ಅಡಿಕೆ ತೋಟ ಎಂದರೆ ನಿರ್ದಿಷ್ಟ ವರ್ಷಕ್ಕೇ ಇಳುವರಿ ಬರಬೇಕು. ಗರಿಷ್ಟ ಇಳುವರಿ ಸಿಗಬೇಕು. ಅದಕ್ಕೆ ಎಳವೆಯಲ್ಲಿ ಸೂಕ್ತ ಮಿಶ್ರ ಬೆಳೆ ಆರಿಸಬೇಕು. ಅಡಿಕೆ ಬೆಳೆಸುವಾಗ ಪ್ರಾರಂಭದ ಮೂರು ನಾಲ್ಕು ವರ್ಷಗಳ ಕಾಲ ಯಾವ ಮಿಶ್ರ ಬೆಳೆ ಬೆಳೆಯುತ್ತೇವೆಯೋ ಅದನ್ನು ಅವಲಂಭಿಸಿ, ಅದರ ಇಳುವರಿ ನಿರ್ಧಾರವಾಗುತ್ತದೆ. ಎಳೆ ಪ್ರಾಯದಲ್ಲಿ ಮಗುವನ್ನು ಯೋಗ್ಯ ರೀತಿಯಲ್ಲಿ ಸಾಕಿದರೆ ಮಾತ್ರ ಅದರ ಮುಂದಿನ ಭವಿಷ್ಯ ಉತ್ತಮವಾಗುತ್ತದೆ. ಇದರಂತೆ ಅಡಿಕೆ, ತೆಂಗು ಮುಂತಾದ ಧೀರ್ಘಾವಧಿ ಬೆಳೆಗಳೂ ಸಹ. ಮಿಶ್ರ ಬೆಳೆಗಳಿಂದ ಬರುವ ಆದಾಯದಿಂದ ಇಡೀ ಹೊಲವೇ ಉಚಿತವಾದಂತಾಗಲೂ ಅವಕಾಶ ಇದೆ.
- ಬಹಳ ಜನ ರೈತರ ಅಡಿಕೆ ತೋಟದಲ್ಲಿ 100 ಮರಗಳಲ್ಲಿ 50% ಮರಗಳು ನಿರ್ದಿಷ್ಟ ಅವಧಿಯಲ್ಲಿ ಫಲ ಕೊಡುವುದಿಲ್ಲ.
- ಇವಿಷ್ಟೂ ಮರಗಳ ಬೆಳವಣಿಗೆಯಲ್ಲಿ ತುಂಬಾ ವ್ಯತ್ಯಾಸ ಇರುತ್ತದೆ.
- ಕೆಲವು ಮೂರು ವರ್ಷವಾದರೂ 1 ವರ್ಷದ ಸಸಿಯ ತರಹ, 2 ವರ್ಷದ ಸಸಿಯ ತರಹ,
- ಅದೇ ರೀತಿಯಲ್ಲಿ ಕಾಂಡ ತುಂಬಾ ಸಣಕಲಾಗಿ ಗಂಟು ದೂರವಾಗಿ, ಹೀಗೆಲ್ಲಾ ವ್ಯತ್ಯಾಸ ಕಂಡು ಬರುತ್ತದೆ.
ಇದಕ್ಕೆಲ್ಲಾ ಮುಖ್ಯ ಕಾರಣ ಎಳೆ ಪ್ರಾಯದಲ್ಲಿ ಇದರ ಸ್ವತಂತ್ರ ಬೆಳವಣಿಗೆಗೆ ಬೇಕಾಗುವ ಅನುಕೂಲ ಸ್ಥಿತಿ ದೊರೆಯದಿರುವುದು. ಸೂಕ್ತವಲ್ಲದ ಮಿಶ್ರ ಬೆಳೆ, ಪೋಷಕಾಂಶಗಳಿಗಾಗಿ ಪೈಪೋಟಿ, ಬೆಳಕಿನ ಕೊರತೆ ಇವೆಲ್ಲಾ ಕಾರಣಗಳಿಂದ ಬೆಳವಣಿಗೆಯು ಎಳವೆಯಲ್ಲಿಯೇ ಹತ್ತಿಕ್ಕಲ್ಪಡುತ್ತವೆ.
ಇಲ್ಲಿದೆ ಒಂದು ಯಶೋಗಾಥೆ:
- ಶಿವಮೊಗ್ಗ ಜಿಲ್ಲೆ, ಸಾಗರದ ಸಮೀಪ ಆವಿನ ಹಳ್ಳಿ ಎಂಬ ಊರಿನಲ್ಲಿ ಓರ್ವ ರೈತ ರಫೀಕ್ ಎಂಬವರು ತಾವು ಬೆಳೆಸಿದ ಸಾಗರ ಸ್ಥಳೀಯ ತಳಿಯ ಅಡಿಕೆಯಲ್ಲಿ ನಾಟಿ ಮಾಡಿ ಮೂರನೇ ವರ್ಷಕ್ಕೇ ಫಸಲನ್ನು ಕಂಡಿದ್ದಾರೆ.
- ಇದು ಖುಷ್ಕಿ ಭೂಮಿಯ ತೋಟವಾಗಿದ್ದು, ಐದು ಆರನೇ ವರ್ಷಕ್ಕೆ ಎಲ್ಲಾ ಮರಗಳಲ್ಲೂ ಫಸಲನ್ನು ಕಂಡಿದ್ದಾರೆ.
- ಇಲ್ಲಿ ಅನುತ್ಪಾದಕ ಮರಗಳ ಪ್ರಮಾಣ ಶೇ.-5 ಕ್ಕಿಂತ ಹೆಚ್ಚು ಇಲ್ಲ.
- ಎಲ್ಲದರಲ್ಲೂ ಸರಾಸರಿ ಮೂರು ಗೊನೆ ಅಡಿಕೆ ಇದೆ. ಮರಗಳು ಆರೋಗ್ಯವಾಗಿವೆ.
- ಮರಗಳ ಲಕ್ಷಣ ಧೀರ್ಘಾವದಿಯ ತನಕ ಫಲ ಪಡೆಯಲು ಸಮರ್ಥ ವಾಗಿವೆ.
ಹೇಗೆ ತೋಟ ಫ್ರೀ ಆಯಿತು?
- ಶ್ರೀಯುತ ರಫೀಕ್ ಇವರು ಆಯ್ಕೆ ಮಾಡಿಕೊಂಡ ಮಿಶ್ರ ಬೆಳೆಗಳು ಮತ್ತು ಅದರಿಂದ ಅಡಿಕೆಗೆ ಆದ ಅನುಕೂಲವೇ ಈ ಇಳುವರಿಯ ಗುಟ್ಟು.
- ಅಡಿಕೆ ಸಸಿ ನೆಡುವಾಗ ಅದರ ಮಧ್ಯಂತರದಲ್ಲಿ ಶುಂಠಿಯನ್ನು ಬೆಳೆಸಿದ್ದಾರೆ.
- ಶುಂಠಿ 9 ತಿಂಗಳ ಬೆಳೆಯಾಗಿದೆ. ಒಮ್ಮೆ ಶುಂಠಿ ಬೆಳೆದ ಜಾಗದಲ್ಲಿ ಮತ್ತೆ ಶುಂಠಿಯನ್ನು ಬೆಳೆಯಲು ಆಗುವುದಿಲ್ಲ.
- ಆ ನಂತರ ಬೆಳೆ ಪರಿವರ್ತನೆ ಮಾಡಬೇಕಾಗುತ್ತದೆ. ಶುಂಠಿಯನ್ನು ಒಕ್ಕಣೆ ಮಾಡಿದ ತರುವಾಯ ಇವರು ಅದೇ ಜಾಗದಲ್ಲಿ ಅನನಾಸನ್ನು ನಾಟಿ ಮಾಡಿದ್ದಾರೆ.
- ಅನನಾಸಿನಲ್ಲಿ ಎರಡು ಬೆಳೆ ಪಡೆಯಲು ಸುಮಾರು 25 ತಿಂಗಳು ಕಾಲಾವಧಿ ಬೇಕು.
- ಒಟ್ಟು 2 ಅನನಾಸು 2 ಶುಂಠಿ ಬೆಳೆ ಬೆಳೆದಿದ್ದಾರೆ.
- ಪ್ರತೀ ವರ್ಷ ಟ್ರಾಕ್ಟರ್ ಮೂಲಕ ಹೊಸ ಮಣ್ಣು ಹಾಕಿ ಬೆಳೆ ಬೆಳೆದಿದ್ದಾರೆ.
- ನಾಲ್ಕನೇ ವರ್ಷಕ್ಕೆ ಮತ್ತೆ ಅದೇ ಅಡಿಕೆ ತೋಟದಲ್ಲಿ ಶುಂಠಿಯನ್ನು ಬೆಳೆಸಿದ್ದಾರೆ.
- ಶುಂಠಿ ಬೆಳೆ ಬೆಳೆಯುವಾಗ ಹಾಕುವ ಪೋಷಕಾಂಶಗಳು ಮತ್ತು ಅದರ ಸಸ್ಯ ರಚನೆ ಮತ್ತು ಬೇರುಗಳು ಅಡಿಕೆ ಗಿಡಗಳಿಗೆ ಸ್ಪರ್ಧಿಯಾಗುವುದಿಲ್ಲ
- ಅದೇ ರೀತಿಯಲ್ಲಿ ಅನನಾಸೂ ಸಹ. ಅದಕ್ಕೂ ಪ್ರತ್ಯೇಕ ಪೋಷಕಾಂಶಗಳನ್ನು ಕೊಟ್ಟು ಬೆಳೆಸಲಾಗುತ್ತದೆ.
ಒಂದು ಶುಂಠಿ ಬೆಳೆ ಬೆಳೆದಾಗ ಅದರಲ್ಲಿ ಉಳಿಕೆಯಾಗುವ ಸರ ಸಸ್ಯ ಭಾಗಗಳು ಮಣ್ಣಿಗೆ ಸಾಕಷ್ಟು ಸಾವಯವ ವಸ್ತುಗಳನ್ನುಕೊಡುತ್ತವೆ. ಮಣ್ಣಿನಲ್ಲಿ ಗಾಳಿಯಾಡುವಿಕೆಗೆ ಅನುಕೂಲಮಾಡಿಕೊಟ್ಟು, ಅಡಿಕೆ ಸಸ್ಯದ ಬೆಳವಣಿಗೆಗೆ ಅನುಕೂಲವಾಗಿ ಪರಿಣಮಿಸುತ್ತದೆ.
ಅನನಾಸು ಬೆಳೆಯುವಾಗ ಒಂದು ಸಸ್ಯದಲ್ಲಿ ಏನಿಲ್ಲವೆಂದರೂ 1 ಕಿಲೋ ದಷ್ಟು ಒಣ ಸಾವಯವ ವಸ್ತು ಲಭ್ಯವಾಗುತ್ತದೆ. ಇದು ಮಣ್ಣಿಗೆ ಸೇರಲ್ಪಟ್ಟು ಮಣ್ಣಿನ ಫಲವತ್ತತೆ ಹೆಚ್ಚಳವಾಗುತ್ತದೆ.
ಕೃಷಿ ಮಾಡುವವರು ತಿಳಿಯಬೇಕಾದ ವಿಚಾರ:
- ಶ್ರೀಯುತ ರಫೀಕ್ ರವರು ಬೈಂದೂರಿನಿಂದ ಈ ಊರಿಗೆ ಕೂಲಿ ಕೆಲಸಕ್ಕೆ ಬಂದವರು.
- ಶುಂಠಿ. ಬಾಳೆ ಅನನಾಸು ಕೃಷಿಕರಲ್ಲಿ ಕೆಲಸಮಾಡುತ್ತಾ, ಬೆಳೆಯುವ ಸೂಕ್ಷ್ಮಗಳನ್ನು ಅರಿತುಕೊಂಡರು.
- ತಾನೂ ಕೃಷಿ ಮಾಡಬೇಕು ಎಂದು ಲೀಸ್ ಗೆ ಭೂಮಿ ಪಡೆದು ಅಲ್ಲಿ ಕೃಷಿ ಮಾಡಿ ಸ್ವಂತ ಭೂಮಿ ಖರೀದಿಗೆ ಬಂಡವಾಳ ಮಾಡಿಕೊಂಡವರು.
- ಕೃಷಿ ಮಾಡುವವರಿಗೆ ಅದರ ಬಗ್ಗೆ ತಿಳಿದಿದ್ದರೆ ಎಲ್ಲವೂ ಸುಲಭವಾಗುತ್ತದೆ.
- ರಫೀಕ್ ರಂತವರು ಕೃಷಿ ಹೊಲದಲ್ಲಿ ದುಡಿದು ಅನುಭವ ಪಡೆದ ಕಾರಣ ಅವರಿಗೆ ಕೃಷಿ ಕಷ್ಟವಾಗಲಿಲ್ಲ.
- ಅದರಲ್ಲಿ ಅವರು ಪಾಸ್ ಕೂಡಾ ಆದರು. ಕೃಷಿ ಮಾಡುತ್ತಾ ಮತ್ತಷ್ಟು ಹೊಲವನ್ನೂ ಖರೀದಿ ಮಾಡಿದರು.
ಅಡಿಕೆ ಸಸ್ಯ ಬೆಳವಣಿಗೆಗೆ ಪೂರಕ:
- ಅಡಿಕೆ ಸಸ್ಯವು ಎಳವೆಯಲ್ಲಿ ಸಾಮಾನ್ಯ ವಾತಾವರಣವಾದ ಬಿಸಿಲಿಗೆ ಒಗ್ಗಿಕೊಳ್ಳಬೇಕು.
- ಅದಕ್ಕೆ ಶಕ್ತಿ ಬರಬೇಕು. ಹೀಗಾಗಬೇಕಿದ್ದರೆ ಶೇ.25 ಮಾತ್ರ ನೆರಳು ಲಭ್ಯವಾಗಬೇಕು.
- ಇದಕ್ಕಿಂತ ಹೆಚ್ಚು ನೆರಳು ಆದರೆ ಸಸ್ಯ ಬೆಳವಣಿಗೆಗೆ ಅನನುಕೂಲವಾಗುತ್ತದೆ.
- ಶುಂಠಿ, ಅನನಾಸು ಸಸ್ಯಗಳು ಅಡಿಕೆ ಸಸಿಗಳಿಗೆ ಬೇಕಾಗುವ ಬಿಸಿಲು – ನೆರಳನ್ನು ಸಮರ್ಪಕವಾಗಿ ಒದಗಿಸುತ್ತವೆ.
- ಆ ಬೆಳೆಗೂ ಇದು ಬೆಳಕಿನ ಕೊರತೆಯನ್ನು ಉಂಟು ಮಾಡುವುದಿಲ್ಲ.
- ಹೀಗಾದರೆ ಅಡಿಕೆ ಸಸ್ಯವು ಯಾವುದೇ ಅಡ್ದಿಯಿಲ್ಲದೆ ಬೆಳವಣಿಗೆ ಹೊಂದುತ್ತದೆ.
- ಎಳವೆಯಲ್ಲಿ ಬೆಳವಣಿಗೆಗೆ ಅನುಕೂಲವಾಗುವ ವಾತಾವರಣ ದೊರೆತಾಗ ಅದು ವೇಗವಾಗಿ ಬೆಳೆದು ಕ್ಲಪ್ತ ಸಮಯದಲ್ಲಿ ಇಳುವರಿಗೆ ಪ್ರಾರಂಭವಾಗುತ್ತದೆ.
ಅಡಿಕೆ ಬೆಳೆಯುವವರು ಬಾಳೆ ಮುಂತಾದ ಬೆಳೆಗಳನ್ನು ಮೊದಲ ಎರಡು ವರ್ಷ ಬೆಳೆದರೆ ಆ ಅಡಿಕೆ ತೋಟದಲ್ಲಿ ಅನುತ್ಪಾದಕ ಮರಗಳ ಪ್ರಮಾಣ ಹೆಚ್ಚುತ್ತದೆ. ಅಡಿಕೆ ಸಸ್ಯಗಳಿಗೆ ಹೊರ ವಾತಾವರಣವನ್ನು ತಡೆದುಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ.
ಅಡಿಕೆ ಬೆಳೆಯುವ ಆಸಕ್ತರು ಪ್ರಾರಂಭಿಕ ವರ್ಷಗಳಲ್ಲಿ ಅಡಿಕೆಗೆ ಸ್ಪರ್ಧಿಯಾಗದ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಗರಿಷ್ಟ ಆದಾಯವೂ ದೊರೆಯಬೇಕು. ಶ್ರೀಯುತ ರಫೀಕ್ ಇವರು ನಾಲ್ಕು ಮಿಶ್ರ ಬೆಳೆಗಳನ್ನು ಅಡಿಕೆಯ ಮಧ್ಯಂತರದಲ್ಲಿ ಬೆಳೆದು ಹೊಲದ, ಅಡಿಕೆ ತೋಟ ಮಾಡಿದ ಖರ್ಚನ್ನು ಮಿಶ್ರ ಬೆಳೆಗಳಿಂದ ಪಡೆದಿದ್ದಾರೆ.
ರೈತರ ಸಂಪರ್ಕಕ್ಕಾಗಿ; 9481063706
end of the article:————————————————————-
search words: Rafik# Sagara# Avinahalli# Ginger king# Pineapple in areca garden# Mixed crop in areca# Inter crop in areca garden# Profitable areca cultivation#