ಆಡಿಕೆ ಗರಿ ಹಳದಿಯಾಗಲು ಇದು ಕಾರಣ.

ಸಸ್ಯಗಳಿಗೆ ಉತ್ತಮ ಬಿಸಿಲು ದೊರೆತಾಗ ಅವುಗಳ ಎಲೆಗಳು ಹೆಚ್ಚು ಹೆಚ್ಚು ಉಸಿರಾಟ  ಕ್ರಿಯೆ  ನಡೆಸಿ ಚೆನ್ನಾಗಿ ಬೆಳೆಯುತ್ತವೆ. ಆದರೆ  ಕೆಲವೊಮ್ಮೆ ಈ ಅತಿಯಾದ ತಾಪಮಾನ ಕೆಲವು ಕೀಟಗಳನ್ನು ಆಕರ್ಷಿಸುತ್ತವೆ. ಇಂತದ್ದರಲ್ಲಿ ಒಂದು ಅಡಿಕೆಯ ಗರಿಯಲ್ಲಿ ವಾಸ ಮಾಡುವ ಕೆಂಪು ಮತ್ತು ಬಿಳಿ ತಿಗಣೆ.

ಎಲೆ ಹೀಗಾಗುತ್ತದೆ.
  • ಅಡಿಕೆ ಬೆಳೆಗೆ  ಸಹ್ಯ ತಾಪಮಾನ 35 ಡಿಗ್ರಿ  ತನಕ.
  • ಅದಕ್ಕಿಂತ ಹೆಚ್ಚಾದರೆ ಅದು ಸಹಿಸಿಕೊಳ್ಳುವುದಿಲ್ಲ.
  • ಅದಕ್ಕಾಗಿಯೇ  ನಮ್ಮ ಹಿರಿಯರು ಅಡಿಕೆ ತೋಟವನ್ನು ಅದಕ್ಕೆ ಸೂಕ್ತವಾದ ಜಾಗದಲ್ಲಿ ಮಾತ್ರ ಮಾಡಬೇಕು ಎನ್ನುತ್ತಿದ್ದರು.
  • ಅಡಿಕೆ ಬೆಳೆಯಲು ಸೂಕ್ತವಾದ ಜಾಗ ಎಂದರೆ  ಪಶ್ಚಿಮ ದಿಕ್ಕಿನಲ್ಲಿ  ನೆರಳು ಇರುವಂತದ್ದು.( ತೆಂಕು ಕೂಡಿದ ಕಣಿವೆ ಸ್ಥಳ)
  • ಅದನ್ನು ಈಗ ಎಲ್ಲರೂ ಅನುಸರಿಸಲು ಸಾಧ್ಯವಾಗುತ್ತಿಲ್ಲ.
  • ಆಂತಹ ಜಾಗಗಳೂ ಸಹ ಕಡಿಮೆ. ಗುಡ್ದ ಜಾಗ, ಎಲ್ಲಾ ದಿಕ್ಕಿನಲ್ಲೂ  ತೆರೆದಿಟ್ಟ ಜಾಗಗಳಲ್ಲೂ ಅಡಿಕೆ  ಬೆಳೆಯುತ್ತೇವೆ.
  • ಈ ಸಮಯದಲ್ಲಿ ನಮಗೆ ಎದುರಾಗುವ ಅತೀ ದೊಡ್ಡ ಸಮಸ್ಯೆ ಎಂದರೆ  ಬೇಸಿಗೆಯಲ್ಲಿ ಎಲೆ ಹಳದಿಯಾಗುವುದು.
  • ಕ್ರಮೇಣ ಆ ಎಲೆಯೇ  ಒಣಗಿ ಸತ್ತು  ಹೋಗುವುದೂ ಇದೆ.
ಇದು ಮೈಟ್. ಹಿಗ್ಗಿಸಿದಾಗ ಹೀಗೆ ಕಾಣುತ್ತದೆ.

ಕಾರಣ ಏನು?

  • ಅಡಿಕೆ ಮರಗಳ ಎಲೆ ಹಳದಿಯಾಗಲು ಪ್ರಮುಖ ಕಾರಣ ಬಿಸಿಲಿನ ಹೊಡೆತ ಅಲ್ಲ.
  • ಬಿಸಿಲಿನ ಹೊಡೆತ ಒಂದು ಪೂರಕ ವಾತಾವರಣ ಅಷ್ಟೇ.
  • ತಾಪಮಾನ 35 ಡಿಗ್ರಿ ದಾಟಿದಾಗ ಅಡಿಕೆ ಎಲೆಗಳಿಗೆ  ಎರಡು ಜಾತಿಯ ಮೈಟ್  ಗಳ ಹಾವಳಿ ಪ್ರಾರಂಭವಾಗುತ್ತದೆ.
  • ಒಂದು ಕೆಂಪು ಮೈಟ್,  ಅಥವಾ ಕೆಂಪು ತಿಗಣೆ, (Royal indica sap) ಇನ್ನೊಂದು ಬಿಳಿ ಮೈಟ್  ಅಥವಾ ಬಿಳಿ ತಿಗಣೆ (Oligonas indica sap)
  • ಇದನ್ನು ಮೈನರ್ ಪೆಸ್ಟ್ ಎಂದು ಗುರುತಿಸಲಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ  ಇದು ಮೇಜರ್ ಪೆಸ್ಟ್ ಆಗಿ  ತೊಂದರೆ  ಕೊಡಲಾರಂಭಿಸಿದೆ.
  •  ಇವು ಎಲೆಗಳ ಅಡಿ ಭಾಗದಲ್ಲಿ ಕುಳಿತು ರಸ ಹೀರುತ್ತವೆ.
ಎಲೆ ಅಡಿ ಭಾಗವನ್ನು ತಿಕ್ಕಿದಾಗ ಹೀಗೆ ಕಾಣುತ್ತದೆ
  • ರಸ ಹೀರಿ ಎಲೆ  ಒಣಗುತ್ತದೆ.
  • ಸಣ್ಣ ಗಿಡಗಳಿಗೆ ಇದರ ತೊಂದರೆ  ಹೆಚ್ಚು.
  • ಕೆಲವೊಮ್ಮೆ ದೊಡ್ಡ ಮರಗಳಿಗೂ ಬಾಧಿಸುತ್ತವೆ.

ಇದು ಮಿತಿ ಮೀರಿದಾಗ ಅಡಿಕೆ ಮಿಡಿಗಳಿಗೂ ಬಾಧಿಸುವ ಸಾಧ್ಯತೆ  ಇದೆ. ಇಂತಹ  ಮಿಡಿಗಳು ಉದುರುತ್ತವೆ. ಇದನ್ನು ತಿನ್ನುವ ಒಂದು ಪರಭಕ್ಷಕ  ಜೇಡ ಇದೆ. ಅದರ ಸಂತತಿ ಕಡಿಮೆಯಾಗಿ ಹಾವಳಿ ಹೆಚ್ಚಿದೆ. ಕೀಟನಾಶಕಗಳು ಇವುಗಳ ಅವನತಿಗೆ ಒಂದು  ಕಾರಣ.

ಇದು ಪರಭಕ್ಷಕ ಜೇಡ

ನಿಯಂತ್ರಣ:

  • ಒಂದು ಎರಡು ಮಳೆ ಬಂದ ತಕ್ಷಣ ಈ ಮೈಟ್ ಹಾವಳಿ ಕಡಿಮೆಯಾಗುತ್ತದೆ.
  • ಮಳೆ ಬರುವುದು ತಡವಾದರೆ ಬಹಳ ಹಾನಿಯುಂಟಾಗುತ್ತದೆ.
  • ಈ ರೀತಿ ಆಗುವುದಕ್ಕೆ ಪ್ರಮುಖ ಕಾರಣ ನೇರವಾಗಿ ಸಸ್ಯದ ಎಲೆಗಳಿಗೆ  ಬಿಸಿಲು ಬೀಳುವುದು.
  • ಇದನ್ನು  ತಪ್ಪಿಸಲು  ಪಶ್ಚಿಮ ದಿಕ್ಕಿಗೆ ನೆರಳು ಇರುವಂತೆ ಮಾಡಬೇಕು.
ಬಿಳಿ ಮೈಟ್
  • ಎಳೆ  ಸಸಿಗಳಿಗೆ ಆ ಭಾಗದಲ್ಲಿ ತೆಂಗಿನ ಗರಿ ಇಲ್ಲವೇ ನೆರಳು ಬಲೆ ಅಥವಾ ಮರದ ಟೊಂಗೆಯನ್ನು ನೆಟ್ಟು ಅದಕ್ಕೆ ಅಲಸಂಡೆ ಮುಂತಾದ ಬಳ್ಳಿಯನ್ನು ಹಬ್ಬಿಸಬಹುದು.
  • ಎಳೆ  ಸಸ್ಯಗಳ ಎಲೆಗಳಿಗೆ ಶೇ.1/2 ಸುಣ್ಣದ ದ್ರಾವಣವನ್ನು(100 ಲೀ. ನೀರಿಗೆ  500  ಗ್ರಾಂ ಸುಣ್ಣ) ಎಲೆ ಅಡಿಭಾಗಕ್ಕೆ ಸಿಂಪರಣೆ ಮಾಡಬೇಕು.
  • ದೊಡ್ದ ಮರಗಳಿಗೂ ಇದನ್ನು ಮಾಡಬಹುದು.

ಮೈಟ್ ಬಾಧಿತ ಸಸ್ಯ ಹೀಗೆ ಒಣಗಿ ಸಾಯುತ್ತದೆ.

 

ಸುಣ್ಣದ ದ್ರಾವಣದ ಸಿಂಪರಣೆ ಮಾಡುವುದರಿಂದ ಸಸ್ಯಗಳಿಗೆ ಒಂದೆಡೆ ಕ್ಯಾಲ್ಸಿಯಂ ಪೋಷಕಾಂಶದ ಅವಶ್ಯಕತೆಯೂ ತೀರಿದಂತೆ ಆಗುತ್ತದೆ.  ಮೈಟ್ ಗಳು ಎಲೆಯ ಅಡಿ ಭಾಗದಲ್ಲಿ ಲೇಪನ ಇದ್ದಾಗ ಅಲ್ಲಿ ವಾಸಮಾಡಲಾರವು. ಸುಣ್ಣ+ ಗಂಧಕ+ ಮೆಗ್ನೀಶಿಯಂ ಪೋಷಗಳು ಅವಶ್ಯಕವಾಗಿ ಬೆಳೆಗಳಿಗೆ ಬೇಕು. ಅದು ಕಡಿಮೆಯಾದಾಗ ಸಸ್ಯದ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

ಮೈಟ್ ಬಾಧಿತ ಸಸ್ಯ ಹೀಗೆ ಒಣಗಿ ಸಾಯುತ್ತದೆ.

ರಾಸಾಯನಿಕ ಹತೋಟಿ:

  • ತಿಗಣೆಗಳ ಹತೋಟಿಗೆ ಪ್ರಾರಂಭಿಕ ಹಂತದಲ್ಲಿ ವೆಟ್ಟೆಬಲ್ ಸಲ್ಫರ್ ಉತ್ತಮ.
  • ಇದು ರಾಸಾಯನಿಕ ಆದರೂ ಸಹ ಯಾರಿಗೂ ಯಾವ  ಹಾನಿಯೂ ಇರುವುದಿಲ್ಲ.
  •   ತಿಗಣೆಯನ್ನು ಕೊಲ್ಲಲು ಕೆಲವು  ಕೀಟನಾಶಕಗಳಿವೆ.
  • ಡೈಕೋಫಾಲ್  ಹಾಗೆಯೇ ಇನ್ನೂ ಕೆಲವು ತಿಗಣೆ ನಾಶಕಗಳು ಮಾರುಕಟ್ಟೆಯಲ್ಲಿ  ಲಭ್ಯವಿವೆ.
  • ಇದನ್ನು ಶಿಫಾರಿತ ಪ್ರಮಾಣ ( 2 ಅಥವಾ-2.5 ಮಿಲಿ) ದಲ್ಲಿ ನೀಇನಲ್ಲಿ ಮಿಶ್ರಣ ಮಾಡಿ ಎಲೆ ಅಡಿ ಭಾಗಕ್ಕೆ ಸಿಂಪರಣೆ  ಮಾಡಬೇಕು.
ಎಳೆ ಕಾಯಿಗೆ ಬಾಧಿಸಿದ್ದು.

ದೊಡ್ದ ಮರಗಳಿಗೆ  ಸಿಂಪರಣೆ  ಮಾಡುವುದು ಕಷ್ಟ. ಅಡಿಕೆ ಮರಗಳಿಗೆ  ನಾವು ಕೊಡುವ ಗೊಬ್ಬರದಲ್ಲಿ ಗಂಧಕದ ಅಂಶದ ಕೊರತೆಯಿಂದಾಗಿ ಈ ಸಮಸ್ಯೆ  ಹೆಚ್ಚಾಗುತ್ತದೆ. ಗಂಧಕ ಇರುವ ಗೊಬ್ಬರಗಳನ್ನು  ಕೊಡಬೇಕು. ಮೆಗ್ನೀಶಿಯಂ ಸಲ್ಫೇಟ್, ಝಿಂಕ್ ಸಲ್ಫೇಟ್, ಸಲ್ಫೇಟ್ ಆಪ್ ಪೊಟ್ಯಾಶ್ ಅಥವಾ 20:20:0:13  ಇದರಲ್ಲಿ ಗಂಧಕದ ಅಂಶ ಇರುತ್ತದೆ. ಇದನ್ನು ಕೊಡುವುದರಿಂದ ಸಸ್ಯಗಳಿಗೆ ಕೀಟ  ನಿರೋಧಕ ಶಕ್ತಿ ಹೆಚ್ಚುತ್ತದೆ.

ಮೈಟ್ ತೊಂದರೆಯಿಂದ ಎಳೆ  ಸಸ್ಯಗಳು ಸಾಯುತ್ತವೆ. ದೊಡ್ಡ ಸಸ್ಯಗಳ ಬೆಳೆವಣಿಗೆ ಗಣನೀಯವಾಗಿ ಕಡಿಮೆಯಾಗುತ್ತದೆ. ಎಲೆಗಳು ಹರಿತ್ತು ಕಳೆದುಕೊಂಡರೆ ಸಸ್ಯದ ಬೆಳೆವಣಿಗೆ ಕುಂಠಿತವಾಗುತ್ತದೆ. ಆದುದರಿಂದ ಇದನ್ನು ನಿರ್ಲಕ್ಷ  ಮಾಡಬೇಡಿ.

 

5 thoughts on “ಆಡಿಕೆ ಗರಿ ಹಳದಿಯಾಗಲು ಇದು ಕಾರಣ.

    1. This is private website Not related to Government in any way…
      we are providing Agricultural News
      Thank you for reading!! Please continue

  1. ತುಂಬಾ ಒಳ್ಳೆಯ ಮಾಹಿತಿ ನಮ್ಮ ರೈತರಿಗೆ ಸಿಗುತ್ತಿದೆ. ಧನ್ಯವಾದಗಳು. ಹೀಗೇ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಕೊಡುತ್ತಾ ಇರಿ.
    ನಿಮ್ಮ WhatsApp Group ಇದ್ದರೆ ದಯವಿಟ್ಟು ತಿಳಿಸಿ.

Leave a Reply

Your email address will not be published. Required fields are marked *

error: Content is protected !!