ಕೃಷಿಕನ ಮನೆಯೆಂದರೆ ಅದು ಸಾಧನ ಸರಂಜಾಮುಗಳ ಉಗ್ರಾಣ ಎಂದರೆ ತಪ್ಪಾಗಲಾರದು . ಕೃಷಿ ಮಾಡಿ ತಮ್ಮದೇ ಹೊಲದ ಮನೆಯಲ್ಲಿ ವಾಸ್ತವ್ಯ ಇರುವವರು ಏನಾದರೂ ಪೇಟೆ ಪಟ್ಟಣದ ತಮ್ಮ ಮಕ್ಕಳ ಮನೆಯಲ್ಲಿ ವಾಸ್ತವ್ಯವಿರು ವಂತಾದರೆ ಮಕ್ಕಳು ಒಂದೆರಡು ದಿನದಲ್ಲಿ ನೀವು ಹೀಗೆಲ್ಲಾ ನಿಮ್ಮ ಹಳ್ಳಿ ಮನೆಯಲ್ಲಿ ಮಾಡಿದಂತೆ ಮಾಡಬಾರದು ಎಂದು ಮಕ್ಕಳು ಹೇಳಿದರೆ ಅಚ್ಚರಿ ಇಲ್ಲ . ಇದು ಸೂಚ್ಯವಾಗಿ ಮರಳಿ ಹಳ್ಳಿ ಮನೆಗೆ ಕಳಿಸಬೇಕಾಗುತ್ತದೆ ಎಂಬ ಮಾತಿನ ಧಾಟಿಯೂ ಇರಬಹುದು . ಕೃಷಿಕನ ಮನೆ ಸಣ್ಣ ಮಟ್ಟಿಗೆ ಒಂದು ಉಗ್ರಾಣ , ಗ್ಯಾರೇಜ್ ಹಾಗೂ ಪ್ರಯೋಗಾಲಯದಂತೇ ಇರುತ್ತದೆ , ಇರಬೇಕೂ ಸಹ .
ಯಾವಾಗ ಯಾವ ಸಾಧನ ಸಲಕರಣೆ ಬೇಕಾಗುತ್ತದೆ ಎಂದು ಹೇಳಲಿಕ್ಕೆ ಬರುವುದಿಲ್ಲ . ಬೇಕಾದಾಗ ಅದು ಕೈಗೆ ಸಿಕ್ಕುವಂತಿರಬೇಕು. ಕಾರಣ ಅದನ್ನು ಎರವಲು ತರಲಿಕ್ಕಾಗುವುದಿಲ್ಲ. ಹಾಗೆಯೇ ಇವೆಲ್ಲಾ ಯಾವಾಗ ಬೇಕಾಗುತ್ತದೆ ಎಂಬುದು ಮುಂಚಿತವಾಗಿ ಗೊತ್ತೇ ಆಗುವುದಿಲ್ಲ. ಕೃಷಿಕ ಯಾವಾಗಲೂ ಬೇರೆಯವರಿಂದ ಎರವಲು ತರುವ ಮನೋಸ್ಥಿತಿ ಹೊಂದಿರುವುದಿಲ್ಲ. ಸಾಧ್ಯವಾದಷ್ಟು ಅಗತ್ಯ ಬೇಕಾಗುವ ಸಾಮಾಗ್ರಿಗಳನ್ನು ಮನೆಯಲ್ಲೇ ಓರಣವಾಗಿ ಇಡುವುದು ಸೂಕ್ತ. ಈಗ ಬಹುತೇಕ ಕೃಷಿಕರ ಮನೆಯಲ್ಲಿ ಗೋಡೌನ್ ಎಂಬ ವ್ಯವಸ್ಥೆ ಇರುತ್ತದೆ. ಅಲ್ಲಿ ಇವುಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಿರಬೇಕು. ಇದನ್ನು ಓರಣವಾಗಿ ಬೇಕಾದಾಗ ಸಿಗುವಂತೆ ಮಾಡಲು ಮೆಡಿಕಲ್ ಶಾಪ್ ಗಳಲ್ಲಿ ಔಷಧಿಗಳಿಗೆ ಹೇಗೆ ಪ್ರತ್ಯೇಕ ಪ್ರತ್ಯೇಕ ಪೆಟ್ಟಿಗೆಗಳನ್ನು ಇಡುತ್ತಾರೆಯೋ ಹಾಗೆಯೇ ಇಡಬೇಕು.
ಅಗತ್ಯ ಬೇಕಾಗುವ ಸಾಧನ ಸಲಕರಣೆಗಳು :
- ಕೃಷಿಕರ ಭಾಷೆಯಲ್ಲಿ ಇದಕ್ಕೆ ಹತ್ಯಾರುಗಳು ಎನ್ನುತ್ತಾರೆ. ಬೇರೆ ಬೇರೆ ನಮೂನೆಯ ಕತ್ತಿಗಳು. ಅದರಲ್ಲಿ ದಪ್ಪದ ಮರ ಕಡಿಯಲು ಬೇರೆ ಹುಲ್ಲು ಇತ್ಯಾದಿ ಕತ್ತರಿಸಲು ಬೇರೆ , ಕಳೆ ಕೊಚ್ಚಲು ಬೇರೆ ಎಂಬಂತಿರಬೇಕು .
- ಮುಳ್ಳು ಇತ್ಯಾದಿ ಕಳೆ ಕೊಚ್ಚುವ ಕತ್ತಿಯ ಹಿಡಿಕೆಗೂ ಅಲಗಿಗೂ ಮುಕ್ಕಾಲು ಅಥವಾ ಒಂದು ಅಡಿಯಷ್ಟು ಅಂತರ ಇದ್ದರೆ ಕೊಚ್ಚುವಾಗ ಕೈಗೆ ಮುಳ್ಳು ತಾಗುವುದಿಲ್ಲ.
- ಪಿಕ್ಕಾಸಿ – ಹಾರೆ , ಕೊಕ್ಕೆಗಳು : ಪಿಕ್ಕಾಸಿಯಲ್ಲಿ ಎರಡು ವಿಧಗಳು ಇರಬೇಕು , ಮಣ್ಣು ಅಗೆಯಲು ಮಾರುಕಟ್ಟೆಯಲ್ಲಿ ಮಾಮೂಲಿಯಾಗಿ ಸಿಗುವಂತದ್ದು.
- ಬೇರು ಇತ್ಯಾದಿ ಇರುವಲ್ಲಿ ಅಗೆಯಲು ಜಂಬಿಟ್ಟಿಗೆ ಕಲ್ಲು ಕೆತ್ತನೆ ಮಾಡಲು ಇರುವ ಮಚ್ಚಿನಂತೆ ಇರುವಂತದ್ದು ಆದರೆ ಅನುಕೂಲ .
- ಇದನ್ನು ನಾವೇ ವೆಲ್ಡ್ ಮಾಡಿ ಮಾಡಿಸಿಕೊಳ್ಳಬೇಕು. ಇದರಲ್ಲಿ ಗಿಡ ಗಂಟೆಗಳನ್ನು ಬೇರು ಸಮೇತ ತೆಗೆಯಲು , ಅಗೆಯುವಾಗ ಬೇರು ಸಿಕ್ಕರೆ ತುಂಡು ಮಾಡಲು ಅನುಕೂಲವಾಗುತ್ತದೆ .
- ಹಾರೆಗೆ ಕಬ್ಬಿಣದ ಪೈಪಿನ ಹಿಡಿ ಹಾಕಿರಬೇಕು ಇಲ್ಲವೇ ಕಬ್ಬಿಣ ಸಣ್ಣ ಪೈಪನ್ನು ಸರಿಯಾಗಿ ಕೂರಿಸಿ ವೆಲ್ಡ್ ಮಾಡಿಸಿ ಅದಕ್ಕೆ ಮರದ ಹಿಡಿಕೆಯನ್ನು ತುರುಕುವಂತಿರಬೇಕು .
- ಹಾರೆ ಯಾವಾಗಲೂ ಕೆಲಸ ಮಾಡಲು ಅನುಕೂಲವಾಗುವಂತೆ ಒಳಮೈಗೆ ಬಾಗಿರಬೇಕು .
- ಅದಕ್ಕನುಗುಣವಾದ ಹಾರೆಯನ್ನು ಮಾತ್ರವೇ ಖರೀದಿ ಮಾಡಬೇಕು .
- ಕೊಕ್ಕೆಗಳಲ್ಲಿ ಎರಡು , ಮೂರು ಐದು ಮುಳ್ಳುಗಳ ಕೊಕ್ಕೆ ಇರುತ್ತದೆ . ಇದನ್ನು ಬುಡ ಒಕ್ಕಣೆಗೆ ಮತ್ತು ಹಾಕಿದ ಸಾವಯವ ಗೊಬ್ಬರಗಳನ್ನು ಕೆದಕಲು ಬಳಕೆ ಮಾಡಲಾಗುತ್ತದೆ .
- ಕೈಗೆ ಹಾಕುವ ಬಿಸಿಯಾಗದ ಧೀರ್ಘ ಬಾಳಿಕೆಯ ಗೌಸುಗಳು. ಇದನ್ನು ಮುಳ್ಳು ಇತ್ಯಾದಿ ತೆಗೆಯಲು ಬಳಕೆ ಮಾಡಬೇಕು.
- ಹೆಚ್ಚು ಗಡುಸಾಗಿರುವ ವಸ್ತುಗಳನ್ನು ಬರಿ ಕೈಯಲ್ಲಿ ಎತ್ತುವುದರಿಂದ ಕೈಯಲ್ಲಿ ಗಾಯಗಳಾಗುತ್ತದೆ . ಅದಕ್ಕೂ ಇದು ಉಪಯೋಗಕ್ಕೆ ಬರುತ್ತದೆ.
- ಕಾಲಿಗೆ ಹಾಕುವ ಗಮ್ ಬೂಟುಗಳು. ಉದ್ದಿಮೆಗಳಲ್ಲಿ , ನಿರ್ಮಾಣ ಕೆಲಸಗಳಲ್ಲಿ ಕೆಲಸದವರಿಗೆ ಹಾಕಲು ಕೊಡುವ ತರಹದ ಬೂಟ್‌ಗಳನ್ನು ಕೃಷಿಕರೂ ಬಳಸಬೇಕು .
- ತೋಟ , ಹೊಲದಲ್ಲಿ ಸಂಚರಿಸುವಾಗ ಕಾಲಿಗೆ ಯಾವುದಾದರೂ ಗಡಸು ವಸ್ತು ತಾಗುವುದಕ್ಕೆ ಹಾವು ಇತ್ಯಾದಿ ಚುಚ್ಚುವುದಕ್ಕೆ ಇದು ರಕ್ಷಕ.
- ಕಾಲಿಗೆ ನಂಜು ತಾಗದಂತೆ ಇದು ರಕ್ಷಿಸುತ್ತದೆ .
- ಸರ್ಚ್ ಲೈಟ್ : ಪ್ರತೀಯೊಬ್ಬ ಕೃಷಿಕನೂ ತನ್ನ ಮನೆಯಲ್ಲಿ ಒಂದು ಉತ್ತಮ ರೀ ಚಾರ್ಜೆಬಲ್ ಸರ್ಚ್ ಲೈಟನ್ನು ಹೊಂದಿರಬೇಕು .
- ಇದು ಕನಿಷ್ಟ ಇಂದು ಕಿಲೋ ಮೀಟರು ದೂರ ಪಸರಿಸುವಂತಿದ್ದಿದ್ದರೆ ಒಳ್ಳೆಯದು .
- ಇದನ್ನು ಉರಿಸಿದಾಗ ಕಳ್ಳ ಕಾಕರೂ ಸಹ ದೂರವಾಗುತ್ತಾರೆ .
- ದಂಟೆಗಳು : ಮನೆಯಲ್ಲಿ , ತೋಟದಲ್ಲಿ ಹೆಚ್ಚಾಗಿ ಓಡಾಡುವ ಜಾಗಗಳಲ್ಲಿ ಒಂದೊಂದು ಗಟ್ಟಿಯಾದ ದಂಟೆಗಳನ್ನು ( ಲಾಠಿ ) ಜೋಪಾನವಾಗಿ ನಿತ್ಯವೂ ಇರುವಂತೆ ಇಡಬೇಕು .
- ಹಾವು ಇತ್ಯಾದಿ ಎದುರಾದಾಗ ಇದು ಉಪಯೋಗಕ್ಕೆ ಬರುತ್ತದೆ .
- ಕೈಗರಗಸ ಸಾಮಾನ್ಯವಾಗಿ ಬೇಕಾಗುತ್ತದೆ . ಸಾಮಾನ್ಯ ಗರಗಸ ಅಡ್ಡಕ್ಕೆ ಮರದ ಗೆಲ್ಲುಗಳನ್ನು ತುಂಡು ಮಾಡುವುದಕ್ಕೆ ಯಾವಾಗಲೂ ಬೇಕಾಗುತ್ತದೆ.
- ಇದಕ್ಕೆ ದೋಟಿ ಸಿಕ್ಕಿಸಿ ನೆಲದಿಂದಲೇ ಕೆಲವು ಗೆಲ್ಲುಗಳನ್ನು ಕಡಿಯಲು ಸಾಧ್ಯವಾಗುತ್ತದೆ.
- ಯಾಂತ್ರಿಕ, ಅಥವಾ ವಿದ್ಯುತ್ ಚಾಲಿತ ಗರಗಸ ಇದ್ದರೆ ತುಂಬಾ ಅನುಕೂಲ.
- ಟೂಲ್ಸ್ ಬೇರೆ ಬೇರೆ ಅಳತೆಯ ಸ್ಪಾನರುಗಳು ಮತ್ತು ಎಡ್ಜೆಸ್ಟರುಗಳು , 2 ಇಂಚಿನ ಪೈಪ್ರಿಂಚುಗಳು ಸ್ಕ್ರೂ ಡ್ರೈವರುಗಳು ( ಸ್ಟಾರ್ ಹಾಗು ಫೈನ್ ) ಗ್ರೀಸ್ ಪ್ಯಾಕೆಟ್ , ಮತ್ತು ಆಯಿಲ್ ತುಂಬಿಡುವ ಟಿನ್ .
- ಕೆಲವು ತುಕ್ಕು ಹಿಡಿಯುವ ಭಾಗಳಿಗೆ ಹಾಕುವುದಕ್ಕಾಗಿ ಬಳಕೆ ಆಗುತ್ತದೆ .
- ಪ್ಯೂಸ್ ವಯರುಗಳು : ಸಾಮಾನ್ಯವಾಗಿ ಮನೆ ವಿದ್ಯುತ್ ಗೆ ಮತ್ತು ಪಂಪಿನ ವಿದ್ಯುತ್ ಪ್ಯೂಸ್ ಕಟ್ ಔಟ್ ಗಳಿಗೆ ಯಾವಾಗಲೂ ಅಸಲಿ ಪೂಸ್ ವಯರನ್ನೇ ಬಳಕೆ ಮಾಡಬೇಕು .
- ಸರಿಗೆ ಅಥವಾ ತಾಮ್ರದ ತಂತಿ ಹಾಕಬಾರದು . ಇದು ಯಾವಾಗಲೂ ಸಿದ್ಧವಾಗಿರಬೇಕು .
- ಏಣಿಗಳು ಸಣ್ಣದು ಮತ್ತು ದೊಡ್ಡದು . ಸಣ್ಣ ಕೆಲಸಕ್ಕೆ ಸಣ್ಣ ಏಣಿಯನ್ನೂ ದೊಡ್ಡ ಕೆಲಸಕ್ಕೆ ದೊಡ್ಡ ಏಣಿಯನ್ನು ಬಳಕೆ ಮಾಡಬೇಕು .
- ಗಾಡಿಗಳು , ಯಾಂತ್ರಿಕ ಅಥವಾ ಮಾನವ ಚಾಲಿತ ತಳ್ಳು ಗಾಡಿ ಇದ್ದರೆ ಹೊರುವ ಕೆಲಸ ಸುಲಭವಾಗುತ್ತದೆ .
- ತೆಂಗಿನ ಕಾಯಿ ಸುಲಿಯುವ ಸಾಧನ : ಅಡಿಕೆ ಸುಲಿಯುವ ಮೆಟ್ಟು ಕತ್ತಿ , ಚೂರಿ , ದಬ್ಬಣ , ಇವೂ ಅಗತ್ಯ.
- ಸಣ್ಣ ಸಣ್ಣ ಗೆಲ್ಲುಗಳನ್ನು ಸ್ಸಿಗಿಯದಂತೆ ಕತ್ತರಿಸಲು ಸೆಕೇಚರ್ (Pruning Secateur) ಇಟ್ಟುಕೊಂಡಿದ್ದರೆ ಬಹಳ ಒಳ್ಳೆಯದು.
ಗೋಡೌನು :
- ಯಾವುದೇ ಕೃಷಿ ಉತ್ಪನ್ನವನ್ನು ಗಾಳಿಯಾಡದಂತೆ , ದಂಶಕಗಳಿಂದ ಹಾನಿಯಾಗದಂತೆ ಶೇಖರಿಸಿಡಲು ವ್ಯವಸ್ಥಿತ ಗೋಡೌನ್ ಅಗತ್ಯ.
- ಗೊಡೌನಿಗೆ ಹೊರಗೆ ಗಾರೆ ಅಗತ್ಯವಾಗಿ ಮಾಡಿಸಬೇಕು. ಒಳಗೆ ಮಾಡಿಸದಿದ್ದರೆ ಒಳ್ಳೆಯದು. ತೇವ ಬರುವುದು ಕಡಿಮೆಯಾಗುತ್ತದೆ.
- ಗೊಬ್ಬರ ದಾಸ್ತಾನು ಕೊಠಡಿ : ಸಾವಯವ ಗೊಬ್ಬರ ಇರಲಿ ರಾಸಾಯನಿಕ ಇರಲಿ ಅದನ್ನು ವ್ಯವಸ್ಥಿತವಾಗಿ ದಾಸ್ತಾನು ಇಡಬಲ್ಲ ಕೊಠಡಿ ಬೇಕಾಗುತ್ತದೆ .
- ಇದರಲ್ಲಿ ಮಕ್ಕಳಿಗೆ ಸಿಗದಂತೆ ಬೀಗ ಹಾಕಿ ಇಡಬಹುದಾದ ಸಣ್ಣ ಕೋಣೆ ಇರಬೇಕು .
- ಇದರಲ್ಲಿ ವಿಷ – ಅಪಾಯಕಾರೀ ವಸ್ತುಗಳನ್ನು ಜಾಗರೂಕತೆಯಲ್ಲಿ ಇಡಬೇಕು.
- ಕೀಟನಾಶಕ, ಶಿಲೀಂದ್ರ ನಾಶಕ ಮತ್ತ್ ಗೊಬ್ಬರ ಇವೆಲ್ಲವನ್ನೂ 20-25 ಡಿಗ್ರಿಯಷ್ಟು ತಂಪಾಗಿರುವ ಕಡೆ ದಾಸ್ತಾನು ಇಡಬೇಕು.
- ಹಾಗಿದ್ದರೆ ಮಾತ್ರ ಅದರ ಕ್ಷಮತೆ ಸರಿಯಾಗಿರುತ್ತದೆ. ಅಂತಹ ವ್ಯವಸ್ಥೆ ಬೇಕು.
- ಇದರಲ್ಲಿ ಯಾವಾಗಲೂ ರಾಜಿ ಮಾಡಿಕೊಳ್ಳಬಾರದು .
- ಕೀಟ ನಾಶಕ , ಶಿಲೀಂದ್ರ ನಾಶಕ , ಗೊಬ್ಬರ , ಕಳೆ ನಾಶಕ ಯಾವುದೇ ಇದ್ದರೂ ಅದನ್ನು ಅಳತೆ ಪ್ರಕಾರವೇ ಬಳಕೆ ಮಾಡಬೇಕು .
- ಅಂದಾಜಿಗೆ ಯಾವುದನ್ನೂ ಹಾಕಬಾರದು . ದ್ರವ ಅಳೆಯುವ ಪಾತ್ರೆ : 5 ಮಿಲಿ ಯಿಂದ 100 ಮಿಲಿ ತನಕ ಕರಾರುವಕ್ಕಾಗಿ ಅಳೆಯುವ ಅಳತೆ ಪಾತ್ರೆ. 1 ಲೀಟರ್ ಅಳೆಯುವ ಅಳತೆ ಪಾತ್ರೆ ಇಟ್ಟು ಕೊಂಡಿರಬೇಕು.
- 5 ಗ್ರಾಂ ನಿಂದ 1 ಕಿಲೋ ತನಕ ತೂಗಬಲ್ಲ ಸಣ್ಣ ತೂಕದ ಸಾಧನ .
- ತೂಕ ಯಂತ್ರ : 1 ಕಿಲೋ ದಿಂದ 100 ಕಿಲೋ ತನಕ ತೂಗಬಲ್ಲ ಸಾಧನ ( ಬಾಳೆಕಾಯಿ, ತೆಂಗಿನ ಕಾಯಿ ಏನೇ ಇದ್ದರೂ ಅದನ್ನು ಕೃಷಿಕರು ಅವರ ತೂಕದಲ್ಲೇ ತೂಕ ಮಾಡಿ ವಿಕ್ರಯಿಸಬೇಕು.
- ಸ್ಪ್ರೆಯರು ಗಳು: ಬೆನ್ನಿಗೆ ಏರಿಸಿ ಸಿಂಪಡಿಸುವ ಸ್ಪ್ರೇಯರ್ ಹಾಗೂ ಹೆಚ್ಚಿನ ಔಷಧಿ ಸಿಂಪಡಿಸಲು ಅನುಕೂಲವಾಗುವ ಪವರ್ ಸ್ಪ್ರೇಯರ್ ಅಗತ್ಯವಾಗಿ ಬೇಕು.
- ಪ್ರತೀಯೊಬ್ಬ ಕೃಷಿಕನ ಹೊಲದಲ್ಲಿಯೂ ಒಂದು ಸರಳವಾದ ರಚನೆಯದ್ದಾದರೂ ಒಣಗು ಮನೆ ಬೇಕು.
- ಇದು ಬೇಸಿಗೆ ಮಳೆಗಾಲ ಎರಡೂ ಋತುಮಾನದಲ್ಲೂ ಇರಬೇಕು.
- ಇದರಲ್ಲಿ ಒಣಗಿಸಿದರೆ ಕೃಷಿ ಉತ್ಪನ್ನ ಧೂಳು ಇತ್ಯಾದಿಗಳಿಂದ ಮುಕ್ತವಾಗಿ ಸ್ವಚ್ಚವಾಗಿರುತ್ತದೆ.
- ಪ್ರಥಮ ಚಿಕಿತ್ಸಾ ಔಷಧಿ : ಆಂಟಿ ಸೆಪ್ಟಿಕ್ ಆಯಿಂಟ್‌ಮೆಂಟ್, ವೈದ್ಯಕೀಯ ಹತ್ತಿ ಬ್ಯಾಂಡೇಜು, ವಸ್ತ್ರ ಸೂಜಿ ಬ್ಲೇಡು , ಕತ್ತರಿ ಹೀಗೆ ಹಲವಾರು ಸಾಧನಗಳು ಒಂದು ಪ್ರಯೋಗಾಲಯದಂತೆ ಬೇಕಾಗುತ್ತದೆ.
ಸಾಮಾನ್ಯವಾಗಿ ಹಳ್ಳಿಯ ಕೃಷಿಕರ ಮನೆ- ಹೊಲ ಎಂದರೆ ಅಲ್ಲಿ ತಕ್ಷಣ ಏನಾದರೂ ಬೇಕಾದರೆ ತರುವ ವ್ಯವಸ್ಥೆ ಇರುವುದಿಲ್ಲ. ನಮ್ಮಲ್ಲಿ ಇಲ್ಲದಿದ್ದರೆ ಯಾರಲ್ಲೂ ಇರುವುದಿಲ್ಲ. ಇದ್ದರೂ ಕೊಡುವುದಿಲ್ಲ. ತಂದರೆ ಹಾಳಾದರೆ ಅದು ಒಂದು ಮುಜುಗರ. ಹಾಗಿರುವಾಗ ಅವರವರ ಸ್ವತ್ತು ಅವರವರಲ್ಲಿ ಇದ್ದರೆ ಬಹಳ ಉತ್ತಮ.