ಹಿಂದಿನವರು ತಮ್ಮ ಅಡಿಕೆ ತೋಟದ ಬೌಂಡ್ರಿಯ ಸುತ್ತ ದಾಸವಾಳದ ಗಿಡ ನೆಡುತ್ತಿದ್ದರು. ಇದರ ಹಿಂದೆ ಸಾಕಷ್ಟು ವೈಜ್ಞಾನಿಕತೆ ಅಡಗಿದೆ.
ವಿಟ್ಲ, ಪುತ್ತೂರು, ಸುಳ್ಯ , ಕಾಸರಗೋಡು, ಹಾಗೆಯೇ ಶ್ರಿಂಗೇರಿ, ಕೊಪ್ಪ, ಸಾಗರ, ಶಿರಸಿ ಕಡೆಯ ಹಳೆಯ ಅಡಿಕೆ ಕೃಷಿಕರ ತೋಟದ ಸುತ್ತ ಬೇಲಿಗಳಲ್ಲಿ ದಾಸವಾಳದ ಸಸ್ಯ ಇರುತ್ತದೆ. ದಾಸವಾಳ ಸಸಿ ಬೆಳೆಸುವುದು ಸುಲಭ. ಅಂದಕ್ಕೆ ಹೂವೂ ಆಗುತ್ತದೆ. ಬೇಲಿ ಧೀರ್ಘ ಕಾಲದ ತನಕ ಹಾಳಾಗುವುದಿಲ್ಲ. ಇದು ಬೇಲಿ ಮಾಡುವವರಿಗೆ ತಿಳಿದಿರುವ ಸಂಗತಿ. ತಮ್ಮ ಹಿರಿಯರು ಇದನ್ನು ಅನುಸರಿಸುತ್ತಿದ್ದರು. ನಂತರದವರೂ ಅದನ್ನು ಪಾಲಿಸುತ್ತಾ ಬಂದಿದ್ದಾರೆ.
ದಾಸವಾಳದ ಬೇಲಿಯ ಲಾಭ:
- ದಾಸವಾಳದ ಗೆಲ್ಲುಗಳನ್ನು ತೇವಾಂಶ ಇರುವ ಮಣ್ಣಿನಲ್ಲಿ ಊರಿದರೆ ಅದಕ್ಕೆ ಬೇಗ ಬೇರು ಬರುತ್ತದೆ.
- ಹೆಚ್ಚಾಗಿ ಬೇಲಿ ದಾಸವಾಳದ ಸಸ್ಯವನ್ನು ಇಲ್ಲಿ ಬೆಳೆಸುವುದು ವಾಡಿಕೆ.
- ಕಾರಣ ಇದೇ ಜಾತಿಯ ದಾಸವಾಳ ಸ್ಥಳೀಯವಾಗಿ ಸಿಗುತ್ತಿತ್ತು.
- ತೋಟಕ್ಕೆ ಜೀವಂತ ಬೇಲಿ ಮಾಡಿದರೆ ಪದೇ ಪದೇ ಬೇಲಿ ಮಾಡುವ ಕೆಲಸ ಇರುವುದಿಲ್ಲ.
- ಯಾವುದೇ ನಿರ್ವಹಣೆ ಇರುವುದಿಲ್ಲ. ಹಿಂದೆ ಕೃಷಿಕರ ಮನೆಯಲ್ಲಿ ಹಲವಾರು ಹಸುಗಳು, ಎಮ್ಮೆಗಳು ಇರುತ್ತಿದ್ದವು.
- ಅವುಗಳಿಗೆ ಹೊಟ್ಟೆಗೆ ಹಾಕಲು ಅಲ್ಪ ಸ್ವಲ್ಪ ಮೇವು ಸಹ ಇದೇ ಈ ದಾಸವಾಳದ ಗೆಲ್ಲುಗಳಿಂದ ಸಿಗುತ್ತಿತ್ತು.
- ಹಿಂದೆ ಹಸುಗಳನ್ನು ಹೊರಗೆ ಮೇಯಲು ಬಿಡುತ್ತಿದ್ದುದು ಎಲ್ಲರೂ ಅನುಸರಿಸುತ್ತಿದ್ದ ವಿಧಾನ.
- ಅವು ತೋಟಕ್ಕೆ ಹೊಲಕ್ಕೆ ಬಾರದಂತೆ ಬೇಲಿ.
- ಅಪ್ಪಿ ತಪ್ಪಿ ಬಂದರೆ ಅವುಗಳು ನೇರವಾಗಿ ಹೊಲಕ್ಕೆ ನುಗ್ಗದೆ ಬೇಲಿಯಲ್ಲೇ ನಾವು ಗಮನಿಸುವಷ್ಟು ಸಮಯ ಸೊಪ್ಪು ತಿನ್ನುತ್ತಿದ್ದವು.
ಇನ್ನೂ ಹೆಚ್ಚಿನ ಅನುಕೂಲ ಗೊತ್ತೇ?
- ದಾಸವಾಳದ ಸೊಪ್ಪು ಕೀಟ ಆಕರ್ಷಕ.ಅಥವಾ ಒಂದು ಬಲೆ ಬೆಳೆ ಎಂದೇ ಹೇಳಬಹುದು.
- ಮಳೆಗಾಲ ಕಳೆದ ತಕ್ಷಣ ಹುಲ್ಲು ಇತ್ಯಾದಿ ಕಳೆ ಸಸ್ಯಗಳು ಒಣಗಿ ಕೀಟಗಳಿಗೆ ಆಸರೆ ಸಸ್ಯಗಳು ಕಡಿಮೆಯಾಗುತ್ತವೆ.
- ಆಗ ಅವು ಬೇರೆ ಆಸರೆಯನ್ನು ಹುಡುಕುತ್ತಾ ಬೆಳೆಗೆ ಧಾಳಿ ಮಾಡುವುದು ಹೆಚ್ಚು.
- ಅವುಗಳಿಗೆ ಪ್ರಿಯವಾದ ಸಸ್ಯಗಳು ಸಿಕ್ಕರೆ ಅದರಲ್ಲಿ ಮೊದಲಾಗಿ ಆಶ್ರಯ ಪಡೆಯುತ್ತವೆ.
- ಅದೂ ಲಭ್ಯವಿಲ್ಲದಿದ್ದಲ್ಲಿ ಅದು ಬೆಳೆಗಳಲ್ಲಿ ಆಶ್ರಯ ಪಡೆಯುತ್ತವೆ.
- ಹೀಗೆ ಆಶ್ರಯ ಪಡೆಯುವ ಪ್ರಮುಖ ಸಸ್ಯ ದಾಸವಾಳ .
- ಚಳಿಗಾಲ ಬಂದ ತಕ್ಷಣ ಪತಂಗಗಳು ದಾಸವಾಳದ ಗಿಡದ ಎಲೆಯ ಅಡಿ ಭಾಗದಲ್ಲಿ ಮೊಟ್ಟೆ ಇಡುತ್ತವೆ.
- ಮೊಟ್ಟೆ ಇಟ್ಟು ಹೋಗುತ್ತವೆ.
- ಎಲೆಯ ಅಡಿ ಭಾಗವನ್ನು ಗಮನಿಸಿದರೆ ಬಲೆ ಹತ್ತಿಯಂತಿರುವ ಬಲೆ ರಚನೆಯನ್ನು ಕಾಣಬಹುದು.
- ಇದು ಕೆಲವೇ ದಿನಗಳಲ್ಲಿ ಮರಿಯಾಗುತ್ತದೆ.
- ಮರಿಯಾದ ತಕ್ಷಣ ಅವು ತಮ್ಮ ರಕ್ಷಣೆಗಾಗಿ ಎಲೆಯನ್ನು ತಮ್ಮ ದೇಹದ ನಾರಿನ ಮೂಲಕ ಸುತ್ತು ಕಟ್ಟುತ್ತವೆ.
- ದಿನಂಪ್ರತೀ ಎಲೆಯ ಹರಿತ್ತನ್ನು ತಿನ್ನುತ್ತವೆ.
- ತಿಂದು ಕಪ್ಪು ಹಿಕ್ಕೆಗಳನ್ನು ಹೊರ ಹಾಕುತ್ತವೆ.
- ಈ ಲಾರ್ವೆಗಳು ತಮ್ಮ ಆ ಹಂತವನ್ನು ಮುಗಿಸಿ ಪ್ಯೂಪೆ ಹಂತಕ್ಕೆ ಬರುತ್ತವೆ.
ಇಲ್ಲೇ ಇರುವುದು ಕೌತುಕ;
- ಒಂದು ದಾಸವಾಳ ಗಿಡದಲ್ಲಿ ನೂರಾರು ಎಲೆಗಳಿದ್ದರೆ 50% ಕ್ಕೂ ಹೆಚ್ಚಿನ ಎಲೆಗಳು ಸುತ್ತು ಕಟ್ಟಿಕೊಂಡಿರುತ್ತವೆ.
- ಇಡೀ ಸಸ್ಯವೇ ಎಲೆ ಕಡಿಮೆಯಾಗಿ ಸೊರಗಿಕೊಂಡಿರುತ್ತವೆ.
- ಪ್ರತೀ ಸುತ್ತಲ್ಪಟ್ಟ ಎಲೆಯ ಒಳಗೆ 1-5 ತನಕ ಹುಳುಗಳು ಇರುತ್ತವೆ.
- ಇವುಗಳ ಪ್ಯೂಪೆ ಹಂತವು ಅಲ್ಲೇ ನಡೆಯಬೇಕು.
- ಆದರೆ ಅದು ಕಾಣ ಸಿಗುವುದೇ ಅಪರೂಪ. ಕಾರಣ ಇಷ್ಟೆ.
- ದಾಸವಾಳದ ಎಲೆ ಮಡಚಿಕೊಂಡಿದ್ದರ ಸುದ್ದಿ ಒಂದು ಜಾತಿಯ ಹಾರುವ ಕೀಟಕ್ಕೆ ಹೇಗೆ ತಿಳಿಯುತ್ತದೆ ಗೊತ್ತಿಲ್ಲ.
- ಅದು ದಾಸವಾಳ ಸಸ್ಯದ ಸುತ್ತ ಹೊಂಚು ಹಾಕಿ ಎಲೆಗೆ ಒಂದು ತೂತು ಕೊರೆದು ಅದರೊಳಗಿನ ಲಾರ್ವೆಯನ್ನು ತಿಂದು ಹೋಗುತ್ತದೆ.
ಹೇಗಿದೆ ನೋಡಿ ಪ್ರಕೃತಿಯ ನಿಯಂತ್ರಣ ಕ್ರಮ.ಒಂದು ವೇಳೆ ಇಲ್ಲಿ ಈ ಹುಳದ ನಾಶ ಆಗದೇ ಇರುತ್ತಿದ್ದರೆ ಅದರ ಸಂಖ್ಯಾಭಿವೃದ್ದಿ ಎಷ್ಟರ ಮಟ್ಟಿಗೆ ಆಗುತ್ತಿತ್ತು. ಅವು ಮತ್ತೆ ಆಸರೆ ಹುಡುಕಿ ಯಾವ ಯಾವ ಬೆಳೆಗಳಿಗೆ ತೊಂದರೆ ಮಾಡುತ್ತಿದ್ದವೋ?
ಪ್ರಕೃತಿ ಪ್ರತೀಯೊಂದನ್ನೂ ಹದ್ದುಬಸ್ತಿನಲ್ಲಿ ಇಡಲು ತನ್ನದೇ ಆದ ವ್ಯವಸ್ಥೆಯನ್ನು ಹೊಂದಿದೆ. ನಾವು ಕೃಷಿ ಮಾಡುವವರು ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಬೇಕು. ಈ ಮೇಲೆ ತಿಳಿಸಲಾದ ಸಂಗತಿಯನ್ನು ತಾವೆಲ್ಲರೂ ಪರೀಕ್ಷಿಸಿ ಸತ್ಯಾಸತ್ಯತೆಯನು ತಿಳಿಯಬಹುದು. ಅದಕ್ಕೆ ಅರ್ಧ ದಿಂದ ಗಂಟೆ ಕಾಲ ದಾಸವಾಳದ ಗಿಡದ ಸುತ್ತ ಸಂಜೆ ಗಂಟೆ 3 ರ ನಂತರ ಗಮನ ಇಟ್ಟು ನೋಡುತ್ತಿರಿ.