ಅಡಿಕೆ ಸಸಿ ನೆಡಬೇಕೆಂದಿರುವಿರಾ? ಹಾಗಿದ್ದರೆ, ನೆಡುವ ಸಮಯದಲ್ಲಿ ಮಾಡಬೇಕಾದ ರಕ್ಷಣಾತ್ಮಕ ಕೆಲಸಗಳ ಬಗ್ಗೆ ತಿಳಿದುಕೊಂಡು ಮಾಡಿ.
ಈ ವರ್ಷ ಬಹಳಷ್ಟು ಜನ ಅಡಿಕೆ ಕೃಷಿ ಮಾಡಲು ತಯಾರಿ ನಡೆಸಿದ್ದಾರೆ. ಕೆಲವರು ಸಸಿ ನೆಟ್ಟು ಆಗಿದೆ. ಇನ್ನು ಕೆಲವರು ಇನ್ನೇನು ನೆಡಬೇಕಾಗಿದೆ. ಇರುವ ಬೆಳೆಗಳಲ್ಲಿ ಸ್ವಲ್ಪವಾದರೂ ಹೆಚ್ಚು ಆದಾಯ ಕೊಡಬಲ್ಲ ಬೆಳೆ ಅಡಿಕೆ. ಆದ ಕಾರಣ ಜಾಗ ಇದ್ದವರು ಅಡಿಕೆ ಸಸಿ ನೆಡಿ. ಆದರೆ ಅಡಿಕೆ ತೋಟ ಮಾಡುವಾಗ ಧೀರ್ಘಾವಧಿ ಯೋಚನೆ ನಿಮ್ಮಲ್ಲಿರಲಿ. ಸಸಿ ನೆಡುವ ಸಮಯದಲ್ಲೇ ಇದನ್ನು ಮಾಡಿಕೊಳ್ಳುವುದು ಸೂಕ್ತ. ಅಂತಹ ಕೆಲವು ಅಗತ್ಯ ಕೆಲಸಗಳ ಪಟ್ಟಿ ಹೀಗಿದೆ.
- ಸುಮಾರು 25 ವರ್ಷಗಳ ಹಿಂದೆ ಬಂಟ್ವಾಳ ತಾಲೂಕು ಶಂಬೂರಿನ ಹಿರಿಯ ಅನುಭವಿ ಕೃಷಿಕ, ದಿ. ಶ್ರೀ ಕೃಷ್ಣ ಸೋಮಯಾಜಿ ಇವರ ಜೊತೆ ಒಂದು ದಿನ ಪೂರ್ತಿ ಅವರ ತೋಟ ಸುತ್ತಾಡಿದ್ದೆ.
- ಆ ಸಮಯದಲ್ಲಿ ಅವರಷ್ಟು ಅಡಿಕೆ ತೋಟ ಮಾಡಿದ ಕೃಷಿಕ, ದಕ್ಷಿಣ ಕನ್ನಡ ಜಿಲೆಯಲ್ಲಿ ಯಾರೂ ಇರಲಿಲ್ಲ ಎಂಬುದಾಗಿ ಅವರ ಬಗ್ಗೆ ಹೆಚ್ಚಿನವರು ಹೇಳುತ್ತಿದ್ದರು.
- ದಿನಕ್ಕೆ 1 ಕಂಡಿ,( 250 ಕಿಲೋ) ಅಡಿಕೆ ಉತ್ಪಾದನೆ ಆಗಬೇಕು ಎಂಬ ಗುರಿ ಇಟ್ಟುಕೊಂಡು ತೋಟ ಮಾಡಿದವರು.
- ಅದರಲ್ಲಿ ಯಶಸ್ಸೂ ಆಗಿದ್ದೇನೆ ಎಂಬುದಾಗಿ ಅವರು ಸ್ವತಹ ನನ್ನಲ್ಲಿ ಹೇಳಿದ್ದರು.
- ಅವರು ಅಡಿಕೆ ತೋಟ ಹೇಗೆ ಮಾಡಬೇಕು ಎಂಬ ಬಗ್ಗೆ ಹೇಳಿದ ಕೆಲವು ವಿಚಾರಗಳನ್ನು ಈಗ ನೆನಪಿಸಿಕೊಡು ಹೇಳುತ್ತಿದ್ದೇನೆ.
ಅಡಿಕೆ ನೆಡುವ ಜಾಗ:
- ಅಡಿಕೆ ತೋಟವನ್ನು ಸಮತಟ್ಟಾದ ಜಾಗದಲ್ಲೂ ಮಾಡಬಹುದು, ಏರು ತಗ್ಗಾದ ಜಾಗದಲ್ಲೂ ಮಾಡಬಹುದು.
- ಸಸಿ ನೆಡುವಾಗ ಸಮತಟ್ಟು ಮಾಡಿ ನೆಡಬೇಕೆಂದು ಬಯಸಿದರೆ ಮೇಲು ಮಣ್ಣು ಹಾಳಾಗದಂತೆ ನೋಡಿಕೊಳ್ಳಬೇಕು.
- ನೆಲ ಇದ್ದ ಹಾಗೆ ನೆಡುವುದು ಉತ್ತಮ. ಅಡಿಕೆ ನೆಡುವ ಜಾಗದಲ್ಲಿ ಮರ ಮಟ್ಟುಗಳನ್ನು , ಪೊದರು ಸಸ್ಯಗಳನ್ನು ಉಳಿಸಬಾರದು.
- ಅದನ್ನು ತೆಗೆದು ಭೂಮಿ ಸಿದ್ದತೆ ಮಾಡಿಕೊಳ್ಳಬೇಕು.
- ಅಲ್ಲಿ ಲಭ್ಯವಾಗುವ ಮೇಲ್ಮಣ್ಣನ್ನು (ಎರೆಮಣ್ಣು) ಗಿಡ ನೆಡುವಾಗ ಬಳಕೆ ಮಾಡಬೇಕು.
ನೆಡುವ ಕ್ರಮ:
- ನೆಡುವ ಸಮಯದಲ್ಲಿ ಹೊಂಡ ಮಾಡಿ ನೆಡಬೇಕು. ಹೊಂಡದಲ್ಲಿ ಸ್ವಲ್ಪ ಮೇಲು ಮಣ್ಣು ಅಥವಾ ಇದ್ದರೆ ಸುಡು ಮಣ್ಣು ಹಾಕಬೇಕು.
- ಇದಕ್ಕೆ ಹುಡಿಯಾದ ( De composed) ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು.
- ಅದು ನಾವು ನೆಡುವ ಪ್ಯಾಕೆಟ್ (ಕೊಟ್ಟೆ) ಮುಳುಗುವಷ್ಟಾದರೂ ಇರಬೇಕು.
- ಅಂದರೆ ಒಂದು ಸಸಿ ಬುಡಕ್ಕೆ 5-6 ಕಿಲೋ ಆದರೂ ಹಾಕಬೇಕು.
- ಹೆಚ್ಚು ಹಾಕಿದರೆ ಒಳ್ಳೆಯದು. ( ಆ ಸಮಯದಲ್ಲಿ ಅವರು ಕಾಫೀ ಸಿಪ್ಪೆಯ ಕಾಂಪೋಸ್ಟು ಮಾಡಿ ಹಾಕುತ್ತಿದ್ದರು) ಅದರಲ್ಲಿ ಸಸಿ ನೆಡಬೇಕು.
- 2 ಅಡಿಯ ಹೊಂಡ ಮಾಡಿದರೆ ಅದರಲ್ಲಿ ¾ ಅಡಿ ಯಷ್ಟು ತುಂಬಿ ನೆಡಬೇಕು.
- ಕೆಲವರು ಹೊಂಡದ ತಳದಲ್ಲಿ ಮತ್ತೆ ಗಿಡ ಕುಳಿತುಕೊಳ್ಳುವಷ್ಟು ಆಳದ ಹೊಂಡ (ಕುಳಿ) ಮಾಡಿ ನೆಡುತ್ತಾರೆ.
- ಹಾಗೆ ನೆಟ್ಟರೆ ಅಲ್ಲಿ ಫಲವತ್ತಾದ ಮಣ್ಣು ಸಿಗದೆ ಗಿಡ ಎಳೆ ಪ್ರಾಯದಲ್ಲಿ ಸೊರಗುತ್ತದೆ.
- ಸ್ವಲ್ಪ ತುಂಬಿ ನೆಟ್ಟರೆ ಬೇರು ಬೇಗ ಕೊಡುತ್ತದೆ.
- ಗಿಡ ಪುಷ್ಟಿಯಾಗಿ ಬೆಳೆಯುತ್ತದೆ. ನೆಡುವಾಗ ಬುಡ ಭಾಗವನ್ನು ಸ್ವಲ್ಪ ಏರು ಮಾಡಿ ನೆಡಬೇಕು.
- ಕಾರಣ ಅಲ್ಲಿ ಮಳೆಗೆ ನೀರು ನಿಂತಂತಾದರೂ ಅದು ಬದಿಯಲ್ಲಿ ಇರುತ್ತದೆ.
ಸಸಿ ನೆಟ್ಟ ನಂತರ ಬುಡಕ್ಕೆ ಸ್ವಲ್ಪ ಹಸಿ ಸೊಪ್ಪು ಹಾಕಬೇಕು. ನೆಟ್ಟ ಸಸಿಗೆ ಎಲೆ ಅಡಿಗೆ, ಸುಳಿ ಭಾಗಕ್ಕೆ ಮಣ್ಣು ಸಿಡಿಯಬಾರದು. ಹೀಗೆ ಆದರೆ ಗಿಡ ಸೊರಗುತ್ತದೆ. ಕೊಳೆಯಲೂ ಬಹುದು. ಆದ ಕಾರಣ ಸ್ವಲ್ಪ ಹಸಿ ಸೊಪ್ಪು ಹಾಕಬೇಕು. ಹಸಿ ಸೊಪ್ಪು ಹಾಕಿದರೆ ಅದು ಹೆಚ್ಚು ಸಮಯದ ತನಕ ಇರುತ್ತದೆ. ನಂತರ ಕರಗಿ ಗೊಬ್ಬರ ಆಗುತ್ತದೆ. ದೊಡ್ಡ ಗಿಡ ನೆಡುವಾಗ ಅದು ಪಾತಿಯಲ್ಲಿ ಬೆಳೆಸಿದರೆ ಗಿಡ ಗಟ್ಟಿಮುಟ್ಟಾಗಿರುತ್ತದೆ. ಅದನ್ನು ಜಾಗರೂಕತೆಯಲ್ಲಿ ಬೇರು ಮಣ್ಣು ಸಮೇತ ಇರುವಂತೆ ಏಳಿಸಿ ನೆಡಬೇಕು.
ನೆಡುವಾಗಲೇ ಮಾಡಬೇಕಾದ ಕೆಲಸ:
- ಅಡಿಕೆ ಸಸಿ ನೆಡುವಾಗ ಬಸಿಗಾಲುವೆಯನ್ನು ತಪ್ಪದೆ ಮಾಡಬೇಕು.
- ನೀರು ನಿಲ್ಲಲಿ, ನಿಲ್ಲದಿರಲಿ. ತೋಟಕ್ಕೆ ಬಸಿಗಾಲುವೆ ಬೇಕು.
- ಕಾರಣ, ಬಸಿಗಾಲುವೆ ಎಂಬುದು ಸಸ್ಯದ ಬೇರುಗಳಿಗೆ ಉಸಿರಾಟಕ್ಕೆಅನುಕೂಲ ಮಾಡಿಕೊಡುತ್ತವೆ.
- ಇಲ್ಲವಾದರೆ ಸಸ್ಯದ ಬೇರುಗಳು ಮೇಲೆ ಮೇಲೆ ಬರುತ್ತವೆ.
- ಎರಡು ಅಡಿಕೆ ಸಾಲುಗಳ ಮಧ್ಯಂತರದಲ್ಲಿ ಒಂದೊಂದು ಬಸಿಗಾಲುವೆಯನ್ನು ಮಾಡಿದರೆ ಪ್ರತೀ ಸಸಿಯ ಒಂದು ಪಾರ್ಶ್ವದಲ್ಲಿ ನೀರು ಬಸಿಯಲು – ಮತ್ತು ಬೇರುಗಳ ಉಸಿರಾಟಕ್ಕೆ ಅನುಕೂಲವಾಗುತ್ತದೆ.
- ಇದನ್ನು ನೆಡುವಾಗಲೇ ಮಾಡಿದರೆ ತುಂಬಾ ಅನುಕೂಲವಾಗುತ್ತದೆ.
- ಅದನ್ನು ತೋಡುವಾಗ ಸಿಗುವ ಮಣ್ಣು ಉಪಯೋಗಕ್ಕೆ ಬರುತ್ತದೆ.
ಬದಿಯಲ್ಲಿ ತೆಂಗಿನ ಗಿಡ ನೆಡಿ:
- ಅಡಿಕೆ ಸಸಿ ನೆಡುವಾಗ ಮುಂದೆ ಬೆಳೆ ವಿಸ್ತರಣೆ ಇಲ್ಲದ ಬದಿಗೆ ಆ ತಕ್ಷಣ ತೆಂಗಿನ ಸಸಿಯನ್ನೂ ನೆಡಬೇಕು.
- ಹೀಗೆ ತೆಂಗಿನ ಸಸಿ ನೆಡುವಾಗ ಒಂದು ಕಡೆ ಚೆನ್ನಾಗಿ ಬಿಸಿಲು ಬೀಳುತ್ತಿದ್ದರೆ, ಅದು ನಿಮ್ಮದೇ ಜಾಗ ಆಗಿದ್ದರೆ ಅಂತರವನ್ನು ಸ್ವಲ್ಪ ಕಡಿಮೆ ಮಾಡಬಹುದು.
- ತೆಂಗಿನ ಸಸಿ ನೆಟ್ಟು ಸುಮಾರು 15 ಅಡಿ ಬಿಟ್ಟು ನಂತರ ಅಡಿಕೆ ಸಸಿಗಳ ಸಾಲನ್ನು ಪ್ರಾರಂಭಿಸಿರಿ.
- ತೆಂಗಿನ ಸಸಿ ಬೆಳೆಯಲು ಬೆಳಕಿನ ಕೊರತೆ ಆಗದಿರಲಿ.
ಅಡಿಕೆ ತೋಟ ಮಾಡಲು ನೈರುತ್ಯ ದಿಕ್ಕು (ತೆಂಕು ಕೂಡಿರುವ)ಎತ್ತರ ಇರುವ ಜಾಗ ಸೂಕ್ತ. ಅದು ಎಲ್ಲಾ ಕಡೆ ಸಿಗುವುದಿಲ್ಲ. ತೆಂಕು ಕೂಡಿರಲು ತೆಂಗಿನ ಸಸಿ ನೆಡುವುದು ಉತ್ತಮ ಎಂದು ಹೇಳಿದ್ದರು.
- ತೆಂಗಿನ ಸಸಿಯನ್ನು ಅಡಿಕೆ ಸಸಿ ಸಾಕಿದಂತೆ ಸಾಕಬೇಕು ಅಡಿಕೆ ಬೆಳೆದಂತೆ ಅದೂ ಬೆಳವಣಿಗೆ ಆಗುವಂತೆ ಪೋಷಕಗಳನ್ನು ಕೊಟ್ಟು ಸಾಕಬೇಕು.
- ತೆಂಗಿನ ಸಸಿ ಅಡಿಕೆ ತೋಟಕ್ಕೆ ಗಾಳಿ ತಡೆಯಾಗಿ ಕೆಲಸ ಮಾಡುತ್ತದೆ.
- ಕೆಲವೊಮ್ಮೆ ಅಡಿಕೆ ತೋಟದ ಒಳಗೆ ಗಾಳಿ ನುಗ್ಗಿದರೆ ಅಡಿಕೆ ಮರಗಳು ತುಂಡಾಗುತ್ತವೆ.
- ಇದನ್ನು ತೆಂಗಿನ ಮರಗಳು ತಡೆಯುತ್ತವೆ.
- ತೆಂಗಿನ ಮರಗಳು ಬೀಳುವುದಾಗಲೀ , ತುಂಡಾಗುವುದಾಗಲೀ ಇಲ್ಲ.
ಅಡಿಕೆ ಮರಗಳಿಗೆ ತೆಂಕು ಬಿಸಿಲು ( ನೈರುತ್ಯ ದಿಕ್ಕು) ಅತೀ ದೊಡ್ಡ ತೊಂದರೆ . ಇದನ್ನು ತಡೆಯುವಲ್ಲಿ ಆ ದಿಕ್ಕಿಗೆ ತೆಂಗಿನ ಸಸಿ ನೆಡುವುದು ಉತ್ತಮ. ತೆಂಗನ್ನೂ ಚೆನ್ನಾಗಿ ಬೆಳೆಸಿದರೆ ಅಡಿಕೆಯ ಎತ್ತರಕ್ಕೆ ಸ್ಪರ್ಧಿಯಾಗಿ ಬೆಳೆಯುತ್ತದೆ.
- ಅಡಿಕೆ ಸಸಿ ನೆಡುವಾಗ ನೆರಳಿಗೆ ಎಂದು ಬದುಗಳಲ್ಲಿ ಮರಮಟ್ಟು ನೆಡಬೇಡಿ. ಸೊಪ್ಪು ಇತ್ಯಾದಿ ಬಳಕೆಗೆ ಬೇಕಾಗುವಷ್ಟು ಸೊಪ್ಪಿನ ಬೆಟ್ಟವನ್ನು ಉಳಿಸಿಕೊಳ್ಳಿ.
- ಬಹುತೇಕ ಮರಮಟ್ಟುಗಳು ಅಡಿಕೆ ಸಸಿಗೆ ತಮ್ಮ ಬೇರುಗಳ ಮೂಲಕ ಸ್ಪರ್ಧೆ ಮಾಡುತ್ತವೆ.
- ಅಡಿಕೆ ಸಸಿ ಚೆನ್ನಾಗಿ ಬೆಳೆಯಲು ಬಿಡುವುದಿಲ್ಲ. ಕೆಲವೊಮ್ಮೆ ಗಾಳಿಗೆ ಗೆಲ್ಲು ಬೀಳುವುದು.
- ಮರ ಮಗುಚಿ ಬೀಳುವುದು ಆದರೆ ಅಡಿಕೆ ಮರಗಳು ನಷ್ಟವಾಗುತ್ತದೆ.
- ಅದಕ್ಕಾಗಿ ತೋಟದ ಬದುಗಳಲ್ಲಿ ಮರಮಟ್ಟು ಬೆಳೆಸಬೇಡಿ. ಅದನ್ನು ದೂರದಲ್ಲಿ ಬೆಳೆಸಿ.
ನೈರುತ್ಯ ದಿಕ್ಕಿನ ಬಿಸಿಲಿನ ಹೊಡೆತ ಇರುವ ಯಾವ ಸ್ಥಳದಲ್ಲೂ ಅಡಿಕೆ ಸಸಿಗಳು, ತೆಂಗಿನ ಸಸಿಗಳು ಏಳಿಗೆ ಆಗುವುದಿಲ್ಲ. ಇದನ್ನು ಬಂದ್ ಮಾಡದೆ ಅಡಿಕೆ ತೋಟ ಮಾಡುವುದೇ ವ್ಯರ್ಥ. ಹಾಗೆಂದು ಆ ಭಾಗದ ಮೂಲಕ ಬಿಸಿಲಿನ ಪ್ರಖರ ಕಿರಣ ಬಾರದೆ ಇರುವಂತೆ ಶಾಶ್ವತ ಮರಮಟ್ಟು ಬೆಳೆಸಿದರೆ ಸರಿಯಾಗುತ್ತದೆ. ಇದನ್ನು ನೆಡುವಾಗಲೇ ಮಾಡಬೇಕು. ಅಡಿಕೆ ಸಸಿಯ ಜೊತೆಗೆ ಅಥವಾ ಅದಕ್ಕಿಂತ ಮುಂಚೆ ಅದು ಬೆಳೆಯುವಂತದ್ದಾಗಿರಬೇಕು.
ಸಣ್ಣ ಗಿಡಗಳನ್ನು ಹೆಚ್ಚು ನಿಗಾ ಕೊಟ್ಟು ಪೋಷಿಸಿ:
- ಅಡಿಕೆ, ತೆಂಗು ಅಥವಾ ಇನ್ಯಾವುದೇ ಬೆಳೆಗಳಿದ್ದರೂ ಸಣ್ಣ ಪ್ರಾಯದಲ್ಲಿ ಅದನ್ನು ಚೆನ್ನಾಗಿ ಸಾಕಬೇಕು.
- ಒಂದು ವರ್ಷಕ್ಕೆ ಇಷ್ಟೇ ಎತ್ತರ ಬೆಳೆಯಬೇಕು. ಹೀಗೆಯೇ ಬೆಳೆಯಬೇಕು ಎಂಬೆಲ್ಲಾ ಮಾನದಂಡಗಳಿವೆ.
- ಸಾಮಾನ್ಯವಾಗಿ ಎಲ್ಲಾ ತಳಿಯ ಅಡಿಕೆಯೂ 3 ನೇ ವರ್ಷಕ್ಕೆ ಹೂ ಮೊಗ್ಗು ಮೂಡುವ ಮಟ್ಟಕ್ಕೆ ಬೆಳೆಯಬೇಕು.
- 4 ನೇ ವರ್ಷಕ್ಕೆ ಫಲ ಬಿಡಲು ಪ್ರಾರಂಭವಾಗಬೇಕು. ಈ ವಿಚಾರ ಅಡಿಕೆ ಬೆಳೆಸುವ ಪ್ರತೀಯೊಬ್ಬ ಬೆಳೆಗಾರನಿಗೂ ಗೊತ್ತಿರಬೇಕು.
- ಸಣ್ಣ ಪ್ರಾಯದಲ್ಲಿ ಗಿಡ ಸೊರಗಿದರೆ ಮತ್ತೆ ಅದು ಉತ್ತಮ ಫಲ ಕೊಡುವ ಮರ ಆಗುವುದೇ ಇಲ್ಲ.
- ಅದ ಕಾರಣ ಸಸಿ ಹಂತದಲ್ಲಿ ಚೆನ್ನಾಗಿ ಸಾಕಿ ಪೋಷಿಸಿ.
- ಸರಿಯಾಗಿ ಸಾಕಿದರೆ ಅಡಿಕೆ ಗಿಡ 5-6 ಗೊನೆ ಅಡಿಕೆ ಕೊಡುತ್ತದೆ.
ಈಗ ನಮ್ಮಲ್ಲಿ ಅಡಿಕೆ ತೋಟ ಮಾಡಿದ ಬಹಳ ದೊಡ್ಡ ದೊಡ್ಡ ಘಟಾನು ಘಟಿಗಳಿದ್ದಾರೆ. ಆ ಸಮಯದಲ್ಲಿ ಇಂತವರು ತುಂಬಾ ಕಡಿಮೆ ಇದ್ದರು. ಆ ಸಮಯದಲ್ಲೇ ಇವರು ಸ್ವ ಅನುಭವದಲ್ಲಿ ಕೃಷಿಯ ಕೆಲವು ಬೇಕು ಬೇಡಗಳನ್ನು ಕಂಡುಕೊಂಡಿದ್ದರು. ಇವರ ಹಲವಾರು ಅನುಭವಗಳಲ್ಲಿ ನೆನಪಿರುವ ಕೆಲವು ತುಣುಕುಗಳು ಇವು.
ಕೆಲವೊಂದು ಕಾರ್ಯಗಳಿಗೆ ಕೈಗುಣ ಎಂಬುದಿದೆ. ಈ ಲೇಖನದಲ್ಲಿ ಉಲ್ಲೇಖಿಸಿದ ವ್ಯಕ್ತಿಯೊಬ್ಬರ ಕೈಗುಣ ಹೇಗಿತ್ತೆಂದರೆ ಯಾವ ಬೀಜ ಹಾಕಿದರೂ 100 ಕ್ಕೆ 100 ,ಮೊಳಕೆ, ಹಾಗೂ ಎಲ್ಲದರಲ್ಲೂ ಫಸಲು ಬರುವಂತೆ ಇತ್ತು. ಇದು ಎಲ್ಲರಿಗೂ ಇರುವುದು ಸಾಧ್ಯವಿಲ್ಲ. ಯಾವಾಗ ನಮ್ಮ ಗ್ರಹತಿಗಳು ಅನುಕೂಲಕರವಾಗಿ ಇರುತ್ತದೆಯೋ ಆ ಸಮಯದಲ್ಲಿ ಮಾಡಿದ್ದೆಲ್ಲಾ ಚೆನ್ನಾಗಿಯೇ ಆಗುತ್ತದೆ.
ಇಲ್ಲಿ ಪ್ರಕಟಿಸಲಾದ ಚಿತ್ರಗಳು ಸಂದರ್ಭಿಕ. ಆ ಸಮಯದಲ್ಲಿ ಡಿಜಿಟಲ್ ಫೊಟೋ ಇರಲಿಲ್ಲ. ಬಣ್ಣದ ಫೊಟೋ ಸಹ ಕಡಿಮೆ. ಆದ ಕಾರಣ ಸಂಗ್ರಹ ಇಲ್ಲ.
Sir how to prepare bordo dravan in Kannada. Pls explain
WhatsApp.9449227171
Please watch this any doubt please ask with us.
https://youtu.be/7o-MdRITO9E