ನಮಗೆಲ್ಲಾ ಗೊತ್ತಿರುವಂತೆ ಗುಡ್ದಕೆ ಗುಡ್ಡ ಅಡ್ದ ಇದ್ದೇ ಇದೆ. ಪ್ರತೀಯೊಂದು ಜೀವಿಗೂ ಮತ್ತೊಂದು ವೈರಿ ಜೀವಿ ಇರುತ್ತದೆ. ಇದನ್ನು ಪ್ರಕೃತಿ ಸೃಷ್ಟಿ ಮಾಡಿರುತ್ತದೆ. ಯಾವುದು ಪ್ರಭಲವಾಗುತ್ತದೆಯೋ ಆಗ ಅದರ ವೈರಿ ಜೀವಿ ಕಾಣಿಸಿಕೊಳ್ಳುತ್ತದೆ. ಇದನ್ನು ನಮ್ಮ ಹಿರಿಯರು ತನ್ನಷ್ಟಕೇ ಕಡಿಮೆಯಾಗುವ ವಿಧಾನ ಎಂದಿರುವುದು. ನಿಜವಾಗಿ ಇದು ಮಿತಿ ಮೀರುವುದನ್ನು ಪ್ರಕೃತಿ ಹದ್ದುಬಸ್ತಿನಲ್ಲಿಡುವ ವ್ಯವಸ್ಥೆ. ನಮ್ಮಲ್ಲಿ ಹಲವು ಕೀಟಗಳು ಕಣ್ಮರೆಯಾಗಿ ಈಗ ಕೀಟನಾಶಕ ಅನಿವಾರ್ಯವಾಗಿದೆ.
- ಇಂದಿನ ನಮ್ಮ ಬೇಸಾಯ ಪದ್ದತಿ ಮತ್ತು ವಾತಾವರಣದ ಸ್ಥಿತಿಗತಿಯ ಏರು ಪೇರಿನಿಂದ ಇದೆಲ್ಲವೂ ಪ್ರಕೃತಿ ಸಹಜವಾಗಿ ನಡೆಯುತ್ತಿಲ್ಲ.
- ದುರಂತವೆಂದರೆ ದಿನ ಕಳೆದಂತೆ ಪರಭಕ್ಷಕಗಳ ಸಂತತಿ ಕಡಿಮೆಯಾಗಿ , ಭಕ್ಷಕಗಳು ಮೇಲುಗೈ ಸಾಧಿಸುತ್ತಿವೆ.
ನೀವು ಗಮನಿಸಿ:
- ಒಂದು ದಾಸವಾಳದ ಗಿಡದ ಸಮೀಪ ಸ್ವಲ್ಪ ಹೊತ್ತು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಇರಿ.
- ಇಲ್ಲವೇ ಆ ಸಸ್ಯದ ಮೇಲೆಯೇ ಕಣ್ಣಿಟ್ಟು ಸುಮಾರು 10-15 ನಿಮಿಷ ಸುತ್ತು ಬನ್ನಿ.
- ಆಗ ಅಲ್ಲಿ ಎಲೆಗಳು ಕೆಲವು ಸುರುಳಿ ಕಟ್ಟಿದ್ದು ಕಾಣಬಹುದು.
- ಹಾಗೆಯೇ ಬಿಡುವು ಇರುವ ಕಾರಣ ಆ ಎಲೆಯನ್ನು ಬಿಡಿಸಿ ನೋಡಿ.
- ಎಲೆಯ ಒಳಗೆ ಒಂದೆರಡು ಹುಳಗಳ ಮರಿ ಇರುತ್ತದೆ.
- ಹಾಗೆಯೇ ಕೆಲವು ಸುತ್ತು ಕಟ್ಟಲ್ಪಟ್ಟ ಎಲೆಯಲ್ಲಿ ಹುಳಗಳೂ ಇರುವುದಿಲ್ಲ ,
- ಬರೇ ಒಂದು ತೂತು ಇರುತ್ತದೆ.
ಇದೆಲ್ಲಾ ಹೇಗೆ ಆಯಿತು ಎಂಬುದನ್ನು ನೀವೇ ಆ ಗಿಡದ ಸಮೀಪ ½ -1 ಗಂಟೆ ತನಕ ಕಾದು ಕುಳಿತುಕೊಂಡರೆ ಗೊತ್ತಾಗುತ್ತದೆ.
ಕೀಟಗಳನ್ನು ಕೀಟಗಳೇ ತಿನ್ನುತ್ತವೆ:
- ದಾಸವಾಳದ ಎಲೆಯಲ್ಲಿ ಇರುವ ಎಲೆ ಮಡಚಿ ಅದರೊಳಗೆ ಇರುವ ಇರುವ ಹುಳ ಒಂದು ಪತಂಗ ಇಟ್ಟ ಮೊಟ್ಟೆಯ ಮರಿ.
- ಇದು ಮರಿಯಾಗುವಾಗ ಸಿರ್ಫಿಡ್ ಫ್ಲೈ ಜಾತಿಯ ಒಂದು ತರಹದ ಕೀಟಕ್ಕೆ ಗೊತ್ತಾಗುತ್ತದೆ.
- ಈ ಕೀಟ ಆ ದಾಸವಾಳದ ಸಸ್ಯದ ಸುತ್ತ ಸುತ್ತುತ್ತಾ ಎಲ್ಲೆಲ್ಲಿ ಎಲೆ ಮಡಚಿಕೊಂಡು ಇರುತ್ತದೆಯೋ ಅದಕ್ಕೆ ಸುತ್ತು ಹಾಕಿ ಸರಕ್ಕನೆ ಹಾರಿ ತನ್ನ ಬಾಯಿಯ ಮೂಲಕ ಎಲೆಯಲ್ಲಿ ತೂತು ಮಾಡಿ ಆ ಹುಳವನ್ನು ಭಕ್ಷಿಸುತ್ತದೆ.
- ಇದೇ ರೀತಿ ಹಲವಾರು ಬಗೆಯ ಕೀಟಗಳಿವೆ.
- ತುಳಸಿ ಗಿಡದಲ್ಲಿ ಒಂದು ರೀತಿಯ ತಿಗಣೆ ಎಲೆಯಲ್ಲಿ ಮೊಟ್ಟೆ ಇಟ್ಟು ಎಲೆಯೆಲ್ಲಾ ಒಣಗುವಂತೆ ಮಾಡುತ್ತದೆ.
- ಚಳಿಗಾಲ ಕಳೆದ ತಕ್ಷಣ ಇದರ ಹಾವಳಿ ಜಾಸ್ತಿ.ಇಡೀ ತುಳಸಿ ಗಿಡ ಭಾಗಶಃ ಸತ್ತಂತೆ ಕಾಣಿಸುತ್ತದೆ.
- ಇದರ ಸಂಖ್ಯೆ ಹೆಚ್ಚಾದಾಗ ಅಲ್ಲಿಗೆ ತನ್ನಷ್ಟಕ್ಕೇ ಒಂದೆರಡು ಕೀಟಗಳು ಬರುತ್ತವೆ.
- ಅದರಲ್ಲಿ ಒಂದು ಪ್ರಾರ್ಥನಾ ಕೀಟ. (Praying mantis) ನಂತರ ಎಲೆಯ ಅಡಿಯಾಲ್ಲಿ ಒಂದು ಜೇಡ ಹೊಂಚು ಹಾಕುತ್ತಾ ಇರುತ್ತದೆ.
- ಇದು ಸಹ ಆ ನುಶಿಯನ್ನು ತಿನ್ನಲು ಹೊಂಚು ಹಾಕುತ್ತಿರುತ್ತದೆ.
- ಇನ್ನೂ ಸಂಖ್ಯೆ ಹೆಚ್ಚಳವಾದಾಗ ಗುಲಗುಂಜಿ ಹುಳ ಬರುತ್ತದೆ.
- ಆಗ ಮೈಟ್ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ.
- ಅಡಿಕೆ ಮರದ ಎಲೆಯ ಅಡಿಯಲ್ಲಿ ಬಲೆ ಕಟ್ಟಿ ಒಂದು ಜೇಡ ವಾಸವಾಗಿರುತ್ತದೆ.
- ಇದು ಎಲೆಯ ಅಡಿ ಭಾಗದ ರಸ ಹೀರುವ ತಿಗಣೆಯನ್ನು ತಿನ್ನುವ ಒಂದು ಜೇಡ.
ಭತ್ತದ ಗದ್ದೆಯಲ್ಲಿ ಪೈರು ಬೆಳೆಯುತ್ತಿದ್ದಂತೆ ಒಂದು ಪತಂಗ ( ಡ್ರಾಗನ್ ಪ್ಲೈ) ಹಾರಾಟ ಪ್ರಾರಂಭಿಸುತ್ತದೆ. ಇದು ಪೈರಿನಲ್ಲಿ ಕಂಡು ಬರುವ ಕೆಲವು ಕೀಟಗಳನ್ನು ಹೊಂಚು ಹಾಕಿ ಬೇಟೆಯಾಡುವ ಪರಭಕ್ಷಕವಾಗಿದೆ
- ಅಲಸಂಡೆ ಗಿಡದಲ್ಲಿ ಸಸ್ಯ ಹೇನುಗಳು ಹೆಚ್ಚಾದಾಗ ಅದನ್ನು ತಿನ್ನಲು ಬರುವುದು ಒಂದು ರೀತಿಯ ಕೆಂಪು ಇರುವೆ.
- ಹಾಗೆಯೇ ಒಂದು ಜಿಗಿ ಹುಳ. ಇದು ಹೇನನ್ನು ತಿನ್ನುತ್ತಾ ಬದುಕುತ್ತದೆ.
- ನಮ್ಮ ಹಿರಿಯರು ಹೇನು ಜಾಸ್ತಿಯಾದಾಗ ಕೆಂಪಿರುವೆಯ ಗೂಡನ್ನೇ ಅಲಸಂಡೆ ಚಪ್ಪರಕ್ಕೆ ಬಿಡುತ್ತಿದ್ದರು.
ಹತ್ತಿ ಬೆಳೆಯುವಾಗ ಅಲಸಂದೆ ತೊಗರಿ ಮುಂತಾದ ಬೆಳೆಗಳನ್ನು ಬೆಳೆಸುತ್ತಾರೆ. ಆದಕ್ಕೆ ಮೊದಲಾಗಿ ಕಾಯಿ ಕೊರಕ, ಹೇನುಗಳು ಬರುತ್ತದೆ. ಆಗ ಅಲ್ಲಿಗೆ ಒಂದು ಮಿಡತೆ( ಗ್ರಾಸ್ ಹೊಪೆರ್) ಬರುತ್ತದೆ. ಇದು ಹೇನು, ಹುಳವನ್ನು ತಿಂದು ನಾಶಮಾಡುತ್ತದೆ.
- ಇರುವೆಗಳಲ್ಲೂ ಕೆಲವು ಕೀಟ ಭಕ್ಷಕಗಳು ಇವೆ.
- ತೆಂಗಿನ ಮರದ ಎಲೆಯ ಬಿಳಿ ನೊಣವನ್ನು ಒಂದು ಇರುವೆ ಭಕ್ಷಿಸುತ್ತದೆ.
- ಇದನ್ನು ವೈಜ್ಞಾನಿಕವಾಗಿ ಪರಭಕ್ಷಕಗಳು ಎನ್ನುತ್ತಾರೆ.
- ಇದು ಜೈವಿಕ ಹತೋಟಿಯ ಒಂದು ಭಾಗ.
ಹಲವು ಬಗೆಯ ಕೀಟಗಳ ನೈಸರ್ಗಿಕ ಶತ್ರುಗಳನ್ನು ಹುಡುಕಿ ( Bioligical control) ಅದರ ಸಂತಾನಾಭಿವೃದ್ದಿ ಮಾಡಿ , ಹಾನಿ ಮಾಡುವ ಕೀಟ ಇರುವ ಸ್ಥ ಳದಲ್ಲಿ ಬಿಟ್ಟು ನಿಯಂತ್ರಣ ಮಾಡಲಾಗುತ್ತದೆ. ತೆಂಗಿನ ಗರಿ ತಿನ್ನುವ ಕಪ್ಪು ತಲೆ ಹುಳವನ್ನು ಹೀಗೆ ನಿಯಂತ್ರಣ ಮಾಡಲಾಗಿದೆ.
ಪರಭಕ್ಷಕಗಳು ಯಾವುದು:
- ಚಳಿಗಾಲ ಬಂದಾಗ ನೆಲದಲ್ಲಿ, ಮರಗಳ ಗೆಲ್ಲುಗಳಲ್ಲಿ ಬಲೆಗಳು ಹೇರಳವಾಗಿ ಕಾಣಸಿಗುತ್ತವೆ.
- ಈ ಋತುಮಾನ ಕೀಟಗಳ ಸಂತಾನೋತ್ಪತ್ತಿ ಪ್ರಾರಂಭವಾಗುವ ಕಾಲ.
- ಜೇಡಗಳು ಬೇರೆ ಬೇರೆ ವಿಧಾನದಲ್ಲಿ ಕೀಟಗಳನ್ನು ಹೊಂಚು ಹಾಕಲು ಈ ರೀತಿ ಬಲೆ ಕಟ್ಟಿ ಅವಿತು ಕುಳಿತುಕೊಳ್ಳುತ್ತವೆ.
- ಇದು ಸಾಕಶ್ಟು ಕೀಟ, ಪತಂಗಗಳನ್ನು ಹಿಡಿದು ಭಕ್ಷಿಸುತ್ತವೆ.
ಪರಭಕ್ಷಕಗಳಲ್ಲಿ ಮುಖ್ಯವಾಗಿ ಜೇಡಗಳು, ಗುಲಗುಂಜಿ ಹುಳಗಳು, ಸಿರ್ಫಿಡ್ ಪ್ಲೈ ಗಳು, ಪ್ರಾರ್ಥನಾ ಕೀಟಗಳು, ಲೇಸ್ ವಿಂಗ್ ಪತಂಗಗಳು, ಜಿಗಿ ಹಾತೆಗಳು , ಡ್ರಾಗನ್ ಪ್ಲೈ, ರೋಬರ್ ಪ್ಲೈ ಗಳು ಹಾಗೆಯೇ ಹಲವಾರು ಕೀಟಗಳು ಇವೆ. ಕೀಟಗಳ ಜೊತೆಗೆ ಹಕ್ಕಿಗಳೂ ಇವೆ. ಕೆಲ್ಲವು ದುಂಬಿಗಳೂ ಇವೆ. ಇವು ಮೊಟ್ಟೆಯನ್ನು , ಮರಿ ಹುಳವನ್ನು, ಲಾರ್ವೆಯನ್ನು , ಪತಂಗಗಳನ್ನು ತಿನ್ನುತ್ತವೆ.
ಯಾಕೆ ಕಡಿಮೆಯಾದವು:
- ಮುಖ್ಯವಾಗಿ ನಾವು ಕೀಟಗಳನ್ನು ನಿಯಂತ್ರಿಸಲು ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಿದ್ದೇವೆ.
- ಪ್ರಮಾಣಕ್ಕಿಂತ ಹೆಚ್ಚು ಕೀಟನಾಶಕಗಳ ಬಳಕೆ, ಗುರಿಯಲ್ಲದೆ ಸಿಕ್ಕ ಸಿಕ್ಕಲ್ಲಿಗೆ ಕೀಟನಾಶಕದ ಸಿಂಪರಣೆ, ಪ್ರಭಲ ಅತೀ ಪ್ರಭಲ ಕೀಟನಾಶಕಗಳ ಬಳಕೆ ಎಂಬುದು ಒಂದು ಕಾರಣ.
- ಇನ್ನೋಂದು ವಾತಾವರಣ. ಇತ್ತೀಚಿನ ವರ್ಷಗಳಲ್ಲಿ ವಾತಾವರಣ ಅಧಿಕ ಬಿಸಿಯಾಗುತ್ತಿದೆ.
- ಇದರ ಪರಿಣಾಮವಾಗಿ ಉಪಕಾರೀ ಕೀಟಗಳ ಸಂತತಿಯ ನಾಶವೂ ಉಪದ್ರವಿ ಕೀಟಗಳ ಅವನತಿಯೂ ಆಗುತ್ತಿದೆ.
ಈ ಉಪಕಾರೀ ಕೀಟಗಳ ಬಗ್ಗೆ ಜನರಿಗೆ ಅರಿವು ಇಲ್ಲ. ಎಲ್ಲಾ ಕೀಟಗಳನ್ನೂ ಹಾನಿಕಾರಿ ಎಂದು ಭ್ರಮಿಸಿದ್ದಾರೆ. ಯಾವುದು ಉಪಕಾರಿ, ಯಾವುದು ಹಾನಿಕಾರಕ ಎಂಬ ವಿಷಯ ಮನವರಿಕೆಯಾದರೆ ಜನ ಸ್ವಲ್ಪ ಜಾಗರೂಕತೆ ಮಾಡುತ್ತಾರೆ.