ಕರಿಮೆಣಸಿನ ಬಳ್ಳಿಗೆ ರೋಗ ಬರುತ್ತದೆ. ಇದರಿಂದಾಗಿ ಬಳ್ಳಿ ಸಾಯುತ್ತದೆ ಎಂಬುದು ನಮಗೆಲ್ಲಾ ಗೊತ್ತಿರುವ ವಿಚಾರ. ಆದರೆ ರೋಗ ಬಂದು ಬಳ್ಳಿ ಸಾಯುವುದಲ್ಲದೆ ಕೀಟದ ಕಾರಣದಿಂದಲೂ ಬಳ್ಳಿ ಸಾಯುತ್ತದೆ. ಇದು ಹರಡುವ ಕೀಟವಾಗಿದ್ದು, ರೋಗದಿಂದ ಬಳ್ಳಿ ಒಣಗಿದಂತೆ ಇದರಿಂದಲೂ ಒಣಗುತ್ತದೆ. ಕರೆಗಳೂ ಉದುರುತ್ತದೆ. ಎಲೆಗಳೂ ಉದುರುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಗದ್ದೆ ಬೇಸಾಯ ಮಾಡುವವರಿಗೆ ಬೇಸಾಯ ಕೈ ಹಿಡಿಯಬೇಕಿದ್ದರೆ ದಿನಾ ಗದ್ದೆಗೆ ಸುತ್ತು ಬರಬೇಕಂತೆ. ಅದಕ್ಕಾಗಿಯೇ ಗದ್ದೆಗೆ ಹುಣಿಯೂ ಇರುತ್ತದೆ. ಉತ್ತಮ ಬೇಸಾಯಗಾರರು ಬೆಳಗ್ಗಿನ ಹೊತ್ತು ಗದ್ದೆಗೆ ಸುತ್ತು ಬರುವುದು ಕ್ರಮ. ತೀರ್ಥಹಳ್ಳಿಯ ಕೃಷಿಕ ದಿ.ಶ್ರೀ.ಪುರುಷೋತ್ತಮ ರಾಯರು ಹೇಳುತ್ತಿದ್ದರು, “ಮರಗಳನ್ನು ಮಾತನಾಡಿಸಿ. ಅದುವೇ ಗೊಬ್ಬರ, ಅದರಿಂದಲೇ ಫಸಲು ಹೆಚ್ಚಾಗುತ್ತದೆ” ಇದು ಸಸ್ಯ ಸಂಗತಿ.ತೋಟದ ಮರಗಳನ್ನು ಮಾತಾಡಿಸುವುದು ಎಂದರೆ ತೋಟದಲ್ಲಿ ದಿನಾ ಸುತ್ತಾಡುವುದು. ಮರಗಳ ಬುಡ, ತುದಿ ಎಲೆ ಕಾಂಡ ಎಲ್ಲವನ್ನೂ ಗಮನಿಸುತ್ತಾ ಇರುವುದು. ಆಗ ಗಿಡ ಮರಗಳಿಗೆ ಏನಾಗಿದೆ ಎಂಬುದು ನಮಗೆ ಗೊತ್ತಾಗುತ್ತದೆ. ಆಗ ಅದಕ್ಕೆ ಬೇಕಾದ ಉಪಚಾರ ಮಾಡುತ್ತೇವೆ. ಇದರಿಂದಾಗಿ ಫಸಲು ಹೆಚ್ಚಾಗುತ್ತದೆ.ಕೃಷಿಕ ಯಾವುದನ್ನೂ ಬೇರೆಯವರು ಹೇಳುವುದನ್ನು ಕೇಳುವುದಲ್ಲ. ನಾವು ನೋಡಬೇಕು. ಅದನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ನಮಗೆ ಅದರ ವಿಷಯ ಬಹುತೇಕ ತಿಳಿಯುತ್ತದೆ. ಈ ವರ್ಷ ಮಳೆ ಕಡಿಮೆಯಾದ ಕಾರಣ ಕರಿಮೆಣಸಿಗೆ ರೋಗ ಕಡಿಮೆ. ಆದರೂ ಈಗ ಅಲ್ಲಲ್ಲಿ ಎಲೆಗಳು ಉದುರುತ್ತಿವೆ. ಬಳ್ಳಿಯೂ ಒಣಗುತ್ತಿವೆ, ತುದಿ ಭಾಗ ಸರಿ ಇದೆ. ಬುಡ ಭಾಗದಿಂದ ಈ ಸಮಸ್ಯೆ ಕಾಣುತ್ತಿದೆ. ಏನಿರಬಹುದು ಎಂದು ಸ್ವಲ್ಪ ಹೊತ್ತು ಅದನ್ನು ಗಮನ ಇಟ್ಟು ನೋಡಿದರೆ ಇದು ರೋಗ ಅಲ್ಲ ಬೇರೆ ಸಮಸ್ಯೆ ಎಂಬುದು ಅರಿವಿಗೆ ಬಂತು. ಎಲೆಯಲ್ಲಿ, ಬಳ್ಳಿಯಲ್ಲಿ, ಕರೆಗಳಲ್ಲಿ ಇದು ಹಿಂಡು ಹಿಂಡಾಗಿ ಅಂಟಿಕೊಂಡು ರಸ ಹೀರುತ್ತಾ ಅದರ ಜೀವ ಹಿಂಡುತ್ತವೆ. ಆ ಕಾರಣದಿಂದ ಬಳ್ಳಿ ಸಾಯುವ ಹಂತಕ್ಕೆ ಬಂದಿದೆ ಎಂಬುದು ತಿಳಿಯಿತು.
ಯಾವ ಕೀಟ:
- ರಸ ಹೀರುವ ಕೀಟಗಳಲ್ಲಿ ಹಿಟ್ಟು ತಿಗಣೆ, ಸಸ್ಯ ಹೇನು Aphid ಮತ್ತು ಸ್ಕೇಲ್ ಇನ್ಸೆಕ್ಟ್ (Scale insect) ಇವು ಬಹಳ ಹಾನಿ ಮಾಡುವವುಗಳಾಗಿರುತ್ತವೆ.
- ಇವು ಬೇರೆ ಬೇರೆ ಬೆಳೆಗಳಲ್ಲಿ ಬಹಳ ಹಾನಿ ಮಾಡುವವುದಿದೆ.
- ಅಡಿಕೆಯಲ್ಲಿ ಕಜ್ಜಿಕೀಟ ಹಾಗೆಯೇ ಇದು ಕಾಯಿಗಳ ಮೇಲೆ ಎಲೆಗಳ ಮೇಲೆ ಹಾನಿಮಾಡುವುದನ್ನು ಎಲ್ಲರೂ ಕಂಡಿರಬಹುದು.
- ಅದೇ ರೀತಿಯಲ್ಲಿ ಕಬ್ಬಿನ ಬೆಳೆಯಲ್ಲಿ ಸಹ ಇವು ಹಾನಿ ಮಾಡುತ್ತವೆ.
- ಕರಿಮೆಣಸಿನ ಬಳ್ಳಿಗೆ ತೊಂದರೆ ಮಾಡುವ ಇದು mussel scale insect ಇದು ರಸ ಹೀರುವ ಕೀಟವಾಗಿದ್ದು, ಬರಿಗಣ್ಣಿನಲ್ಲಿ ಕಾಣುವಾಗ ಇದು ಏನು ಎಂದು ಕಾಣುವುದೇ ಇಲ್ಲ.
- ಇದು ಬಾದಿಸಿದ ಗೆಲ್ಲಿನಲ್ಲಿ ಮೊದಲು ಕಾಯಿಗಳು ಆಹಾರದ ಕೊರತೆ ಉಂಟಾಗಿ ಉದುರುತ್ತದೆ.
- ಕ್ರಮೇಣ ಎಲೆಗಳು ಉದುರುತ್ತದೆ. ಹಾಗೆಯೇ ಕೊನೆಗೆ ಗೆಲ್ಲು ಒಣಗಿ ಸಾಯುತ್ತದೆ.
- ಸತ್ತ ಗೆಲ್ಲುಗಳನ್ನು ನೋಡಿ ನಾವು ರೋಗವೆಂದು ಭ್ರಮಿಸಬಹುದು. ಅದರೆ ಅದು ರೋಗವಲ್ಲ .
- ಇಂತಹ ತೊಂದರೆ ಯನ್ನು ಕರಿಮೆಣಸು ಬಳ್ಳಿಯಲ್ಲಿ ಗುರುತಿಸಿದ್ದು ಅಪರೂಪವಾದರೂ ಕೆಲವು ಕಡೆ ಈ ಹಿಂದೆ ಕಂಡಂತೆ ಇದೇ ಸಮಸ್ಯೆ ಇರಬಹುದು ಎಂದೆನಿಸುತ್ತದೆ.
Mussel scale ಎಂಬುದನ್ನು ಕನ್ನಡದಲ್ಲಿ ಕಜ್ಜಿಕೀಟ ಅಥವಾ ಕಡ್ಡಿಕೀಟ ಎಂದು ಕರೆಯಬಹುದು. ಇದು ಗೆಲ್ಲಿಗೆ ಮತ್ತು ಕಾಯಿಗಳಿಗೆ ಹೆಚ್ಚಾಗಿ ಅಂಟಿಕೊಂಡು ಇರುವ ಪರಾವಲಂಬಿ ಕೀಟ. ಇದು ಬದುಕಲು ಯಾವುದಾದರೂ ಒಂದು ಆಸರೆ ಬೇಕು. ಇದರ ಗಾತ್ರ ಸುಮಾರು 3 ಮಿಲಿ ಮೀಟರುಗಳಷ್ಟು ಇರಬಹುದು. ಇದರ ಮೇಲ್ಮೈಯಲ್ಲಿ ಒಂದು ರೀತಿಯ ಮೇಣ ಇದ್ದು, ಅದು ಅಂಟಿಕೊಂಡು ಇರಲು ಸಹಕರಿಸುತ್ತದೆ. ಇದರಲ್ಲಿ ಬೇರೆ ಬೇರೆ ಉಪ ಜಾತಿಗಳೂ ಇವೆ. ಇದು ಬಾಧಿಸಿದ ಗೆಲ್ಲಿನ ಭಾಗ ಸ್ವಲ್ಪ ಬಣ್ಣ ಕಳೆದುಕೊಂಡಂತೆ ಕಾಣಿಸುತ್ತದೆ.
ನಿಯಂತ್ರಣ ವಿಧಾನ:
- ಇದು ಬೇಗನೆ ಹೆಚ್ಚಳವಾಗುವ ಕೀಟವಾಗಿದ್ದು, ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಅದನ್ನು ನಾಶಮಾಡುವುದು ಬಹಳ ಉತ್ತಮ.
- ಯಾವ ಗೆಲ್ಲಿಗೆ ಬಾಧಿಸಿದೆ ಅದನ್ನು ತೆಗೆದು ಸುಟ್ಟು ಹಾಕಬೇಕು. ಕರಿಮೆಣಸಿಗೆ ಬಾಧಿಸಿದಾಗ ಅದರ ಮುಖ್ಯ ಬಳ್ಳಿಯನ್ನು ತುಂಡು ಮಾಡಲಿಕ್ಕೆ ಆಗುವುದಿಲ್ಲ.
- ಕವಲು ಗೆಲ್ಲುಗಳನ್ನು ತುಂಡು ಮಾಡಬಹುದು. (Prune and dispose the effected parts) ಹಾಗೆಯೇ ಎಲೆಗಳ ಅಡಿ ಭಾಗದಲ್ಲೂ ಇವುಗಳ ವಾಸ್ತವ್ಯ ಇರುತ್ತದೆ.
- ಅಂತಹ ಎಲೆಗಳನ್ನು ಗುರುತಿಸಿ ಅದನ್ನು ತೆಗೆದು ಸುಟ್ಟು ಹಾಕಿ. ಉದುರಿದ ಕರೆಗಳಲ್ಲೂ ಇದು ಇರುತ್ತದೆ.
- ಅದನ್ನೂ ಸುಡುವುದು ಉತ್ತಮ. ಗರಿಷ್ಟ ಪ್ರಮಾಣದಲ್ಲಿ ಸುಟ್ಟು ಹಾಕುವ ಮೂಲಕ ನಾಶ ಮಾಡಿ ನಂತರ ಅಳಿದುಳಿದನ್ನು ನಾಶ ಮಾಡಲು ಡೈಮಿಥೊಯೇಟ್ ( ಟಾಗೋರ್, ರೋಗರ್) ಕೀಟನಾಶಕವನ್ನು 1 ಲೀ. ನೀರಿಗೆ 2.5 ಮಿಲಿಯಂತೆ ಮಿಶ್ರಣ ಮಾಡಿ ಸಿಂಪಡಿಸಿ.
- ಬರೇ ಆ ಬಳ್ಳಿಗೆ ಮಾತ್ರವಲ್ಲ. ಸುತ್ತಲಿನ ಬಳ್ಳಿಗೂ ಸಿಂಪರಣೆ ಮಾಡುವುದು ಉತ್ತಮ. ಆಗ ಅದರ ಸಂಖ್ಯೆ ಕಡಿಮೆಯಾಗುತ್ತದೆ.
- ಇದು ಗಾಳಿಯ ಮೂಲಕ ಮತ್ತು ಗೆಲ್ಲಿನ ಭಾಗಗಳ ಮೂಲಕ ಹರಡುತ್ತದೆ. ತ್ವರಿತವಾಗಿ ಹರಡುತ್ತದೆ.
- ಇವುಗಳ ಸಂತತಿ ಮೊಟ್ಟೆ Egg, ಮರಿ Nymph ಮತ್ತು ಪ್ರೌಡ Adult ಹಂತದಲ್ಲಿರುತ್ತದೆ.
- ಸಾಮಾನ್ಯವಾಗಿ ಇವುಗಳು ಸ್ಪ್ರೇ ಆಯಿಲ್ ಮೂಲಕ ಹತೋಟಿಯಾಗುತ್ತದೆ.
- ಸಣ್ಣ ಪ್ರಮಾಣದಲ್ಲಿದ್ದರೆ ಅದನ್ನು ವೆಟ್ಟೆಬಲ್ ಸಲ್ಪರ್ ಮೂಲಕವೂ ನಿಯಂತ್ರಣ ಮಾಡಲಿಕ್ಕಾಗುತ್ತದೆ.
- ಬೇವಿನ ಎಣ್ಣೆಯಲ್ಲೂ ಹತೋಟಿಯಾಗುತ್ತದೆ. ಕೆಲವು ಸಸ್ಯ ಜನ್ಯ ಔಷಧಿಗಳ ಬಳಕೆಯಿಂದ ಇದನ್ನು ನಿಯಂತ್ರಿಸಬಹುದು ಎಂಬುದಾಗಿ The journal on bio pesticide ಇದರಲ್ಲಿ ಉಲ್ಲೇಖವಿದೆ.
- ಬೇವಿನ ಎಲೆಯ ಕಷಾಯ, ಸೀತಾಫಲದ ಎಲೆ ಕಷಾಯ, ಆಡು ಸೊಪ್ಪು ( ನಾಯಿತುಳಸಿ) ಕಷಾಯ (Billygoat weed), ಪಾರ್ಥೇನಿಯಂ ಕಳೆಯ ಕಷಾಯ ಲಂಟಾನ ಸಸ್ಯದ ಎಲೆಯ ಕಷಾಯಗಳ ಸಿಂಪರಣೆ ಮಾಡುವುದರಿಂದ ಇದರ ನಿಯಂತ್ರಣ ಮಾಡಬಹುದು ಎನ್ನುತ್ತಾರೆ.
- ಇವು ಸುರಕ್ಷಿತ ನಿವಾರಣೋಪಾಯಗಳಾಗಿವೆ.ಗುಲಗುಂಜಿ ದುಂಬಿ ಇದರ ನೈಸರ್ಗಿಕ ಪರಭಕ್ಷಕವಾಗಿದ್ದು, ಅದರ ಸಂತತಿ ಕಡಿಮೆಯಾದಾಗ ಇದು ಹೆಚ್ಚಾಗುತ್ತದೆ.
- ಅನಿವಾರ್ಯ ಪರಿಸ್ಥಿತಿಗಳಲ್ಲಿ ಕೀಟನಾಶವನ್ನು ಹಿತಮಿತವಾಗಿ ಬಳಸಲೇಬೇಕಾಗುತ್ತದೆ.
ಕರಿಮೆಣಸಿನ ಬೆಳೆಗಾರರು ತಮ್ಮ ಬಳ್ಳಿ ಸಾಯುತ್ತದೆ ಎಂದು ತಕ್ಷಣ ಅದು ರೋಗ ಎಂಬ ತೀರ್ಮಾನಕ್ಕೆ ಬರಬೇಡಿ. ಜನವರಿಯಿಂದ ಮೊದಲ್ಗೊಂಡು ಕೊಯಿಲಿನ ತನಕ ಇದರ ತೊಂದರೆ ಹೆಚ್ಚು. ಒಮ್ಮೆ ಬಳ್ಳಿಯ ಎಲೆ, ಮತ್ತು ಗೆಲ್ಲುಗಳನ್ನು ಸೂಕ್ಷ್ಮವಾಗಿ ಗಮನಿಸಿ. ರೋಗದ ಕಾರಣದಿಂದ ಮಾತ್ರ ಬಳ್ಳಿ ಸಾಯುವುದಲ್ಲ. ಕೀಟದ ಕಾರಣದಿಂದಲೂ ಸಾಯುತ್ತದೆ. ನಿಧಾನವಾಗಿ ಬುಡ ಭಾಗದಿಂದ ಎಲೆಗಳು ಉದುರುತ್ತಾ, ಬಳ್ಳಿ ಒಣಗುತ್ತಾ ಕ್ರಮೇಣ ಇಡೀ ಬಳ್ಳಿಯೂ ಸಾಯಬಹುದು. ಗೊಬ್ಬರ ಮತ್ತು ಆರೈಕೆ ಚೆನ್ನಾಗಿರುವ ಕಡೆ ಇದರ ಹಾವಳಿ ಕಡಿಮೆ ಎನ್ನುತ್ತಾರೆ. ಹಿಟ್ಟು ತಿಗಣೆ, ಕಡ್ಡಿ ಹುಳ, ಇತ್ಯಾದಿಗಳು ಪ್ರಾರಂಭದಲ್ಲಿ ದಾಸವಾಳ, ಹೊಳೆ ದಾಸವಾಳ, ಬೆಟ್ಟದಾವರೆ ಮುಂತಾದ ಬೆಳೆಗಳಿಗೆ ಬಾದಿಸಿ ಅಲ್ಲಿ ಸಂಖ್ಯಾಭಿವೃದ್ದಿಯಾಗಿ ಉಳಿದ ಬೆಳೆಗಳಿಗೆ ಹರಡುತ್ತದೆ. ಇದನ್ನು ಬೆಳೆಗಾರರು ಗಮನಿಸಿ ಅಲ್ಲಿಂದಲೇ ನಿವಾರಣೋಪಾಯ ಕೈಗೊಳ್ಳಬೇಕು.