ಬೇಸಿಗೆಯಲ್ಲಿ ಅಡಿಕೆ ಬೆಳೆಗಾರರ ನಿದ್ದೆಗೆಡಿಸುವ ಸಮಸ್ಯೆ ಇದು. ಬೆಳೆಗಾರರು ಇದನ್ನು ಉಳಿಸಲು ಯಾವ ಉಪಚಾರಕ್ಕೂ ಸಿದ್ದರು. ಇದಕ್ಕೆ ಈ ತನಕ ಯಾರೂ ನಿಖರ ಕಾರಣವನ್ನು ನೀಡಿದವರಿಲ್ಲ. ಆದರೆ ಯಾರೂ ಪರಿಹಾರ ಇಲ್ಲ ಎಂದು ಹೇಳುವವರಿಲ್ಲ. ಇದರ ಬಗ್ಗೆ ಕೆಲವು ಯಾರೂ ಹೇಳದ ವಿಚಾರಗಳು ಇಲ್ಲಿವೆ.
- ಅಡಿಕೆಯ ಮರದ ಹೂ ಗೊಂಚಲಿನಲ್ಲಿ ಗಂಡು ಹಾಗೂ ಹೆಣ್ಣು ಹೂವುಗಳು ಇರುತ್ತವೆ.
- ಗಂಡು ಹೂವು ಉದುರಲಿಕ್ಕೇ ಇರುವುದು. ಹೆಣ್ಣು ಹೂವು ಮಾತ್ರ ಉದುರಬಾರದು.
- ಆದೆಲ್ಲವೂ ಉಳಿದರೆ ಅಡಿಕೆ ಫಸಲು ಉತ್ತಮವಾಗಿರುತ್ತದೆ.
- ಆದರೆ ಅಲ್ಲೇ ನಮ್ಮ ಅದೃಷ್ಟ ಕೈ ಕೊಡುವುದು.
- ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುವುದು ಇಲ್ಲೇ ಆಗಿರುತ್ತದೆ.
- ಗಂಡು ಹೂವೂ ಉದುರುತ್ತದೆ. ಹೆಣ್ಣು ಹೂವೂ ಉದುರುತ್ತದೆ. ಹೂಗೊಂಚಲು ಒಣಗಿ ಮರ ಖಾಲಿಯಾಗಿರುತ್ತದೆ.
ಯಾಕೆ ಮಿಡಿ ಉದುರುತ್ತದೆ:
- ಅಡಿಕೆ ಮರದ ಧಾರಣಾ ಸಾಮರ್ಥ್ಯಕ್ಕನುಗುಣವಾಗಿ ಮಿಡಿ ನಿಲ್ಲುತ್ತದೆ ಹಾಗೆಯೇ ಉದುರುತ್ತದೆ.
- ಕೀಟ ಮತ್ತು ರೋಗ ಸಮಸ್ಯೆ ಎಂಬುದು ಇಲ್ಲ ಎನ್ನುವಂತಿಲ್ಲ. ಹಾಗೆಯೇ ಇದೆ ಎನ್ನುವಂತೆಯೂ ಇಲ್ಲ.
- ಅಡಿಕೆ ಮರದ ಆರೋಗ್ಯವೇ ಮಿಡಿ ಉಳಿಯಲು ಮತ್ತು ಉದುರಲು ಪ್ರಮುಖ ಕಾರಣ.
ಆರೋಗ್ಯ ಎಂದರೆ ಅದು ಹೂ ಬಿಡುವ ಸಮಯದ್ದು ಅಲ್ಲ. ಅದು ಹೂ ಗೊಂಚಲು ಮೂಡುವ ಸಮಯದ್ದು. ಅಡಿಕೆ ಮರದಲ್ಲಿ ಹೂ ಸಿಂಗಾರದ ಉಗಮ ಸುಮಾರು 8 ತಿಂಗಳ ಮುಂಚೆ ಆಗಿರುತ್ತದೆ.
- ಆ ಸಮಯದಲ್ಲಿ ಮರಕ್ಕೆ ಲಭ್ಯವಾಗುವ ಪೋಷಕಾಂಶಗಳು ಮತ್ತು ನೀರು ಮತ್ತು ವಾತಾವರಣದ ಮೇಲೆ ಅದರ ಶಕ್ತಿ ಅಡಗಿರುತ್ತದೆ.
- ಮಿಳ್ಳೆ ಉದುರುವುದನ್ನು ಕೀಟನಾಶಕ ರೋಗ ನಾಶಕ ಸಿಂಪಡಿಸಿ ಸಂಪೂರ್ಣ ನಿಯಂತ್ರಣ ಮಾಡುವುದು ಅಸಾಧ್ಯ.
- ಕೀಟ- ರೋಗ ನಾಶಕದ ಬಳಕೆ ನಮ್ಮ ತೃಪ್ತಿಗಾಗಿಯೇ ಹೊರತು ಭಾರೀ ಫಲಿತಾಂಶ ಸಿಗಲಾರದು.
- ಹೂ ಗೊಂಚಲಿನಲ್ಲಿ ಮಿಡಿ ಕಾಯಿ ಕಚ್ಚಿಕೊಳ್ಳಲು ಹೆಣ್ಣು ಹೂವು ಪರಾಗ ಸ್ವೀಕರಿಸಲು ಸಿದ್ದವಾಗುವಾಗ ಯಥೇಚ್ಚವಾಗಿ ಪರಾಗ ಕಣಗಳು ದೊರೆಯಬೇಕು.
- ಹೂ ಗೊಂಚಲಿನಲ್ಲಿ ಗಂಡು ಹೆಣ್ಣು ಹೂವುಗಳ ಅನುಪಾತ ಸರಿಯಾಗಿರಬೇಕು.
ಆರೋಗ್ಯವಂತ ಅಡಿಕೆ ಮರದಲ್ಲಿ ಕನಿಷ್ಟ9 -11 ಉತ್ತಮ ಗರಿಗಳಿರಬೇಕು. ಅದಕ್ಕಿಂತ ಕಡಿಮೆ ಇರುವ ಮರಗಳ ಧಾರಣಾ ಸಾಮರ್ಥ್ಯ ಕಡಿಮೆ ಇರುವ ಕಾರಣ ಅದರಲ್ಲಿ ಬೆರಳೆಣಿಕೆಯ ಮಿಡಿಗಳು ಉಳಿಯುತ್ತವೆ.
ಪರಿಹಾರ ಏನು:
- ಅಡಿಕೆ ಬೆಳೆಯುವ ಬೆಳೆಗಾರರು ಮರಕ್ಕೆ ಮೇ ತಿಂಗಳ ಕೊನೇ ವಾರದಲ್ಲಿ ಮಣ್ಣು ತೇವ ಆಗಿ ಬಿಸಿ ಇರುವಾಗಲೇ ಒಂದು ಕಂತು ಗೊಬ್ಬರವನ್ನು ಕೊಡಬೇಕು.
- ಅದು 150-60-210 ಪ್ರಮಾಣವನ್ನು ಮೂರು ಪಾಲು ಮಾಡಿ 50 -20-75( ಯುರಿಯಾ 125 ಗ್ರಾಂ, ಡಿಎಪಿ 50 ಗ್ರಾಂ ಮತ್ತು ಮ್ಯುರೇಟ್ ಆಫ್ ಪೊಟ್ಯಾಶ್ 125 ಗ್ರಾಂ ಕೊಡಬೇಕು.
- ಸಪ್ಟೆಂಬರ್ ಕೊನೇ ವಾರದಲ್ಲಿ ಮತ್ತೆ ಇದೇ ಪ್ರಮಾಣವನ್ನು ಪುನರಾವರ್ತಿಸಬೇಕು.
- ಹಾಗೆಯೇ ಜನವರಿ ಕೊನೇ ವಾರದಲ್ಲಿ ಇನ್ನೊಮ್ಮೆ ಇದನ್ನು ಕೊಡಬೇಕು.
- ಸಪ್ಟೆಂಬರ್ ತಿಂಗಳಲ್ಲಿ ಪ್ರತೀ ಮರಕ್ಕೆ 250 ಗ್ರಾಂ ನಂತೆ ಸುಣ್ಣ ಮತ್ತು 100 ಗ್ರಾಂ ಮೆಗ್ನೀಶಿಯಂ ಸಲ್ಫೇಟ್ ಮತ್ತು 50 ಗ್ರಾಂ ಸತುವಿನ ಸಲ್ಫೇಟ್ ಗೊಬ್ಬರವನ್ನು ಕೊಡಬೇಕು.
- ಸುಣ್ಣವನ್ನು ಕೊಟ್ಟು 15 ದಿನಗಳ ನಂತರ ಗೊಬ್ಬರಗಳನ್ನು ಕೊಡಬೇಕು.
ಯಾವುದೇ ಕಾರಣಕ್ಕೆ ಇದನ್ನು ತಡಮಾಡಬಾರದು. ಹೀಗೆ ಮಾಡಿದರೆ ಹೊತ್ತಲ್ಲದ ಹೊತ್ತಿನಲ್ಲಿ ಊಟಮಾಡಿದಂತಾಗುತ್ತದೆ.
- ಇದು ಮರದ ಆರೋಗ್ಯವನ್ನು ಸರಿಯಾಗಿ ಇಡುತ್ತದೆ.
- ಬೇಸಿಗೆಯ ದಿನಗಳಲ್ಲಿ ನೀರು ಹೆಚ್ಚು ಕೊಡುವುದಕ್ಕಿಂತಲೂ ನೀರು ಆವೀಕರಣ ಆಗದಂತೆ ಬುಡಕ್ಕೆ ಮುಚ್ಚಲು ಹೊದಿಸಬೇಕು.
- ಮರದ ಆರೋಗ್ಯವೇ ಮಿಡಿ ಉದುರುವುದಕ್ಕೆ ಮತ್ತು ಸೆಟ್ ಆಗುವುದಕ್ಕೆ ಮೂಲ ಕಾರಣ.
ಸಿಂಪರಣೆ ಬೇಡವೇ:
- ವಿಷ ರಾಸಾಯನಿಕ ಕೀಟ- ರೋಗ ನಾಶಕ ಸಿಂಪರಣೆ ಮಾಡಬೇಕಾದರೆ ಮೊದಲ ಸಿಂಗಾರ ಬರುವ ಸಮಯದಲ್ಲಿ( ಡಿಸೆಂಬರ್ – ಜನವರಿ) ಸಿಂಗಾರ ಒಡೆಯದಿದ್ದರೆ ಅದನ್ನು ಒಡೆದು ಒಂದು ಬಾರಿ ಸಿಂಗಾರ ತಿನ್ನುವ ಹುಳ ವನ್ನು ಕೊಲ್ಲಲು ಅದರ ಸಂತತಿಯನ್ನು ನಾಶಮಾಡಲು ಒಂದು ಸಿಂಪರಣೆ ಮಾಡಿ.
- ಇದು ಪದೇ ಪದೇ ಬೇಡ. ಒಂದೇ ಬಾರಿ ಅದನ್ನು ನಾಶ ಮಾಡಬೇಕು.
- ಆಗ ಸಿಂಗಾರ ಕಡಿಮೆ ಇರುತ್ತದೆ.
- ಔಷಧಿ ಕಡಿಮೆ ಸಾಕಾಗುತ್ತದೆ. ಪರಾಗದಾನಿಗಳಿಗೂ ಹೆಚ್ಚಿನ ಹಾನಿ ಉಂಟಾಗುವುದಿಲ್ಲ.
- ಕೊನೆಯ ಸಿಂಪರಣೆಯನ್ನು ಎಪ್ರೀಲ್ ತಿಂಗಳಲ್ಲಿ ಪ್ರಭಲ ಕೀಟ ನಾಶಕ – ರೋಗ ನಾಶಕದ ಬದಲಿಗೆ ಶೇ. 0.5 ( 100 ಲೀ. ನೀರು ½ + ½ ಮೈಲುತುತ್ತೆ ಮತ್ತು ಸುಣ್ಣದ ಮಿಶ್ರಣ ಮಾಡಿ ಸಿಂಪರಣೆ ಮಾಡಿದರೆ ಒಂದೆಡೆ ಶಿಲೀಂದ್ರ ನಾಶಕ ಮತ್ತು ಕೀಟನಾಶಕವಾಗಿಯೂ ಕೆಲಸ ಮಾಡುತ್ತದೆ.
- ಆ ಸಮಯದಲ್ಲಿ ಕ್ಯಾಲ್ಸಿಯಂ, ಗಂಧಕ ಮತ್ತು ತಾಮ್ರ ಪೋಷಕದ ಅಗತ್ಯ ಸಸ್ಯಗಳಿಗೆ ಇರುವ ಕಾರಣ ಇದು ಆ ಅವಶ್ಯಕತೆಯನ್ನು ನೀಗಿಸುತ್ತದೆ.
ಇದು ನಿಮ್ಮ ಗಮನದಲ್ಲಿರಲಿ:
- ಮಾವಿನ ಮರದಲ್ಲಿ ಎಷ್ಟೇ ಹೂ ಬಂದರೂ ಉಳಿಯುವ ಪ್ರಮಾಣ ಶೇ. 10 ಮಾತ್ರ.
- ಅತ್ಯಧಿಕ ಹೂ ಬಂದ ವರ್ಷ ಸಾಕಷ್ಟು ಹೂ ಇರುವಾಗಲೇ ಉದುರುತ್ತದೆ.
- ಸುಮಾರು 25% ಉಳಿದುಕೊಂಡಿರುತ್ತದೆ.
- ಆ ಸಮಯದಲ್ಲಿ ಸಿಂಪರಣೆ ಮಾಡಿದರೆ ಅದು ಉಳಿದು ಮಿಡಿಯಾಗುತ್ತದೆ.
- ಮಿಡಿ ಹಂತದಲ್ಲಿ ಮತ್ತೆ 5-10 % ಉದುರುತ್ತದೆ.
- ನಂತರ ಉಳಿದ 15% ದಲ್ಲಿ ಮತ್ತೆ ಕಾಯಿ ಹಂತದಲ್ಲಿ ಸುಮಾರು 2-3 % ಉದುರಿ ಹೋಗುತ್ತದೆ.
- ಔಷಧಿ ಇತ್ಯಾದಿ ಸಿಂಪಡಿಸಿದ ಪರಿಣಾಮವೋ ಏನೋ ಒಟ್ಟಾರೆ ಇಳುವರಿಯಲ್ಲಿ 1-2 % ಹೆಚ್ಚಾಗಬಹುದೇ ಹೊರತು ಭಾರೀ ಹೆಚ್ಚಳವಾಗಲಾರದು.
ಒಂದು ಮಾವಿನ ಮರದ ಗೊಂಚಲಲ್ಲಿ 10-20 ಕಾಯಿಗಳಾಗಬಹುದು. ಆದರೆ ಅದರ ಧಾರಣ ಸಾಮರ್ಥ್ಯ ಅವಲಂಭಿಸಿ ಕೊನೆ ತನಕ ಉಳಿಯುವುದು 5-6 ಕಾಯಿಗಳು ಮಾತ್ರ.
- ಹೆಚ್ಚು ಕಾಯಿಗಳು ಉಳಿದರೆ ಆಹಾರ ಸಾಲದೆ ಎಲ್ಲವೂ ಸೊರಗುತ್ತದೆ.
- ಅದರ ಧಾರಣಾ ಸಾಮರ್ಥ್ಯಕ್ಕನುಗುಣವಾಗಿ ಉಳಿದರೆ ಅವು ಸೂಕ್ತ ಗಾತ್ರದಲ್ಲಿ ಆರೋಗ್ಯವಾಗಿ ಬೆಳೆಯುತ್ತದೆ.
ಇದನ್ನು ಎಲ್ಲಾ ಅಡಿಕೆ ಬೆಳೆಗಾರರೂ ಅರಿತುಕೊಳ್ಳಬೇಕು. ಹೆಚ್ಚು ಸಿಂಗಾರ ಬಿಟ್ಟ ವರ್ಷ ಕಾಯಿ ಕಚ್ಚುವಿಕೆ ಕಡಿಮೆ. ಆ ಸಮಯದಲ್ಲಿ ಯಾವ ಹೂ ಗೊಂಚಲಿಗೂ ಸಮರ್ಪಕವಾಗಿ ಪೋಷಕಗಳು ಲಭ್ಯವಾಗದೆ ಎಲ್ಲವೂ ಸೊರಗುತ್ತದೆ.
ಆದ ಕಾರಣ ನೀವು ಸರಿಯಾಗಿ ಪೋಷಕಗಳನ್ನು ಕೊಟ್ಟಿದ್ದರೆ, ಮರದ ಆರೋಗ್ಯ ಉತ್ತಮವಾಗಿದ್ದರೆ ಮಿಳ್ಳೆ ಉದುರುವಿಕೆ ಕಡಿಮೆಯಾಗುತ್ತದೆ. ಮೊದಲ ಮತ್ತು ಕೊನೆಯ ಹೂ ಗೊಂಚಲಿನಲ್ಲಿ ಯಾವಾಗಲೂ ಕಡಿಮೆ ಕಾಯಿಗಳೇ ಇರುವುದು.
It’s very helpful info for areca farmers….
Thanks for sharing…..
Please share our post in your facebook .. so it will reach many people