ಮುಸ್ಸಂಜೆ ಮತ್ತು ಕತ್ತಲೆಗೆ ದೀಪದ ಬೆಳಕಿಗೆ ಬಂದು ಬಿಳುವ ದುಂಬಿಗಳಲ್ಲಿ ಕುರುವಾಯಿ ಕೀಟ ಒಂದು.ಈ ದುಂಬಿ ತೆಂಗಿನ ಬೆಳೆಗಾರರ ಅತೀ ದೊಡ್ದ ಶತ್ರು.
- ನಮ್ಮ ಹಿರಿಯರು ಹೇಳುವುದಿದೆ, ಒಂದು ಕುರುವಾಯಿ ಕೊಂದರೆ 1 ದೇವಾಸ್ಥಾನ ಕಟ್ಟಿದ ಪುಣ್ಯವಿದೆ ಎಂದು.
- ಯಾಕೆಂದರೆ ಕುರುವಾಯಿ ಅಷ್ಟು ಹಾನಿ ಮಾಡುತ್ತದೆ..
- ಆದ ಕಾರಣ ವೃಕ್ಷಕ್ಕೆ ತೊಂದರೆ ಕೊಡುವ ಕೀಟ ಎಂಬ ಭಾವನೆಯಿಂದಲಾದರೂ ಅದು ನಶಿಸಲಿ ಎಂದು ಹಾಗೆ ಹೇಳಿರಬೇಕು.
ಬಾಧೆಯ ಲಕ್ಷಣ:
- ತೆಂಗಿನ ಸಸಿಯ/ಮರದ ಮೂಡುತ್ತಿರುವ ಇನ್ನೂ ಅರಳಿರದ ಸುಳಿಯ ಭಾಗದಲ್ಲಿ ಕುಳಿತು ಎಲೆ ಮತ್ತು ಅದರ ದಂಟನ್ನು ಕೊರೆದು ರಸ ಹೀರುತ್ತದೆ.
- ಸುಳಿ ಕೊರೆಯುವಾಗ ಅದರ ಎಲೆಗಳಿಗೆ ಮತ್ತು ಹೂ ಗೊಂಚಲಿಗೆ ತೀವ್ರ ಹಾನಿಯಾಗುತ್ತದೆ.
- ಎಳೆಯದಿರುವಾಗ ಕೊರೆಯಲ್ಪಟ್ಟ ಭಾಗ ಬೆಳೆದಂತೇ ಹರಿದ ಎಲೆಗಳಾಗಿ ಕಾಣಿಸುತ್ತದೆ.
- ಹೆಚ್ಚಿನ ಸಲ ದಂಟಿನ ಭಾಗ ಕೊರೆಯಲ್ಪಟ್ಟು ಸುಳಿ ಮೇಲೆ ಬೆಳೆಯುತ್ತಿದ್ದಂತೆ ದಂಟಿನಲ್ಲಿ ಶಕ್ತಿ ಇಲ್ಲದೆ ಮುರಿದು ಬೀಳುತ್ತದೆ.
- ಹೂ ಗೊಂಚಲಿನಲ್ಲಿ ಕೊರೆದು ಆ ಹೂಗೊಂಚಲು ಬೆಳೆಯದೆ ಅಲ್ಲೇ ಒಣಗಿ ಹೋಗುತ್ತದೆ.
- ದೊಡ್ಡ ಮರಗಳಲ್ಲಿ ಈ ಕೀಟದ ಹಾನಿಯಿಂದ ಮರ ಸಾಯಲಾರದು.
- ಎಳೆ ಸಸಿಗಳಾದರೆ ಸಾಯುವ ಸಾಧ್ಯತೂ ಇದೆ.
ಎಲ್ಲಿ ಹೆಚ್ಚು :
- ಮರವು ಸುಮಾರು 20 ಅಡಿಗಿಂತ ಎತ್ತರಕ್ಕೆ ಬೆಳೆದ ಮೇಲೆ ಇದರ ಉಪಟಳ ಕಡಿಮೆ.
- ಎಳೆಯ ಸಸಿಗಳಿಗೆ ಹೆಚ್ಚು. ಹೆಚ್ಚು ಮೃದು ಜಾತಿಯ ತಳಿಗಳಿಗೆ ತೀವ್ರ ಉಪಟಳ.
- ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟು ಗೊಬ್ಬರ ಬಳಕೆ ಮಾಡುವಲ್ಲಿ ಇದು ಜಾಸ್ತಿ.
- ತೆಂಗಿನ ನಾರು ಮತ್ತು ಹುಡಿ ಬಳಕೆ ಮಾಡುವಲ್ಲಿಯೂ ಜಾಸ್ತಿ.
ಪರಿಣಾಮ:
- ಸಸಿ/ಮರದ ಎಲೆ ಸಂಖ್ಯೆ ಕಡಿಮೆಯಾಗಿ ದ್ಯುತಿಸಂಸ್ಲೇಶಣ ಕ್ರಿಯೆ ಸಮರ್ಪಕವಾಗಿ ನಡೆಯದೆ ಸಸ್ಯ ಬೆಳವಣಿಗೆ ಕುಂಠಿತವಾಗುತ್ತದೆ.
- ಹೂಗೊಂಚಲು ಹಾನಿಯಾಗಿಯೂ ಇಳುವರಿ ಕ್ಷೀಣಿಸುತ್ತದೆ. ಕುರುವಾಯಿ ದುಂಬಿಯಿಂದ ತೆಂಗಿನಲ್ಲಿ 10-25 % ಇಳುವರಿ ನಷ್ಟವಾಗುತ್ತದೆ.
- ಇದು ತೆಂಗು ಬೆಳೆಯಲಾಗುವ ಎಲ್ಲಾ ಕಡೆಗಳಲ್ಲೂ ಕಂಡು ಬರುತ್ತದೆ.
- ಕುರುವಾಯಿ ಬಾಧಿಸಿದ ಭಾಗದಲ್ಲಿ ಮರದ ಕಾಂಡದಲ್ಲಿ ಗಾಯ ಉಂಟಾಗುತ್ತದೆ.ಕೆಲವೊಮ್ಮೆ ಗಾಳಿಗೆ ಮರ ಬೀಳುವುದಿದ್ದರೆ ಈ ಭಾಗದಿಂದ.
ಕುರುವಾಯಿ ಹೀಗಿರುತ್ತದೆ:
- ನಮ್ಮ ಸ್ವುತ್ತಮುತ್ತ ಹಲವಾರು ಕುರುವಾಯಿಯನ್ನು ಹೋಲುವ ದುಂಬಿಗಳಿವೆ. ಎಲ್ಲವೂ ತೆಂಗಿನ ಮರಕ್ಕೆ ತೊಂದರೆ ಮಾಡುವ ದುಂಬಿಗಳಲ್ಲ.
- ಹಲವಾರು ಪರಾಗ ಸ್ಪರ್ಷಕ್ಕೆ ನೆರವಾಗುವ ಉಪಕಾರೀ ದುಂಬಿಗಳೂ ಇವೆ.
- ತೆಂಗಿನ ಮರಕ್ಕೆ ಹಾನಿ ಮಾಡುವ ದುಂಬಿಯೆಂದರೆ ಕಪ್ಪು ಬಣ್ಣದ ಖಡ್ಗ ಜೀರುಂಡೆ ಮಾತ್ರ (Rhinoceros Beetle)
- ಇದಕ್ಕೆ ತನ್ನ ಬಾಯಿಯ ಮೇಲೆ ಒಂದು ಖಡ್ಗದಂಥ ರಚನೆ ಇರುತ್ತದೆ.
- ಕುರುವಾಯಿಯನ್ನು ಹೋಲುವ ದುಂಬಿಗಳು ನಿಮ್ಮ ಮನೆಯ ದೀಪದ ಬೆಳಕಿಗೆ ಬರುತ್ತವೆ.
- ಅದರಲ್ಲಿ ಖಡ್ಗ ಜೀರುಂಡಾದರೆ ಮಾತ್ರ ಕೊಲ್ಲಿ.
- ತೆಂಗಿನ ಸಸಿಯ/ ಮರದ ಸುಳಿಗಳು ಮೂಡುವ ಭಾಗದಲ್ಲಿ ಚೀಪಿ ಹೊರ ಹಾಕಿದ ತಾಜಾ ನಾರಿನಂತ ಚೂರುಗಳಿದ್ದರೆ ಆಲ್ಲಿ ಕುರುವಾಯಿ ಕೀಟ ಇದೆ ಎಂದರ್ಥ.
ಎಲ್ಲಿಂದ ಬರುತ್ತದೆ:
- ಮರದಲ್ಲಿ ಬರೇ ರಸ ಮಾತ್ರ ಹೀರುತ್ತದೆ.ಸಂತಾನಾಭಿವೃದ್ದಿಯನ್ನು ನೆಲದಲ್ಲಿ ಕಾಂಪೊಸ್ಟು ಗೊಬ್ಬರದ ರಾಶಿಯಲ್ಲಿ ನಡೆಸುತ್ತದೆ.
- ನಾವು ಗೊಬ್ಬರದ ರಾಶಿಯಲ್ಲಿ ಗೊಬ್ಬರದ ಹುಳುಗಳನ್ನು ಕಂಡವರು. ಇದುವೇ ಕುರುವಾಯಿಯಾಗುವುದು.
ಹೆಣ್ಣು ದುಂಬಿ 70-100 ಮೊಟ್ಟೆ ಇಡುತ್ತದೆ. 14 ದಿನದಲ್ಲಿ ಮೊಟ್ಟೆ ಒಡೆಯುತ್ತದೆ.ಹುಳುವಾಗಿ ನಿರಂತರ ಕಳಿಯುವ ಸಾವಯವ ವಸ್ತುಗಳನ್ನು ಭಕ್ಷಿಸುತ್ತಾ 4 ತಿಂಗಳ ಕಾಲ ಬೆಳೆದು ನಂತರ ಸುಪ್ತಾವಸ್ಥೆಗೆ (ಪ್ಯೂಪೆ) ತಲುಪುತ್ತದೆ.ಇದು ಗೊಬ್ಬರದ ರಾಶಿಯಲ್ಲಿ5 ಮೀ. ನಿಂದ 1 ಮೀಟರ್ ತನಕವೂ ಇರುತ್ತದೆ.ಪ್ಯೂಪೆಯಾಗಿ ಸುಮಾರು 16-24 ದಿನಗಳ ಕಾಲ ಇರುತ್ತದೆ. ನಂತರ ಅದು ದುಂಬಿಯಾಗುತ್ತದೆ.ಹೊಸ ದುಂಬಿ ತಿಳಿ ಕಂದು ಬಣ್ಣದಲ್ಲಿರುತ್ತದೆ. 1-3 ವಾರಕಾಲ ಚಟುವಟಿಕೆಯಲ್ಲಿರದೇ, ನಂತರ ಹಾರಿ ಮರವನ್ನು ಹುಡುಕಿ ಕೊರೆಯಲಾರಂಭಿಸುತ್ತದೆ.ಒಂದು ವರ್ಷದಲ್ಲಿ ಇದು ಮೂರು ತಲೆಮಾರನ್ನು ಪೂರೈಸುತ್ತದೆ.
- ಒಂದು ದುಂಬಿ 6 ತಿಂಗಳ ಕಾಲ ಬದುಕಿರುತ್ತದೆ.
- ಒಂದು ಜೊತೆ ದುಂಬಿಯು 3 ವರ್ಷದಲ್ಲಿ 15 ಕೋಟಿ ಮರಿಗಳನ್ನು ಉತ್ಪಾದಿಸುತ್ತದೆ.
ಹತೋಟಿ:
- ಕುರುವಾಯಿ ಕೀಟದ ಸಂತಾನಾಭಿವೃದ್ದಿಯು ಕಳಿಯುತ್ತಿರುವ ಸಾವಯವ ವಸ್ತುಗಳ ರಾಶಿಯಲ್ಲಿ ನಡೆಯುವ ಕಾರಣ ಅಲ್ಲಿ ಅದರ ನಿಯಂತ್ರಣ ಸುಲಭ.
- ಗೊಬ್ಬರದಲ್ಲಿ ಹುಳಗಳನ್ನು ಮೊಟ್ಟೆಗಳನ್ನು ನಾಶ ಮಾಡಬಹುದು. ಕಾಂಪೋಸ್ಟು ರಾಶಿಗೆ ಪ್ರತೀ 2 ತಿಂಗಳಿಗೊಮ್ಮೆ ಡೆಲ್ಟ್ರಾಮೆಥ್ರಿನ್ ಕೀಟನಾಶಕವನ್ನು ಸಿಂಪಡಿಸಬೇಕು.
- ಸಗಣಿ ಕಂಪೋಸ್ಟು ರಾಶಿಗಳನ್ನು ಮಾಡಿದರೆ, ಅದಕ್ಕೆ 2-3 ತಿಂಗಳಿಗೊಮ್ಮೆ ತಿರುವಿ ಕೀಟನಾಶಕ ಸಿಂಪಡಿಸಿದರೆ ಹುಳ ಮತ್ತು ಮೊಟ್ಟೆಗಳು ನಾಶ ವಾಗುತ್ತವೆ.
- ಮರ/ ಸಸಿಯಲ್ಲಿಯೂ ಕೀಟವನ್ನು ಕೊಲ್ಲಬಹುದು. ತುದಿ ಕೊಕ್ಕೆಯಂತಿರುವ ಕಬ್ಬಿಣದ ಕಡ್ಡಿಯನ್ನು ದುಂಬಿ ತಿಂದು ಹೊರ ಹಾಕಿದ ತಾಜಾ ಚೂರುಗಳಿರುವಲ್ಲಿಗೆ ಚುಚ್ಚಿ, ತಿರುವಿ ದುಂಬಿಯನ್ನು ತೆಗೆದು ನಾಶಮಾಡಬಹುದು.
- ಮರ/ ಸಸಿಯ ಗರಿಗಳು ಮೂಡುದ ಸುಳಿ ಭಾಗಕ್ಕೆ, ಮರಳು ಮತ್ತು ಡೇಲ್ಟ್ರಾಮೆಥ್ರಿನ್ ಸಿಂಪಡಿಸಿದರೆ ಸುಮಾರು 2 ತಿಂಗಳ ತನಕ ಅಲ್ಲಿ ದುಂಬಿ ಬರಲಾರದು.
- 5 ಗ್ರಾಂ ಥಿಮೇಟನ್ನು ಒಂದು ಪ್ಲಾಸ್ಟಿಕ್ ಪೌಚ್ನಲ್ಲಿ ಹಾಕಿ ಬಾಯಿ ಕಟ್ಟಿ ಮಧ್ಯೆ ಒಂದೆರಡು ತೂತು ಮಾಡಿ, ಸುಳಿ ಭಾಗದಲ್ಲಿ ಗುಂಡು ಸೂಜಿಯಲ್ಲಿ ಚುಚ್ಚಿ ಇಟ್ಟರೆ, ಅದರ ವಾಸನೆಗೆ ಕೀಟ ಬರಲಾರದು.
- ಕುರುವಾಯಿಯನ್ನು ಲಿಂಗಾಕರ್ಷಕ ಬಲೆ ಹಾಕಿ ಸಂತಾನ ಕ್ಷೀಣಿಸಬಹುದು.ಇದು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದನ್ನು ತೋಟದಲ್ಲಿ ಇಟ್ಟರೆ ಅದನ್ನು ಅರಸಿ ಗಂಡು ದುಂಬಿಗಳು ಬರುತ್ತವೆ.
- ಗಂಡು ದುಂಬಿ ಸಂತತಿ ಕಡಿಮೆಯಾದರೆ ಹೆಣ್ಣು ಮೊಟ್ಟೆ ಇಡದೆ ಸಂತಾನಾಭಿವೃದ್ದಿ ಕಡಿಮೆಯಾಗುತ್ತದೆ.
ಸುಲಭ ವಿಧಾನ:
- ಮಣ್ಣಿನ ಮಡಿಕೆಯಲ್ಲಿ ಕೊಳೆಯುವ ವಸ್ತುಗಳನ್ನು ಹಾಕಿ(ನೆಲಕಡ್ಲೆ ಹಿಂಡಿ, ಸಗಣಿ) ಅದರ ವಾಸನೆಗೆ ಬರುವ ದುಂಬಿಗಳು ಅದರೊಳಗೆ ಬೀಳುವಂತೆ ಮಾಡುತ್ತಾರೆ.
- ಇದೂ ಉತ್ತಮ ವಿಧಾನವೇ ಆದರೂ ಇದಕ್ಕೆ ಉಪಕಾರೀ ದುಂಬಿಗಳೂ ಬೀಳುವುದಿದೆ.
- ಗೊಬ್ಬರದ ಗುಂಡಿಗೆ ಇಟ್ಟಾಯಿ, ಬಸವನ ಪಾದ, ನಿರ್ಗುಂಡಿ ಸಸ್ಯವನ್ನು ಮಿಶ್ರಣ ಮಾಡುವುದರಿಂದ ಕುರುವಾಯಿ ಕೀಟ ಸಂತಾನಾಭಿವೃದ್ದಿಯಾಗುವುದಿಲ್ಲ
- ಇದು ತೆಂಗು ಅಭಿವೃದ್ದಿ ಮಂಡಳಿಯವ ರ ಸಲಹೆ. ಕೆಲವು ಬ್ಯಾಕ್ಟೀರಿಯಾ, ಶಿಲೀಂದ್ರ ಹಾಗೂ ಹಕ್ಕಿಗಳು ಇದರ ನಾಶಕ್ಕೆ ನೆರವಾಗುತ್ತದೆಯಾದರೂ ಅದು ಅನುಸರಿಸಲು ಕಷ್ಟ.
ಕುರುವಾಯಿ ಕೀಟದಿಂದ ತೆಂಗನ್ನು 5 ವರ್ಷ ತನಕ ರಕ್ಷಿಸಿದರೆ ತೆಂಗಿನ ಬೆಳೆ ಕೈ ಹಿಡಿಯುತ್ತದೆ.
_________________________End of Article__________
Search Keywords : dumbi, kuruwai,kuruwayi ,coconut,beetel,red palm .black plam beetel, insect , coconut pronlem, leaf cut.