ಮೂಲದಿಂದಲೂ ನಾವು ತೆಂಗು ಬೆಳೆಸುವಾಗ ಸ್ಥಳೀಯ ತಳಿಯನ್ನೇ ಆಯ್ಕೆ ಮಾಡುತ್ತಾ ಬಂದಿದ್ದೇವೆ. ಎಲ್ಲಿ ಉತ್ತಮ ತೆಂಗಿನ ಸಸಿ ಇದೆಯೋ ಅಲ್ಲಿಂದ ತೆಂಗಿನ ಬೀಜ ತಂದು ಅದನ್ನು ಬೀಜಕ್ಕಿಟ್ಟು ಅದು ಸಸಿಯಾದ ನಂತರ ನೆಡುವುದು ನಮ್ಮ ಕ್ರಮವಾಗಿದೆ. ಈಗಿನ ಆಧುನಿಕ ಹೈಬ್ರೀಡ್ ತಾಂತ್ರಿಕತೆಯ ಬೀಜೋತ್ಪಾದನೆಗೂ ಮೂಲ ಇದೇ.
ನೈಸರ್ಗಿಕ ಮಿಶ್ರ ಪರಾಗಸ್ಪರ್ಶ:
- ಸ್ಥಳಿಯ ತಳಿಗಳು ನೈಸರ್ಗಿಕವಾಗಿ ಪರಾಗಸ್ಪರ್ಶಕ್ಕೆ ಒಳಗಾಗಿ ಆದವುಗಳು.
- ಇಂದು ನಮ್ಮಲ್ಲಿರುವ 95% ತೆಂಗಿನ ತೋಟಗಳು ಇದೇ ವಿಧಾನದಲ್ಲಿ ಆಯ್ಕೆ ಮಾಡಿದ್ದೇ ಆಗಿದೆ.
- ಇಂತಲ್ಲಿ ಕೆಲವು ಉತ್ತಮ ಇಳುವರಿ ನೀಡಿವೆ.
- ಕೆಲವು ಸ್ವಲ್ಪ ಕಡಿಮೆ ಇಳುವರಿ ನೀಡಿವೆ.
- ಇದೆಲ್ಲಾ ನಾವು ಆಯ್ಕೆ ಮಾಡಿದ ಮರದ ಮೂಲ ಗುಣವನ್ನು ಅವಲಂಬಿಸಿ ಆದದ್ದು.
- ಮಿಶ್ರ ಪರಾಗ ಸ್ಪರ್ಷ ಆಗುವಾಗ ಅದರ ಗುಣ ಮೂಲಕ್ಕಿಂತ ಉತ್ತಮವಾಗಲೂ ಬಹುದು,
- ಕಡಿಮೆಯಾಗಲೂ ಬಹುದು.ತಾಯಿ ಮರದಂತೆಯೇ ಇರಲೂಬಹುದು.
ಕಾಯಿ ಕಚ್ಚುವುದು ಹೀಗೆ:
ತೆಂಗಿನ ಮರದಲ್ಲಿ ಕಾಯಿ ಕಚ್ಚಬೇಕಾದರೆ ಅದು ಮಿಶ್ರಪರಾಗಸ್ಪರ್ಶಕ್ಕೆ ಒಳಗಾಗಲೇ ಬೇಕು. ಬಹುತೇಕ ಎಲ್ಲಾ ತಳಿಗಳಲ್ಲೂ ಅದರ ಗಂಡು ಹೂವಿನ ಪರಾಗವು ಅದೇ ಮರದ ಹೆಣ್ಣೂ ಹೂವಿಗೆ ಲಭ್ಯವಾಗುವುದಿಲ್ಲ.
- ಹೆಣ್ಣು ಹೂವು ಪರಾಗಸ್ಪರ್ಶಕ್ಕೆ ಸಿದ್ಧವಾಗುವ ಸಮಯದಲ್ಲಿ ಆ ಹೂಗೊಂಚಲಿನಲ್ಲಿ ಗಂಡು ಹೂವು ಇರುವುದಿಲ್ಲ.
- ಕೆಲವು ಉತ್ತಮ ಪಾಲನೆಯಲ್ಲಿ ಬೆಳೆಸಿದ ಮರದಲ್ಲಿ ಆ ಸಮಯಕ್ಕೆ ಮತ್ತೊಂದು ಹೂ ಗೊಂಚಲು ಅರಳುವುದು ಇದೆಯಾದರೂ ಎಲ್ಲಾ ಮರಗಳಲ್ಲೂ ಹೀಗೆ ಇರುವುದಿಲ್ಲ.
- ಉತ್ತಮ ಇಳುವರಿ ಅಥವಾ ಪ್ರತೀ ತಿಂಗಳಿಗೂ ಒಂದೊಂದು ಹೂ ಗೊಂಚಲು ಅರಳುವ ಗುಣದ ತೆಂಗಿನ ಮರದಲ್ಲಿ ಸ್ವ ಪರಾಗಸ್ಪರ್ಷ ಹೆಚ್ಚು.
ತೆಂಗಿನ ಹೂ ಗೊಂಚಲಿನಲ್ಲಿ ನೂರಾರು ಗಂಡು ಹೂ ಇರುತ್ತದೆ. ಅದೇ ರೀತಿ ಕೆಲವೇ ಕೆಲವು ಹೆಣ್ಣು ಮಿಡಿಗಳು ಇರುತ್ತವೆ. ಹೂಗೊಂಚಲು ತನ್ನ ಪೊರೆಯನ್ನು ಬಿಚ್ಚಿಸಿಕೊಂಡ ತಕ್ಷಣದಿಂದಲೇ ಗಂಡು ಹೂ ಅರಳಲು ಪ್ರಾರಂಭವಾಗುತ್ತದೆ.
- ಅದೇ ದಿನ ಅದು ಉದುರುತ್ತದೆ.
- ಈ ಪ್ರಕ್ರಿಯೆ ಸುಮಾರು 20 ದಿನಗಳ ತನಕವೂ ಮುಂದುವರಿಯುತ್ತದೆ.
- ಆದರೆ ಹೆಣ್ಣು ಹೂವು ಅಥವಾ ಚೆಂಡಾಳೆ (Button)ಅಥವಾ ಮಿಡಿ ಕಾಯಿ ಹೂ ಗುಚ್ಚ (Spikelet)ದ ಕೆಳ ಬಾಗದಲ್ಲಿ ಒಂದು ಎರಡು ಸಂಖ್ಯೆಯಲ್ಲಿ ಇರುತ್ತದೆ.
ಮಿಶ್ರ ಪರಾಗ ಸ್ಪರ್ಶ:
ಹೆಣ್ಣು ಹೂವು ಪರಾಗ ಸ್ವೀಕರಿಸುವ ಸ್ಥಿತಿಗೆ ಬರಲು ಕನಿಷ್ಟ 21-24 ದಿನ ಬೇಕಾಗುತ್ತದೆ. ಆ ಸಮಯದಲ್ಲಿ ಅಲ್ಲಿ ಗಂಡು ಹೂವು ಇರುವುದಿಲ್ಲವಾದ ಕಾರಣ, ಅದಕ್ಕೆ ಬೇರೆ ಮರದ ಪರಾಗ ಲಭ್ಯವಾದಾಗ ಮಾತ್ರ ಆ ಮಿಡಿ ಫಲಿತಗೊಳ್ಳುತ್ತದೆ.
- ಮಿಡಿ ಫಲಿತಗೊಳ್ಳಲು ಜೇನು ನೊಣವೂ ಸೇರಿದಂತೆ ಬೇರೆ ಬೇರೆ ಪರಾಗದಾನಿಗಳು ನೆರವಾಗುತ್ತವೆ.
- ಈ ಪರಾಗದಾನಿಗಳು ಬೇರೇ ಬೇರೆ ಮರಗಳ ಗಂಡು ಹೂವಿನ ಪರಾಗ ಕಣಗಳನ್ನು ತಮ್ಮ ಕಾಲಿಗೆ ಅಂಟಿಸಿಕೊಂಡು ಹೂಗೊಂಚಲಿನಿಂದ ಹೂ ಗೊಂಚಲಿಗೆ ಹಾರುತ್ತವೆ.
- ಈ ವಿಧಾನದಲ್ಲಿ ಮಿಶ್ರ ಪರಾಗಸ್ಪರ್ಷ ನಡೆದು ಕಾಯಿ ಕಚ್ಚುತ್ತದೆ.
ಇಲ್ಲಿ ತಿಳಿಯಬೇಕಾದ ಸಂಗತಿ ಪರಾಗ ದಾನಿಗಳು ಹೆಣ್ಣು ಹೂವಿನ ಮೇಲೆ ಕುಳಿತಾಗ ಅದರ ಕಾಲಿನಲ್ಲಿ ಅಂಟಿಕೊಂಡಿರುವ ಪರಾಗ ಕಣಗಳ ಗುಣದ ಮೇಲೆ ಆ ಕಾಯಿಯ ಜನ್ಮ ನಿರ್ಧಾರವಾಗುತ್ತದೆ.
- ಒಂದು ವೇಳೆ ಅದು ಉತ್ತಮ ಇಳುವರಿ ಕೊಡುತ್ತಿದ್ದ ಮರದ ಹೂಗೊಂಚಲಿನ ಪರಾಗಕಣವನ್ನು ತನ್ನ ಕಾಲಿನಲ್ಲಿ ಅಂಟಿಸಿಕೊಂಡಿದ್ದರೆ,
- ಅದೆ ಪರಾಗ ಕಣ ಹೆಣ್ಣು ಹೂವಿಗೆ ಲಭ್ಯವಾದರೆ ಆ ಕಾಯಿ ಫಲಿತಗೊಂಡು ಉತ್ತಮ ಇಳುವರಿ ಕೊಡುವ ತಳಿಯಾಗಿ ಮಾರ್ಪಡುತ್ತದೆ.
- ಗಿಡ್ದತಳಿಯ ಪರಾಗ ಕಣವನ್ನು ಸ್ಪರ್ಶಿಸಿದ್ದರೆ ಅದರ ಮರ ಹೆಚ್ಚು ಎತ್ತರ ಬೆಳೆಯಲಾರದು.
ಹಿಂದಿನವರ ಆಯ್ಕೆ ಕ್ರಮ:
ನಮ್ಮ ಹಿರಿಯರು ಎಲ್ಲಾ ಉತ್ತಮ ಫಲಕೊಡುವ ಮರಗಳಿರುವ ತೋಟದಿಂದ ಮಾತ್ರವೇ ನಮ್ಮ ಹಿರಿಯರು ಬೀಜದ ಕಾಯಿ ಆಯ್ಕೆ ಮಾಡುತ್ತಿದ್ದರು.
- ಇದರಲ್ಲಿ ಕೆಲವೊಮ್ಮೆ ಮೂಲ ಮರಕ್ಕಿಂತ ಉತ್ತಮ ಗುಣದ ಕಾಯಿ ದೊರೆಯುತ್ತಿತ್ತು.
- ಮರಕ್ಕೆ, ಕಾಯಿಗೆ ಮೂಲ ಮರದ ಲಕ್ಷಣಕ್ಕಿಂತ ಭಿನ್ನ ಲಕ್ಷಣ ಬರುತ್ತಿತ್ತು.
- ಇದೆಲ್ಲವೂ ಮಿಶ್ರ ಪರಾಗಸ್ಪರ್ಶದ ಕಾರಣದಿಂದ.
- ರೈತರು ಈ ರೀತಿ ಸ್ಥಳೀಯವಾಗಿಯೇ ತೆಂಗಿನ ಬೀಜ ಆಯ್ಕೆ ಮಾಡುವಾಗ ಸುತ್ತ ಮುತ್ತಲಿನ ಮರಗಳ ಇಳುವರಿಯನ್ನು ಗಮನಿಸಿ ಆಯ್ಕೆ ಮಾಡಬೇಕು.
- ಸಸಿಯನ್ನು ಆಯ್ಕೆ ಮಾಡುವಾಗ ತಾಯಿ ಮರದ ಎಲೆಯ ಬಣ್ಣದ ತರಹವೇ ಸಸಿಗೂ ಬಣ್ಣ ಇದೆಯೇ ಎಂದು ಗಮನಿಸಬೇಕು.
- ಒಂದು ವೇಳೆ ಬಣ್ಣ ವ್ಯತ್ಯಾಸ ಆಗಿದ್ದರೆ ಅದು ಮಿಶ್ರ ಪರಾಗ ಸ್ಪರ್ಶ ಅಥವಾ ನೈಸರ್ಗಿಕ ಹೈಬ್ರೀಡೀಕರಣಕ್ಕೆ ಒಳಗಾಗಿದೆ ಎಂದು ತಿಳಿಯಬೇಕು.
ಹಸುರು ತಳಿಯ ಮರದ ಬೀಜದಿಂದ ಪಡೆದ ಸಸಿಯ ಎಲೆ ದಂಟು, ಬುಡ ಭಾಗದ ಬಣ್ಣ ಮಣ್ಣಿನ ಬಣ್ಣದಲ್ಲಿ ಕಂಡು ಬಂದರೆ ಅದು ಮಿಶ್ರ ಪರಾಗಸ್ಪರ್ಶಕ್ಕೆ ಒಳಗಾಗಿ ಹಾಗಾಗಿದೆ ಎಂದು ತಿಳಿಯಬಹುದು.ಇದು ನೈಸರ್ಗಿಕ ಹೈಬ್ರೀಡ್ ತಳಿಯಾಗಿರುವ ಸಾಧ್ಯತೆ ಅಧಿಕ.
ಸ್ಥಳೀಯ ತಳಿಗಳಿಂದ ಬೀಜ ಆಯ್ಕೆ ವಿಧಾನ ತಪ್ಪಲ್ಲ. ಇದಲ್ಲಿ ರೈತರು ವಿಶಿಷ್ಟ ಅಧಿಕ ಇಳುವರಿಯ ಗುಣದ ತಳಿಯನ್ನು ಪಡೆಯುತ್ತಾ ಬಂದಿದ್ದಾರೆ, ಪಡೆಯಲು ಸಾಧ್ಯ. ,