ಬೇರು ಹುಳ white grub ಅಡಿಕೆ ಬೆಳೆಗೆ ಅತೀ ದೊಡ್ಡ ಶತ್ರು ಎಂತಲೇ ಹೇಳಬಹುದು. ಇದು ಬರೇ ಅಡಿಕೆ ಬೆಳೆಗೆ ಮಾತ್ರವಲ್ಲ.ಕಬ್ಬು, ತೆಂಗು ಹಾಗೆಯೇ ಇನ್ನಿತರ ಮರಮಟ್ಟು ಬೆಳೆಗಳಿಗೂ ಇದು ತೊಂದರೆ ಮಾಡುತ್ತದೆ. ಮರಗಳ ಕಾಂಡ ಕೊರಕ, ಗೆಲ್ಲು ಕೊರಕ, ಬೇರು ತಿನ್ನುವ ಹುಳಗಳ ತೊಂದರೆ ಈ ಸಮಯದಲ್ಲೇ ಜಾಸ್ತಿ. ಇದನ್ನು ನೀವೂ ಗಮನಿಸಿರಬಹುದು. ಕಾರಣ ಇಷ್ಟೇ. ಈ ಸಮಯದಲ್ಲಿ ಜೂನ್ , ಜುಲೈ ತಿಂಗಳಲ್ಲಿ ದುಂಬಿಗಳು ಮೊಟ್ಟೆ ಇಟ್ಟದ್ದು ಮರಿಗಳಾಗಿ ತಮ್ಮ ಆಹಾರ ಸೇವನೆ ಕೆಲಸ ಪ್ರಾರಂಭಿಸುತ್ತವೆ.
ಅಡಿಕೆ ಮರಗಳಿಗೆ ಬೇರು ಹುಳ ತೊಂದರೆ ಇದೆ ಎಂದಾದರೆ ಮರಗಳ ಶಿರ ಭಾಗದ ಬೆಳವಣಿಗೆಯಲ್ಲಿ ಅದು ಗೋಚರವಾಗುತ್ತದೆ. ಬೇರುಗಳ ಸಂಖ್ಯೆ ಕಡಿಮೆಯಾದರೆ ಸಸ್ಯಕ್ಕೆ – ಮರಕ್ಕೆ ಆಹಾರ ಸರಬರಾಜು ಕಡಿಮೆಯಾಗಲೇ ಬೇಕು. ಅಗ ಮರದ ಶಿರ ಭಾಗ ನಿತ್ರಾಣಗೊಳ್ಳಲೇ ಬೇಕು. ಮಳೆಗಾಲದಲ್ಲಿ ಸ್ವಲ್ಪ ಹಸುರಾಗಿ ಇರುತ್ತವೆ. ಕಾರಣ ಮುಂಗಾರು ಮಳೆ ಪ್ರಾರಂಭವಾಗುವಾಗ ನೈಸರ್ಗಿಕವಾಗಿ ಬೇರುಗಳು ಹುಟ್ಟುವುದು ಜಾಸ್ತಿ. ಹಾಗೆಯೇ ಆ ಸಮಯದಲ್ಲಿ ಹುಳಗಳು ದುಂಬಿಗಳಾಗಿ ಮೊಟ್ಟೆ ಇಡುವ ಸಮಯ. ಆಗ ಅವು ಬೇರು ತಿನ್ನುವುದು ಕಡಿಮೆ. ಈ ಕಾರಣದಿಂದಲೇ ಸಲ್ಪ ಹಸುರಾಗಿ ಕಾಣಿಸುತ್ತದೆ. ಚಳಿಗಾಲ ಬಂದು ಬೇಸಿಗೆ ಕಾಲ ಬರುವಾಗ ಎಲೆಗಳು ಹಳದಿಯಾಗಲಾರಂಭಿಸುತ್ತದೆ. ಎಲೆಗಳ ಸಂಖ್ಯೆ ಕಡಿಮೆಯಾಗುವುದು ಕಾಂಡ ಸಣಕಲಾಗುವುದು ಮಣ್ಣಿನಲ್ಲಿ ಬೇರು ಹುಳ ಇರುವ ಲಕ್ಷಣ. ಹುಳ ಬಂದ ತೋಟದಲ್ಲಿ ಮರಗಳು ವರ್ಷದಿಂದ ವರ್ಷಕ್ಕೆ ಸೊರಗುತ್ತಾ ಬರಲಾರಂಭಿಸುತ್ತವೆ. ಫಸಲೂ ಸಹ ಕಡಿಮೆಯಾಗುತ್ತದೆ. ಮರಗಳಲ್ಲಿ ಎಲೆ ಕಡಿಮೆಯಾಗಿ ಸಾಯುತ್ತವೆ. ಸಸಿಗಳು ಎಷ್ಟೇ ಗೊಬ್ಬರ ಕೊಟ್ಟರೂ ಅದಕ್ಕೆ ಸ್ಪಂದಿಸುವುದಿಲ್ಲ. ಪ್ರಾರಂಭದಲ್ಲಿ ಎಲೆಗಳು ಕಡಿಮೆಯಾಗುವುದೇ ಇದರ ಲಕ್ಷಣ. ಮರಳು ಮಿಶ್ರಿತ ಮಣ್ಣು ಅಥವಾ ಅಧಿಕ ಪ್ರಮಾಣದಲ್ಲಿ ಮರಳು ಇರುವ ಹೊಲದಲ್ಲಿ ಅಡಿಕೆ ತೋಟ ಮಾಡಿದಲ್ಲಿ ಈ ಸಮಸ್ಯೆ ಇದ್ದೇ ಇರುತ್ತದೆ. ಬರೇ ಅಡಿಕೆಗೆ ಮಾತ್ರವಲ್ಲ. ಯಾವ ಯಾವ ಬೆಳೆಗೆ ಬೇ. ಹುಳದ ಸಮಸ್ಯೆ ಇದೆಯೋ, ಅಲ್ಲೆಲ್ಲಾ ಮಣ್ಣಿನಲ್ಲಿ ಮರಳಿನ ಅಂಶ ಹೆಚ್ಚು ಇರುತ್ತದೆ. ಅಲ್ಲಿ ಹುಳ ಬದುಕಲು ಅನುಕೂಲ ಹೆಚ್ಚು ಇರುತ್ತದೆ. ಹುಳಗಳು ಮಣ್ಣಿನಲ್ಲೇ ಇರುವ ಕೀಟಗಳು. ಯಾವುದೋ ಮರದ, ಸಸ್ಯದ ಬೇರನ್ನು ತಿನ್ನುತ್ತಿದ್ದವುಗಳು( ಮಾವು, ತೆಂಗು, ಪೇರಳೆ,ಹಲಸು, ಅಂಜೂರ, ಗೇರು ಬೆಳೆಗಳು) ಅದರ ಕೊರತೆ ಆದಾಗ ಇಲ್ಲದಾದಾಗ ಅಡಿಕೆ ಮರದ್ದನ್ನು ತಿನ್ನುತ್ತಿವೆ.
- ಮಳೆಗಾಲ ಪ್ರಾರಂಭದ ಸಮಯದಲ್ಲಿ ದೀಪದ ಬೆಳಕಿಗೆ ದುಂಬಿಗಳು, ಹಾರುವ ಕೀಟಗಳು ಬರುವುದು ಹೆಚ್ಚು.
- ಬೇರೆ ಬೇರೆ ನಮೂನೆಯ ದುಂಬಿಗಳು ಎಲ್ಲೆಲ್ಲಿಂದಲೋ ದೀಪದ ಬೆಳಕಿಗೆ ಬರುತ್ತದೆ.
- ಈ ಸಮಯದಲ್ಲಿ ಅವು ಹೊರಗೆ ಹಾರುವುದು ಗಂಡು ಹೆಣ್ಣು ಜೋಡಿಯಾಗಲು.
- ನಂತರ ಮಳೆ ಚೆನ್ನಾಗಿ ಹಿಡಿದಾಗ ಅದರ ಕಾಟ ಕಡಿಮೆಯಾಗುತ್ತದೆ.
- ಆಗ ಅವು ಮೊಟ್ಟೆ ಇಟ್ಟು ಮರಿಯಾಗುವ ಸಮಯ.
- ಜೂನ್ ತಿಂಗಳ ನಂತರ ಸಪ್ಟೆಂಬರ್ ತಿಂಗಳ ವರೆಗೆ ಅವು ಮರಿಯಾಗಿ ಮರಿಗಳು ಪ್ರೌಡಾವಸ್ಥೆಗೆ ತಲುಪಿ ಭಕ್ಷಣೆಗೆ ಪ್ರಾರಂಭಿಸುತ್ತವೆ.
- ಆಗ ಮರ ನಿತ್ರಾಣಗೊಳ್ಳಲು ಪ್ರಾರಂಭವಾಗುತ್ತದೆ.
- ಹೆಚ್ಚಿನ ಮರಗಳಿಗೆ ಕಾಂಡ ಕೊರಕ ಹುಳ ಉಪಟಳ ಮಾಡುವುದೂ ಸಹ ಇದೇ ಸಮಯದಲ್ಲಿ.
ನಿಯಂತ್ರಣ ಈಗ ಯಾಕೆ ಮಾಡಬೇಕು?
- ಬೇ.ಹುಳಗಳಲ್ಲಿ ಮುರು ಪ್ರಭೇಧಗಳಿವೆ. ಅವು ಪ್ರದೇಶವಾರು, ಬೆಳೆವಾರು ತೊಂದರೆ ಮಾಡುತ್ತವೆ.
- ಬಹುಷಃ ಇದು ಯಾವ ಪ್ರದೇಶದಲ್ಲಿ ಯಾವ ಬೆಳೆ ಹೆಚ್ಚು ಇದೆಯೋ ಅಲ್ಲಿ ಜಾಸ್ತಿ.
- ಅವು ಅಡಿಕೆಗೆ ಮಾತ್ರ ಕಬ್ಬಿಗೆ ಮಾತ್ರ ಎಂದಿಲ್ಲ. epedophora ಕುಂಟುಂಬದಲ್ಲಿ coneophore, burmeisteri, l ಇವು ಮೂರು ಬೇರು ತಿನ್ನುವವವುಗಳು.
- ಅಡಿಕೆ, ತೆಂಗು ಬೈನೆ ಮರ, ತಾಳೆ, ಕಾಫಿ,ಕೊಕ್ಕೋ, ಬಟರ್ ಪ್ರೂಟ್, ಗೇರು,ಮಾವು ಕಬ್ಬು ಮುಂತಾದ ಬೆಳೆಗೆ ಇವು ತೊಂದರೆ ಮಾಡುತ್ತವೆ.
- ದಕ್ಷಿಣ ಕನ್ನಡ, ಕೇರಳ ಕಡೆ ಅಂದರೆ ಕರಾವಳಿ ಭಾಗದಲ್ಲಿ ಇರುವ ಹುಳ ಒಂದಾದರೆ,
- ಮಲೆನಾಡಿನಲ್ಲಿ ಅದೂ ಇದೆ ಜೊತೆಗೆ ಇನ್ನೋಂದು ಇದೆ.
- ಕಬ್ಬಿಗೆ ಬರುವ ಬೇ. ಹುಳವೇ ಬೇರೆ.
- ಇವು ಚಟುವಟಿಕೆಯಲ್ಲಿ ಇರುವುದೇ ಈ ಸಮಯದಲ್ಲಿ.
- ಯಾವಾಗಲೂ ಹುಳಗಳ ಸಂಖ್ಯೆ ಹೆಚ್ಚು ಇರುವಾಗ ಅಥವಾ ಕ್ರಿಯಾತ್ಮಕವಾಗಿರುವಾಗ ನಿಯಂತ್ರಣ ಕ್ರಮ ಕೈಗೊಂಡರೆ ಅದರ ಪ್ರತಿಫಲ ಹೆಚ್ಚು.
- ಈಗ ನೆಲ ತೇವವಾಗಿರುತ್ತದೆ. ಮಣ್ಣು ಮೆದುವಾಗಿರುತ್ತದೆ.
- ಹುಳಗಳು ಬೇರು ತಿನ್ನಲು ಮೇಲು ಭಾಗದಲ್ಲೇ ಇರುತ್ತವೆ.
- ಈ ಸಮಯದಲ್ಲಿ ಅದರ ನಿಯಂತ್ರಣ ಮಾಡಲು ಪ್ರಯತ್ನಿಸಿದರೆ ಗುರಿಗೆ ಗುಂಡು ಹೊಡೆದಂತೆ ಎನ್ನಬಹುದು.
- ಮಳೆಗಾಲ ಕಳೆದು ಬೇಸಿಗೆ ಬಂದ ಮೇಲೆ ಹುಳಗಳು ನೆಲದ ಅಡಿಗೆ ಹೋಗುತ್ತವೆ.
- ಆಗ ರಾಸಾಯನಿಕ ಕೀಟನಿಯಂತ್ರಣವಾಗಲೀ, ಜೈವಿಕ ನಿಯಂತ್ರಣವಾಗಲೀ ಕಷ್ಟವಾಗುತ್ತದೆ.
ಯಾವ ಪರಿಹಾರ ಸೂಕ್ತ?
- ಬೇ. ಹುಳದ ನಿಯಂತ್ರಣಕ್ಕೆ ಜೈವಿಕ ಪರಿಹಾರವೇ ಹೆಚ್ಚು ಸೂಕ್ತ. ಯಾಕೆಂದರೆ ಅದರ ಪರಿಣಾಮ ಧೀರ್ಘಾವಧಿಯ ತನಕ ಇರುತ್ತದೆ. ಮಿತ ವ್ಯಯವು ಅಗುತ್ತದೆ.
- ಜೈವಿಕ ವಿಧಾನಗಳಲ್ಲಿ ಎರಡು ಬಗೆಯ ಜೀವಾಣುಗಳನ್ನು ಬಳಸಿ ಹುಳದ ನಿಯಂತ್ರಣ ಮಾಡಲು ಸಾಧ್ಯ. ರೈತರಿಗೆ ಯಾವುದು ಸುಲಭವಾಗಿ ಲಭ್ಯವೋ ಅದನ್ನು ಅನುಸರಿಸಬಹುದು.
- ಒಂದನೆಯದಾಗಿ metarhizium anisoplea ಎಂಬುದು ಹುಳದ ಶರೀರವನ್ನು ಸೇರಿ ಅದನ್ನು ಸಾಯಿಸುವ ಒಂದು ಶಿಲೀಂದ್ರ.
- ಇದನ್ನು ಎಂಟಮೋಪೆಥೋಜೆನಿಕ್ ಶಿಲೀಂದ್ರ ಎನ್ನುತ್ತಾರೆ.
- ಹುಳಕ್ಕೆ ಈ ಶಿಲೀಂದ್ರ ಸೋಂಕು ಉಂಟಾದಾಗ ಅದು ರೋಗ ಗ್ರಸ್ತವಾಗುತ್ತದೆ.
- ಸತ್ತ ಹುಳದ ಬಣ್ಣ ಸಹ ಸ್ವಲ್ಪ ಮಟ್ಟಿಗೆ ನೀಲಿಯಾಗುತ್ತದೆ.(green muscardine disease)
- ಕಾರಣ ಶಿಲೀಂದ್ರದ ಬೀಜಾಣುವಿನ ಬಣ್ಣ ನೀಲಿಯಾಗಿರುತ್ತದೆ.
- ಇದರ ವಿಶೇಷವೇನೆಂದರೆ ಹುಳದ ಮೊಟ್ಟೆ, ಎಳೆ ಮರಿ ಮತ್ತು ಬೆಳೆದ ಹುಳಗಳನ್ನೂ ಸಹ ಇದು ನಾಶಮಾಡುತ್ತದೆ.
- ಇದಕ್ಕೆ ಬೇ. ಹುಳಗಳು ನಿರೋಧಕ ಶಕ್ತಿಯನ್ನು ಪಡೆಯುವುದಿಲ್ಲ. ಮಣ್ಣಿನಲ್ಲಿ ಇದು ಸಂಖ್ಯಾಭಿವೃದ್ದಿಯಾಗುತ್ತದೆ.
- ಎರಡನೆಯದಾಗಿ ಎಂಟಮೋ ಪಥೋಜೆನಿಕ್ ನಮಟೋಡು.EPN ಇದು ಬೇರು ಹುಳದ ಶರೀರದ ಒಳಗೆ ಸೇರಿ ಹುಳಕ್ಕೆ ರೋಗ ಬರುವಂತೆ ಮಾಡಿ ಸಾಯಿಸುತ್ತದೆ.
- ಇದರ ಪರಿಣಾಮ ತ್ವರಿತ. ಬಳಕೆ ಮಾಡಿದ 24—48 ಗಂಟೆ ಒಳಗೆ ಹುಳವನ್ನು ಸಾಯಿಸುತ್ತದೆ.
- EPN ಬೇರು ಹುಳದ ದೇಹದ ಒಳಗೆ ಸೇರಿ ಅಲ್ಲಿ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸಿ ಅದನ್ನು ಸಾಯುವಂತೆ ಮಾಡುತ್ತದೆ.
- ಸತ್ತ ಹುಳಗಳು ಕೆಂಪು ಬಣ್ಣದಲ್ಲಿರುತ್ತದೆ. ಇದು ಮಣ್ಣಿನಲ್ಲೇ ಇರುವಂತದ್ದು.
ರಾಸಾಯನಿಕವಾಗಿ ಫೋರೇಟ್ ಹರಳುಗಳನ್ನು ಮರದ ಬುಡದಲ್ಲಿ ನಾಲ್ಕು ಕಡೆ ತೂತು ಮಾಡಿ ತಲಾ 3-5 ಗ್ರಾಂ ನಷ್ಟು ಹಾಕಿ ಅದನ್ನು ಮುಚ್ಚಿದರೆ ಅದು ಪ್ಯುಮಿಗೇಶನ್ ಕ್ರಮದಲ್ಲಿ ಇರುವ ಹುಳವನ್ನು ಸಾಯುವಂತೆ ಮಾಡುತ್ತದೆ. ಕೀಟನಾಶಕವಾದ ಇಮಿಡಾಕ್ಲೋಫ್ರಿಡ್ ಅಥವಾ ಕ್ಲೋರೋಫೆರಿಫೋಸ್, ಹಾಗೆಯೇ ಈಗ ಕೆಲವು ಕಂಪನಿಗಳು white grub ನಿಯಂತ್ರಣಕ್ಕೆ ಹೊಸ ಔಷಧಿಯನ್ನು ಪರಿಚಯಿಸಿವೆ. Fipronl, Chlothianidin, ಇತ್ಯಾದಿ. ಇದರ ದ್ರಾವಣವನ್ನು ಮಣ್ಣಿಗೆ ಡೆಂಚಿಂಗ್ ಮಾಡಿಯೂ ನಿಯಂತ್ರಣ ,ಮಾಡಬಹುದು. ಆದರೆ ಅದರಿಂದ ಮಣ್ಣಿನ ಜೀವಾಣುಗಳು ನಾಶವಾಗುತ್ತವೆ.
ಹೇಗೆ ಬಳಕೆ ಮಾಡಬೇಕು:
- ಜೈವಿಕ ಹುಳ ನಾಶಕಗಳ ಬಳಕೆ ಸರಳವಾಗಿರುತ್ತದೆ.
- ಉತ್ಪನ್ನ ತಯಾರಕರು ಇದನ್ನು ರೈತರು ನೇರವಾಗಿ ಬಳಸಲು ಅನುಕೂಲವಾಗುವಂತೆ ತಯಾರಿಸಿಕೊಡುತ್ತಾರೆ.
- ಹುಡಿ ರೂಪದಲ್ಲಿ ಹಾಗೂ ದ್ರವರೂಪದಲ್ಲೂ ಇದನ್ನು ಒದಗಿಸುವವರಿದ್ದಾರೆ.
- ಇದನ್ನು ಖರೀದಿಸಿ ನೆಲಕ್ಕೆ ಈ ಸಮಯದಲ್ಲಿ ಸಿಂಪಡಿಸುವುದರಿಂದ ಹುಳಗಳ ನಾಶ ಮಾಡಲು ಸುಲಭವಾಗುತ್ತದೆ.
- ಹೆಚ್ಚಾಗಿ ಎಲ್ಲಾ ಉತ್ಪನ್ನಳನ್ನೂ ನಿರ್ದಿಷ್ಟ ಪ್ರಮಾಣದ ನೀರಿನೊಂದಿಗೆ ಮಿಶ್ರಣ ಮಾಡಿ ನೆಲಕ್ಕೆ ಸಿಂಪರಣೆ ಮಾಡುವುದನ್ನು ಶಿಫಾರಸು ಮಾಡುತ್ತಾರೆ.
- ನೀರಿನೊಂದಿಗೆ ಬೆಲ್ಲ ಅಥವಾ ಅನ್ನದ ದ್ರವ (ಗಂಜಿ) ಯನ್ನು ಸೇರಿಸಿದರೆ (Adaquate energy and nutrient supply increases the efficiency of microbial activity) ಅದಕ್ಕೆ ಆಹಾರ ದೊರೆತು ಅನುಕೂಲವಾಗುತ್ತದೆ.
- ಬಯೋ ಚಾರ್ ಅಥವಾ ಇದ್ದಿಲು ಹುಡಿ (ಇದರಲ್ಲಿ ಇರುವ ಕಾರ್ಬನ್) ಸೂಕ್ಷ್ಮಾಣು ಜೀವುಗಳ ಬದುಕುವಿಕೆಗೆ ನೆರವಾಗುತ್ತದೆ.
- ಹುಲ್ಲು ಕಳೆಗಳನ್ನು ( staraw incorporationnot only increases the C but also improves the aeration) ಕತ್ತರಿಸಿ ಹಾಕಿದರೆ ಅದು ಸಹ ಕಾರ್ಬನ್ ಮೂಲವಾಗಿ ಜೀವಾಣು ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ಜೈವಿಕ ಕೀಟನಾಶಕ ಬಳಸುವ ಸಮಯ:
- ಜೀವಾಣು ಗೊಬ್ಬರ, ಸಸ್ಯ ಸಂರಕ್ಷಕ ಯಾವುದನ್ನೇ ಬಳಸುವಾಗ ಮುಖ್ಯವಾಗಿ ಮಣ್ಣಿನ ಗುಣಮಟ್ಟ ಉತ್ತಮವಾಗಿರಬೇಕು.
- ಆಗ ಅವುಗಳ ಚಟುವಟಿಕೆ ಮತ್ತು ಸಂಖ್ಯಾಭಿವೃದ್ದಿಗೆ ಅನುಕೂಲವಾಗುತ್ತದೆ.(Soil oraganic matter is the important matter)
- ಬಳಕೆ ಮಾಡುವಾಗ ಮಣ್ಣಿನಲ್ಲಿ ತೇವಾಂಶ ಹಿತಮಿತವಾಗಿರಬೇಕು.
- ವಾತಾವರಣದ ಬಿಸಿ ಸಹ ಮಳೆಗಾಲದ ತರಹ ಕಡಿಮೆ ಇರಬೇಕು.
- ಸಾವಯವ ಗೊಬ್ಬರಗಳಾದ ಕೋಳಿ ಗೊಬ್ಬರ, ಮೀನಿನ ಗೊಬ್ಬರ, ಕಾಂಪೋಸ್ಟು, ಕುರಿ ಗೊಬ್ಬರ ಮುಂತಾದವುಗಳನ್ನು ಹಾಕಿ ಒಂದೆರಡು ವಾರದ ತರುವಾಯ ಸೂಕ್ಷ್ಮಾಣು ಜೀವಿಗಳ ತಯಾರಿಕೆಗಳನ್ನು ಬಳಸಿದರೆ ಪರಿಣಾಮ ಚೆನ್ನಾಗಿರುತ್ತದೆ.
- ಜೈವಿಕ ಉತ್ಪನ್ನಗಳನ್ನು ಬಳಸುವ 15-20 ದಿನ ಮುಂಚೆ ರಾಸಾಯನಿಕ ಶಿಲೀಂದ್ರ ನಾಶಕವನ್ನು ಮಣ್ಣಿಗೆ ಸೇರಿಸದಿರಿ.
- ಬಳಕೆ ಮಾಡಿ 15-20 ದಿನಗಳ ಕಾಲ ಬಳಕೆ ಮಾಡಬೇಡಿ.
ಬೇ. ಹುಳದ ನಿಯಂತ್ರಣಕ್ಕೆ ಹುಳ ಹೆಕ್ಕುವುದು,ಮಣ್ಣು ಅಗೆತ ಮಾಡಿ ಹಕ್ಕಿ ಇತ್ಯಾದಿಗಳು ತಿನ್ನುವಂತೆ ಮಾಡುವುದು, ಮುಂತಾದ ವಿಧಾನಗಳನ್ನು ಹೇಳಲಾಗುತ್ತದೆ. ಇದೆಲ್ಲವೂ ಈಗಿನ ಕೃಷಿ ವ್ಯವಸ್ಥೆಯಲ್ಲಿ ಮಾಡುವುದು ಕಷ್ಟ ಸಾಧ್ಯ. ಬೆಳಕಿನ ದೀಪದ ಟ್ರಾಪ್ ಅಳವಡಿಸಬಹುದು. ಉಳಿದಂತೆ ರಾಸಾಯನಿಕ ವಿಧಾನ ಸಹ ಈಗ ದುಬಾರಿ. ಆದ ಕಾರಣ ಜೈವಿಕ ವಿಧಾನವೇ ಸೂಕ್ತ.