ಈಗ ನಿಮ್ಮಲ್ಲಿ ಹಲಸಿನ ಕಾಯಿ ಇದೆ. ಮಾವಿನ ಹಣ್ಣಿನ ಗೊರಟು ಇದೆ. ಹಾಗೆಯೇ ತಿಂದ ಇತರ ಹಣ್ಣು ಹಂಪಲುಗಳೂ ಇರಬಹುದು. ಅದನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ. ಪ್ಲಾಸ್ಟಿಕ್ ತೊಟ್ಟೆಗೆ ಹಾಕಿ ಸಸಿ ಮಾಡಿಕೊಳ್ಳಿ. ಯಾವಾಗಲಾದರೂ ಒಂದು ಉತ್ತಮ ಹಲಸು, ಮಾವು ಹಣ್ಣು ಹಂಪಲು, ಕೊಡುವ ಮರ ಸಿಕ್ಕರೆ ಅಲ್ಲಿಂದ ಒಂದೆರಡು ಗೆಲ್ಲು ತಂದು ಸಸಿ ಮಾಡಿಕೊಳ್ಳಬಹುದು. ಕಸಿ ಕಲಿಯುವುದೇ ಹಾಗೆ.
ಯಾರನ್ನೂ ಅವಲಂಭಿಸದೇ ಬರೇ ಓದಿ, ನೋಡಿ ಮಾಡಬಹುದಾದ ಕಸಿ ವಿಧಾನ ಎಂದರೆ ಮೃದು ಕಾಂಡ ಕಸಿ. ಇದರಲ್ಲಿ ಯಶಸ್ಸು ಹೆಚ್ಚು. ಮಕ್ಕಳೂ ಸಹ ಮಾಡಬಹುದಾದ ಈ ವಿಧಾನದಲ್ಲಿ ತಿಳಿದುಕೊಳ್ಳಬೇಕಾದುದು ಕಸಿ ಕಡ್ಡಿಗಳ ಆಯ್ಕೆ ಮಾತ್ರ.
ಇಲ್ಲಿ ಕೊಟ್ಟಿರುವುದು ಸಾಂದರ್ಭಿಕ ಚಿತ್ರ. ಇದೇ ರೀತಿಯಲ್ಲಿ ಮನೆಬಳಕೆಯ ತರಕಾರಿಗಳಾದ ಟೊಮಟೋ, ಬದನೆ, ಮೆಣಸು ಇತ್ಯಾದಿ ಕಸಿ ಮಾಡಬಹುದು.ಕಾಡು ಬದನೆಯ ಸಸಿಗೆ ಟೊಮಟೋ ಕಸಿ, ಬದನೆ ಕಸಿ ಮಾಡಿದರೆ ಅದು ಬಹುವಾರ್ಷಿಕ ಸಸ್ಯವಾಗುತ್ತದೆ. ಸೂಜಿ ಮೆಣಸಿಗೆ ಬೇರೆ ಮೆಣಸನ್ನು ಕಸಿ ಮಾಡಿದರೆ ಅದು ಧೀರ್ಘಾವಧಿ ಸಸ್ಯವಾಗುತ್ತದೆ.
- ಕಸಿ ವಿಧಾನವು ಪ್ರತೀಯೊಬ್ಬ ಕೃಷಿಕನಿಗೂ ಗೊತ್ತಿರಬೇಕಾದ ವಿಷಯ.
- ಬರೇ ಕೃಷಿಕ ಮಾತ್ರವಲ್ಲ. ಮನೆ ಹಿತ್ತಲು ಉಳ್ಳವರೂ ಸಹ ಕಸಿ ಮಾಡುವುದನ್ನು ತಿಳಿದಿರಬೇಕು.
- ಕೃಷಿಕನ ಹೊಲದಲ್ಲಿ ಕಸಿ ಕಟ್ಟಲು ಹಲವು ಇರುತ್ತವೆ.
- ಮನೆ ಹಿತ್ತಲು ಉಳ್ಳವರಲ್ಲಿ ಏನಿಲ್ಲವೆಂದರೂ ಹೂವಿನ ಗಿಡಕ್ಕಾದರೂ ಕಸಿ ಮಾಡಲು ಅನುಭವ ಬೇಕು.
- ಎಲ್ಲರಿಗೂ ಕಸಿ ಮಾಡಲು ಸುಲಭದ್ದು ಮೃದು ಕಾಂಡ ಕಸಿ.
ಮೃದು ಕಾಂಡ ಕಸಿ ಹೇಗೆ:
- ಹೆಸರೇ ಹೇಳುವಂತೆ ಇದು ಮೆದು ಕಾಂಡಕ್ಕೆ ಕಸಿ ಮಾಡುವುದು.
- ಮೆದು ಕಾಂಡ ಎಂದರೆ ಅದು ಇನ್ನೇನು ಹಸಿರು ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗುವ ಹಂತ.
- ಇದನ್ನು ಎಳೆ ಬೀಜದ ಸಸಿಗೂ ಮಾಡಬಹುದು, ಇಲ್ಲವೇ ಮರದ ಚಿಗುರಿಗೂ ಮಾಡಬಹುದು.
- ಒಟ್ಟಿನಲ್ಲಿ ಚಿಗುರು ಕಡ್ಡಿಗೆ ಮಾಡುವ ಕಸಿ. ಇದರ ಉದ್ದೇಶ ಅಪೇಕ್ಷಿತ ಗುಣದ ಹೊಸ ಸಸ್ಯದ ಸೃಷ್ಟಿ ಅಷ್ಟೇ.
- ತೋಟಗಾರಿಕ ಬೆಳೆಗಳಲ್ಲಿ ಮಾವು, ಹಲಸು, ಗೇರು, ನೇರಳೆ, ಪೇರಳೆ ಹೀಗೆ ಬಹುತೇಕ ಎಲ್ಲದಕ್ಕೂ ಈ ಕಸಿ ಮಾಡಬಹುದು.
ಕಸಿ ಮಾಡಲು ಒಂದೋ ಬೀಜ ಬಿತ್ತಿ ಸಸಿ ಮಾಡಿಕೊಂಡಿರಬೇಕು. ಇಲ್ಲವೇ ಇರುವ ಮರದ ಗೆಲ್ಲಿಗೆ ಕಸಿ ಕಡ್ಡಿಯನ್ನು ಪೋಣಿಸಿ ಕಸಿ ಮಾಡಬಹುದು. ಬೀಜದ ಸಸಿಗೆ ಕಸಿ ಮಾಡಿದಾಗ ಅದು ಹೊಸ ಸಸಿ ತಳಿಯಾಗುತ್ತದೆ. ಇರುವ ಮರದ ಗೆಲ್ಲಿಗೆ ಕಸಿ ಮಾಡಿದಾಗ ಆ ಸಸ್ಯದಲ್ಲಿ ಮತ್ತೊಂದು ಹೊಸ ತಳಿಯ ಗೆಲ್ಲು ಬೆಳೆಯುತ್ತದೆ.
ಕಸಿ ಕಡ್ಡಿಗಳು ಹೇಗಿರಬೇಕು:
- ಕಸಿಕಡ್ಡಿ ಎಂದರೆ ಹೊಸ ತಲೆಮಾರಿನ ಸಸಿ. ಮುಂದೆ ಇದು ಅದರ ಗುಣವನ್ನು ತೋರ್ಪಡಿಸುತ್ತದೆ.
- ಅದಕ್ಕಾಗಿ ಆರೋಗ್ಯವಂತ ಸಸ್ಯದ ಮೂಲದಿಂದ ಕಸಿ ಕಡ್ಡಿಯನ್ನು ಆಯ್ಕೆ ಮಾಡಬೇಕು.
- ಯಾವುದೇ ರೋಗ ಇರುವ, ಅನುತ್ಪಾದಕ ಸಸ್ಯದ ಗೆಲ್ಲನ್ನು ಬಳಕೆ ಮಾಡಬಾರದು.
- ಕಸಿ ಕಡ್ಡಿಯಲ್ಲಿ ಮುಖ್ಯವಾಗಿ ಇರಬೇಕಾದುದು, ಸುಪ್ತಾವಸ್ಥೆಯಲ್ಲಿರುವ ಮೊಳಕೆ.
- ಅದು ಗೆಲ್ಲಿನ ತುದಿ ಭಾಗ. ಅದು ಯಾವುದೇ ರೀತಿಯಲ್ಲಿ ಘಾಸಿಗೊಂಡಿರಬಾರದು.
- ಚೂಪಾದ ಮೊಗ್ಗು ಇರುವ ಕಡ್ಡಿಯನ್ನು ಆಯ್ಕೆ ಮಾಡಬೇಕು.
ಮುಂಚಿತವಾಗಿ ಆಯ್ಕೆ ಮಾಡುವ ಕಸಿ ಕಡ್ಡಿಯನ್ನು ಕಸಿಗಾಗಿ ತಯಾರಿ ಮಾಡುವ ಕೆಲಸ ಇರುತ್ತದೆ. ಸುಮಾರಾಗಿ ½ ದಿಂದ 2/3 ಅಡಿ ಉದ್ದದ ತೀರಾ ಎಳೆಯದಾಗಿರದ ಹಸುರು ಬಣ್ಣಕ್ಕೆ ತಿರುಗಿದ ಕಸಿ ಕಡ್ಡಿಯ ಎಲೆಗಳನ್ನು 1 ವಾರಕ್ಕೆ ಮುಂಚೆ ಬುಡ ಉಳಿಸಿ ಕತ್ತರಿಸಿ ತೆಗೆಯಬೇಕು. ಕಸಿ ಕಟ್ಟಲು ಅದನ್ನು ತೆಗೆಯುವ ಸಮಯದಲ್ಲಿ ಈ ಎಲೆಯ ತೊಟ್ಟನ್ನು ಬೆರಳಿನಲ್ಲಿ ಮುಟ್ಟುವಾಗ ಅದು ಗೆಲ್ಲಿನಿಂದ ಬೇರ್ಪಡಬೇಕು.
- ಅದನ್ನು ಸಿಗಿಯದಂತೆ ಜಾಗರೂಕತೆಯಲ್ಲಿ ತುಂಡು ಮಾಡಿ ತಕ್ಷಣ ಅದನ್ನು ಒದ್ದೆ ಬಟ್ಟೆಯಲ್ಲಿ ಸುತ್ತಿ ತಂದು ತಕ್ಷಣ ಕಸಿ ಮಾಡಬೇಕು.
- ತೇವಾಂಶ ಕಳೆದುಕೊಳ್ಳದಂತೆ ರಕ್ಷಿಸಬೇಕು.
- ಕಸಿ ಮಾಡಲು ಕತ್ತರಿಸಿದ ಕಡ್ಡಿಯನ್ನು ಆದಷ್ಟು ಬೇಗ ಕಸಿ ಕಟ್ಟಬೇಕು ಹೆಚ್ಚು ಸಮಯ ಉಳಿಸಬಾರದು.
- ಬೆಳಗ್ಗಿನ ಹೊತ್ತು ಅಥವಾ ಸಂಜೆ ಹೊತ್ತಿನಲ್ಲಿ ಕಸಿ ಮಾಡುವುದು ಉತ್ತಮ.
ಕಸಿ ವಿಧಾನ:
- ಬೀಜದಿಂದ ಮಾಡಿದ ಸಸಿ ಸುಮಾರು 1 ಅಡಿಯಷ್ಟಾದರೂ ಬೆಳೆದಿರಬೇಕು.
- ಮರದ ಗೆಲ್ಲಿಗೆ ಕಸಿ ಕಟ್ಟುವುದಾದರೆ ಒಂದು ಗೆಲ್ಲನ್ನು ಕಡಿದು ಅದರಲ್ಲಿ ಹೊಸ ಚಿಗುರು ಬಂದು ಎಲೆಗಳು ಹಸುರು ಬಣ್ಣ ಪಡೆದ ನಂತರ ಕಸಿ ಮಾಡಬೇಕು.
- ತೀರಾ ಎಳೆಯದಾಗಿದ್ದರೆ ಅದು ಬೇಗ ಚುರುಟುತ್ತದೆ.
- ಹಳೆ ಮರಕ್ಕೆ ಪುನಃಶ್ಚೇತನ ಮಾಡುವುದಾದರೆ, ಮರದ ಬುಡ ಗರಗಸದಿಂದ ಕಡಿದು ಅದರಲ್ಲಿ ಹೊಸ ಚಿಗುರು ಬಂದ ನಂತರ ಕಸಿ ಮಾಡಬೇಕು.
- ರೂಟ್ ಸ್ಟಾಕ್ ಅನ್ನು ಬುಡದಿಂದ 2/3 ಅಡಿ ಎತ್ತರಕ್ಕೆ ಕತ್ತರಿಸಿ ಅದನ್ನು ಸಿಗಿಯಿರಿ.
- ಆ ಭಾಗಕ್ಕೆ ಸೇರಿಸಲು ತಂದ ಕಸಿ ಕಡ್ಡಿಯನ್ನು ಎರಡೂ ಭಾಗದಲ್ಲಿ V ಆಕಾರದಲ್ಲಿ ಕತ್ತರಿಸಿ,
- ಅದರ ಒಳಗೆ ತುರುಕಿ. ಎಲ್ಲಿಯೂ ಗಾಳಿ ಒಳ ಸೋಂಕದಂತೆ, ಎಳೆದರೆ ಉದ್ದ ಬರುವ 20-30 ಗೇಜ್ ನ ಪಾರದರ್ಶಕ ಪ್ಲಾಸ್ಟಿಕ್ ಕಸಿ ಪಟ್ಟಿಯಿಂದ ಎರಡೂ ಗಾಯಗಳನ್ನೂ ಪರಸ್ಪರ ಸೇರಿಸಿ ಸುತ್ತಿ ಕಟ್ಟಬೇಕು.
- ಮೇಲು ಭಾಗದ ಕಸಿ ಕಡ್ಡಿಗೆ ಅದರ ತೇವಾಂಶ ಆರದಂತೆ ಒಂದು ಪ್ಲಾಸ್ಟಿಕ್ ಕವರನ್ನು ಮುಚ್ಚಿ ನೆರಳಿನಲ್ಲಿ ಇಡಬೇಕು.
- ಸುಮಾರು 15-20 ದಿನದಲ್ಲಿ ಕಸಿ ಕೂಡಿಕೊಳ್ಳುತ್ತದೆ.
- ಇದು ಪಾರದರ್ಶಕ ಪ್ಲಾಸ್ಟಿಕ್ ಆದ ಕಾರಣ ಗಾಯ ಕೂಡಿದ್ದು ಹೊರಗಿನಿಂದಲೇ ಗೊತ್ತಾಗುತ್ತದೆ.
- ಆಗ ಕಸಿ ಕಡ್ಡಿಯ ಮೊಗ್ಗು ಚಿಗುರಲು ಪ್ರಾರಂಭವಾಗುತ್ತದೆ.
- ಚಿಗುರಲು ಪ್ರಾರಂಭವಾದ ನಂತರ ಅದಕ್ಕೆ ಹಾಕಿದ ಕವರ್ ತೆಗೆಯಬೇಕು.
- ಕಸಿ ಕಟ್ಟಲು ಕಟ್ಟಿದ ಪಟ್ಟಿಯನ್ನು ನಾಲ್ಕ ಐದು ಎಲೆಗಳು ಬಂದ ನಂತರ ಬಿಡಿಸಬೇಕು.
ಇದು ಅತ್ಯಂತ ಸುಲಭದ ಕಸಿ ವಿಧಾನ. ನಿಮ್ಮ ಮನೆಯಲ್ಲಿ ಒಂದು ಮಾವಿನ ಮರ ಇದ್ದರೆ ಅದರಲ್ಲಿ ಹತ್ತಾರು ಬಗೆಯ ಮಾವಿನ ತಳಿಯ ಕಸಿ ಕಟ್ಟಿ ಫಲ ಪಡೆಯಬಹುದು. ಹಾಗೆಯೇ ಅನುತ್ಪಾದಕ ಮರ ಇದ್ದರೆ ಅದನ್ನು ಉತ್ತಮ ಇಳುವರಿ ಕೊಡುವ ಸಸ್ಯವಾಗಿ ಮೇಲ್ದರ್ಜೆಗೇರಿಸಬಹುದು.ಕಸಿ ಮಾಡುವುದು ಒಂದು ಬೇಜಾರು ಕಳೆಯುವ ಹವ್ಯಾಸವಾಗಿದ್ದು ಎಲ್ಲರೂ ಇದನ್ನು ಮಾಡಬಹುದು.
end of the article:—————————————————————
search words: Grafting # easy grafting# easy method of grafting# soft wood grafting# simple grafting technique# grafting to flower crops# breed improvement#