ಕಳೆದ ಕೆಲವು ವರ್ಷಗಳಿಂದ ಅಡಿಕೆ ಬೆಳೆಗಾರರು ಸಸಿ/ ಮರದ ಸುಳಿ ಕೊಳೆಯುವ/ ಬುಡ ಕೊಳೆಯುವ ತೊಂದರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಎದುರಿಸುತ್ತಿದ್ದಾರೆ. ಹವಾಮಾನ ವೆತ್ಯಾಸ ಮತ್ತು ಇನ್ನಿತರ ಕಾರಣಗಳಿಂದ ಇದು ಆಗುತ್ತದೆ.
ಸಂಜೆ ಮಳೆ ಬರುತ್ತದೆ, ಹಗಲು ಭಾರೀ ಪ್ರಖರವಾದ ಬಿಸಿಲು. ಈ ಸನ್ನಿವೇಶದಲ್ಲಿ ಅಡಿಕೆ, ತೆಂಗು ಮುಂತಾದ ಸಸಿ/ ಮರದ ಎಳೆಯ ಸುಳಿ ಭಾಗದಲ್ಲಿ ಒಂದು ಶಿಲೀಂದ್ರ ಬೆಳೆದು ಅದು ಆ ಭಾಗವನ್ನು ಕೊಳೆಯುವಂತೆ ಮಾಡಿ ಮರದ ಮೊಳೆಕೆ ತನಕ ವ್ಯಾಪಿಸಿ ಗಿಡವನ್ನು ಸಾಯುವಂತೆ ಮಾಡುತ್ತದೆ. ಇದು ಈಗ ಎಲ್ಲಾ ಕಡೆ ಕಂಡೂ ಬರುತ್ತಿದೆ.
ಮಳೆಗಾಲ ಪ್ರಾರಂಭವಾಗಿ ಮುಗಿಯುವ ತನಕವೂ ನೀವು ತೋಟದಲ್ಲಿ ಓಡಾಡುವಾಗ ಮರದ ಬುಡ ಭಾಗಮಾತ್ರ ನೊಡುವುದಲ್ಲ.ಸುಳಿಭಾಗವನ್ನು ಅಗತ್ಯವಾಗಿ ನೋಡುತ್ತಿರಬೇಕು.ಸುಳಿಯ ಇನ್ನೂ ಅರಳದ ಎಲೆ ಏನಾದರೂ ಬಾಡಿದಂತಿದೆಯೇ, ಹಳದಿಯಾಗಿದೆಯೇ ಎಂದು ನೋಡುತ್ತಿರಿ. ಸಾಮಾನ್ಯವಾಗಿ ಈ ಸಮಯದಲ್ಲಿ 2-5 % ದಷ್ಟು ಸಸಿ/ ಮರಗಳು ಈ ರೀತಿ ಆಗುತ್ತದೆ.ಇದು ಅಡಿಕೆಯ ಕಾಯಿಗಳಿಗೆ ಬರುವಬರುವ ಕೊಳೆರೋಗದ ಶಿಲೀಂದ್ರದಿಂದಲೇ ಆಗುವಂತದ್ದು. ಹಾಗೇ ಬಿಟ್ಟರೆ ಅದು ಉಳಿದ ಗಿಡಕ್ಕೆ ಪ್ರಸಾರವಾಗಿ ಹೆಚ್ಚು ಹೆಚ್ಚು ಸಾಯುತ್ತದೆ.
ಯಾಕೆ ಹೀಗಾಗುತ್ತದೆ:
- ಅಡಿಕೆಗೆ ಸಸಿಗಳ ಸುಳಿ ಕೊಳೆ ರೋಗಕ್ಕೆ ಕಾರಣ ಫೈಟೋಪ್ಥೆರಾ ಶಿಲೀಂದ್ರ.
- ಬರೇ ಸುಳಿ ಮಾತ್ರವಲ್ಲ, ಸಸ್ಯಗಳ ಬುಡ ಭಾಗವೂ ಕೊಳೆಯುತ್ತದೆ.
- ಸುಳಿ ಕೊಳೆಗೆ Bud rot ಎನ್ನುತ್ತಾರೆ. ಬುಡ ಕೊಳೆಗೆ (foot rot) ಎನ್ನುತ್ತಾರೆ. ಎರಡಕ್ಕೂ ಕಾರಣ ಒಂದೇ ಶಿಲೀಂದ್ರ.
- ಇದು ಅಡಿಕೆ ಮರಗಳಿಗೆ ಎಲ್ಲಿಂದ ಬರುತ್ತದೆ ಎಂಬ ಬಗ್ಗೆ ಹಲವರು ಹಲವು ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಾರೆ.
- ಗಾಳಿ ಮೂಲಕವೂ ಪ್ರಸಾರವಾಗುತ್ತದೆ. ನೀರಿನ ಮೂಲಕವೂ ಪ್ರಸಾರವಾಗುತ್ತದೆ.
- ಒಮ್ಮೆ ಅಡಿಕೆ ತೋಟದೊಳಗೆ ಪ್ರವೇಶವಾದರೆ ಅದು ಅಲ್ಲೇ ಇರುತ್ತದೆ ಎನ್ನುತ್ತಾರೆ ಸಂಶೋಧನೆ ನಡೆಸಿದವರು.
ಅಡಿಕೆ ಮರದ ಬುಡದಲ್ಲಿ, ಮರದ ಹಾವಸೆ ಹಿಡಿದ ಭಾಗ ಮತ್ತು ಹೂ ಗೊಂಚಲು ಬಿಡುವ ಗಂಟಿನ ಭಾಗದಲ್ಲಿ ಅದು ಬೀಜಾಣು ರೂಪದಲ್ಲಿ ಇದ್ದು ಅದರ ಬೀಜಾಂಕುರವಾಗಲು ಸೂಕ್ತ ವಾತಾವರಣ ದೊರೆತಾಗ ಅದು ಕ್ರಿಯಾತ್ಮಕವಾಗುತ್ತದೆ ಎನ್ನುತ್ತದೆ ಲೆಸ್ಲೀ ಸಿ ಕೋಲ್ಮನ್ ಇವರು ಬರೆದ ಕೊಳೆ ರೋಗ ಕುರಿತ ಕನ್ನಡದ ಪುಸ್ತಕ.
- ನಾವು ಸಿಂಪಡಿಸುವ ಕೊಳೆ ನಾಶಕಗಳು ಈ ಶಿಲೀಂದ್ರವನ್ನು ಹತ್ತಿಕ್ಕುತ್ತದೆ ಅಥವಾ ಬೀಜಾಂಕುರವಾಗಲು ಬಿಡುವುದಿಲ್ಲ ಅಷ್ಟೇ ಹೊರತು ಶಿಲೀಂದ್ರವನ್ನು ಸಾಯಿಸುವುದಿಲ್ಲ. ಆದ ಕಾರಣ ಶಿಲೀಂದ್ರ ಅಲ್ಲಿಂದ ಹೋಗುವುದು ಕಡಿಮೆ.
- ಈ ಶಿಲೀಂದ್ರ ತಾಳೆ ಜಾತಿಯ ಸಸ್ಯಗಳ ಎಳೆ ಭಾಗವನ್ನು ಮೊದಲಾಗಿ ಹಾನಿ ಮಾಡುತ್ತವೆ.
- ಇದಕ್ಕೆ ಬೆಳೆಯಲು ಎಳೆ ಭಾಗವೇ ಆಸರೆ. ಬದನಿಕೆಯ ತರಹ ಅಲ್ಲಿ ಬೆಳೆದು ಆಸರೆಗೇ ಹಾನಿ ಮಾಡುತ್ತದೆ.
- ಮಿಲಿಯಾಂತರ ಸಂಖ್ಯೆಯಲ್ಲಿ ಬೆಳೆದು ನಂತರ ಪ್ರಸಾರವಾಗುತ್ತದೆ.
- ಶಿಲೀಂದ್ರ ಬಾಧಿಸಿದಾಗ ಆ ಭಾಗ ಮೊದಲು ಬೆಂದಂತೆ ಆಗುತ್ತದೆ.
- ನಂತರ ಒಂದೆರಡು ದಿನದಲ್ಲಿ ಕೊಳೆಯುತ್ತದೆ. ಮತ್ತು ಹೆಚ್ಚು ದಿನ ಆದಾಗ ಅದು ಒಣಗುತ್ತದೆ.
- ಕೊಳೆತ ವಾಸನೆ ಬರುತ್ತದೆ.
- ತೀವ್ರವಾಗಿ ರೋಗ ಬಾಧಿಸಿದಲ್ಲಿ ಅಡಿಕೆಸಸಿಯ ಮೊಗ್ಗು ಪೂರ್ತಿ ಕೊಳೆತು ಬೇರಿಗೂ ವ್ಯಾಪಿಸಿ ಗಿಡ ಸಾಯುತ್ತದೆ.
- ಕೆಲವೊಮ್ಮೆ ಅಡಿಕೆ ಮರದ ಬುಡದಲ್ಲಿ ಕೊಳೆಯುವ ಶಿಲೀಂದ್ರ ಪ್ರವೇಶವಾದರೆ ಬೇರು ಮೊದಲಾಗಿ ಕೊಳೆಯುತ್ತದೆ.
- ಕ್ರಮೇಣ ಕೆಲವೇ ದಿನಗಳಲ್ಲಿ ಶಿರಭಾಗದ ಗರಿಗಳು ಹಳದಿಯಾಗಿ ಒಣಗುತ್ತದೆ.
- ಸುಳಿ ಕೊಳೆತು ಮಿತಿ ಮೀರಿದಾಗ ಶಿರ ಭಾಗ ಕಳಚಿ ಬೀಳುತ್ತದೆ.
- ಬುಡ ಕೊಳೆತರೆ ಮರ ಬೀಳುವುದು ತಡವಾಗುತ್ತದೆ.
- ಶಿರ ಬಾಗ ಬೇಗ ಕಳಚಿ ಬಿದ್ದು, ಮರ ಅಣಬೆ ರೋಗ ಬಂದು ಸಾಯುತ್ತದೆ.
ನಿಯಂತ್ರಣ ಹೇಗೆ:
ಕೊಳೆಯುವ ಯಾವುದೇ ರೋಗವಾದರೂ ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಸೂಕ್ತ ಪರಿಹಾರ ಕ್ರಮ ಕೈಗೊಂಡರೆ ಮಾತ್ರ ಅದರ ನಿಯಂತ್ರಣ ಸಾಧ್ಯ, ತಡವಾದರೆ ಪ್ರಯೋಜನ ಇಲ್ಲ. ಎಷ್ಟು ಬೇಗ ಗುರುತಿಸುತ್ತೀರೋ ಅಷ್ಟು ಅದು ಉಳಿಯುವ ಸಾಧ್ಯತೆ ಹೆಚ್ಚು.
- ಸುಳಿ ಕೊಳೆ ರೋಗ ಬಂದಿದ್ದರೆ ಅದರ ಎಲ್ಲಾ ಅವಶೇಷಗಳನ್ನೂ ತೆಗೆದು ಸ್ವಚ್ಚ ಮಾಡಿ.
- ಸ್ವಚ್ಚ ಮಾಡುವಾಗ ಕೆಳಭಾಗದಲ್ಲಿ ಒಂದು ಪ್ಲಾಸ್ಟಿಕ್ ಹಾಳೆ ಹಾಕಿ.
- ಎಲ್ಲಾ ಕೊಳೆತ ಭಾಗಗಳೂ ಅದರಲ್ಲಿ ಸಂಗ್ರಹವಾಗಲಿ.
- ಒಂದು ಕಡೆ ಸ್ವಲ್ಪ ಒಣ ತ್ಯಾಜ್ಯಗಳನ್ನು ಹಾಕಿ ಅದಕ್ಕೆ ಬೆಂಕಿ ಕೊಟ್ಟು ಅದನ್ನೆಲ್ಲಾ ಸುಡಿ.
- ಕೊಳೆ ರೋಗ ನಿರ್ವಹಣೆಯ 75% ಕೆಲಸ ಅಲ್ಲಿಗೆ ಮುಗಿದಂತೆ.
- ಕೊಳೆತ ಭಾಗವನ್ನು ತೆಗೆಯುವಾಗ ಅದು ಸಸಿ ಇರಲಿ, ಮರ ಇರಲಿ, ಶಿರ ಭಾಗವನ್ನು ಕಡಿದು ತೆಗೆಯಬಾರದು.
- ಚಿತ್ರದಲ್ಲಿ ತೋರಿಸಿದಂತೆ ಆ ಭಾಗವನ್ನು ತೆರೆದು ಸಾಧ್ಯವಾದಷ್ಟು ಎಲೆಗಳನ್ನು ಉಳಿಸಿ ಎಲ್ಲಾ ಕೊಳೆತ ಭಾಗವನ್ನು ತೆಗೆಯಬೇಕು, (ಸರಿ ಇರುವ ವರೆಗೆ)
- ಶಿರ ಭಾಗವನ್ನು ಕಡಿದು ತೆಗೆದರೆ ಆ ಸಸಿ ಬದುಕುವ ಸಾಧ್ಯತೆ ಕಡಿಮೆ.
- ಕಡಿಯುವಾಗ ಅದು ಮೊಳಕೆಗಿಂತ ಕೆಳಗೂ ಗೋಗಬಹುದು. ಹೊಸ ಮೊಳಕೆ ಬರಲು ಎಲೆಗಳು ಇದ್ದರೆ ಅನುಕೂಲವಾಗುತ್ತದೆ.
- ಆಹಾರ ದೊರೆತು ಆರೋಗ್ಯಕರ ಮೊಳಕೆ ಬರುತ್ತದೆ.
- ಸ್ವಚ್ಚ ಮಾಡಿದ ಭಾಗಕ್ಕೆ ಬೋರ್ಡೋ ಪೇಸ್ಟ ಹಚ್ಚಿ. ಅದರ ಲಭ್ಯತೆ ಇಲ್ಲವಾದರೆ ಯಾವುದದರೂ ಅಂತರ್ ವ್ಯಾಪೀ ಶಿಲೀಂದ್ರ ನಾಶಕ ಬಳಸಿ.ಸೆಕ್ಟಿನ್ ಅಥವಾ SAAF ಎಂಬ ಶಿಲೀಂದ್ರ ನಾಶಕ ವು ಹೆಚ್ಚು ಪರಿಣಾಮಕಾರಿಯಾಗುತ್ತದೆ.
- ಮರಕ್ಕೆ ಉತ್ತೇಜಕವಾಗಿ ಕೆಲಸ ಮಾಡುತ್ತದೆ ಎಂಬ ಕಾರಣಕ್ಕೆ ಪೊಟಾಶಿಯಂ ಫೋಸ್ಪೋನೇಟ್ ಬಳಕೆ ಹೆಚ್ಚು ಮಾಡಬೇಡಿ ಎನ್ನುತ್ತಾರೆ.
- ಆದರೆ ಅದರಲ್ಲಿ ನಿಯಂತ್ರಣ ಆಗುತ್ತದೆ.
- ಇದನ್ನು ಮುನ್ನೆಚ್ಚರಿಕೆಯಾಗಿ ಬಳಕೆ ಮಾಡಬೇಕು.
- ಒಂದೆರಡು ಗಿಡ/ ಮರಗಳಿಗೆ ಹಾನಿಯಾದರೆ ಉಳಿದ ಗಿಡ/ ಮರಗಳಿಗೆ ಸೋಂಕು ತಗಲದಂತೆ ಇದು ತಡೆಯುತ್ತದೆ.
- ಎಲ್ಲಾ ಎಲೆಗಳಿಗೆ ಇದನ್ನು ಸಿಂಪಡಿಸಬೇಕು.
- ಬುಡ ಕೊಳೆಯುವ ರೋಗಕ್ಕೂ ಎಲೆ ಸ್ವಲ್ಪ ಹಳದಿಯಾದಂತೆ ಕಂಡರೆ ಬೇರು ವಲಯಕ್ಕೆ ತೊಯ್ಯುವಂತೆ ಸುಮಾರು 5-10 ಲೀ. (5 ಗ್ರಾಂ/ಲೀ) ನಂತೆ ಹೊಯ್ಯಬೇಕು.
ಅಡಿಕೆ ಸಸ್ಯಕ್ಕೆ ಹೆಚ್ಚು ಸಾರಜನಕ ಕೊಡಬೇಡಿ. ಸಮತೋಲನ ಪ್ರಮಾಣದ ಗೊಬ್ಬರ ಕೊಡಿ.ಮರದ ಕಾಂಡ ಲೆಕ್ಕಕ್ಕಿಂತ ದಪ್ಪ ಆಗದಿರಲಿ. ನೀರಾವರಿಯನ್ನೂ ಅಗತ್ಯಕ್ಕಿಂತ ಹೆಚ್ಚು ಮಾಡಬೇಡಿ.ಬಸಿಗಾಲುವೆ ಇರಲಿ. ನೀರು ಸಸಿಯಾಗಿ ಬಸಿಯದ ಮಣ್ಣಿನಲ್ಲಿ ಅಡಿಕೆ ಸಸಿ ನೆಡುವಾಗ ಬಸಿಯುವಂತೆ ಮಾರ್ಪಾಡು ಮಾಡಿಯೇ ನೆಡುವುದು ಸೂಕ್ತ.
One thought on “ಅಡಿಕೆ – ಸುಳಿ ಕೊಳೆಯುವುದಕ್ಕೆ ಕಾರಣ ಮತ್ತು ಪರಿಹಾರ.”