ಅಡಿಕೆ ಮರಗಳಲ್ಲಿ ಶಿರ ಒಣಗಿ ಕೊಳೆಯುವ ಸಮಸ್ಯೆ ಬಹಳ ಹಿಂದಿನಿಂದಲೂ ಇದ್ದದ್ದು. ಕೆಲವು ವರ್ಷ ಹೆಚ್ಚಾಗುತ್ತದೆ. ಕೆಲವು ವರ್ಷ ಗೌಣವಾಗಿರುತ್ತದೆ. ಈ ವರ್ಷ ಇದು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತಿದ್ದು, ಬೆಳೆಗಾರರು ಯಾಕೆ ಹೀಗಾಗುತ್ತಿದೆ ಎಂದು ಗಾಬರಿಯಾಗಿದ್ದರೆ. ಇದು ಒಂದು ಶಿಲೀಂದ್ರ ರೋಗವಾಗಿದ್ದು, ಸರಿಯಾದ ನಿರ್ವಹಣೆ ವಿಧಾನಗಳಿಂದ ಬಾರದಂತೆ ಮಾಡುವುದು ಸಾಧ್ಯ.ಇದನ್ನು ತೆಂಡೆ ರೋಗ ಎಂದು ಕೆಲವರು ಹೇಳುವುದಿದೆ. ತೆಂಡೆ, ಅಥವಾ ಚೆಂಡೆ ರೋಗ ಎಂದರೆ ಮಲೆನಾಡಿನಲ್ಲಿ ಕಂಡುಬರುವ ಹಿಡಿಮುಂಡಿಗೆ ಅಥವಾ ಬಂದ್ ರೋಗ. ಇದು ಶಿರ ಕೊಳೆಯುವ ರೋಗ Crown Rot.
ಅಡಿಕೆ ತೆಂಗು,ತಾಳೆ, ಬೈನೆ ಮುಂತಾದ ಮರಗಳಿಗೆ ಇರುವುದು ಒಂದೇ ಸುಳಿ (BUD). ಅಂದರೆ ಕಾಂಡದ ತುತ್ತ ತುದಿಯಲ್ಲಿ ಮಾತ್ರ ಇದರ ಬೆಳೆವಣಿಗೆ ಭಾಗ.(One terminal bud). ಇವು ಏಕದಳ ಸಸ್ಯಗಳಾಗಿದ್ದು, ಇರುವ ಒಂದು ಬಡ್ ಅನ್ನು ಶಿರ ಎಂದು ಕರೆಯಲಾಗುತ್ತದೆ. ಈ ಶಿರ ಭಾಗದಲ್ಲಿ ಸುಳಿಯೂ ಸೇರಿದಂತೆ ಒಂದಷ್ಟು ಎಲೆ ಎಂದು ಕರೆಯುವ ಗರಿಗಳು ಇರುತ್ತದೆ.ಈ ಭಾಗವನ್ನೊಂದು ಬಿಟ್ಟು ಉಳಿದ ಎಲ್ಲಿಯೂ ಇದಕ್ಕೆ ಚಿಗುರು ಬರುವುದಿಲ್ಲ. ಈ ಜಾತಿಯ ಸಸ್ಯಕ್ಕೆ ಒಂದೇ ಕಾಂಡ ಇರುತ್ತದೆ.ಈ ಕಾಂಡದಲ್ಲಿ ಉಳಿದ ಮರಮಟ್ಟುಗಳಂತೆ ಅಲ್ಲ. ಅದರಲ್ಲಿ ಹೊರಭಾಗದ ಗಟ್ಟಿ ಚಿಪ್ಪು ತರಹ ಭಾಗ, ಅದರ ಮಧ್ಯೆ ಸ್ಪಂಜಿನಂತಹ ಭಾಗ ಇರುತ್ತದೆ. ಇದು ಆಹಾರ ಮತ್ತು ನೀರನ್ನು ಸರಬರಾಜು ಮಾಡುತ್ತದೆ. ಹಾಗಾಗಿ ಯಾವುದೇ ಗಾಯವಾದರೂ ಅಲ್ಲಿ ರಸ ಸ್ರಾವವಾಗುತ್ತದೆ. ಅಷ್ಟು ಭಾಗದ ಅಂಗಾಂಶಗಳು ಸತ್ತು ಹೋಗುತ್ತದೆ. ಗಾಯದ ಕೆಳಭಾಗಕ್ಕೂ ಮೇಲ್ಭಾಗಕ್ಕೂ ಸಂಪರ್ಕ ಇಲ್ಲದಾಗುತ್ತದೆ. ಹೊರ ಭಾಗದ ಚಿಪ್ಪುವಿಗೆ ಸಣ್ಣ ಪ್ರಮಾಣದ ಗಾಯವಾದರೂ ಮರಕ್ಕೆ ಏನೂ ಆಗುವುದಿಲ್ಲ.(ಪಶ್ಚಿಮದ ಬಿಸಿಲು ಬಿದ್ದ ಮರಗಳು ಸ್ವಲ್ಪ ಸಮಯ ಸಾಯದೆ ಇಳುವರಿ ಕೊಡುತ್ತಿರುತ್ತವೆ. ಆದರೆ ಮಧ್ಯದಲ್ಲಿ ಇರುವ ಸ್ಪಂಜಿನಂತಹ (Fibrous tissue) ಆಹಾರ ಹೀರುವ/ ಸಾಗಾಣಿಕೆ ಕೆಲಸ ಮಾಡುವ ಪ್ಲೋಯೆಂ Phloem ಎಂಬ ಅಂಗಾಂಶಕ್ಕೆ ಹಾನಿಯಾದರೆ ಮರಕ್ಕೆ ತೊಂದರೆ ಆಗುತ್ತದೆ. ಈ ಮೂಲಭೂತ ವಿಚಾರವನ್ನು ಪ್ರತೀಯೊಬ್ಬ ಅಡಿಕೆ ಬೆಳೆಯುವವರೂ ತಿಳಿದಿರಬೇಕು.
- ಅಡಿಕೆಗೆ ಬರುವ ಕ್ರೌನ್ ರಾಟ್ ರೋಗ ಮತ್ತು ಕೊಳೆ ರೋಗಕ್ಕೆ ಕಾರಣ ಒಂದೇ.
- ಅಡಿಕೆ ಕಾಯಿಗಳಿಗೆ ಶಿಲೀಂದ್ರ ಸೋಂಕು ಆದರೆ ಅದು ಕಾಯಿ ಕೊಳೆ (fruit rot)
- ಶಿರ ಭಾಗಕ್ಕೆ ಬಾಧಿಸಿದರೆ ಅದು ಶಿರ ಕೊಳೆ,(Crown rot)
- ಬೇರಿಗೆ ಬಾಧಿಸಿದರೆ ಅದು ಬೇರು ಕೊಳೆ (Root rot or foot rot).
- ಫೈಟೋಪ್ತೆರಾ ಮೀಡಿ (Phytophthora meadii) ಎಂಬ ಶಿಲೀಂದ್ರ ಇದಕ್ಕೆ ಕಾರಣ.
- ಈ ಶಿಲೀಂದ್ರ ಗಾಳಿಯ ಮೂಲಕ ಪ್ರಸಾರವಾಗುವ ಕಾರಣ ಅದು ಶಿರ ಭಾಗಕ್ಕೂ , ಕಾಯಿಗೂ, ಬೇರಿಗೂ ಬಾಧಿಸಬಹುದು.
- ಇದು ಮಣ್ಣು ಜನ್ಯವಾದ ಶಿಲೀಂದ್ರವಾಗಿದ್ದು, ವಾತಾವರಣದ ಅನುಕೂಲ ಸಿಕ್ಕಿದಾಗ ವಂಶಾಭಿವೃದ್ದಿಯಾಗಿ ವಾತಾವರಣದಲ್ಲಿ ಸೇರಿಕೊಳ್ಳುತ್ತವೆ.
- ಆಗ ಅದು ಎಲೆ, ಸುಳಿ ಭಾಗ, ಕಾಯಿಗೂ ಬಾಧಿಸಬಹುದು ಹಾಗೆಯೇ ನೆಲದ ಬೇರಿಗೂ ಬಾಧಿಸಬಹುದು.
ಶಿರಕೊಳೆ ಹೇಗೆ ಬರುತ್ತದೆ?
- ನೆಲದಲ್ಲಿ ಶೀತ ಸ್ಥಿತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಸಂಖ್ಯಾಭಿವೃದ್ದಿಯಾದ Spores= ಶಿಲೀಂದ್ರ ಬೀಜಗಳು ಗಾಳಿಯ ಮೂಲಕ ವಾತಾವರಣ ಸೇರಿಕೊಳ್ಳುತ್ತದೆ.
- ಆಗ ಹೆಚ್ಚಾಗಿ ಅಡಿಕೆ ಕಾಯಿಗಳ ಮೇಲೆ ಸೋಂಕು ಉಂಟುಮಾಡುತ್ತದೆ.
- ಅಲ್ಲಿ ಶಿಲೀಂದ್ರ ಬಾಧಿಸದೆ ( ಔಷಧಿ ಸಿಂಪಡಿಸಿ ರಕ್ಷಣೆ ಇದ್ದ ಕಾರಣ) ಕೆಲವೊಮ್ಮೆ ಎಲೆ ಭಾಗಕ್ಕೂ ಬಾಧಿಸುತ್ತದೆ.
- ನೆಲದಲ್ಲಿ ಬೇರಿಗೆ ಸೋಂಕು ಆಗಬೇಕಾದರೆ ಅಲ್ಲಿ ಜೌಗು ಸ್ಥಿತಿ ಉಂಟಾಗಿರಬೇಕು.
- ಹೆಚ್ಚಾಗಿ ಬೇರಿಗೆ ತೊಂದರೆ ಮಾಡಲು ಮಣ್ಣಿನ ಇತರ ಉಪಯುಕ್ತ ಸೂಕ್ಷ್ಮಾಣು ಜೀವಿಗಳು ಪ್ರತಿರೋಧ ಉಂಟು ಮಾಡುತ್ತವೆ.
- ಜೌಗು ಸ್ಥಿತಿ (Waterlogging condition) ಇದ್ದರೆ ಉಪಕಾರೀ ಜೀವಾಣುಗಳು ಅಲ್ಲಿ ನಾಶವಾಗಿರುತ್ತವೆ.
- ಜೌಗು ಎಂದರೆ ಸಣ್ಣ ತಗ್ಗು ಸ್ಥಳ, ಅಲ್ಲಿ ಕೊಚ್ಚಣೆಯಾಗಿ ಬಂದ ಮೇಲ್ಮಣ್ಣು ನಿಂತು, ನೀರು ಇಂಗದೆ ಹಳಸುವ ಸ್ಥಿತಿ ಉಂಟಾಗುವುದು.
- ಅದನ್ನು “ಕಿರಿಂಚಿ “ (ತುಳು) ಎಂಬುದಾಗಿ ಹೇಳುತ್ತಾರೆ.
- ಅಲ್ಲಿ ಹಾನಿಕಾರಕ ಜೀವಾಣುಗಳೂ ಅಥವಾ ಗಾಳಿಯಾಡದ ಸ್ಥಿತಿಯಲ್ಲಿ ಬದುಕುವ ಜೀವಾಣುಗಳು ಇರುತ್ತವೆ.
- ಅಲ್ಲಿ ನಾವು ಹೆಚ್ಚು ಹೊತ್ತು ನೆಡೆದಾಡಿದರೆ ಕಾಲಿಗೂ ಶಿಲೀಂದ್ರ ಸೋಂಕು ಉಂಟಾಗುತ್ತದೆ.
- ಅಂತಹ ಸ್ಥಿತಿ ಇದ್ದರೆ ಬೇರು ಕೊಳೆಯಲಾರಂಭಿಸುತ್ತದೆ.
- ಶಿಲೀಂದ್ರ ಸೋಂಕು ಎಂದರೆ ಯಾವ ಭಾಗಕ್ಕೆ ಅದು ತಗಲಿತೋ ಆ ಭಾಗಲ್ಲಿ ಅದು ಪರಾವಲಂಭಿಯಾಗಿ ಬೆಳವಣಿಗೆಯಾಗುವುದು. (produces sporangia).
- ಆಗ ಆ ಭಾಗ ಬೆಂದಂತಾಗಿ ಕೊಳೆತು ಜೀವ ಕೋಶಗಳು ಸಾಯುತ್ತವೆ.
- ಶಿಲೀಂದ್ರ ಬದುಕುವುದು ಇನ್ನೊಂದನ್ನು ಆಶ್ರಯಿಸಿ. ಬದನಿಕೆಯ ತರಹ.
- ಬೇರು ಕೊಳೆತರೆ ಮರ ಸಾಯುತ್ತದೆ. ಕಾಯಿಗೆ ಸೋಂಕು ಉಂಟಾದರೆ ಕಾಯಿ ಕೊಳೆತು ಉದುರುತ್ತದೆ.
- ಸಂಪೂರ್ಣ ಉದುರಿ ಇಡೀ ಗೊನೆ ರೋಗಕ್ಕೆ ತುತ್ತಾದರೆ ಆ ಭಾಗದ ಮೃದು ನಾಳಗಳ ಮೂಲಕ ಶಿಲೀಂದ್ರ ಕಾಂಡದ ಮಧ್ಯದ ಸ್ಪಂಜಿನಂತಹ ಭಾಗಗಳ ಮೂಲಕ ಎಳೆಯ ಸುಳಿ ಭಾಗಕ್ಕೆ ಹೋಗುತ್ತದೆ.
- ಆಗ ಸುಳಿಯ ಬಿಡಿಸದ ಗರಿ ಮತ್ತು ಅದರ ಸುತ್ತಲಿನ ಎರಡು ಮೂರು ಗರಿ ಮೊದಲು ಒಣಗುತ್ತದೆ.
- ಇದು ಬಡ್ ರಾಟ್. ಮುಂದುವರಿದು ಕೆಲವೇ ದಿನದಲ್ಲಿ ಇಡೀ ಶಿರದ ಎಲೆಗಳೂ ಒಣಗುತ್ತದೆ.
- ಶಿರವೇ ಕಳಚಿ ಬೀಳುತ್ತದೆ.
- ಎಲೆ ಭಾಗಕ್ಕೆ ಬಾಧಿಸುವುದು ಎಂದರೆ ಶಿಲೀಂದ್ರಗಳು ಹಾಳೆ ಅಂಟಿಕೊಂಡ ಭಾಗದ ಮೂಲಕ ಪ್ರವೇಶವಾಗಿ ಅಲ್ಲಿ ಸಂಖ್ಯಾಭಿವೃದ್ದಿಯಾಗುವುದು.
- ಅದು ಒಂದು ಎರಡು ಎಲೆಗೂ ಬಾಧಿಸಬಹುದು.
- ಇಡೀ ಎಲ್ಲಾ ಎಲೆಗೂ ಬಾಧಿಸಬಹುದು. ವಾತಾವರಣ ಅನುಕೂಲ ಇಲ್ಲದಾದಾಗ (ಬಿಸಿಲು ಬಂದು ಒಣಗಿದರೆ ಶಿಲೀಂದ್ರ ಸಾಯುತ್ತದೆ)
- ಅಲ್ಲಿಗೆ ಶಿಲೀಂದ್ರ ತಟಸ್ಥವೂ ಆಗಬಹುದು.
- ಅಂತಲ್ಲಿ ಒಂದು ಎಲೆ ಮಾತ್ರ ಹಳದಿಯಾಗುವುದೂ ಇರುತ್ತದೆ.
ಏನು ಪರಿಹಾರ?
- ಶಿರ ಕೊಳೆ ರೋಗ ಬಂದರೆ ಅದು ಇತರ ಮರಗಳಿಗೂ ಹರಡುತ್ತದೆ.
- ಹಾಗಾಗಿ ಉಪಚಾರ ಮಾಡುವುದು ಅಗತ್ಯ.
- ಫೈಟೋಪ್ಥೆರಾ ಶಿಲೀಂದ್ರಕ್ಕೆ ಪರಿಣಾಮಕಾರೀ ಶಿಲೀಂದ್ರ ನಾಶಕ ತಾಮ್ರ ಆಧರಿತವಾದದ್ದು.
- ಅದಕ್ಕೆ ಬೋರ್ಡೋ ದ್ರಾವಣವನ್ನು ಶಿಫಾರಸು ಮಾಡಲಾಗುತ್ತದೆ.
- ಇದು ಬಾರದಂತೆ ತಡೆಯುವ ಔಷಧಿಯಾಗಿರುತ್ತದೆ. ರೋಗ ಬಂದ ಮೇಲೆ ಇದನ್ನು ಬಳಸಿದರೆ ಫಲ ಕಡಿಮೆ.
- ಶಿರ ಕೊಳೆ ರೋಗ ಅಲ್ಪ ಸ್ವಲ್ಪ ಬಾಧಿಸಿದ್ದರೆ ಅದು ಮೊಳಕೆ ಭಾಗಕ್ಕೆ ಹಾನಿಯಾಗಿರದೇ ಇದ್ದರೆ ಅಂತಹ ಮರ/ ಸಸಿಗಳು ಮಾತ್ರ ಶಿಲೀಂದ್ರ ನಾಶಕದ ಉಪಚಾರದಿಂದ ವಾಸಿಯಾಗುತ್ತದೆ.
- ಮೊಳಕೆಗೆ ಹಾನಿಯಾಗಿದ್ದರೆ ಯಾವ ಶಿಲೀಂದ್ರ ನಾಶಕವೂ ಕೆಲಸ ಮಾಡಲಾರದು.
- ಇತರ ಮರಗಳಿಗೆ ಹರಡದಂತೆ ರಕ್ಷಣೆಗೆ ಶಿಲೀಂದ್ರ ನಾಶಕದ ಬಳಕೆ ಅಗತ್ಯ.
- ಇದನ್ನು ಬೇರಿನ ಮೂಲಕವೂ ಕೊಡಬಹುದು. ಎಲೆಗೆ ಸಿಂಪರಣೆಯನ್ನೂ ಮಾಡಬಹುದು.
- ದೊಡ್ದ ಮರಗಳಿಗೆ ಸಿಂಪರಣೆ ಕಷ್ಟ. ಅನುಕೂಲ ಇದ್ದವರು ಮಾಡಬಹುದು.
- ಎಳೆಯ ಸಣ್ಣ ಎತ್ತರದ ಮರಗಳಾದಲ್ಲಿ ಎಲೆಗಳಿಗೆ ಸಿಂಪರಣೆ ಮಾಡಿದರೆ ತಕ್ಷಣ ಪರಿಹಾರ.
- ಸಾಮಾನ್ಯವಾಗಿ ಶಿರ ಕೊಳೆ ಬಂದಾಗ ಬೇರಿನ ಬಾಗಕ್ಕೂ ಹಾನಿಯಾಗಿರುತ್ತದೆ.
- ಹಾಗಾಗಿ ಬೇರಿನ ಬಾಗಕ್ಕೆ ಶಿಲೀಂದ್ರ ನಾಶಕ ಡ್ರೆಂಚಿಂಗ್ ಮಾಡಬೇಕು.
ಯಾವ ಔಷಧಿಗಳನ್ನು ಬಳಸಬಹುದು?
ರೋಗ ಹರಡದಂತೆ ತಡೆಯಲು ತಾಮ್ರ ಆಧಾರಿತ ಶಿಲೀಂದ್ರ ನಾಶಕ ಸಿಂಪರಣೆ ಮಾಡಬಹುದು. ಅದರಲ್ಲಿ ಒಂದು ಬೋರ್ಡೋ ದ್ರಾವಣ ಮತ್ತು ಕಾಪರ್ ಆಕ್ಸೀ ಕ್ಲೋರೈಡ್. ಇದು ಮುನ್ನೆಚ್ಚರಿಕೆಗೆ ಮಾತ್ರ.
- ಹೆಚ್ಚಾಗಿ ಶಿರ ಕೊಳೆ ಜಾಸ್ತಿ ಇರುವ ವರ್ಷದಲ್ಲಿ ಮಳೆಯೂ ಹೆಚ್ಚು ಇರುತ್ತದೆ, ಬಿಸಿಲು ಮಳೆ ವಾತಾವರಣ ಇದ್ದಾಗ ಶಿಲೀಂದ್ರದ ಹರಡುವಿಕೆ ತೀವ್ರಗತಿಯಲ್ಲಿರುತ್ತದೆ.
- ಹಾಗಾಗಿ ಸುತ್ತಮುತ್ತಲಿನ ಮರಗಳಿಗೆ ಹರಡಿರುವ ಸಾಧ್ಯತೆ ಇರುತ್ತದೆ.
- ಆದ ಕಾರಣ ಅದಕ್ಕೆ ಅಂತರ್ವ್ಯಾಪೀ ಬ್ರಾಡ್ ಸ್ಪೆಕ್ಟ್ರಮ್ ಶಿಲೀಂದ್ರ (Systemic Broad spectrum fungicides) ನಾಶಕವನ್ನು ಡ್ರೆಂಚಿಂಗ್ ಅಥವಾ ಸಿಂಪರಣೆಗೆ ಬಳಸಬೇಕು.
- ಅದರಲ್ಲಿ ಮ್ಯಾಂಕೋಜೆಬ್ ಮತ್ತು ಬಾವಿಸ್ಟಿನ್ ಎರಡೂ ಸೇರಿರುವ ಶಿಲೀಂದ್ರ ನಾಶಕ, ಇದನ್ನು 2.5 ಗ್ರಾಂ 1 ಲೀ. ನೀರಿಗೆ ಬೆರೆಸಿ ಸಿಂಪರಣೆ ಮತ್ತು ಡ್ರೆಂಚಿಂಗ್ ಮಾಡಬೇಕು.
- ಇನ್ನೊಂದು ಮೆಟಲಾಕ್ಸಿಲ್ 35% ,ಇದು 1 ಗ್ರಾಂ 1 ಲೀ. ನೀರಿಗೆ ಬೆರೆಸಿ ಬಳಸಬೇಕು.
- ಹಾಗೆಯೇ ಕರ್ಜೆಟ್ (Curzate) ಇದು 2 -2.5 ಗ್ರಾಂ 1 ಲೀ. ನೀರಿಗೆ ಬೆರೆಸಿ ಬಳಸಬೇಕು.
- ಸಿಂಪಡಿಸುವಾಗ ಎಲೆಯ ಕಂಕುಳಕ್ಕೆ ಬೀಳುವಂತೆ ಸಿಂಪಡಿಸಬೇಕು.
- ಅಲ್ಲಿ ಶಿಲೀಂದ್ರಗಳು ಇರುತ್ತವೆ. ಎಲೆಗೆ ಮಾತ್ರ ಸಿಂಪರಣೆ ಮಾಡಿದರೆ ಸಾಲದು.
- ಡ್ರೆಂಚಿಂಗ್ ಮಾಡುವಾಗ ಬೇರು ವಲಯಕ್ಕೆ ಬುಡದಿಂದ 1.5 -2 ಅಡಿ ದೂರದಲ್ಲಿ ಸುತ್ತಲೂ ಬೀಳುವಂತೆ 5-10 ಲೀ. ಪ್ರಮಾಣದಲ್ಲಿ ರೋಸ್ ಕ್ಯಾನ್ ಮೂಲಕ ಎರೆಯಬೇಕು.
- ಜೌಗು ಸ್ಥಿತಿ ಇದ್ದರೆ ಅ ಭಾಗದಲ್ಲಿ ನೀರು ನಿಲ್ಲದಂತೆ ಹರಿದು ಹೋಗಲು ದಾರಿ ಮಾಡಿಕೊಡಬೇಕು.
- ಬುಡ ಭಾಗದಲ್ಲಿ ಮಣ್ಣು ಹೆಪ್ಪುಗಟ್ಟಿದ್ದರೆ ಅದನ್ನು ಕೆರೆದು ತೆಗೆದು ಸ್ವಲ್ಪ ಎತ್ತರದ ಜಾಗದಲ್ಲಿ ಹಾಕಿ ಮಣ್ಣಿಗೆ ಗಾಳಿಯಾಡಲು ಅನುಕೂಲ ಮಾಡಿಕೊಡಬೇಕು.
- ಬೇರುಗಳು ಬೆಳೆಯಲು ಅನುಕೂಲ ಆಗುವಂತೆ ಹ್ಯೂಮಿಕ್ ಅಸಿಡ್ ಮತ್ತು ಸಮುದ್ರ ಪಾಚಿ ತಯಾರಿಕೆ ಬಳಸಿದರೆ ಉತ್ತಮ.
- ಶಿಲೀಂದ್ರ ನಾಶಕ ಬಳಸಿದಾಗ ಅದು ಸ್ವಲ್ಪ ಮಟ್ಟಿಗೆ ಸಸ್ಯ ಬೆಳವಣಿಗೆಯನ್ನು ಕುಗ್ಗಿಸುತ್ತದೆ. (Inhibits the growth) ಆದಕ್ಕಾಗಿ ಸ್ವಲ್ಪ ಪೋಶಕಾಂಶ ಕೊಡುವುದು ಉತ್ತಮ.
ಮುನ್ನೆಚ್ಚರಿಕೆ ವಿಧಾನ:
- ಶಿರ ಕೊಳೆಯಂತಹ ಸಮಸ್ಯೆ ಬಾರದಂತೆ ತಡೆಯಲು ಕೊಳೆ ಔಷಧಿ ಸಿಂಪಡಿಸುವಾಗ ಗೊನೆಯ ಬುಡಭಾಗಕ್ಕೆ ಬೀಳುವಂತೆ ಸಿಂಪರಣೆ ಮಾಡಬೇಕು.
- ಆ ಭಾಗದಲ್ಲಿ ಯಾವಾಗಲೂ ನೀರು ನಿಲ್ಲುವ ಕಾರಣ ಶಿಲೀಂದ್ರ ಬೆಳವಣಿಗೆಗೆ ಅನುಕೂಲ.
- ಸಾಧ್ಯವಾದಷ್ಟು ಎಲೆ ಕಂಕುಳಕ್ಕೂ ಸಿಂಪಡಿಸುವುದು ಉತ್ತಮ. ಇದರಿಂದ ಸುಳಿ ಕೊಳೆ ತಡೆಯಲು ಸಾಧ್ಯ.
- ಎಲೆ ಭಾಗದಲ್ಲಿ ಶಿಲೀಂದ್ರ ಬೆಳವಣಿಗೆ ಅನುಕೂಲ ಜಾಸ್ತಿ. ಕೊಳೆ ಔಷಧಿಯನ್ನು ಮಳೆ ಆಧರಿಸಿ 30 ದಿನಗಳ ಅಂತರದಲ್ಲಿ ಸಿಂಪರಣೆ ಮಾಡಬೇಕು.
- ಮಳೆ ಬಿಸಿಲು ಎರಡೂ ಇದ್ದಾಗ ಕೊಳೆ ಜಾಸ್ತಿ. ಹಾಗಾಗಿ ಮಳೆ ಕಡಿಮೆ ಎಂದು ಸಿಂಪರಣೆಗೆ ಉದಾಸೀನ ಮಾಡಬೇಡಿ.
- ಮಳೆಗಾಲ ಪ್ರಾರಂಭದಲ್ಲಿ ಕೊಡುವ ರಸ ಗೊಬ್ಬರದಲ್ಲಿ ಸಾರಜನಕ ಅಂಶ ತೀರಾ ಕಡಿಮೆ ಇರಲಿ.
- ಕೊಟ್ಟಿಗೆ ಗೊಬ್ಬರ ಮಳೆ ಕಳೆದ ನಂತರ ಕೊಡಿ.
- ಮಳೆಗಾಲದಲ್ಲಿ ಮಳೆಗೆ ಬಿಡುವು ಇದ್ದಾಗ ಮಣ್ಣಿಗೆ ಟ್ರೈಕೋಡರ್ಮಾ ಬಳಸಿರಿ.
ಶಿರ ಕೊಳೆ ಅಡಿಕೆ ತೋಟದಲ್ಲಿ ಅತೀ ದೊಡ್ಡ ನಷ್ಟವನ್ನು ಉಂಟು ಮಾಡುತ್ತದೆ. ಇತ್ತೀಚೆಗೆ ಮಳೆ ಜಾಸ್ತಿ. ಹಾಗೆಯೇ ಈ ತೊಂದರೆಯೂ ಜಾಸ್ತಿ. ಹಾಗಾಗಿ ಕೊಳೆ ಔಷಧಿ ಸಿಂಪಡಿಸುವ ಸಮಯದಲ್ಲಿ ಬರೇ ಗೊನೆಗೆ ಮಾತ್ರವಲ್ಲದೆ ಎಲೆ ಭಾಗಕ್ಕೂ ಸಿಂಪರಣೆ ಮಾಡುವುದು ಸೂಕ್ತ.
ಲೇಖಕರು: ಡಾ. ಎಚ್ ನಾರಾಯಣ ಸ್ವಾಮಿ, ಸಸ್ಯರೋಗ ತಜ್ಞರು ಮತ್ತು ಮುಖ್ಯಸ್ಥರು (ನಿ) ಅಡಿಕೆ ಸಂಶೋಧನಾ ಕೇಂದ್ರ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿಧ್ಯಾಲಯ ಶಿವಮೊಗ್ಗ.