ನಾನು ಅಡಿಕೆ ಸಸಿ ಹಾಕಿದ್ದೀನೆ. ಸಾವಿರ ಸಾವಿರ ಲೆಕ್ಕ ಕೊಡಬಹುದು. ಎಂಬುದಾಗಿ ಜನ ಹೇಳುತ್ತಾರೆ. ಒಂದು ವರ್ಷದ ನಂತರ ನೆಟ್ಟ ಗಿಡದಲ್ಲಿ ಹಲವು ಗಿಡ ಸತ್ತು ಹೋಗಿದೆ ಎನ್ನುತ್ತಾರೆ. ಕೆಲವು ಗಿಡ ಮಾತ್ರ ಚೆನ್ನಾಗಿ ಬೆಳೆದಿದೆ. ಉಳಿದವು ನೆಟ್ಟ ಹಾಗೆ ಇದೆ ಎನ್ನುತ್ತಾರೆ. ಇದಕ್ಕೆ ಕಾರಣ ಮತ್ತೇನೂ ಅಲ್ಲ. ಪಾಲನೆಯಲ್ಲಿ ನಿರ್ಲಕ್ಷ್ಯ.
- ಎಳೆಯ ಪ್ರಾಯದಲ್ಲಿ ಸಸಿಗಳನ್ನು ಬೆಳೆಸುವುದು ಒಂದು ತಪಸ್ಸಿನ ತರಹ.
- ಗಿಡ ನೆಟ್ಟು ಬಿಟ್ಟು, ನೀರಾವರಿ ಮಾಡಿ ಗೊಬ್ಬರ ಕೊಟ್ಟರೆ ಸಾಲದು.
- ಎಳೆಯ ಪ್ರಾಯದಲ್ಲಿ ಅದನ್ನು ನಿತ್ಯ ಗಮನಿಸುತ್ತಿದ್ದು, ಅದರ ಬೇಕು, ಬೇಡಗಳನ್ನು ಪೂರೈಸುತ್ತಿರಬೇಕು.
- ನಾವು ಮಕ್ಕಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆಯೋ ಅಷ್ಟೇ ಜೋಪಾನವಾಗಿ ಎಳೆ ಪ್ರಾಯದಲ್ಲಿ ಸಸಿಯನ್ನು ನಿಗಾ ವಹಿಸಿ ನೋಡಿಕೊಳ್ಳಬೇಕು.
ಎಳೆ ಗಿಡದ ಆಯ್ಕೆ ಹೀಗಿರಲಿ:
- ನೆಡುವ ಸಸಿ ಕನಿಷ್ಟ ಸುಳಿ ಸೇರಿ ಕನಿಷ್ಟ 5 ಹಚ್ಚ ಹಸುರಾದ ಎಲೆಗಳನ್ನು ಹೊಂದಿರಬೇಕು.
- ಅದಕ್ಕಿಂತ ಕಡಿಮೆ ಎಲೆಗಳು ಇರುವ ಗಿಡದ ಪಾಲನೆ ತುಂಬಾ ಕಷ್ಟ.
- ಎಲೆಗಳು ಹಳದಿಯಾಗಿದ್ದರೆ, ಎಲೆ ದಂಟು ಉದ್ದವಾಗಿದ್ದರೆ ಅಂತಹ ಗಿಡಗಳನ್ನು ನಾಟಿಮಾಡಿದರೆ ತಕ್ಷಣ ಅದಕ್ಕೆ ಆಂಶಿಕ ನೆರಳನ್ನು ಒದಗಿಸಬೇಕು.
- ಇಲ್ಲವಾದರೆ ಬಿಸಿಲಿನ ತಾಪಕ್ಕೆ ಅದರ ಎಲೆಗಳು ತಾಳಿಕೊಳ್ಳಲಾಗದೆ ಹರಿತ್ತು ಒಣಗುತ್ತದೆ.
- ಎಲೆ ತೊಟ್ಟು ಉದ್ದ ಇರುವ ಸಸಿಗಳು ಪಾತಿಯಲ್ಲಿ ಹತ್ತಿರ ಹತ್ತಿರ ಇಟ್ಟು ನೆರಳಿನಲ್ಲಿ ಬೆಳೆದ ಗಿಡಗಳಾಗಿರುತ್ತವೆ.
- ಇವು ತೆರೆದ ವಾತಾವರಣಕ್ಕೆ ಬಂದಾಗ ಹೊರ ವಾತಾವರಣದ ತಾಪಮಾನವನ್ನು ಸಹಿಸಿಕೊಳ್ಳದೆ , ತಕ್ಷಣ ಹರಿತ್ತು ನಾಶವಾಗುತ್ತದೆ.
- ಎಲೆ ದಂಟು ಭಾಗ ಜೋತು ಬೀಳುತ್ತದೆ. ಇದು ಹೊಸ ಸುಳಿ ಬರಲು ಅಡ್ದಿಯಾಗುತ್ತದೆ.
- ಸಸಿ ಖರೀದಿ ಮಾಡುವಾಗ ಉದ್ದದ ಗರಿ ದಂಟುಗಳಿರುವ ಸಸಿಯನ್ನು ಆಯ್ಕೆ ಮಾಡಬೇಡಿ.
- ಎಳೆಯ ಸಸಿಗಳಾಗಿದ್ದರೆ ತಂದು ಒಂದೆಡೆ ಅರ್ಧ ಅಡಿ ಅಂತರದಲ್ಲಿ ಬೆಳಕು ಬೀಳುವ ಜಾಗದಲ್ಲಿ ( ಬೇಸಿಗೆ ಕಾಲ ಹೊರತಾಗಿ) ಇಟ್ಟು ಪತ್ರ ಸಿಂಚನದ (Folier spray) ಮೂಲಕ ಪೋಷಕಾಂಶಗಳನ್ನು ನೀಡಿ ಹೆಚ್ಚು ಬೆಳವಣಿಗೆ ಅಗುವಂತೆ ಮಾಡಿ.
- ಸಸಿಗಳಲ್ಲಿ ಹೆಚ್ಚು ಎಲೆ ಇದ್ದರೆ ಅದು ಸ್ವತಂತ್ರವಾಗಿ ಹೆಚ್ಚು ಆಹಾರ ತಯಾರಿಸಿಕೊಂಡು ಬೆಳೆವಣಿಗೆಯನ್ನು ಹೆಚ್ಚಿಸಿಕೊಳ್ಳುತ್ತದೆ ಎಂಬುದು ಎಲ್ಲಾ ರೈತರಿಗೂ ತಿಳಿದಿರಲಿ.
ಗಿಡ ಖರೀದಿ ಮಾಡುವಾಗ ಸ್ವಲ್ಪ ಹೆಚ್ಚು ಗಿಡವನ್ನು ಖರೀದಿಸಿ ಅದನ್ನು ಪ್ರತ್ಯೇಕ ಪಾತಿಯಲ್ಲಿ ದೂರ ದೂರ ಇಟ್ಟು ಬೆಳೆಸಿ, ಅದಕ್ಕೆ ಉತ್ತಮ ಗೊಬ್ಬರ , ನೀರು ಕೊಟ್ಟು ಬೆಳೆಸಿ. ಅದು ಹೊಲದಲ್ಲಿ ನೆಡುವ ಗಿಡ ಬೆಳೆದಂತೆ ಬೆಳೆಯುತ್ತಿರಲಿ. ಇದು ಬೆಳವಣಿಗೆ ಕುಂಠಿತವಾಗಿರುವ ಸಸಿಗಳನ್ನು ತೆಗೆದು ಬದಲಾಯಿಸಲು ಬೇಕಾಗುತ್ತದೆ.
- ಮೊದಲ ಮೂರು ವರ್ಷದ ತನಕ ಬಾಳೆಯನ್ನು ಮಾತ್ರ ಮಿಶ್ರ ಬೆಳೆಯಾಗಿ ನೆಡಬೇಡಿ. ಶುಂಠಿ, ಅನನಾಸು, ಅರಶಿನ, ತರಕಾರಿ ಬೆಳೆಸಬಹುದು.
ನಾಟಿ ಮಾಡುವುದು ಮತ್ತು ಆರೈಕೆ:
- ಸಸಿ ನಾಟಿ ಮಾಡುವಾಗ ಬುಡ ಭಾಗದ ಮಣ್ಣು ಸಡಿಲವಾಗಿರಲಿ. ಬುಡದ ಸುತ್ತ ಬರುವಂತೆ ಕನಿಷ್ಟ 2 ಕಿಲೊ ದಷ್ಟಾದರೂ ಹುಡಿಯಾದ ಕಾಂಪೋಸ್ಟು ಗೊಬ್ಬರವನ್ನು ಹಾಕಿ ನಾಟಿ ಮಾಡಬೇಕು.
- ನಾಟಿ ಮಾಡಿದ ವರ್ಷ ಬುಡ ಭಾಗದಲ್ಲಿ ನೀರು ನಿಲ್ಲಲೇ ಬಾರದು.
- ನೆಡುವಾಗ ಬೇರು ಬರಲು ಅನುಕೂಲವಾಗುವ ರಾಕ್ ಫೋಸ್ಫೇಟ್ 50-100 ಗ್ರಾಂ ತನಕ ಮಣ್ಣಿಗೆ ಸೇರಿಸಿರಿ.
- ಇದು ಲಭ್ಯವಿಲ್ಲದ ಕಡೆ, DAP ಗೊಬ್ಬರವನ್ನು 20 ಗ್ರಾಂ ಪ್ರಮಾಣದಲ್ಲಿ ಬುಡದ ಮಣ್ಣು ಮತ್ತು ಕಾಂಪೋಸ್ಟ್ ಗೊಬ್ಬರದೊಂದಿಗೆ ಮಿಶ್ರಣ ಮಾಡಿ.
- ಗಿಡವು ಹೊರ ವಾತಾವರಣವನ್ನು ಹೊಂದಿಕೊಳ್ಳುವ ತನಕ ನೆರಳನ್ನು ಮಾಡಬೇಕು.
- ಬುಡ ಭಾಗದಲ್ಲಿ ಸೆಣಬು, ತೊಗರಿ ಬೀಜವನ್ನು ಬಿತ್ತಿ ಅದು ಬೆಳೆದ ಮೇಲೆ ಪಶ್ಚಿಮ ಮತ್ತು ನೈರುತ್ಯ ದಿಕ್ಕಿನಲ್ಲಿ ಒಂದು ಗಿಡವನ್ನು ಉಳಿಸಿ ಉಳಿದದ್ದನ್ನು ಬುಡಕ್ಕೆ ಕಿತ್ತು ಹಾಕಿ.
- ಮುಂದಿನ ಮಳೆಗಾಲ ಬರುವ ತನಕ ಪಶ್ಚಿಮ ದಿಕ್ಕಿನಲ್ಲಿರುವ ಗಿಡ ಉಳಿಸಿರಿ.
- ಅದರ ಬೆಳವಣಿಗೆ ಹೆಚ್ಚಾಗದಂತೆ ಅಡಿಕೆ ಸಸಿಗೆ ನೆರಳು ಹೆಚ್ಚಾಗದಂತೆ ಸವರುತ್ತಾ ಇರಿ.
- ಸಮತೋಲನ ಪ್ರಮಾಣದಲ್ಲಿ ಪೋಷಕಗಳನ್ನು ಕೊಡುತ್ತಿದ್ದರೆ, ಸಸಿಗಳು ಪ್ರಖರ ಬಿಸಿಲಿಗೂ ಸೊರಗದೆ ಬೆಳೆಯುತ್ತಾ ಇರುತ್ತದೆ.
ಎಳೆ ಪ್ರಾಯದ ಸಸಿಗಳಿಗೆ ಮೈಟ್ ಮತ್ತು ಸುಳಿ ತಿಗಣೆ ಸಮಸ್ಯೆ ಹೆಚ್ಚಾಗಿರುತ್ತದೆ. ಇದು ನೆರಳು ಇದ್ದರೆ ಕಡಿಮೆ. ಆದಾಗ್ಯೂ ಚಳಿಗಾಲದ ನಂತರ ಎರಡು ಸಾರಿಯಾದರೂ ಎಲೆಯ ಅಡಿ ಭಾಗಕ್ಕೆ ನೀರಿನಲ್ಲಿ ಕರಗುವ ಗಂಧಕ ( wetteble sulpher) ಸಿಂಪಡಿಸಿರಿ.
- ಗಿಡಕ್ಕೆ ವರ್ಷಕ್ಕೆ ಒಂದೇ ಬಾರಿ ಗೊಬ್ಬರ ಕೊಡಬೇಡಿ. ವಿಭಜಿತ ಕಂತುಗಳಲ್ಲಿ ಸ್ವಲ್ಪ ಸ್ವಲ್ಪವೇ ಪ್ರತೀ ತಿಂಗಳೂ ಕೊಡಬೇಕು.
- ಸಸಿಗಳ ಬೆಳವಣಿಗೆ ಗಮನಿಸುತ್ತಿದ್ದು, ಯಾವುದು ಬೆಳವಣಿಗೆ ಕುಂಠಿತವಾಗಿದೆಯೋ ಅಂತಹ ಗಿಡದ ಬುಡ ಭಾಗವನ್ನು ಮತ್ತು ಎಲೆಯನ್ನು ಪರೀಕ್ಷಿಸಿ.
- ಸುಳಿ ತಿಗಣೆ ಮುಂತಾದ ಎಲೆ ಕತ್ತರಿಸುವ ಕೀಟ ಇದ್ದರೆ ಕೀಟನಾಶಕ ಸಿಂಪರಣೆ ಮಾಡಬೇಕು.
- ಬೆಳವಣಿಗೆ ಕುಂಠಿತವಾಗಿರುವ ಗಿಡಕ್ಕೆ ಶೇ.1 (1ಕಿಲೋ 19:19:19 ,100 ಲೀ. ನೀರು ಮಿಶ್ರಣ ಮಾಡಿ ಅದಕ್ಕೆ 50 ಗ್ರಾಂ ಸೂಕ್ಷ್ಮ ಪೋಷಕಾಂಶ ಸೇರಿಸಿ) ಎಲೆಗಳಿಗೆ ಸಿಂಪರಣೆ ಮಾಡಿ.
- ಇದನ್ನು ಎಲ್ಲಾ ಗಿಡಗಳಿಗೂ ಎರಡು ಬಾರಿಯಾದರೂ ಮಾಡಿದರೆ ಉತ್ತಮ. ಬೆಳವಣಿಗೆ ಕುಂಠಿತವಾಗಿರುವ ಗಿಡವಿದ್ದರೆ ಅದನ್ನು ತೆಗೆದು ಬೇರೆ ಉತ್ತಮ ಗಿಡವನ್ನು ನೆಡುವುದು ಸೂಕ್ತ.
ನೀರಾವರಿ ಮತ್ತು ಗೊಬ್ಬರ:
- ಎಳೆ ಗಿಡಗಳಿಗೆ ಹನಿ ನೀರಾವರಿ ವ್ಯವಸ್ಥೆ ಉತ್ತಮ. ಇದರಲ್ಲಿ ನೀರು ಏಕ ಪ್ರಕಾರವಾಗಿ ಬೀಳುತ್ತದೆ.
- ಮೊದಲ ವರ್ಷ ಬುಡ ಭಾಗ ಒದ್ದೆಯಾಗುವಂತೆ ಡ್ರಿಪ್ಪರನ್ನು ಹಾಕಬೇಕು.
- ಸಸಿ ಬೆಳೆದಂತೆ ಬುಡದಿಂದ 1 ಅಡಿ ದೂರದಲ್ಲಿ ಎರಡೂ ಕಡೆ ಡ್ರಿಪ್ಪರನ್ನು ಹಾಕಬೇಕು. ದಿನಕ್ಕೆ 10 ಲೀ. ನೀರು ಗರಿಷ್ಟ ಸಾಕು.
- ಒಂದು ವರ್ಷದ ಗಿಡಗಳಿಗ ಶಿಫಾರಿತ ಗೊಬ್ಬರದ ಪ್ರಮಾಣ 35 ಗ್ರಾಂ ಸಾರಜನಕ, 15 ಗ್ರಾಂ ರಂಜಕ ಮತ್ತು 45 ಗ್ರಾಂ ಪೊಟ್ಯಾಶ್.
- ನೇರ ಗೊಬ್ಬರ ಕೊಡುವುದಾದರೆ 60 ಗ್ರಾಂ ಯೂರಿಯಾ, 30 ಗ್ರಾಂ DAP ಮತ್ತು 75 ಗ್ರಾಂ ಪೊಟ್ಯಾಶ್ ಕೊಡಬಹುದು.
- ಇದನ್ನು ಕನಿಷ್ಟ ಮೂರು ಕಂತುಗಳಲ್ಲಿ ಕೊಡುವುದು ಉತ್ತಮ.
- ಎರಡನೇ ವರ್ಷ ಇದರ ದುಪ್ಪಟ್ಟು ಗೊಬ್ಬರ ಕೊಡಬೇಕು.
- ಅಧಿಕ ಸಾವಯವ ಗೊಬ್ಬರ ಕೊಟ್ಟರೂ ಪೋಟ್ಯಾಶ್, ರಂಜಕ ಕೊಡುವುದರಿಂದ ಸಸಿ ಆರೋಗ್ಯವಾಗಿ ಬೆಳೆಯುತ್ತದೆ.
ಅಡಿಕೆ ಸಸಿಯನ್ನು ಪ್ರಾರಂಭದ ಮೂರು ವರ್ಷ ಜೋಪಾನವಾಗಿ ಸಾಕಬೇಕು.ಈ ಆರೈಕೆಯೇ ಅದರ ಭವಿಷ್ಯದ ಬೆಳೆವಣಿಗೆಯನ್ನು ನಿರ್ಧರಿಸುತ್ತದೆ. ಈ ಸಮಯದಲ್ಲಿ ನಿರ್ಲಕ್ಷ್ಯ ಮಾಡಿದರೆ ಆ ಸಸಿ ಮುಂದೆ ಏಳಿಗೆಯಾಗುವುದಿಲ್ಲ.
End of the article:————————————————–
Search words: areca planting# areca plant nourishing# manuring to areca plant# care of young plant# replacing of weak plant# foliar spray for quick growth# selection of areca plant#