ಅಡಿಕೆ ತೋಟಕ್ಕೆ ಅತ್ಯುತ್ತಮ ಮಿಶ್ರ ಬೆಳೆ ಜಾಯೀಕಾಯಿ.

Nut meg mace

ಅಡಿಕೆ ತೋಟದಲ್ಲಿ ವಾರ್ಷಿಕ ಮಿಶ್ರ ಬೆಳೆಗಳಿಗಿಂತ  ಬಹುವಾರ್ಷಿಕ ಮಿಶ್ರ ಬೆಳೆಗಳಿದ್ದರೆ ತಲೆಬಿಸಿ ಇಲ್ಲ. ಮರ ಸಾಂಬಾರವಾದ ಜಾಯೀಫಲ ಎಂಬುದು  ಅಡಿಕೆ ಮರಗಳ ಜೊತೆಗೆ ಯಾವುದೇ ಸ್ಪರ್ಧೆ ನಡೆಸದೆ, ಒಂದೆಡೆ ಆದಾಯ ಮತ್ತೊಂದೆಡೆ ಗಾಳಿ ಮತ್ತು ಬಿಸಿಲು ತಡೆಗೆ ಸಹಕರಿಸುವ  ಧೀರ್ಘಾವಧಿಯ ಬೆಳೆ.

 • ಅಡಿಕೆ ತೋಟಕ್ಕೆ ಹೊಂದುವ ಮಿಶ್ರ ಬೆಳೆಗಳಲ್ಲಿ ಕರಿಮೆಣಸು, ಕೊಕ್ಕೋ ಬಹುವಾರ್ಷಿಕ ಮಿಶ್ರ ಬೆಳೆಗಳು.
 • ಆದರೆ ಅವುಗಳ ರಕ್ಷಣೆ, ನಿರ್ವಹಣೆಯ ತೆಲೆಬಿಸಿ ದೊಡ್ಡದು.
 • ಮರ ಸಾಂಬಾರವಾದ  ಜಾಯೀ ಫಲಕ್ಕೆ ಇದೆಲ್ಲಾ ಯಾವುದೂ ಇಲ್ಲ.
 • ನೆಟ್ಟರೆ ಬೆಳೆಯುತ್ತಿರುತ್ತದೆ. ವರ್ಷದಿಂದ ವರ್ಷಕ್ಕೆ ಮರ ಬೆಳೆದಂತೆ ಇಳುವರಿ ಹೆಚ್ಚುತ್ತಾ  ಇರುತ್ತದೆ.
 • ರೋಗ , ಕೀಟ ಬಾಧೆಗಳೂ ಇಲ್ಲದ ಕಾಡು ಮರ.

Nut meg in areca plantation

ಎಷ್ಟುಆದಾಯ ಇದೆ:

 • 10  ವರ್ಷದ ಒಂದು  ಜಾಯೀ ಕಾಯಿಯ  ವರ್ಷಕ್ಕೆ ಒಮ್ಮೆ 1000 ಕ್ಕೂ ಹೆಚ್ಚು ಕಾಯಿ ಕೊಡಬಲ್ಲುದು.
 • ಇದರ ಒಟ್ಟಾರೆ ಅದಾಯ  ಸುಮಾರು 2000 ರೂ.ಗಳು.
 • ಜಾಯೀ ಫಲದಲ್ಲಿ ಜಾಯೀ ಕಾಯಿ ಮತ್ತು ಜಾಯೀ ಪತ್ರೆ ಎಂಬ ಎರಡು ಉತ್ಪತ್ತಿ.
 • ಜಾಯೀ ಮರ ( Nutmeg Tree)  ಸಾಧಾರಣ ಚಿಕ್ಕು ಗಾತ್ರದ ಕಾಯಿ ಬಿಡುತ್ತದೆ.
 • ಈ ಕಾಯಿ ಬೆಳೆದಾಗ ತುದಿ ಭಾಗ ಒಡೆಯುತ್ತದೆ.
 • ಒಡೆದಾಗ ಅದರಲ್ಲಿ ಕೆಂಪು ಭಾಗ ಕಾಣಿಸುತ್ತದೆ ಇದುವೇ  ಅದರ ಪತ್ರೆ(Mace)
 • ಪತ್ರೆ ಎಂಬುದು ಅದರ ಒಳ ಭಾಗದಲ್ಲಿ ಒಂದು ಕಾಯಿಗೆ  ಸ್ವಲ್ಪ ಅಂಟಿಕೊಂಡು  ಇರುತ್ತದೆ.
 • ಕಾಯಿ ಒಡೆದಾಗ ಅದು ಬೆಳೆದಿದೆ ಎಂದರ್ಥ.
 • ಅದನ್ನು ಕೊಯಿಲು ಮಾಡಿ ಅಥವಾ ಬಿದ್ದಂತೆ ಆ ದಿನವೇ ಆರಿಸಿ ತಂದು ಪತ್ರೆ ಮತ್ತು  ಕಾಯಿಯನ್ನು  ಒಣಗಿಸಬೇಕು.

ಪತ್ರೆಗೆ ಕಿಲೋ ಗೆ ಸರಾಸರಿ 1200 ರೂ. ಬೆಲೆಯೂ , ಕಾಯಿಗೆ ಸರಾಸರಿ 300 ರೂ.ಬೆಲೆಯೂ ಇರುತ್ತದೆ.ಇದು ಔಷಧೀಯ ಬಳಕೆಗೆ  ಬೇಕಾಗುವ ಸಾಂಬಾರವಾಗಿದ್ದು, ಭಾರೀ ಬೇಡಿಕೆ ಇದೆ.

Nut meg fruit

ಬೆಳೆಸುವ ವಿಧಾನ:

 • ಜಾಯೀ  ಮರದಲ್ಲಿ ಆಗುವ ಕಾಯಿಯ ಒಳ ಭಾಗದ ಬೀಜಗಳು  ಮೊಳಕೆಯೊಡೆದು ಸಸಿಯಾಗುತ್ತದೆ.
 • ಇದನ್ನೇ ಸಸ್ಯಾಭಿವೃದ್ದಿಗೆ  ಬಳಕೆ ಮಾಡಲಾಗುತ್ತದೆ.
 • ಬೀಜದಿಂದ ಮತ್ತು ಕಸಿ ವಿಧಾನದಿಂದ ಸಸ್ಯಾಭಿವೃದ್ದಿ ಮಾಡುತ್ತಾರೆ.
 • ಕಸಿ ವಿಧಾನದ ಸಸಿಗಳಿಗೂ  ಬೀಜದಿಂದ ಮಾಡಿದ ಸಸಿಗಳಿಗೂ ಅಂತಹ ವ್ಯತ್ಯಾಸ ಇರುವುದಿಲ್ಲ.
 • ಬೀಜದ ಸಸಿಗಳಲ್ಲಿ ಗಂಡು –ಹೆಣ್ಣು ಆಗುತ್ತದೆ.
 • ಗಂಡು ಬರೇ ಹೂವು ಮಾತ್ರ ಆಗುತ್ತದೆ. ಹೆಣ್ಣು ಕಾಯಿಯಾಗುತ್ತದೆ.
 • ಈ ವ್ಯತ್ಯಾಸ  3:7  ರ ಪ್ರಮಾಣದಲ್ಲಿ ಆಗುತ್ತದೆ.

ಕಸಿ ಸಸಿಯಲ್ಲಿ ಈ ನ್ಯೂನತೆ ಇಲ್ಲ. ಆದರೆ ಬೀಜದ ಸಸಿ ಸುಮಾರು 30 ರೂ. ಗಳಿಗೆ ಲಭಿಸಿದರೆ, ಕಸಿ ಸಸ್ಯಕ್ಕೆ 300-500 ರೂ. ತನಕ ಇರುತ್ತದೆ.

 • ನಾಟಿ ಮಾಡಿ ಫಸಲಿಗೆ ಬರಲು 4 -5  ವರ್ಷ ಬೇಕಾಗುತ್ತದೆ.
 • ಆಗ ಅದು ಗಂಡೋ ಹೆಣ್ಣೋ ಎಂದು ಗೊತ್ತಾಗುತ್ತದೆ.
 • ಆ ಸಮಯದಲ್ಲಿ ಗಂಡು ಸಸಿಗಳಿದ್ದರೆ ಅದನ್ನು ತೆಗೆದು ಬೇರೆ ನೆಡಬಹುದು.

ಅಧಿಕ ಇಳುವರಿಗೆ ಮರ ದೊಡ್ಡದಾಗಬೇಕು. ಅದಕ್ಕೆ ಬೀಜದಿಂದ ಮಾಡಿದ ಸಸಿಗಳಷ್ಟು ಉತ್ತಮವಾಗಿ ಕಸಿ ಸಸಿಗಳು ಬರಲಾರದು.

ಎಲ್ಲಿ ಬೆಳೆಸಬಹುದು:

Nut meg ripped

 • ಇದು ಕರಾವಳಿ ಮಲೆನಾಡು ಮತ್ತು ಅರೆ ಮಲೆನಾಡಿನಲ್ಲಿ ಬೆಳೆಯಬಹುದಾದ  ಬೆಳೆ.
 • ಇತ್ತೀಚೆಗೆ ಕೆಲವು ಪ್ರಗತಿಪರ ಕೃಷಿಕರು ಇದನ್ನು ಬಯಲು ಸೀಮೆಯ ಅಡಿಕೆ ತೋಟಗಳಲ್ಲೂ ಬೆಳೆಸಲು  ಪ್ರಯತ್ನ ಪಟ್ಟಿದ್ದುಂಟು.
 •  ವಾತಾವರಣದ ತಾಪಮಾನ 35 ಡಿಗ್ರಿಗಿಂತ ಹೆಚ್ಚಾದಾಗ ಕಾಯಿ ಉದುರುವ ಸಮಸ್ಯೆ ಉಂಟಾಗುತ್ತದೆ.
 • ಜಾಯೀ ಮರವು ಜನವರಿ ಫೆಬ್ರವರಿ ತಿಂಗಳಲ್ಲಿ ಹೂ ಬಿಟ್ಟು ಮೇ ತಿಂಗಳಿನಿಂದ ಆಗಸ್ಟ್ ತನಕವೂ ಕೊಯಿಲು ಇರುತ್ತದೆ.
 • ಈ ಸಮಯದಲ್ಲಿ ಮಳೆಗಾಲ ಬರುವ ಕಾರಣ ಒಣಗಿಸಲು ಸ್ವಲ್ಪ  ಬೆಚ್ಚಗಿನ ವ್ಯವಸ್ಥೆ ಬೇಕಾಗುತ್ತದೆ.

Nut meg

ಜಾಯೀ ಮರದ ಆಯುಷ್ಯ ಸುಮಾರು 50  ವರ್ಷಕ್ಕೂ ಹೆಚ್ಚು.ಇದು ದೈತ್ಯಾಕಾರದ ಮರವಾಗುತ್ತದೆ. ಮರ ಸಾಮಾನ್ಯ ನಾಟಾಕ್ಕೂ ಆಗುತ್ತದೆ. ವರ್ಷ ವರ್ಷವೂ ಸಾಕಷ್ಟು  ತರಗೆಲೆ ಮುಂತಾದ ಒಣ ತ್ಯಾಜ್ಯಗಳನ್ನು ಕೊಡುತ್ತಾ ಮಣ್ಣನ್ನು ಫಲವತ್ತಾಗಿಸುತ್ತದೆ.

ಬೇರಿನ ಸ್ಪರ್ಧೆ ಇಲ್ಲದೆ , ಅಡಿಕೆ ತೋಟಕ್ಕೆ ಬೇಕಾಗುವ ಹಿತ ಮಿತ  ತಂಪನ್ನು ಮರಮಟ್ಟಿನ ಮೂಲಕ ಒದಗಿಸುವ ಬೆಳೆ. ಒಂದು ಎಕ್ರೆ ಅಡಿಕೆ ತೋಟದಲ್ಲಿ 75  ಸಸಿ ಬೆಳೆಸಬಹುದು. ಇದರಿಂದ ವಾರ್ಷಿಕ 1 ಲಕ್ಷಕ್ಕೂ ಹೆಚ್ಚು ಆದಾಯ ಪಡೆಯಬಹುದು.

Leave a Reply

Your email address will not be published. Required fields are marked *

error: Content is protected !!