ಅಡಿಕೆ ಮರದ ಸಿಂಗಾರದ ಹುಳ ನಿವಾರಣೆಗೆ ಮತ್ತು ಸುಳಿ ತಿಗಣೆ ನಿಯಂತ್ರಣಕ್ಕೆ ರೈತರು ವಿಷ ರಾಸಾಯನಿಕ ಸಿಂಪರಣೆ ಮಾಡಿ ಜೇನು ನೊಣಗಳ ಮಾರಣಹೋಮ ನಡೆಯುತ್ತಿದೆ ಎಂಬ ಆರೋಪವಿದೆ. ನಿಜವಾಗಿ ಇದು ಕೀಟನಾಶಕದ ಫಲವೇ ಅಲ್ಲ ನಮ್ಮ ಅಜ್ಞಾನದ ಫಲವೇ ?
- ಹೌದು.
- ನಮ್ಮ ರೈತರು ಮಾಡುವ ಕೆಲವು ಅಚಾತುರ್ಯಗಳಿಂದ ನಮ್ಮ ಕಣ್ಣೆದುರು ಜೇನು ನೊಣಗಳು- ಇತರ ಪರಾಗ ಸ್ಪರ್ಷ ಮಾಡುವ ಕೀಟಗಳು ಸಾಯುತ್ತವೆ.
- ಮುಂದೆ ನಾವೂ ಇದೇ ಕಾರಣದಿಂದ ಅಸ್ವಸ್ಥರಾಗಿ ಸಾಯುವುದೇ.
Click to WhatsApp us and build your website now!
ಯಾಕೆ ಹೀಗಾಗುತ್ತದೆ?
- ನಾವು ಬಳಕೆ ಮಾಡುವ ಕೀಟನಾಶಕದ ಬಗ್ಗೆ ನಮಗೆ ತಿಳುವಳಿಕೆ ಸಾಲದೆ ತೊಂದರೆಗಳು ಸಹಜವಾಗಿ ಆಗುತ್ತದೆ.
- ತತ್ ಕ್ಷಣಕ್ಕೆ ಜೇನು ನೊಣಗಳು ಸಾಯುತ್ತವೆ. ನಾವೂ ಮುಂದೆ ಅಸ್ವಸ್ಥರಾಗುತ್ತೇವೆ.
- ಕೀಟ ಬಂದಿದೆ ಎಂದರೆ ಅದು ಯಾವುದು ಎಂದು ಸ್ಪಷ್ಟವಾಗಿ ನೋಡುವ ವ್ಯವಧಾನ ನಮ್ಮಲ್ಲಿಲ್ಲ.
- ಬೇರೆಯವರು ಹೇಳಿದರು ಎಂದು ನಾವು ಅದನ್ನೇ ಬಳಕೆ ಮಾಡುತ್ತೇವೆ.
- ಕೀಟನಾಶಕ ಮಾರಾಟಗಾರರಿಂದ ಸ್ಟ್ರಾಂಗ್ ಔಷಧಿ ಕೊಡಿ ಎಂದು ಕೇಳುತ್ತೇವೆ.
- ಬಳಕೆ ವಿಧಾನ / ಪ್ರಮಾಣದ ಬಗ್ಗೆ ಕೇಳುವುದಿಲ್ಲ. ಹಸ್ತ ಪ್ರತಿ ಓದುವುದಿಲ್ಲ.
- ಕೀಟ ನಾಶಕ ತಯಾರಕರೂ ಬಳಕೆ ಕ್ರಮದ ಹಸ್ತ ಪ್ರತಿಯನ್ನು ತೀರಾ ಕಳಪೆ ದರ್ಜೆಯ ಕಾಗದಲ್ಲಿ , ಕಣ್ಣಿಗೆ ಕಾಣದಷ್ಟು ಸಣ್ಣ ಅಕ್ಷರದಲ್ಲಿ ಮುದ್ರಿಸಿ ಒದಗಿಸುತ್ತಾರೆ.
- ಪ್ರತೀ ಬಾಟಲಿಯಲ್ಲಿ ಅಂಟಿಸುವುದನ್ನು ಬಿಟ್ಟಂತಿದೆ.
- ಕೀಟನಾಶಕಗಳಿಗೆ ಕಾನೂನಿನ ಬಿಗು ತುಂಬಾ ಕಡಿಮೆಯಾದಂತೆ ಕಂಡು ಬರುತ್ತದೆ.
- ತಯಾರಕರೂ ತಮ್ಮ ಉತ್ಪನ್ನವನ್ನು ಇಷ್ಟು ಲೀ. ನೀರಿಗೆ ಇಷ್ಟು ಗ್ರಾಂ ಅಥವಾ ಇಷ್ಟು ಮಿಲಿ ಎಂದು ಮುದ್ರಿಸಿರುವುದಿಲ್ಲ.
- ಎಕ್ರೆಗೆ ಇಷ್ಟು ಎಂಬ ಪ್ರಮಾಣವನ್ನು ಸೂಚಿಸಿರುತ್ತಾರೆ .
- ಇದು ಕೀಟನಾಶಕದ ದುರ್ಬಳಕೆಗೆ ಕಾರಣವಾಗಿದೆ.
ಇದೆಲ್ಲಾ ಕಾರಣಗಳಿಂದ ರೈತರು ತಮಗೆ ತೋಚಿದಂತೆ ಕೀಟನಾಶಕ ಬಳಕೆ ಮಾಡಿ ಅನಾಹುತಗಳನ್ನು ಮೈಗೆಳೆದುಕೊಳ್ಳುತ್ತಿದ್ದಾರೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದು, ನಿರ್ದಿಷ್ಟ ಕೀಟದ ನಿಯಂತ್ರಣಕ್ಕೆ ಸಾಕಾಗುವ ಔಷಧಿಯನ್ನು ಬಳಸದೆ ಇಲಿ ಕೊಲ್ಲಲು ಹುಲಿಯ ತಯಾರಿ ಮಾಡುತ್ತೇವೆ.
ಮೂಲ ತಿಳುವಳಿಕೆ:
- ಕೀಟನಾಶಕಗಳಲ್ಲಿ ಸ್ಪರ್ಶ ಕೀಟನಾಶಕ ಮತ್ತು ಅಂತರ್ವ್ಯಾಪೀ ಕೀಟನಾಶಕ ಎಂದು ಎರಡು ವಿಧ.
- ಸ್ಪರ್ಶ ಕೀಟನಾಶಕಗಳು ಎಂದರೆ ಸಂಬಂಧಿಸಿದ ಕೀಟದ ಮೇಲೆ ಕೀಟನಾಶಕ ತಗಲಿದರೆ ಮತ್ತು ಯಾವುದಾದರೂ ಬೆಳೆಯ ಮೇಲೆ ಕೀಟದ ವಾಸ ಇದ್ದರೆ ಈ ಕೀಟನಾಶಕ ಸಿಂಪಡಿಸಿದಾಗ ಅದು ಸಾಯುತ್ತದೆ.
- ಅದರ ಉಳಿಕೆ ಅಂಶ ಹೆಚ್ಚು ಸಮಯ ಇರುವುದಿಲ್ಲ.
- ಸಸ್ಯ ಭಾಗಕ್ಕೆ ಇದು ತಗಲಿದರೆ ಅದರ ಮೇಲೆ ಕೀಟ ಕುಳಿತರೆ ಅಥವಾ ರಸ ಹೀರಿದರೆ ಅದು ಸಾಯಲೂ ಬಹುದು.
- ಕೀಟಗಳಿಗೆ ಸಿಂಪರಣೆ ಮಾಡಿದ ವಾಸನೆ ಮತ್ತು ಅದು ಅಂಟಿರುವ ಭಾಗ ಗಮನಕ್ಕೆ ಬಂದು ಅಲ್ಲಿಗೆ ಅವು ಸುಳಿಯುವುದು ತುಂಬಾ ಕಡಿಮೆ.
- ಹೆಚ್ಚೆಂದರೆ ಇದರ ಪರಿಣಾಮ 2- 7 ದಿನಗಳ ತನಕ ಮಾತ್ರ ಉಳಿಕೆ ಇರುತ್ತದೆ.
- ಅಂತರ್ವ್ಯಾಪೀ ಕೀಟನಾಶಕ ಇದು ಒಂದು ವಿಶಿಷ್ಟ ಕೀಟನಾಶಕವಾಗಿದೆ.
- ಬೆಳೆಗಳಿಗೆ ಸಿಂಪಡಿಸುವಾಗ ಯಾವ ಕೀಟ ಇರಲಿ ಇಲ್ಲದಿರಲಿ, ಅದು ಸಸ್ಯಾಂಗದ ಒಳ ಸೇರಿ ಧೀರ್ಘ ಕಾಲದ ತನಕ ಅಲ್ಲಿ ಇರುತ್ತದೆ.
- ಉಳಿಕೆ ಅಂಶ ಇರುವ ತನಕ ಬಂದು ರಸ ಹೀರುವ ಕೀಟವನ್ನು ಸಾಯುವಂತೆ ಮಾಡುತ್ತದೆ.
- ಇದು ಸುಮಾರು 7 ದಿನದಿಂದ 40 ದಿನಗಳ ಕಾಲ ಸಸ್ಯಾಂಗದಲ್ಲಿ ಸೇರಿಕೊಂಡಿರುತ್ತದೆ.
ಸ್ಪರ್ಶ ಕೀಟನಾಶಗಳ ತೊಂದರೆ ಸ್ವಲ್ಪ ಕಡಿಮೆ. ಅಂತರ್ವ್ಯಾಪೀ ಕೀಟನಾಶಕಗಳಿಂದ ವಾತಾವರಣದ ಮೇಲೆ ದುಷ್ಪರಿಣಾಮ ಹೆಚ್ಚು.
- ಜೇನು ನೊಣಗಳ ಶರೀರಕ್ಕೆ ಸೇರಿ ಅದು ಗೂಡಿನ ಇತರ ನೊಣಗಳಿಗೆ ಪರಾಗ- ಮಧುವಿನ ಮೂಲಕ ತಲುಪುತ್ತದೆ.
- ಸಸ್ಯ ಅಂಗದ ಒಳಗೆ ಸೇರಿದಂತೆ ಅದು ಮಾನವನ ರೋಮ ನಾಳಗಳ ಮೂಲಕ ದೇಹಕ್ಕೂ ಸೇರುವ ಸಾಧ್ಯತೆ ಇದೆ.
- ಇದನ್ನು ತುಂಬಾ ಎಚ್ಚರಿಕೆಯಿಂದ ಬಳಸಬೇಕು.
- ಶಿಫಾರಿತ ಪ್ರಮಾಣಕ್ಕಿಂತ ಹೆಚ್ಚು ಬಳಸಿದರೆ ಕೀಟಕ್ಕೆ ಬೇಗ ನಿರೋಧಕ ಶಕ್ತಿ ಬರುತ್ತದೆ.
- ಈಗಿನ ಹೊಸ ತಲೆಮಾರಿನ ಕೆಲವು ( ಇಮಿಡಾ, ಮುಂತಾದವು) ಕೀಟನಾಶಕಗಳನ್ನು ನಿಜವಾಗಿ ಪ್ರತೀ ಲೀ. ನೀರಿಗೆ ¼ ಮಿಲಿ . 100 ಲೀ. 25 ಮಿಲಿ. ಸಾಕು.
- ಆದರೆ ಅದನ್ನು ಮಾರುಕಟ್ಟೆ ಅನುಕೂಲಕ್ಕಾಗಿ ½ ಮಿಲಿ ಎನ್ನುತ್ತಾರೆ.
- ಜನ ಇದನ್ನು 2 ಮಿಲಿ ತನಕ ಬಳಕೆ ಮಾಡುತ್ತಾರೆ. ಇದರಿಂದ ತೊಂದರೆಗಳು ಆಗದಿರುತ್ತದೆಯೇ?
ಜೇನು ನೊಣಗಳ ರಕ್ಷಣೆ:
- ಜೇನು ನೊಣಗಳು ಬಹಳ ಸೂಕ್ಷ್ಮ ಕೀಟಗಳಾಗಿದ್ದು ಅಲ್ಪ ಸ್ವಲ್ಪ ಸೋಂಕು ತಗಲಿದರೂ ಸಾಯುತ್ತವೆ.
- ತಂಬಾಕು, ಗುಟ್ಕಾ ವಾಸನೆಗೇ ಸಾಯುತ್ತವೆ. ಹಾಗೆಂದು ಎಲ್ಲಾ ಕೀಟನಾಶಕಗಳಿಗೆ ಅವು ಸಾಯುವುದಿಲ್ಲ.
- ಸ್ಪರ್ಶ ಕೀಟ ನಾಶಕಗಳಿಗೆ ಸಾಯುವ ಸಾಧ್ಯತೆ ಕಡಿಮೆ.
- ಹಾಗೆಂದು ನೊಣಗಳ ಮೇಲೆ ಹನಿ ಬಿದ್ದಾಗ ಸಾಯುವ ಸಾಧ್ಯತೆ ಇದೆ.
- ಕೀಟ ನಾಶಕಗಳಲ್ಲಿ ಮೂರು ಬಣ್ಣಗಳ ಮೂಲಕ ಯಾವುದು ಕಡಿಮೆ ಹಾನಿಕಾರಕ ಎಂದು ತಿಳಿದು ಬಳಕೆ ಮಾಡಬೇಕು.
- ಕೆಂಪು ಬಣ್ಣದ ಕೀಟ ನಾಶಕಗಳು ಬಹುತೇಕ ಅಂತರ್ವ್ಯಾಪೀ ಕೀಟನಾಶಕಗಳಾಗಿದ್ದು, ಅದನ್ನು ಬಳಕೆ ಮಾಡದಿರುವುದು ಪರಿಸರ ಹಾಗೂ ಮಾನವನ ಆರೋಗ್ಯ ದೃಷ್ಟಿಯಿಂದ ಅವಶ್ಯಕ.
- ಹಳದಿ ಮಾರ್ಕ್ ನ ಕೀಟನಾಶಕಗಳು ಜೇನು ಹುಳಗಳಿಗೆ ತೊಂದರೆ ಇಲ್ಲ. ಪ್ರಮಾಣಕ್ಕಿಂತ ಹೆಚ್ಚು ಬಳಕೆ ಮಾಡಿದರೆ ತೊಂದರೆ ಇದೆ.
- ಕಾಪರ್ ಸಲ್ಫೇಟ್ ಮುಂತಾದ ನೀಲಿ ಬಣ್ಣದ ಕೀಟ ನಾಶಕಗಳು ಅಂತಹ ತೊಂದರೆ ಮಾಡಲಾರವು.
- ಹಸುರು ಬಣ್ಣದ ಜೈವಿಕ ಕೀಟನಾಶಕ – ಸಸ್ಯ ಜನ್ಯ ಕೀಟನಾಶಕ ಗಳಿಂದ ಜೇನು ನೊಣಗಳಿಗೆ ಹಾನಿ ಇಲ್ಲ.
- ಹಾಗೆಂದು ತಂಬಾಕು ಮುಂತಾದವುಗಳಿಂದ ತಯಾರಿಸಿದ ಕೀಟನಾಶಕಗಳಾದರೆ ಅದರಿಂದ ಜೇನು ನೊಣ ಮಾತ್ರವಲ್ಲ- ಜೇನು ಕುಟುಂಬಕ್ಕೂ ತೊಂದರೆ ಇದೆ.
ರೈತರು ಬುದ್ಧಿವಂತರಾಗಬೇಕು:
- ಈಗ ಹಿಂದಿನಂತಿಲ್ಲ. ಅಲ್ಲಲ್ಲಿಕೃಷಿ ಮೇಳಗಳು ಆಗುತ್ತವೆ.
- ಭೇಟಿ ಕೊಡುತ್ತೇವೆ. ಅಲ್ಲಿ ಕೀಟ ಶಾಸ್ತ್ರಜ್ಞರು- ರೋಗ ಶಾಸ್ತ್ರಜ್ಞರು ಬರುತ್ತಾರೆ.
- ಅವರ ಸಂಪರ್ಕ ಸಂಖ್ಯೆಯನ್ನು ಕೇಳಿ ತಿಳಿದುಕೊಳ್ಳಿ.
- ಈಗ ಸರಕಾರದ ವತಿಯಿಂದ ಎಲ್ಲರಿಗೂ ಮೊಬೈಲ್ ದೂರವಾಣಿಯನ್ನು ಒದಗಿಸಲಾಗಿದೆ.
- ಅವರು ನಿಮ್ಮ ಕರೆಗೆ ಯಾವಾಗಲೂ ಸ್ಪಂದಿಸಲು ಸಿದ್ದರಿರುತ್ತಾರೆ.
- ನಾವು ಅವರ ಸಂಪರ್ಕಕ್ಕೆ ಹಿಂಜರಿಯುತ್ತೇವೆ.
- ಅವರಿಗೆ ಏನು ಗೊತ್ತಿಲ್ಲ ಎಂಬ ಮನೋಭಾವನೆಯನ್ನು ಬಿಡಬೇಕು.
- ಅವರು ನಮ್ಮವರು ಎಂದು ನಂಬಿಕೆಯಿಂದ ವ್ಯವಹರಿಸಬೇಕು.
ಇಂದು ಈಗ ಆಗುತ್ತಿರುವ ತೊಂದರೆಗೆ ಕಾರಣ ನಾವೇ. ಮೊನೋಕ್ರೊಟೋಫೋಸ್, ಥಿಮೇಟ್, ನುವಾನ್ ಲಾಂಬ್ಡ್ರಾ ಸೈಹೋಥ್ರಿನ್, ಪ್ಯುರಡಾನ್,ಮುಂತಾದ ಕೀಟನಾಶಕ ಬಳಕೆ ಮಾಡಬಾರದು.
ಬಾಟಲಿಯಲ್ಲಿ non-systemic insecticide. systemic broad spectrum insecticide ಎಂಬುದಾಗಿ ಬರೆದದ್ದನ್ನು ಗಮನಿಸಿ ಬಳಕೆ ಮಾಡಿ. ಬೆಳೆಗ್ಗೆ 10 ಗಂಟೆಯ ನಂತರ ಸಂಜೆ 4 ಗಂಟೆ ಒಳಗೆ ಸಿಂಪರಣೆ ಮಾಡಿದರೆ ಆಗ ಜೇನು ನೊಣಗಳ ಪ್ರಮಾಣ ಕಡಿಮೆ ಇರುತ್ತದೆ.