ತೆಂಗಿನ ಮರದಲ್ಲಿ ಹರಳು(ಮಿಡಿ ) ಉದುರುವುದು ಯಾಕೆ?

ಬಹಳ ಜನ ತಮ್ಮ ತೆಂಗಿನ ಮರದ ಹೂ ಗೊಂಚಲಿನಲ್ಲಿ ಮಿಡಿ ಕಾಯಿ (ಹರಳು) ಉಳಿಯುವುದೇ ಇಲ್ಲ ಎನ್ನುತ್ತಾರೆ. ಕೆಲವರು ಒಂದು ಎರಡು ಮಾತ್ರ ಉಳಿಯುತ್ತದೆ ಎನ್ನುತ್ತಾರೆ. ಕೆಲವರು ಎಲ್ಲಾ ಮಿಡಿಗಳೂ ಪೊಳ್ಳೇ ಆಗುತ್ತವೆ ಎನ್ನುತ್ತಾರೆ. ತೆಂಗಿನ ಮರದ ಹೂ ಗೊಂಚಲಿನಲ್ಲಿ ಮಿಡಿಗಳು ಉದುರಲು ಬೇರೆ ಬೇರೆ ಕಾರಣಗಳು ಇರುತ್ತವೆ. ಮರದ ಲಕ್ಷಣ , ನೀಡುವ ಪೋಷಕಾಂಶ, ಹವಾಮಾನ ಮತ್ತು ಹೊಲದ ಸ್ಥಿತಿಗಳನ್ನು ಅವಲಂಭಿಸಿ ಅದಕ್ಕೆ ಯವ ಕಾರಣ ಎಂಬುದನ್ನು ನಿರ್ಧರಿಸಬಹುದು.

ತೆಂಗಿನ ಮರದ ಹೂವು ವ್ಯವಸ್ಥೆ:

  • ತೆಂಗು ಒಂದು ಏಕದಳ ಸಸ್ಯ. ಇದರಲ್ಲಿ ಗಂಡು ಹೆಣ್ಣು ಹೂವುಗಳು ಪ್ರತ್ಯೇಕ ಪ್ರತ್ಯೇಕವಾಗಿಯೇ ಇರುತ್ತದೆ.ತೆಂಗಿನ ಮರದಲ್ಲಿ ವರ್ಷಕ್ಕೆ ಸುಮಾರು 12 ಹೂ ಗೊಂಚಲು  ಬರುತ್ತದೆ.
  • ಇದರಲ್ಲಿ  ಎಲ್ಲಾ ಹೂಗೊಂಚಲಿನಲ್ಲಿ ಏಕ ಪ್ರಕಾರ ಕಾಯಿ ಕಚ್ಚುವುದಿಲ್ಲ.
  • ಆರೋಗ್ಯವಂತ ಹೂ ಗೊಂಚಲಿನ ಉದ್ದ  ಬುಡದಿಂದ ( ಕಾಂಡಕ್ಕೆ ತಾಗಿಕೊಂಡು)  1.- 1.2 ಮೀ. ಉದ್ದ ಇರುತ್ತದೆ.
  • ಸುಮಾರು 14-16 ಸೆಂ. ಮೀ. ದಪ್ಪ ಇರುತ್ತದೆ.
  • ಒಂದು ಹೂ ಗೊಂಚಲಿನಲ್ಲಿ ಸಾವಿರಕ್ಕೂ ಮಿಕ್ಕಿ ಗಂಡು ಹೂವುಗಳೂ (Male flowers), 20-30 ಸಂಖ್ಯೆಯಲ್ಲಿ ಹೆಣ್ಣು ಹೂವುಗಳೂ (Female flowers)ಇರುತ್ತವೆ.
  • ಹೆಣ್ಣು ಹೂವುಗಳು ಹೂ ಗೊಂಚಲಿನಲ್ಲಿ ಕೆಳಭಾಗದಲ್ಲೂ , ಗಂಡು ಹೂವುಗಳು ಮೇಲ್ಭಾಗದಲ್ಲೂ ಇರುತ್ತವೆ.
  • ಒಂದು ಪುಷ್ಪ ಶಲಾಖೆಯಲ್ಲಿ ಒಂದು ತಪ್ಪಿದರೆ 2 ಸಂಖ್ಯೆಯಲ್ಲಿ ಹೆಣ್ಣು ಹೂವುಗಳು ಇರುತ್ತವೆ. ಹೂ ಗೊಂಚಲಿನಲ್ಲಿ ಹೆಣ್ಣು ಹೂವುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಋತುಮಾನ ಮತ್ತು ಮಣ್ಣಿನ ಗುಣಕ್ಕೆ (Season and soil conditions)ಅನುಗುಣವಾಗಿ.
  •  ಭಾರತದ ಹವಾಮಾನ ಸ್ಥಿತಿಯಲ್ಲಿ ಬೇಸಿಗೆಯ ಮಾರ್ಚ್ , ಎಪ್ರೀಲ್, ಮೇ  ತಿಂಗಳಿನಲ್ಲಿ  ಕಾಯಿಗಳ ಸಂಖ್ಯೆ ಹೆಚ್ಚು.
  • ಕಾಯಿ ಕಚ್ಚುವುದೂ ಹೆಚ್ಚು, ಸಪ್ಟೆಂಬರ್ ನಿಂದ  ಜನವರಿ ತನಕ ಕಾಯಿಗಳ ಸಂಖ್ಯೆಯೂ ಕಡಿಮೆ, ಕಾಯಿ ಕಚ್ಚುವಿಕೆಯೂ ಕಡಿಮೆ. ಕೆಲವು ಮಳೆ ಕಡಿಮೆ ಬೀಳುವ ಸ್ಥಳಗಳ ವ್ಯತ್ಯಾಸವಾಗಿ ಸ್ವಲ್ಪ  ಹೆಚ್ಚು  ಕಾಯಿ ಕಚ್ಚುತ್ತದೆ.

ಕಾಯಿಕಚ್ಚುವ ವಿಧಾನ:

  • ಮರದಲ್ಲಿ ಹು ಗೊಂಚಲು ಅರಳಿದಂದಿನಿಂದ ಪ್ರಾರಂಭವಾಗಿ ಸುಮಾರು 20 ದಿನಗಳ ತನಕ ಗಂಡು ಹೂವು ಅರಳಿ ಉದುರುತ್ತಲೇ ಇರುತ್ತದೆ.
  • ಆ ನಂತರ ಹೆಣ್ಣು ಹೂವು ಅಥವಾ ಮಿಡಿ ಪರಾಗ ಸ್ವೀಕರಿಸುವ  ಸ್ಥಿತಿಗೆ ಬರುತ್ತದೆ.
  • ಆ ಸಮಯದಲ್ಲಿ ಅದೇ ಮರದಲ್ಲಿ ಮತ್ತೊಂದು ಹೂ ಗೊಂಚಲು ಅರಳಿದ್ದರೆ, ಅದರ  ಗಂಡು ಹೂವಿನ ಪರಾಗ ದೊರೆತು ಕಾಯಿ ಕಚ್ಚಬಹುದು.
  • ಇಲ್ಲವೇ ಬೇರೆ ಮರಗಳಲ್ಲಿ ಹೂ ಗೊಂಚಲು ಅರಳಿದ್ದರೆ ಅದರ ಪರಾಗ ಜೇನು ನೊಣ, ದುಂಬಿಗಳ ಮೂಲಕ ಪ್ರಸಾರವಾಗಿ ಕಾಯಿ ಕಚ್ಚಬೇಕು.
  •  ಒಂದು ವೇಳೆ ಕಾಯಿ ಪರಾಗ ಸ್ವೀಕರಿಸುವ ಸ್ಥಿತಿಗೆ ಬಂದಾಗ ಪರಾಗ ಲಭ್ಯವಾಗದೇ ಇದ್ದರೆ ಕಾಯಿ ಎಲ್ಲಾ ಉದುರಿ ಹೋಗುತ್ತದೆ.

ಹರಳು ಉದುರುವುದು ಯಾವ ಕಾರಣಕ್ಕೆ:

  • ಹೂ ಗೊಂಚಲಿನಲ್ಲಿ ಗಂಡು ಹಾಗೂ ಹೆಣ್ಣು ಹೂವುಗಳೆರಡೂ ಹೆಚ್ಚಿನ ಪ್ರಮಾಣದಲ್ಲಿದ್ದರೂ ಅದು ಕಾಯಿಯಾಗದೆ ಉದುರಬೇಕಾದರೆ ಒಂದು ಕಾರಣ ಪರಾಗ ಸ್ಪರ್ಷಕ್ಕೆ ಸಿದ್ಧವಾಗುವ ಸಮಯದಲ್ಲಿ ಗಂಡು ಹೂವಿನ ಲಭ್ಯತೆ ಇಲ್ಲದಾಗುದು. 
  • ಕೆಲವು ಮರಗಳ ಆರೋಗ್ಯ ಸರಿ ಇರುವುದಿಲ್ಲ.
  • ಆರೋಗ್ಯ ಎಂದರೆ ಮರದಲ್ಲಿ ಸುಮಾರು 30-40  ಹಚ್ಚ ಹಸುರಾದ ಎಲೆಗಳು, ಮರದ ಶಿರ ಭಾಗ ಬಿಡಿಸಿಗ ಛತ್ರಿಯಂತಿರುವುದು, ಸುಮಾರು ಸುಮಾರು ಒಂದು ಗರಿಯಲ್ಲಿ 200 ರಷ್ಟು ಕಡ್ಡಿಗಳು, ಕಡ್ಡಿಗಳ ಉದ್ದ, ಸುಮಾರು 1-1.5 ಮೀಟರು, ಗರಿಯ ಬುಡ ಅರ್ಧ ಮರವನ್ನು ಆವರಿಸಿರಬೇಕು.
  • ಒಂದು ಗರಿ ಮೂಡಿ ಸುಮಾರು 2.5- 3  ವರ್ಷ ಮರದಲ್ಲಿ ಇರಬೇಕು.
  • ಅಂತಹ ಮರಗಳಲ್ಲಿ ಉತ್ತಮ ಹೂ ಗೊಂಚಲು ಬರುತ್ತದೆ.
  • ಅದರಲ್ಲಿ ಒಂದರ ನಂತರ ಮತ್ತೊಂದು ಹೂ ಗೊಂಚಲು ಅರಳುತ್ತಾ ಇರುತ್ತದೆ. ಅದರಲ್ಲಿ ಕಾಯಿ ಕಚ್ಚುವಿಕೆಯೂ ಹೆಚ್ಚು ಇರುತ್ತದೆ.

ವಾತಾವರಣ:

  • ಹೆಚ್ಚು ಬಿಸಿಲಿನ ವಾತಾವರಣ ಹೂ ಬಿಡುವಿಕೆ ಅನುಕೂಲಕರ.
  • ಆದ ಕಾರಣವೇ ಮಾರ್ಚ್ ನಿಂದ ಮೇ ತನಕ ಹೂ ಗೊಂಚಲಿನಲ್ಲಿ ಕಾಯಿ ಹೆಚ್ಚು ಇರುತ್ತದೆ.
  • ಮಳೆಗಾಲದಲ್ಲಿ ಹೂ ಗೊಂಚಲು ಚೆನ್ನಾಗಿದ್ದರೂ ಪರಾಗ ತೊಳೆದು ಹೋಗಿ ಕಾಯಿ ಕಚ್ಚುವುದಿಲ್ಲ.
  • ಆ ಸಮಯದಲ್ಲಿ ಪರಾಗದಾನಿಗಳೂ ಸಹ ಒಡಾಟ ಕಡಿಮೆ ಇರುವುದರಿಂದ ಪರಾಗ ಸ್ಪರ್ಶ ಆಗುವುದಿಲ್ಲ.
  • ಇದಲ್ಲದೆ ಹೆಚ್ಚು ಮಳೆಯಾಗುವ ಸಮಯದಲ್ಲಿ ಬುಡ ಭಾಗದಲ್ಲಿ 1-2  ಗಂಟೆ ನೀರು ಚಲಿಸದೆ ನಿಂತರೆ ಮಿಡಿ ಕಾಯಿಗಳು ಉದುರುತ್ತವೆ.
  • ಕರಾವಳಿ ಮಲೆನಾಡಿನಲ್ಲಿ ಎಡೆಬಿಡರೆ ಮಳೆ ಸುರಿದರೆ ಆ ವರ್ಷ ಮಿಡಿ ಉದುರುವುದು ಜಾಸ್ತಿ. ಇಳುವರಿ ಕಡಿಮೆ.

ಬೀಜದ ಗುಣ:

  • ಕೆಲವು ತೆಂಗಿನ ಮರಗಳ ಶಿರ ಭಾಗ ಮಡಚಿದ ಛತ್ರಿ ತರಹ  ಇರುತ್ತದೆ.
  • ಕೆಲವು  ಅರೆ ಬರೆ ಕಡ್ಡಿ ಬಿಡಿಸಿದ  ಗರಿಗಳು, ಹಾಗೆಯೇ ಅಸಹಜ ಬೆಳವಣಿಗೆ, ಆರಿಕೆ ಚೆನ್ನಾಗಿದ್ದರೂ ಹೂ ಗೊಂಚಲು ಬಿಡದೆ ಇರುವುದು, ಬಿಟ್ಟರೂ ಕಾಯಿ ಕಚ್ಚದೇ ಇರುವುದು ಬೀಜದ ಗುಣ.
  • ಇದನ್ನು ಯಾವ ರೀತಿಯಲ್ಲೂ ಸರಿಪಡಿಸಲು ಆಗುವುದಿಲ್ಲ.
  • ಕಡಿದು ಬೇರೆ ನೆಡೂವುದೇ ಸೂಕ್ತ. (ಆಯ್ಕೆ ಮಾಡುವ ಗಿಡ ಹೇಗಿರಬೇಕು.)

ಪೋಷಕಾಂಶಗಳ ಕೊರತೆ ಮತ್ತು ಅಸಮತೋಲನ:

  • ಮರದ ಬೆಳವಣಿಗೆ ಮೇಲೆ ತಿಳಿಸಿದಂತೆ ಇಲ್ಲವಾದರೆ, ಅದು ಪೋಷಕಾಂಶದ ಕೊರತೆ ಇರಬಹುದು.
  • ಇಂತಹ ಕಡೆ ಶಿಫಾರಿತ ಪ್ರಮಾಣದ NPK 600:400:1200 ಮತ್ತು  ಮೆಗ್ನಿಶಿಯಂ ಸಲ್ಫೇಟ್ 250 ಗ್ರಾಂ , ಸತುವಿನ ಸಲ್ಫೇಟ್ 100 ಗ್ರಾಂ ಹಾಗೂ 500  ಗ್ರಾಮ್ ಕ್ಯಾಲ್ಸಿಯಂ ಕೊಟ್ಟು ಎರಡು ವರ್ಷದ ತನಕ ಗಮನಿಸಬೇಕು.
  • ಸರಿಯಾಗದಿದ್ದಲ್ಲಿ ಅದು ಬೀಜದ ದೋಷ ಆಗಿರಬಹುದು.
  • ಮರದ ಬೆಳವಣಿಗೆ ಸೊಕ್ಕಿದ ತರಹ ಇದ್ದರೆ, ಬರೇ ಸಾವಯವ ಗೊಬ್ಬರ ಮಾತ್ರವೇ ಕೊಡುತ್ತಿದ್ದರೆ ಅಂತಹ ಮರಗಳು ದೊಡ್ಡ ದೊಡ್ಡ ಹೂ ಗೊಂಚಲು ಬಿಡುತ್ತವೆ.
  • ಆದರೆ ಕಾಯಿ ನಿಲ್ಲುವುದಿಲ್ಲ. ಅಂತಹ ಮರಗಳಿಗೆ ಪೊಟ್ಯಾಶಿಯಂ ಹಾಗೂ ರಂಜಕ ಗೊಬ್ಬರವನ್ನು ಕೊಟ್ಟು 2 -3  ವರ್ಷ ದ ನಂತರ ಅದು ಸರಿಯಾಗುತ್ತದೆ.
  • ಕಾರಣ  ಹೊಸ ಹೂ ಗೊಂಚಲು ಮುಡಿ ಅರಳಲು 32 ತಿಂಗಳು  ಬೇಕಾಗುತ್ತದೆ.
  • ಉದುರಿ ಬೀಳುವ ತೆಂಗಿನ ಹರಳಿನ ತೊಟ್ಟಿನ ಭಾಗದಲ್ಲಿ ಕಲೆಗಳು ಇದ್ದರೆ ಅದು ನುಶಿ ಪೀಡೆಯಿಂದ ಬೀಳುವುದಾಗಿರುತ್ತದೆ.
  • ತೆಂಗಿನ ಮರಗಳಿಗೆ ಗಂಧಕ ಕಡಿಮೆಯಾದರೆ ನುಶಿ ಪಿಡೆ ಹೆಚ್ಚಾಗುತ್ತದೆ. ಅದಕ್ಕೆ ಸತು, ಮತ್ತು ಮೆಗ್ನಿನೀಶಿಯಂ ಸಲ್ಫೇಟ್ ಬಳಸಬೇಕು.
  • ಮಿಡಿಯು ಸೆಟ್ ಆಗಿ ಉದುರುತ್ತದೆ ಎಂದಾದರೆ ಅದರ ತುದಿ ಭಾಗದಲ್ಲಿ ಕಪ್ಪು ಇರುತ್ತದೆ.
  • ಇದಕ್ಕೆ ವಾತಾವರಣ  ಮತ್ತು ಪೋಷಕಾಂಶ ಕಾರಣವಾಗಿರುತ್ತದೆ.
  • ಇಲಿ, ಅಳಿಲು ತಿಂದು ಸಹ  ಮಿಡಿ ಉದುರುತ್ತದೆ.

 ಪ್ರತೀಯೊಬ್ಬ ರೈತ ತನ್ನ ತೆಂಗಿನ ಮರದ ಲಕ್ಷಣ ಹೇಗಿದೆ ಎಂಬುದನ್ನು ಗಮನಿಸಬೇಕು, ಇತರ ಉತ್ತಮ ಫಲ ಕೊಡುವ ಮರಕ್ಕೂ ಇದಕ್ಕೂ ಯಾವ ವೆತ್ಯಾಸ ಎಂಬುದನ್ನು ಹೋಲಿಕೆ ಮಾಡಿ, ನಿಜವಾದ ಕಾರಣವನ್ನು ತಾವೇ ತಿಳಿಯಬಹುದು. ತನ್ನ ಇಡೀ ಬೆಳೆವಣಿಗೆಯಲ್ಲಿ ಒಮ್ಮೆಯೂ ಕಾಯಿ ಬಿಡದೆ ಇದ್ದರೆ ಅದು ಬೀಜ ದೋಷ ಎಂಬುದು ಸ್ಪಷ್ಟ.

Leave a Reply

Your email address will not be published. Required fields are marked *

error: Content is protected !!