ಫಸಲು ಕೊಡುವ ಅಡಿಕೆ ಮರಲ್ಲಿ ವರ್ಷ ಪೂರ್ತಿ ಬೆಳೆವಣಿಗೆ ಇರುತ್ತದೆ. ಮಳೆಗಾಲದಲ್ಲಿ ಬೆಳೆಯುವ ಮಿಡಿಗಳು, ಚಳಿಗಾಲದಲ್ಲಿ ಬಲಿಯುತ್ತಿರುವ ಕಾಯಿಗಳು ಮತ್ತು ಮೂಡುತ್ತಿರುವ ಹೂ ಗೊಂಚಲು ಹಾಗೂ ಬೇಸಿಗೆಯಲ್ಲಿ ಅರಳುತ್ತಿರುವ ಹೂ ಗೊಂಚಲುಗಳು. ಈ ಮೂರೂ ಋತುಮಾನದಲ್ಲೂ ಅಗತ್ಯ ಪೋಷಕಗಳು ಬೇಕು.
- ಮಳೆಗಾಲ ಪ್ರಾರಂಭದಲ್ಲಿ ಪೋಷಕಗಳ ಕೊಟ್ಟರೆ ಅದು ಗರಿಷ್ಟ ಪ್ರಮಾಣದಲ್ಲಿ ಬಳಕೆಯಾಗುತ್ತದೆ.
- ಈಗ ಸಾರಜನಕ ಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲೂ, ರಂಜಕ ಮತ್ತು ಪೊಟ್ಯಾಶ್ ಗೊಬ್ಬರಗಳನ್ನು ನಿಗದಿತ ಪ್ರಮಾಣದಲ್ಲೂ ಕೊಡಬೇಕು.
- ಕಾರಣ ಮಳೆ ಸಿಡಿಲು ಮಿಂಚುಗಳಿಂದ ಸಾಕಷ್ಟು ಸಾರಜನಕ ಸಸ್ಯಗಳಿಗೆ ವಾತಾವರಣದಿಂದ ಲಭ್ಯವಾಗುತ್ತದೆ.
- ಜೊತೆಗೆ ಸಾರಜನಕವು ರೋಗ ಸಾಧ್ಯತೆಯನ್ನೂ ಹೆಚ್ಚು ಮಾಡುತ್ತದೆ.
- ಈಗ ಕೊಡುವ ಗೊಬ್ಬರವು ಮಣ್ಣೂ ತೇವಾಂಶ ಇರುವ ಕಾರಣ ಸಸ್ಯಗಳಿಗೆ ಚೆನ್ನಾಗಿ ದೊರೆಯುತ್ತದೆ.ಫಸಲು ಹೆಚ್ಚಾಗಲು ನೆರವಾಗುತ್ತದೆ.
ಎಷ್ಟು ಗೊಬ್ಬರ ಕೊಡಬೇಕು:
- ಫಸಲು ಬರುತ್ತಿರುವ ಅಡಿಕೆ ಮರಗಳಿಗೆ ಶಿಫಾರಸು ಮಾಡಿರುವುದು ಸಾರಜನಕ – ರಂಜಕ ಮತ್ತು ಪೊಟ್ಯಾಶ್ ಗೊಬ್ಬರಗಳು.
- ಒಂದು ಸಾಮಾನ್ಯ ತಳಿಯ ಮರಕ್ಕೆ ಸಾರಜನಕ 100 ಗ್ರಾಂ ರಂಜಕ 40 ಗ್ರಾಂ ಮತ್ತು ಪೊಟ್ಯಾಶ್ 140 ಗ್ರಾಂ, ಸುಧಾರಿತ ತಳಿಗೆ ಅಥವಾ ಆಧಿಕ ಇಳುವರಿ ಕೊಡಬಲ್ಲ ತಳಿಗಳಿಗೆ 150 ಗ್ರಾಂ ಸಾರಜನಕ , 60 ಗ್ರಾಂ ರಂಜಕ ಮತ್ತು 210 ಗ್ರಾಂ ಪೊಟ್ಯಾಶ್ ಗೊಬ್ಬರ ಶಿಫಾರಿಸಲ್ಪಟ್ಟಿದೆ.
- ನಿಮಗೆ ಅಧಿಕ ಇಳುವರಿ ಬೇಕಾದರೆ ಈ ಪ್ರಮಾಣದಲ್ಲಿ ಗೊಬ್ಬರ ಕೊಟ್ಟರೆ ಅನುಕೂಲ.
- ಗೊಬ್ಬರ ತುಸು ಹೆಚ್ಚಾದರೆ ತೊಂದರೆ ಇಲ್ಲ. ಆದರೆ ಅಸಮತೋಲನ ಆಗಬಾರದು.
ಯಾವ ಗೊಬ್ಬರ:
- ಫಸಲಿಗೆ ಸಾರಜನಕ ಮೂಲವಾಗಿ ಯೂರಿಯಾವನ್ನೂ, ರಂಜಕ ಗೊಬ್ಬರವಾಗಿ ಶಿಲಾ ರಂಜಕ ಅಥವಾ ಡಿಎಪಿ ಅಥವಾ ಸೂಪರ್ ಫೋಸ್ಫೇಟ್ ಹಾಗೂ ಪೊಟ್ಯಾಶ್ ಮೂಲವಾಗಿ ಮ್ಯುರೇಟ್ ಆಫ್ ಪೊಟ್ಯಾಶ್ ಗೊಬ್ಬರವನ್ನೂ ಕೊಡುವುದು ರೂಢಿ.
- ಇದನ್ನು ಕನಿಷ್ಟ ಮೂರು ಕಂತುಗಳಲ್ಲಿ ವಿಭಜಿಸಿ ಕೊಡಬೇಕು.
- ಯೂರಿಯಾ ಗೊಬ್ಬರದಲ್ಲಿ 46% ಸಾರಜನಕ ಅಂಶ ಇರುತ್ತದೆ. 150 ಗ್ರಾಂ ಸಾರಜನಕ ಆಗಬೇಕಿದ್ದರೆ ನಾವು 330 ಗ್ರಾಂ ಯೂರಿಯಾವನ್ನು ಕೊಡಬೇಕು.
- ಮಳೆಗಾಲ ಪೂರ್ವದ ಕಂತಿನಲ್ಲಿ ಇದರ ¼ ಪ್ರಮಾಣವನ್ನು ಕೊಡುವುದು ಸೂಕ್ತ.
- ಶಿಲಾ ರಂಜಕವನ್ನು ಕೊಡುವುದಾದರೆ ಅದರಲ್ಲಿ 18% ರಂಜಕ ಇರುತ್ತದೆ. 60 ಗ್ರಾಂ ರಂಜಕಕ್ಕಾಗಿ 330-340 ಗ್ರಾಂ ಶಿಲಾ ರಂಜಕವನ್ನು ಕೊಡಬೇಕು.
- ಇದರಲ್ಲಿ 1/3 ಭಾಗವನ್ನು ಮಳೆಗಾಲದ ಪ್ರಾರಂಭದಲ್ಲಿ ಕೊಡಬೇಕು.
- ಡಿ ಎಪಿ ಗೊಬ್ಬರವನ್ನು ಕೊಡುವುದಾದರೆ ಅದರಲ್ಲಿ 48% ರಂಜಕಾಂಶ ಇರುತ್ತದೆ. ಮತ್ತು 18 % ಸಾರಜನಕ ಅಂಶ ಇರುತ್ತದೆ.
- ರಂಜಕದ ಅವಶ್ಯಕತೆಗಾಗಿ 125 ಗ್ರಾಂ ಡಿಎಪಿ ಬೇಕು. ಇದರಲ್ಲ 22.5 ಗ್ರಾಂ ಸಾರಜನಕವೂ ದೊರೆಯುತ್ತದೆ.
- ಆಗ ಯೂರಿಯಾ ರೂಪದಲ್ಲಿ ಬಳಸುವ 330 ಗ್ರಾಂ ಯೂರಿಯಾದಲ್ಲಿ 50 ಗ್ರಾಂ ಯೂರಿಯಾವನ್ನು ಕಡಿಮೆ ಮಾಡಬೇಕು.
DAP ಬಳಸುವವರು 280 ಗ್ರಾಂ ಯೂರಿಯಾ ಮತ್ತು 125 ಗ್ರಾಂ DAP ಬಳಸ ಬೇಕು. ಇದನ್ನು ವಿಭಜನೆ ಮಾಡಿ ಮಳೆಗಾಲ ಪೂರ್ವದಲ್ಲಿ 45 ಗಾಂ DAP ಮತ್ತು 80 ಗ್ರಾಂ ಯೂರಿಯಾ ಸಾಕು.
- ಮ್ಯೂರೇಟ್ ಆಫ್ ಪೊಟ್ಯಾಶ್ ಕೊಡುವವರು ಒಟ್ಟು ಕೊಡಬೇಕಾದ ಗೊಬ್ಬರ 350 ಗ್ರಾಂ. ಇದರಲ್ಲಿ 1/3 ಭಾಗವನ್ನು ಅಂದರೆ 120 ಗ್ರಾಂ ತನಕ ಕೊಡಬೇಕು.
- ಸೂಫರ್ ಫೋಸ್ಫೇಟ್ ಕೊಡುವವರು ಅದರಲ್ಲಿ 16 % ರಂಜಕ ಇರುವ ಕಾರಣ 60 ಗ್ರಾಂ ಗಾಗಿ 400 ಗ್ರಾಂ ವರ್ಷಕ್ಕೆ ಬಳಸ ಬೇಕು.
- ಮಳೆಗಾಲ ಪೂರ್ವದ ಕಂತಾಗಿ 125- 150 ಗ್ರಾಂ ತನಕವೂ ಬಳಸಬಹುದು.
- ರಂಜಕ ಪೋಷಕಾಂಶವು ನಿರ್ಧರಿತ ಪ್ರಮಾಣಕ್ಕಿಂತ 10-15 ಗ್ರಾಂ ಹೆಚ್ಚಾದರೂ ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಗೆ ಒಳ್ಳೆಯದು.
ಕಾಂಪ್ಲೆಕ್ಸ್ ಗೊಬ್ಬರಗಳು:
- ಕಾಂಪ್ಲೆಕ್ಸ್ ಗೊಬ್ಬರ ಕೊಡುವವರು ಅಧಿಕ ಮಳೆಯಾಗುವ ಹುಳಿ ಮಣ್ಣಿಗೆ ನೈಟ್ರೋ ಫೋಸ್ಫೇಟ್ ಗೊಬ್ಬರವಾದ ಸುಫಲಾ 15:15:15 ಪೋಷಕವನ್ನು ಕೊಡಬಹುದು.
- ಮಳೆಗಾಲದ ಕಂತು ಗರಿಷ್ಟ 250 ಗ್ರಾಂ ತನಕ ಹಾಕಬಹುದು. ಇದರಲ್ಲಿ ತಲಾ 37.5 ಗ್ರಾಂ ಸಾರಜನಕ, ರಂಜಕ ಮತು ಪೊಟ್ಯಾಶ್ ಸಿಗುತ್ತದೆ.
- ಮುಂದಿನ ಕಂತಿನಲ್ಲಿ ಅದನ್ನೇ ಪುನರಾವರ್ತಿಸಿದರೆ ರಂಜಕ ಹೆಚ್ಚಾಗುತ್ತದೆ. ಆಗ ಬದಲಾಯಿಸಬೇಕು.
- 10-26-26 ಕಾಂಪ್ಲೆಕ್ಸ್ ಗೊಬ್ಬರವನ್ನು ಕೊಡುವವರು ಗರಿಷ್ಟ 150 ಗ್ರಾಂ ತನಕ ಕೊಡಬಹುದು.
- ಮರಗಳು ಸಾರಜನಕ ಕೊರತೆ ಅನುಭವಿಸುತ್ತಿದ್ದರೆ ಅದಕ್ಕೆ 100 ಗ್ರಾಂ ತನಕ ಯೂರಿಯಾ ಸೇರಿಸಬಹುದು.
- 10-26-26 ಗೊಬ್ಬರದಲ್ಲಿ 100 ಗ್ರಾಂ ನಲ್ಲಿ 10 ಗ್ರಾಂ ಸಾರಜನಕ, 26 ಗ್ರಾಂ ರಂಜಕ ಮತ್ತು 26 ಗ್ರಾಂ ಪೊಟ್ಯಾಶ್ ಮಾತ್ರ ಇರುತ್ತದೆ.
- ಸಾರಜನಕ ಹೆಚ್ಚು ಇರುವ ಕೊಟ್ಟಿಗೆ ಗೊಬ್ಬರ ಹೆಚ್ಚು ಕೊಡುವಲ್ಲಿ ಇದು ಸಾಕಾಗುತ್ತದೆ.
- ಇಲ್ಲವಾದರೆ ಸಾರಜನಕ ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿಗೆ ಇದು ಉತ್ತಮ.
- 20:20:0-13 ಗೊಬ್ಬರ ಬಳಸುವವರು ಕಡ್ದಾಯವಾಗಿ ಪೊಟ್ಯಾಶ್ ಗೊಬ್ಬರ ಬಳಸಲೇ ಬೇಕು.
- ಇದರಲ್ಲಿ ಪೊಟ್ಯಾಶ್ ಇಲ್ಲ. ಈ ಗೊಬ್ಬರವನ್ನು ಮಳೆಗಾಲದ ಮೊದಲ ಕಂತಿಗೆ 200 ಗ್ರಾಂ ಬಳಸಬಹುದು.
- ಇದಕ್ಕೆ ಕನಿಷ್ಟ100 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಸೇರಿಸಬೇಕು.
- ಕಾಂಪ್ಲೆಕ್ಸ್ ಗೊಬ್ಬರಗಳಲ್ಲಿ ಬೇರೆ ಬೇರೆ ಪ್ರಮಾಣ ಇದ್ದು, ಅದರಲ್ಲಿ ಶೇಖಡಾವಾರು ನಮೂದಿಸಿದಂತೆ ಕೊಡಬೇಕು.
ಸಮತೋಲನ ಗೊಬ್ಬರ:
- ಯೂರಿಯಾ ರಾಕ್ ಫೋಸ್ಪೇಟ್ ಮತ್ತು ಮ್ಯುರೇಟ್ ಆಫ್ ಪೊಟ್ಯಾಶ್ ಕೊಡುವವರು 250-300 ಗ್ರಾಂ ಯೂರಿಯಾ, ರಾಕ್ ಫೋಸ್ಪೇಟ್ 300 ಗ್ರಾಂ ಮತ್ತು 250-300 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಕೊಡಬಹುದು.
- ಇದು ಸರಿ ಸುಮಾರು ಸಮತೋಲನ ಪ್ರಮಾಣವಾಗಿರುತ್ತದೆ. (ಇಲ್ಲಿ ಸ್ವಲ್ಪ ಹೆಚ್ಚು ಪ್ರಮಾಣ ಹೇಳಲಾಗಿದೆ. ಇದರಿಂದ ತೊಂದರೆ ಇಲ್ಲ)
- ಇದನ್ನು ಮೂರು ಭಾಗ ಮಾಡಿ ಕೊಡಬೇಕು.
- 15:15:15 ಕೊಡುವವರು 350-400 ಗ್ರಾಂ ಮಾತ್ರ ಅದನ್ನು ಕೊಡಬೇಕು.
- ನಂತರ ಯೂರಿಯಾ 150 ಗ್ರಾಂ ಮತ್ತು ಪೊಟ್ಯಾಶ್ 150-175 ಗ್ರಾಂ ಕೊಡಬೇಕು.
- ಇದನ್ನು ಮೂರು ಭಾಗ ಮಾಡಿ ಕೊಡಬೇಕು.
- 10:26:26 ಕೊಡುವವರು ಗರಿಷ್ಟ 250 ಗ್ರಾಂ ತನಕ ಮಾತ್ರ ಕೊಡಬಹುದು.
- ಉಳಿದಂತೆ ಯೂರಿಯಾ 200 ಗ್ರಾಂ, ಪೊಟ್ಯಾಶ್ (MOP) 150 ಗ್ರಾಂ ಕೊಟ್ಟಾಗ ಸಮತೋಲನ ಆಗುತ್ತದೆ.
- ಇದನ್ನು ಮೂರು ಭಾಗ ಮಾಡಿ ಕೊಡಬೇಕು.
- 20:20:0:13 ಕೊಡುವವರು 250 ರಿಂದ ಗರಿಷ್ಟ 300 ಗ್ರಾಂ ತನಕ ಕೊಡಬಹುದು.
- ನಂತರ 125 ರಿಂದ ಗರಿಷ್ಟ 150 ಗ್ರಾಂ ಯೂರಿಯಾ, ಮತ್ತು ಮ್ಯುರೇಟ್ ಆಫ್ ಪೊಟ್ಯಾಶ್ 150 ಗ್ರಾಂ ವಿಭಜಿಸಿ ಕೊಡಬೇಕು
- DAP ಕೊಡುವಾಗ ಗರಿಷ್ಟ 125 ಗ್ರಾಂ ಕೊಡಬೇಕು.
- ಜೊತೆಗೆ ಅಷ್ಟು ಪ್ರಮಾಣಕ್ಕೆ 200 ಗ್ರಾಂ ಯೂರಿಯಾ ಮತ್ತು 250 ಗ್ರಾಂ MOP ಕೊಡಬೇಕು.
- ಇತರ ಗೊಬ್ಬರ ಕೊಡುವಾಗ ಅದರಲ್ಲಿ ನಮೂದಾದ ಪ್ರಮಾಣಕ್ಕೆ ಅನುಗುಣವಾಗಿ ಸೇರಿಸಿಕೊಳ್ಳಬೇಕು..
ಹೇಗೆ ಕೊಡಬೇಕು?
- ಸಾಮಾನ್ಯವಾಗಿ ಹೆಚ್ಚಿನವರು ಬುಡ ಬಿಡಿಸಿ ಗೊಬ್ಬರ ಹಾಕುತ್ತಾರೆ.
- ಬುಡ ಬುಡಿಸಿ. ಆದರೆ ಬೇರುಗಳಿಗೆ ಗಾಯ ಆಗದೆ ಇರುವಂತೆ ಬಿಡಿಸಿ.
- ಮೇಲಿನ ಎಲ್ಲಾ ಗೊಬ್ಬರಗಳೂ ಮಣ್ಣಿನಲ್ಲಿ ಕರಗಿ ಸೂಕ್ಷ್ಮಾಣು ಜೀವಿಗಳು ಬಳಕೆ ಮಾಡಿ ಸಸ್ಯಗಳಿಗೆ ದೊರೆಯುವ ಕಾರಣ ಹಾಗೂ ಯೂರಿಯಾ ಗೊಬ್ಬರ ಆವಿಯಾಗುವ ಕಾರಣ ಮಣ್ಣಿಗೆ ಸೇರಿಸುವುದು ಉತ್ತಮ.
- ನಾಲ್ಕು ಬದಿ ತೂತು ಮಾಡಿ ಕೊಡಬಹುದು.
- ನಾಲ್ಕು ಬದಿಯಲ್ಲಿ ಸ್ವಲ್ಪ ಸ್ವಲ್ಪ ಮಣ್ಣು ಕೆರೆದು ಕೊಡಬಹುದು.
- ಗೊಬ್ಬರ ಹಾಕಿ ಸಾವಯವ ತ್ಯಾಜ್ಯಗಳನ್ನು ಮುಚ್ಚಿಯೂ ಬಿಡಬಹುದು.
- ಒಟ್ಟಿನಲ್ಲಿ ಮೇಲೆಯೇ ಚೆಲ್ಲಿ ಬಿಡುವುದು ಸೂಕ್ತವಲ್ಲ.
NPK ಪ್ರಮಾಣ ನೋಡಿ ಕೊಡಿ:
- ರೈತರು ತಾವು ಬಳಸುವ ಗೊಬ್ಬರದಲ್ಲಿ ಏನು ಪ್ರಮಾಣ ನಮೂದಿಸಿದೆ ಎಂದನ್ನು ನೋಡಿಕೊಂಡು ಹೊಂದಾಣಿಕೆ ಮಾಡಬೇಕು.
- ಮೊದಲೇ ಹೇಳಿದಂತೆ ( ಉದಾ) NPK 15:15:15 17:17:17 ಅಥವಾ 18:48:0 ಗಮನಿಸಿ ಗೊಬ್ಬರ ಕೊಡಿ.
ಮೂರೂ (ಸಾರಜನಕ, ರಂಜಕ ಮತ್ತು ಪೊಟ್ಯಾಶ್) ಗೊಬ್ಬರವನ್ನೂ ಕೊಡುವುದರಿಂದ ಮಾತ್ರ ಮರದ ಅರೋಗ್ಯ ಉತ್ತಮವಾಗಿರುತ್ತದೆ ಎಂಬುದನ್ನು ಎಲ್ಲರೂ ಅಗತ್ಯವಾಗಿ ಗಮನಿಸಬೇಕು.
- ಸಾವಯವ ಗೊಬ್ಬರ ಕೊಡುವವರು ಪ್ರಮಾಣಕ್ಕನುಗುಣವಾಗಿ ಅದನ್ನು ಹಾಕಬೇಕು. ಬಹುತೇಕ ಸಾವಯವ ಗೊಬ್ಬರದಲ್ಲಿ ಪೊಟ್ಯಾಶ್ ಕಡಿಮೆ ಇರುವ ಕಾರಣ ಮರಸುಟ್ಟ ಬೂದಿಯನ್ನು ಬಳಕೆ ಮಾಡಿದರೆ ಉತ್ತಮ ಫಲಿತಾಂಶ.
ಇಲ್ಲಿ ಕೊಡಮಾಡಲ್ಪಟ್ಟ ಪ್ರಮಾಣ ಒಂದು ಕಂತಿನದ್ದು ಮಾತ್ರ. ಇದಲ್ಲದೆ ಇನ್ನು ಕನಿಷ್ಟ 2 ಕಂತು ಗೊಬ್ಬರಗಳನ್ನು ಕೊಡಬೇಕಾಗುತ್ತದೆ. ಅಗ ಶಿಫಾರಸು ಮಾಡಲ್ಪಟ್ಟ ಪ್ರಮಾಣ ಪೂರೈಕೆ ಮಾಡಿದಂತಾಗುತ್ತದೆ. ಅಧಿಕ ಮಳೆಯಾಗುವ ಕಡೆ ಮಣ್ಣಿಗೆ ಎಕ್ರೆಗೆ 250 ಸುಣ್ಣ ಕೊಟ್ಟು 10 ದಿನದ ಬಳಿಕ ಗೊಬ್ಬರ ಕೊಟ್ಟರೆ ಫಲಿತಾಂಶ ಉತ್ತಮವಾಗಿರುತ್ತದೆ. ಗೊಬ್ಬರ ಕೊಡುವಾಗ ಅದು ತೊಳೆದು ಹೋಗದಂತೆ ಕೊಡಿ.
14-6-21 ರಾಸಾಯನಿಕ ಗೊಬ್ಬರದ ಬಗ್ಗೆಯೂ ಮಾಹಿತಿ ತಿಳಿಸಿ.
What’s the best method to give frtilizer to areca plants