ಈರುಳ್ಳಿ ಬೆಳೆಯುವವರು ಗಮನಿಸಬೇಕಾದ ಅಂಶಗಳು.

Onion crop

ಮುಂಗಾರು ಮಳೆ ಬೇಗ ಪ್ರಾರಂಭವಾಗುವುದರಲ್ಲಿದೆ. ಈರುಳ್ಳಿ ಬೆಳೆಗಾರರು ಈಗಲೇ ಸಿದ್ದತೆ ಮಾಡಿಕೊಳ್ಳುವುದು ಉತ್ತಮ.

ಈರುಳ್ಳಿ ಬೆಳೆ ರಾಜ್ಯದ ಚಿತ್ರದುರ್ಗ, ಗದಗ, ಬಿಜಾಪುರ, ಬಾಗಲಕೊಟೆ ಮುಂತಾದ ಕಡೆ ಮುಂಗಾರು ಹಂಗಾಮಿನಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಬೆಳೆಗಾರರು ಮಣ್ಣಿನಲ್ಲಿ ಇರುವ ಪೋಷಕಾಂಶಗಳನ್ನು ತಿಳಿದುಕೊಂಡು, ಅದಕ್ಕನುಗುಣವಾಗಿ ಪೋಷಕಾಂಶಗಳನ್ನು ಕೊಡಬೇಕು. ಹೆಚ್ಚು ಬೇಡಿಕೆ ಇರುವ ತಳಿಗಳನ್ನು ಆಯ್ಕೆ ಮಾಡಿ. ರೋಗ ಕೀಟ ನಿಯಂತ್ರಣಕ್ಕೆ ಸಾಧ್ಯವಾದಷ್ಟು ಸುರಕ್ಷಿತ ಬೆಳೆ ವಿಧಾನಗಳನ್ನು ಆಳವಡಿಸಿಕೊಂಡು ಬೆಳೆದರೆ ಲಾಭವಾಗುತ್ತದೆ.

Onion field
 • ಇತ್ತೀಚೆಗೆ ಮಳೆ ಮತ್ತು ವಾತಾವರಣ ಕೃಷಿಗೆ ಪೂರಕವಾಗಿಲ್ಲ. ಆದ ಕಾರಣ ಸೂಕ್ತ ಮಣ್ಣು, ಬೇಸಾಯಕ್ರಮ, ಬೀಜ (ತಳಿ) ಆರಿಸಿ ಬೆಳೆದರೆ ಮಾತ್ರ ಲಾಭವಾಗುತ್ತದೆ.
 • ಎಂತಹ ಮಣ್ಣು ಉತ್ತಮ:
 • ಈರುಳ್ಳಿ ಬೆಳೆಯನ್ನು ಬೆಳೆಯಲು ನೀರು ಬಸಿದು ಹೋಗುವಂತಹ ಜಮೀನನ್ನು ಆಯ್ಕೆ ಮಾಡಿಕೊಳ್ಳಬೇಕು.
 • ಈರುಳ್ಳಿ ಬೀಜಕ್ಕೆ ಬೀಜೋಪಚಾರ-ಒಂದು ಕೆ.ಜಿ. ಬೀಜಕ್ಕೆ 4-5 ಗ್ರಾಂ. ಟ್ರೈಕೋಡರ್ಮಾ ಶಿಲೀಂಧ್ರನಾಶಕ ಉಪಚರಿಸಬೇಕು.
 • ಬೀಜ ಚೆಲ್ಲಿದ ಒಂದು ತಿಂಗಳ ನಂತರ ದಟ್ಟವಾಗಿ ಬಿದ್ದಲ್ಲಿ ಸಸಿಯಿಂದ ಸಸಿಗೆ 8-10 ಸೆಂ.ಮೀ. ಅಳತೆಯಿಟ್ಟು ಕೀಳಬೇಕು.
 • ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರವನ್ನು ಬಿತ್ತನೆ ಮಾಡಿದ 2 ರಿಂದ 2 1/2 ತಿಂಗಳೊಳಗೆ ಕೊಡಬೇಕು.
 • ಯಾವುದೇ ರೀತಿಯ ಬೆಳೆ ವರ್ಧಕಗಳನ್ನು ಬಳಸುವಾಗ ವಿಜ್ಞಾನಿಗಳೊಂದಿಗೆ ಚರ್ಚಿಸಿ ಕೊಡಬೇಕು.

ಪೋಷಕಾಂಶ ನಿರ್ವಹಣೆ:

 •  ಕೊಟ್ಟಿಗೆ ಗೊಬ್ಬರ 10-12 ಟನ್ (ಎಕರೆಗೆ) ಹಾಗೂ ಶಿಫಾರಸ್ಸು ಮಾಡಿದ ಸಾರಜನಕ, ರಂಜಕ, ಪೊಟ್ಯಾಷದ (ಎನ್.ಪಿ.ಕೆ. 50:30:50 ಕೆಜಿ/ಎಕರೆಗೆ) ಯುರಿಯಾ 50 ಕೆಜಿ, ಸಿಂಗಲ್ ಸೂಪರ್ ಫಾಸ್ಪೇಟ್ 175 ಕೆ.ಜಿ ಮತ್ತು ಎಂ.ಒ.ಪಿ. 65 ಕೆ.ಜಿ ಅನ್ನು ಬಿತ್ತನೆ ಸಮಯದಲ್ಲಿ ಮಣ್ಣಿಗೆ ಸೇರಿಸಬೇಕು.
 • ಬಿತ್ತಿದ 45 ದಿನಗಳ ನಂತರ ಮೇಲುಗೊಬ್ಬರವಾಗಿ 50 ಕೆ.ಜಿ. ಅಮೋನಿಯಂ ಸಲ್ಫೇಟ್‍ನನ್ನು ಭೂಮಿಗೆ ಕೊಡಬೇಕು.
 • •ಮಣ್ಣಿನಲ್ಲಿ ಜಿಂಕ್ ಕೊರತೆಯಿದ್ದಲ್ಲಿ ಪ್ರತಿ ಎಕರೆಗೆ 4 ಕೆ.ಜಿ ಜಿಂಕ್ ಮತ್ತು 1 ಕೆ.ಜಿ ಬೋರಾಕ್ಸನ್ನು ಬಿತ್ತನೆಗೆ ಮುಂಚೆ ಮಣ್ಣಿಗೆ ಸೇರಿಸಬೇಕು ಅಥವಾ ಚಿಲೇಟೆಡ್ ಜಿಂಕ್ ಸಲ್ಫೇಟ್‍ನ್ನು 2 ಗ್ರಾಂ. ಒಂದು ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

ಕೀಟ ರೋಗ ನಿಯಂತ್ರಣಕ್ಕೆ ಸರಳ ಪರಿಹಾರ:

 • ಈರುಳ್ಳಿ ಬೆಳೆಯ ಸುತ್ತಲು 3-4 ಸಾಲು ಎತ್ತರದ ಗೋವಿನ ಜೋಳ, ಮೇವಿನ ಜೋಳವನ್ನು ದಟ್ಟವಾಗಿ ತಡೆಗೋಡೆ ತರಹ ಬೆಳೆಸುವುದರಿಂದ ಪಕ್ಕದ ಜಮೀನಿಂದ ಬರುವ ಸಾಂಕ್ರಾಮಿಕ ರೋಗ ಹರಡುವ ರಸಹೀರು ಕೀಟಗಳನ್ನು ನಿಯಂತ್ರಿಸಬಹುದು.
 • ಈರುಳ್ಳಿ ಬೆಳೆಯಲ್ಲಿ ಥ್ರಿಪ್ಸ್ ನುಸಿಯ ಸಮರ್ಪಕ ಹತೋಟಿಗಾಗಿ ಹಳದಿ ಬಣ್ಣದ ಅಂಟು ಬಲೆ (Yellow sticky traps) ನ್ನು ಎಕರೆಗೆ 8-10 ಸಂಖ್ಯೆಯಲ್ಲಿ ನೆಲೆದ ಭಾಗದಿಂದ 1 ರಿಂದ 1 1/2 ಅಡಿ ಎತ್ತರದ ಗೂಟಕ್ಕೆ ಕಟ್ಟಿ ನೆಡಬೇಕು.

ಕಳೆಗಳ ನಿರ್ವಹಣೆ:

•  ಸಸಿ ನಾಟಿ ಮಾಡಿದ ದಿವಸ ಅಥವಾ ಮೂರನೆಯ ದಿವಸ ಮಣ್ಣಿಗೆ 2 ಲೀ./ಹೆಕ್ಟೇರಿಗೆ 30 ಇ.ಸಿ. ಪೆಂಡಿಮಿಥಾಲಿನ್ (ಪ್ರತಿ ಲೀ. ನೀರಿಗೆ 4 ಎಂ.ಎಲ್) ಅಥವಾ 200 ಮಿ.ಲೀ 23.5 ಇ.ಸಿ. ಆಕ್ಸಿಫ್ಲೋರೋಫೆನ್ (ಪ್ರತಿ ಲೀ. ನೀರಿಗೆ 0.5 ಎಂ.ಎಲ್) ಅನ್ನು 300 ಲೀ. ಅಥವಾ 1 ಲೀ./ಹೆಕ್ಟೇರಿಗೆ 5 ಇ.ಸಿ.

ತಳಿಗಳ ಗುಣಧರ್ಮ:

 • ಅರ್ಕಾ ಕಲ್ಯಾಣ್:ಗೆಡ್ಡೆಗಳು ರಸಭರಿತ, ಕೆಂಪು ಬಣ್ಣ, ಆಕರ್ಷಕ ದುಂಡು, ತೊಟ್ಟು ಚಿಕ್ಕದು, ಲೋಕಲ್ ತಳಿಗಿಂತ ಶೇ. 25ರಷ್ಟು ಅಧಿಕ ಇಳುವರಿ (45 ಟನ್/ಹೆ.) ನೀಡುತ್ತದೆ.
 • ಬೆಳೆಯ ಅವಧಿ 120-144 ದಿನಗಳಾಗಿದ್ದು, ಈ ತಳಿಗೆ ನೇರಳೆ ಎಲೆ ಮಚ್ಚೆ ರೋಗವನ್ನು ತಡೆದುಕೊಳ್ಳುವ ಶಕ್ತಿ ಇದೆ.
 • ಭೀಮಾ ಸೂಪರ್: ಗಡ್ಡೆಗಳು ಆಕರ್ಷಕ ಕೆಂಪು ಬಣ್ಣ ಹೊಂದಿದ್ದು. ತಡ ಮುಂಗಾರು (ಜುಲೈ-ಆಗಸ್ಟ್) ಹಂಗಾಮಿಗೆ ಸೂಕ್ತವಾಗಿದೆ.
 • ಬೆಳೆಯ ಅವಧಿ 110-120 ದಿನಗಳಾಗಿದ್ದು ಒಂದು ಹೆಕ್ಟೇರಿಗೆ 40-45 ಟನ್ ಇಳುವರಿ ಕೊಡುವ ಸಾಮಥ್ರ್ಯ ಹೊಂದಿದೆ.
Arka kalyan Onion variety

ಬೀಜದ ಪ್ರಮಾಣ:

 • ಒಂದು ಎಕರೆ ಪ್ರದೇಶಕ್ಕೆ ಸರಿ ಸುಮಾರು 3-4 ಕೆ.ಜಿ. ಬೀಜಗಳು ಬೇಕಾಗಿದ್ದು 3 ರಿಂದ 4 ಅಡಿ ಪಟ್ಟಾ ಮಡಿಗಳನ್ನು ಇಳಿಜಾರಿಗೆ ಅನುಗುಣವಾಗಿ ಮಾಡಿ ಚೆಲ್ಲಬೇಕು.
 • 4 ವಾರಗಳ ನಂತರ 5 ಸೆಂ.ಮೀ. ಗೆ ಒಂದು ಸಸಿಯನ್ನು, ಉಳಿದವನ್ನು ಕಿತ್ತು ಹಾಕಬೇಕು.

ಬೀಜೋಪಚಾರದ ವಿಧಾನ:

Onion seeds
 • ಶಿಲೀಂಧ್ರ ನಾಶಕಗಳಾದ ಕ್ಯಾಪ್ಟಾನ್ 2.0 ಗ್ರಾಂ. ಅಥವಾ ಥೈರಾಮ್ 2.5 ಗ್ರಾಂ. ಅಥವಾ ಬಿನೋಮಿಲ್ 2 ಗ್ರಾಂ ಒಂದು ಕೆ.ಜಿ. ಬೀಜಗಳ ಮೇಲೆ ಚಿಮುಕಿಸಿ ಕೈಗೆ ಪಾಲಿಥೀನ್ ಚೀಲವನ್ನು ಹಾಕಿಕೊಂಡು ಮಿಶ್ರಣ ಮಾಡಬೇಕು.
 • ನಂತರ ಬಿತ್ತನೆ ದಿನದ ಒಂದು ದಿನದ ಮುಂಚೆ ಒಂದು ಕೆ.ಜಿ. ಬೀಜಕ್ಕೆ 4-5 ಗ್ರಾಂ. ಟ್ರೈಕೋಡರ್ಮಾ ಶಿಲೀಂಧ್ರನಾಶಕ ಉಪಚರಿಸಬೇಕು.

ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕ್ರಮಗಳು:

• ಈರುಳ್ಳಿ ಬೆಳೆಯ ಸುತ್ತಲು 3-4 ಸಾಲು ಎತ್ತರದ ಗೋವಿನ ಜೋಳ, ಮೇವಿನ ಜೋಳವನ್ನು ದಟ್ಟವಾಗಿ ತಡೆಗೋಡೆ ತರಹ ಬೆಳೆಸುವುದರಿಂದ ಪಕ್ಕದ ಜಮೀನಿಂದ ಬರುವ ಸಾಂಕ್ರಾಮಿಕ ರೋಗ ಹರಡುವ ರಸಹೀರು ಕೀಟಗಳನ್ನು ನಿಯಂತ್ರಿಸಬಹುದು.

• ಈರುಳ್ಳಿ ಬೆಳೆಯಲ್ಲಿ ಥ್ರಿಪ್ಸ್ ನುಸಿಯ ಸಮರ್ಪಕ ಹತೋಟಿಗಾಗಿ ಹಳದಿ ಬಣ್ಣದ ಅಂಟು ಬಲೆನ್ನು ಎಕರೆಗೆ 8-10 ಸಂಖ್ಯೆಯಲ್ಲಿ ನೆಲೆದ ಭಾಗದಿಂದ 1 ರಿಂದ 1 1/2 ಅಡಿ ಎತ್ತರದ ಗೂಟಕ್ಕೆ ಕಟ್ಟಿ ನೆಡಬೇಕು.

ಗಡ್ಡೆಗಳ ಕೊಯ್ಲು;

Harvested Onion

• ಬಿತ್ತನೆಯ ನಂತರ ಸುಮಾರು 110-120 ದಿವಸಗಳಲ್ಲಿ ಬೆಳೆಯು ಕಟಾವಿಗೆ ಬರುತ್ತದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಶೇ. 50 ರಷ್ಟು ಬಾಗಿದಾಗ ಕಟಾವು ಮಾಡಬೇಕು.

• ಗಡ್ಡೆಗಳನ್ನು ಅಗೆದು ಬಿಸಿಲಿನಲ್ಲಿ ಒಂದು ವಾರ ಒಣಗಿಸಬೇಕು. ಕೊಯ್ಲಿಗೆ 15 ದಿನಗಳು ಮಿಂಚಿತವಾಗಿ 500 ಪಿ.ಪಿ.ಎಂ (0.5ಮಿ.ಗ್ರಾಂ) ಮ್ಯಾಜಿಕ್ ಹೈಡ್ರಾಜೈಡ್ ಸಿಂಪಡಿಸುವುದರಿಂದ ಶೇಖರಣೆಯ ಅವಧಿಯನ್ನು ಹೆಚ್ಚಿಸಬಹುದು.

• ಕೊಯ್ಲಿಗೆ ಒಂದು ವಾರ ಮುಂಚಿತವಾಗಿ ಬೆಳೆಗೆ ನೀರು ಒದಗಿಸಬೇಕು. ಕೊಯ್ಲು ಮಾಡಿದ ನಂತರ ಗಡ್ಡೆಯ ಮೇಲೆ ಇರುವ ಎಲೆಗಳನ್ನು ತೆಗೆದುಹಾಕಿ ಗಡ್ಡೆಗಳನ್ನು ನೆರಳಿನಲ್ಲಿ ಒಣಗಿಸಿ ಚೀಲಗಳಲ್ಲಿ ತುಂಬಿ ಇಡಬೇಕು.

ಡಾ. ವಾಸುದೇವ ನಾಯ್ಕ , ಡಾ. ಜಹೀರ್ ಅಹಮದ್ ಬಿ., ಡಾ.ರಾಜು ಜಿ. ತೆಗ್ಗೆಳ್ಳಿ  ಮತ್ತು ಡಾ. ಶ್ರೀನಿವಾಸ ಬಿ.ವಿ, ಡಾ. ಪ್ರಿಯಾ. ಬಿ. ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ

Leave a Reply

Your email address will not be published. Required fields are marked *

error: Content is protected !!