ಏಲಕ್ಕಿ ಬೆಳೆಗೆ ಇದು ಮಾರಕ ರೋಗ

ಏಲಕ್ಕಿ ಬೆಳೆಯಲಾಗುವ ಎಲ್ಲಾ ಕಡೆ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಕಟ್ಟೆ ಮತ್ತು ಕೊಕ್ಕೆ ಕಂದು ರೋಗ ಅಥವಾ ನಂಜಾಣು ರೋಗದ ಲಕ್ಷಣವನ್ನು ತೋರುವ ಸಸ್ಯಗಳಿವೆ. ಇದು ಸರಿಯಾಗುವ ರೋಗ ಅಲ್ಲ. ಹರಡುವ ರೋಗ. ಆದುದರಿಂದ  ಅದನ್ನು ಹಾಗೆಯೇ ಉಳಿಸಿಕೊಳ್ಳಬೇಡಿ. ಕಟ್ಟೆ ಅಥವಾ ಕೊಕ್ಕೆ ಕಂದು ರೋಗದ ಲಕ್ಷಣಕ್ಕೆ ಹೋಲಿಕೆ ಇದ್ದರೆ  ಅದನ್ನು ತೆಗೆದು ಬಿಡಿ.

  • ರೋಗ ಅದರಲ್ಲೂ ನಂಜಾಣು ರೋಗ ಶಿಲೀಂದ್ರ ರೋಗಗಳು ಕೆಲವು ವಾಹಕಗಳ ಮೂಲಕ ಆರೋಗ್ಯವಂತ ಸಸ್ಯಕ್ಕೂ ಪ್ರಸಾರವಾಗುತ್ತದೆ.
  • ಬಾಳೆಯಲ್ಲಿ  ನಂಜಾಣು ರೋಗ ಬಂದದ್ದನ್ನು ಉಳಿಸಿಕೊಂಡರೆ ಒಂದರ ಬದಲು ಹತ್ತು ಹಾಳಾಗುತ್ತದೆ.
  • ಅದೇ ರೀತಿ ಉಳಿದ ಬೆಳೆಗಳಲ್ಲೂ ಸಹ.
  • ಏಲಕ್ಕಿ ಸಸ್ಯದ ಎಲೆಯ ನರಗಳು ಶಕ್ತಿ ಕಳೆದುಕೊಂಡು ಬಿಳಿ ಬಣ್ಣ ಅಥವಾ ನೀರಿನ ಪಾರದರ್ಶಕ ಬಣ್ಣಕ್ಕೆ ತಿರುಗುವುದು ಈ ರೋಗದ ಮುಖ್ಯ ಲಕ್ಷಣ.

ಕೊಕ್ಕೆ ಕಂದು ರೋಗದ ಲಕ್ಷಣಗಳು:

  • ಇದು ಇತ್ತೀಚೆಗೆ ಕರ್ನಾಟಕದ ಮಡಿಕೇರಿ, ಸಕಲೇಶಪುರ, ಕಳಸ ತೀರ್ಥಹಳ್ಳಿ ಭಾಗಗಳಲ್ಲಿ ರೋಗ ಕಂಡು ಬರಲಾರಂಭಿಸಿದೆ.
  • ಈ ರೋಗಕ್ಕೆ ತುತ್ತಾದ ಸಸ್ಯದಲ್ಲಿ ಬರುವ ಕಂದುಗಳು ಆರೋಗ್ಯವಂತ ಕಂದುಗಳಂತೆ ಇರದೆ, ನೇರವಾಗಿ ಅಸಹಜವಾಗಿರುತ್ತದೆ.
  • ಇದನ್ನು ಕೊಕ್ಕೆ ತರಹದ ಕಂದು ಎನ್ನುತ್ತಾರೆ.

ರೋಗ  ಬಾಧಿತ ಸಸ್ಯಗ ಎಲೆಗಳಲ್ಲಿ ನೈಜ ಬಣ್ಣ ಇರುವುದಿಲ್ಲ. ಎಲೆಯ ಮೇಲೆ ವಿಶಿಷ್ಟ ರೀತಿಯಲ್ಲಿ ಬಣ್ಣ ಬಣ್ಣದ ಕಲೆಗಳು ಕಾಣಿಸುತ್ತವೆ.  ಎಲೆಯ ನರಗಳಿಗೆ ನೈಜ ಶಕ್ತಿ ಇರುವುದಿಲ್ಲ.  ಕೈಯಲ್ಲಿಯೇ ಎಲೆ ತುಂಡು ಮಾಡಬಹುದಾದ ರೀತಿಯಲ್ಲಿರುತ್ತದೆ.  ಎಲೆಯ ಬದಿಯ ನರಗಳಿಗೆ ಸಮಾನಾಂತರವಾಗಿ ಹಳದಿ ಪಟ್ಟಿಗಳು ಅಥವಾ ಗೆರೆಗಳು ಉಂಟಾಗುತ್ತವೆ. ಕವಲು ಕಂದಿನಲ್ಲಿ ಎಲೆಗಳು ಗುಂಪಾಗಿ ಜೋಡಣೆಯಾಗಿರುತ್ತವೆ. ಕವಲಿನ ಗೆಣ್ಣುಗಳ ಅಂತರ ಕಡಿಮೆಯಾಗಿರುತ್ತದೆ.  ಕಂದುಗಳು ಸಹ ಶಕ್ತಿ ( ನಾರು) ಹೊಂದಿರದೆ ಮುರಿಯಲು ಬರುವಂತಿರುತ್ತದೆ.

  • ಪ್ರಾರಂಭಿಕ ಹಂತದಲ್ಲಿ ಎಲೆಯಲ್ಲೇ ಎಲ್ಲಾ ರೋಗ ಲಕ್ಷಣಗಳೂ ಗೊತ್ತಾಗುವುದು.
  • ರೋಗ ಹೆಚ್ಚಾದಂತೆ ಸಸ್ಯ ಬೆಳವಣಿಗೆಯಲ್ಲಿ ವ್ಯತ್ಯಾಸಗಳಾಗಿ ಸ್ಪಷ್ಟವಾಗಿ ರೋಗ ಗೊತ್ತಾಗುತ್ತದೆ.
  • ಬರುವ ಕಂದುಗಳ ಎತ್ತರ ಕಡಿಮೆಯಾಗುತ್ತದೆ.
  • ಕೊನೆಗೆ ಕಂದುಗಳ ಬರುವಿಕೆಯೂ ಕಡಿಮೆಯಾಗುತ್ತದೆ.
  • ಗಿಡ ಸಾಯುವುದಿಲ್ಲ. ಸಾಯುವುದಿದ್ದರೂ ನಾಲ್ಕೈದು ವರ್ಷಗಳ ನಂತರ.
  • ರೋಗ ಬಾಧೆ ಪ್ರಾರಂಭವಾದಾಗಿನಿಂದ ಇಳುವರಿ ಪ್ರಮಾಣ ಕಡಿಮೆಯಾಗುತ್ತಾ  ಬರುತ್ತದೆ.
  • ಪೋಷಕಾಂಶ ಮತ್ತು ನಿರ್ವಹಣೆಗೆ ಸ್ಪಂದಿಸುವುದಿಲ್ಲ.

ನಿರ್ವಹಣೆ:

  •  ಯಾವುದೇ ನಂಜಾಣು ರೋಗಕ್ಕೆ ಔಷದೋಪಚಾರ ಇರುವುದಿಲ್ಲ.
  • ಇದು ಹರಡುವ ರೋಗ ಆದ ಕಾರಣ ಹರಡದಂತೆ ತಡೆಯುವುದೇ ನಿರ್ವಹಣೆ.
  • ಇದು ಬೀಜದಿಂದ ಬರುವ ರೋಗ ಅಲ್ಲ.
  • ರೋಗಕ್ಕೆ ನೈಜ ಕಾರಣ ಇದೇ ಎನ್ನುವಷ್ಟು ಸಂಶೊಧನೆಗಳಾಗಿಲ್ಲ.
  • ಬಾಳೆ ಸಸ್ಯದ ಹೇನು  ಪೆಂಟಲೋನಿಯಾ ನೈಗ್ರೋನೆರ್ವೋಸಾ ಈ ರೋಗವನ್ನು ಹರಡುವ ವಾಹಕವಾಗಿರುತ್ತದೆ.
  • ಏಲಕ್ಕಿ ತೋಟದಲ್ಲಿ ಸದಾ ಗಿಡಗಳನ್ನು ಗಮನಿಸುತ್ತಿದ್ದು ಇಂತಹ ರೋಗದ ಲಕ್ಷಣಗಳಿದ್ದಾಗ ತೋಟಕ್ಕೆ  ಹೇನು ನಿಯಂತ್ರಣಕ್ಕೆ  ಕ್ವಿನಾಲ್ ಫೋಸ್ ಕೀಟನಾಶಕವನ್ನು ಸಿಂಪಡಿಸಬೇಕು.

  • ಬಾಧಿತ ಸಸ್ಯವನ್ನು ತೆಗೆದು ನಾಶಮಾಡಬೇಕು.
  • ಆ ಜಾಗಕ್ಕೆ ಆರೋಗ್ಯವಂತ ಸಸ್ಯದ ಕಂದನ್ನು ತಂದು ನಾಟಿ ಮಾಡಬೇಕು.
  • ಏಲಕ್ಕಿ ಸಸಿಗಳಲ್ಲಿ ಒಣ ಎಲೆಗಳನ್ನು ಸದಾ ತೆಗೆಯುತ್ತಿದ್ದು, ಸ್ವಚ್ಚತೆಯನ್ನು ಪಾಲಿಸಿದರೆ ರೋಗ ಹರಡುವ ಏಫಿಡ್ ಗಳು ಕಡಿಮೆಯಾಗುತ್ತದೆ.
  • ತೋಟದ ಒಳಗೆ ಅಥವಾ ಬದುಗಳಲ್ಲಿ ಕೋಲಕೇಸಿಯಂ ಕೆಲಡಿಯಂ ಮುಂತಾದ ಕಳೆ ಗಿಡಗಳು ಇದ್ದರೆ  ತೆಗೆಯಬೇಕು.

ಆಗಾಗ ಎಲೆಗಳಿಗೆ ಶೇ.1  ಬೇವಿನ ಎಣ್ಣೆಯನ್ನು ಸಿಂಪರಣೆ ಮಾಡುತ್ತಿದ್ದರೆ ಎಲೆಯ ಮೇಲ್ಮೈ ಅಸಹಜವಾಗಿ ಏಫಿಡ್ ಗಳು ಕೂರುವುದು ಕಡಿಮೆಯಾಗುತ್ತದೆ.

  • ರೋಗಕ್ಕೆ ನಿರ್ದಿಷ್ಟ ಔಷಧಿ ಇರುವುದಿಲ್ಲ. ಜಾಗರೂಕತೆಯೇ ಪರಿಹಾರ.

ಏಲಕ್ಕಿಯ ಬೆಲೆ ಏರಿದ್ದೇ ತಡ. ಬಹಳ ಜನ ಏಲಕ್ಕಿ ನಾಟಿಗೆ ಮುಂದಾಗಿದ್ದಾರೆ. ಕರಿಮೆಣಸಿನ ಸಸಿ ಮಾಡುತ್ತಿದ್ದವರು ಈಗ ಏಲಕ್ಕಿ ಸಸಿ ಮಾಡಲು ಪ್ರಾರಂಭಿಸಿದ್ದಾರೆ. ರೈತರು ಉತ್ತಮ ಮೂಲದಿಂದ ಬೀಜ- ಕಂದು ತಂದು ಸಸಿ ಮಾಡಿದ ನರ್ಸರಿಯಿಂದ ಮಾತ್ರ ಸಸ್ಯವನ್ನು ಆಯ್ಕೆ ಮಾಡಬೇಕು.

 

Leave a Reply

Your email address will not be published. Required fields are marked *

error: Content is protected !!