ಮಳೆಗಾಲ ಬಂದರೆ ಸಾಕು ಕರಿಮೆಣಸಿನ ಬೆಳೆಗೆ ಯಾವಾಗ ರೋಗ ಬರುತ್ತದೆ ಎಂಬುದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ.ಇದು ಕರಿಮೆಣಸು ಮಾತ್ರವಲ್ಲ ತೀರಾ ಸಪುರ ( ತೆಲೆಕೂದಲು ತರಹದ ) ಬೇರುಗಳಿರುವ ಎಲ್ಲಾ ಬೆಳೆಗಳೂ ಮಳೆಗಾಲ ಅಥವಾ ನೀರು ಹೆಚ್ಚಾಗಿ ಬೇರಿಗೆ ಉಸಿರು ಕಟ್ಟಿದ ತರಹದ ಸನ್ನಿವೇಶ ಬಂದಾಗ ರೋಗಕ್ಕೆ ತುತ್ತಾಗುತ್ತದೆ.
- ಕೆಲವು ಕಡೆ ರೋಗ ಹೆಚ್ಚು, ಇನ್ನು ಕೆಲವು ಕಡೆ ಕಡಿಮೆ.
- ಇದಕ್ಕೆ ಕಾರಣ ಅವರ ನಿರ್ವಹಣೆ.
- ಕರಿಮೆಣಸಿನ ಬಳ್ಳಿಯ ಬುಡ ಭಾಗದಲ್ಲಿ ಸುಮಾರು 20 ನಿಮಿಷಗಳ ಕಾಲ ನೀರು ಚಲಿಸದೇ ನಿಂತರೆ ಆ ಬಳ್ಳಿಯ ಬೇರು ಕೊಳೆಯುತ್ತದೆ. ರೋಗ ಬರುತ್ತದೆ.
- ರೋಗದ ಪ್ರಾರಂಭಿಕ ಚಿನ್ಹೆ ಎಲೆಯಲ್ಲಿ ಕಾಣಿಸುತ್ತದೆ.
ಹೇಗೆ ನಿರ್ವಹಣೆ ಮಾಡಬೇಕು:
- ಮಳೆಗಾಲ ಪ್ರಾರಂಭವಾಗುವಾಗ ಮೆಣಸಿನ ಬಳ್ಳಿಯ ಎಲೆಗಳಿಗೆ ಸಿಂಪರಣೆ ಮಾಡಲೇ ಬೇಕು.
- ಅಡಿಕೆ ಮರಗಳಿಗೆ ಬಿಡುವ ಬೋರ್ಡೋ ದ್ರಾವಣ ಇದಕ್ಕೂ ತಗಲಿದೆ ಅಷ್ಟೇ ಸಾಕು ಎಂದು ಬಿಡಬೇಡಿ.
- ಮೆಣಸಿನ ಬಳ್ಳಿಗೆ ಎಲ್ಲಾ ಎಲೆಗಳಿಗೂ ಬೋರ್ಡೋ ದ್ರಾವಣ ತಗಲುವಂತೆ ಸಿಂಪರಣೆ ಮಾಡಲೇ ಬೇಕು.
- ಅಧಿಕ ಒತ್ತಡದಲ್ಲಿ ಸಿಂಪಡಿಸಿದಾಗ ಎಲೆಗಳು ಅಲುಗಾಡಿ ಎರಡೂ ಭಾಗಕ್ಕೂ ದ್ರಾವಣ ತಗಲುತ್ತದೆ.
- ಬೋರ್ಡೋ ದ್ರಾವಣವು ರೋಗಕಾರಕ ಶಿಲೀಂದ್ರದ ಪ್ರವೇಶವನ್ನು ತಡೆಯುತ್ತದೆ.
- ಬುಡ ಭಾಗದಲ್ಲಿ ಹಬ್ಬಿರುವ ಬಳ್ಳಿಯನ್ನು ತುಂಡು ಮಾಡಿ ತೆಗೆಯಬೇಕು, ಅಥವಾ ಅದನ್ನು ಎತ್ತಿ ಕಟ್ಟಬೇಕು.
- ನೆಲದಲ್ಲಿ ಇರುವ ಎಲೆಗಳಲ್ಲಿ ಸ್ವಲ್ಪ ಕೊಳೆತ ಕಂಡು ಬಂದರೆ ಅದು ಇಡೀ ಬಳ್ಳಿಗೆ ಹಬ್ಬಿ ರೋಗ ಉಲ್ಬಣವಾಗುತ್ತದೆ.
ಬಳ್ಳಿಯ ಬುಡ ಭಾಗದ ಬಳ್ಳಿ ಕಾಂಡಕ್ಕೆ ಶೇ 1೦ ರ ಬೋರ್ಡೋ ಪೈಂಟ್ ಅನ್ನು ಲೇಪನವಾಗುವಂತೆ ಸಿಂಪಡಿಸಬೇಕು. ಅಥವಾ ಬ್ರಷ್ ಮೂಲಕ ಪೈಂಟ್ ಮಾಡಬೇಕು. (1 ಕಿಲೋ ಸುಣ್ಣ ಮತ್ತು 1 ಕಿಲೋ ತುತ್ತೆ,10 ಲೀ. ನೀರು) .
- ಬುಡ ಭಾಗಕ್ಕೆ ಬಳ್ಳಿಯ ಗಾತ್ರಕ್ಕನುಗುಣವಾಗಿ 1-3 ಲೀ. ತನಕ ಬೋರ್ಡೋ ದ್ರಾವಣವನ್ನು ಡ್ರೆಂಚಿಂಗ್ ಮಾಡಬೇಕು.
ಬೋರ್ಡೋ ದ್ರಾವಣವನ್ನು ಸಿಂಪಡಿಸುವಾಗ ಬರೇ ಎಲೆಯ ಮೇಲ್ಮೈ ಮಾತ್ರವಲ್ಲ, ಅಡಿ ಭಾಗಕ್ಕೆ ಬೀಳುವಂತೆ ಅಗತ್ಯವಾಗಿ ಸಿಂಪರಣೆ ಮಾಡಬೇಕು. ಇದು ಹೆಚ್ಚು ಸಮಯ ಅಂಟಿಕೊಂಡು ಉಳಿದು ರೋಗ ಬಾರದಂತೆ ರಕ್ಷಣೆ ಕೊಡುತ್ತದೆ.
ಸಿಂಪರಣೆಯ ಉದ್ದೇಶ:
- ಬೋರ್ಡೋ ದ್ರಾವಣವನ್ನು ಸಿಂಪಡಿಸುವುದರಿಂದ ಎಲೆಗಳು ಕೊಳೆತು ಬರುವಂತಹ ರೋಗವಾದ ಶೀಘ್ರ ಸೊರಗು ರೋಗದ ಸಾಧ್ಯತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
- ಶೀಘ್ರ ಸೊರಗು ರೋಗಕ್ಕೆ ಎಲೆ ಕೊಳೆತು ಉದುರಿ ಬೀಳುವುದು ಒಂದು ಕಾರಣ.
- ಬಳ್ಳಿಯ ಬುಡ ಭಾಗಕ್ಕೆ ಬೋರ್ಡೋ ಪೈಂಟ್ ಲೇಪನ ಮಾಡುವುದರಿಂದ ಮಳೆ ಹನಿಗೆ ನೆಲದ ಮಣ್ಣು ತಗಲಿ ರೋಗ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
ಬುಡ ಭಾಗದ ಸ್ವಚ್ಚತೆ:
- ಮಳೆಗಾಲದಲ್ಲಿ ಮೆಣಸಿನ ಬಳ್ಳಿ ಇರುವಲ್ಲಿ ನೀರು ಹಿಡಿದಿಟ್ಟುಕೊಳುವ ಯಾವುದೇ ಸಾವಯವ ವಸ್ತುಗಳನ್ನು ಹಾಕಬೇಡಿ.
- ಬುಡ ಭಾಗಕ್ಕೆ ನೀರು ಯಾವ ಕಡೆಯಿಂದಲೂ ಒಳ ಪ್ರವೇಶಿಸದಂತೆ ಮಾಡಿ. ಬುಡ ಭಾಗದ ನೀರು ತಕ್ಷಣ ಇಳಿದು ಹೊರ ಹೋಗುವಂತೆ ಇರಲಿ.
- ಮೆಣಸಿನ ಬಳ್ಳಿ ಇರುವ ಭಾಗ ಏರು ಸ್ಸ್ಥಿತಿಯಲ್ಲಿದ್ದು, ಎಷ್ಟೇ ಮಳೆ ಬಂದರೂ ಒಂದು ತೊಟ್ಟೂ ನೀರು ಅಲ್ಲಿ ತಂಗದಂತೆ ಇರಲಿ.
- ಮರಳು ಹೊರತಾಗಿ ಯಾವುದೇ ನೀರು ಹಿಡಿದಿಟ್ಟುಕೊಳ್ಳುವ ಮಣ್ಣು ಹಾಕಬಾರದು.
ಬುಡಕ್ಕೆ ಪ್ಲಾಸ್ಟಿಕ್ ಹೊದಿಕೆ:
- ಮೆಣಸಿನ ಬಳ್ಳಿಯ ಬುಡಕ್ಕೆ ಪಾಲಿಥೀನ್ ಹಾಳೆಯನ್ನು ಹೊದಿಸಿ ಬುಡ ಭಾಗದಲ್ಲಿ ನೀರು ನಿಲ್ಲದಂತೆ ಮಾಡಬಹುದು.
- ಇದನ್ನು ಉತ್ತಮ ಬೆಳೆಗಾರರೆಲ್ಲಾ ಮಾಡುತ್ತಾರೆ. ಇದರಿಂದ ಬುಡ ಭಾಗದ ಮಣ್ಣು ಸಿಡಿದು ಬಳ್ಳಿಗೆ ಬೀಳುವುದಿಲ್ಲ.
- ಬಹುತೇಕ ರೋಗ ಕಾರಕಗಳು ಮಣ್ಣ್ಣಿನ ಮೂಲಕ ಬಳ್ಳಿಗೆ ತಗಲುವ ಕಾರಣ ಈ ವಿಧಾನದಲ್ಲಿ ಅದನ್ನು ನಿಯಂತ್ರಿಸಬಹುದು.
ಈ ವಿಧಾನದಲ್ಲಿ ರೋಗ ಸಾಧ್ಯತೆಯನ್ನು ಬಹಳಷ್ಟು ಕಡಿಮೆ ಮಾಡಬಹುದು. ನಿರ್ವಹಣೆಯನ್ನು ರೋಗ ಬರುವುದಕ್ಕೆ ಮುಂಚೆ ಮಾಡಬೇಕು. ನಂತರ ಯಾವುದೇ ಪ್ರಯೋಜನ ಇಲ್ಲ.