ಮಣ್ಣು ಫಲವತ್ತಾಗಿದ್ದರೆ ಅದರಲ್ಲಿ ಬೆಳೆದ ಬೆಳೆಯ ಗುಣಮಟ್ಟ ಉತ್ತಮವಾಗಿರುತ್ತದೆ. ಅದಕ್ಕೆ ರುಚಿಯೂ ಇರುತ್ತದೆ. ಆರೋಗ್ಯಕ್ಕೂ ಉತ್ತಮ.
ಮಣ್ಣಿಗೆ ಜೀವ ಇದೆ.ಇದು ಕೃಷಿಗೆ ಜೀವ ಕೊಡುತ್ತದೆ . ಮಣ್ಣಿನಲ್ಲಿ ಅನೇಕ ಪೋಷಕಾಂಶಗಳು ಮತ್ತು ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳು ಸೇರಿಕೊಂಡಿವೆ . ಮಣ್ಣು ಇಲ್ಲದೆ ಯಾವುದೇ ಜೀವಿ ಬದುಕಲು ಸಾಧ್ಯವಿಲ್ಲ. ಅದೇ ರೀತಿ ಯಾವುದೇ ಜೀವಿ ಇಲ್ಲದೇ ಮಣ್ಣು ಆಗಲು ಸಾಧ್ಯವಿಲ್ಲ. ಒಂದು ಇಂಚು ಮಣ್ಣು ಆಗಬೇಕಾದರೆ ಸಾವಿರಾರು ವರ್ಷಗಳೇ ಬೇಕಾಗುತ್ತದೆ.
- ಇಂದು ಅವೈಜ್ಞಾನಿಕ ರಾಸಾಯನಿಕಗಳ ಬಳಕೆಯಿಂದ ಮಣ್ಣು, ನೀರು ಮತ್ತು ಗಾಳಿ ಕಲುಷಿತವಾಗುತ್ತಿದೆ.
- ಮಣ್ಣು, ನೀರು ಮತ್ತು ಪರಿಸರ ಮಾಲಿನ್ಯ ಹೆಚ್ಚಿ, ಮಣ್ಣಿನ ಫಲವತ್ತತೆ ಮತ್ತು ಕೃಷಿ ಉತ್ಪಾದಕತೆ ಗುಣಮಟ್ಟ ಕ್ಷೀಣವಾಗುತ್ತಿದೆ.
- ತಿನ್ನುವ ಆಹಾರದಲ್ಲಿ ಅಪೌಷ್ಟಿಕತೆ ಹೆಚ್ಚಿದೆ. ಇದು ಭಾರತ ಮಾತ್ರವಲ್ಲ ಅನೇಕ ರಾಷ್ಟ್ರಗಳಲ್ಲಿ ಹೀಗೆ ಆಗಿ ಆತಂಕ ಉಂಟಾಗಿದೆ.
ಮಣ್ಣು ಸವಕಳಿ ಪ್ರಮುಖ ಕಾರಣ:
- ಅಂಕಿ ಸಂಖ್ಯೆಗಳ ಪ್ರಕಾರ ಹೇಳುವುದಾದರೆ ವಿಶ್ವದಲ್ಲಿ ಮಣ್ಣಿನ ಫಲವತ್ತತೆ ಸಂಪೂರ್ಣವಾಗಿ ಕ್ಷೀಣಿಸುತ್ತಿರುವುದು ಮಣ್ಣು ಸವಕಳಿಯಿಂದ.
- ಭಾರತದೇಶದಲ್ಲಿ ಶೇ. 40ರಷ್ಟು ಮತ್ತು ಸರಾಸರಿ ಪ್ರತಿ ಹೆಕ್ಟೇರಿಗೆ 16.4 ಟನ್‍ಗಳಷ್ಟು ಮಣ್ಣು ಸವಕಳಿಯಾಗುತ್ತಿದೆ.
- ಕರ್ನಾಟಕದಲ್ಲಿ ಪ್ರತಿ ವರ್ಷ 15 ಸಾವಿರ ಎಕರೆಯಷ್ಟು ಕೃಷಿ ಭೂಮಿಯು ಬರಡಾಗುತ್ತಿದೆ.
- ಪ್ರತಿ ವರ್ಷ ಭಾರತದಲ್ಲಿಅಮೂಲ್ಯವಾದ 5.3 ಬಿಲಿಯನ್ ಟನ್‍ಗಳಷ್ಟು ಮಣ್ಣು ವಿವಿಧ ಕಾರಣಗಳಿಂದಾಗಿ ಕೊಚ್ಚಣೆಯಾಗಿ ನದಿ ಹಾಗೂ ಸಮುದ್ರ ಸೇರುತ್ತಿದೆ.
- ಇಂತಹ ಜ್ವಲಂತ ಸಮಸ್ಯೆಯನ್ನು ಪರಿಹರಿಸಿದರೆ ಮಾತ್ರ ಮಣ್ಣಿನ ಫಲವತ್ತತೆ ಉಳಿಸಲು ಸಾಧ್ಯ.
- ಮಣ್ಣು ಹಾಳಾಗುವುದನ್ನು ತಡೆಗಟ್ಟಲು ತಿಪ್ಪೆಗೊಬ್ಬರ / ಕಾಂಪೋಷ್ಟ ಗೊಬ್ಬರ / ಎರೆಹುಳು ಗೊಬ್ಬರ/ ಜೈವಿಕ ಗೊಬ್ಬರ/ ಕೋಳಿಗೊಬ್ಬರ/ ಹಂದಿಗೊಬ್ಬರ/ ಕುರಿಗೊಬ್ಬರ/ ಹಿಂಡಿಗಳು/ ಹಸಿರೆಲೆ ಗೊಬ್ಬರ ಮುಂತಾದವುಗಳನ್ನು ಮಣ್ಣಿಗೆ ಸೇರಿಸುತ್ತಿರಬೇಕು.
- ಇದರಿಂದ ಮಣ್ಣಿನ ಭೌತಿಕ ಗುಣಧರ್ಮ ಉತ್ತಮಗೊಂಡು ರಾಸಾಯನಿಕ ಮತ್ತು ಜೈವಿಕ ಕ್ರಿಯೆಗಳು ವೃದ್ದಿಸಿ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.
ಭೌತಿಕ ಗುಣಗಳು ಮಾರ್ಪಾಡು:
- ಸಾವಯವ ಗೊಬ್ಬರಗಳ ಬಳಕೆಯಿಂದ ಮಣ್ಣಿನ ರಚನೆಯಲ್ಲಿ ಮೊತ್ತ ಪ್ರಮಾಣದಲ್ಲಿರುವ ಕಣಗಳನ್ನು ಹೊಂದುತ್ತದೆ.
- ಇದರಿಂದ ಮಣ್ಣಿನಲ್ಲಿ ಗಾಳಿಯಾಡಲು ಅವಕಾಶ ದೊರಕುತ್ತವೆ. ಗಾಳಿ ಮತ್ತು ನೀರಿನ ಚಲನೆ ಸರಾಗವಾಗಿ ನಡೆಯುತ್ತದೆ.
- ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಶೇಖರಿಸುವ ಹಾಗೂ ಹಿಡಿದಿಡುವ ಸಾಮರ್ಥ್ಯವನ್ನು ಪಡೆಯುತ್ತದೆ.
ರಾಸಾಯನಿಕ ಕ್ರಿಯೆಗಳ ಉಪಯುಕ್ತತೆ:
- ಮಣ್ಣಿನ ಫಲವತ್ತತೆ ಮತ್ತು ಉತ್ಪಾದನಾ ಸಾಮರ್ಥ್ಯ ಹೆಚ್ಚಲು ರಾಸಾಯನಿಕ ಕ್ರಿಯೆ ನಡೆಯಲೇ ಬೇಕು.
- ಬೆಳೆಗಳ ಬೆಳವಣಿಗೆಗೆ ಬೇಕಾದ ಮುಖ್ಯ (ಸಾರಜನಕ, ರಂಜಕ ಮತ್ತು ಪೋಟ್ಯಾಷ), ಎರಡನೇಯ (ಸುಣ್ಣ, ಮೆಗ್ನೇಶಿಯಂ ಮತ್ತುಗಂಧಕ) ಮತ್ತು ಸೂಕ್ಷ್ಮ (ಸತು, ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಬೊರಾನ್, ಮಾಲಿಬ್ಡಿನಂ ಮತ್ತುಕ್ಲೋರಿನ್) ಪೋಷಕಾಂಶಗಳನ್ನು ಮತ್ತು ಕೆಲವು ಪ್ರಚೋದಕ ವಸ್ತುಗಳನ್ನು ಒದಗಿಸುತ್ತವೆ.
- ಮೇಲಾಗಿ ಮಣ್ಣಿನರಸಸಾರ, ಹುಳಿ, ಕ್ಷಾರ, ಚೌಳು ಮುಂತಾದ ಏರುಪೇರುಗಳನ್ನು ನಿಯಂತ್ರಿಸುತ್ತವೆ.
- ಇದರಿಂದಲೂ ಬೆಳೆಗಳಿಗೆ ಬಹಳಷ್ಟು ಪೋಷಕಾಂಶಗಳು ದೊರಕುವ ಪ್ರಮಾಣ ಹೆಚ್ಚಾಗುತ್ತದೆ.
- ಸಾವಯವ ವಸ್ತುಗಳು ನೈಟ್ರೇಟ್ ಅಂಶ ನೀರಿನಲ್ಲಿ ಸರಾಗವಾಗಿ ಇಳಿದು ಬಂದು ಪೋಲಾಗುವುದನ್ನು ತಡೆಗಟ್ಟುತ್ತವೆ.
- ಸಾವಯವ ವಸ್ತುಗಳಲ್ಲಿ ಲಿಗ್ನಿನ್ ಮತ್ತು ಅಧಿಕ ನಾರಿನ ಅಂಶ ಶೀಘ್ರವಾಗಿ ಕಳಿಯದೆ ‘ಹ್ಯೂಮಸ್’ ಎಂಬ ಸಾವಯವ ವಸ್ತು ಮಣ್ಣಿನಲ್ಲಿ ಉಳಿದು ಮಣ್ಣಿನ ಫಲವತ್ತತೆ ವೃದ್ಧಿಸುತ್ತದೆ.
ಜೈವಿಕ ಕ್ರಿಯೆಗಳು:
- ಮಣ್ಣಿನಲ್ಲಿರುವ ಸೂಕ್ಷ್ಮ ಜೀವಾಣುಗಳು ಸಾವಯವ ವಸ್ತುಗಳಲ್ಲಿರುವ ಸತ್ವ ಮತ್ತು ಶಕ್ತಿಯಿಂದ ತಮ್ಮ ಕ್ರಿಯೆಯನ್ನು ವೃದ್ದಿಸಿಕೊಂಡು ತಮ್ಮ ಜೀವರಾಶಿಗಳನ್ನು ಹೆಚ್ಚಿಸಿಕೊಳ್ಳುತ್ತವೆ.
- ಇದರಿಂದ ಭೂಮಿಗೆ ಸೇರಿಸಿದೆ ಸಾವಯವ ವಸ್ತುಗಳನ್ನು ಬೇಗನೆ ಕಳಿಸಿ ಭೂಮಿಯಲ್ಲಿ ಇಂಗಾಲದ ಅಂಶ ಹೆಚ್ಚಿ ಫಲವತ್ತತೆ ಉತ್ತಮವಾಗುತ್ತದೆ.
- ದ್ವಿದಳ ದಾನ್ಯಗಳ ಬೇರುಗಳಲ್ಲಿ ಗಂಟುಗಳನ್ನು ಹೆಚ್ಚಿಸುತ್ತವೆ ರೈಜೋಬಿಯಂ ಜೀವಾಣುಗಳಿಗೆ ಗಾಳಿಯಲ್ಲಿರುವ ಸಾರಜನಕದ (78%) ಹೆಚ್ಚಿನ ಹೀರುವಿಕೆಗೆ ಅನುವು ಮಾಡಿಕೊಡುತ್ತದೆ.
- ಅಲ್ಲದೇ, ರಂಜಕದ ಬಿಡುಗಡೆ” ಮತ್ತು ದೊರಕಿಸುವುದು ಸಾವಯವ ವಸ್ತುಗಳ ಬಳಕೆಯಿಂದ ಸಾಧ್ಯ. ಮಣ್ಣಿನಲ್ಲಿ ಹಾನಿಕಾರಕ ಸೂಕ್ಷ್ಮಾಣುಗಳಿಂದ ಬರಬಹುದಾದ ರೋಗಗಳನ್ನು ಸಾವಯವ ವಸ್ತುಗಳು ತಡೆಯಬಹುದು.
- ಈ ಎಲ್ಲಾ ಜೀವಾಣುಗಳ ಆರೈಕೆ ಮತ್ತು ವೃದ್ಧಿಯಿಂದ ಬೆಳೆಗಳ ಬೇರುಗಳು ಉತ್ತಮ ಮಟ್ಟದಲ್ಲಿದ್ದು ಆಹಾರ ಪೋಷಕಾಂಶಗಳನ್ನು ಚೆನ್ನಾಗಿ ಹೀರಿಕೊಳ್ಳುತ್ತವೆ.
- ಮಣ್ಣಿನಲ್ಲಿ ಭೌತಿಕ, ರಾಸಾಯನಿಕ ಮತ್ತು ಜೈವಿಕ ಕ್ರಿಯೆಗಳು ಸಮರ್ಪಕವಾಗಿ ನಡೆದಾಗ ಬೆಳೆಗಳ ಬೆಳವಣಿಗೆ, ಉತ್ಪಾದಕತೆ ಮತ್ತು ಗುಣಮಟ್ಟ ಹೆಚ್ಚುತ್ತದೆ.
ಮಣ್ಣಿಗೆ ಜೀವ ಕೊಡುವುದು ಹೀಗೆ:
- ಪಶು ಸಂಗೋಪನೆಯಲ್ಲಿ ದೊರಕುವ ತ್ಯಾಜ್ಯ ವಸ್ತುಗಳನ್ನು ಭೂಮಿಗೆ ಸೇರಿಸುವುದು ಕಡಿಮೆ ಖರ್ಚಿನಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಉಪಾಯ.
- ಪ್ರಾಣಿಗಳ ಮೂಲದ ಗೊಬ್ಬರಗಳು: ಕುರಿಗೊಬ್ಬರ, ಕೋಳಿಗೊಬ್ಬರ, ಹಂದಿಗೊಬ್ಬರ ಇತ್ಯಾದಿಗಳು ಸಾಂಪ್ರದಾಯಿಕವಾದ ಪೋಷಕಾಂಶ ಮೂಲಗಳು.
- ಬೆಳೆ ತೆಗೆದ ನಂತರ ಕುರಿಗಳ ಹಿಂಡನ್ನುನಿಲ್ಲಿಸುವುದರಿಂದ ಬೆಳೆಗಳ ಇಳುವರಿ ಹೆಚ್ಚುವುದು ಮತ್ತು ಧೀರ್ಘಾವಧಿ ಫಲ ಸಿಗುವುದು.
- ಎರೆಹುಳು ಹೆಚ್ಚಿಸುವುದು: ಎರೆ ಹುಳುವನ್ನು ಜೈವಿಕ ನೇಗಿಲು ಎಂದು ಕರೆಯಬಹುದು.
- ಎರೆಹುಳು ತನ್ನ ಆಹಾರವಾಗಿ ತಿನ್ನುವ ಅರ್ಧ ಕೊಳೆತ ಪದಾರ್ಥದೊಡನೆ ಸೂಕ್ಷ್ಮಾಣು ಜೀವಿಗಳನ್ನು ತನ್ನ ಅನ್ನನಾಳದಲಿ ತೆಗೆದುಕೊಳ್ಳುತ್ತದೆ.
- ಈ ಸೂಕ್ಷ್ಮಾಣು ಜೀವಿಗಳು ಎರೆಹುಳುವಿನ ಅನ್ನನಾಳದಲ್ಲಿ ಅಧಿಕ ಸಂಖ್ಯೆಯಲ್ಲಿ ವೃದ್ದಿಹೊಂದಿ ಹಿಕ್ಕೆಯೊಡನೆ ಹೊರಗೆ ಬರುತ್ತವೆ.
- ಈ ಹಿಕ್ಕೆಗೆ ಎರೆಗೊಬ್ಬರ ಎನ್ನುತ್ತಾರೆ.
- ಕಾಂಪೋಷ್ಟ ಗೊಬ್ಬರ: ನೈಸರ್ಗಿಕವಾಗಿ ಸಿಗುವ ಸಾವಯವ ವಸ್ತುಗಳನ್ನು ಬಳಸಿಕೊಂಡು ಸೂಕ್ಷ್ಮಾಣುಜೀವಿಗಳ ಸಹಾಯದಿಂದ ಬಳಸಿಕೊಂಡು ತಯಾರಾದ ಹ್ಯೂಮಸ್ ಎಂಬ ಸಾವಯವ ಪದಾರ್ಥವೇ ಕಾಂಪೋಷ್ಟ. ಇದನ್ನು ಬಲವರ್ಧನೆ ಮಾಡಿದರೆ ಒಳ್ಳೆಯದು
- ಹಿಂಡಿಗಳು:ಹಿಂಡಿಗಳನ್ನು ಪ್ರತಿ ಎಕರೆಗೆ 250 ಕಿ.ಗ್ರಾಂ. ಪ್ರಮಾಣದಲ್ಲಿ ಮಣ್ಣಿಗೆ ಸೇರಿಸುವುದುರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.
- ಮಣ್ಣಿನಲ್ಲಿರುವ ಉಪಯುಕ್ತ ಶಿಲೀಂದ್ರ ಹಾಗು ಬ್ಯಾಕ್ಟೀರಿಯಾಗಳು ಹೆಚ್ಚುತ್ತದೆ.
- ಹಸಿರು ಗೊಬ್ಬರ: ಹಸಿರೆಲೆ ಸಸ್ಯಗಳನ್ನು ಬೆಳೆಸುವುದು ಮತ್ತು ಅದನ್ನು ಮಣ್ಣಿಗೆ ಸೇರಿಸುವುದು ಮಣ್ಣಿನ ರಚನೆ ಸುಧಾರಿಸುತ್ತದೆ.
ಜೀವಾಣುಗಳ ಸೇರ್ಪಡೆ:
- ಬೆಳೆಗಳಿಗೆ ಪ್ರಯೋಜನಕಾರಿಯಾಗುವಂತಹ ಸೂಕ್ಷ್ಮಜೀವಿಗಳನ್ನು ಸೇರಿಸಿ ತಯಾರಿಸಿದ ಮಿಶ್ರಣ ಮಣ್ಣಿಗೆ ಕೊಡುವುದರಿಂದ ಮಣ್ಣಿಗೆ ಮಣ್ಣು ಹೆಚ್ಚು ಜೀವಂತವಾಗುತ್ತದೆ.
- ಸಾರಜನಕ ಸ್ಥಿರೀಕರಿಸುವ ಜೈವಿಕ ಗೊಬ್ಬರಗಳು, ರಂಜಕ ಕರಗಿಸುವ ಜೈವಿಕ ಗೊಬ್ಬರಗಳು,
- ಸಾವಯವ ಪದಾರ್ಥಗಳನ್ನು ಕಳಿಸುವ ಜೈವಿಕ ಗೊಬ್ಬರಗಳು ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ ಜೈವಿಕ ಗೊಬ್ಬರಗಳು.
- ಸತು ಕರಗಿಸುವ ಬ್ಯಾಕ್ಟೀರಿಯಾ (ಜೆಡ್.ಎಸ್.ಬಿ), ಪೊಟ್ಯಾಶ್ ಮೊಬಿಲೈಸಿಂಗ ಬ್ಯಾಕ್ಟೀರಿಯಾ (ಕೆ.ಎಂ.ಬಿ)
- ಸೂಡೊಮೊನಾಸ್, ಇತ್ಯಾದಿಗಳು ಫಲವತ್ತತೆ ನಿರ್ವಹಣೆ ಮತ್ತು ಜೈವಿಕ ಪೋಷಕಾಂಶಗಳ ಲಭ್ಯತೆ ಬಹಳ ಪರಿಣಾಮಕಾರಿ ಸಾಧನೆಗಳಾಗಿವೆ.
- ಸಸ್ಯ ಬೆಳವಣಿಗೆಗೆ ಪ್ರಚೋದನೆ ನೀಡುವ ಜೀವಾಣುಗಳು ಇಂಡೋಲ್ ಅಸಿಟಿಕ್ ಆಮ್ಲ, ಜಿಬ್ರಲಿನ್ ಆಮ್ಲ ಮತ್ತಿತರ ಬೆಳೆ ಪ್ರಚೋದನಕಾರಿ ವಸ್ತುಗಳನ್ನು ಉತ್ಪಾದನೆ ಮಾಡುತ್ತವೆ.
- ಕೆಲವು ಸೂಕ್ಷ್ಮಜೀವಿಗಳು ಬೆಳೆಗಳಿಗೆ ಬರುವ ರೋಗಗಳನ್ನು ತಡೆಗಟ್ಟುವ ಶಕ್ತಿಯನ್ನು ಇವು ಹೊಂದಿವೆ.
- .ಅಝೋಲ್ಲ ಎಂಬ ನೀರಿನಲ್ಲಿ ಬೆಳೆಯಬಲ್ಲ ಸಸ್ಯ ವಾತಾವರಣದ ಸಾರಜನಕವನ್ನು ಹೀರಿಕೊಂಡು ಬೆಳೆಗಳಿಗೆ ಒದಗಿಸುತ್ತದೆ.
- ಭತ್ತದ ಬೆಳೆಯಲ್ಲಿ ಉಪಯೋಗಿಸಬಹುದು. ಇದರಿಂದ ಶೇ. 5 ರಷ್ಟು ಸಾರಜನಕ (ರಸಗೊಬ್ಬರ) ಕಡಿಮೆ ಮಾಡಬಹುದು.
- ಇದು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದೆ.
- ಈ ಕಾರ್ಯದಲ್ಲಿ ಇದರಲ್ಲಿರುವ ‘ಅನಾಬಿನಾ’ ಎಂಬ ನೀಲಿಹಸಿರುಪಾಚಿ ಸಹಾಯಮಾಡುತ್ತದೆ.
- ಅಝೋಲ್ಲಾದಲ್ಲಿ ಸಾರಜನಕದ ಜೊತೆಗೆ ಇತರ ಪೋಷಕಾಂಶಗಳಿರುವುದರಿಂದ ಬೆಳೆಗೆ ಇತರ ಪೋಷಕಾಂಶಗಳೂ ದೊರೆಯುತ್ತವೆ.
ಸಮಸ್ಯಾತ್ಮಕ ಮಣ್ಣುಗಳ ನಿರ್ವಹಣೆಗೆ ಸಾವಯವ ಪೊಷಕಗಳು ಸಹಕರಿಸುತ್ತವೆ. ಸಾವಯವ ಗೊಬ್ಬರ ಮಣ್ಣಿನಲ್ಲಿ ಕಳಿಯುವಾಗ ಇಂಗಾಲದ ಡೈಆಕ್ಸೈಡ್ ಮತ್ತು ಸಾವಯವ ಹುಳಿ ಪದಾರ್ಥಗಳು ಉತ್ಪತ್ತಿಯಾಗಿ, ಮಣ್ಣಿನಲ್ಲಿ ಕರಗದೆ ಇರುವ ಸುಣ್ಣವನ್ನು ಕರಗಿಸಿ ಮಣ್ಣನ್ನು ತಟಸ್ಥ ಮಾಡುತ್ತವೆ. ಇದರಿಂದ ಮಣ್ಣಿನಲ್ಲಿ ನೀರಿನ ಪ್ರದೇಶ ಹಾಗೂ ಬ್ಯಾಕ್ಟೇರಿಯಾಗಳು ಹೆಚ್ಚಾಗಿ ಮಣ್ಣು ಜೋಳದ ಕಣದಂತಾಗಿ ಮಣ್ಣಿನ ಫಲವತ್ತತೆ ಹೆಚ್ಚಾಗುವುದು.
- ಸಸ್ಯಾವಶೇಷಗಳ ಬಳಕೆ ಮಣ್ಣಿನ ಫಲವತ್ತತೆ ಹೆಚ್ಚಳಕ್ಕೆ ಅಗತ್ಯ
- ಜೀವಾಮೃತ, ಗೋಕೃಪಾಮೃತ ದಂತಹ ಮಿಶ್ರಣಗಳ ಬಳಕೆ ಸಹ ಮಣ್ಣಿನ ಫಲವತ್ತತೆ ಹೆಚ್ಚಳಕ್ಕೆ ಸಹಕಾರಿ.
ಬಯೋಚಾರ್ ಬಳಕೆ:
- ಬಯೋಚಾರ್ ಇಂಗಾಲದಿಂದ ಸಮೃದ್ಧವಾದ ಘನ ವಸ್ತು. ಅಧಿಕ ಉಷ್ಣತೆಯಲ್ಲಿ ಸುಟ್ಟು ಕರಕಲಾದ ಕೃಷಿ ತ್ಯಾಜ್ಯಗಳಿಂದ ಪಡೆಯಲಾಗುತ್ತದೆ.
- ಜೈವಿಕ ಗೊಬ್ಬರಗಳು ಮಣ್ಣಿನ ಜೀವಂತಿಕೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ.
- ಜೊತೆಗೆ ಮಣ್ಣಿನ ಸತ್ವವನ್ನು ಹೆಚ್ಚಿಸುವ, ಮಣ್ಣಿನ ರಚನೆಗೆ ಹೊಂದಿಕೊಂಡು ಪರಿಸರದ ಮೇಲೆ ಅಡ್ಡಪರಿಣಾಮ ಬೀರದೇ ಬೆಳೆಗಳ ಇಳುವರಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ.
- ಮಣ್ಣಿನಲ್ಲಿ ಸಾವಯವ ಇಂಗಾಲ, ಜೀವಂತಿಕೆ ಹೆಚ್ಚಳಕ್ಕೆ ಬಯೋಚಾರ್ ಉತ್ತಮ.
ಮಾನವನೂ ಸೇರಿದಂತೆ ಪರಿಸರದಲ್ಲಿ ನೆಲೆಸಿರುವ ಸಹಸ್ರಾರು ಕೋಟಿ ಜೀವಿಗಳು ಉಳಿವಿಗಾಗಿ ಮಣ್ಣಿನ ಸಂರಕ್ಷಣೆ, ಆರೋಗ್ಯ ಮತ್ತು ಫಲವತ್ತತೆ ನಿರ್ವಹಣೆ ಅತ್ಯಗತ್ಯವಾಗಿದೆ. ಈ ಕಾರಣದಿಂದ ಸಮಸ್ತ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಇದರ ಬಗ್ಗೆ ಹೆಚ್ಚು ಅರಿವು ಮೂಡಿಸಲು ವಿಶ್ವಸಂಸ್ಥೆಯು ಮಣ್ಣಿನ ಆರೋಗ್ಯ ರಕ್ಷಣೆಗಾಗಿ ಪ್ರತಿ ವರ್ಷ ವಿಶ್ವದಾದ್ಯಂತ ಡಿಸೆಂಬರ್ 5 ರಂದು ವಿಶ್ವ ಮಣ್ಣಿನ ದಿನಾಚರಣೆಯನ್ನುಆಚರಿಸಲಾಗುತ್ತದೆ.
“ಆರೋಗ್ಯವಾದ ಮಣ್ಣು… ಆರೋಗ್ಯಯುತ ಆಹಾರ… ಆರೋಗ್ಯವಾಗುವ ಸಮಾಜ…”
ಲೇಖಕರು: 1. ಡಾ. ಶ್ರೀನಿವಾಸ ಬಿ.ವಿ, ವಿಜ್ಞಾನಿ (ಮಣ್ಣು ವಿಜ್ಞಾನ) ಕೃ.ವಿ.ಕೇ., ಕಲಬುರಗಿ, 2. ಡಾ. ರಾಜು ತೆಗ್ಗೆಳ್ಳಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃ.ವಿ.ಕೇ., ಕಲಬುರಗಿ ,ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃ.ವಿ.ಕೇ., ಕಲಬುರಗಿ , 3. ಡಾ. ಪುಷ್ಪಲತಾ. ಎಂ, 4. ನಿಸರ್ಗ ಹೆಚ್. ಎಸ್