ಬಾಳೆಯ ಎಲೆ ಹೀಗೆ ಆದರೆ ಅದು ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲ..

ಬಾಳೆ ಎಲೆ ವೈರಾಣು ರೋಗ ಚಿನ್ಹೆ- Virus diseae symptom

ಬಾಳೆ ಹಾಗೆಯೇ ಇನ್ನೂ ಕೆಲವು ಬೆಳೆಗಳಲ್ಲಿ ವೈರಾಣು ರೋಗ ಬಂದಿತೆಂದರೆ ಅದನ್ನು ಉಳಿಸಿದರೆ ಬೇರೆ ಬಾಳೆಗೆ ಹರಡುತ್ತದೆ. ಇದನ್ನು  ಮುಂಚಿತವಾಗಿ ಗುರುತಿಸಿ ಅದನ್ನು ನಾಶ ಮಾಡುವುದರಲ್ಲೇ ಇರುವುದು ಬಾಳೆಯ ರೋಗ ಮುಕ್ತ ಬೇಸಾಯ ಕ್ರಮ.

  • ನೀವು ನೆಟ್ಟ ಬಾಳೆಯ ಎಲೆಗಳು  ಸಹಜವಾಗಿ ಇರದೆ ಎಲೆಗಳ ಮೂಡುವಿಕೆ ಗುಚ್ಚದ ತರಹ ಆಗಿ, ಯಾವುದೂ ಪೂರ್ಣವಾಗಿ ಬಿಡಿಸಿಕೊಳ್ಳದಿದ್ದರೆ ಅದು ನಂಜಾಣು ರೋಗ.
  • ಕೆಲವು ಎಲೆಗಳು ಸಹಜವಾಗಿ ಬಂದು ನಂತರ ಬರುವ ಎಲೆಗಳು ಶಕ್ತಿ ಕಳೆದುಕೊಂಡು ಹಳದಿಯಾಗಿ ಮೂಡಿತೆಂದರೆ ಅದು ಸಹ ಒಂದು ವೈರಾಣು ರೋಗ.
  • ಈ ರೋಗಗಳನ್ನು ಪ್ರಾರಂಭವಾಗುವಾಗಲೇ ಗುರುತಿಸಿ, ಅಗಲೇ ಕ್ರಮ ಕೈಗೊಳ್ಳಬೇಕು.
  • ಎಲ್ಲದಕ್ಕಿಂತ ಮುಂಚೆ ಈ ರೋಗಗಳ  ಪ್ರಾರಂಭಿಕ ಚಿನ್ಹೆ ಹೇಗಿರುತ್ತದೆ ಎಂಬುದು ಅಗತ್ಯವಾಗಿ ಎಲ್ಲಾ ಬಾಳೆ ಬೆಳೆಯುವವರಿಗೂ ತಿಳಿದಿರಬೇಕು.
banana viral disease symptom - ಬಾಳೆಯ ಬಂಚಿ ಟಾಪ್ ರೋಗ ಲಕ್ಷಣ
ಬಾಳೆಯ ಬಂಚಿ ಟಾಪ್ ರೋಗ ಲಕ್ಷಣ

ಬಾಳೆ ಬೆಳೆಗೆ ಎರಡು ಬಗೆಯ ವೈರಸ್ ರೋಗಗಳು:

  • ಬಾಳೆಯಲ್ಲಿ ಪ್ರಾಮುಖ್ಯ ರೋಗ ಎಂದರೆ ಬಂಚೀ ಟಾಪ್  ಮತ್ತು  ಎಲೆಗಳ ಶಕ್ತಿ ಹೀನತೆ (infectious chlorosis)  ಇವೆರಡೂ ಪ್ರಪಂಚದಾದ್ಯಂತ ಕಂಡು ಬರುವ ರೋಗವಾಗಿದ್ದು, ಇದಕ್ಕೆ ಯಾವುದೇ ಔಷಧಿ ಅಥವಾ ಇನ್ಯಾವುದೇ ತಡೆಯುವ  ಪರಿಹಾರಗಳನ್ನು ಕಂಡುಕೊಳ್ಳಲಾಗಿಲ್ಲ.
  • ಇದು ಒಂದು ಸಾಂಕ್ರಾಮಿಕ ರೋಗವಾಗಿದ್ದು, ನೈಸರ್ಗಿಕವಾಗಿ ಇದು ಪ್ರಸಾರವಾಗುತ್ತದೆ.
  • ಇದು ನೆಡಲು ಬಳಕೆ ಮಾಡುವ ಸಸ್ಯ ಮೂಲದಿಂದ ಬರುತ್ತದೆ.
  • ಬಂಚೀ ಟಾಪ್ ಅಥವಾ ಎಲೆ ಗುಚ್ಚ ರೋಗಕ್ಕೆ ಕಾರಣವಾದ  ವೈರಾಣುವು ಪೆಂಟಲೋನಿಯಾ ನಿಗ್ರೊನೆರ್ವೊಸಾ (Pentalonia nigronervoosa) ಎಂಬ ಏಫಿಡ್ ಮೂಲಕ ಇದು ಪ್ರಸಾರವಾಗುತ್ತದೆ.
  • ಕೆಸುವಿನ ಸಸ್ಯದಲ್ಲಿ ಈ ವಾಹಕದ ವಾಸವಿರುತ್ತದೆ.
  • ಇದು ರೋಗಗ್ರಸ್ಥ  ಸಸ್ಯದ ರಸ ಹೀರಿ ಆರೋಗ್ಯವಂತ ಸಸ್ಯದಲ್ಲಿ ಕುಳಿತು ರಸ ಹೀರಿದಾದ ಪ್ರಸಾರವಾಗುತ್ತದೆ.
  • ಎಲೆಗಳ ಶಕ್ತಿ ಹೀನತೆ ಅಥಾವ ಎಲೆ ಹಳದಿಯಾಗುವಿಕೆಗೆ ಕಾರಣ ಸೌತೇ ಕಾಯಿ ಎಲೆಯ ಹಳದಿಯಾಗುವ (Cucumber mosic virus) ರೋಗಕ್ಕೆ ಕಾರಣವಾದ ವೈರಾಣು.
  • ಹಿಂದೆ ಬಾಳೆಯ ಗುಚ್ಚ ತಲೆ ರೋಗವೂ , ಎಲೆಯ ಶಕ್ತಿ ಹೀನತೆ ಅಥವಾ ತಿಳಿ ಹಸುರು ಆಗಿ ಹಳದಿ ಬಣ್ಣಕ್ಕೆ ತಿರುಗುವುದೂ ಒಂದೇ ರೋಗವೆಂದು ತಿಳಿಯಲಾಗಿತ್ತು. ಅನಂತರದ ಅಧ್ಯಯನಗಳು ಇದು ಪ್ರತ್ಯೇಕ ರೋಗ ಎಂಬುದನ್ನು ತೋರಿಸಿಕೊಟ್ಟಿವೆ.

ಪತ್ತೆ ಹೇಗೆ:

banana bunchy top symptom-ಬಾಳೆಯ ಬಂಚಿ ಟಾಪ್ ರೋಗದ ಚಿನ್ಹೆ
ಬಾಳೆಯ ಬಂಚಿ ಟಾಪ್ ರೋಗದ ಚಿನ್ಹೆ
  • ಬಾಳೆ ಸಸಿ ಬೆಳೆಯುತ್ತಿರುವಾಗ ಎಲೆಗಳು ಒಂದ ರಿಂದ ಒಂದು ಸ್ವಲ್ಪ ಸ್ವಲ್ಪ ಉದ್ದಕ್ಕೆ ಬೆಳೆಯಬೇಕು.
  • ಒಂದು ವೇಳೆ ಬೆಳೆಯುತ್ತಿರುವ ಬಾಳೆಯಲ್ಲಿ  ಎಲೆ ಸಣ್ಣದಾಯಿತು ಎಂದಾದರೆ ಅಲ್ಲಿ  ಈ ರೋಗದ ಬಗ್ಗೆ ಸಂದೇಹ ಪಡಬಹುದು.

ಎಲೆಯ  ಹೊಸ ಮೊಗ್ಗು ನೇರವಾಗಿ ಬೆಳೆದು ತುದಿ ತನಕ ತಲುಪಿ, ಎಲೆ ತೊಟ್ಟು ಮೂಡಿದ ತರುವಾಯ ಅದು ಬಿಡಿಸಿಕೊಳ್ಳುತ್ತದೆ. ಒಂದು ವೇಳೆ ಅರ್ಧದಲ್ಲೇ ಎಲೆ ಬಿಡಿಸಿಕೊಂಡರೆ ಅಲ್ಲಿ ವೈರಸ್ ರೋಗದ ಸಂದೇಹ ಪಡಬಹುದು.

banana viral disease symptom- ರೋಗ ಬಾಧಿತ  ಬಾಳೆಯ  ಹೊಸ ಸುಳಿ ಹೀಗೆ ಇರುತ್ತದೆ.
ರೋಗ ಬಾಧಿತ ಬಾಳೆಯ ಹೊಸ ಸುಳಿ ಹೀಗೆ ಇರುತ್ತದೆ.
  • ಎಲೆ ಬಿಡಿಸಿಕೊಂಡರೂ ಅದರ ಬಣ್ಣ ತಿಳಿ ಹಸುರು ಅಥವಾ ಹಸುರಿನೊಂದಿಗೆ ಹೆಚ್ಚು ಹಳದಿ ಇದ್ದರೆ ಅದು ಸಹ ವೈರಸ್ ರೋಗದ ಲಕ್ಷಣ.
  • ಕಂದು  ಮೂಡಿ ಬೆಳೆಯುವಾಗ ಅದರ  ಬಣ್ಣದಲ್ಲಿ ಕೆಂಪು ಬಣ್ಣದ ಪಟ್ಟೆಗಳು ಕಂಡು ಬಂದರೆ ಅದು ವೈರಸ್ ರೋಗಕ್ಕೆ ತುತ್ತಾಗಿದೆ ಎಂದರ್ಥ.
  • ಬಾಳೆ ಬೆಳೆದು ಗೊನೆ ಹಾಕಿ, ಗೊನೆ ಅರ್ಧಂಬರ್ಧ  ಹೊರಬಂದರೆ ಅದೂ ಸಹ ವೈರಸ್ ರೋಗದ ಲಕ್ಷಣ.
  •  ಗೊನೆ ಹಾಕಿದ ನಂತರ ಆ ಗೊನೆಯ ಕಾಯಿಗಳು ಸಣಕಲಾಗಿ ಬೆಳೆಯುತ್ತಿದ್ದರೆ ಅದಕ್ಕೆ ಆ ಹಂತದಲ್ಲಿ ವೈರಸ್ ಸೋಕು ತಗಲಿದೆ ಎಂದು ತಿಳಿಯಬಹುದು.
  • ಬಾಳೆಯ ಹೂ ಕುಂಡಿಗೆಯ ಬಣ್ಣ ಸ್ವಲ್ಪ ವ್ಯತ್ಯಾಸವಾಗಿ ಅಲ್ಲಲ್ಲಿ ಹಳದಿ ಬಣ್ಣದ ಗೆರೆಗಳು ಕಂಡು ಬಂದರೆ ಅದಕ್ಕೆ ವೈರಸ್ ರೋಗ ತಗಲಿದೆ ಎಂದರ್ಥ.
  •  ಕಂದುಗಳ ತುದಿ ಭಾಗ ಅರಳಿದಂತೆ ಇದ್ದರೆ ಅದಕ್ಕೆ ವೈರಸ್ ಸೋಂಕು ತಗಲಿದೆ ಎಂದು ತಿಳಿಯಬಹುದು.

Complete banana viral disease symptom - ರೋಗದ ಪೂರ್‍ಣ ಚಿನ್ಹೆ

ನಿವಾರಣೋಪಾಯಗಳು:

  • ಈ ರೋಗ ಬಾರದಂತೆ ತಡೆಯಲು  ಉತ್ತಮ ಮೂಲದ ಸಸ್ಯದ ಆಯ್ಕೆಯೇ ಪ್ರಧಾನ.
  • ಕಂದು ನಾಟಿಮಾಡುವವರಿಗೆ ರೋಗದ ಲಕ್ಷಣಗಳು ಯಾವುವು ಎಂದು ತಿಳಿದಿದ್ದರೆ ರೋಗ ಸೋಂಕು ಇಲ್ಲದ ಕಂದನ್ನು ಆಯ್ಕೆ  ಮಾಡುವುದು ಸುಲಭ.
  • ಯಾವುದೇ ಕಾರಣಕ್ಕೆ ಬಾಳೆಯನ್ನು ನೋಡದೆ ಕಂದನ್ನು ತರಬೇಡಿ.
  • ಅಂಗಾಂಶ ಕಸಿಯ ಸಸ್ಯಗಳನ್ನು ತರುವಾಗ ಅ ಪ್ರಯೋಗಾಲಯದಲ್ಲಿ ವೈರಸ್ ಸ್ಕ್ರೀನಿಂಗ್ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಿ.
  •  ಬಾಳೆ ಬೆಳೆಯುವಾಗ ಬುಡ ಭಾಗದಲ್ಲಿ ಕಳೆಗಳು ಬೆಳೆಯದಂತೆ ನೋಡಿಕೊಳ್ಳಿ. ಕೆಸುವಿನ  ಗಿಡಗಳು ಇರದಂತೆ  ಜಾಗರೂಕತೆ ವಹಿಸಿರಿ
  • ವೈರಸ್ ರೋಗ ಕಂಡು ಬಂದತಕ್ಷಣ ಆ ಬಾಳೆಯನ್ನು ತೆಗೆದು ನಾಶ ಮಾಡಿ.
  • ಉಳಿದ ಬಾಳೆಗೆ ಯಾವುದಾದರೂ ಅಂತರ್ ವ್ಯಾಪೀ ಕೀಟನಾಶಕವನ್ನು ಸಿಂಪರಣೆ ಮಾಡಿ.
  • ಕೀಟನಾಶಕದ ಸಿಂಪರಣೆಯಿಂದ ರೋಗ ಪ್ರಸಾರಕ ಎಫಿಡ್ ಗಳು ಸಾಯುತ್ತವೆ.

banana viral disease symptom

ರೋಗ ಬಂದ ಬಾಳೆಯನ್ನು ಕಡಿದ ಕತ್ತಿ ಇತ್ಯಾದಿ ಸಾಧನಗಳಿಂದ ಆರೋಗ್ಯವಂತ ಬಾಳೆಯನ್ನು ಸ್ಪರ್ಶಿಸದಿರಿ. ಅದನ್ನು ಬಿಸಿ ಉಪಚಾರ ಮಾಡಿಯೇ  ಇನ್ನೊಂದು ಬಾಳೆಯ ಕೈ ಇತ್ಯಾದಿ ಕಡಿಯಲು ಉಪಯೋಗಿಸಿ.
ರೋಗ ಲಕ್ಷಣಗಳನ್ನು ಪ್ರತೀಯೊಬ್ಬ ಬಾಳೆ ಬೆಳೆಗಾರ ಅರಿತು ಕೊಂಡು ರೋಗ ಪ್ರಾರಂಭಿಕ ಹಂತದಲ್ಲೇ ಇದನ್ನು ಗುರುತಿಸಿ  ಅದನ್ನು ವಿಲೇವಾರಿ ಮಾಡಿದರೆ ಮಾತ್ರ ಅದರ ಹಾನಿಯನ್ನು ಕಡಿಮೆ ಮಾಡಬಹುದು. ಹಾಗೇ ಬಿಟ್ಟರೆ ಅದು ಬಾಳೆಬೆಳೆಯನ್ನೇ   ಹಾಳು ಮಾಡಬಹುದು. ಇದಕ್ಕೆ ನಿರೋಧಕ ಶಕ್ತಿ ಪಡೆದ ಬಾಳೆ  ಇಲ್ಲ. ಕಾಡು ಬಾಳೆ, ಕಲ್ಲು ಬಾಳೆಗೆ ಈ ರೋಗ ಇಲ್ಲ.
end of the article:—————————————————
search words: banana diseases # banana bunchy top disease # banana cultivation# banana leaf # banana leaf  disease # infectious chlorosis # virus disease of banana #

Leave a Reply

Your email address will not be published. Required fields are marked *

error: Content is protected !!