ರೈತರ ನೆಮ್ಮದಿ ಕೆಡಿಸುತ್ತಿರುವ ಭೂ ವ್ಯಾಜ್ಯಗಳು.

Farmer is always un happy

100 ಜನರಲ್ಲಿ 50%  ಜನ ಭೂಮಿಗೆ ಸಂಬಂಧಿಸಿದ ತಕರಾರುಗಳನ್ನು ಹಿಡಿದುಕೊಂಡು ನ್ಯಾಯಪಡೆಯಲು ಜೀವಮಾನವನ್ನೇ ಸವೆಸುತ್ತಾರೆ. 100 ಕ್ಕೆ  99 ಜನ ನೆರೆ ಹೊರೆಯ ಕೃಷಿಕ ಸಹೋದ್ಯೋಗಿಗಳ ಜೊತೆಯಲ್ಲಿ ಮುಸುಕಿನ ಗುದ್ದಾಟದಲ್ಲಿರುತ್ತಾರೆ. ಭಾರತದ ಕೋರ್ಟು ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ವಕೀಲರುಗಳು ಬದುಕುವುದೇ ಭೂ ವ್ಯಾಜ್ಯಗಳಲ್ಲಿ. ಇಂಥಹ ಭೂ ಕಾಯಿದೆ ಜನಸ್ನೇಹಿಯೇ ? ಇದರ ಜನಸ್ನೇಹೀ ತಿದ್ದುಪಡಿಗೆ ರೈತರು ಸರಕಾರವನ್ನು  ಒತ್ತಾಯಪಡಿಸಬೇಕಾಗಿದೆ. 

  • ಹೆಣ್ಣು , ಹೊನ್ನು, ಮಣ್ಣು ಈ ಮೂರೂ ಮನುಕುಲವನ್ನು ಹಾಳು ಮಾಡುವುದು ನಿಶ್ಚಯ.
  • ಇದರಲ್ಲಿ ಎರಡಕ್ಕೆ ಸ್ವಲ್ಪ ಮಟ್ಟಿಗೆ ಇತಿ ಮಿತಿಗಳಿವೆ. ಆದರೆ ಮೂರನೆಯ ಮಣ್ಣು ಎಂಬುದು ಭಾರತ ದೇಶದ ಪ್ರತೀಯೊಬ್ಬ ಮನುಷ್ಯನ ಬಯಕೆಯಾಗಿದ್ದು, ಒಂದು ಗೌರವದ ಸೂಚಕವಾಗಿದೆ. ಆದ ಕಾರಣ ಭೂಮಿ ಎಂಬುದು ಗಲಾಟೆಯ, ವ್ಯಾಜ್ಯದ ಗೂಡಾಗಿದೆ.

ಎಲ್ಲದಕ್ಕೂ ಕಾರಣ ಭೂ ಒಡೆತನ:

Farmer shows his crop damage

  • ಕೆಲದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಕುಣಿಗಲ್ ತಾಲೂಕಿನ ಯಾವುದೋ ಪ್ರದೇಶದಲ್ಲಿ ಹುಲುಸಾಗಿ ಬೆಳೆದಿರುವ ಅಡಿಕೆ ಗಿಡಗಳನ್ನೆಲ್ಲಾ ಕಡಿದ ವೀಡಿಯೋ ಪ್ರಸಾರವಾಗುತ್ತಿದೆ.
  • ಗಿಡ ನೋಡಿದರೆ  ಹೊಟ್ಟೆ ಚುರುಕ್ಕೆನ್ನುತ್ತದೆ. ಅದನ್ನು ನೆಟ್ಟ ರೈತನಿಗೆ ಏನಾಗಿರಬಹುದು ಯೋಚಿಸಿ?
  • ಇದೆಲ್ಲಾ ಯಾಕೆ ನಡೆಯುತ್ತವೆ. ಕಾರಣ ಇಷ್ಟೇ  ಭೂಮಿಯ ಒಡೆತನದ ತಕರಾರು.
  • ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ಭೂ ಕಾಯಿದೆ ಅದು ಬ್ರಿಟೀಷರು ಮಾಡಿದ ಕಾಯಿದೆ.
  • ಹಾಗೆಂದು ಅದು ಕೆಟ್ಟದ್ದಲ್ಲ. ಅದನ್ನು ಸಮರ್ಪಕವಾಗಿ ಜ್ಯಾರಿಯಲ್ಲಿ ಇಡಲು ನಮ್ಮ ಆಡಳಿತ ವ್ಯವಸ್ಥೆಗೆ ಆಗುತ್ತಿಲ್ಲ.
  • ಕಂದಾಯ ಇಲಾಖೆ ಎಂಬ ಮಹಾ ಭ್ರಷ್ಟ ಇಲಾಖೆ   ಇದನ್ನು ನಿತ್ಯ ಜೀವಂತವಾಗಿಟ್ಟು ಜನತೆಯ ಚಂದ ನೋಡುತ್ತಿದೆ!

ಭೂ ವ್ಯಾಜ್ಯಗಳನ್ನು ಇತ್ಯರ್ಥ ಮಾಡಲಾಗುತ್ತಿಲ್ಲ:

  • ನಮ್ಮಲ್ಲಿ ಇನ್ನೂ ಸಹ ಭೂ ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕೆ ವ್ಯವಸ್ಥೆಗಳೇ ಇಲ್ಲ.
  • ಪ್ರತೀಯೊಂದು ಕಡೆಗಳಲ್ಲೂ  ( ಗ್ರಾಮ ಕರಣಿಕ, ತಹಶೀಲ್ದಾರ್ ಕಚೇರಿ, ಜಿಲ್ಲಾ ಡಳಿತ, ಕೋರ್ಟು ಕಾನೂನು) ವಿಳಂಬ ಮತ್ತು ಅಸಮರ್ಪಕ ನ್ಯಾಯದಾನವಾಗುವ ಕಾರಣ ಭೂಮಿಯ ಮಾಲಿಕತ್ವವು ಯಾವಾಗಲೂ ಅಡ್ದ ಗೋಡೆಯ ಮೇಲೆ ಇಟ್ಟ ಕಾಯಿಯಂತೆಯೇ ಇರುತ್ತದೆ.
  • ಎಲೆಲ್ಲೂ ಲಂಚ, ಪ್ರಭಾವಗಳಲ್ಲೇ ಈ ವ್ಯವಹಾರ ನಡೆಯುತ್ತಿದೆ.
  • ನ್ಯಾಯಲಯವೆಂಬ ವ್ಯವಸ್ಥೆಯೊಳಗೆ ಭೂ ವ್ಯಾಜ್ಯಗಳು ಒಬ್ಬನ ಜೀವಮಾನದಲ್ಲಿ ಇತ್ಯರ್ಥವಾಗದಷ್ಟೂ ನಿಧಾನಗತಿಯಲ್ಲಿ ಸಾಗುತ್ತಿದೆ.

Land litigation effect

 ಏನು ಪರಿಹಾರ: 

  • ಭೂಮಿ ಎಂಬುದು ನಾಗರೀಕನ  ಮೂಲಭೂತ ಹಕ್ಕು ಆಗಿ ಇಲ್ಲ. ಅದಕ್ಕೆ ಅನುಭೋಗದ ಹಕ್ಕು ಮಾತ್ರ ಇರುತ್ತದೆ.
  • ಹೀಗಿರುವಾಗ  ಯಾಕಾಗಿ ಈ ಗಡಿ ವ್ಯಾಜ್ಯಗಳು, ಪಾಲು ಇತ್ಯಾದಿ ತಂಟೆ ತಕರಾರುಗಳು ತಿಳಿಯುತ್ತಿಲ್ಲ.
  • ಗಡಿ ತಕರಾರನ್ನು ಸರಿ ಮಾಡಬೇಕು. ಬಹುಷಃ ಬ್ರಿಟೀಷರ ಕಾಲದಲ್ಲಿ ಭೂ ಸರ್ವೇ ನಡೆದ ನಂತರ ನಮ್ಮ ಸರಕಾರ ಅದನ್ನು ಮರಳಿ ಮಾಡಿಲ್ಲ.
  • ಗಡಿ ತಕರಾರು ಈ ಕಾರಣಕ್ಕಾಗಿಯೇ ನಡೆಯುತ್ತಿದೆ. ಗಡಿ ತಕರಾರು ಇತ್ಯರ್ಥ ಮಾಡಲು ಅಂತಹ ಕಷ್ಟ ಇಲ್ಲ.
  • ಇದನ್ನು ಸೆಟಲೈಟ್ ಸರ್ವೆ ಸಹ ಮಾಡಲಿಕ್ಕಾಗುತ್ತದೆ. ಆದರೆ ಮಾಡುವವರಿಲ್ಲ.
  • ಗಡಿ ತಕರಾರರನ್ನು ಜೀವಂತವಾಗಿಯೇ ಇರಿಸಲಾಗುತ್ತದೆ.

ಸರಕಾರ ಭೂ ಸುಧಾರಣೆ ಮುಂತಾದ ಬಂಡವಾಳ ಶಾಹಿಗಳನ್ನು ಓಲೈಸುವ ಕಾಯಿದೆಯನ್ನು ಜ್ಯಾರಿಗೆ ತರುವ ಬದಲಿಗೆ ಇಂಥಹ ಜನನೋಪಕಾರೀ ಕೆಲಸಗಳನ್ನು ಅದ್ಯತೆಯಲ್ಲಿ ಮಾಡಿದರೆ  ಗಲಾಟೆ, ಕೊಲೆ, ಕೋರ್ಟು ಕಚೇರಿಗಳ ಅಲೆದಾಟ ಕಡಿಮೆಯಾಗಬಹುದು.

  • ಸರಕಾರ ಭೂಮಸೂದೆಗಳನ್ನು ಎಷ್ಟು ಬೇಕಾದರೂ ತರಲಿ. ಆದರೆ ಇಂತಹ  ಮೂಲ ಸಮಸ್ಯೆಯನ್ನು ಮೊದಲಾಗಿ ಸರಿಪಡಿಸಲಿ.

ಸಾಗುವಳಿ, ಅಥವಾ ಕೃಷಿ ಮಾಡುವವನಿನಿಗೆ ಕಾನುನಿನ ಬೆಂಬಲ ಬೇಕು.ಒಬ್ಬ ಯಾವುದೋ ತಕರಾರಿನ ಸ್ಥಳದಲ್ಲಿ ಅಡಿಕೆ, ತೆಂಗು ಗಿಡ ನೆಟ್ಟ ಎಂದಾದರೆ ಅದು ಅವನ ಕೃಷಿ ಮಾಡುವ ಉತ್ತಮ ಮನಸ್ಸು. ತಡೆಯುವುದಿದ್ದರೆ ನೆಡುವ ಮುಂಚೆ ಅದನ್ನು ಮಾಡಬಹುದು. ಹೊಲವನ್ನು ಪಾಳು ಬಿಡುವವನಿಗಿಂತ ಕೃಷಿ ಮಾಡುವವನೇ ಎಷ್ಟೋ ವಾಸಿ.

  • ಕಾನೂನು ಪಾಲಕರಾದ ಕಂದಾಯ ಇಲಾಖೆ  ಹಾಗೂ ನ್ಯಾಯಾಲಯಗಳು ಅವನ ಪರವಾಗಿ ಇರಬೇಕೇ ಹೊರತು ಅದನ್ನು ನಾಶ ಪಡಿಸುವ ಕಾನೂನು ಅಮಾನವೀಯ ಮತ್ತು ದೇಶಕ್ಕೇ ಅಪಮಾನ.

ಕೃಷಿ ಭೂಮಿ ವ್ಯಾಜ್ಯಕ್ಕೆ ನ್ಯಾಯಾಲಯ ಬೇಕೇ?

  • ಕೃಷಿ ಭೂಮಿಯ ವ್ಯಾಜ್ಯ ಎಂದರೆ ಅಣ್ಣ ತಮ್ಮ ತಂಗಿಯಂದಿರ ವ್ಯಾಜ್ಯ ಅಥವಾ ನೆರೆಹೊರೆಯವರ ವ್ಯಾಜ್ಯ.
  • ಇದನ್ನು ಸ್ಥಳೀಯವಾಗಿಯೇ ಪರಿಹರಿಸುವುದು ಸೂಕ್ತ.
  • ಇದಕ್ಕೆ ಸ್ಥಳೀಯವಾಗಿ ಭೂ ಟ್ರಿಬ್ಯೂನಲ್ ಮಾಡಬಹುದು, ಅಥವಾ ಸ್ಥಳೀಯ ಪಂಚಾಯತ್ ಸರ್ವಪಕ್ಷ ಮುಖಂಡರು  ತೀರ್ಮಾನ ಮಾಡಬಹುದು.
  • ಅದು ಬಿಟ್ಟು ನ್ಯಾಯಾಲಯಕ್ಕೆ ಇದನ್ನು ಒಯ್ಯುವಂತೆ ಮಾಡುವುದು ನಿಜವಾಗಿಯೂ ರೈತನಿಗೆ ಮಾಡುವ ಅನ್ಯಾಯ.

ಹೊಲದ ಪಾಲು- ನಿಷೇಧಿಸಬೇಕು:

  • ಭಾರತ ದೇಶದಲ್ಲಿ ಈ ತನಕ ಕೃಷಿ ಎಡವುತ್ತಾ ಸಾಗಿದ್ದರೆ ಅಥವಾ ಅದಕ್ಕೆ ಮಹತ್ವ ಬಂದಿಲ್ಲವಾದರೆ ಅದಕ್ಕೆ ಮುಖ್ಯ ಕಾರಣ ಹರಿದು ಹಂಚಿ ಹೋದ ಸಣ್ಣ ಸಣ್ಣ ಹಿಡುವಳಿಗಳು.
  • ಇದನ್ನು ಯಥಾಸ್ಥಿತಿಯಲ್ಲಿ ಉಳಿಸಿದರೆ ಅಥವಾ ಹಿಡುವಳಿ ದೊಡ್ದದು ಮಾಡಿದರೆ ನಮ್ಮ ದೇಶದಲ್ಲಿ ಕೃಷಿ ಉತ್ಪಾದನೆ ಈಗಿನ ಸ್ಥಿತಿಯಿಂದ ಭಾರೀ ಮುನ್ನಡೆ ಸಾಧಿಸಲಿದೆ.
  • ಈಗ ಇದಕ್ಕೆ ಅಡ್ಡಿ, ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಎಂಬ ಕಾಯಿದೆಯನ್ನು ಎಂದಿಗೆ ನಿಲ್ಲಿಸಲಾಗುವುದಿಲ್ಲವೋ ಆ ತನಕ ಭಾರತದ ಕೃಷಿ ವ್ಯವಸ್ಥೆ  ಮುಂದುವರಿಯುವುದಿಲ್ಲ.
  • ಕುಟುಂಬದ ಯಾವ  ಸದಸ್ಯ  ಹೊಲವನ್ನು ಬೆಳೆ ಬೆಳೆಸಿ ರೂಢಿಯಲ್ಲಿ ಇಟ್ಟುಕೊಂಡಿದ್ದಾನೆಯೋ ಅವನೇ ಅದರ ಅಂತಿಮ ಹಕ್ಕುದಾರನಾಗಬೇಕು.
  • ಉಳಿದವರು ಕೃಷಿ ಬೆಡ ಎಂದು ಬೇರೆ ಉದ್ಯೋಗ ಅರಸಿ ಹೋದವರು  ತಮ್ಮ ಮನೆಗೇ ಹುಳಿ ಹಿಂಡುವ ಇಂತಹ ಅಮಾನವೀಯ ಕಾನೂನು ಇರಲೇ ಬಾರದು.

ರೈತರೇ ಇಂತಹ ವಿಚಾರಗಳನ್ನು ತಾವೆಲ್ಲಾ ಒಟ್ಟು ಸೆರಿಸಿ, ಸಂಬಂಧಿಸಿದವರ ಗಮನಕ್ಕೆ ತನ್ನಿ. ಸಾಧ್ಯವಾದಷ್ಟು ಇದನ್ನು ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಳ್ಳಿ. ಆಡಳಿತ ಶಾಹಿಗಳಿಗೆ ವಾಸ್ತವಿಕತೆ ಅರಿವಿಗೆ ಬಂದು ಇದಕ್ಕೆ ಪರಿಹಾರ ದೊರೆಯುವ ತನಕವೂ ರೈತಾಪಿ ವರ್ಗದ ಶಾಂತ ಹೋರಾಟ ಮುಂದುವರಿಯಬೇಕು.

Leave a Reply

Your email address will not be published. Required fields are marked *

error: Content is protected !!