ಗ್ಲೆರಿಸೀಡಿಯಾ ಗೆಲ್ಲು ನೆಟ್ಟು ಕರಿಮೆಣಸಿನ ಬಳ್ಳಿಯನ್ನು ಬಿಟ್ಟರೆ ಚೆನ್ನಾಗಿ ಬೆಳೆಯುತ್ತದೆ. ಇದರಿಂದ ಕೊಯಿಲು ಮಾಡಲು ಕಷ್ಟವಿಲ್ಲ. ಹಿಂದೆ ನಮ್ಮಲ್ಲಿ ಹಾಲುವಾಣ ಮರಗಳಿಗೆ ಮೆಣಸಿನ ಬಳ್ಳಿ ಹಬ್ಬಿಸುತ್ತಿದ್ದರು. ಕ್ರಮೇಣ ಅಡಿಕೆ, ತೆಂಗಿನ ಮರ ಹಾಗೆಯೇ ಇನ್ನಿತರ ಕಾಡು ಮರಮಟ್ಟುಗಳಿಗೆ ಬಳ್ಳಿ ಹಬ್ಬಿಸುವುದು ಪ್ರಾರಂಭವಾಯಿತು. ಈ ಮರಮಟ್ಟುಗಳಲ್ಲಿ ಬಳ್ಳಿ ಉತ್ತಮವಾಗಿ ಹಬ್ಬುತ್ತದೆಯಾದರೂ ಕೊಯಿಲು ಕೆಲಸ ಕಷ್ಟವಾಗಲಾರಂಭಿಸಿದೆ. ಅದಕ್ಕೊಂದು ಪರಿಹಾರ ಹುಡುಕುವ ನಿಟ್ಟಿನಲ್ಲಿ ಬೇರೆ ಬೇರೆ ಪ್ರಯೋಗಗಳು ನಡೆಯುತ್ತಿವೆ. ಅವುಗಳಲ್ಲಿ ಒಂದು ಗ್ಲೆರಿಸೀಡಿಯಾ ಸಸ್ಯ. ಈ ಸಸ್ಯಕ್ಕೆ ಕರಿಮೆಣಸಿನ ಬಳ್ಳಿ ಹಬ್ಬಿಸುವುದರಿಂದ ಕೊಯಿಲು ಸುಲಭ, ಹಾಗೆಯೇ ಅದನ್ನೇ ಏಕ ಬೆಳೆಯಾಗಿಯೂ ಬೆಳೆಸಬಹುದು.
ಹಾಲುವಾಣ ಮರ ಯಾವುದೋ ಒಂದು ವೈರಸ್ ರೋಗಕ್ಕೆ ತುತ್ತಾಗಿ ನಶಿಸುತ್ತಾ ಬರಲಾಂಭಿತು. ಅದರ ಬದಲಿಗೆ ಅಡಿಕೆ ಮರ, ತೆಂಗಿನ ಮರ, ಕಾಡು ಮರಗಳು, ಹಾಗೂ ಸಿಲ್ವರ್ ಮರಗಳ ಆಸರೆಯಲ್ಲಿ ಮೆಣಸು ಬಳ್ಳಿ ಹಬ್ಬಿಸುವುದು ರೂಢಿಯಾಯಿತು. ಇದಲ್ಲದೆ ಕೆಲವು ರೈತರು ಬೇರೆ ಬೇರೆ ಪ್ರಯೋಗಗಳನ್ನೂ ಮಾಡಿದವರಿದ್ದಾರೆ. ಸುಬಾಬುಲ್ ಸಸ್ಯಗಳಿಗೂ ಮೆಣಸು ಬಳ್ಳಿ ಹಬ್ಬಿಸಿ ನೋಡಿದವರಿದ್ದಾರೆ. ಇದೆಲ್ಲಕ್ಕಿಂತ ಗ್ಲೆರಿಸೀಡಿಯಾ ಸಸ್ಯ ದ ಆಸರೆಯಲ್ಲಿ ಮೆಣಸು ಬೆಳೆಸಿದ್ದೇ ಆದರೆ ಯಾವ ಸಮಸ್ಯೆಯೂ ಇಲ್ಲ. ಗ್ಲೆರಿಸೀಡಿಯಾ ಸಸ್ಯಕ್ಕೆ ಧೀರ್ಘಾಯುಷ್ಯ ಇದ್ದು, ಇದನ್ನು ನಮಗೆ ಬೇಕಾದಷ್ಟು ಎತ್ತರಕ್ಕೆ ಬೆಳೆಸಲು ಅನುಕೂಲ ಸಹ ಇದೆ.
ಯಾಕೆ ಗ್ಲೆರಿಸೀಡಿಯಾ ಸೂಕ್ತ:
ಗ್ಲೆರಿಸೀಡಿಯಾ ಸಸ್ಯದ ವಿಶೇಷ ಏನೆಂದರೆ ಅದರ ಗೆಲ್ಲು ಬದುಕುತ್ತದೆ. ಹಾಗೆಯೇ ಬೀಜದ ಮೂಲಕವೂ ಸಸಿ ಮಾಡಿಕೊಳ್ಳಬಹುದು. ಇದರ ಬೆಳವಣಿಗೆ ಶೀಘ್ರ. ಗೆಲ್ಲನ್ನು ನೆಟ್ಟು ತಕ್ಷಣವೇ ಅದಕ್ಕೆ ಮೆಣಸಿನ ಸಸಿಯನ್ನೂ ನೆಟ್ಟು ಬಿಡಬಹುದು.ಗೆಲ್ಲುಗಳು ಬೇರು ಬಿಟ್ಟು ಬದುಕಿ ಗಟ್ಟಿಯಾಗುವ ಸಮಯಕ್ಕೆ ಬಳ್ಳಿ ಚಿಗುರಲಾರಂಭಿಸುತ್ತದೆ. ಒಂದು ವೇಳೆ ಸಸಿ ನೆಟ್ಟರೂ ಸಹ ಜೊತೆಗೆನೇ ಮೆಣಸಿನ ಸಸಿ ಅಥವಾ ಬಳ್ಳಿಯನ್ನು ನೆಡಬಹುದು. ಮೆಣಸಿನ ಬಳ್ಳಿ ಬೇರು ಕೊಟ್ಟು ಚಿಗುರೊಡೆಯುವ ಸಮಯಕ್ಕೆ ಗ್ಲೆರಿಸೀಡಿಯಾ ಬೆಳೆಯುತ್ತದೆ. ಮೆಣಸಿನ ಬಳ್ಳಿಗೆ ರೋಗ ಬರುವುದು ಜಾಸ್ತಿ. ಕಾರಣ ಅದರ ಬೇರುಗಳು ಬಹಳ ಸೂಕ್ಷ್ಮ. ಬೇರುಗಳಿಗೆ ಸೂಕ್ತ ರಕ್ಷಣೆ ಕೊಟ್ಟರೆ ಬಳ್ಳಿಗೆ ರೋಗ ಸಾಧ್ಯತೆ ಕಡಿಮೆ ಇರುತ್ತದೆ.ಬೇರುಗಳಿಗೆ ಹೇಗೆ ರಕ್ಷಣೆ ಕೊಡುವುದು ಎನ್ನುತ್ತೀರಾ? ಮತ್ತೇನಿಲ್ಲ. ಬೇರಿನ ಬುಡದಲ್ಲಿ ನೀರು ನಿಲ್ಲಬಾರದು. ಮಳೆಗೆ ಬೀಳುವ ನೀರು ಮೆಣಸಿನ ಬೇರು ವಲಯದಲ್ಲಿ ತಂಗದಂತೆ ಮಾಡಿದರೆ ಮೆಣಸಿನ ಬಳ್ಳಿ ಪಾಸ್. ಅದಕ್ಕೆ ಬುಡ ಏರಿಸಬೇಕು. ಮಳೆಗಾಲದಲ್ಲಿ ಬೀಳುವ ಮಳೆ ಹನಿಗೆ ಮಣ್ಣು ಸವಕಳಿ ಉಂಟಾಗಬಾರದು. ಹಾಗೆ ಆಗಬೇಕಾದರೆ ಬುಡದಲ್ಲಿ ಹೊದಿಕೆ ಇರಬೇಕು. ಇದನ್ನು ಪರಿಪೂರ್ಣವಾಗಿ ಮಾಡಲು ಅಡಿಕೆ , ತೆಂಗಿನ ತೋಟಗಳಲ್ಲಿ ಸಾಧ್ಯವಾಗುವುದಿಲ್ಲ. ಮಣ್ಣು ಕರಗಿದಾಕ್ಷಣ ಮೆಕ್ಕಲು ಮಣ್ಣು ,ನೊರಜು ಕಲ್ಲುಗಳಿಂದ ಪ್ರತ್ಯೇಕಗೊಂಡು ತಗ್ಗಿನ ಸ್ಥಳದಲ್ಲಿ ಹೆಪ್ಪುಗಟ್ಟಿದಂತೆ ನಿಲ್ಲುತ್ತದೆ. ಅಲ್ಲಿ ಸಂಗ್ರಹವಾದ ನೀರು ಬಸಿದು ಬೇಗ ಹೋಗುವುದಿಲ್ಲ. ಹಾಗಾಗಿ ಅಲ್ಲಿ ಮಣ್ಣು ಹಳಸಲಾಗಿ ರೋಗಕ್ಕೆ ಕಾರಣವಾಗುತ್ತದೆ. ಗ್ಲೆರಿಸೀಡಿಯಾದಂತಹ ಸಸ್ಯಗಳಿಗೆ, ಸಿಲ್ವರ್ ನಂತಹ ಮರಗಳು, ಕಾಡು ಮರಗಳಿಗೆ ಮೆಣಸಿನ ಬಳ್ಳಿ ಹಬ್ಬಿಸಿದರೆ ಮಳೆನೀರು ನಿರ್ವಹಣೆ ಮಾಡುವುದು ಸುಲಭ. ಹಾಗಾಗಿ ಮೆಣಸಿನ ಬಳ್ಳಿ ಆರೋಗ್ಯವಾಗಿ ಹೆಚ್ಚು ಸಮಯ ತನಕ ಬದುಕಿರುತ್ತದೆ.

ಹೂವು ಬರುವುದು ಹೆಚ್ಚು:
ಮೆಣಸಿನ ಬಳ್ಳಿಗೆ ಹೂ ಬಿಡಬೇಕಾದ ಸಮಯಕ್ಕೆ ಒಂದು ತಿಂಗಳ ಮುಂಚೆ ಸ್ವಲ್ಪವಾದರೂ ನೀರಿನ ಕೊರತೆ stress ಉಂಟಾಗಬೇಕು. ಆಗ ಅದರಲ್ಲಿ ಹೂ ಮೊಗ್ಗು ಬರುವಿಕೆ ಹೆಚ್ಚಾಗಿರುತ್ತದೆ. ಒಮ್ಮೆ ಸ್ವಲ್ಪ ನೀರೊತ್ತಾಯ ಆಗಿ ಮಳೆ ಬಂದಾಕ್ಷಣ ಬಳ್ಳಿ ಚಿಗುರುವಿಕೆ ಉತ್ತಮವಾಗುತ್ತದೆ. ಆಗ ನೆರಳು ತೆಗೆಯುವುದು –ಮುಂತಾದ ಕೆಲಸ ಮಾಡಬೇಕಾಗುತ್ತದೆ. ಅದನ್ನೆಲ್ಲಾ ಮಾಡಲು ಗ್ಲೆರಿಸೀಡಿಯಾ ಸಸ್ಯ ಆದರೆ ಸಾಧ್ಯ. ಬೇಸಿಗೆಯಲ್ಲಿ ಗೆಲ್ಲು ಸವರಬಹುದು.ವರ್ಷಕ್ಕೆ ಮೂರು ಬಾರಿ ಗೆಲ್ಲು ಸವರಿದರೂ ಮತ್ತೆ ಮತ್ತೆ ಗೆಲ್ಲುಗಳು ಬರುತ್ತಾ ಇರುತ್ತದೆ.
ಗ್ಲೆರಿಸೀಡಿಯಾ ಗೆಲ್ಲು ಸಾಯುತ್ತದೆ ಎನ್ನುತ್ತಾರೆ ನಿಜವೇ?
ಇದನ್ನು ನೆಡುವುದಕ್ಕೂ ಒಂದು ವಿಧಾನ ಇದೆ. ತೂತು ಮಾಡಿ ನೆಟ್ಟರೆ ಕೆಲವೊಮ್ಮೆ ನೆಟ್ಟ ಗೆಲ್ಲುಗಳು ಸಾಯುವುದು ಇದೆ. ಅದರ ಬದಲಿಗೆ ಪಿಕ್ಕಾಸಿಯಲ್ಲಿ ಸುಮಾರು ½ ಅಥವಾ ¾ ಅಡಿ ಅಗೆದು ಅದರಲ್ಲಿ ಗೆಲ್ಲನ್ನು ಊರಿ ಗಟ್ಟಿಯಾಗಿ ಮೆಟ್ಟಬೇಕು. ಆಗ ಅದರ ಒಳಗೆ ನೀರು ಸೇರುವುದಿಲ್ಲ. ಹೀಗೆ ಮಾಡಿದರೆ 100% ಬದುಕುತ್ತದೆ. ಇನ್ನೂ ಒಂದು ವಿಚಾರ ಇದೆ. ಈ ಸಸ್ಯದ ಗೆಲ್ಲನ್ನು ಹೆಚ್ಚು ಉದ್ದಕ್ಕೆ ನೆಡಬಾರದು. ಸುಮಾರು 1-2 ಅಡಿ ಮಾತ್ರ ಉದ್ದ ಇರುವಂತೆ ನೆಡಬೇಕು. ಆಗ ಅದರ ಮೇಲಿನ ಭಾಗ ಒಣಗುವುದು ತಪ್ಪುತ್ತದೆ. ಗೆಲ್ಲು ನೆಡುವಾಗ ಅದರ ತುದಿ ಭಾಗಕ್ಕೆ ಪ್ಲಾಸ್ಟಿಕ್ ಲಕೋಟೆಯನ್ನು ಮುಚ್ಚುವುದರಿಂದ ಕೊಳೆಯುವಿಕೆ ತಡೆಯಬಹುದು. ಸಣ್ಣ ಗೆಲ್ಲುಗಳನ್ನು ನೆಟ್ಟರೆ ಅದರಲ್ಲಿ ಬಂದ ಹೊಸ ಚಿಗುರು ಗೆಲ್ಲು ಒಂದನ್ನು ಬೆಳೆಯಲು ಬಿಟ್ಟರೆ ಅದು ಸಧೃಢವಾಗಿ ಬೆಳೆಯುತ್ತದೆ. ಇಂತಹ ಚಿಗುರು ಬಂದ ಗೆಲ್ಲುಗಳು ಬೆಳೆದಾಗ ವಾಲುವ ಅಥವಾ ಬುಡ ಸಮೇತ ಅಡ್ಡ ಬೀಳುವ ಸಾಧ್ಯತೆ ಕಡಿಮೆ.
ಯಾವ ಸಮಯದಲ್ಲಿ ಗೆಲ್ಲು ನೆಡಬೇಕು?
ಗ್ಲೆರಿಸೀಡಿಯಾ ಗೆಲ್ಲನ್ನು ನೆಡಲು ಸೂಕ್ತ ಸಮಯ ಎಂದರೆ ಬೇಸಿಗೆಯ ಕೊನೆ ಸಮಯ. ಮುಂಗಾರು ಪೂರ್ವ ಮಳೆ ಪ್ರಾರಂಭವಾಗುವ ಸಮಯವೂ ಆಗಬಹುದು. ಅತಿಯಾಗಿ ಮಳೆ ಬರುವ ಸಮಯದಲ್ಲಿ ನೆಡಬಾರದು. ಮಳೆ ಮುಗಿಯುವ ಸಮಯದಲ್ಲಿ ನೆಟ್ಟರೂ ಬದುಕುತ್ತದೆ. ಒಟ್ಟಾರೆಯಾಗಿ ನೆಟ್ಟ ಗೆಲ್ಲಿನ ಬುಡ ಭಾಗದಲ್ಲಿ ಹೆಚ್ಚು ನೀರು ನಿಲ್ಲಬಾರದು. ಆಗ ಆ ಭಾಗ ಕೊಳೆತು ಬೇರು ಬರುವುದಿಲ್ಲ. ಬೇಸಿಗೆಯಲ್ಲಿ ನೆಡುವಾಗ ತೂತು ಮಾಡಿ ನೆಟ್ಟರೆ ಆ ತೂತಿಗೆ ಸ್ವಲ್ಪ ನೀರು ಹಾಕಿ ನೆಡಬೇಕು. ಆಗ ಅಲ್ಲಿರುವ ಬಿಸಿ ಮತ್ತು ತೇವಾಂಶಕ್ಕೆ ಗೆಲ್ಲಿನಲ್ಲಿ ಬೇಗ ಬೇರು ಬರುತ್ತದೆ.
ಬೀಜದಿಂದ ಮಾಡಿದ ಸಸ್ಯ:
ಗ್ಲೆರಿಸೀಡಿಯಾ ಸಸ್ಯವು ಚಳಿಗಾಲ ಮಧ್ಯಭಾಗದಲ್ಲಿ ಎಲೆ ಉದುರಿಸಿ ಹೂ ಬಿಡಲಾರಂಭಿಸುತ್ತದೆ. ಮೆಣಸು ಬೆಳೆಯುವವರು ಈ ಸಮಯಕ್ಕೆ ಮುಂಚೆ ಒಮ್ಮೆ ಹಿತ ಮಿತವಾಗಿ ಗೆಲ್ಲು ಸವರಿದರೆ ಹೂ ಬರುವ ಬದಲು ಚಿಗುರುತ್ತದೆ. ಹೂ ಬಂದ ನಂತರ ಅದರಲ್ಲಿ ಕೊಡುಗಳಾಗಿ ಬೀಜ ಸಿಗುತ್ತದೆ. ಈ ಬೀಜಗಳನ್ನು ಸಸಿ ಮಾಡಿಕೊಂಡು ಅದನ್ನು ನೆಡುವುದು ಸಹ ಮೆಣಸು ಬಳ್ಳಿ ಹಬ್ಬಿಸಲು ಉತ್ತಮ. ಇಂತಹ ಸಸ್ಯಗಳನ್ನು ನೆಟ್ಟಾಗ ಅದಕ್ಕೆ ತಾಯಿ ಬೇರು ಇರುವ ಕಾರಣ ಅಡ್ಡ ಬೀಳುವುದಿಲ್ಲ. ಸಸ್ಯದ ಬೆಳವಣಿಗೆ ಶೀಘ್ರವಾದ ಕಾರಣ ಸಸಿ ನೆಡುವಾಗಲೇ ಮೆಣಸಿನ ಗಿಡ ಸಹ ನೆಡಬಹುದು. ಈ ಸಸ್ಯಕ್ಕೆ ಬಳ್ಳಿ ಅಂಟಿಕೊಳ್ಳುವುದಿಲ್ಲ ಎಂಬ ಒಂದು ವಾದ ಇದೆ. ಅಂಟಿ ಕೊಳ್ಳದೆ ಇರುವುದೂ ಇದೆ. ಅದಕ್ಕಾಗಿ ಗೆಲ್ಲಿನಲ್ಲಿ ಅಲ್ಲಲ್ಲಿ ಬರುವ ಚಿಗುರುಗಳ ಎಡೆಯಲ್ಲಿ ಬಳ್ಳಿಯನ್ನು ಲಾಕ್ ಮಡುವುದರಿಂದ ಬಳ್ಳಿ ಜಾರುವುದಿಲ್ಲ. ಹಾಗೆಯೇ ಅಲ್ಲಿ ಬಳ್ಳಿಯ ಹೊಸ ಚಿಗುರುಗಳು ಬಂದು ಇಳುವರಿಯೂ ಹೆಚ್ಚು ಬರುತ್ತದೆ.
ಈ ಸಸ್ಯವು ಸಾಕಷ್ಟು ಎಲೆಗಳನ್ನು ಉದುರಿಸುತ್ತದೆ. ಆಗಾಗ ಗೆಲ್ಲು ಸವರುವುದರಿಂದ ಮತ್ತಷ್ಟು ಸೊಪ್ಪು ಸಿಗುತ್ತದೆ. ಈ ಸಸ್ಯಕ್ಕೆ ಗೊಬ್ಬರದ ಗಿಡ ಎಂದೇ ಹೆಸರು. ಇದರ ಎಲೆಯನ್ನು ನೆಲಕ್ಕೆ ಹಾಸುವುದರಿಂದ ಇದರಲ್ಲಿರುವ ಎಥೆನಾಲ್ ಅಂಶದಿಂದಾಗಿ ಮಣ್ಣಿನ ಜಂತು ಹುಳಗಳು ಕಡಿಮೆಯಾಗುತ್ತದೆ. ಹಾಗೆಯೇ ಇದು ಸೊಳ್ಳೆ ನಿಯಂತ್ರಕವೂ ಹೌದು. ಇದು ಗೊಬ್ಬರ ತಿನ್ನುವುದಿಲ್ಲ. ಬದಲಿಗೆ ಗೊಬ್ಬರ ಕೊಡುತ್ತದೆ.
ಮುಂದಿನ ದಿನಗಳಲ್ಲಿ ಕೃಷಿ ಕೆಲಸಕ್ಕೆ ಜನ ಬಹಳ ಕಷ್ಟ. ಅದರಲೂ ನೈಪುಣ್ಯದ ಕೆಲಸಕ್ಕೆ ಜನ ಸಿಗಲಾರರು. ಮರ ಏರುವುದು, ಏಣಿಯಲ್ಲಿ ನಿಲ್ಲುವುದು ಇದೆಲ್ಲಾ ಕಷ್ಟ. ಅದಕ್ಕಾಗಿ ಈಗ ನೇರ ಗೆಲ್ಲುಗಳನ್ನು ತಗ್ಗಿನ ಸಸ್ಯಕ್ಕೆ ಹಬ್ಬಿಸಿ ಅಧಿಕ ಮೆಣಸು ಪಡೆಯುವ ವಿಧಾನ ಪ್ರಚಲಿತಕ್ಕೆ ಬಂದಿದೆ. ಗ್ಲೆರಿಸೀಡಿಯಾ ಕ್ಕೆ ಈ ರೀತಿಯ ಸಸಿ ನೆಟ್ಟು ಬೆಳೆಸಿದರೆ 8-10 ಅಡಿ ಎತ್ತರಕ್ಕೆ ಮೆಣಸು ಬೆಳೆಸಿ ಕೊಯಿಲು ಮಾಡಬಹುದು.