ಮಾನವ ಕೃಷಿ ಮಾಡುವಾಗ ಬರೇ ಬೆಳೆ ಒಂದನ್ನೇ ನಂಬಿಕೊಂಡು ಇರಬಾರದು. ಹೀಗಾದರೆ ಅವನು ಸೋಲುತ್ತಾನೆ. ಸಮಗ್ರ ಕೃಷಿ ಎಂಬ ತತ್ವವನ್ನು ಇದಕ್ಕಾಗಿಯೇ ಪರಿಚಯಿಸಲಾಗಿದೆ..
- ಅನುಕೂಲ ಮಾಡಿಕೊಂಡು ಹಸು ಸಾಕಣೆ , ಮೀನು ಸಾಕಣೆ, ಕೋಳಿ ಸಾಕಣೆ, ಆಡು ಸಾಕಣೆ ಮಾಡುತ್ತಿದ್ದರೆ ಅದರಿಂದ ಮುಖ್ಯ ಕೃಷಿಗೆ ಅನುಕೂಲವಾಗುತ್ತದೆ.
- ದೈನಂದಿನ ಆದಾಯಕ್ಕೆ ಹಸು ಸಾಕಣೆ ಅನುಕೂಲವಾದರೆ ವಾರಕ್ಕೆ , ತಿಂಗಳಿಗೆ ಆದಾಯವನ್ನು ಕೋಳಿ ಸಾಕಣೆ ಒದಗಿಸಿಕೊಡುತ್ತದೆ.
ಕೃಷಿ ಪೂರಕ ಆಗಿರಲಿ:
- ಕೋಳಿ ಸಾಕಣೆಯಲ್ಲಿ ಮೊಟ್ಟೆ ಕೋಳಿ ಹಾಗೂ ಮಾಂಸದ ಕೋಳಿ ಸಾಕಣೆ ಮಾಡಬಹುದಾದರೂ ಆ ವೃತ್ತಿ ಮಾಡಲು ಸ್ವಲ್ಪ ಹೆಚ್ಚು ಬಂಡವಾಳ ಬೇಕಾಗುತ್ತದೆ.
- ಲಸಿಕೆ ಹಾಕಿಸುವುದು, ರೋಗ ನಿರ್ವಹಣೆ ಸ್ವಲ್ಪ ಕಷ್ಟದ ಕೆಲಸ.
- ಅದರಲ್ಲಿ ಹೆಚ್ಚು ಗಮನ ಕೊಟ್ಟಾಗ ಮುಖ್ಯ ಕೃಷಿ ಸೊರಗುತ್ತದೆ.
- ಇದು ಆಗಬಾರದು. ಉಪ ಕಸುಬುಗಳ ಜೊತೆಗೆ ಮುಖ್ಯ ಕೃಷಿ ಹಿಂದಿಗಿಂತ ಉತ್ತಮವಾಗಬೇಕು.
ಕೃಷಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬೇಕಾದರೆ ಯಾವಾಗಲೂ ಕೈಯಲ್ಲಿ ಹಣ ಚಲಾವಣೆಯಲ್ಲಿರಬೇಕು. ಹಣ ಚಲಾವಣೆಗೆ ಹೈನುಗಾರಿಕೆ ಮತ್ತು ಕೋಳಿ ಸಾಕಣೆ ಆಡು ಸಾಕಣೆ ಸಹಕಾರಿ.
ಯಾವ ಕೋಳಿ ಉತ್ತಮ:
- ಕೋಳಿಯಲ್ಲಿ ನಾಟಿ ಕೋಳಿ ಸಾಕಣೆ ಸುಲಭ. ಇದರಲ್ಲಿ ಸಮಸ್ಯೆಗಳು ಕಡಿಮೆ.
- ಆದರೆ ಲಾಭ ಆದರೆ ಆಯಿತು ಇಲ್ಲವಾದರೆ ಇಲ್ಲ.
- ನಾಟಿ ಕೋಳಿಗಳನ್ನು ಸಾಕುವುದರ ಜೊತೆಗೆ ಸುಧಾರಿತ ಗಿರಿರಾಜ ಕೋಳಿ , ಸ್ವರ್ಣಧಾರ ಕೋಳಿ ಸಾಕಿದರೆ ಮತ್ತೂ ಅನುಕೂಲ.
- ಇವು ತೂಕ ಲೆಕ್ಕದಲ್ಲಿ ಮರಾಟ ಮಾಡುವುದಿದ್ದರೆ ಲಾಭದಾಯಕ.
- ಇದು ಹೆಸರಿಗೆ ಮಾತ್ರ ಬೇರೆ. ಗುಣದಲ್ಲಿ ನಾಟಿ ಕೋಳಿಯಂತೆ.
ನಾಟಿ ಮತ್ತು ಸುಧಾರಿತ ಕೊಳಿ:
- ನಾಟಿ ಕೋಳಿಗಳು ತೂಕ ಬರುವುದಿಲ್ಲ. ಆದರೆ ಗಿರಿರಾಜ ಕೋಳಿ ತೂಕ ಬರುತ್ತದೆ.
- ಸ್ವಲ್ಪ ನಾಟಿ ಕೋಳಿಗಳಿದ್ದರೆ ಸ್ಥಳೀಯ ಹರಕೆ ಹಾಗೂ ಕೆಲವು ಸಮಾರಂಭಗಳಿಗೆ ಮಾರಾಟ ಮಾಡಬಹುದು.
- ಇದನ್ನು ಹೊಲದಲ್ಲಿ ಬಿಟ್ಟು ಸಾಕಬಹುದು.
- ರಾತ್ರೆ ಹೊತ್ತು ವಿರಮಿಸಲು ಗೂಡು ವ್ಯವಸ್ಥೆ ಮಾಡಿದರಾಯಿತು.
ಗೂಡಿನಲ್ಲೂ ಸಾಕಬಹುದು. ಆದರೆ ಸುಸಜ್ಜಿತ ಗೂಡು ಬೇಕಾಗಿಲ್ಲ.ಮೊಟ್ಟೆ ಮಾಂಸದ ಕೋಳಿಯಷ್ಟು ನಿಗಾ ಬೇಕಾಗುವುದಿಲ್ಲ.
- ಸ್ವಚ್ಚತೆಗೆ ಹೆಚ್ಚು ಗಮನ ಕೊಡಬೇಕಾಗಿಲ್ಲ ಅವು ಎಲ್ಲಾ ಕಡೆ ಹೋಗುತ್ತವೆ.
- ದನ ಸಾಕುವಲ್ಲಿ ಅದರ ಆಹಾರ ಹುಲ್ಲಿನಲ್ಲಿ ಬಿದ್ದ ಭತ್ತ ಕೋಳಿಗಳ ಅರ್ಧ ಹೊಟ್ಟೆ ತುಂಬಿಸುತ್ತದೆ.
- ಗಿರಿ ರಾಜ ಸ್ವರ್ಣಧಾರ ಕೋಳಿಗಳು ಹೆಚ್ಚು ಗಡಸಾಗಿರುತ್ತವೆ.
- ಮಾಂಸದ ರುಚಿಯಲ್ಲಿ ವ್ಯತ್ಯಾಸ ಕಂಡು ಬರುವುದಿಲ್ಲ.
- ಗಿರಿರಾಜ ಕೋಳಿ 8 ವಾರದಲ್ಲಿ 1500 ಗ್ರಾಂ ತೂಕಕ್ಕೆ ಬೆಳೆದರೆ ಸ್ವರ್ಣಧಾರ ಕೋಳಿ 1100 ಗ್ರಾಂ ತನಕ ಬೆಳೆಯುತ್ತದೆ.
- ಆದರೆ ನಾಟಿ ಕೋಳಿ 700 ಗ್ರಾಂ ಮಾತ್ರ ಬೆಳೆಯುತ್ತದೆ.
ಇದು ಮೊಟ್ಟೆಗೂ ಆಗುತ್ತದೆ. ಮಾಂಸಕ್ಕೂ ಆಗುತ್ತದೆ. ಗಿರಿರಾಜ ಕೋಳಿ ವರ್ಷಕ್ಕೆ 150 ರಷ್ಟು ಮೊಟ್ಟೆ ಇಟ್ಟರೆ ಸ್ವರ್ಣ ಧಾರ ಕೋಳಿ 200 ಮೊಟ್ಟೆ ಇಡುತ್ತದೆ. ನಾಟಿ ಕೋಳಿ ಬರೇ 50-60 ಮೊಟ್ಟೆ ಇಡುತ್ತದೆ.
- ಇಷ್ಟಕ್ಕೂ ಇವು ತಿನ್ನುವ ಆಹಾರ ಒಂದೇ ರೀತಿಯಾಗಿರುತ್ತವೆ.
- ಇದಕ್ಕೆ ಆಹಾರವನ್ನೂ ಸ್ವತಹ ತಯಾರಿಸಿಕೊಳ್ಳಬಹುದು.
- ಅಕ್ಕಿ ನುಚ್ಚು, ಗೋಧಿ, ಬಾಜ್ರಾ ಮುಂತಾದವುಗಳನ್ನು ಮಿಶ್ರಣ ಮಾಡಿ ಆಹಾರ ತಯಾರಿಸಿಕೊಳ್ಳಬಹುದು.
- ದೊಡ್ಡ ಪ್ರಮಾಣದಲ್ಲಿ ಸಹ ಈ ಕೋಳಿಗಳನ್ನು ಸಾಕಬಹುದು.
- ಇದಕ್ಕೆ ಬ್ಯಾಂಕು ಸಾಲ ಸೌಲಭ್ಯ ಸಹ ಇರುತ್ತದೆ.
- ಕೋಳಿ ಮರಿ ಖರೀದಿಗೆ, ಗೂಡು ಮಾಡಿಸಲು , ತಾಯಿ ಕೋಳಿಗಳ ಘಟಕ ಸ್ಥಾಪನೆಗೆ ಸಹಾಯಧನ ಸೌಲಭ್ಯವೂ ಇರುತ್ತದೆ.
ಯಾವಾಗಲೂ ಶ್ರಮ ರಹಿತವಾದ ಕೋಳಿ ಸಾಕಣೆ ಮಾಡಿ ಅನುಭವದ ಮೇಲೆ ದೊಡ್ದ ಪ್ರಮಾಣದಲ್ಲಿ ಕೋಳಿಸಾಕಣೆ ಮಾಡಿ ಗರಿಷ್ಟ ಲಾಭ ಪಡೆಯಬಹುದು. ಇದನ್ನೇ ಒಂದು ವೃತ್ತಿಯಾಗಿ ಮಾಡಿಕೊಂಡರೆ ಬಹಳ ಲಾಭ ಇದೆ.
ಮುಂದೆ ಮಾಂಸದ , ಮೊಟ್ಟೆ ಕೋಳಿಸಾಕಣೆಗೆ ಕೈ ಹಾಕುವುದಿದ್ದರೆ ಇದು ಅನುಭವದ ಪಂಚಾಂಗವಾಗುತ್ತದೆ.