ಹೊಸತಾಗಿ ತೋಟ ಮಾಡುತ್ತೀರಾ ? ಹೀಗೆ ಮಾಡಿ.

ಹೊಸತಾಗಿ ತೋಟ ಮಾಡುತ್ತೀರಾ

ಹೊಸತಾಗಿ ಅಡಿಕೆ ಸಸಿಗಳನ್ನು  ನೆಡುವಾಗ ಸಾಂಪ್ರದಾಯಿಕ  ಅಂತರದಲ್ಲಿ  ಸ್ವಲ್ಪ ಬದಲಾವಣೆ ಮಾಡಿ ಅಷ್ಟೇ ಸಸಿ ಹಿಡಿಸಿ  ಬೇರೆ  ಬೇರೆ ಅಂತರದಲ್ಲಿ ನಾಟಿ ಮಾಡಿದರೆ  ಮಿಶ್ರ ಬೆಳೆ ಬೆಳೆಸಲು ಸುಲಭ. ಭವಿಷ್ಯದಲ್ಲಿ ಕೆಲಸಗಾರರ ಸಮಸ್ಯೆಗೆ ಇದು ಪರಿಹಾರವಾಗಲಿದೆ.

  • ಮುಂದಿನ ದಿನಗಳಲ್ಲಿ ಕೆಲಸಗಾರರು ಸಿಗುತ್ತಾರೆ ಎಂಬ ಆಶೆ ಬೇಡ.
  • ಇಷ್ಟಕ್ಕೂ ಕೆಲಸಗಾರರಿಗೆ ಕಾಲ ಕಾಲಕ್ಕೆ ಏರಿಕೆಯಾಗುವ ಮಜೂರಿಯನ್ನು ಕೊಡಲು ಕೃಷಿಯ ಉತ್ಪಾದನೆ ಸಾಲದು.
  • ಹೀಗಿರುವಾಗ ನಮಗೆ ಇರುವ ಆಯ್ಕೆ ಕೆಲಸದವರ ಅವಲಂಬನೆಯನ್ನು ಕಡಿಮೆ ಮಾಡುವುದು ಒಂದೇ.
  • ಇದಷ್ಟೇ ಅಲ್ಲ. ಒಂದು ವೇಳೆ ಅಡಿಕೆಗೆ ಬೇಡಿಕೆಯೇ ಇಲವೆಂದಾದರೂ ಸಹ  ಅಲ್ಲಿ ಮಿಶ್ರ ಬೆಳೆಗಳನ್ನು ಬೆಳೆಯುವ ಅವಕಾಶ ಇದ್ದರೆ  ನಾವು ಬದುಕಲು  ಸಾಧ್ಯ.

ಕೆಲಸ ಸುಲಭವಾಗಬೇಕು:

  • ನಮ್ಮ ತೋಟದ ಸೌಕರ್ಯಗಳು  ಅನುಕೂಲವಾಗಿದ್ದರೆ  ಬಹುತೇಕ ಕೆಲಸವನ್ನು ಸಲೀಸಾಗಿ ಮಾಡಲು ಸಾಧ್ಯ.
  • ಉದಾಹರಣೆಗೆ ಒಂದು ಸಮಾನ್ಯ ಟ್ರಾಟರ್ ಅಥವಾ ಜೀಪ್ , ಅಥವಾ ಮಾರುತಿ ಓಮ್ನಿ ತೋಟದ ಒಳಗೆಲ್ಲಾ  ಸಂಚರಿಸಿದರೆ ಕಾಲ ಕಾಲಕ್ಕೆ ಸರಿಯಾಗಿ  ಸಿಂಪರಣೆಗೆ ,  ಕೊಯಿಲು , ಸಾಗಾಣಿಕೆಗೆ ಮಾಡಬಹುದು.
  •   ಆದರೆ ಈಗಿರುವ ನಮ್ಮ ತೋಟದ ಒಳಗೆಲ್ಲಾ ನಮ್ಮ ಈ ವಾಹನಗಳ ಸಂಚಾರಕ್ಕೆ ಅನುಕೂಲ ಇಲ್ಲ.
  • ಏನಿದ್ದರೂ ಬದಿ ಬದಿಯಲ್ಲಿ ಹೋಗುತ್ತದೆ.
  • ಪ್ರತೀ ಸಾಲಿನ ಬದಿಯಲ್ಲೂ ಇದು ಹೋಗುವಂತಾದರೆ, ನಾವೇ ಸಾಕಷ್ಟು ತೋಟದ ಕೆಲಸಗಳನ್ನು ಮಾಡಬಹುದು.
  • ಇದಕ್ಕೆ ಬೇಕಾದಂತೆ ನಾವು ತೋಟವನ್ನು ಸಿದ್ದಪಡಿಸಿಕೊಳ್ಳಬೇಕು ಅಷ್ಟೇ.

ಸಾಗರದಲ್ಲಿ ಓರ್ವ ಕೃಷಿಕ ಅಮಾನುಲ್ಲಾ ಖಾನ್  ತನ್ನ ಅಡಿಕೆ ತೋಟವನ್ನು ಹೊಸ ಅಂತರದಲ್ಲಿ ನಾಟಿ ಮಾಡಿದ್ದಾರೆ. ಅದರಲ್ಲಿ ಫಸಲು ಬರುತ್ತಿದೆ. ಇದು ಬಹು ಬೆಳೆಗಳನ್ನು ಬೆಳೆಸಲಿಕ್ಕಾಗಿ ಮಾಡಿದ್ದು.  ಈ ಅಂತರದಲ್ಲಿ ರೈತರು ಬಹು ಬೆಳೆಯನ್ನೂ ಬೆಳೆಯಬಹುದು.  ಇಲ್ಲವಾದರೆ ಅಡಿಕೆ ತೋಟವನ್ನು ಯಾಂತ್ರೀಕವಾಗಿ ನಿರ್ವಹಣೆ ಮಾಡಬಹುದು.

ಯಾವ ಅಂತರ:

  • ಸಸಿಯಿಂದ ಸಸಿಗೆ 6 ಅಡಿ ಅಂತರ. ಸಾಲಿನಿಂದ ಸಾಲಿಗೆ 12 ಅಡಿ ಅಂತರ.
  • ಈ ಅಂತರದ ಮಧ್ಯದಲ್ಲಿ ಇವರು ಸಿಲ್ಪರ್ ಮರ ನೆಟ್ಟು ಒಂದು ಸಾಲು ಕರಿಮೆಣಸು ಮತ್ತು ಮೂರು ಸಾಲು ಕಾಫೀಯನ್ನು ಬೆಳೆಸಿದ್ದಾರೆ.
  • ಎಲ್ಲಿ ತನಕ ಕರಿಮೆಣಸು ರೋಗ ಬಾರದೆ ಇರುತ್ತದೆಯೋ ಆ ತನಕ  ಉಳಿಸಿಕೊಳ್ಳುವುದು.
  •  ಎಲ್ಲಿ ತನಕ ಕೆಲಸಗಾರರ ಲಭ್ಯತೆ ಇರುತ್ತದೆಯೋ ಅಲ್ಲಿ ತನಕ ಮಧ್ಯಂತರದ  ಕಾಫೀಯನ್ನು ಕೊಯಿಲು ಮಾಡುತ್ತಾ ಬೆಳೆ ಪಡೆಯುವುದು.
  • ಒಂದು ವೇಳೆ ಅಡಿಕೆಗೆ ಬೆಲೆಯೇ ಕಡಿಮೆಯಾದರೂ ಉಳಿದ ಬೆಳೆ  ಇರುವ ಕಾರಣ ತೋಟ ಉಳಿಸಿಕೊಳ್ಳಬಹುದು.
  • ಮಧ್ಯಂತರದಲ್ಲಿ ಸಿಲ್ವರ್ ಹಾಗೂ ಕಾಫೀ ಇರುವ ಕಾರಣವೋ ಏನೋ ಅಡಿಕೆಯಲ್ಲಿ  ಸರಾಸರಿ 1.5 ಕಿಲೋ ಇಳುವರಿ.

ಯಲ್ಲಾಪುರದ ಚವತ್ತಿ ಸಮೀಪ  ಪ್ರಹ್ಲಾದ್  ಎಂಬವರು  ಸಸಿಯಿಂದ ಸಸಿಗೆ 8 ಅಡಿ ಅಂತರ ಮತ್ತು ಸಾಲಿನಿಂದ ಸಾಲಿಗೆ 12 ಅಡಿ ಅಂತರ ಇಟ್ಟು ಬರೇ ಅಡಿಕೆ  ಬೆಳೆದು ಉತ್ತಮ ಇಳುವರಿ ಪಡೆಯುತ್ತಿದ್ದಾರೆ.

  •  ಕೆಲಸಗಾರರ  ಸಮಸ್ಯೆ ಅತಿಯಾದಾದಾಗ ಅಡಿಕೆ ಬೆಳೆಯ ನಿರ್ವಹಣೆಯಾದ ಸಿಂಪರಣೆ, ಕೊಯಿಲು ಮುಂತಾದ ಕೆಲಸಗಳಿಗೆ ಮಧ್ಯದಲ್ಲಿ ಟ್ರಾಕ್ಟರ್ ಚಲಾವಣೆಗೆ ಬೇಕಾಗುವಷ್ಟು  ಜಾಗ ಇರುತ್ತದೆ. ಕಡಿಮೆ ಕೆಲಸದವರಿದ್ದರೂ ನಿರ್ವಹಣೆ ಮಾಡಬಹುದು.

ಹೊಸ ತೋಟಗಳನ್ನು ಹೀಗೆ ಮಾಡಬಹುದು:

  • ಹೊಸತಾಗಿ ತೋಟ ಮಾಡುವವರು ನಮ್ಮ ಹಿರಿಯರು ಪಾಲಿಸುತ್ತಿದ್ದ 9×9 ಅಡಿ ಅಂತರವನ್ನೇ ಪಾಲಿಸಬೇಕಾಗಿಲ್ಲ.
  • ಇದರಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಬಹುದು.
  • ಅಡಿಕೆ ಸಸಿಗಳಿಗೆ ಅಂತರ ಬೇಕಾಗುವುದು ಗಾಳಿ ಬೆಳಕಿಗಾಗಿ.  ಈ ಅಂತರದಲ್ಲಿ ಗಾಳಿ ಬೆಳೆಕಿಗೆ ಯಾವುದೇ ಕೊರತೆ ಉಂಟಾಗಲಾರದು.
  • 6X12 ಅಡಿಯ ಅಂತರದಲ್ಲಿ ಸಾಲಿಗೆ ಬಿಸಿಲಿನ ಝಳ ಹೆಚ್ಚಾಗಬಹುದು.
  • ಅತಿಯಾದ ಬಿಸಿಲು ಇರುವ ಮೈದಾನ ಪ್ರದೇಶಕ್ಕೆ ಇದು ಆಗಲಿಕ್ಕಿಲ್ಲ.
  • ನಾಲ್ಕು ಸಸಿಗಳ ಮಧ್ಯಂತರದಲ್ಲಿ ಮತ್ತೊಂದು ಸಸಿ  ಹಾಕಿದರೆ ವಾಹನ ಓಡಾಡಲು ಕಷ್ಟ

  ಅದರ ಬದಲಿಗೆ 10X8 ಅಂತರದಲ್ಲಿ ಅಡಿಕೆ ಬೆಳೆದರೆ ಯಾವಾಗಲೂ ಒಂದು ಬೆಳೆ ಬಾಳೆ ಇತ್ಯಾದಿ ಮಿಶ್ರ ಬೆಳೆ ಬೆಳೆಯಬಹುದು. ಒಂದು ಸಾಲನ್ನು ಹಾಗೆ ಬಿಟ್ಟರೆ ಎಲ್ಲಾ ಕೆಲಸಕಾರ್ಯಗಳಿಗೂ ಅನುಕೂಲವಾಗು ವಾಹನ ಸಂಚಾರಕ್ಕೆ ಅನುಕೂಲವಾಗುತ್ತದೆ.

  • ಅಡಿಕೆ ಮರಗಳ  ಬೆಳವಣಿಗೆಗೆ ಯಾವ  ತೊಂದರೆಯೂ ಆಗದು.
  • ಈ ಅಂತರದಲ್ಲಿ ನಿರ್ವಹಣೆ ಬಹಳ  ಮತ್ತು ಸುಲಭ.
  • ಇದಲ್ಲದೆ ಬೇರೆ ಬೇರೆ ಮಿಶ್ರ ಬೆಳೆಗಳನ್ನು ನಿರಂತರವಾಗಿ ಬೆಳೆಯುತ್ತಾ ಇರಬಹುದು.
  • ಈಗಲೇ  ತೋಟದಲ್ಲಿ ಅಡಿಕೆ ಕೊಯಿಲು ಮತ್ತು  ಅಡಿಕೆ ಹೆಕ್ಕುವುದು ಅತೀ ದೊಡ್ದ ಸಮಸ್ಯೆಯಾಗಿದೆ.’
  • ಹೀಗೆ ಮಾಡಿದಾಗ ಟ್ರಾಕ್ಟರ್ ಮಧ್ಯಂತರದಲ್ಲಿ  ನಿಲ್ಲಿಸಿ ಅಡಿಕೆ ಗೊನೆಗಳನ್ನು ಅದರ ಟ್ರಾಲಿಗೇ ಬೀಳುವಂತೆ ಮಾಡಬಹುದು.

ಕೆಲಸಗಾರರು ಇಲ್ಲದಿದ್ದರೂ ಸಹ ಯಾವುದೇ ಸಮಯದಲ್ಲಿ ಸಿಂಪರಣೆ ಮುಂತಾದ ಕೆಲಸಗಳನ್ನು ಟ್ರಾಕ್ಟರ್ ಅಥವಾ ಇನ್ಯಾವುದೇ ಕೃಷಿ ಹೊಲದಲ್ಲಿ ಸಂಚರಿಸಬಲ್ಲ ವಾಹನಗಳ ಮೂಲಕ ಮಾಡಬಹುದು.

ಅಡಿಕೆ ಬೆಳೆಯುವವರು ಎಲ್ಲರೂ ಒಂದೇ  ರೀತಿಯ    ಸಾಂಪ್ರದಾಯಿಕ  ಅಂತರದಲ್ಲೇ ಬೆಳೆಯುವ ಬದಲು  ಸ್ವಲ್ಪ ಬದಲಾವಣೆ  ಮಾಡಿ  ಬೆಳೆದು ನೋಡಬೇಕು. ಇದರಲ್ಲಿ ನಿರ್ವಹಣೆಯ ಕೆಲಸಗಳು ಸರಳೀಕರಣ ಆಗುವಂತಿರಬೇಕು.

Leave a Reply

Your email address will not be published. Required fields are marked *

error: Content is protected !!