಳೆಗಳಿಗೆ ( ಅಲ್ಪಾವಧಿ ತರಕಾರಿ) ಹಾಕಿದಾಗ ಹಸುರು ಸೊಪ್ಪು ಬಳಸಿದ ಕಡೆ ಸಸ್ಯ ಹಚ್ಚ ಹಸುರಾಗಿ ಬೆಳೆಯುತ್ತದೆ. ಒಣ ವಸ್ತು ಹಾಕಿದಲ್ಲಿ ಅಂತಹ ಬೆಳವಣಿಗೆ ಇರುವುದಿಲ್ಲ.
ಹಸುರು ಸೊಪ್ಪಿನ ವಿಶೇಷ:
- ಹಸುರು ಸೊಪ್ಪಿನ ವಿಶೇಷ ಎಂದರೆ ಅದರಲ್ಲಿ ಸತ್ವಾಂಶಗಳ ಲಭ್ಯತೆ ತ್ವರಿತ ಮತ್ತು ಅಧಿಕ.
- ಹಳದಿಯಾಗಿ ಉದುರುವ ಹಂತಕ್ಕೆ ಬಂದ ಎಲೆಯಲ್ಲಿದ್ದ ಸಾರಜನಕ, ರಂಜಕ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಇತ್ಯಾದಿ ಪೋಷಕಗಳು ಪರಿವರ್ತನೆ ಹೊಂದಿ ಕರಗುವ ರೂಪವನ್ನು ತಾಳಿ ಕಾಂಡದ ಮೂಲಕ ಚಿಗುರುಗಳಿಗೆ ಸಾಗುತ್ತದೆ.
- ಹೀಗಾಗಿ ಒಣಗಿದ ಎಲೆಗಳಲ್ಲಿ ನಷ್ಟವಾದ ಪೋಷಕಗಳು ಹಸುರು ಎಲೆಗಳಲ್ಲಿ ಸಂಗ್ರಹವಿರುತ್ತದೆ.
- ಇದು ಸೃಷ್ಟಿಯ ವೈಚಿತ್ರ್ಯ.
- ಹಸುರು ಎಲೆಗಳನ್ನು ಸಸ್ಯದಿಂದ ಪ್ರತ್ಯೇಕಿಸಿ ಒಣಗಲು ಬಿಟ್ಟಾಗ ಎಲೆಯೊಳಗಿನ ಸಾವಯವ ರೂಪದ ಪೋಷಕಗಳು ರೂಪಾಂತರ ಹೊಂದಲು ಆಸ್ಪದವೇ ಸಿಗುವುದಿಲ್ಲ.
- ಅವುಗಳಲ್ಲಿ ಎಲ್ಲೂ ಪೋಷಕಗಳು ಕಡಿಮೆಯಾಗುವುದಿಲ್ಲ.
ಮೃದುವಾದ ಯಾವುದೇ ಸಸ್ಯವನ್ನು ಹಸುರು ಗೊಬ್ಬರ ಎಂದು ಬಳಸಿದರೆ ಅದರ ಸತ್ವಾಂಶಗಳು ಅಧಿಕ ಮತ್ತು ಬೇಗ ವಿಮೋಚನೆಗೊಳ್ಳುತ್ತದೆ. ಲಿಗ್ನಿನ್ ಕಡಿಮೆ ಸಾಧ್ಯವಾದಷ್ಟು ದ್ವಿದಳ ಜಾತಿಯ ಮರಮಟ್ಟು, ಸಸ್ಯದ ಸೊಪ್ಪು ಸದೆಗಳನ್ನು ಬಳಸಿದರೆ ಉತ್ತಮ.
ಲೇಖಕರು: ಲತಾ ಎಸ್. ತಾಲೂಕು ತಾಂತ್ರಿಕ ಅಧಿಕಾರಿ,(ಆತ್ಮ ಯೋಜನೆ) ಶಿಕಾರೀಪುರ. ಮಾನಸ ಎಲ್ ಪಿ ತಾಂತ್ರಿಕ ಸಹಾಯಕರು ( ಆತ್ಮ ಯೋಜನೆ) ಶಿಕಾರಿಪುರ.
end of the article:——————————————————————————–
search words: Green leaf manure# Green leaf and Dried leaf# Decomposition of green leaf# Contents in green leaf# Organic matter