ಹೆಚ್ಚಿನ ರೈತರು ಹೇಳುವುದುಂಟು, ಈ ವರ್ಷ ನಾವು ತೆಂಗಿನ ಮರಕ್ಕೆ ಸಾಕಷ್ಟು ಗೊಬ್ಬರ ಕೊಟ್ಟಿದ್ದೇವೆ. ಮುಂದಿನ ವರ್ಷ ಫಸಲು ಹೆಚ್ಚಬಹುದು ಎಂದು. ಆದರೆ ವಾಸ್ತವಿಕತೆ ಬೇರೆಯೇ ಇದೆ. ಈ ವರ್ಷ ಹಾಕಿದ ಗೊಬ್ಬರದ ಫಲದಲ್ಲಿ ಮುಂದಿನ ವರ್ಷ ಇಳುವರಿಯಲ್ಲಿ ದೊರೆಯುವುದಿಲ್ಲ. ಅದು ದೊರೆಯುವುದು ಮುಂದಿನ 32 ತಿಂಗಳ ನಂತರ.
- ತೆಂಗಿನ ಮರದ ಕಾಂಡದಲ್ಲಿ ಹುಟ್ಟುವ ಅದರ ಹೂ ಗೊಂಚಲು ಮೊನ್ನೆ ಮೊನ್ನೆಮೂಡಿದ್ದು ಎಂದು ತಿಳಿಯದಿರಿ.
- ಇದರೆ ಹುಟ್ಟು,(Innitiation) ಸುಮಾರು ಮೂರು ವರ್ಷಗಳ ಹಿಂದೆಯೇ ಆಗಿರುತ್ತದೆ.
- ಆಗಲೇ ಅದರಲ್ಲಿ ಎಷ್ಟು ಕಾಯಿ ಹಿಡಿಯಬಹುದು ಎಂಬುದು ಆಗಿನ ವಾತಾವರಣ , ಆರೈಕೆಗನುಗುಣವಾಗಿ ಬಹುತೇಕ ನಿರ್ಧಾರ ಆಗಿರುತ್ತದೆ.
ಪೋಷಕಾಂಶ ಹೇಗೆ ಬಳಕೆಯಾಗುತ್ತದೆ:
- ನಾವು ಕೊಡುವ ಪೋಷಕಗಳು ತಕ್ಷಣಕ್ಕೆ ಫಸಲಿಗೆ ಲಭ್ಯವಾಗುವುದಿಲ್ಲ. ಅದು ಮೊದಲಾಗಿ ದೊರೆಯುವುದು ಎಲೆಗಳಿಗೆ.
- ಗೊಬ್ಬರ ಕೊಟ್ಟ ಕೆಲವು ಸಮಯದ ನಂತರ ಎಲೆಗಳು ಸ್ವಲ್ಪ ಹಸುರಾಗುತ್ತವೆ. ಅದೂ ತುದಿ ಭಾಗದ ಎಲೆಗಳು.
- ನಂತರ ಬರುವ ಎಲೆಗಳ ಉದ್ದ ಹೆಚ್ಚಾಗುತ್ತದೆ,(ಸುಮಾರು 6 ಮೀ). ಮತ್ತು ಕಡ್ಡಿಗಳೂ( 200ಕ್ಕೂ ಹೆಚ್ಚು ಕಡ್ಡಿ ಮತ್ತು ಅದರ ಉದ್ದ 1.5 ಮೀ) ಉದ್ದವಾಗುತ್ತವೆ.
- ನಂತರ ಮರದ ಗರಿ ಲಕ್ಷಣಗಳು ಬದಲಾಗುತ್ತದೆ. ಮರ ಶಿರ ಭಾಗ ಛತ್ರಿಯೋಪಾದಿಯಲ್ಲಿ ಕಾಣಿಸುತ್ತದೆ.
- ಅಗತ್ಯವಿದ್ದಷ್ಟು ಪೊಷಕಾಂಶಗಳು ದೊರೆತಾಗ ಮಾತ್ರ ಮರದಲ್ಲಿ 30-40 ಹಸಿರು ಗರಿಗಳು ಇರುತ್ತವೆ.
- ಕೆಳಭಾಗದ ಗರಿಗಳು ಬೇಗ ಒಣಗಿ ಉದುರುವುದಿಲ್ಲ.
- ಕಾಂಡದ ಲಕ್ಷಣ ಬದಲಾಗುತ್ತದೆ. ಅದು ಸ್ವಲ್ಪ ದಪ್ಪವಾಗುತ್ತದೆ.
- ಇದೆಲ್ಲಾ ಆದ ನಂತರ ಅದು ಹೂ ಗೊಂಚಲಿಗೆ ಹೋಗುವುದು.
ತೆಂಗಿನ ಮರದ ಹೂ ಗೊಂಚಲು:
- ಉತ್ತಮ ಆರೈಕೆಯ ತೆಂಗಿನ ಮರದಲ್ಲಿ ಸುಮಾರು ಸುಮಾರು 5 ವರ್ಷಗಳ ತರುವಾಯ ಹೂ ಗೊಂಚಲು ಮೂಡುತ್ತದೆ.
- ವರ್ಷಕ್ಕೆ 12-15 ಹೂ ಗೊಂಚಲು ಬಿಡುವುದು ಆರೋಗ್ಯವಂತ ಮರದ ಲಕ್ಷಣ.
- ಹೂ ಗೊಂಚಲು ಮರದ ಗರಿ ಸಂದಿನಲ್ಲಿ ಕಂಡ ನಂತರ ಅದು ಬಿಡಿಸಿಕೊಳ್ಳಲು ಸುಮಾರು70- 90 ದಿನಗಳು ಬೇಕು.
- ಹವಾಮಾನ ಮತ್ತು ಪೋಷಕಾಂಶಗಳು ಅನುಕೂಲ ಇದ್ದರೆ ಪ್ರತೀಯೊಂದು ಎಲೆ ಕಂಕುಳಲ್ಲೂ ಒಂದೊಂದು ಹೂ ಗೊಂಚಲು ಇರುತ್ತದೆ.
- ಕೆಲವು ಅನನುಕೂಲ ಪರಿಸ್ಥಿತಿಯಲ್ಲಿ ಹೂ ಗೊಂಚಲು ಹೊರಗೆ ಗೋಚರಿಸದೇ ಇರಬಹುದು. ಆದರೆ ಅದರ ಸಣ್ಣ ಮೊಳೆಗೆ ನಂತರ ಗರಿ ಉದುರಿ ಬೀಳುವಾಗ ಇದ್ದೇ ಇರುತ್ತದೆ.
- ಆರೋಗ್ಯವಂತ ಹೂ ಗೊಂಚಲು ಸುಮಾರು 1-1.5 ಮೀಟರು ಉದ್ದ ಇರುತ್ತದೆ. ಸುಮಾರು 14-16 ಸೆಂ. ಮೀ. ಸುತ್ತಳತೆ ಇರುತ್ತದೆ.
- ಅದು ಒಳ ಭಾಗದಲ್ಲಿ ತುದಿಯಿಂದ ತೆರೆದುಕೊಳ್ಳುತ್ತದೆ.
ಫಸಲು ಹೆಚ್ಚಾಗುವುದು ಯಾವಾಗ:
- ನಿರಂತರ ವರ್ಷದುದ್ದಕ್ಕೂ ಏಕ ಪ್ರಕಾರ ನೀರು , ಪೋಷಕಾಂಶ ಮತ್ತು ಏಕ ರೀತಿಯ ಹವಾಮಾನ ಇದ್ದರೆ ಪ್ರತೀ ಗೊನೆಯಲ್ಲೂ ಒಂದೇ ರೀತಿ ಕಾಯಿಗಳು ಆಗುತ್ತವೆ
- ಈಗ ಕೊಟ್ಟ ಗೊಬ್ಬರ ಮುಂದಿನ 32 ತಿಂಗಳ ನಂತರ ಬರುವ ಹೂ ಗೊಂಚಲಿನಲ್ಲಿ ತನ್ನ ಫಲಿತಾಂಶವನ್ನು ತೋರಿಸುತ್ತದೆ.
- ಪ್ರತೀ ತಿಂಗಳೂ ಪೋಷಕಾಂಶವನ್ನು ಒದಗಿಸುತ್ತಾ ಇದ್ದರೆ ಸಾಮಾನ್ಯವಾಗಿ ಏಕ ಪ್ರಕಾರದ ಹೂ ಗೊಂಚಲು ಬರುತ್ತಿರುತ್ತದೆ.
ಇದೆಲ್ಲಾ ಅಂಶಗಳಿಂದ ರೈತರು ತಿಳಿಯಬೇಕಾದುದು, ತೆಂಗಿನ ಮರಕ್ಕೆ ಈಗ ಹಾಕಿದ ಗೊಬ್ಬರ, ನೀರು ಇದೇ ವರ್ಷ ಇಳುವರಿಯಲ್ಲಿ ಗೊತ್ತಾಗುವುದಿಲ್ಲ. ಅದು ಗೊತ್ತಾಗುವುದು ಸುಮಾರು 3 ವರ್ಷದ ನಂತರ. ಇಳುವರಿ ಚೆನ್ನಾಗಿ ಬರಬಹುದಾದ ಲಕ್ಷಣವನ್ನು ಮರದ ಬೆಳೆವಣಿಗೆಯ ಲಕ್ಷಣ ಮುಂಚಿತವಾಗಿ ತೋರಿಸುತ್ತದೆ. ಮನೆ ಬಾಗಿಲಲ್ಲಿ ಇರುವ ಹೆಚ್ಚು ಆರೈಕೆ ಮಾಡುವ ಮರದಲ್ಲಿ ಏಕ ಪ್ರಕಾರ ಇಳುವರಿ ಇರುತ್ತದೆ.