ಅಡಿಕೆ- ಬುಡ ಬಿಡಿಸಿ ಗೊಬ್ಬರ ಕೊಡಬೇಕಾಗಿಲ್ಲ.

areca garden with out tilling

ಬಹಳ ಜನ ಅಡಿಕೆ , ತೆಂಗಿನ ಮರಗಳಿಗೆ ಗೊಬ್ಬರ ಇತ್ಯಾದಿ ಹಾಕುವಾಗ ಮರದ ಬುಡ ಭಾಗವನ್ನು ಕೆರೆದು ಆ ಅವಕಾಶದ ಒಳಗೆ  ರಾಸಾಯನಿಕ ಗೊಬ್ಬರ, ಕೊಟ್ಟಿಗೆ ಗೊಬ್ಬರ ಕೊಟ್ಟು ಮತ್ತೆ ಮುಚ್ಚುತ್ತಾರೆ.  ಇದಕ್ಕೆ ತಗಲುವ ಖರ್ಚು ಗೊಬ್ಬರಕ್ಕಿಂತ ಹೆಚ್ಚು. ಅದನ್ನು ಉಳಿಸಿದರೆ ಗೊಬ್ಬರ ಜಾಸ್ತಿ ಕೊಟ್ಟು ಇಳುವರಿ ಹೆಚ್ಚು ಪಡೆಯಬಹುದು.

  • ಇಲ್ಲಿ ತೋರಿಸಿರುವ ಚಿತ್ರ ಓರ್ವ ಅಡಿಕೆ  ಬೆಳೆಗಾರ ತನ್ನ ಅಡಿಕೆ  ತೋಟದಲ್ಲಿ ನೆಟ್ಟ ನಂತರ ಗುದ್ದಲಿ ಮುಟ್ಟಿಸಿಲ್ಲ.
  • ಇಲ್ಲಿನ  ಇಳುವರಿ  ಮತ್ತು ಮರದ ಆರೋಗ್ಯ ಬೇರೆಲ್ಲೂ ಕಾಣಸಿಗದು.

ಅಡಿಕೆ- ತೆಂಗಿನ ಮರಗಳಿಗೆ ಮೇಲೆ ಗೊಬ್ಬರ ಕೊಟ್ಟರೆ ಅದರ  ಬೇರು ಮೇಲೆ ಬರುತ್ತದೆ ಎಂಬುದು ನಮ್ಮ ತಪ್ಪು ಗ್ರಹಿಕೆ. ಈ ಮರಗಳ ಬೇರಗಳು  ಮೇಲ್ಭಾಗದಲ್ಲೇ  ಹಬ್ಬುವುದೇ  ಇದರ  ಗುಣ.

soil disturbed areca garden-ಮಣ್ಣು ಅಗತೆ ಮಾಡಿದ ತೋಟ.

ಬುಡ ಮಾಡದೆ ಗೊಬ್ಬರ ಕೊಡಿ:

  • ಹಿತ ಮಿತವಾಗಿ ಬುಡ ಬಿಡಿಸಿ ಗೊಬ್ಬರ ಕೊಡುವ ಪದ್ದತಿ ತಪ್ಪು ಅಲ್ಲ.
  • ಹಾಗೆಂದು ಮರದ ಬೊಡ್ಡೆ ಸಮೀಪ  ಮಣ್ಣು ಕೆರೆಯುವುದು, ಅಲ್ಲಿಗೇ ಗೊಬ್ಬರ ಕೊಡುವುದು ಕೃಷಿಕನ ಅಜ್ಞಾನ.

ಹಿಂದೆ ಕೆಲಸದವರ ಲಭ್ಯತೆ ಇತ್ತು. ಮಜೂರಿ ಸಹ ಕಡಿಮೆ ಇತ್ತು. ಆ ಸಮಯದಲ್ಲಿ ಹಾಕುವ ಕೊಟ್ಟಿಗೆ ಗೊಬ್ಬರ ನೀರಿಗೆ ತೊಳೆದು ಹೋಗದಿರಲಿ, ಒಂದೆಡೆ ಇರಲಿ ಎಂದು ಬುಡ ಭಾಗವನ್ನು ಬಿಡಿಸಿ ಅಲ್ಲಿಗೆ ಗೊಬ್ಬರ ಹಾಕುತ್ತಿದ್ದರು.

  • ಈಗ ಈ ಕೆಲಸಕ್ಕೆ ಬಿಡಿಸಲು ಮತ್ತೆ ಮುಚ್ಚಲು ಸುಮಾರು,30  ರೂ. ಖರ್ಚು ಇದೆ.
  • ಇಷ್ಟು ಮೊತ್ತದಲ್ಲಿ ಒಂದು ಮರಕ್ಕೆ ವರ್ಷಕ್ಕೆ ಬೇಕಾಗುವ ಸಾವಯವ ಗೊಬ್ಬರಗಳನ್ನು ಕೊಡಬಹುದು.
  • ಅಡಿಕೆ, ತೆಂಗು ಮುಂತಾದ ಬೆಳೆಗಳ ಬೇರಿನ ರಚನೆ ಮತ್ತು ಅದರ ಪೋಷಕಾಂಶ  ಹೀರಿಕೊಳ್ಳುವ ವಿಧಾನವನ್ನು ಅರಿತವರು ಬುಡ ಬಿಡಿಸಲಾರರು ಮತ್ತು ಬುಡಕ್ಕೇ ಗೊಬ್ಬರಗಳನ್ನು ಕೊಡಲಾರರು.
  • ಮಳೆಗಾಲದಲ್ಲಿಯಂತೂ ಬುಡದ ಭಾಗವನ್ನು ಯಾವುದೇ ರೀತಿ ಅಗೆತ ಮಾಡಬಾರದು.
  • ಇದರಿಂದ ಮಣ್ಣು, ಮತ್ತು ಗೊಬ್ಬರ ತೊಳೆದು ಹೋಗುತ್ತದೆ.

ಎಲ್ಲಿ ಗೊಬ್ಬರ ಕೊಡಬೇಕು:

manuring should be active root zone - ಪೋಷಕಾಂಶಗಳನ್ನು ಚಟುವಟಿಕೆ ಉಳ್ಳ ಬೇರಿನ ಭಾಗದಲ್ಲಿ ನೀಡಬೇಕು.

  • ಅಡಿಕೆ- ತೆಂಗಿನ ಮರಕ್ಕೆ  ಯಾವುದೇ  ಪೊಷಕಾಂಶಗಳನ್ನು ಕೊಡುವಾಗ  ಅದರ ಆಹಾರ ಸಂಗ್ರಹಿಸುವ ಬೇರಿನ  (ಕ್ರಿಯಾತ್ಮಕ ಬೇರುಗಳು) ಭಾಗಕ್ಕೆ ಕೊಡಬೇಕು.
  • ಆಹಾರ ಸಂಗ್ರಹಿಸುವ ಬೇರುಗಳು ( ಫೀಡರ್ ರೂಟ್ಸ್) ತೆಂಗಿನ ಮರದ ಬುಡ  ಭಾಗದಿಂದ 1.5ಮೀ. ನಂತರ ಇರುತ್ತದೆ. ಅಡಿಕೆ ಮರದಲ್ಲಿ 3 ಅಡಿಯ ನಂತರ ಇರುತ್ತದೆ.
  • ಆಹಾರ ಸಂಗ್ರಹಿಸುವ ಬೇರುಗಳು ಮುಖ್ಯ ಬೇರುಗಳಲ್ಲಿ  ಕವಲೊಡೆದ ಬೇರುಗಳಾಗಿದ್ದು, ಅದು ಮಾತ್ರ ಅಹಾರ ಸಂಗ್ರಹಿಸಿ ಕೊಡುತ್ತದೆ.
  • ಕ್ರಿಯಾತ್ಮಕ ಬೇರುಗಳು ಇರುವಲ್ಲಿ ಕೊಟ್ಟ ಪೋಷಕಗಳು ಬೇಗ ಸಸ್ಯಕ್ಕೆ ಲಭ್ಯವಾಗುತ್ತದೆ.  ಇಳುವರಿಗೆ ಮತ್ತು ಮರದ ಆರೋಗ್ಯಕ್ಕೆ ಇದು ತುಂಬಾ ಸಹಾಯಕ.

ಅಡಿಕೆ- ತೆಂಗಿನ  ಮರದ  ಫೀಡರ್ ರೂಟ್ ಗಳು ಇರುವಲ್ಲಿ  ಬುಡ ಮಾಡುವುದರಿಂದ ಮರದ ಕ್ರಿಯಾತ್ಮಕ ಬೇರುಗಳಿಗೆ  ಹಾನಿಯಾಗಬಹುದು. ಆದುದರಿಂದ ಬುಡ ಮಾಡಿ ಗೊಬ್ಬರ ಹಾಕುವ ಕೆಲಸ ಮಾಡಬೇಡಿ.

ಹೇಗೆ ಗೊಬ್ಬರ ಕೊಡುವುದು:

  • ಅಡಿಕೆ – ತೆಂಗು ನಾಲ್ಕೂ ಮರಗಳ ಮಧ್ಯಂತರದಲ್ಲಿ  ಪೋಷಕಗಳನ್ನು  ಕೊಡುವುದು ಉತ್ತಮ ವಿಧಾನ.
  • ಆದರೆ ಅದನ್ನು ಮಾಡಲು ನಮ್ಮ ಮನಸ್ಸು ಒಪ್ಪುವುದಿಲ್ಲ.
  • ಇದರ ಬದಲಿಗೆ ಮರದ ಬುಡ ಭಾಗದಿಂದ  1 ಮೀಟರ್ ದೂರದಲ್ಲಿ ಯಾದರೂ ಪೋಷಕಾಂಶಗಳನ್ನು ಹರಡಿ ಹಾಕಿ.
  • ರಾಸಾಯನಿಕ ಗೊಬ್ಬರಗಳನ್ನು ಹಾಕಿದಾಗ ಅದು ಆವೀಕರಣ ಆಗದಂತೆ ಅದರ ಮೇಲೆ ಸಾವಯವ ಕೊಟ್ಟಿಗೆ  ಗೊಬ್ಬರ ಹರಡಿ ಮುಚ್ಚಿಗೆ ಮಾಡಬೇಕು.
  • ಒಂದಂತಸ್ತು  ಕೊಟ್ಟಿಗೆ  ಗೊಬ್ಬರ ಅದರ ಮೇಲೆ ರಾಸಾಯನಿಕ  ಗೊಬ್ಬರ ಮತ್ತು ಅದರ ಮೇಲೆ ಮತ್ತೆ ಕೊಟ್ಟಿಗೆ ಗೊಬ್ಬರ ಅಥವಾ ತರಗೆಲೆ-ಹಾಗೂ ಆದೇ ಮರದ ತ್ಯಾಜ್ಯಗಳ ಹಾಕಿ ಮುಚ್ಚಬೇಕು.

ಬೇರಿಗೇ ಪೋಷಕ ಸಿಗಬೇಕು ಎಂದು ಕಚ್ಚಾ ರಸಗೊಬ್ಬರ ಅಥವಾ ಕಚ್ಚಾ ಸಾವಯವ ಗೊಬ್ಬರವನ್ನು ಬೇರು ಕಾಣುವಂತೆ ಬಿಡಿಸಿ ಕೊಟ್ಟರೆ  ಕೊಟ್ಟರೆ . ಕೋಮಲವಾದ ಬೇರಿನ ಮೇಲ್ಮೈಗೆ  ಘಾಸಿಯಾಗಿ ಖಂಡಿತವಾಗಿ ಆ ಬೇರು ಸಾಯುವ ಸಾಧ್ಯತೆ ಇದೆ.

do not put manure at near by bole - ಬುಡದಲ್ಲಿ ಗೊಬ್ಬರ ಹಾಕಿದರೆ ಅಲ್ಲಿ ಹೀರಿಕೊಳ್ಳುವ ಬೇರುಗಳೇ ಇರುವುದಿಲ್ಲ
ಬುಡದಲ್ಲಿ ಗೊಬ್ಬರ ಹಾಕಿದರೆ ಅಲ್ಲಿ ಹೀರಿಕೊಳ್ಳುವ ಬೇರುಗಳೇ ಇರುವುದಿಲ್ಲ
  • ತೀಕ್ಷ್ಣ  ಗೊಬ್ಬರಗಳಾದ ಹರಳು ಹಿಂಡಿ, ಬೇವಿನ ಹಿಂಡಿ ಇತ್ಯಾದಿಗಳನ್ನು ಹಾಕುವಾಗಲೂ ಇದೇ ರೀತಿಯಲ್ಲಿ ಮುಚ್ಚಬೇಕು.
  • ವಾಸನೆ ಎಂಬುದು ಪೊಷಕಾಂಶಗಳು (ಅಮೋನಿಯಾ ರೂಪದಲ್ಲಿ)  ಗಾಳಿಯಲ್ಲಿ  ನಷ್ಟವಾಗುತ್ತಿದೆ  ಎಂದು ತೋರಿಸುತ್ತದೆ.
  • ಪ್ರತೀ ವರ್ಷ ಇದೇ ರೀತಿಯಲ್ಲಿ ಮರದ ಬುಡ ಭಾಗದಿಂದ ದೂರಕ್ಕೆ ಪೋಷಕಗಳನ್ನು ಕೊಡುತ್ತಾ ಬಂದರೆ ತಟ್ಟು ಅಥವಾ ಹೊಲದ ಮಣ್ಣು ಎರೆಹುಳು ಮತ್ತು ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯಿಂದ ಸಡಿಲಗೊಳ್ಳುತ್ತದೆ.
  • ಹೆಚ್ಚು ಹೆಚ್ಚು ಬೇರು ಬರುತ್ತದೆ. ಬೇರು ಹೆಚ್ಚು  ಬೇರು ಬಂದಷ್ಟು, ವಿಶಾಲ ಪ್ರದೇಶಕ್ಕೆ  ಹಬ್ಬಿದಷ್ಟು ಮರದ ಆರೋಗ್ಯ ಉತ್ತಮವಾಗುತ್ತದೆ.

ಇದು ಸುಲಭ ವಿಧಾನ:

  •  ಅಡಿಕೆ ತೆಂಗಿನ ಮರದ ನಾಲ್ಕು ದಿಕ್ಕಿನಲ್ಲಿ ಬುಡ ಭಾಗದಿಂದ (ತೆಂಗು 2 ಮೀ. ಅಡಿಕೆ-1  ಮೀ.)  ದೂರದಲ್ಲಿ ತೂತು ಮಾಡಿ ಆ ಭಾಗಕ್ಕೆ ನಿಗದಿಪಡಿಸಿದ ಪೋಷಕಗಳನ್ನು ಹಂಚಿ ಹಾಕಿ ಮುಚ್ಚಬೇಕು.
  •   ರಾಸಾಯನಿಕ ಗೊಬ್ಬರಗಳನ್ನು ಮಾತ್ರ  ಹೀಗೆ ಕೊಡಬಹುದು. ಸಾವಯವ ಗೊಬ್ಬರಗಳನ್ನು  ಆಗಲಾರದು.

ಸಾವಯವ ಗೊಬ್ಬರಗಳನ್ನು ಕೊಡುವಾಗ ಅದರ ಮೇಲೆ ಸಾವಯವ ತ್ಯಾಜ್ಯಗಳಾದ ಗರಿಗಳನ್ನು  ಸವರಿ ಹಾಕಿದರೆ ಆವೀಕರಣದ ನಷ್ಟ ಕಡಿಮೆಯಾಗುತ್ತದೆ. ಕೊಟ್ಟಿಗೆ ಗೊಬ್ಬರವನ್ನು ಹರಡುವ ಬದಲು ಗುಡ್ಡೆಯಾಗಿ ಹಾಕಿ ಮುಚ್ಚಿದರೆ ಅಲ್ಲಿಯೇ ಅದು ಹುಡಿ ಕಾಂಪೊಸ್ಟು ಆಗುತ್ತದೆ.

ಬುಡ ಮಾಡದೆ ಪೋಷಕಗಳನ್ನು ಕೊಡುವುದರಿಂದ  ಮಣ್ಣಿನ  ರಚನೆ ಸುಧಾರಿಸಿ, ಮರದ ಆರೋಗ್ಯ ಉತ್ತಮವಾಗುತ್ತದೆ. ಖರ್ಚು ಉಳಿತಾಯವಾಗುತ್ತದೆ.  ಬುಡ ಮಾಡುವುದರಿಂದ ಮಳೆಗಾಲದಲ್ಲಿ ಮಣ್ಣು ಸವಕಳಿ ಹೆಚ್ಚಾಗಿ  ತೋಟದ ಫಲವತ್ತತೆ ಸ್ವಲ್ಪ ಸ್ವಲ್ಪವೇ  ಕಡಿಮೆಯಾಗುತ್ತದೆ. ಮಿತ ವ್ಯಯದ ಬೇಸಾಯ ಕ್ರಮ ಅನುಸರಿಸುವವರಿಗೆ  ಇದು ಉತ್ತಮ ವಿಧಾನ.

Leave a Reply

Your email address will not be published. Required fields are marked *

error: Content is protected !!