ಅಧಿಕ ಇಳುವರಿಗೆ ಇಂಟರ್ ಸಿ ಮಂಗಳಬೇ ಆಗಬೇಕು ಎಂದು ದುಂಬಾಲು ಬಿದ್ದು, ನೆಡ ಬಯಸುವವರು ಒಂದಷ್ಟು ವಿಚಾರಗಳನ್ನು ತಿಳಿದಿರಬೇಕು. ಇದು ಅಧಿಕ ಇಳುವರಿ ಕೊಡಬಹುದು. ಆದರೆ ಅದು ಹಿಂದೆ ಇದ್ದ ಮಂಗಳ ತಳಿಯೇ ಆಗಿದೆ.
.
ಇಂಟರ್ ಸಿ ಮಂಗಳ ತಳಿ ಎಂಬ ಹೆಸರೇ ಒಂದು ಪ್ರಚಾರ. ಇನ್ನು ಇದನ್ನು ಒಂದು ತಳಿ ಎಂದು ಮಾರಾಟ ಮಾಡುವವರ ಅವಿವೇಕತನಕ್ಕೆ ಏನು ಹೇಳಬೇಕೋ ತಿಳಿಯದು. ಒಂದು ಗಾದೆ ಇದೆ, ನಮ್ಮನ್ನು ಮಂಗ ಮಾಡುವುದಲ್ಲ, ನಾವು ಮಂಗ ಆಗುವುದು. ನಮ್ಮ ಅಸಹಾಯಕತೆಯೇ ನಮ್ಮ ಸೋಲು. ಅಡಿಕೆ ಬೆಳೆಸುವವರು ಇಂಟರ್ ಮಂಗಳ ಬೇಕು ಎಂದು ಆಯ್ಕೆ ಮಾಡುವುದೇ ಆದರೆ ಈ ಎಲ್ಲಾ ಸಮಸ್ಯೆ ಎದುರಿಸಲು ಸಿದ್ದರಿರಬೇಕು.
- ಯಾವುದೇ ಬೆಳೆಗೆ ಬೆಲೆ ಬಂದರೆ ಜನ ಅದರ ಹಿಂದೆ ದುಂಬಾಲು ಬಿದ್ದು ಹೋಗುತ್ತಾರೆ.
- ಇದು ತಪ್ಪಲ್ಲ. ಎಲ್ಲರಿಗೂ ಅಧಿಕ ಆದಾಯದ ಬೆಳೆ ಬೇಕೇ ಬೇಕು.
- ಆದರೆ ಅವರ ಆಯ್ಕೆಗಳು ಮಾತ್ರ ನಿರೀಕ್ಷೆಯ ಫಲ ಕೊಡುವುದಿಲ್ಲ.
- ಇದಕ್ಕೆ ಉದಾಹರಣೆ ಇಂಟರ್ ಮಂಗಳ ಎಂಬ ಅಡಿಕೆ.
- ಇಂಟರ್ ಮಂಗಳ ಎಂಬ ತಳಿಯೇ ಇಲ್ಲದ ಮೇಲೆ ಇದನ್ನು ಯಾಕಾಗಿ ರೈತರು ಆಯ್ಕೆ ಮಾಡುತ್ತಾರೆಯೋ ,
- ಈ ಬಗ್ಗೆ ರೈತರಿಗೆ ಸಂಬಂಧಿಸಿದವರು ಯಾಕೆ ತಿಳಿ ಹೇಳುವುದಿಲ್ಲವೋ ಗೊತ್ತಾಗುವುದಿಲ್ಲ.
- ದೀರ್ಘಾವಧಿ ಬೆಳೆ ಬೆಳೆಸುವಾಗ ಒಂದಲ್ಲ ಹತ್ತು ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.
ಇಂಟರ್ ಸಿ ನಿರೀಕ್ಷೆಯ ಫಲ ಕೊಡದು:
- ಇಂಟರ್ ಸಿ ಮಂಗಳ ಎಂದರೆ ಮಂಗಳ ತಳಿಯ ಶುದ್ಧ ತಳಿಯನ್ನು ಉಳಿಸಲು ಮಾಡಿದ ಕ್ರಾಸಿಂಗ್ ತಳಿ.
- ಇದು ಮಂಗಳ ತಳಿಯೇ ಹೊರತು ಬೇರೇನೂ ಅಲ್ಲ.ಇಂಟರ್ ಸಿ ಯೂ ಸಹ ಮಂಗಳ ಹೇಗೆಯೋ ಹಾಗೆಯೇ ಆಗಿರುತ್ತದೆ.
- ಇದಕ್ಕಾಗಿಯೇ CPCRI ಸಂಸ್ಥೆಯಲ್ಲಿ ಬೀಜ ಕೊಡುವಾಗ ಮಂಗಳ ಎಂದೇ ನಮೂದಿಸಿ ಬಿಲ್ ಕೊಡಲಾಗುತ್ತದೆ.
- ಮಂಗಳ ಪ್ರಾರಂಭಿಕ ವರ್ಷಗಳಲ್ಲಿ ಉತ್ತಮ ಇಳುವರಿ ನೀಡುತ್ತಿತ್ತು.
- ನಾನು, ನನ್ನಿಂದ ಇನ್ನೊಬ್ಬ, ಇನ್ನೊಬ್ಬನಿಂದ ಮತ್ತೊಬ್ಬ ಹೀಗೆ ತಲೆಮಾರು ಬದಲಾದಂತೆ ಇದರ ಬೀಜದಲ್ಲಿ ಗುಣ ವ್ಯತ್ಯಾಸ ಆಗಲಾರಂಭಿಸಿತು.
ನೈಜ ಇಂಟರ್ ಮಂಗಳ ಹೀಗೆ ಇರಬೇಕು.
- ಇಷ್ಟಕ್ಕೂ ನಮ್ಮಲ್ಲಿ ಬರೇ ಇಂಟರ್ ಸಿ ಅಥವಾ ಮಂಗಳ ಒಂದನ್ನೇ ಬೆಳೆಸಿದ ತೋಟ ಇಲ್ಲ.
- ಎಲ್ಲಾ ತಳಿಗಳ ಜೊತೆಗೆ ಮಂಗಳ, ಇಂಟರ್ ಮಂಗಳಗಳನ್ನು ಬೆಳೆಸಿದ ಕಾರಣ ಸಹಜವಾಗಿ ಇದು ಮಿಶ್ರ ಪರಾಗ ಸ್ಪರ್ಶ ಏರ್ಪಟ್ಟು ಬೀಜದಲ್ಲಿ ತಳಿ ವ್ಯತ್ಯಾಸ ಆಗುತ್ತಿದೆ.
- ಪೀಳಿಗೆಯಿಂದ ಪೀಳಿಗೆಗೆ ತಳಿ ಗುಣ ಬದಲಾಗುತ್ತಾ ಇರುತ್ತದೆ.
- ಈಗ ಇಂಟರ್ ಸಿ ಅಥವಾ ಮಂಗಳ ನೆಟ್ಟರೆ ಅದು ಸರಿಯಾದ ಸಮಯಕ್ಕೆ ಪಲ ಕೊಡುವುದಿಲ್ಲ.
- ಮೂಲ ತಳಿಯ ಗುಣ ಕಿಂಚಿತ್ತೂ ಪೀಳಿಗೆಯಲ್ಲಿ ಇರುವುದಿಲ್ಲ.
- ಆಯ್ಕೆ ಮಾಡಿದ ಮರದಲ್ಲಿ ಇಳುವರಿ ಚೆನ್ನಾಗಿರಬಹುದು.
- ಹಾಗೆಂದು ಅದೇ ಬೀಜ ನಿಮ್ಮಲ್ಲಿ ಯಥಾ ಗುಣ ಪಡೆದಿರುವುದಿಲ್ಲ.
ಅಡಿಕೆ ಬೀಜಕ್ಕೆ ಎಲ್ಲಿಲ್ಲದ ಬೇಡಿಕೆ:
- ಈ ವರ್ಷ ಅಡಿಕೆ ಬೀಜಕ್ಕೆ ಬೆಲೆ ಎಷ್ಟು ಗೊತ್ತೇ? ಕೆಲವು ಸಜ್ಜನರು 6-7 ರೂ. ಗಳಿಗೆ ಬೀಜ ಮಾರುತ್ತಿದ್ದಾರೆ.
- ಇನ್ನು ಕೆಲವು ಸಾಚಾ ವ್ಯಾಪಾರೀ ಗುಣದ ಕೃಷಿಕರು 10 ರೂ. ಗಳಿಗೂ ಮಾರಾಟ ಮಾಡುತ್ತಿದ್ದಾರೆ.
- ಸಿಪಿ ಸಿ ಆರ್ ಐ ನಲ್ಲಿ ಇಂಟರ್ ಮಂಗಳ ಬೀಜ ಕೇಳಿದರೆ ಮಂಗಳ ಬೀಜ ಎಂದು ಬಿಲ್ ಕೊಡುತ್ತಾರೆ.
- ರೈತರು ನಂಬಿಕೆಯಿಂದ ಬೀಜ ತಂದು ಸಸಿ ಮಾಡಿ ನೆಡುತ್ತಾರೆ.
- ಈ ವರ್ಷ ಅಡಿಕೆಯ ಫಸಲೇ ಕಡಿಮೆ.
- ಕೆಲವರು ಅಡಿಕೆ ಒಣಗಿಸುವುದಕ್ಕಿಂತ ಹೆಚ್ಚು ಬೀಜದ ಅಡಿಕೆ ಮಾರಾಟವನ್ನೇ ಮಾಡುತ್ತಿದ್ದಾರೆ.
- ಬಹಳಷ್ಟು ಜನ ಇಂಟರ್ ಸಿ ಬೀಜದ ಅಡಿಕೆ ಇದೆಯೇ ಎಂದು ಕೇಳುತ್ತಾರೆ.
- ಇದ್ದವರು ಕೊಡುತ್ತಾರೆ. ನರ್ಸರಿ ಮಾಡುವವರಂತೂ ಭಾರೀ ಪ್ರಮಾಣದಲ್ಲಿ ಅಡಿಕೆ ಸಸಿ ಮಾಡುವ ಸಿದ್ದತೆಯಲ್ಲಿದ್ದಾರೆ.
ಇಂಟರ್ ಸಿ ನೆಡುವವರು ಇದನ್ನು ಮಾಡಲೇ ಬೇಕು:
- 1000 ಇಂಟರ್ ಮಂಗಳ ಅಡಿಕೆ ಸಸಿ ನೆಡುತ್ತೀರೆಂದಾದರೆ ನಿಮ್ಮಲ್ಲಿ ಮತ್ತೆ ಕನಿಷ್ಟ 250 ರಷ್ಟಾದರೂ ಸಸಿ ಬೇರೆಡೆ ಪಾತಿಯಲ್ಲಿ ಅಥವಾ ದೊಡ್ದ ಪಾಲಿ ಬ್ಯಾಗ್ ನಲ್ಲಿ ಬೆಳೆಯುತ್ತಿರಲಿ.
- ಈ ವರ್ಷ ನೆಟ್ಟ ಸಸಿಗಳಲ್ಲಿ ಮುಂದಿನ ವರ್ಷ ಕನಿಷ್ಟ 15% ಬೆಳವಣಿಗೆ ಅಸಮತೋಲನವನ್ನು ತೋರಿಸುತ್ತದೆ.
- ಆ ಸಸ್ಯಗಳನ್ನು ಬದಲಿಸಿ ಬೇರೆ ನೆಡಲು ಅದೇ ರೀತಿ ಬೆಳೆದ ಸಸಿ ಬೇಕಾಗುತ್ತದೆ.
- ಎರಡನೇ ವರ್ಷವೂ ಹೀಗೇ ಕೆಲವು ಬೆಳವಣಿಗೆ ಕುಂಠಿತವಾಗುತ್ತವೆ.
- ಅದನ್ನೂ ಬದಲಿಸಿ ಬೇರೆ ನೆಡಬೇಕು.
- ಫಲ ಕೊಡುವ ತನಕವೂ, ಅನುತ್ಪಾದಕ ಸಸಿಗಳನ್ನು ಬದಲಾಯಿಸುವುದು ಮಾಡುತ್ತಲೇ ಇರಬೇಕು.
- ಆಗ ಮಾತ್ರ ಉತ್ಪಾದಕ ಮರಗಳ ಸಂಖ್ಯೆ ಹೆಚ್ಚು ಇರುವಂತೆ ನೋಡಿಕೊಳ್ಳಬಹುದು.
- ಆ ತನಕ ನೆಡಲು ಯೋಗ್ಯವಾದ ಸಸಿಗಳನ್ನು ಬೆಳೆಸಿ ಇಟ್ಟುಕೊಳ್ಳಬೇಕು.
- ಇದಕ್ಕೆ ತಪ್ಪಿದರೆ ನಿಮ್ಮ ತೋಟದಲ್ಲಿ ಶೇ.50 ಕ್ಕಿಂತಲೂ ಹೆಚ್ಚು ಅನುತ್ಪಾದಕ ಮರಗಳು ಇರುತ್ತವೆ.
- ಕಾಂಡ ಸಪುರವಾಗುವುದು, ಅತೀ ಕಡಿಮೆ ಎಲೆಗಳು, ಉದ್ದದ ಗಂಟು, ಪ್ರಾಯ 5-6 ಕಳೆದರೂ ಇಳುವರಿ ಬಾರದಿರುವುದು ಇಂಟರ್ ಸಿ ಮಂಗಳದಲ್ಲಿ ಸರ್ವೇ ಸಾಮಾನ್ಯ ಸಮಸ್ಯೆಯಾಗಿರುತ್ತದೆ.
- ಈ ತಳಿಯನ್ನು ನೆಡುವಾಗ ಬಾಳೆ ನೆಟ್ಟರೆ ಅನುತ್ಪಾದಕ ಸಸ್ಯಗಳ ಪ್ರಮಾಣ 60 % ಕ್ಕೂ ಮೀರಬಹುದು.
- ಈ ತಳಿಗಳಿಗೆ ಗರಿಷ್ಟ 25-30 ವರ್ಷ ಮಾತ್ರ ಅಧಿಕ ಇಳುವರಿ ಕೊಡುವ ಸಾಮರ್ಥ್ಯ ಇರುತ್ತದೆ.
ಎಲ್ಲದಕ್ಕಿಂತ ಉತ್ತಮ ಸ್ಥಳೀಯ ತಳಿ:
- ಸ್ಥಳೀಯ ತಳಿಯ ತೋಟದಲ್ಲಿ ತಳಿ ಮಾರ್ಪಾಡು ಆಗುವುದು ಇಲ್ಲವೆಂದಲ್ಲ.
- ಆದರೆ ಅದರಲ್ಲಿ ಅಂತಹ ಗಮನಾರ್ಹ ವ್ಯತ್ಯಾಸ ಗೊತ್ತಾಗುವುದಿಲ್ಲ.
- ಸ್ಥಳೀಯ ತಳಿಗಳು ಮಂಗಳ, ಸುಮಂಗಳ, ಮೋಹಿತ್ ನಗರ, ಇಂಟರ್ ಸಿ ಮುಂತಾದ ಗಿಡಗಳಿಗೆ ಪೊಷಕಾಂಶ ಮತ್ತು ನಿಗಾ ಕೊಟ್ಟು ಬೆಳೆದಂತೆ ಬೆಳೆದರೆ ನಾಲ್ಕು ವರ್ಷಕ್ಕೇ ಫಲ ಕೊಡುತ್ತವೆ.
- ಇದಕ್ಕೆ ಇತರ ತಳಿಗಳಿಗಿಂತ ದುಪ್ಪಟ್ಟು ಆಯುಸ್ಸು.
- ನಿರಂತರ ಏಕ ಪ್ರಕಾರದ ಇಳುವರಿ ಕೊಡುತ್ತದೆ. ಸ್ಥಳೀಯ ಹವಾಮಾನ ವೈಪರೀತ್ಯ ( ಬಿಸಿಲು ಮಳೆ, ರೋಗ) ಗಳಿಗೆ ತಕ್ಕ ಮಟ್ಟಿಗೆ ನಿರೋಧಕ ಶಕ್ತಿ ಪಡೆದಿದೆ.
- ಒಂದು ವರ್ಷ ಪೋಷಕಾಂಶ ಕೊಡುವುದು ವ್ಯತ್ಯಾಸವಾದರೆ ಅಂತಹ ಗಮನಾರ್ಹ ತೊಂದರೆ ಗೊತ್ತಾಗಲಾರದು.
- ಸುಸ್ಥಿರ ಮತ್ತು ಸರಾಸರಿ ಉತ್ತಮ ಇಳುವರಿಗೆ ಇದೇ ಸೂಕ್ತ ತಳಿ.
ಅಡಿಕೆ ಬೆಳೆ ವಾರ್ಷಿಕ ಬೆಳೆ ಅಲ್ಲ. ನೆಟ್ಟು ಫಲ ಕಡಿಮೆಯಾದರೆ ಅಥವಾ ಅನುತ್ಪಾದಕ ಸಸ್ಯಗಳೇ ಹೆಚ್ಚಾದರೆ ಇದು ದೊಡ್ಡ ಹೊರೆ. ಆದ ಕಾರಣ ಪರವೂರಿನವನಿಗಿಂತ ಊರಿನ ಕಳ್ಳನಾದರೂ ಆಗಬಹುದು, ಅವನನ್ನು ಹೇಗಾದರೂ ಸಂಬಾಳಿಸಿಕೊಂಡು ಹೋಗಬಹುದು.