ಅಡಿಕೆ, ಮುಂತಾದ ಸಸ್ಯಗಳಿಗೆ ತಂತು ( Fiber roots) ಬೇರು ಮಾತ್ರ ಇರುತ್ತದೆ. ಈ ತಂತು ಬೇರುಗಳಲ್ಲಿ ಮತ್ತೆ ಕವಲುಗಳು ಒಡೆದು ಬೇರು ವ್ಯೂಹ ರಚನೆಯಾಗುತ್ತದೆ. ಈ ಬೇರುಗಳು ತುಂಬಾ ಮೃದುವಾಗಿರುತ್ತವೆ. ಹೆಚ್ಚಿನ ತೇವ, ಅಧಿಕ ಬಿಸಿಯನ್ನು ತಡೆದುಕೊಳ್ಳಲಾರವು. ಆದ ಕಾರಣ ನಾವು ಟ್ರೆಂಚ್ ಪದ್ದತಿಯಲ್ಲಿ ಅಡಿಕೆ ಸಸಿ ನೆಟ್ಟರೆ ಅದರ ಬೇರುಗಳಿಗೆ ತೊಂದರೆಯಾಗಿ ಬೆಳವಣಿಗೆಗೆ ಅನನುಕೂಲವಾಗುತ್ತದೆ.
- ಸಸ್ಯಗಳ ಬೆಳವಣಿಗೆಗೆ ಬೇರುಗಳೇ ಸರ್ವಾಧಾರ. ಬೇರುಗಳ ರಕ್ಷಣೆ ಮತ್ತು ಅವುಗಳ ಪ್ರಸರಣಕ್ಕೆ ಎಷ್ಟು ಅನುಕೂಲ ಮಾಡಿಕೊಡುತ್ತೇವೆಯೋ ಅಷ್ಟು ಆ ಸಸ್ಯ ಚೆನ್ನಾಗಿ ಬೆಳೆಯುತ್ತದೆ ಉತ್ತಮ ಇಳುವರಿ ಕೊಡುತ್ತದೆ.
ಟ್ರೆಂಚ್ ಪದ್ದತಿಯಲ್ಲಿ ಅಡಿಕೆ ನಾಟಿ:
- ಅಡಿಕೆ ಸಸಿಯನ್ನು ನೆಡುವಾಗ ಜೆಸಿಬಿ ಯಂತ್ರದ ಮೂಲಕ ಎಷ್ಟು ಉದ್ದ ಸಾಧ್ಯವೋ ಅಷ್ಟು ಉದ್ದಕ್ಕೆ ಅದರ ಬಕೆಟ್ ನಲ್ಲಿ ಮಣ್ಣು ತೆಗೆದು ಸಾಲು ಮಾಡಿ ನೆಡುವುದು ಸುಲಭ ಎಂಬುದು ಬಹಳ ರೈತರ ಅನಿಸಿಕೆ.
- ಈ ರೀತಿ ಟ್ರೆಂಚ್ ಮಾಡಿದಾಗ ಅದರ ಮಧ್ಯದ ಸ್ಥಳಾವಕಾಶದಲ್ಲಿ ವರ್ಷ ವರ್ಷ ಸಾವಯವ ತ್ಯಾಜ್ಯಗಳನ್ನು ತುಂಬಬಹುದು, ಹಾಗೆಯೇ ಸಸಿ ತಳಭಾಗದಲ್ಲೇ ಇದ್ದು, ಗಟ್ಟಿಮುಟ್ಟಾಗಿರುತ್ತದೆ ಎಂಬುದು ನಮ್ಮ ವಾದ.
- ಟ್ರೆಂಚ್ ಮಾಡಿದಾಗ ಮಣ್ಣೆಲಾ ಸಡಿಲವಾಗುತ್ತದೆ. ಬೇರು ಹೆಚ್ಚು ಅಗಲಕ್ಕೆ ಪ್ರಸಾರವಾಗುತ್ತದೆ. ಸಸಿ ಚೆನ್ನಾಗಿ ಬೆಳೆಯುತ್ತದೆ ಎನ್ನುತ್ತಾರೆ.
ಆದರೆ ಮೇಲಿನ ಯಾವುದೇ ಅನುಕೂಲಗಳು ಈ ಟ್ರೆಂಚ್ ಪದ್ದತಿಯಲ್ಲಿ ಈಡೇರುವುದಿಲ್ಲ. ಬದಲಿಗೆ ಸಸ್ಯ ಬೆಳವಣಿಗೆ ಗಣನೀಯವಾಗಿ ಕುಂಠಿತವಾಗುತ್ತದೆ. ಕೆಲವೇ ಕೆಲವು ಭೂ ಪ್ರಕೃತಿ ಮತ್ತು ಮತ್ತು ಮಣ್ಣಿನ ಗುಣಗಳಲ್ಲಿ (ಇಳಿಜಾರು ಮತ್ತು ತೀರಾ ನೀರು ಬಸಿಯುವ ಮಣ್ಣು ಇರುವಲ್ಲಿ) ಈ ಪದ್ದತಿಯಲ್ಲಿ ನಾಟಿ ಮಾಡಿದಾಗ ಅನುಕೂಲ ಆಗಿರಬಹುದೇ ವಿನಹ ಉಳಿದಲ್ಲಿ ಇದು ಸಮಸ್ಯೆಗಳ ಗೂಡಾಗುತ್ತದೆ.
ಯಾವ ಸಮಸ್ಯೆಗಳು:
- ಅಡಿಕೆ ಸಸಿಯನ್ನು ಟ್ರೆಂಚ್ ಪದ್ದತಿಯಲ್ಲಿ ನಾಟಿ ಮಾಡಿದಾಗ ಅದರ ಬೇರಿಗೆ ಉಸಿರುಕಟ್ಟಿದ ಸ್ಥಿತಿ ಉಂಟಾಗುತ್ತದೆ.
- ಬೇರುಗಳ ಬೆಳೆವಣಿಗೆಗೆ ತೊಂದರೆ ಉಂಟಾಗುತ್ತದೆ. ಬೇರು ಕೊಳೆಯುತ್ತದೆ.
- ತಂತು ಬೇರುಗಳು ಕವಲು ಒಡೆದರೂ ನೀರು ಹೆಚ್ಚಾಗಿ ಅವು ಉಸಿರುಕಟ್ಟಿ ಸಾಯುತ್ತವೆ.
- ಅಡಿಕೆ ಸಸ್ಯದ ಬೇರುಗಳು ಚೆನ್ನಾಗಿ ಬೆಳೆಯುತ್ತಾ ಇರಲು ಸಡಿಲವಾದ ಬರೇ ತೇವಾಂಶ ಮಾತ್ರ ಇರುವ ಮಣ್ಣು ಇರಬೇಕು.
- ಇದು ಟ್ರೆಂಚ್ ಪದ್ದತಿಯಲ್ಲಿ ಇರುವುದಿಲ್ಲ.
- ಸಾಮಾನ್ಯವಾಗಿ ಟ್ರೆಂಚ್ ಮಾಡುವಾಗ 2-2.5 ಅಡಿ ಅಳದ ಟ್ರೆಂಚ್ ಮಾಡುತ್ತಾರೆ.
- ಇದರ ತಳಭಾಗದಲ್ಲಿ ಗಟ್ಟಿ ಅಥವಾ ಜೇಡಿ ಮಣ್ಣೇ ಸಿಗುತ್ತದೆ.
- ಗಟ್ಟಿ ಮಣ್ಣು ಮತ್ತು ಜೇಡಿ ಮಣ್ಣು ನೀರನ್ನು ಬೇಗ ಬಸಿಯಲು ಬಿಡುವುದಿಲ್ಲ.
- ಸುಮಾರು ½ ,1 ಗಂಟೆ ನೀರು ಬಸಿಯಲು ಸಮಯ ಬೇಕಾಗುತ್ತದೆ.
- ನಿರಂತರ ಮಳೆ ಬರುತ್ತಿರುವ ದಿನಗಳಲ್ಲಿ ವಾರಗಟ್ಟಲೆ ನೀರು ನಿಂತಿರುತ್ತದೆ.
- ಕೆಲವು ಕಡೆ ಮಳೆಗಾಲದಲ್ಲಿ ಒರತೆಯೂ ಆಗುತ್ತದೆ.
- ಆಗ ಬಹುತೇಕ ಆಹಾರ ಸಂಗ್ರಹಿಸುವ ಬೇರುಗಳು ಸಾಯುತ್ತವೆ.
- ಬರೇ ಬುಡದಿಂದ ಹೊರಟ ಬೇರುಗಳು ಮಾತ್ರ ಇರುತ್ತವೆ.
- ಇಂತಹ ಸಸಿಗಳಲ್ಲಿ ಮಳೆಗಾಲ ಕಳೆದಾಗ ಹೊಸ ಬೇರು ಬರುತ್ತದೆ.
- ಮತ್ತೆ ಮಳೆಗಾಲದಲ್ಲಿ ಬೇರಿಗೆ ಹಾನಿಯಾಗುತ್ತದೆ.
- ವರ್ಷವೂ ಇದೇ ರೀತಿ ಆಗುವ ಕಾರಣ ಸಸಿ ಸಣಕಲಾಗಿ ಬೆಳೆಯುತ್ತದೆ.
- ಕೆಲವೊಮ್ಮೆ ಇಂತಹ ಗಿಡಗಳು ಬೇರು ಕೊಳೆ ರೋಗದಿಂದ ಸಾಯುವುದೂ ಇದೆ.
- ಸುಳಿ ಕೊಳೆ ಇದ್ಡೇ ಇರುತ್ತದೆ. ಕೆಲವು ಸಸಿಗಳನ್ನು ಗಟ್ಟಿಯಾಗಿ ದೂಡಿದರೆ ಅದು ವಾಲಿ ಬುಡ ಸಮೇತ ಬೀಳುತ್ತದೆ.
- ಇದಕ್ಕೆ ಕಾರಣ ಬೇರುಗಳ ಕೊರತೆ.
ಅಡಿಕೆ, ತೆಂಗು ಮುಂತಾದ ತಾಳೆ ಜಾತಿಯ ಮರಗಳು ಗಾಳಿಗೆ, ಮಳೆಗೆ ಬುಡ ಕಿತ್ತು ಬೀಳುವ ಪ್ರಮೇಯ ತುಂಬಾ ಕಡಿಮೆ. ಒಂದು ವೇಳೆ ಹೀಗೆ ಬೀಳುತ್ತವೆ ಎಂದಾದರೆ ಅಲ್ಲಿ ಬೇರುಗಳ ಪ್ರಮಾಣ ಕಡಿಮೆ ಇರುತ್ತವೆ.
ಹೇಗೆ ನೆಡಬೇಕು:
- ಹೊಂಡ ಮಾಡಿ ಆ ಹೊಂಡವನ್ನು ಮುಕ್ಕಾಲು ಪಾಲು ತುಂಬಿ, ಮೇಲೆ ಸಸಿ ನಾಟಿ ಮಾಡುವುದು ಎಲ್ಲದಕ್ಕಿಂತ ಉತ್ತಮ ಕ್ರಮ.
- ಹೊಂಡ ಪದ್ದತಿಯಲ್ಲಿ ಮಧ್ಯಂತದಲ್ಲಿ ಉಳಿಯುವ ಮಣ್ಣು ಹೆಚ್ಚುವರಿ ನೀರನ್ನು ಹೀರಿಕೊಂಡು ಸಸಿಗಳ ಬೇರುಗಳಿಗೆ ತೊಂದರೆ ಅಗದಂತೆ ರಕ್ಷಿಸುತ್ತದೆ.
- ಹೊಂಡ ಪದ್ದತಿಯಲ್ಲಿ ನೆಡುವ ಸಸಿಗಳಲ್ಲಿ 90% ಸಸಿಗಳು ಉತ್ತಮವಾಗಿ ಬೆಳೆಯುತ್ತದೆ.
- ಟ್ರೆಂಚ್ ಪದ್ದತಿಯಲ್ಲಿ 30-40 % ಸಸಿಗಳ ಬೆಳವಣಿಗೆ ಕುಂಠಿತವಾಗಿ,ಕೊನೆಗೆ ಒಂದಲ್ಲ ಒಂದು ದಿನ ಅದನ್ನು ತೆಗೆಯಬೇಕಾಗುತ್ತದೆ.
ಅಡಿಕೆ ಬೆಳೆಯುವ ಕರಾವಳಿ ಮಲೆನಾಡಿನಲ್ಲಿ ಉರೆ ಹುಟ್ಟಿದ( ಬಿದ್ದು ಹೆಕ್ಕಲು ಬಾಕಿಯಾದ ಅಡಿಕೆಯಿಂದ ಹುಟ್ಟಿದ ) ಸಸಿ ಎಷ್ಟು ಉತ್ತಮವಾಗಿ ಬೆಳೆಯುತ್ತದೆಯೋ ಅಷ್ಟು ನೆಟ್ಟು ಬೆಳೆಸಿದ ಸಸಿ ಬರುವುದಿಲ್ಲ. ಇದಕ್ಕೆ ಮುಖ್ಯ ಕಾರಣ, ಅದಕ್ಕೆ ಬೇರು ಹಬ್ಬಲು ಉತ್ತಮ ಅನುಕೂಲ ಲಭ್ಯವಾಗಿದೆ.
- ಟ್ರೆಂಚ್ ಪದ್ದತಿಯಲ್ಲಿ ನಾಟಿ ಮಾಡುವುದು ಸುಲಭ ಎನೋ ನಿಜ. ಟ್ರೆಂಚ್ ಮಾಡಿದ ನಂತರ ಸ್ವಲ್ಪ ಹೆಚ್ಚುವರಿ ಕೆಲಸ ಮಾಡಿ ನೆಡುವ ಅಂತರದಷ್ಟೇ ಹೊಂಡಗಳನ್ನು ಇಟ್ಟುಕೊಂಡು ಉಳಿದ ಭಾಗವನ್ನು ಮರಳಿ ಮಣ್ಣು ತುಂಬಿಸಿದರೆ ತೊಂದರೆ ಕಡಿಮೆ.
- ಟ್ರೆಂಚ್ ಮಾಡಿದಲ್ಲಿ ಕಡ್ದಾಯವಾಗಿ ಎರಡು ಸಸಿಗಳ ಬದಿಗೂ ಬಸಿಗಾಲುವೆ ಮಾಡಬೇಕು.
ಯಂತ್ರಗಳ ಮೂಲಕ ಭೂಮಿ ಸಿದ್ದತೆ ಮಾಡುವಾಗ ಬರೇ ಮಣ್ಣನ್ನು ಸಡಿಲ ಮಾಡಲು ಮಾತ್ರ ಅಗತೆ ಮಾಡಿ. ಸಸಿಗಳನ್ನು ಸಾಧ್ಯವಾದಷ್ಟು ಮೇಲ್ಭಾಗದಲ್ಲಿ ನಾಟಿ ಮಾಡಿ. ಮೈದಾನ ಪ್ರದೇಶದ ರೈತರು ನೆಲವನ್ನು ಸಡಿಲ ಮಾಡಿ (Shallow planting) ತೇಲಿಸಿ ನಾಟಿ ಮಾಡುತ್ತಾರೆ. ಇದು ಉತ್ತಮ ನಾಟಿ ಕ್ರಮವಾಗಿದೆ.
- ಬೇರು ಮೇಲೆ ಬರುತ್ತದೆ ಎಂಬುದು ತಪ್ಪು ಅಭಿಪ್ರಾಯ. ಈ ಸಸ್ಯಗಳ ಗುಣವೇ ಬೇರು ಮೇಲೆ ಬರುವುದು.
- ತಳಭಾಗದ ಒಂದು ಅಂತರದಲ್ಲಿರುವ ಬೇರುಗಳು ಮರಕ್ಕೆ ಗಟ್ಟಿತನವನ್ನು ಕೊಟ್ಟರೆ ಮೇಲ್ಭಾಗದಲ್ಲಿರುವ ಬೇರುಗಳು ಅಧಿಕ ಆಹಾರವನ್ನು ದೊರಕಿಸಿಕೊಡುತ್ತವೆ.
ಯಾವುದೇ ಕಾರಣಕ್ಕೆ ಕೆಲಸ ಸುಲಭವಾಗುತ್ತದೆ, ಗೊಬ್ಬರ ಹಾಕಲು ಸುಲಭ, ಸಸ್ಯ ಗಟ್ಟಿಯಾಗಿರುತ್ತದೆ ಎಂದು ಟ್ರೆಂಚ್ ಮಾಡಬೇಡಿ. ಇದರ ಬದಲಿಗೆ ಮತ್ತು ಮಿತವ್ಯಯದಲ್ಲಿ ತೇಲಿಸಿ ಮೇಲೆಯೇ ನೆಡಿ. ಇದು ಎಳವೆಯಲ್ಲೇ ಉತ್ತಮವಾಗಿ ಬೆಳೆದು ಬೇಗ ಫಲ ಕೊಡುತ್ತವೆ.
ನಿಮ್ಮ ಅನುಭವಗಳಿಗೆ ಸ್ವಾಗತ. ಕಮೆಂಟ್ ಬಾಕ್ಸ್ ನಲ್ಲಿ ಅನುಭವ ಹಂಚಿಕೊಳ್ಳಿ.
end of the article:
search words:# areca panting method # proper areca seedling planting # arecanut # Trench method of areca panting # Root rot cause # areca root rot # drainage for arecanut plants# shallow planting of arecanut # good planting method of beetle nut