ಅಡಿಕೆ ಗಿಡ ನೆಡುವುದು ಹೊಸತಾಗಿ ತೋಟ ಮಾಡುವುದನ್ನು ಸಧ್ಯಕ್ಕೆ ನಿಲ್ಲಿಸಿ. ಮುಂದಿನ ವರ್ಷ ಸೂಪರ್ ಎಲ್ ನೀನೋ ಸನ್ನಿವೇಶದ ಇರುವುದರಿಂದ ಬರಗಾಲ ಸಾಧ್ಯತೆ ಇದೆ. ಹಾಗಾಗಿ ಖರ್ಚು ಮಾಡಿ ಅಡಿಕೆ ತೋಟ ಮಾಡಿ ಕೈ ಸುಟ್ಟುಕೊಳ್ಳಬೇಡಿ. ಈ ತನಕ ಬಂದ ಎಲ್ ನೀನೋ ಸನ್ನಿವೇಶಕ್ಕಿಂತ ಇದು ಬಲವಾದದ್ದು. ಹಾಗಾಗಿ ಕುಡಿಯುವ ನೀರಿಗೂ ತೊಂದರೆ ಉಂಟಾಗಬಹುದು.
ಎಲ್ಲರಿಗೂ ಅಡಿಕೆ ತೋಟ ಮಾಡುವ ಹುಮ್ಮಸ್ಸು. ಈಗ ಇರುವ ತೋಟದ ವಿಸ್ತೀರ್ಣವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಉತ್ಸಾಹ ಕೆಲವರದ್ದಾದರೆ ಇನ್ನು ಕೆಲವರು ಹೊಸತಾಗಿ ಜಾಗ ಖರೀದಿ ಮಾಡಿ ಅಡಿಕೆ ತೋಟ ಮಾಡುವ ಹುಮ್ಮಸ್ಸಿನವರು. ಇದು ನಮ್ಮ ರಾಜ್ಯದಲ್ಲಿ ಮಾತ್ರವಲ್ಲ. ನೆರೆ ರಾಜ್ಯಗಳಲ್ಲಿ ನಮಗಿಂತ ಹೆಚ್ಚು. ಉತ್ತರ ಭಾರತದ ಚತ್ತೀಸ್ ಘಡ್ ನಲ್ಲೂ ಅಡಿಕೆ ಬೆಳೆಯಲಾರಂಭಿಸಿದೆ. ಮೊನ್ನೆ ಉತ್ತರ ಪ್ರದೇಶದಲ್ಲಿ ಮುಟ್ಟುಗೋಲು ಹಾಕಿಕೊಂಡ ಅಡಿಕೆಯ ಮೂಲ ಹುಡುಕಿದಾಗ ಅದು ಚತ್ತೀಸ್ ಘಡ್ ನಿಂದ ಬಂದದ್ದು ಎಂಬ ಮಾಹಿತಿ ಸಿಕ್ಕಿತಂತೆ. ನೈರುತ್ಯ ಭಾರತದಲ್ಲೂ ಅಡಿಕೆ ಬೆಳೆಯುವ ಹುಮ್ಮಸ್ಸು ಹೆಚ್ಚಾಗುತ್ತಿದೆ. ಹಾಗಾಗಿ ಒಂದೆಡೆ ಮಾರುಕಟ್ಟೆ ಕುಸಿಯುವ ಭೀತಿ, ಮತ್ತೊಂದೆಡೆ ಅಡಿಕೆ ಬೆಳೆಗೆ ನೀರುಣಿಸುವ ಕಷ್ಟ. ಇವೆಲ್ಲಾ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳುವುದಕ್ಕಿಂತ ಒಂದೆರಡು ವರ್ಷ ಇರುವ ತೋಟವನ್ನು ಚೆನ್ನಾಗಿ ಸಾಕುವುದೇ ಉತ್ತಮ.
ಮುಂದಿನ ವರ್ಷ ಭಾರತದಲ್ಲಿ ಮುಂಗಾರು ಕ್ಷೀಣ:
- ಭಾರತದಲ್ಲಿ ಮುಂದಿನ ವರ್ಷ ಭೀಕರ ಬರಗಾಲ ಬರುವ ಸೂಚನೆಯನ್ನು ಹವಾಮಾನ ಇಲಾಖೆ ನೀಡುತ್ತಿದೆ.
- ಸೂಪರ್ ಎಲ್ ನೀನೋ ಎಂಬ ಸನ್ನಿವೇಶ ಭಾರತದ ಮುಂಗಾರು ಮಳೆಯ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡುವ ಸಾದ್ಯತೆ ಇದ್ದು,
- ಇದು ಈ ತನಕ ಕಂಡಿರದಷ್ಟು ಸಂಕಷ್ಟವನ್ನು ಉಂಟು ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
- ಈ ಸನ್ನಿವೇಶವನ್ನು ಐತಿಹಾಸಿಕ (Historically strong) ಎನ್ನುತ್ತಾರೆ.
- ಸೂಪರ್ ಎಲ್ ನಿನೋ ದಲ್ಲಿ ವಾತಾವರಣದ ತಾಪಮಾನ ಹೆಚ್ಚಾಗುವ ಸಾಧ್ಯತೆ ಒಂದಾದರೆ ಮಳೆಯ ಹಂಚಿಕೆ ಹಾಗೂ ವ್ಯತ್ಯಯಗಳು ಉಂಟಾಗುತ್ತದೆ.
- ಕೆಲವೊಮ್ಮೆ ಅತ್ಯಧಿಕ ಮಳೆ ಮತ್ತೆ ಕೆಲವೊಮ್ಮೆ ಮಳೆಯೇ ಇಲ್ಲದ ಸ್ಥಿತಿ ಉಂಟಾಗಿ ಭಾರೀ ತೊಂದರೆ ಉಂಟಾಗುತ್ತದೆ.
- ಭಾರತದಲ್ಲಿ ಎಲ್ ನೀನೋ ಪರಿಣಾಮ ಅಕಾಲದ ಮಳೆ ಮತ್ತು ಋತುಮಾನದ ವ್ಯತ್ಯಾಸವನ್ನು ಉಂಟು ಮಾಡುತ್ತದೆ.
- ಚಳಿ ಇರಬೇಕಾದ ಸಮಯದಲ್ಲಿ ಚಳಿಯ ಕೊರತೆ ಉಂಟಾಗಿ ಸಸ್ಯ ಬೆಳವಣಿಗೆಯ ಮೇಲೆ ಫಲದ ಮೇಲೆ ಪ್ರತಿಕೂಲ ಪರಿಣಾಮವನ್ನು ತರುತ್ತದೆ.
- ಈ ವರ್ಷ ದೀಪಾವಳಿಯ ನಂತರ ಪ್ರಾರಂಭವಾಗಬೇಕಾಗಿದ್ದ ಚಳಿ ಡಿಸೆಂಬರ್ ತಿಂಗಳಾಂತ್ಯದಲ್ಲಿ ಪ್ರಾರಂಭವಾಗಿದೆ.
- ಮಳೆ ಯಾವಾಗಲೂ ಬರಬಹುದು. ಕೆಲವು ಕಡೆಗಳಲ್ಲಿ ಮಳೆ ನಿಂತು ತಿಂಗಳು ಅಷ್ಟೇ ಆಗಿದ್ದರೂ ಸಹ ನೀರು ತಳಕಾಣುತ್ತಿದೆ.
ವಾತಾವರಣ ಸರಿ ಇಲ್ಲದಿದ್ದರೆ ಯಾವುದೂ ಇಲ್ಲ:
- ಕೃಷಿಗೆ ಮತ್ತು ಮನುಷ್ಯ ಪ್ರಾಣಿ, ಮತ್ತು ಜೀವ ಜಂತುಗಳಿಗೆ ಅನುಕೂಲವಾಗಲೆಂದು ಮೂರು ಋತುಮಾನಗಳು ಇರುವುದು.
- ಮಳೆಗಾಲದಲ್ಲಿ ಮಳೆ ಬಾರದೆ ಇದ್ದರೆ ಸೂರ್ಯನ ಪ್ರಖರ ಬಿಸಿಲಿಗೆ ಮೈಯಲ್ಲಿ ಗುಳ್ಳೆ ಏಳಲೂ ಬಹುದು.
- ಆ ಕಾಲದ ಸೂರ್ಯನ ಶಾಖ ತುಂಬಾ ಪ್ರಖರವಾಗಿರುತ್ತದೆ. ಅದರ ಅರಿವು ಉಂಟಾಗದೆ ಇರಲು ಆಗ ಮಳೆಗಾಲ ಇರುತ್ತದೆ.
- ಹಾಗೆಯೇ ಚಳಿಗಾಲ.ಸಸ್ಯಗಳು ಈ ಸಮಯದಲ್ಲಿ ಎಲೆ ಉದುರಿಸುವುದು, ಹೂ ಬಿಡುವುದು ಹೆಚ್ಚು.
- ಸಸ್ಯಗಳ ಪುನರುತ್ಪತ್ತಿಗೆ ಚಳಿಗಾಲ ಅತ್ಯಗತ್ಯ. ಬೇಸಿಗೆ ಕಾಲದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುತ್ತದೆ.
- ಸಸ್ಯಗಳಿಗೆ ಮನುಷ್ಯರಿಗೆ ಈ ಕಾಲದಲ್ಲಿ ನೀರಿನ ಅಗತ್ಯ ಹೆಚ್ಚಾಗಿರುತ್ತದೆ.
- ನೆಲದಿಂದ ನೀರಿನ ಆವೀಕರಣ, ಎಲೆಗಳ ಮೂಲಕ ಬಾಶ್ಪೀಭವನ ಆಗುತ್ತಿರುತ್ತದೆ.
- ಈ ಸಮಯದಲ್ಲಿ ಸಸ್ಯ ಬೆಳವಣಿಗೆ ಚೆನ್ನಾಗಿರುತ್ತದೆ. ಈ ಸಮಯದಲ್ಲಿ ಮಳೆ ಬಂದರೆ ಫಸಲಿಗೆ ಹಾನಿಯಾಗುತ್ತದೆ.
- ಮಾನವ ಜೀವ ಜಂತುಗಳಿಗೆ ರೋಗ ರುಜಿನಗಳು ಹೆಚ್ಚಾಗುತ್ತದೆ.
- ಹಾಗಾಗಿ ಋತುಮಾನಗಳಾದ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಆಯಾಯ ಸಮಯಕ್ಕೆ ಅನುಗುಣವಾಗಿ ಬರಲೇ ಬೇಕು.
- ವ್ಯತ್ಯಾಸಗಳು ಮನುಷ್ಯರಿಗೆ , ಪ್ರಾಣಿಗಳಿಗೆ, ಸಸ್ಯಗಳಿಗೆ , ಜೀವ ಜಂತುಗಳಿಗೆ ತೊಂದರೆ ಉಂಟುಮಾಡುತ್ತದೆ.
- ಅಡಿಕೆ ಮರಗಳು, ಸಸಿಗಳು ವಾತಾವರಣ ಬಿಸಿ 30-35 ಡಿಗ್ರಿಗಿಂತ ಹೆಚ್ಚಾದರೆ ತಡೆದುಕೊಳ್ಳಲಾರದು.
- ಇದರಿಂದ ಮರಗಳ ಬೆಳವಣಿಗೆ ಕುಂಠಿತವಾಗುತ್ತದೆ. ರೋಗ ರುಜಿನಗಳು ಹೆಚ್ಚಾಗುತ್ತದೆ.
- ಇದರಿಂದ ಬೆಳೆ ಬೆಳೆಸುವ ಖರ್ಚು ಹೆಚ್ಚಾಗುತ್ತದೆ. ಲಾಭ ಕಡಿಮೆಯಾಗುತ್ತದೆ.
ನಾವು ಈಗಾಗಲೇ ಅನುಭವಿಸಿದ್ದೇವೆ:
- ಕಳೆದ ವರ್ಷದ ಬೇಸಿಗೆಯ ಕಾಲಾವಧಿಯಲ್ಲಿ ಬಹಳಷ್ಟು ಅಡಿಕೆ ತೋಟಗಳು ಸೂರ್ಯನ ಶಾಖಕ್ಕೆ ಘಾಸಿಗೊಳಗಾಗಿವೆ.
- ನೀರಾವರಿ, ಗೊಬ್ಬರ ಎಲ್ಲವೂ ವಾತಾವರಣದ ಮುಂದೆ ನಗಣ್ಯ.
- ವಾತಾವರಣ ಅನುಕೂಲಕರವಾಗಿ ಇದ್ದರೆ ಮಾತ್ರ ನಾವು ಕೊಡುವ ಗೊಬ್ಬರ, ನೀರಾವರಿ ಸರಿಯಾಗಿ ಕೆಲಸ ಮಾಡುತ್ತದೆ.
- ಬಹಳಷ್ಟು ಕಡೆ ಕಂಡಂತೆ ಕಳೆದ ವರ್ಷದಲ್ಲಿ ನೆಟ್ಟ ಅಡಿಕೆ ಸಸಿಗಳು ಏಳಿಗೆ ಕಂಡಿಲ್ಲ.
- ಮರಗಳೂ ಸಹ ತುಂಬಾ ಸೊರಗಿವೆ.
- ಮುಂದಿನ ವರ್ಷವೂ ಇದೇ ತರಹದ ವಾತಾವರಣ ಮುಂದುವರಿಯುವ ಸೂಚನೆ ಇರುವ ಕಾರಣ ಅಡಿಕೆ ನಾಟಿ ಮಾಡುವುದನ್ನು ಸ್ವಲ್ಪ ಮುಂದೂಡುವುದು ಉತ್ತಮ.
ಏನೇನು ಸಮಸ್ಯೆಗಳಾಗುತ್ತವೆ?
- ಬರಗಾಲದ ಸನ್ನಿವೇಶ ಉಂಟಾದಾಗ ಆಗುವುದು ನೀರಿನ ಅಭಾವ. ನೀರಿನ ಅಭಾವವನ್ನು ಮಿತ ನೀರಾವರಿ, ಮಲ್ಚಿಂಗ್ ಇತ್ಯಾದಿ ಮಾಡಿಯಾದರೂ ಸ್ವಲ್ಪ ಮಟ್ಟಿಗೆ ಬೆಳೆ ಉಳಿಸಿಕೊಳ್ಳಬಹುದು.
- ಆದರೆ ವಾತಾವರಣ ಬಿಸಿ ಆದಾಗ ಉಂಟಾಗುವ ಸಮಸ್ಯೆಗಳನ್ನು ನಿಭಾಯಿಸುವುದು ಕಷ್ಟ ಸಾಧ್ಯ.
- ಅಡಿಕೆಯಂತಹ ಬೆಳೆ, ಹಾಗೆಯೇ ತೆಂಗೂ ಸಹ ವಾತಾವರಣ ಹೆಚ್ಚು ಬಿಸಿಯಾದರೆ ಸಹಿಸುವುದಿಲ್ಲ.
- ತೆಂಗಿನಲ್ಲಿ ಕಾಯಿ ಕಚ್ಚುವಿಕೆ ಕಡಿಮೆಯಾಗುತ್ತದೆ.
- ಅದೇ ರೀತಿಯಲ್ಲಿ ಅಡಿಕೆಯಲ್ಲೂ ಸಹ ಹೂ ಗೊಂಚಲು ಒಣಗುವುದು ಜಾಸ್ತಿಯಾಗುತ್ತದೆ.
- ಕೆಲವು ಕೀಟ ಸಮಸ್ಯೆಗಳು ಜಾಸ್ತಿಯಾಗುತ್ತದೆ. ಇದರ ಪರಿಣಾಮ ಮುಂದಿನ ವರ್ಷಗಳವರೆಗೂ ಇರುತ್ತದೆ.
- ಒಂದು ವರ್ಷ ನಾವು ನೆಟ್ಟ ಅಡಿಕೆ ಗಿಡ, ತೆಂಗಿನ ಗಿಡ ಸೊರಗಿದರೆ ಅದರ ಪರಿಣಾಮ ಮೂಂದಿನ ಎರಡು ಮೂರು ವರ್ಷಗಳ ತನಕವೂ ಮುಂದುವರಿಯುತ್ತದೆ.
- ಹಾಗಾಗಿ ಹವಾಮಾನ ತಜ್ಞರ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಬೇಡಿ.
- ಎಲ್ ನೀನೋ ಪರಿಣಾಮದಿಂದ ಮಳೆ ಕೆಲವು ಕಡೆ ಹೆಚ್ಚಿನ ಪ್ರಮಾಣದಲ್ಲಿ ಆಗಲೂ ಬಹುದು.
- ಮಳೆ ಆದರೆ ಒಳ್ಳೆಯದಲ್ಲವೇ ಎಂದು ಕೆಲವರ ಚರ್ಚೆ. ವಾಸ್ತವವಾಗಿ ಹಿತ ಮಿತವಾಗಿ ಮಳೆಯಾಗಬೇಕು.
- ಮಳೆ ನಾಡಾದ ಕರಾವಳಿ, ಮಲೆನಾಡಿನಲ್ಲೂ ಮಳೆ ಹಿತಮಿತವಾಗಿ ಆದರೆ ಮಾತ್ರ ಎಲ್ಲಾ ಬೆಳೆಗಳಿಗೆ ಉತ್ತಮ. 2016 ನೇ ಇಸವಿಯಲ್ಲಿ ಕರಾವಳಿ, ಮಲೆನಾಡಿನ ಭಾಗಗಳಲ್ಲಿ ಮಳೆ ಹಂಚಿಕೆ ಬಹಳ ಅಚ್ಚುಕಟ್ಟಾಗಿತ್ತು.
- ಆ ವರ್ಷ ನೀರಿಗೂ ಬರಗಾಲ ಆಗಿರಲಿಲ್ಲ. ಹಾಗೆಯೇ ಆ ವರ್ಷ ಅಡಿಕೆ, ತೆಂಗಿನ ಫಸಲು ದಾಖಲೆಯ ಪ್ರಮಾಣದಲ್ಲಿ ಇತ್ತು. ( ಇದನ್ನು ಸ್ವಲ್ಪ ಗಮನಿಸಿ)
ವಿಪರೀತ ಮಳೆ , ಬಿಸಿಲು ಬಂದಾಗ ಭೂಮಿಯಲ್ಲಿ ಕಳೆಗಳ ಬೆಳವಣಿಗೆ ಹೆಚ್ಚಾಗುತ್ತದೆ. ಇದು ಪೋಷಕಾಂಶಗಳನ್ನು ಕಬಳಿಸುತ್ತದೆ. ವಿಪರೀತ ಮಳೆ ಬಂದ ವರ್ಷ ಮಣ್ಣಿನ ಫಲವತ್ತತೆ ಕ್ಷೀಣವಾಗುತ್ತದೆ. ಮಣ್ಣು ಕೊಚ್ಚಣೆ ಹೆಚ್ಚಾಗಿ, ಫಲವತ್ತತೆ ಕಡಿಮೆಯಾಗುತ್ತದೆ. ಮಣ್ಣಿನಲ್ಲಿ ಒರತೆ ಹೆಚ್ಚಾದರೆ ಮರಳಿನ ಅಂಶಮಾತ್ರ ಉಳಿದು ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಇವೆಲ್ಲಾ ಸಮಸ್ಯೆಗಳು ಕೃಷಿಕರಿಗೆ ನಷ್ಟವನ್ನು ಉಂಟುಮಾಡುತ್ತದೆ.
ಎಲ್ ನೀನೋ ಎಂದರೆ ಫೆಸಿಫಿಕ್ ಸಾಗರದಲ್ಲಿ (ಉತ್ತರ ಅಮೆರಿಕಾ ಸಮೀಪ) ನೀರು ಬಿಸಿಯಾಗುವುದು. ಇದರ ಗಾಳಿಯ ದಿಕ್ಕು ಎತ್ತ ಕೇಂದ್ರೀಕೃತವಾಗಿರುತ್ತದೆಯೋ ಅಲ್ಲಿ ಅದರ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಸುಮಾರಾಗಿ 70-80% ಮುಂದಿನ ವರ್ಷ ಸೂಪರ್ ಎಲ್ ನೀನೋ ಉಂಟಾಗುವ ಸಾಧ್ಯತೆಯನ್ನು ಅಮೆರಿಕಾದ ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಇದರಿಂದಾಗ ವಾತಾವರಣದ ತಾಪಮಾನ 2 ಡಿಗ್ರಿ ತನಕ ಏರಿಕೆಯಾಗುವ ಸಾಧ್ಯತೆಯನ್ನೂ ಹೇಳುತ್ತಾರೆ. ತಾಪಮಾನ ಏರಿಕೆಯಾಗುವ ಸಾಧ್ಯತೆ ಇರುವ ಕಾಲಾವಧಿಯಲ್ಲಿ ಯಾವುದೇ ಧೀರ್ಘಾವಧಿ ಬೆಳೆಗಳನ್ನು ಬೆಳೆಸದೆ ಇರು ಸೂಕ್ತ.