ಅಡಿಕೆಯ ಮಿಳ್ಳೆ ಉದುರುವುದಕ್ಕೆ ಇದು ಕಾರಣ.

ಬೇಸಿಗೆಯಲ್ಲಿ ಅಡಿಕೆ ಬೆಳೆಗಾರರ ನಿದ್ದೆಗೆಡಿಸುವ ಸಮಸ್ಯೆ ಇದು. ಬೆಳೆಗಾರರು ಇದನ್ನು ಉಳಿಸಲು ಯಾವ ಉಪಚಾರಕ್ಕೂ ಸಿದ್ದರು. ಇದಕ್ಕೆ ಈ ತನಕ ಯಾರೂ ನಿಖರ ಕಾರಣವನ್ನು ನೀಡಿದವರಿಲ್ಲ.  ಆದರೆ ಯಾರೂ ಪರಿಹಾರ ಇಲ್ಲ ಎಂದು ಹೇಳುವವರಿಲ್ಲ. ಇದರ ಬಗ್ಗೆ ಕೆಲವು ಯಾರೂ ಹೇಳದ ವಿಚಾರಗಳು ಇಲ್ಲಿವೆ.

 • ಅಡಿಕೆಯ ಮರದ ಹೂ ಗೊಂಚಲಿನಲ್ಲಿ ಗಂಡು  ಹಾಗೂ ಹೆಣ್ಣು ಹೂವುಗಳು ಇರುತ್ತವೆ.
 • ಗಂಡು ಹೂವು ಉದುರಲಿಕ್ಕೇ ಇರುವುದು. ಹೆಣ್ಣು ಹೂವು ಮಾತ್ರ ಉದುರಬಾರದು.
 • ಆದೆಲ್ಲವೂ ಉಳಿದರೆ ಅಡಿಕೆ ಫಸಲು ಉತ್ತಮವಾಗಿರುತ್ತದೆ.
 • ಆದರೆ ಅಲ್ಲೇ ನಮ್ಮ ಅದೃಷ್ಟ ಕೈ ಕೊಡುವುದು.
 • ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುವುದು ಇಲ್ಲೇ ಆಗಿರುತ್ತದೆ.
 • ಗಂಡು ಹೂವೂ ಉದುರುತ್ತದೆ. ಹೆಣ್ಣು ಹೂವೂ ಉದುರುತ್ತದೆ. ಹೂಗೊಂಚಲು  ಒಣಗಿ ಮರ ಖಾಲಿಯಾಗಿರುತ್ತದೆ.
ಪರಾಗಸ್ಪರ್ಶಕ್ಕೆ ಪರಾಗಕಣಗಳು ದೊರೆಯದಿದ್ದರೆ ಹೀಗೆ ಒಣಗುತ್ತದೆ.

ಯಾಕೆ ಮಿಡಿ ಉದುರುತ್ತದೆ:

 • ಅಡಿಕೆ ಮರದ ಧಾರಣಾ ಸಾಮರ್ಥ್ಯಕ್ಕನುಗುಣವಾಗಿ ಮಿಡಿ ನಿಲ್ಲುತ್ತದೆ ಹಾಗೆಯೇ  ಉದುರುತ್ತದೆ.
 • ಕೀಟ ಮತ್ತು ರೋಗ ಸಮಸ್ಯೆ ಎಂಬುದು ಇಲ್ಲ ಎನ್ನುವಂತಿಲ್ಲ. ಹಾಗೆಯೇ ಇದೆ ಎನ್ನುವಂತೆಯೂ ಇಲ್ಲ.
 • ಅಡಿಕೆ ಮರದ ಆರೋಗ್ಯವೇ ಮಿಡಿ ಉಳಿಯಲು ಮತ್ತು ಉದುರಲು ಪ್ರಮುಖ ಕಾರಣ.

ಆರೋಗ್ಯ ಎಂದರೆ ಅದು ಹೂ ಬಿಡುವ ಸಮಯದ್ದು ಅಲ್ಲ. ಅದು ಹೂ ಗೊಂಚಲು  ಮೂಡುವ ಸಮಯದ್ದು. ಅಡಿಕೆ ಮರದಲ್ಲಿ ಹೂ ಸಿಂಗಾರದ ಉಗಮ ಸುಮಾರು 8 ತಿಂಗಳ ಮುಂಚೆ ಆಗಿರುತ್ತದೆ.

ಇಂತಹ ಗರಿ ಲಕ್ಷಣಗಳುಳ್ಳ ಮರದಲ್ಲಿ ಕಾಯಿ ಕಚ್ಚುವಿಕೆ ತುಂಬಾ ವಿರಳ
 • ಆ ಸಮಯದಲ್ಲಿ ಮರಕ್ಕೆ ಲಭ್ಯವಾಗುವ ಪೋಷಕಾಂಶಗಳು ಮತ್ತು ನೀರು ಮತ್ತು ವಾತಾವರಣದ  ಮೇಲೆ ಅದರ  ಶಕ್ತಿ ಅಡಗಿರುತ್ತದೆ.
 • ಮಿಳ್ಳೆ ಉದುರುವುದನ್ನು ಕೀಟನಾಶಕ ರೋಗ ನಾಶಕ ಸಿಂಪಡಿಸಿ ಸಂಪೂರ್ಣ  ನಿಯಂತ್ರಣ ಮಾಡುವುದು ಅಸಾಧ್ಯ.
 • ಕೀಟ- ರೋಗ ನಾಶಕದ ಬಳಕೆ  ನಮ್ಮ ತೃಪ್ತಿಗಾಗಿಯೇ ಹೊರತು ಭಾರೀ ಫಲಿತಾಂಶ ಸಿಗಲಾರದು.
 • ಹೂ ಗೊಂಚಲಿನಲ್ಲಿ ಮಿಡಿ ಕಾಯಿ ಕಚ್ಚಿಕೊಳ್ಳಲು ಹೆಣ್ಣು ಹೂವು ಪರಾಗ ಸ್ವೀಕರಿಸಲು ಸಿದ್ದವಾಗುವಾಗ ಯಥೇಚ್ಚವಾಗಿ ಪರಾಗ ಕಣಗಳು ದೊರೆಯಬೇಕು.
 • ಹೂ ಗೊಂಚಲಿನಲ್ಲಿ ಗಂಡು ಹೆಣ್ಣು ಹೂವುಗಳ ಅನುಪಾತ ಸರಿಯಾಗಿರಬೇಕು.

ಆರೋಗ್ಯವಂತ ಅಡಿಕೆ ಮರದಲ್ಲಿ ಕನಿಷ್ಟ9 -11 ಉತ್ತಮ ಗರಿಗಳಿರಬೇಕು. ಅದಕ್ಕಿಂತ ಕಡಿಮೆ ಇರುವ ಮರಗಳ ಧಾರಣಾ ಸಾಮರ್ಥ್ಯ ಕಡಿಮೆ ಇರುವ ಕಾರಣ ಅದರಲ್ಲಿ ಬೆರಳೆಣಿಕೆಯ ಮಿಡಿಗಳು ಉಳಿಯುತ್ತವೆ.

ಗರಿಗಳು ಬಿಡಿಸಿ ಇರಬೇಕು. ಅಂತಹ ಮರಗಳಲ್ಲಿ ಕಾಯಿ ಕಚ್ಚುವಿಕೆ ಹೆಚ್ಚು.

ಪರಿಹಾರ ಏನು:

 • ಅಡಿಕೆ ಬೆಳೆಯುವ ಬೆಳೆಗಾರರು ಮರಕ್ಕೆ ಮೇ ತಿಂಗಳ ಕೊನೇ ವಾರದಲ್ಲಿ ಮಣ್ಣು ತೇವ ಆಗಿ ಬಿಸಿ ಇರುವಾಗಲೇ  ಒಂದು ಕಂತು ಗೊಬ್ಬರವನ್ನು ಕೊಡಬೇಕು.
 • ಅದು 150-60-210 ಪ್ರಮಾಣವನ್ನು ಮೂರು ಪಾಲು ಮಾಡಿ 50 -20-75( ಯುರಿಯಾ 125 ಗ್ರಾಂ,  ಡಿಎಪಿ 50 ಗ್ರಾಂ  ಮತ್ತು ಮ್ಯುರೇಟ್ ಆಫ್ ಪೊಟ್ಯಾಶ್ 125  ಗ್ರಾಂ ಕೊಡಬೇಕು.
 • ಸಪ್ಟೆಂಬರ್ ಕೊನೇ ವಾರದಲ್ಲಿ ಮತ್ತೆ ಇದೇ ಪ್ರಮಾಣವನ್ನು ಪುನರಾವರ್ತಿಸಬೇಕು.
 • ಹಾಗೆಯೇ ಜನವರಿ ಕೊನೇ ವಾರದಲ್ಲಿ ಇನ್ನೊಮ್ಮೆ ಇದನ್ನು ಕೊಡಬೇಕು.
 • ಸಪ್ಟೆಂಬರ್ ತಿಂಗಳಲ್ಲಿ ಪ್ರತೀ ಮರಕ್ಕೆ 250  ಗ್ರಾಂ ನಂತೆ ಸುಣ್ಣ  ಮತ್ತು 100 ಗ್ರಾಂ ಮೆಗ್ನೀಶಿಯಂ ಸಲ್ಫೇಟ್ ಮತ್ತು 50  ಗ್ರಾಂ ಸತುವಿನ ಸಲ್ಫೇಟ್ ಗೊಬ್ಬರವನ್ನು ಕೊಡಬೇಕು.
 • ಸುಣ್ಣವನ್ನು ಕೊಟ್ಟು 15 ದಿನಗಳ ನಂತರ  ಗೊಬ್ಬರಗಳನ್ನು ಕೊಡಬೇಕು.

ಯಾವುದೇ ಕಾರಣಕ್ಕೆ ಇದನ್ನು ತಡಮಾಡಬಾರದು. ಹೀಗೆ ಮಾಡಿದರೆ ಹೊತ್ತಲ್ಲದ ಹೊತ್ತಿನಲ್ಲಿ ಊಟಮಾಡಿದಂತಾಗುತ್ತದೆ.

 • ಇದು ಮರದ ಆರೋಗ್ಯವನ್ನು ಸರಿಯಾಗಿ ಇಡುತ್ತದೆ.
 • ಬೇಸಿಗೆಯ ದಿನಗಳಲ್ಲಿ ನೀರು ಹೆಚ್ಚು ಕೊಡುವುದಕ್ಕಿಂತಲೂ ನೀರು  ಆವೀಕರಣ ಆಗದಂತೆ ಬುಡಕ್ಕೆ ಮುಚ್ಚಲು ಹೊದಿಸಬೇಕು.
 • ಮರದ ಆರೋಗ್ಯವೇ ಮಿಡಿ ಉದುರುವುದಕ್ಕೆ ಮತ್ತು ಸೆಟ್ ಆಗುವುದಕ್ಕೆ ಮೂಲ ಕಾರಣ.
ಏಕ ಪ್ರಕಾರ ಪೊಷಕಗಳು ದೊರೆತಾಗ ಮರ ಲಕ್ಷಣ ವ್ಯತ್ಯಾಸವಾಗದೆ,ಇಳುವರಿಯೂ ವ್ಯತ್ಯಾಸವಾಗದು.

ಸಿಂಪರಣೆ ಬೇಡವೇ:

 • ವಿಷ ರಾಸಾಯನಿಕ ಕೀಟ- ರೋಗ ನಾಶಕ ಸಿಂಪರಣೆ  ಮಾಡಬೇಕಾದರೆ ಮೊದಲ ಸಿಂಗಾರ ಬರುವ ಸಮಯದಲ್ಲಿ( ಡಿಸೆಂಬರ್ – ಜನವರಿ) ಸಿಂಗಾರ ಒಡೆಯದಿದ್ದರೆ ಅದನ್ನು ಒಡೆದು ಒಂದು ಬಾರಿ ಸಿಂಗಾರ ತಿನ್ನುವ ಹುಳ ವನ್ನು ಕೊಲ್ಲಲು ಅದರ ಸಂತತಿಯನ್ನು ನಾಶಮಾಡಲು ಒಂದು ಸಿಂಪರಣೆ ಮಾಡಿ. 
 • ಇದು ಪದೇ ಪದೇ ಬೇಡ. ಒಂದೇ ಬಾರಿ ಅದನ್ನು ನಾಶ ಮಾಡಬೇಕು.
 • ಆಗ ಸಿಂಗಾರ ಕಡಿಮೆ ಇರುತ್ತದೆ. 
 • ಔಷಧಿ ಕಡಿಮೆ  ಸಾಕಾಗುತ್ತದೆ. ಪರಾಗದಾನಿಗಳಿಗೂ ಹೆಚ್ಚಿನ ಹಾನಿ ಉಂಟಾಗುವುದಿಲ್ಲ.
 • ಕೊನೆಯ ಸಿಂಪರಣೆಯನ್ನು ಎಪ್ರೀಲ್ ತಿಂಗಳಲ್ಲಿ ಪ್ರಭಲ ಕೀಟ ನಾಶಕ – ರೋಗ ನಾಶಕದ ಬದಲಿಗೆ ಶೇ. 0.5 ( 100 ಲೀ. ನೀರು  ½ + ½  ಮೈಲುತುತ್ತೆ ಮತ್ತು ಸುಣ್ಣದ ಮಿಶ್ರಣ ಮಾಡಿ ಸಿಂಪರಣೆ ಮಾಡಿದರೆ ಒಂದೆಡೆ ಶಿಲೀಂದ್ರ ನಾಶಕ ಮತ್ತು ಕೀಟನಾಶಕವಾಗಿಯೂ ಕೆಲಸ ಮಾಡುತ್ತದೆ.
 • ಆ ಸಮಯದಲ್ಲಿ ಕ್ಯಾಲ್ಸಿಯಂ, ಗಂಧಕ ಮತ್ತು  ತಾಮ್ರ ಪೋಷಕದ ಅಗತ್ಯ ಸಸ್ಯಗಳಿಗೆ ಇರುವ ಕಾರಣ ಇದು ಆ ಅವಶ್ಯಕತೆಯನ್ನು ನೀಗಿಸುತ್ತದೆ.

ಇದು ನಿಮ್ಮ ಗಮನದಲ್ಲಿರಲಿ:

 • ಮಾವಿನ ಮರದಲ್ಲಿ ಎಷ್ಟೇ ಹೂ ಬಂದರೂ ಉಳಿಯುವ ಪ್ರಮಾಣ ಶೇ. 10  ಮಾತ್ರ.
 • ಅತ್ಯಧಿಕ ಹೂ ಬಂದ ವರ್ಷ ಸಾಕಷ್ಟು ಹೂ ಇರುವಾಗಲೇ ಉದುರುತ್ತದೆ.
 • ಸುಮಾರು 25% ಉಳಿದುಕೊಂಡಿರುತ್ತದೆ.
 • ಆ ಸಮಯದಲ್ಲಿ ಸಿಂಪರಣೆ ಮಾಡಿದರೆ ಅದು ಉಳಿದು ಮಿಡಿಯಾಗುತ್ತದೆ.
 • ಮಿಡಿ ಹಂತದಲ್ಲಿ ಮತ್ತೆ 5-10 % ಉದುರುತ್ತದೆ. 
 • ನಂತರ ಉಳಿದ 15%  ದಲ್ಲಿ ಮತ್ತೆ ಕಾಯಿ ಹಂತದಲ್ಲಿ ಸುಮಾರು 2-3 % ಉದುರಿ ಹೋಗುತ್ತದೆ.
 • ಔಷಧಿ ಇತ್ಯಾದಿ ಸಿಂಪಡಿಸಿದ ಪರಿಣಾಮವೋ ಏನೋ ಒಟ್ಟಾರೆ ಇಳುವರಿಯಲ್ಲಿ 1-2 % ಹೆಚ್ಚಾಗಬಹುದೇ ಹೊರತು ಭಾರೀ ಹೆಚ್ಚಳವಾಗಲಾರದು.

ಒಂದು ಮಾವಿನ ಮರದ ಗೊಂಚಲಲ್ಲಿ 10-20  ಕಾಯಿಗಳಾಗಬಹುದು. ಆದರೆ  ಅದರ ಧಾರಣ ಸಾಮರ್ಥ್ಯ  ಅವಲಂಭಿಸಿ ಕೊನೆ ತನಕ ಉಳಿಯುವುದು 5-6  ಕಾಯಿಗಳು ಮಾತ್ರ.

 • ಹೆಚ್ಚು ಕಾಯಿಗಳು ಉಳಿದರೆ ಆಹಾರ ಸಾಲದೆ  ಎಲ್ಲವೂ ಸೊರಗುತ್ತದೆ.
 • ಅದರ ಧಾರಣಾ ಸಾಮರ್ಥ್ಯಕ್ಕನುಗುಣವಾಗಿ ಉಳಿದರೆ ಅವು ಸೂಕ್ತ ಗಾತ್ರದಲ್ಲಿ ಆರೋಗ್ಯವಾಗಿ ಬೆಳೆಯುತ್ತದೆ.

ಇದನ್ನು ಎಲ್ಲಾ ಅಡಿಕೆ ಬೆಳೆಗಾರರೂ ಅರಿತುಕೊಳ್ಳಬೇಕು. ಹೆಚ್ಚು ಸಿಂಗಾರ ಬಿಟ್ಟ ವರ್ಷ ಕಾಯಿ ಕಚ್ಚುವಿಕೆ ಕಡಿಮೆ. ಆ ಸಮಯದಲ್ಲಿ ಯಾವ ಹೂ ಗೊಂಚಲಿಗೂ ಸಮರ್ಪಕವಾಗಿ ಪೋಷಕಗಳು ಲಭ್ಯವಾಗದೆ ಎಲ್ಲವೂ ಸೊರಗುತ್ತದೆ

ಆದ ಕಾರಣ ನೀವು ಸರಿಯಾಗಿ ಪೋಷಕಗಳನ್ನು ಕೊಟ್ಟಿದ್ದರೆ,  ಮರದ ಆರೋಗ್ಯ ಉತ್ತಮವಾಗಿದ್ದರೆ  ಮಿಳ್ಳೆ ಉದುರುವಿಕೆ ಕಡಿಮೆಯಾಗುತ್ತದೆ. ಮೊದಲ ಮತ್ತು ಕೊನೆಯ ಹೂ ಗೊಂಚಲಿನಲ್ಲಿ ಯಾವಾಗಲೂ ಕಡಿಮೆ ಕಾಯಿಗಳೇ ಇರುವುದು.

 

2 thoughts on “ಅಡಿಕೆಯ ಮಿಳ್ಳೆ ಉದುರುವುದಕ್ಕೆ ಇದು ಕಾರಣ.

Leave a Reply

Your email address will not be published. Required fields are marked *

error: Content is protected !!