ಹಸುರು ಶಾಲು ಹೊದ್ದು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ, ನಮ್ಮೆಲ್ಲರ ಮುಖ್ಯಮಂತ್ರಿಗಳು ಮಾರ್ಚ್ ತಿಂಗಳಲ್ಲಿ ವಿದೇಶಕ್ಕೆ ಹೋಗಿ ಬಂದು ರೈತರಿಗೆ ಒಂದು ಶಾಕ್ನ ಸೂಚನೆ ಕೊಟ್ಟಿದ್ದರು. ಆ ಶಾಕ್ ಈಗ ರಾಜ್ಯದ ರೈತಾಪಿವರ್ಗದ ಮೇಲೆಲ್ಲಾ ಹರಿಬಿಡಲಾಗಿದೆ.
ಇದು ದುಡ್ಡಿಗಾಗಿ ಅಷ್ಟೇ:
- ಅಂದು ( ಮಾರ್ಚ್ 15/2020 ) ಕರ್ನಾಟಕದ ಮುಖ್ಯಮಂತ್ರಿಗಳು ಕೃಷಿಕರಲ್ಲದವರು ಮತ್ತು ಅಧಿಕ ಆದಾಯದ ಮೂಲ ಹೊಂದಿದವರು ಕೃಷಿ ಭೂಮಿ ಕೊಳ್ಳಲು ಅನುಕೂಲವಾಗುವ ಶಾಸನ ತಿದುಪಡಿಯ ಪ್ರಸ್ತಾಪ ಮಾಡಿದ್ದರು.
- ಅದಕ್ಕೆ ದೇವರ ದಯೆ ಇರಲಿಲ್ಲವೆಂದು ಕಾಣಿಸುತ್ತದೆ.
- ಅದೇ ಸಮಯಕ್ಕೆ ಕೊರೋನಾ ಸಾಂಕ್ರಾಮಿಕ ರೋಗ ಇಡೀ ದೇಶಕ್ಕೆ ಕತ್ತಲನ್ನು ತಂದಿತು.
- ಅದರ ಹೇತು ಜಾಸ್ತಿಯಾಗುತ್ತಿದ್ದಂತೆ ರಾಜ್ಯದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಯಿತು.
- ಇದನ್ನು ನಿವಾರಿಸಲು ಹೊಸ ಅಸ್ತ್ರ ವಾಗಿ ಹಿಂದೆ ಪ್ರಸ್ತಾಪಿಸಿದ್ದ ಭೂ ಸುಧಾರಣಾ ಕಾಯಿದೆ ತಿದ್ದುಪಡಿಗೆ ಮುಂದಾಗಿದ್ದಾರೆ.
- ಇದು ನೋಂದಣಿ ಎಂಬ ಹೆಸರಿನಲ್ಲಿ ರಾಜ್ಯದ ಬೊಕ್ಕಸಕ್ಕೆ ಭಾರೀ ಹಣದ ಹೊಳೆ ಹರಿಸಲಿದೆ.
ಬರೇ ಈ ದುಡ್ಡು ಮಾತ್ರವಲ್ಲ ಕಾರ್ಪೊರೇಟ್ ಸಂಸ್ಥೆಗಳಂತಹ ದೊಡ್ಡ ಕುಳಗಳು, ಕಪ್ಪು ಹಣ ಹೊಂದಿದ ವ್ಯಕ್ತಿಗಳು ಈ ಒಂದು ದಂಧೆಯಲ್ಲಿ ರಾಜ್ಯದ ಬೊಕ್ಕಸ ಮಾತ್ರವಲ್ಲದೆ ರಾಜಕಾರಣಿಗಳ ಕಿಸೆಯನ್ನೂ ತುಂಬಲಿದ್ದಾರೆ. ಆಸ್ತಿ ವ್ಯವಹಾರ ಎಂದರೆ ಅದರಲ್ಲಿ ತೋರಿಸುವುದಕ್ಕಿಂತ ಅಡಗಿಸುವ ಮೌಲ್ಯವೇ ಹೆಚ್ಚು ಇರುತ್ತದೆ.
- ಆರ್ಥಿಕ ಮುಗ್ಗಟ್ಟಿನ ಕಾರಣ ಇನ್ನು ಕೆಲವು ವರ್ಷಗಳ ತನಕ ರಾಜ್ಯದಲ್ಲಿ ಹಿಂದಿನಂತೆ ಹಣದ ಚಲಾವಣೆ ಆಗುವ ಸಾಧ್ಯತೆ ಇರಲಾರದು.
- ಹಣದ ಚಲಾವಣೆ ಇಲ್ಲವಾದರೆ ರಾಜಕಾರಣಿಗಳಿಗೆ , ಕಂದಾಯ ಮುಂತಾದ ಇಲಾಖೆಗಳಿಗೆ ಸಂಪಾದನೆ ಕಡಿಮೆಯಾಗುತ್ತದೆ.
- ಅದಕ್ಕಾಗಿ ಹಣವನ್ನು ಹೊರ ಹಾಕಿಸುವ ತಂತ್ರಗಾರಿಕೆ ಇದು.
ಏನು ಭೂ ಸುಧಾರಣೆ:
- ಈ ತನಕ (1974 ರ ನಂತರ) ಕಾನೂನು ಪ್ರಕಾರ ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿ ಮಾಡುವಂತಿರಲಿಲ್ಲ.
- ಆದಾಯ ಮೂಲ 25 ಲಕ್ಷಕ್ಕಿಂತ ಹೆಚ್ಚು ಇದ್ದವರೂ ಖರೀದಿ ಮಾಡುವಂತಿರಲಿಲ್ಲ.
- ಅದರಿಂದಾಗಿ ಕೃಷಿ ಭೂಮಿಯನ್ನು ಕಾರ್ಪೋರೇಟ್ ಸಂಸ್ಥೆಗಳು ಖರೀದಿಸಲು ಕಷ್ಟವಾಗುತ್ತಿತ್ತು.
- ಹಾಗೆಂದು ಕೆಲವು ಅನುಮತಿಯ ಮೇರೆಗೆ ಈ ಕೆಲಸ ಎಗ್ಗಿಲ್ಲದೆ ನಡೆಯುತ್ತಿತ್ತು.
- ಇನ್ನು ಅದಕ್ಕೆ ರಾಜ ಮಾರ್ಗವೇ ಇರುತ್ತದೆ.
- ಕಾನೂನಿನ ಅಂಜಿಕೆ ಇಲ್ಲ. ಹಣ ಇದ್ದವರು ಯಾರು ಬೇಕಾದರೂ ಕೃಷಿ ಭೂಮಿ ಖರೀದಿ ಮಾಡಬಹುದು.
ಇದರಿಂದ ರೈತರಿಗೆ ಏನಾಗಬಹುದು?
ನಾವು ಸರಿ ಇಲ್ಲದಿದ್ದರೆ ಇದರಿಂದ ಕೆಲವು ತೊಂದರೆಗಳು ಆಗಬಹುದು. ಕೃಷಿ ನಮಗೆ ಬೇಕು, ಅದು ನಮಗೆ ಅನ್ನಕೊಡುವ ಬಟ್ಟಲು ಎಂದು ಅರಿತು ಅದನ್ನು ಮಾರಾಟ ಮಾಡದಿದ್ದರೆ ಈ ಕಾಯಿದೆಗೆ ಏನೂ ಕಿಮ್ಮತ್ತು ಬರಲಾರದು.
- ರೈತರು ಇನ್ನು ಭೂಮಿ ಖರೀದಿ ಮಾಡಿ ಹಿಡುವಳಿ ಹೆಚ್ಚಿಸುವ ಆಶೆಯನ್ನು ಬಿಡಬೇಕು. ಕಾರಣ ಇಷ್ಟೇ .
- ಇನ್ನು ಭೂಮಿ ಮಾರಾಟ ಮಾಡುವವರು ಭೂಮಿಗೆ ಬೇಡಿಕೆ ಇದೆ ಎಂದು ಧಾರಣೆ ಹೆಚ್ಚಿಸಬಹುದು.
- ಪೂರ್ಣಾವಧಿ ರೈತರ ಹಣ ಭೂಮಿ ಖರೀದಿ ಮಾಡುವರೇ ಸಾಲದು.
- ಅದೇನಿದ್ದರೂ ದೊಡ್ದ ದೊಡ್ಡ ಕುಳಗಳಿಗೆ ಮಾತ್ರ ಸಾಧ್ಯ.
- ಸಣ್ಣ ಸಣ್ಣ ಹಿಡುವಳಿಗಳಿಂದ ಲಾಭ ಇಲ್ಲ ಎಂದು ಜನ ಉತ್ತಮ ಬೆಲೆಯ ಅಶೆಗೆ ಭೂಮಿಯನ್ನು ಮಾರಾಟ ಮಾಡುತ್ತಾರೆ.
- ಮಧ್ಯಮ ಮತ್ತು ಸಾಧಾರಣ ದೊಡ್ದ ಹಿಡುವಳಿದಾರರ ಸುದ್ದಿಗೇ ಹೋಗದೆ ಅವರನ್ನು ಹೋಗು ಎನ್ನದೆ ಹೊಗೆ ಹಾಕಿ ಹೊರ ಹಾಕುವ ಸ್ಥಿತಿಯನ್ನು ತಂದೊಡ್ಡುವ ಸಾಧ್ಯತೆ ಇದೆ.
- ಹಣ ಮತ್ತು ಪ್ರಭಾವಗಳು ಕಾನೂನಿನ ಕಣ್ಣನ್ನು ಮುಚ್ಚಿಸಬಹುದು.
- ಕಾನೂನು ಹೋರಾಟಗಳಿಂದ ವಕೀಲರು, ಕೋರ್ಟು ಕಚೇರಿಗಳಿಗೆ ಹಣ ಚಲಾವಣೆ ಆಗಬಹುದು.
- ಭೂಮಿ ಮಾರಾಟ ಮಾಡಿದವರು ತಮ್ಮ ವಾಸಕ್ಕಾಗಿ ಹೊಸ ಸ್ಥಳವನ್ನು ಅಥವಾ ವಸತಿ ಸಮುಚ್ಚಯವನ್ನು ಆಯ್ಕೆ ಮಾಡಬೇಕಾಗುತ್ತದೆ.
- ಆಗ ರೀಯಲ್ ಎಸ್ಟೇಟ್ ವ್ಯವಹಾರ ಕುದುರುತ್ತದೆ.
- ಇದರಿಂದಲೂ ನೊಂದಣಿ ಇತ್ಯಾದಿಗಳಿಂದ ಸರಕಾರಕ್ಕೆ ಮತ್ತು ಅಧಿಕಾರಿಗಳಿಗೆ ಹಣ ಲಭಿಸುತ್ತದೆ.
ರೈತರು ಏನು ಮಾಡಬೇಕು:
- ನಾವು ಸರಿ ಇದ್ದರೆ ಇದರಿಂದ ಏನೂ ಆಗುವುದಿಲ್ಲ.
- ಒಂದು ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಿಂದಿನಂತೆ ಬಲಿಷ್ಟವಾಗಿದ್ದರೆ ಇಷ್ಟರಲ್ಲೇ ಸರಕಾರ ಇದನ್ನು ವಾಪಾಸು ಪಡೆಯುತ್ತಿತ್ತು.
- ಆದರೂ ರೈತರು ಒಗ್ಗಟ್ಟಾಗಿದ್ದರೆ ಸರಕಾರದ ಈ ಪ್ಲಾನ್ ಪ್ಲಾಪ್ ಆಗುವುದೇ ಸರಿ.
- ಕೃಷಿಕರು ಕೃಷಿ ಭೂಮಿ ಕೊಟ್ಟರಲ್ಲವೇ ಇವರು ಖರೀದಿಸುವುದು.
ಇಷ್ಟಕ್ಕೂ ನಮ್ಮಲ್ಲಿ ಭೂಮಿ ಮಾರಬೇಕು ಎಂಬ ಕೆಲವು ರೈತರ ಮನೋಸ್ಥಿತಿ, ಈ ವರ್ಷದ ಕೊರೋನಾ ರೋಗದ ಕಾರಣದಿಂದ ದೂರವಾಗಿದೆ. ಗಂಜಿ ಉಂಡರೂ ಆದೀತು. ಹಳ್ಳಿಯ ಜೀವನವೇ ಲೇಸು ಎಂಬ ಮನೋಸ್ಥಿತಿ ಜನಮಾಸನದಲ್ಲಿ ಅಚ್ಚೊತ್ತಿದ ಕಾರಣ ಇದರಿಂದ ಏನೂ ಆಗುವುದಿಲ್ಲ.
- ಕಾಯಿದೆ ಏನೇ ಇರಲಿ ನಮ್ಮ ಸಹಕಾರ ಇದ್ದರೆ ಮಾತ್ರ ಇದಕ್ಕೆ ಬೆಲೆ.
ಕೃಷಿ ಭೂಮಿ ಮಾರಿದರೆ ಮುಗಿಯಿತು:
- ಅತ್ಮೀಯ ರೈತರೇ ಕೃಷಿ ಭೂಮಿ ಮಾರಾಟ ಮಾಡಿ ನಗದೀಕರಣ ಮಾಡುವ ವಸ್ತು ಅಲ್ಲ.
- ಭೂಮಿ ಮಾರಾಟ ಮಾಡಲು ನೈತಿಕವಾಗಿ ನಮಗೆ ಹಕ್ಕು ಇಲ್ಲ.
- ಇದು ಅನುಭವಿಸಲು ಮಾತ್ರ ಇರುವಂತದ್ದು.
- ಬೇಸಾಯ ಮಾಡಲಾಗದಿದ್ದರೆ ನಿಮ್ಮ ಸಮೀಪದಲ್ಲಿ ಬೇಸಾಯ ಮಾಡುವವರಿಗೆ ಬೇಸಾಯಕ್ಕೆ ಬಿಟ್ಟುಕೊಡಿ.
- ಆಸ್ತಿ ಮಾರಿದವ ಎಲ್ಲಿಯೂ ಉದ್ದಾರ ಅಗಲಿಲ್ಲ. ಅದು ಅವನ ಅಧಪತನದ ಮೊದಲ ಹೆಜ್ಜೆ.
- ನಿಮ್ಮ ಸುತ್ತಮುತ್ತ ಕೃಷಿ ಭೂಮಿ ಮಾರಿ ಮತ್ತೆ ಹಿಂದಿಗಿಂತ ಉತ್ತಮ ಸ್ಥಿತಿಗೆ ತಲುಪಿದವರಿದ್ದಾರೆಯೇ ? ಖಂಡಿತಾ ಇಲ್ಲ.
ಈ ಕಾಯಿದೆಗೆ ರಾಜ್ಯ ಸರಕಾರ ಅಸ್ತು ನೀಡಿದೆ. ಇದು ಜ್ಯಾರಿಯಾಗಬೇಕಿದ್ದರೆ ರಾಜ್ಯಪಾಲರ ಅಂಕಿತ ಬೇಕು. ಅದು ಬೀಳದಿದ್ದರೆ , ರೈತರೆಲ್ಲರೂ ಒಕ್ಕೊರಲಿನಿಂದ ವಿರೋಧಿಸಿ ಹೋರಾಟ ಮಾಡಿದರೆ ಇದು ಜ್ಯಾರಿಯಾಗಲಾರದು.