ರೈತರೇ ಭೂಮಿ ಮಾರಿದರೆ ಹಳ್ಳಕ್ಕೆ ಬಿದ್ದೀರಿ- ಜೋಕೆ.

ಕೃಷಿ  ಭೂಮಿಗೆ  ಬಂಗಾರದ ಬೆಲೆ ಬರಬಹುದು. ಅಥವಾ ವಜ್ರದ ಬೆಲೆ ಬರಬಹುದು. ಆದರೆ ಅದು ಮಾರಾಟದ ಸ್ವತ್ತು ಅಲ್ಲ. ಕೊಳ್ಳುವ ಜನ ನಿಮ್ಮನ್ನು ಹಳ್ಳಕೆ ತಳ್ಳಿ, ಅವರು ದೋಣಿಯಲ್ಲಿ ಪಯಣಿಸುತ್ತಾರೆ. ಮನುಷ್ಯನಿಗೆ ಶನಿ ಅಂಟುವ ಮೊದಲ ಚಿನ್ಹೆ ನಮ್ಮ ಅನ್ನದ ಮೂಲವನ್ನು  ಪರರಿಗೆ ಮಾರಾಟ ಮಾಡುವುದಕ್ಕೆ ಮನಸ್ಸು ಒಪ್ಪುವುದು.

 ಭೂಮಿ ಮಾರಾಟದ ಸ್ವತ್ತು ಅಲ್ಲ:

  • ಭೂಮಿ ಒಂದು ಸ್ತಿರ ಆಸ್ತಿಯೇ ಹೊರತು ಚಲಾವಣೆಯ ಆಸ್ತಿ ಅಲ್ಲ.
  • ಆಸ್ತಿಗಳಲ್ಲಿ ನಗದೀಕರಣ ಮಾಡಬಹುದಾದ  ಅಸ್ತಿ ಮತ್ತು ನಗದೀಕರಣ ಮಾಡಲಾಗದ ಆಸ್ತಿ ಎಂಬುದಾಗಿ ಎರಡು ವಿಧ.
  • ನಮ್ಮ ಕೃಷಿ ಭೂಮಿ ಎಂಬುದು ನಗದೀಕರಣ ಮಾಡಲಾಗದ  ಆಸ್ತಿಯ ವರ್ಗಕ್ಕೆ ಸೇರಿದೆ.
  • ನಾವು ನಮ್ಮ ಇಳಿ ವಯಸ್ಸಿನ ಬಧ್ರತೆಗಾಗಿ ಠೇವಣಿ ಇಡುತ್ತೇವೆ.
  • ಯಾವಾಗ ನಮಗೆ ಸಾವು ಬರುತ್ತದೆ ಎಂದು ಗೊತ್ತಿರುವುದಿಲ್ಲ.
  • ಆ ತನಕವೂ ನಾವು ಅದರ ಬಡ್ಡಿಯನ್ನು ಮಾತ್ರ ಬಳಕೆ ಮಾಡುತ್ತೇವೆ.
  • ಅಸಲು ಅಲ್ಲೇ ಇರುತ್ತದೆ. ಅದು ನಮ್ಮ ನಂತರದ ತಲೆಮಾರಿಗೆ ನಾವು ಕೊಡುವ ಬಳುವಳಿ.
  • ಅದೇ ರೀತಿ ಆಸ್ತಿ ಎಂಬುದು.
  • ಇದರಲ್ಲಿ ಬೆಳೆ ಮಾಡಿ ಆದರಿಂದ ನಮ್ಮ ಜೀವನ ಹೊರೆಯುವ ಸರ್ವ ಅಧಿಕಾರವೂ ನಮಗಿದೆ.
  • ಅದನ್ನು ಮಾರಾಟ ಮಾಡಿ  ನಗದೀಕರಣ ಮಾಡುವ  ಯಾವ ಅಧಿಕಾರವೂ ನಮಗಿಲ್ಲ.

ಯಾರು ಮಾರಾಟ ಮಾಡುತ್ತಾರೆ?

ಕೂಲಿ ಮಾಡುತ್ತಿದ್ದವರು ಕೃಷಿಗೆ ಬಂದು ಜೀವನ ಕಂಡವರು ಇವರು. ಬನವಾಸಿಯ ಅಬ್ದುಲ್ ರೌಫ್ ಸಾಹೇಬರು.
  • ಹಣ ಕೊಟ್ಟು ಖರೀದಿ ಮಾಡಿದ ಭೂಮಿ ಯಾರಲ್ಲಿ ಇದೆಯೋ ಅವರು ಅದನ್ನು ಮಾರಾಟ ಮಾಡಲಾರರು.
  • ಕಾರಣ ಅವರು ಅದನ್ನು ಭವಿಷ್ಯದ ಆಸ್ತಿ ಎಂದು ಪರಿಗಣಿಸಿರುತ್ತಾರೆ.
  • ಯಾರಿಗೆ ಬಳುವಳಿಯಾಗಿ, ಅಥವಾ ಯಾವುದೇ ಖರ್ಚು ಇಲ್ಲದೆ ಭೂಮಿ ಬಂದಿದೆಯೋ ಅವರು ಅದನ್ನು ಮಾರಾಟ ಮಾಡುತ್ತಾರೆ.

 ಆಸ್ತಿ ಮಾರಾಟ ಮಾಡುವಾಗ ಮೇಲೆ ತಿಳಿಸಲಾದ ವಿಚಾರವನ್ನು ಹಲವು ಬಾರಿ ಯೋಚನೆ ಮಾಡಿದರೆ ಖಂಡಿತವಾಗಿಯೂ ಅದನ್ನು ಮಾರಾಟ ಮಾಡುವ ಗೋಜಿಗೆ ಹೋಗಲಾರರು.

ಕೃಷಿ ಕಷ್ಟವೇ- ಲೀಸ್ ಗೆ ಕೊಡಿ:

ಕೃಷಿ ಬಿಟ್ಟು ಕೂಲಿಗಾಗಿ ಕಾಯುವ ಕೆಲಸ ಬೇಡ.
  • ಒಂದಷ್ಟು ಜನರಿಗೆ ಈಗ ಋಷಿ ಮಾಡುವುದು ಕಷ್ಟವಾಗಿದೆ.
  • ಕಾರಣ ಕೆಲಸಗಾರರ ಲಭ್ಯತೆ ಇಲ್ಲ.  ಜೊತೆಗೆ  ಅವರ ಮಜೂರಿಯೂ ಹೆಚ್ಚಾಗಿದೆ.
  • ಕೆಲವರು ಹೊಲದ ದಾಖಲೆ ಮತ್ತು ಇನ್ನಿತರ  ತಂಟೆ ತಕರಾರಿಗೆ ಬೇಸತ್ತು ಭೂಮಿ ಮಾರಾಟ ಮಾಡುವ ಮನಸ್ಸು ಮಾಡಬಹುದು.
  • ಕೆಲವರಿಗೆ ವಯಸ್ಸಾಗಿ ಕೃಷಿ ಮಾಡುವವರಿಲ್ಲದೆ ಭೂಮಿ  ಬೇಡ ಎಂಬ ಮನಸ್ಸಾಗಿರಬಹುದು.
  •   ಇಂತವರು ತಮ್ಮ ಜೀವನೋಪಾಯಕ್ಕೆ ಬೇಕಾಗುವ ವರಮಾನವನ್ನು ಕೊಡಬಲ್ಲ ನೆರೆಹೊರೆಯ ಯಾರಾದರೂ ಆಸಕ್ತ ಕೃಷಿಕರಿಗೆ ಭೂಮಿಯನ್ನು ಲೀಸ್ ಗೆ ಕೊಟ್ಟು  ಭೂಮಿಯನ್ನು ಉಳಿಸಿಕೊಳ್ಳಬಹುದು.
  • ಇಷ್ಟಕ್ಕೂ ಕೆಲವರಿಗೆ ಭೂಮಿ ಮಾರಾಟ ಅನಿವಾರ್ಯವೇ ಆಗಿರುತ್ತದೆ.
  • ಅಂತವರು ತಮ್ಮ ಸಮೀಪದ ಆಸಕ್ತರಿಗೆ ಭೂಮಿಯನ್ನು ಮಾರಾಟ ಮಾಡಿದರೆ ನಮ್ಮಿಂದಾಗಿ ಉಳಿದವರಿಗೆ ನೆಮ್ಮದಿಯನ್ನಾದರೂ ಕೊಟ್ಟ ಪುಣ್ಯ ದೊರೆಯುತ್ತದೆ.

ಕೃಷಿಕನಿಗೆ ಆಸ್ತಿ ಮಾರಾಟ ಮಾಡಿ:

  • ಕೆಲವು ವಿಧ್ಯಾವಂತ ಕೃಷಿ ಆಸಕ್ತರು ತಮ್ಮ ಪಟ್ಟಣದ ಬದುಕಿನ ಜಂಜಾಟವನ್ನು ಬಿಟ್ಟು ಕೃಷಿಯತ್ತ ಬರುವ ಕಾಲ ಬಂದಿದೆ.
  • ಸಾವಿರಾರು ಜನ ಈ ರೀತಿ ಇನ್ನು ಹಳ್ಳಿಗೆ ಕೃಷಿ ಮಾಡಲು ಬರಲಿದ್ದಾರೆ.
  • ಅಂತವರು ಕೃಷಿ ಭೂಮಿಯನ್ನು ಕೃಷಿಯಲ್ಲೇ ಉಳಿಸಬಲ್ಲವರಾಗಿದರೆ, ಅವರಿಗೆ ಭೂಮಿಯನ್ನು ಮಾರಾಟ ಮಾಡಿ.
  • ಯಾರೇ ಆಗಲಿ, ಕೃಷಿ ಮಾಡಿ ಭೂಮಿಯ ಸೊಬಗನ್ನು ಉಳಿಸುವುದಿದ್ದರೆ ನಾವು ಅದನ್ನು ನೋಡಿಯಾದರೂ ಸಂತೋಷ ಪಡಬಹುದು.

ಕೃಷಿ ಬಿಟ್ಟರೆ ಬೇರೆ ಏನೂ ಇಲ್ಲ:

ಇಳಿ ವಯಸ್ಸಿನಲ್ಲಿ ನೆಮ್ಮದಿ ಕೊಡುವುದು ಕೃಷಿ ಮಾತ್ರ
  • ಹೆಚ್ಚುವರಿಯಾಗಿ ಇರುವ ಕೃಷಿ ಭೂಮಿಯನ್ನು ನೈಜ ಕೃಷಿ ಆಸಕ್ತರಿಗೆ ಮಾರಾಟ ಮಾಡಿ.
  • ಆದರೆ ಭೂಮಿ ಮಾರಾಟ ಮಾಡಿ ಅದರ ದುಡ್ಡಿನ ಬಡ್ಡಿಯಲ್ಲಿ ಬದುಕುತ್ತೇವೆ ಎಂಬ ಯೋಚನೆ ಇದ್ದರೆ ಅದರಲ್ಲಿ ನೀವು ಸೋತಂತೆ.
  • ಕೃಷಿ ಹೊರತಾಗಿ ಇನ್ನು ಉಳಿದಿರುವ ಉದ್ಯೋಗ ಸೃಷ್ಟಿಯ ಕ್ಷೇತ್ರ ಎಂದರೆ ಕೂಲಿ ಕೆಲಸ ಮಾತ್ರ.
  • ಮಾಲಿಕನಾಗಿದ್ದವರು ಕೂಲಿಯವನಾಗುವ ಸೌಭಾಗ್ಯ  ಒಳ್ಳೆಯದೆಂದಿದ್ದರೆ ಮಾರಾಟ ಮಾಡಿ.

ಯಾವುದೇ ಕಾರಣಕ್ಕೂ ನೆಮ್ಮದಿಯಲ್ಲಿದ್ದ ಹಳ್ಳಿಯ ಬದುಕಿಗೆ ಕಾರ್ಪೋರೇಟ್ ಸಂಸ್ಥೆಗಳನ್ನು ಆವ್ಹಾನಿಸಿ ಅಲ್ಲಿನ ಶಾಂತಿ ಕದಡದಿರಿ. ಮೊದಲು ಅಗ್ರೋ ಇಂಡಸ್ಟ್ರೀ, ನಂತರ ಬೇರೆಯೇ ಆಗುತ್ತದೆ.

ಕೃಷಿ ಮಾಡಿ – ಲಾಭ ಇದೆ:

  • ಬಹಳ ಜನ ಕೃಷಿಯಲ್ಲಿ ಲಾಭವಿಲ್ಲ ಎನ್ನುತ್ತಾರೆ.
  • ಆದರೆ ಅದರ ಪ್ರತ್ಯಕ್ಷ- ಪರೋಕ್ಷ  ಲಾಭವನ್ನು ನೋಡುವುದಿಲ್ಲ.
  • ಯಾರ ಅವಲಂಭನೆಯೂ ಇಲ್ಲದೆ ಬದುಕಲು  ಇರುವ ಏಕೈಕ ವೃತ್ತಿ ಇದ್ದರೆ ಅದು ಕೃಷಿ ಮಾತ್ರ.
  • ಇಲ್ಲಿ ನಮಗೆ ನಾವೇ ಯಜಮಾನರು. ಯಾರ ಹಂಗೂ ಇಲ್ಲ. ಯಾರ ನೆರವೂ ಬೇಕಾಗಿಲ್ಲ. ಇದು ಎಲ್ಲರಿಗೂ ತಿಳಿದಿರಲಿ.

ಆಸ್ತಿ ಮಾರಾಟ ಮಾಡಿದಾಗ ಬರುವ ಕಾಂಚಾಣ ನಮ್ಮನ್ನು ಕುರುಡರಂತೆ ಕುಣಿಸುತ್ತದೆ. ಇದು ಕೆಲವೇ ಕೆಲವು ಸಮಯದ ತನಕ ಮಾತ್ರ. ನಂತರ ಯಾರೂ ಇಲ್ಲ. ನಮ್ಮಲ್ಲೂ ಹಣ ಇಲ್ಲ. ಇದು ಬೇಕೇ?

 

Leave a Reply

Your email address will not be published. Required fields are marked *

error: Content is protected !!